“ಮಣೆಗಾರ” ಹೆಸರಿನ ಆತ್ಮಕಥಾನಕ ಬರೆದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದ ತಂಬಾಡಿ ರಾಮಯ್ಯ ಅವರ ಈ ನೆನಪುಗಳ ಕಥನ (ನಂ.2) ಅದೇ ಸಂಯಮ, ಚಿತ್ರಕ ಶಕ್ತಿ, ಮೆಲು ಧನಿಯ ನಿರೂಪಣೆಯನ್ನು ಹೊಂದಿದೆ.
‘ಸಾಮಾನ್ಯ ಜ್ಞಾನ ಸಾಂಸ್ಕೃತಿಕ ಜ್ಞಾನವನ್ನು ಆಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಈ ತೆರನ ಬರಹ ಧನಿಸುವ ಜೀವನ ಪ್ರೀತಿ ಮಹತ್ವದ್ದು‘ ಎಂದು ಅಭಿಪ್ರಾಯಪಡುತ್ತಾ ಕಲಾವಿದ ಎಂ. ಎಸ್. ಮೂರ್ತಿ ಈ ಬಗೆಯ ಕಥಾನಕಗಳ ಓದಿಗೆ ಬೇಕಾದ ಒಂದು ಸೂಕ್ಷ್ಮ ಹೊಳಹನ್ನು ನೀಡಿದ್ದಾರೆ. ಇದನ್ನು ಅವರು ‘ಸಾವಯವ ಚಿಂತನೆ‘ ಎಂತಲೂ ಕರೆದಿರುವುದು ಅರ್ಥವತ್ತಾಗಿದೆ.
ಬಡತನ, ಅಸ್ಪ್ರಶ್ಯತೆಗಳಿಂದ ನೊಂದ ಸುಸಂಸ್ಕೃತ ಮನಸ್ಸೊಂದು ಹಿನ್ನೋಟದಲ್ಲಿ ಆ ಸಂಗತಿಗಳನ್ನು ಯಾವುದೇ ಕಹಿ ಇಲ್ಲದೇ ನೆನಪಿಸಿ ಕೊಳ್ಳುವ ಕ್ರಮದಲ್ಲಿಯೇ ಒಂದು ತೂಕ, ಘನತೆ, ಮುಖ್ಯವಾಹಿನಿಗೆ ಪರಿಚಿತವಲ್ಲದ ಪ್ರೇಮಮಯ ಪರ್ಯಾಯ ಆವರಣ ನಿರ್ಮಾಣವಾಗುತ್ತದೆ.
ಹಾಗಾಗಿಯೇ ಇವರ ಕಥಾನಕ ಹಲವರ ಹನಿಗಣ್ಣಿಗೆ ಕಾರಣವಾಗಿದೆ. ಇನ್ನೂ ಕೆಲವರಿಗೆ ತಮ್ಮದೇ ಕಥೆ ಇದು ಅನಿಸುವಂತೆ ಮಾಡಿದೆ.
ಎಲ್ಲ ಓಕೆ. ಆದರೆ ತಂಬಾಡಿಯವರು ನೆ.ಕ. ನಂ.3 ಕ್ಕೆ ಮುಂದಾಗದೆ, ಜೀವ ತಲ್ಲನಿಸುವ ಅನುಭವಗಳನ್ನು ಸೃಜನಶೀಲಪ್ರಕಾರಗಳಲ್ಲಿ ಬಂಧಿಸುವ ಮನಸ್ಸು ಮಾಡಲಿ. ಅದರಿಂದ ಅವು ಪಡೆಯಬಹುದಾದ ಕಲಾತ್ಮಕ ದೂರ, ಬಹುಮುಖ, ಹಲವು ಆಯಾಮ, ಅಣುರಣನ ಶಕ್ತಿಗಾಗಿ.
ಲೇಖಕರು : ತುಂಬಾಡಿ ರಾಮಯ್ಯ
ಪ್ರಕಾಶಕರು : ಕನ್ನಡ ಪ್ರಕಾಶನ
ಪುಟಗಳು : 124
ಬೆಲೆ: ರೂ.70.00
: ಕಡತದೊಂದಿಗೆ ಸಂಪಾದಿಸಲಾಗಿದೆ ಆತ್ಮ - ಚರಿತ್ರೆ/ಕಥನ




