ಐದಾರು ವರ್ಷಗಳ ಕೆಳಗೆ ಲ್ಯಾಟಿನ್ ಅಮೇರಿಕಾದ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಆಗ ಮಾರ್ಕ್ವೆಜ್ ನ ಮನಸ್ಥತಿ ಹೇಗಿತ್ತೋ ಗೊತ್ತಿಲ್ಲ. ಆದರೆ ಸಾವನ್ನು ಮುಂದೂಡಲೋ ಅಥವಾ ಸಾವಿನ ಆತಂಕದಿಂದ ಪಾರಾಗಲೋ ಆತ ಆತ್ಮಚರಿತ್ರೆ ಬರೆಯಲಾರಂಭಿಸಿದ. ಎರಡು ವರ್ಷಗಳ ಕೆಳಗೆ ಆ ಆತ್ಮಚರಿತ್ರೆ “ಲಿವಿಂಗ್ ಟು ಟೆಲ್ ದಿ ಟೇಲ್” ಪ್ರಕಟವಾಯಿತು. ಬೃಹತ್ ಸಂಪುಟವಾದ ಈ ಆತ್ಮಚರಿತ್ರೆ ಲೇಖಕನ ಬದುಕಿನ ತಾರುಣ್ಯದ ಘಟ್ಟದಲ್ಲಿ ನಿಂತಿದೆ. ಇದಾದ ನಂತರ ಆತ `ಇನ್ನೂ ಎರಡು ಸಂಪುಟ ಬರೆಯುತ್ತೇನೆ‘ ಎಂದಿದ್ದ.
ಇದು `ಅರೇಬಿಯನ್ ನೈಟ್ಸ್‘ ನ್ನು ನೆನಪಿಸುವುದಿಲ್ಲವೇ. ಜೀವ ಉಳಿಸಿಕೊಳ್ಳಲು ಪ್ರತಿರಾತ್ರಿ ಕಥೆ ಹೇಳುವ ಶಹರ್ಜಾದೆ ಕೊನೆಗೂ ಗುರಿ ಸಾಧಿಸಿದ ಕತೆ. ಈ ಕತೆಗಳ ಮೋಹಕ ಲೋಕ ಹಾಗೂ ಉದ್ದೇಶವನ್ನು ಕುರಿತು ಯೋಚಿಸುತ್ತಿದ್ದರೆ, ಹಳ್ಳಿಯೂರುಗಳಲ್ಲಿ ವಿಘ್ನ ನಿವಾರಣೆಗೆ ಕತೆ ಓದಿಸುವ ಆಚರಣೆ ನೆನಪಾಗುತ್ತದೆ. ಸಾವಿರಾರು ವರ್ಷಗಳಿಂದಲೂ ಕತೆ ಎನ್ನುವುದು ಅಪಾಯಗಳನ್ನು ದಾಟಬಲ್ಲ, ಸಾವನ್ನು ಮುಂದೂಡಬಲ್ಲ ಸಾಧನವೆಂಬಂತೆ ಬಳಕೆಯಾಗುತ್ತಾ ಬಂದಿರುವ ರೀತಿ ಕಂಡು ಅಚ್ಚರಿಯಾಗುತ್ತದೆ.
ಎಂಬತ್ತೊಂದು ದಾಟಿರುವ ಮಾರ್ಕ್ವೆಜ್ ತನ್ನ ಹದಿನೇಳನೆಯ ವಯಸ್ಸಿನಿಂದ ಇಲ್ಲಿಯವರೆಗೆ, ಅಂದರೆ ಸುಮಾರು ಅರವತ್ತನಾಲ್ಕು ವರ್ಷಕಾಲ ದಿನನಿತ್ಯ ಹೊಸತನ್ನು ಬರೆಯಬಲ್ಲ ಲೇಖಕನಾಗಿ, ಅದರಲ್ಲೂ ಜೀವಂತವಾಗಿ ಬರೆಯುವ ಲೇಖಕನಾಗಿ ಉಳಿದಿರುವುದು ಅದ್ಭುತವಾಗಿದೆ. ತನ್ನ ಸಮಾಜದ ಎಲ್ಲ ಟೆನ್ಷನ್ಗಳನ್ನೂ ಕಣ್ಣು ಬಿಟ್ಟು ನೋಡುವ, ಅನುಭವಿಸುವ ಲೇಖಕ ಆರೇಳು ದಶಕಗಳ ಕಾಲ ಅತ್ಯಂತ ಮಹತ್ವದ್ದನ್ನೇ ಸೃಷ್ಟಿಸಬಲ್ಲವನಾಗಿ ಉಳಿಯುವುದು, ಹೆಚ್ಚು ಕಡಿಮೆ ಒಂದು ಶತಮಾನದ ಚರಿತ್ರೆಗೆ ಸಾಕ್ಷಿಯಾಗಿ ಅದನ್ನು ಆಳವಾಗಿ ಗ್ರಹಿಸಿ ಬರೆಯಬಲ್ಲವನಾಗಿರುವುದು, ಅದರ ಜೊತೆಗೆ ನಿರಂತರ ಸೃಜನಶೀಲನಾಗಿ ಉಳಿದಿರುವುದು ನಿಜಕ್ಕೂ `ಭುವನ ಭಾಗ್ಯ‘ ಅಲ್ಲವೇ?
ಮಾರ್ಕ್ವೆಜ್ ನ `ಲಿವಿಂಗ್ ಟು ಟೆಲ್ ದಿ ಟೇಲ್‘ ಎಂಬ ಜೀವನದ ಗುರಿ ನಮ್ಮ ನಮ್ಮ ಜೀವನದ ಉದ್ದೇಶಗಳನ್ನು ನಾವು ಆಗ್ಗಾಗ್ಗೆಯಾದರೂ ಸ್ಪಷ್ಟಪಡಿಸಿಕೊಳ್ಳಬೇಕೆಂದು ಪಿಸು ನುಡಿಯುತ್ತದೆ.
ಶೀರ್ಷಿಕೆ : ಲಿವಿಂಗ್ ಟು ಟೆಲ್ ದಿ ಟೇಲ್ ಲೇಖಕರು :ಗೆಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಪ್ರಕಾಶಕರು : ಪುಟಗಳು ಬೆಲೆ: ರೂ.
: ಕಡತದೊಂದಿಗೆ ಸಂಪಾದಿಸಲಾಗಿದೆ ಆತ್ಮ - ಚರಿತ್ರೆ/ಕಥನ




