ಸ್ವತಂತ್ರ ಭಾರತದ ಚರಿತ್ರೆಯ ಕಪ್ಪು ಚುಕ್ಕೆಯಂತಿರುವ ತುರ್ತು ಪರಿಸ್ಥಿತಿ ಕೊನೆಗೊಂಡು ಇಪ್ಪತೈದು ವರ್ಷಗಳಾದರೂ ಅದರ ಕಹಿನೆನಪುಗಳು ಇನ್ನೂ ಮಾಸಿಲ್ಲ. ಅನೇಕ ಅಮಾಯಕರ ಸಾವುನೋವಿಗೆ ಕಾರಣವಾದ ತುರ್ತು ಪರಿಸ್ಥಿತಿ, ಪ್ರಜಾಪ್ರಭುತ್ವದ ಅಡಿಗಲ್ಲನ್ನೇ ಅಲ್ಲಾಡಿಸಿದ ಕರಾಳ ಸಂದರ್ಭ. ಆ ಕರಾಳ ದಿನಗಳಲ್ಲಿ ಕೇರಳದ ಅಮಾಯಕ ವಿದ್ಯಾರ್ಥಿಯೊಬ್ಬ ವ್ಯವಸ್ಥೆಯ ಕಬಂಧ ಬಾಹುಗಳಿಗೆ ಬಲಿಯಾದದ್ದು, ಮಗ ನಾಪತ್ತೆಯಾಗಿರುವನೆಂದು ತಿಳಿದು ಅವನನ್ನು ಹುಡುಕಲು ವೃದ್ಧ ತಂದೆಯೊಬ್ಬ ಪಟ್ಟ ಪಡಿಪಾಟಲುಗಳ ಕಥನ `ತುರ್ತು ಪರಿಸ್ಥಿತಿಯ ಕರಾಳ ಮುಖ‘ ಕೃತಿ. ಮಗನನ್ನು ಕಳಕೊಂಡ ತಂದೆ (ಈಚರ್ ವಾರಿಯರ್) ಸ್ವತಃ ಈ ಕಥನ ಬರೆದಿರುವುದು ವಿಶೇಷ. ಈ ಅಪರೂಪದ ಕೃತಿಯನ್ನು ಲೇಖಕಿ ಸಾರಾ ಅಬೂಬಕರ್ ಕನ್ನಡಕ್ಕೆ ತಂದಿದ್ದಾರೆ.
ತಂದೆಯ ಅಸಹಾಯಕ ಸ್ಥಿತಿ, ರಾಜಕಾರಣಿಗಳ ಕಣ್ಣಾಮುಚ್ಚಾಲೆ, ಪೋಲೀಸರ ದರ್ಪ, ಪತ್ರಿಕೆಗಳ ಇಬ್ಬಗೆಯ ನೀತಿ, ಜನತೆಯಲ್ಲಿನ ಗುಪ್ತಗಾಮಿನಿಯಂಥ ಮಾನವೀಯತೆ ಕೃತಿಯುದ್ದಕ್ಕೂ ಕಾಣಬಹುದು. ವಾರಿಯರ್ ಅವರ ಸಂಕಟ ಓದುಗರದೂ ಆಗುವುದು ಕೃತಿ ವೈಶಿಷ್ಟ್ಯ. ತಂದೆಯೊಬ್ಬನ ಈ ದಾರುಣ ಕಥನ ಕೇರಳ ರಾಜಕೀಯದ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತದೆ ಹಾಗೂ ತುರ್ತು ಪರಿಸ್ಥಿತಿಗೆ ಕಾರಣವಾದವರ ಕುರಿತು ಬೇಸರ ಮೂಡಿಸುತ್ತದೆ.
ಕನ್ನಡದ ನೆಲದಲ್ಲಿಯೇ ನಡೆದ ಘಟನೆ ಎನ್ನುವಷ್ಟು ಸಹಜವಾಗಿ ಸಾರಾ ಅನುವಾದವಿದೆ.
ಶೀರ್ಷಿಕೆ : ತುರ್ತು ಪರಿಸ್ಥಿತಿಯ ಕರಾಳ ಮುಖ ಲೇಖಕರು : ಪ್ರೊ. ಈಚರ್ ವಾರಿಯರ್ ಅನುವಾದ : ಸಾರಾ ಅಬೂಬಕರ್ ಪ್ರಕಾಶಕರು : ಚಂದ್ರಗಿರಿ ಪ್ರಕಾಶನ ಪುಟಗಳು : 73 ಬೆಲೆ: ರೂ.50/-
ಕೃಪೆ : ಪ್ರಜಾವಾಣಿ
: ಕಡತದೊಂದಿಗೆ ಸಂಪಾದಿಸಲಾಗಿದೆ ಆತ್ಮ - ಚರಿತ್ರೆ/ಕಥನ | Tagged: ತುರ್ತು ಪರಿಸ್ಥಿತಿ, Emergency




