`ಬೆಳ್ಳಕ್ಕಿ ಹಿಂಡು‘ ಬಿಡುಗಡೆ ಸಮಾರಂಭದಲ್ಲಿ ಡಾ. ಅನಂತಮೂರ್ತಿ
`ಕನ್ನಡ ಕಾವ್ಯ ಕ್ಷೇತ್ರದ ಸಮರ್ಪಣಾ ಭಾವದ ಭಕ್ತ ಕವಿ ಸು.ರಂ.ಎಕ್ಕುಂಡಿ‘ ಎಂದು ಸಾಹಿತಿ ಡಾ. ಯು.ಆರ್.ಅನಂತಮೂರ್ತಿ
ಇಲ್ಲಿ ಅಭಿಪ್ರಾಯ ಪಟ್ಟರು. ಸೆಂಟ್ರಲ್ ಕಾಲೇಜಿನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಸಂಚಯ ಪ್ರಕಾಶನ ಹೊರತಂದಿರುವ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರ ಸಮಗ್ರ ಕಾವ್ಯ `ಬೆಳ್ಳಕ್ಕಿ ಹಿಂಡು‘ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
`ಕನ್ನಡದ ಅತ್ಯಂತ ಪ್ರಮುಖ ಕವಿಗಳಲ್ಲಿ ಒಬ್ಬರಾದ ಕವಿ ಪು.ತಿ.ನ. ಅವರು ಕೂಡಾ ಭಕ್ತ ಕವಿ. ಎಕ್ಕುಂಡಿ ಕೇವಲ ಭಕ್ತ ಕವಿ ಅಷ್ಟೇ ಅಲ್ಲ. ಅವರು ಸಂಪೂರ್ಣ ಸಮರ್ಪಣಾ ಭಾವದಿಂದ ಬರೆಯುತ್ತಿದ್ದ ಕವಿ ಕೂಡಾ ಹೌದು‘ ಎಂದು ಅವರು ಹೇಳಿದರು.
ಅವರ ಪದ ಕೌಶಲ ಅಪರೂಪದ್ದು. ತಮ್ಮ ಭಾಷೆಯ ಮೇಲಿನ ಹಿಡಿತದಿಂದಾಗಿ ಪದಗಳಲ್ಲಿ ಆಟವಾಡುತ್ತಾ ಭಾಷೆಯ ಸುಖದಿಂದ ಕಾವ್ಯಗಳನ್ನು ಸೃಷ್ಟಿಸಿದರು.
ಕಾವ್ಯವನ್ನು ದೇವರೆಂದೇ ತಿಳಿದ ಮಧ್ವಾಚಾರ್ಯರು ಹಾಗೂ ಮಾರ್ಕ್ಸ್
ವಾದದಿಂದ ತಾತ್ವಿಕ ನೆಲೆಗಟ್ಟಿನಲ್ಲಿ ಎಕ್ಕುಂಡಿಯವರ ಕಾವ್ಯಗಳು ತನ್ಮಯತೆಯಿಂದ ನಮ್ಮನ್ನು ಆಕರ್ಷಿಸುತ್ತವೆ. ಕವಿತೆಗಳು ಹೊಸ ಹೊಸ ಅರ್ಥವನ್ನು ಧ್ವನಿಸಬೇಕು ಎಂಬ ಭಾವವಿಲ್ಲದೇ ಏಕಾರ್ಥವನ್ನು ಮೂಡಿಸುತ್ತ ಬೇರೆಯವರನ್ನು ನಂಬಿಸಲು ಹೋಗುವ ಗೌಜಿಗೆ ಹೋಗದೇ ಒಂದಿಷ್ಟು `ಪದಲೋಲುಪತೆ‘ಯಿಂದಲೇ ಕಾವ್ಯ ಕೃಷಿ ಮಾಡಿದವರು ಎಕ್ಕುಂಡಿ ಎಂದು ಅನಂತಮೂರ್ತಿ ಹೇಳಿದರು.
ಕವಿ-ಕಾವ್ಯ ಕುರಿತು ಮಾತನಾಡಿದ ಕವಿ ಆನಂದ ಝಂಜರವಾಡ ಅವರು, `ಕಾವ್ಯದ ಛಂದಸ್ಸಿನಿಂದ ನಮ್ಮನ್ನು ವಿಸ್ಮಯಗೊಳಿಸಿದ ಎಕ್ಕುಂಡಿ ತಮ್ಮ ಕಾವ್ಯ ಒಂದೇ ಅರ್ಥವನ್ನು ಬಿಂಬಿಸಬೇಕು ಎಂದು ಹೇಳುತ್ತಿದ್ದರು. ನಮ್ಮ ಪ್ರತಿಯೊಂದು ಕಾವ್ಯಗಳೂ ಕಾವ್ಯಾರ್ಥವನ್ನು ಸೋಲಿಸಿ ಶುದ್ಧ ಧರ್ಮವನ್ನು ಗೆಲ್ಲಬೇಕು ಎಂಬುದೇ ಎಲ್ಲ ಮಹಾಕವಿಗಳ ಅಪೇಕ್ಷೆಯಾಗಿತ್ತು. ಇದು ಎಕ್ಕುಂಡಿ ಅವರ ಅಪೇಕ್ಷೆಯೂ ಆಗಿತ್ತು. ಆದರೆ ಹಾಗೆ ಯಾವತ್ತಿಗೂ ಆಗಲೇ ಇಲ್ಲ. ಕಾವ್ಯ ಧರ್ಮವೇ ಗೆದ್ದು ಶುದ್ಧ ಧರ್ಮ ಸೋತಿದೆ. ಹೀಗಾಗಿ ನಮ್ಮ ಕನ್ನಡ ಕಾವ್ಯ ಇಷ್ಟು ವಿಸ್ತಾರವಾಗಿದೆ‘ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸು.ರಂ.ಎಕ್ಕುಂಡಿ ಅವರ ಕವನಗಳನ್ನು ವಾಚಿಸಲಾಯಿತು.
ಕವಿ ಜಯಂತ ಕಾಯ್ಕಿಣಿ, ರಂಗಕರ್ಮಿ
ಸಿ.ಆರ್.ಸಿಂಹ, ಜಿ.ಕೆ.ಗೋವಿಂದರಾವ್, ಕತೆಗಾರ ಎಸ್.ದಿವಾಕರ್, ಜಿ.ಕೆ.ರವೀಂದ್ರ ಕುಮಾರ್, ಕಿರುತೆರೆ ನಿರ್ದೇಶಕ ಬಿ.ಸುರೇಶ್, ಮಮತಾ ಜಿ. ಸಾಗರ್, ರೋಸಿ ಡಿ‘ಸೋಜಾ ಹಾಗೂ ರಘುನಂದನ ಕವನ ವಾಚಿಸಿದರು.
ಎಕ್ಕುಂಡಿ ಅವರ ಮಗಳು ಭಾರತಿ, ಪತ್ನಿ ಇಂದಿರಾ, ಪತ್ರಕರ್ತ ಜಿ.ಎನ್.ಮೋಹನ್ ಹಾಗೂ `ಸಂಚಯ‘ದ ಡಿ.ವಿ.ಪ್ರಹ್ಲಾದ್ ಹಾಜರಿದ್ದರು.
ಕೃಪೆ:ಪ್ರಜಾವಾಣಿ ಚಿತ್ರ:ಅವಧಿಯಿಂದ
Filed under: ಬಿಡುಗಡೆ | Tagged: ಕರ್ನಾಟಕ ಸಾಹಿತ್ಯ ಅಕಾ, ಕೇಂದ್ರ ಸಾಹಿತ್ಯ ಅಕಾಡ, ಬಕುಲದ ಹೂವುಗಳು, ಸೋವಿಯಟ್ ಲ್ಯಾಂಡ್ ಪ್ರ, Bakulada hoovugalu, S R Ekkundi




