ನೀವು ಪುಸ್ತಕ ಪ್ರೀತಿಸುತ್ತೀರಾ?
ಪುಸ್ತಕ ಮತ್ತು ಅದರ ಪ್ರೀತಿಯನ್ನು ಹಂಚುವ ಆಸೆ ಹೊತ್ತವರ ‘ಒನ್ ಸ್ಟಾಪ್ ಶಾಪ್‘ ಇದು.
ಇತ್ತೀಚಿಗೆ ಪ್ರಕಟವಾದ, ಪುಸ್ತಕಗಳ ಪರಿಚಯ, ವಿಮರ್ಶೆ ಇಲ್ಲಿ ಸಿಗುವಂತೆ ಮಾಡುವುದು ನಮ್ಮ ಆಶಯ. ಇದು, ನಮ್ಮ ಪತ್ರಿಕೆಗಳಲ್ಲಿ ಬರುವ ಪುಸ್ತಕ ಪರಿಚಯ-ವಿಮರ್ಶೆ ಯ ಡೈಜೆಸ್ಟ್ ಸಹ.
ನೀವು ಓದಿದ, ಮೆಚ್ಚಿದ, ಎಲ್ಲರೂ ಓದಲೇಬೇಕೆಂದು ನೀವು ಬಯಸುವ ಪುಸ್ತಕದ ಬಗ್ಗೆ ಬರೆಯಿರಿ.
ನಿಮಗೆ ಸಿಗದ ಪುಸ್ತಕ ಎಲ್ಲಿ ಸಿಗಬಹುದು ಎಂಬ ಬಗ್ಗೆ ಪ್ರಶ್ನೆ ಕೇಳಿ.
ನೀವು ಲೇಖಕರು ಅಥವಾ ಪ್ರಕಾಶಕರಾಗಿದ್ದರೆ ನಿಮ್ಮ ಪುಸ್ತಕಗಳ ಮಾಹಿತಿ ಕಳಿಸಿ.
ಪುಸ್ತಕದ ಎಲ್ಲಾ ಮಗ್ಗುಲುಗಳನ್ನು ಮುಟ್ಟುವ ನಮ್ಮ ಆಶಯದಲ್ಲಿ ಕೈಜೋಡಿಸಿ.
ಇತ್ತೀಚೆಗೆ ನಮ್ಮ ಎಳೆವಯಸ್ಸಿನ `Hero’ ಮೈಸೂರು ಹುಲಿ ಟಿಪ್ಪು ಸುಲ್ತಾನನನ್ನು `Zero’ ಮಾಡುವಲ್ಲಿ ಸತತ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನದಲ್ಲಿ ಅವರು ಸ್ವಲ್ಪ ಮಟ್ಟಿಗೆ ಯಶಸ್ಸೂ ಕಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಾನು ನಮ್ಮ ಹೀರೋ ಪರವಾಗಿ ಮಾತನಾಡಲು proof ಇರಬೇಕಲ್ಲಾ. ಆ proof ನಮಗೆ ಇಲ್ಲಿ ಸಿಗುತ್ತದೆ.
ನಮ್ಮ ಹೀರೋ ನಿಜವಾಗಿಯೂ ಹೀರೋನೇ ಅಂತ ಸಾಬೀತುಪಡಿಸುವ ಈ ಲಾವಣಿಗಳನ್ನು ಜನಸಾಮಾನ್ಯರ ನಡುವೆ ಪ್ರಚಾರ ಮಾಡುವ ಕರ್ತವ್ಯ ನಮ್ಮದು.
ಈ ಸಂಕಲನವನ್ನು ಪ್ರಕಟಿಸಿ ನಾವು ನಮ್ಮ ಕರ್ತವ್ಯವನ್ನು ಸ್ವಲ್ಪಮಟ್ಟಿಗೆ ನಿರ್ವಹಿಸಿದ್ದೇನೆ. ಇನ್ನು ಈ ವಿಷಯವನ್ನು ಜನರ ಮಧ್ಯೆ ಪ್ರಚಾರ ಪಡಿಸುವ ಕರ್ತವ್ಯದಲ್ಲಿ ನಮ್ಮ ಜತೆಗೆ ಕೈಗೂಡಿಸಿ, ಪುಸ್ತಕವನ್ನು ಕೊಂಡು ಓದಿ ಇತರರಿಂದಲೂ ಓದಿಸಿ ಎಂದು ಕೇಳಿಕೊಳ್ಳುತ್ತಿದ್ದೇವೆ.
ಮೈಸೂರು ಹುಲಿಯ ಮುಖಕ್ಕೆ ಮಸಿ ಬಳಿಯಲು ಪ್ರಯತ್ನಿಸುವವರು ಆಯೋಜಿಸಿರುವ ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿರೋಧ ಒಡ್ಡಲು ಆಯೋಜಿಸಿರುವ ಜನಸಾಹಿತ್ಯ ಸಮ್ಮೇಳನದಲ್ಲಿ ಈ ಪುಸ್ತಕ ಬಿಡುಗಡೆಯಾಗುತ್ತಿದೆ.
ಬಿಎಂಶ್ರೀ ಪ್ರತಿಷ್ಠಾನದಲ್ಲಿ ನಡೆಯುವ ಚರ್ಚಾಗೋಷ್ಟಿಯಲ್ಲಿ (zoom link ಮೂಲಕವಾದರೂ)
ಭಾಗವಹಿಸಿ
ಈ ಪುಸ್ತಕದ ಬಗ್ಗೆ ಮಹಿಳಾ ಹೋರಾಟಗಾರ್ತಿ, ಲೇಖಕಿ, ಚಿಂತಕಿ ಡಾ. ಎನ್. ಗಾಯತ್ರಿ ಅವರ ಅಭಿಪ್ರಾಯ ಇದು.
ಜಗತ್ತು ಸ್ವೀಕರಿಸಿದ ಮಾರ್ಕ್ಸ್ ವಾದವೆಂಬ ವಿಶಿಷ್ಟ ಲೋಕದೃಷ್ಟಿಗೆ ಕಾರಣಕರ್ತರಾದ ಜೋಡಿ ಪ್ರತಿಭೆಗಳು ಮಾರ್ಕ್ಸ್ ಮತ್ತು ಏಂಗೆಲ್ಸ್. ಇವರಲ್ಲಿ ಏಂಗೆಲ್ಸ್ ಬರೆದ ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ – ಇಡೀ ವಿಶ್ವದ ಮೇಲೆ ಬಹುಮುಖ್ಯ ಪ್ರಭಾವ ಮತ್ತು ಪರಿಣಾಮವನ್ನು ಬೀರಿದ ಕೃತಿ. ಈ ಕೃತಿ ಪ್ರಕಟವಾದಂದಿನಿಂದ ಇಲ್ಲಿಯವರೆಗೆ ಜಗತ್ತಿನ ಜ್ಞಾನ ಪ್ರಪಂಚಕ್ಕೆ ವಿಸ್ತಾರವನ್ನು, ವೈಶಾಲ್ಯತೆಯನ್ನು ನೀಡುತ್ತಲೇ ಬಂದಿದೆ. 1884ರಲ್ಲಿ ಏಂಗೆಲ್ಸ್ ತಮ್ಮ ಮೌಲಿಕ ಕೃತಿಯಾದ `ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ’ ಕೃತಿಯನ್ನು ರಚಿಸಿದರು. ಮಾನವ ಜನಾಂಗದ ಪ್ರಾಗೈತಿಹಾಸಿಕ ಕಾಲದ ಜೀವನ ವಿಧಾನವನ್ನು ತೆರೆದಿಡುವ ಈ ಗ್ರಂಥವು ಗ್ರೀಸ್, ಐರ್ಲೆಂಡ್ ಮತ್ತು ಜರ್ಮನಿಯ ಪ್ರಾಚೀನ ಸಮಾಜಗಳ ಪರಿಚಯ ಮಾಡಿಕೊಡುತ್ತದೆ. ಆರಂಭಿಕ ಹಂತದ ಸಾಮ್ಯತೆಯ ಸಮಾಜ, ಇವುಗಳ ನಿರ್ದಿಷ್ಟ ಸ್ವರೂಪವನ್ನು ಚರ್ಚಿಸುತ್ತಾ ಕುಟುಂಬದ ಉಗಮವನ್ನು ಏಂಗೆಲ್ಸ್ ಗುರುತಿಸುತ್ತಾರೆ. ಕ್ರಮೇಣ ಬೆಳೆದು ಬಂದ ಸಾಮಾಜಿಕ-ಆರ್ಥಿಕ ಸಂರಚನೆಗಳು ಸಮಾಜವನ್ನು ಒಂದು ಹಂತದಿಂದ ಇನ್ನೊಂದಕ್ಕೆ ಕೊಂಡೊಯ್ಯುತ್ತಿದ್ದಂತೆ ಕುಟುಂಬ, ಖಾಸಗಿ ಆಸ್ತಿಯನ್ನು ಆಧರಿಸಿದ ವರ್ಗ ಸಮಾಜ ಮತ್ತು ಪ್ರಭುತ್ವ ಹುಟ್ಟಿಕೊಳ್ಳುತ್ತವೆ. ಈ ಮೂರು ಘಟಕಗಳಿಗೂ ಇರುವ ಪರಸ್ಪರ ಸಂಬಂಧಗಳನ್ನು ಅರ್ಥಮಾಡಿಕೊಂಡರಷ್ಟೇ ದಮನದ ಸ್ವರೂಪ ಮತ್ತು ಕಾರಣಗಳು ಸ್ಪಷ್ಟವಾಗುತ್ತವೆ.
ಕಾಡು ಮನುಷ್ಯನ ಕಾಲದಿಂದ ನಾಗರಿಕ ಪೂರ್ವ, ನಾಗರಿಕ ಹಂತದ ಕಾಲದವರೆಗೆ ಸಾಗಿರುವ ಮನುಷ್ಯನ ವಿಕಾಸವನ್ನು ಚರ್ಚಿಸುತ್ತ ಮಾನವ ಸಂಸ್ಕೃತಿಯ ಇತಿಹಾಸವನ್ನು ಈ ಕೃತಿ ಬಿಚ್ಚಿಡುತ್ತದೆ. ಸಮಾಜದಲ್ಲಿ ಗಂಡು-ಹೆಣ್ಣಿನ ನಡುವಿನ ಲೈಂಗಿಕ ಸಂಬಂಧಗಳಲ್ಲಿ ಉಂಟಾದ ಬದಲಾವಣೆ ಈ ಚರಿತ್ರೆಯ ಭಾಗವಾಗಿದೆ. ವಿಶ್ವದ ಹಲವಾರು ಸಮಾಜಗಳಲ್ಲಿ ಕಂಡು ಬಂದ ಬಹುಪತ್ನಿತ್ವ, ಬಹುಪತಿತ್ವದಿಂದ ಏಕಪತಿ-ಪತ್ನಿತ್ವದವರೆಗೆ ಸಾಗಿದ ಸಮಾಜದಲ್ಲಿ ಯಾರು ಯಾರನ್ನು ಮದುವೆಯಾಗುತ್ತಿದ್ದರು, ಎನ್ನುವ ವಿವರಗಳು, ಗೋತ್ರ ವ್ಯವಸ್ಥೆ ಬೆಳೆದು ಬಂದ ರೀತಿ ಮುಂತಾದ ವಿಷಯಗಳನ್ನು ಈ ಕೃತಿ ಸುದೀರ್ಘವಾಗಿ ಚರ್ಚಿಸುತ್ತದೆ. ಗಂಡು-ಹೆಣ್ಣು ಇಬ್ಬರೂ ಸೇರಿ ಕೂಡಿಸುತ್ತಿದ್ದ ಕುಟುಂಬದ ಸಂಪತ್ತು ಗಂಡಸಿನ ಪಾಲಾದದ್ದು ಹೇಗೆ, ವಂಶಾವಳಿಯು ತಾಯಿ ಮತ್ತು ತಂದೆಯ ಮೂಲಕ ಹರಿದು ಬಂದ ವಿನ್ಯಾಸವನ್ನು ಕೂಡ ಚರ್ಚಿಸಲಾಗಿದೆ. ಉತ್ಪಾದನಾ ಶಕ್ತಿಯಲ್ಲಾದ ಬದಲಾವಣೆ ಶ್ರಮ ವಿಭಜನೆಯನ್ನು ಹುಟ್ಟಿ ಹಾಕಿದ್ದು ಮತ್ತು ಅದರಿಂದ ಉಂಟಾದ ವರ್ಗಗಳ ವಿಭಜನೆಯಲ್ಲಿ ಮಹಿಳೆ ಬಹುಮುಖ್ಯ ಶೋಷಿತಳಾದಳು, ಎನ್ನುವುದನ್ನು ಇಲ್ಲಿ ನೋಡಬಹುದು. ಇಂದು ನಾವು ಕಾಣುವ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ಪೊಲೀಸ್, ಸೈನಿಕರು – ಎಲ್ಲವುಗಳ ಆವಿರ್ಭಾವಕ್ಕೂ ಒಂದು ಚರಿತ್ರೆಯಿದೆಯೆಂಬುದರ ಪ್ರಾಥಮಿಕ ತಿಳುವಳಿಕೆಯನ್ನು ಮತ್ತು ಅದರ ಬದಲಾವಣೆಯ ಪ್ರಕ್ರಿಯೆಯನ್ನು ಈ ಕೃತಿ ಸಾದರಪಡಿಸುತ್ತದೆ.
ಇಂದು ನಮ್ಮೆಲ್ಲರ ಬದುಕು ಸಂಕಷ್ಟದಲ್ಲಿದೆ. ಸಮಷ್ಠಿ ಹಿತವು ಗೌಣವಾಗಿ, ವ್ಯಕ್ತಿಹಿತವು ಮೇಲುಗೈಯ್ಯಾಗಿ, ಹಿರಿದು ತಿನ್ನುವುದೇ ಈ ಯುಗದ ಮೌಲ್ಯವಾಗಿರುವ ಸಂದರ್ಭದಲ್ಲಿ ‘ಹೆಣ್ಣು’ ತನ್ನ ಅಸ್ಮಿತೆಯನ್ನು ಕಳೆದುಕೊಂಡು ಭೋಗದ ವಸ್ತುವಾಗಿದ್ದಾಳೆ; ಪುರುಷನ ಆಸ್ತಿಯಾಗಿ, ಕೌಟುಂಬಿಕ ದೌರ್ಜನ್ಯದ ಸುಳಿಯಲ್ಲಿ ಸಿಕ್ಕಿಕೊಂಡಿದ್ದಾಳೆ. ಕುಟುಂಬದೊಳಗಿನ ಅಧಿಕಾರದ ಅಸಮತೋಲನ ಸಂಬಂಧಗಳು, ಆಸ್ತಿರಹಿತ ಹೆಣ್ಣಿನ ನೋವಿಗೆ ಕಾರಣವಾಗಿವೆ. ವಿವಾಹದ ಚೌಕಟ್ಟು ವಿಸ್ತರಿಸಿದೆ. ವಿಭಿನ್ನ ಲಿಂಗಗಳ ಪರಿಕಲ್ಪನೆ ಬದಲಾಗಿದೆ. ಸಲಿಂಗಿಗಳು ಮತ್ತು ತೃತೀಯ ಲಿಂಗಿಗಳ ಜೀವನ ವಿನ್ಯಾಸಗಳು ನಮ್ಮ ಕಣ್ಣ ಮುಂದಿದೆ. ಈ ಎಲ್ಲ ಅಂಶಗಳನ್ನು ಪ್ರತಿಫಲಿಸುವ ಮತ್ತು ನಿಯಂತ್ರಿಸುವ ಪುರುಷಾಧಿಪತ್ಯದ ಪ್ರಭುತ್ವ, ಸಮಾನತೆಯ ಮಾನವೀಯ ಸಮಾಜವನ್ನು ಕನಸಿನ ಗಂಟಾಗಿಸಿದೆ. ಏಕ ಸಂಸ್ಕೃತಿಯ ದಂಡವನ್ನು ಬಹುಜನರ ಮೇಲೆ ಹೇರಲಾಗುತ್ತಿರುವ ಇಂದಿನ ಭಾರತದ ಸಂದರ್ಭದಲ್ಲಿಯಂತೂ ‘ಸಂಸ್ಕೃತಿ’ಯ ಅಪವ್ಯಾಖ್ಯಾನ ಅಮಾನುಷವಾಗಿ ನಡೆದಿದೆ. ಸಂಸ್ಕೃತಿಯೆಂಬುದು ನಿಂತ ನೀರಲ್ಲ, ಅದು ಕಾಲದ ಪ್ರವಾಹದಲ್ಲಿ ಹಲವಾರು ಸ್ಥಿತ್ಯಂತರ ಹೊಂದಿ ಬದಲಾಗಿದೆ ಮತ್ತು ಅದನ್ನು ಗಮನಿಸಿ, ಗುರುತಿಸಿದಾಗ ಮಾತ್ರ ಸಮಾಜದ ಅನಿಷ್ಟಗಳ ವಿರುದ್ಧ ಹೋರಾಡಲು ಸಾಧ್ಯ, ಎಂಬ ತಿಳುವಳಿಕೆಯ ಅಗತ್ಯ ಜರೂರಾಗಿ ಬೇಕಿದೆ. ಇಂತಹ ಅರಿವನ್ನು ಉಂಟು ಮಾಡುವ ಏಂಗೆಲ್ಸ್ ರ `ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವ’ ಕೃತಿಯ ಓದು ಇಂದಿನ ವರ್ತಮಾನದ ಅಗತ್ಯವೂ ಹೌದು.
ಕುಟುಂಬ ಸಮಾಜದ ಅತಿ ಮುಖ್ಯ ಘಟಕ. ಅದು ಹೆಣ್ಣಿನ ವಿಷಯದಲ್ಲಿ ಬಹು ಮುಖ್ಯ ಶೋಷಕ ಯಂತ್ರವಾಗಿದೆ. ಹೆಣ್ಣು ತನ್ನ ಶೋಷಣೆಯ ವಿರುದ್ಧ ಹೋರಾಡಲು ಅದರ ಚರಿತ್ರೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಶೋಷಣೆಯ ಚರಿತ್ರೆಯನ್ನು ವಿವರಿಸುವ ಈ ಕೃತಿ ತಮ್ಮ ದಮನದ ವಿರುದ್ಧ ಹೋರಾಟದಲ್ಲಿ ತೊಡಗಿರುವ ಎಲ್ಲರಿಗೂ ಕೈ ದೀವಿಗೆಯಾಗಿದೆ.
ಇದರ ಕನ್ನಡ ಅನುವಾದಗಳು ಈಗಾಗಲೇ ಒಂದೆರಡು ಬಂದಿದ್ದರೂ, ಈ ಅನುವಾದ ಅತ್ಯಂತ ಸರಳವಾದ ಭಾಷೆಯಲ್ಲಿ ಓದಲು ಮತ್ತು ತಿಳಿಯಲು ಅನುಕೂಲಕರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕದ ಮೊದಲಿಗೆ, ಅನುವಾದಕಿಯು ಬರೆದಿರುವ ದೀರ್ಘ ಮುನ್ನುಡಿಯು ಪುಸ್ತಕದ ಸಾರ ಸರ್ವಸ್ವವನ್ನು ಒಂದೆಡೆ ಹಿಡಿದಿಟ್ಟಿದೆ. ನಾಲ್ಕು ದಶಕಗಳಿಂದ ಕರ್ನಾಟಕದ ಮಹಿಳಾ ಚಳುವಳಿಯಲ್ಲಿ ತೊಡಗಿಕೊಂಡಿರುವ ಜಯಲಕ್ಷ್ಮಿಯವರು ಈ ಕೃತಿಯ ಪ್ರಸ್ತುತತೆಯನ್ನು ಇಂದಿನ ನಮ್ಮ ದೇಶದ ಪರಿಸ್ಥಿತಿಯ ಹಿನ್ನೆಲೆಯಲ್ಲಿಟ್ಟು ವಿವರಿಸಿದ್ದಾರೆ. ಅದಕ್ಕಾಗಿ ಅನುವಾದಕಿಯು ಅಭಿನಂದನಾರ್ಹರು. ಇಂತಹ ಅಗತ್ಯವಾದ ಪುಸ್ತಕದ ಯೋಜನೆಯನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿರಿಸಿರುವ ನವಕರ್ನಾಟಕ ಪ್ರಕಾಶನ ಮತ್ತು ಕ್ರಿಯಾ ಮಾಧ್ಯಮದವರಿಗೆ ಮನಃಪೂರ್ವಕ ವಂದನೆಗಳು.
1524-25ರ ಜರ್ಮನ್ ರೈತ ಯುದ್ಧ 1789ರ ಫ್ರೆಂಚ್ ಕ್ರಾಂತಿಯ ಮೊದಲು ನಡೆದ ಅತ್ಯಂತ ದೊಡ್ಡ ಕ್ರಾಂತಿಕಾರಿ ಹೋರಾಟ. ಇತರ ಹಲವು ಅಂಶಗಳ ಜತೆಗೆ ಲೂಥರ್ ಮಂಡಿಸಿದ ಧಾರ್ಮಿಕ ಸುಧಾರಣೆಗಳ ಹಿನ್ನೆಲೆಯಲ್ಲಿ ಬೆಳೆದು ಬಂದ ಇದು, ಹಲವು ತಿಂಗಳ ಕಾಲ ಮಧ್ಯ ಯುರೋಪಿನ ಈಗಿನ ಜರ್ಮನಿ, ನೆದರ್ ಲ್ಯಾಂಡ್ಸ್ ಗಳ ಬಹುಭಾಗಗಳನ್ನು ಆವರಿಸಿ ಬೃಹತ್ ರೈತ ಯುದ್ಧವಾಗಿತ್ತು.
ಈ ಚಳುವಳಿಯ ಆರಂಭದಲ್ಲೇ ರೂಪಿತವಾಗಿದ್ದ “ರೈತರ ಹನ್ನೆರಡು ಕಟ್ಟಳೆಗಳ” ಜಾರಿಗಾಗಿ ಈ ಯುದ್ಧ ಸಾರಲಾಯಿತು. ಇದು ರೈತ ಯುದ್ಧ ಹೂಡಿದ ರೈತ ಸಂಘಟನೆಗಳ ಒಕ್ಕೂಟದ ಪ್ರಣಾಳಿಕೆ, ಸಂವಿಧಾನ, ಹಕ್ಕೊತ್ತಾಯಗಳ ಪಟ್ಟಿ, ಗೆದ್ದರೆ ಮುಂಬರುವ ಆಡಳಿತದ ಕಾರ್ಯಸೂಚಿ – ಇವೆಲ್ಲವೂ ಆಗಿತ್ತು. ಇದನ್ನು ಮೊದಲ ಮಾನವ ಹಕ್ಕುಗಳ ಘೋಷಣೆ ಎಂದೂ ಪರಿಗಣಿಸಲಾಗಿದೆ..
ಈ ಯುದ್ಧದಲ್ಲಿ ಸಶಸ್ತ್ರವಾಗಿ ಭಾಗವಹಿಸಿದ ರೈತರ ಸಂಖ್ಯೆ 3 ಲಕ್ಷವನ್ನು ಮೀರಿತ್ತು. ಈ ಯುದ್ಧದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈತರು ಬಲಿಯಾದರು. ಈ ಚಾರಿತ್ರಿಕ ರೈತರ ಯುದ್ಧ ಸೋತರೂ ಯುರೋಪಿನಲ್ಲೂ ಜಾಗತಿಕವಾಗಿಯೂ ಹಲವು ಸ್ಥಿತ್ಯಂತರಗಳ ಮುನ್ನುಡಿ ಬರೆಯಿತು. ಇಂದಿನವರೆಗೂ ಎಲ್ಲ ರೈತ ಯುದ್ಧಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದೆ. ಪಾಳೆಯಗಾರಿ ವ್ಯವಸ್ಥೆಯ ವಿರುದ್ಧ ಬಂಡಾಯದ ಪ್ರತೀಕವಾಗಿದೆ.
ಹೆಚ್ಚಿನ ರೈತ ಸಂಬಂಧಿ ಪ್ರಶ್ನೆಗಳನ್ನು ಮೊದಲ ಬಾರಿಗೆ ಅಂದಿನ ಸಂದರ್ಭದಲ್ಲಿ ಎತ್ತಿ ಉತ್ತರಿಸಲು ಪ್ರಯತ್ನಿಸಿದ, ಈ ಕೃತಿ ಇಂದಿಗೂ ಅತ್ಯಂತ ಪ್ರಸ್ತುತ. ಇದು ಏಂಗೆಲ್ಸ್ ಅವರು ಗತಿತಾರ್ಕಿಕ ಭೌತವಾದವನ್ನು ಚರಿತ್ರೆಗೆ ಅನ್ವಯಿಸಿದ ಆರಂಭಿಕ ಪ್ರಯತ್ನಗಳಲ್ಲಿ ಒಂದಾಗಿದ್ದು, ಈ ವಿಧಾನ ಇತರ ಚಾರಿತ್ರಿಕ ವಿದ್ಯಮಾನಗಳ ಸಮಗ್ರ ಅರ್ಥೈಸುವಿಕೆಗೆ ಒಂದು ಮಾದರಿಯನ್ನು ಒದಗಿಸುತ್ತದೆ. ಕ್ರಿಯಾ ಮಾಧ್ಯಮ ಮತ್ತು ನವಕರ್ನಾಟಕ ಜಂಟಿಯಾಗಿ ಹಮ್ಮಿಕೊಂಡಿರುವ ಏಂಗೆಲ್ಸ್-200 ಮಾಲಿಕೆಯ ಈ ಪುಸ್ತಕದ ಬಿಡುಗಡೆಯನ್ನು ಸೆಪ್ಟೆಂಬರ್ 21 (ಬುಧವಾರ) ಸಂಜೆ 5 ಗಂಟೆ ಗೆ ಬಸವನಗುಡಿಯ ಹೊಸ ಕ್ರಿಯಾ ಮಾಧ್ಯಮ ಪುಸ್ತಕ ಮಳಿಗೆ ಯಲ್ಲಿ ಹಮ್ಮಿ ಕೊಂಡಿದೆ. ಚಿಂತಕ ಜಿ.ಎನ್.ನಾಗರಾಜ್ ಈ ಪುಸ್ತಕವನ್ನು ಬಿಡುಗಡೆ ಮಾಡಿ, “ಜರ್ಮನ್ ರೈತ ಯುದ್ಧ ದ ಮರು-ಓದು : ಜನರ ಸಂಕಟಗಳು, ಚಳುವಳಿಗಳು ಮತ್ತು ಧಾರ್ಮಿಕ ರೂಪಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಸಂವಾದಕ್ಕೆ ಚಾಲನೆ ನೀಡಲಿದ್ದಾರೆ. ಆ ನಂತರ ಇದೇ ವಿಷಯದ ಮೇಲೆ ನಡೆಯಲಿರುವ ಸಂವಾದದಲ್ಲಿ. ರಾಘವೇಂದ್ರ ಕುಷ್ಟಗಿ ಮತ್ತು ಡಾ.ಬಂಜಗೆರೆ ಜಯಪ್ರಕಾಶ್ ಭಾಗವಹಿಸಲಿದ್ದಾರೆ. ರೈತ ನಾಯಕ ನವೀನ್ ಕುಮಾರ್ ಎಚ್.ಆರ್ ಪುಸ್ತಕ ಪರಿಚಯವೂ ಮಾಡಲಿದ್ದಾರೆ.
ZOOM LINK ಮೂಲಕವೂ ಭಾಗವಹಿಸಬಹುದು Meeting Id 81808577900 Password 637705
“ನಾನು ಹೇಳುವುದೆಲ್ಲವೂ ನನ್ನ ಪಕ್ಷದ ನಿಲುವುಗಳು” ಎನ್ನುವ ಧ್ಯೇಯವಾಕ್ಯದ ವಿಶಿಷ್ಟ ರಾಜಕಾರಣಿ ನಮ್ಮ ಕಾಮ್ರೇಡ್ ಶ್ರೀರಾಮರೆಡ್ಡಿ
“ನಾನು ಹೇಳುವುದೆಲ್ಲವೂ ನನ್ನ ಪಕ್ಷದ ನಿಲುವುಗಳು, ಜನರ ವಿಚಾರದಲ್ಲಿ ರಾಜಕಾರಣಿಗೆ ವೈಯಕ್ತಿಕ ನಿಲುವು-ಪಕ್ಷದ ನಿಲುವು ಎಂಬ ಇಬ್ಬಂದಿತನ ಇರಕೂಡದು” ಎಂದು ನಂಬಿದ ರಾಜಕಾರಣಿ ಕಾಮ್ರೇಡ್ ಜಿ.ವಿ. ಶ್ರೀರಾಮರೆಡ್ಡಿ ಯವರು 1994 ಮತ್ತು 2004ರಲ್ಲಿ ಹೀಗೆ ಎರಡು ಬಾರಿ ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿ ಬಾಗೇಪಲ್ಲಿಯಿಂದ ಚುನಾಯಿತರಾಗಿ ಶಾಸಕರಾಗಿದ್ದರು.
ವಿಧಾನಸಭೆಯಲ್ಲಿ ಶ್ರೀರಾಮರೆಡ್ಡಿಯವರು ಮಾತಿಗೆ ನಿಂತರೆಂದರೆ ಇಡೀ ಅಸೆಂಬ್ಲಿಯಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಇರುತ್ತಿತ್ತು. ಕೇವಲ ತನ್ನ ಕ್ಷೇತ್ರವಲ್ಲದೆ ಇಡೀ ರಾಜ್ಯವನ್ನು ಪ್ರತಿನಿಧಿಸಿ ಮಾತನಾಡುತ್ತಿದ್ದ ಶ್ರೀರಾಮರೆಡ್ಡಿಯವರ ವಿದ್ವತ್ತು, ಜನಪರ ಕಾಳಜಿ, ಹಣಕಾಸು, ರಾಜಕೀಯ, ಸಿದ್ದಾಂತದ ಬಗೆಗಿನ ಮಾಹಿತಿಗೆ ಇಡೀ ಸದನ ಕಣ್ಣು ಕಿವಿಗೊಟ್ಟು ಕೇಳಿಸಿಕೊಳ್ಳುತ್ತಿತ್ತು. ಶ್ರೀರಾಮರೆಡ್ಡಿಯವರು ಮಾತನಾಡುತ್ತಿದ್ದಾಗ ಯಾವುದಾದರೂ ಶಾಸಕರು ಮಧ್ಯೆ ಮಾತನಾಡಿದರೆ ಸಭಾಧ್ಯಕ್ಷರು ಅಂತಹ ಶಾಸಕರನ್ನು ಬೈದು ಕುಳ್ಳಿರಿಸಿದ್ದೂ ಇದೆ. ಶ್ರೀರಾಮ ರೆಡ್ಡಿಯವರು ವಿಧಾನಸಭೆಯಲ್ಲಿ ಮಾತನಾಡಿರುವ ದಾಖಲೆಗಳನ್ನು ತೆಗೆದು ನೋಡಿದಾಗ ಈ ಎಲ್ಲಾ ಅಂಶಗಳು ತಿಳಿದುಬರುತ್ತದೆ ಎನ್ನುತ್ತಾರೆ ಪುಸ್ತಕದ ಸಂಪಾದಕರು.
ವಿಧಾನಸಭೆಯಲ್ಲಿ ಮಾತನಾಡುವ ಶೈಲಿಯ ಜತೆಜತೆಗೆ ಇವರ ಕಾರ್ಯವೈಖರಿಯೂ ವಿಶಿಷ್ಟವಾದದ್ದು.
ಉಡುಪಿಯ ಮಣಿಪಾಲ ಕಾಲೇಜಿನಲ್ಲಿ ಓದುತ್ತಿದ್ದ ಮೆಡಿಕಲ್ ವಿದ್ಯಾರ್ಥಿಯನ್ನು ಅಪಹರಿಸಿದ್ದ ಕಿಡಿಗೇಡಿಗಳು ಅತ್ಯಾಚಾರ ಮಾಡಿದ್ದರು. ಕರಾವಳಿಯ ಶಾಸಕರಿಗೆ ಗೊತ್ತಾಗುವ ಮೊದಲೇ ಮಾಜಿ ಶಾಸಕ ಶ್ರೀರಾಮ ರೆಡ್ಡಿಯಲ್ಲಿ ಉಡುಪಿಯಲ್ಲಿದ್ದರು. ನೇರವಾಗಿ ಮಣಿಪಾಲ ಆಸ್ಪತ್ರೆಗೆ ತೆರಳಿದವರೇ, ಆಡಳಿತ ಮಂಡಳಿಯಿಂದ ಸ್ಪಷ್ಟನೆ ಕೇಳಿದರು. ಆ ಬಳಿಕ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಶ್ರೀರಾಮ ರೆಡ್ಡಿಯವರು ಅಲ್ಲೇ ಹೊರಗಡೆ ಸಿಪಿಐ(ಎಂ) ಪಕ್ಷದ ನಾಯಕರ ಜೊತೆ ಮಾತನಾಡಿ ಮಂಗಳೂರು ಉಡುಪಿಯಲ್ಲಿ ಪ್ರತಿಭಟನೆ ನಡೆಸುವಂತೆ ಸೂಚಿಸಿದರು. ಆಡಳಿತ ಮತ್ತು ವಿಪಕ್ಷಗಳಿಗೆ ವಿಷಯವೇನೆಂದು ಗೊತ್ತಾಗುವಷ್ಟರಲ್ಲಿ ಆರೋಪಿಗಳ ಬಂಧನವಾಗಿತ್ತು.
ಇಂತಹ ಗುಣಲಕ್ಷಣದ ಮಾಜಿ ಶಾಸಕ, ಸಿಪಿಐ(ಎಂ) ಮಾಜಿ ರಾಜ್ಯ ಕಾರ್ಯದರ್ಶಿ ಶ್ರೀರಾಮ ರೆಡ್ಡಿಯವರು ಸದನದಲ್ಲಿ ಮಾತನಾಡಿದ ದಾಖಲೆಗಳಿಂದ ಆಯ್ದ ಭಾಷಣಗಳ ಸಂಗ್ರಹ ಈ ಪುಸ್ತಕ.
ಹೆಸರಾಂತ ಸಾಹಿತಿ ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ `ಕರಾವಳಿಯ ಕೋಮುಹಿಂಸೆಯ ಹಿಂದಿರುವ ನೈಜ ಕೈಗಳ ಅನಾವರಣ' ಎಂಬ ಶೀರ್ಷಿಕೆಯಡಿಯಲ್ಲಿ ನಡೆಯಲಿರುವ ವಿಚಾರಸಂಕಿರಣದಲ್ಲಿ,
ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು `ಕೋಮು ಹಿಂಸೆಯ ಹಿಂದಿನ ರಾಜಕಾರಣ' ಎಂಬ ವಿಷಯದ ಮೇಲೆ ತಮ್ಮ ವಿಚಾರ ಮಂಡನೆ ಮಾಡಿದರೆ ನಿವೃತ್ತ ಸಹಾಯಕ ಪೋಲಿಸ್ ಕಮಿಷನರ್ ಬಿ.ಕೆ.ಶಿವರಾಂ ಅವರು `ಮತೀಯವಾದ ಮತ್ತು ಪ್ರಭುತ್ವ’ ಎಂಬ ವಿಷಯದ ಮೇಲೆ ತಮ್ಮ ವಿಚಾರವನ್ನು ಮಂಡನೆ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ದಿಟ್ಟ ಪತ್ರಕರ್ತ ನವೀನ್ ಸೂರಿಂಜೆ ಬರೆದಿರುವ `ನೇತ್ರಾವತಿಯಲ್ಲಿ ನೆತ್ತರು – ಕರಾವಳಿಯ ಕೋಮು ಹಿಂಸೆಯ ನೈಜ ಪ್ರಕರಣಗಳು’ ಪುಸ್ತಕ ಬಿಡುಗಡೆಗೊಳ್ಳುತ್ತಿದೆ. ಕೋಮು ಹಿಂಸಾಚಾರದಲ್ಲಿ ತಂದೆಯನ್ನು ಕಳೆದುಕೊಂಡ ಮಹಮ್ಮದ್ ಶಹೀದ್ ಅವರು ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಮತ್ತು ಚಿಂತಕರಾದ ಕೆ. ಷರೀಫಾ, ಹಿರಿಯ ಹೋರಾಟಗಾರರೂ ಚಿಂತಕರೂ ಆಗಿರುವ ಮಾವಳ್ಳಿ ಶಂಕರ್ ಹಾಗೂ ಲೇಖಕ ನವೀನ್ ಸೂರಿಂಜೆ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ದಿನಾಂಕ 19.06.2022 ಭಾನುವಾರದಂದು ಬೆಳಿಗ್ಗೆ 10:30ಕ್ಕೆ ಬಾಪೂ ಸಂಭಾಂಗಣ, ಗಾಂಧೀಭವನ, ಕುಮಾರಕೃಪಾ ರಸ್ತೆ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.
ತಾವೆಲ್ಲರೂ ಈ ವಿಚಾರ ಸಂಕಿರಣಕ್ಕೆ ಬಂದು `ನೇತ್ರಾವತಿಯಲ್ಲಿ ನೆತ್ತರು’ ಪುಸ್ತಕವನ್ನು ಖರೀದಿಸಿ ಓದಿ ಅಭಿಪ್ರಾಯ ತಿಳಿಸಿರಿ.
ಶೀರ್ಷಿಕೆ : ನೇತ್ರಾವತಿಯಲ್ಲಿ ನೆತ್ತರು ಲೇಖಕರು:ನವೀನ್ ಸೂರಿಂಜೆ ಪ್ರಕಾಶಕರು: ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:184 ಬೆಲೆ:ರೂ.185 ಪ್ರಕಟಣಾ ವರ್ಷ:2022
ಪತ್ರಕರ್ತ ನವೀನ್ ಸೂರಿಂಜೆ ಯವರ “ನೇತ್ರಾವತಿಯಲ್ಲಿ ನೆತ್ತರು” ಪುಸ್ತಕದ ಕುರಿತು ಹಿರಿಯ ಚಿಂತಕ ಕೆ ಫಣಿರಾಜ್ ಬರೆಯುತ್ತಾರೆ…
ಹಿಂದುತ್ವವಾದಿ ಫ್ಯಾಸಿಸ್ಟ್ ರಾಜಕೀಯವನ್ನು ವಿರೋಧಿಸಲು, ನಾವು ನಮ್ಮ ಬದುಕಿನ ವಿವೇಕ ವಿವೇಚನೆಗಳನ್ನು ಎಚ್ಚರದಲ್ಲಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯವೋ, ಅಷ್ಟೇ ಫ್ಯಾಸಿಸ್ಟ್ ಹಿಂಸಾ ಕೃತ್ಯಗಳ ಸ್ವರೂಪವನ್ನು ಅರಿಸುವ ವಾಸ್ತವಿಕ ವಿದ್ಯಮಾನಗಳ ನಿರೂಪಣೆಗಳೂ ಅಗತ್ಯ. ಯುವ ಮಾಧ್ಯಮ ವರದಿಗಾರರಾಗಿ ಕರಾವಳಿಯಲ್ಲಿ ಧೀರ್ಘ ಕಾಲ ಚುರುಕಿನ ತನಿಖ ವರದಿಗಳನ್ನು ಪ್ರಕಟಿಸಿದ ನವೀನ್ ಸೂರಿಂಜೆಯವರು ತಮ್ಮ ವೃತ್ತಿ ಅನುಭವವನ್ನು ಕಡೆದು ಕಟ್ಟಿರುವ ಬರಹಗಳ ಸಂಕಲನವಿದು. ಸರಳವೂ ತೀಷ್ಣವೂ ಆದ ಈ ಬರಹಗಳನ್ನು ಅಗತ್ಯವಾಗಿ (ಹಿಂದುತ್ವ ರಾಜಕೀಯಕ್ಕೆ ಮನಸ್ಸು ಕೊಟ್ಟವರೂ ಸೇರಿದಂತೆ) ಎಲ್ಲಾ ನಾಗರಿಕರೂ ಓದಬೇಕಾದ ಬರಹಗಳಿವು. ಹಿಂದುತ್ವ ಮತೀಯವಾದ ಕಾರ್ಯಚರಣೆಯ ವಿಧಾನಗಳ ಬಗ್ಗೆ ಬೆಳಕು ಚೆಲ್ಲುವುದು ಮಾತ್ರವಲ್ಲದೆ, ಬಡತನದ ಬವಣೆಗಳನ್ನೂ, (ಆರೋಪಕ್ಕೆ ತುತ್ತಾಗಿ ಸ್ವತಃ ಜೈಲುವಾಸ ಅನುಭಿವಿಸಿರುವವರಾಗಿ) ಮಂಗಳೂರು ಜೈಲೊಳಗಿನ ಮಾನವ ಗತಿಯ ಕಥನಗಳನ್ನು ಬಹಳ ಅಂತಃಕರಣದಲ್ಲಿ ನವೀನ್ ನಿರೂಪಿಸಿರುವರು. ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ.
ಬಿಡುಗಡೆ : ಪ್ರೊ.ಸಿ.ಎನ್.ರಾಮಚಂದ್ರನ್ ಸಂವಾದದಲ್ಲಿ : ಪ್ರೊ.ಗಣೇಶ ದೇವಿ, ಡಾ.ಎಂ.ಜಿ.ಹೆಗಡೆ ಸ್ಥಳ : ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್.ಕಾಲೊನಿ 3ನೆಯ ಮುಖ್ಯ ರಸ್ತೆ, ಬೆಂಗಳೂರು ದಿನ/ಸಮಯ : ಮಾರ್ಚ್ 19, 2022 ಶನಿವಾರ ಸಂಜೆ 4.30
ಮಹಾಭಾರತದ ಕತೆಗಳು, ಪಾತ್ರಗಳು ಮತ್ತು ಸನ್ನಿವೇಶಗಳು ಭಾರತೀಯರ ಜೀವನದ ಅವಿಭಾಜ್ಯ ಅಂಗ. ಭೀಷ್ಮನ ಪ್ರತಿಜ್ಞೆ, ಕರ್ಣ-ದುರ್ಯೋಧನರ ಸ್ನೇಹ, ಏಕಲವ್ಯನ ಗುರುದಕ್ಷಿಣೆ, ಉತ್ತರ ಕುಮಾರನ ಹೇಡಿತನ, ದ್ರೌಪದಿಯ ಛಲ ಇತ್ಯಾದಿ – ನಮ್ಮ ಬದುಕಿಕ ಹಲವು ಸನ್ನಿವೇಶಗಳಿಗೆ, ವ್ಯಕ್ತಿಗಳಿಗೆ, ಅವರ ವರ್ತನೆಗಳಿಗೆ ಪ್ರತಿಮೆಗಳಾಗಿ ಬಿಟ್ಟಿವೆ. ನಮ್ಮ ದಿನ ನಿತ್ಯದ ಮಾತುಗಳಲ್ಲಿ ಮೂಡಿ ಬರುತ್ತವೆ. ಕಾವ್ಯ, ಕತೆ-ಕಾದಂಬರಿ, ನೃತ್ಯ, ನೃತ್ಯನಾಟಕ, ಸಿನೆಮಾ, ಟಿವಿ, ಕಾಮಿಕ್ಸ್ ಹೀಗೆ ಎಲ್ಲಾ ಪ್ರಕಾರಗಳಲ್ಲೂ ಅವು ಮರು ಹುಟ್ಟು ಪಡೆಯುತ್ತಲೇ ಇವೆ. ಜಾತಿ, ಬುಡಕಟ್ಟು, ಭಾಷೆ, ಮತಧರ್ಮ, ಸಂಸ್ಕೃತಿ, ತಾತ್ವಿಕತೆ ಗಳ ಅಗಾಧ ವೈವಿಧ್ಯತೆಗಳೂ ಕಂದಕಗಳೂ ಇರುವ ಭಾರತದ ಜನರಲ್ಲಿ ಮಹಾಭಾರತದ ಇಂತಹ ಸರ್ವವ್ಯಾಪಿ ಕಾಲಾತೀತ ಜನಪ್ರಿಯತೆಗೆ ಕಾರಣವೇನು? ಮಹಾಭಾರತ ಎಂದಿಗೂ ಇಂದಿಗೂ ಎಲ್ಲರಿಗೂ ಸಲ್ಲುವುದು ಏಕೆ? ಎಂಬ ಸರಳ ಪ್ರಶ್ನೆಗಳಿಗೆ ಉತ್ತರ ಮಾತ್ರ ಬಹಳ ಸಂಕೀರ್ಣವಾದುದು. ಇಂತಹ ಪ್ರಶ್ನೆಗಳನ್ನು ಉತ್ತರಿಸಲು ಸಾಹಿತ್ಯ, ಭಾಷಾಶಾಸ್ತ್ರ, ಇತಿಹಾಸ, ರಾಜಕಾರಣ, ಸಮಾಜಶಾಸ್ತ್ರ, ಸಂಸ್ಕೃತಿ ಗಳ ಆಳವಾದ ಅರಿವು ಬೇಕು. ಮಹಾಭಾರತದ ಕುರಿತು ಬಂದ ಅಸಂಖ್ಯ ಅರ್ಥೈಸುವಿಕೆ, ಭಾಷ್ಯಗಳ ಅಧ್ಯಯನವೂ ಬೇಕು.
ಇವೆಲ್ಲವೂ ಇರುವ ದೇಶದ ಪ್ರಸಿದ್ಧ ಚಿಂತಕ ಪ್ರೊ. ಗಣೇಶ ದೇವಿ ಅವರು ಈ ಅತ್ಯಂತ ಪ್ರಸ್ತುತವಾದ ಪ್ರಶ್ನೆಗಳನ್ನು ಎತ್ತಿಕೊಂಡು ಇತ್ತೀಚೆಗೆ ‘ಮಹಾಭಾರತ – ದಿ ಎಪಿಕ್ ಎಂಡ್ ನೇಶನ್’ ಎಂಬ ಪುಸ್ತಕವನ್ನು ಬರೆದು ಕಳೆದ ತಿಂಗಳಲ್ಲಷ್ಟೇ ಪ್ರಕಟವಾಗಿದೆ. ಸಮಗ್ರ ಮಹಾಭಾರತವನ್ನು ಅಖಂಡವಾಗಿ ಗ್ರಹಿಸಿದ ರಾಜಶೇಖರ, ಅಭಿನವಗುಪ್ತ, ಅರವಿಂದರು ಮೊದಲಾದವರಿರುವ ಪೌರ್ವಾತ್ಯ ಮಹಾಭಾರತ ವ್ಯಾಖ್ಯಾನ ಪರಂಪರೆಯನ್ನು ಗಣೇಶ ದೇವಿ ಅವರು ಮತ್ತೆ ಮತ್ತೆ ಆವಾಹಿಸುತ್ತಾರೆಯಷ್ಟೇ ಅಲ್ಲ, ಅದರ ತೀರ್ಮಾನಗಳನ್ನು ಸ್ವೀಕರಿಸುತ್ತಾರೆ; ಆ ಚಿಂತನ ಕ್ರಮದಲ್ಲೇ ಮತ್ತಷ್ಟು ಮುಂದೆ ಸಾಗಿ ಸಮಕಾಲೀನ ಭಾರತಕ್ಕೆ ಪ್ರಸ್ತುತವಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಹವಣಿಸುತ್ತಾರೆ.
ವಸಾಹತುಶಾಹಿಯ ಪರಿಣಾಮವಾಗಿ ಭಾರತೀಯ ಸಮಾಜದಲ್ಲಿ ಸಾಂಸ್ಕೃತಿಕ ವಿಸ್ಮೃತಿ, ಪ್ರಾಚೀನ ಭವ್ಯತೆಯ ಭ್ರಮೆಗೂ ದೇಶೀ ಪರಂಪರೆಗಳ ಯಥಾರ್ಥ ಅರಿವಿನ ಕೊರತೆಗೂ ಕಾರಣವಾಗಿದೆ. ಸದ್ಯ ಮುನ್ನೆಲೆಗೆ ಬರಲು ಹಪಹಪಿಸುತ್ತಿರುವ ಮತ್ತು ಅಧಿಕೃತಗೊಳ್ಳಲು ಎಲ್ಲಾ ಉಪಕರಣಗಳನ್ನೂ ಬಳಸುತ್ತಿರುವ ರಾಷ್ಟ್ರ, ಚರಿತ್ರೆ ಮತ್ತು ಸಮಾಜದ ಕಲ್ಪನೆಗಳು ರಾಷ್ಟ್ರೀಯ ಕಾವ್ಯವೆಂದು ಮನ್ನಣೆ ಪಡೆದಿರುವ ಮಹಾಭಾರತಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ ಎನ್ನುವುದು ದೇವಿಯವರ ಮಹಾಭಾರತ ವ್ಯಾಖಾನದ ಕೇಂದ್ರ ಗ್ರಹೀತಗಳಲ್ಲೊಂದು. ಅಂದರೆ ವಸಾಹತುಶಾಹಿ ವಿಕಲ್ಪಗಳಿಗೆ ನೇತುಬಿದ್ದಿರುವ ವರ್ತಮಾನದ ರಾಜಕೀಯಕ್ಕೆ ಪರಂಪರೆಯ ವಿವೇಕವನ್ನು ನೆನಪಿಸುವ ಉದ್ದೇಶದ ಕೃತಿಯಿದು.
ಇಂಗ್ಲಿಷ್ ಮೂಲದ ಜತೆಗೆ ಭಾರತದ ಎಲ್ಲ ಭಾಷೆಗಳಲ್ಲಿ ಈ ಪುಸ್ತಕ ಬೇಗನೇ ಬರಬೇಕು ಎಂಬುದು ದೇವಿ ಅವರ ಕನಸಾಗಿತ್ತು. ಅವರ ಆಯ್ದ ಬರಹಗಳ (ಪ್ರೊ. ರಾಜೇಂದ್ರ ಚೆನ್ನಿ ಅವರ ಮಾತುಗಳಲ್ಲಿ) ‘ಮಾಂತ್ರಿಕ ಅನುವಾದ’ ಮಾಡಿದ ಡಾ.ಎಂ.ಜಿ ಹೆಗಡೆ ಅದನ್ನು “ಮಹಾಭಾರತ : ಭೂಮಕಾವ್ಯ ಮತ್ತು ಭಾರತರಾಷ್ಟç” ಎಂಬ ಅಪ್ಪಟ ಕನ್ನಡದ ಕೃತಿಯಾಗಿಸಿದ್ದಾರೆ. ಈ ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ. ಈ ಪುಸ್ತಕವನ್ನು ಖ್ಯಾತ ವಿಮರ್ಶಕ. ಚಿಂತಕ ಪ್ರೊ.ಸಿ.ಎನ್.ರಾಮಚಂದ್ರನ್ ಅವರು ಇದೇ ಶನಿವಾರ ಮಾರ್ಚ್ 19ರಂದು ಬಿಡುಗಡೆ ಮಾಡಿ, ಅದರ ವಿಮರ್ಶಾತ್ಮಕ ಪರಿಚಯ ಮಾಡಿಕೊಡಲಿದ್ದಾರೆ.
ಈ ಸಮಾರಂಭ ಬೆಂಗಳೂರಿನ ಎನ್.ಆರ್.ಕಾಲೊನಿಯ 3ನೆಯ ಮುಖ್ಯ ರಸ್ತೆಯಲ್ಲಿರುವ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ. ಅಂದು ಪುಸ್ತಕ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. ಪ್ರೊ. ಗಣೇಶ ದೇವಿ, ಡಾ.ಎಂ.ಜಿ ಹೆಗಡೆ ಯವರು ಉಪಸ್ಥಿತರಿದ್ದು ಸಂವಾದದಲ್ಲಿ ಭಾಗವಹಿಸುತ್ತಾರೆ.
ಮರುದಿನ (ಮಾರ್ಚ್ 20, 11.30 ಬೆಳಿಗ್ಗೆ) ರಂಗಶಂಕರದಲ್ಲಿ Celebrating Books ಕಾರ್ಯಕ್ರಮದ ಭಾಗವಾಗಿ ಈ ಪುಸ್ತಕದ ಕುರಿತು ಸಂವಾದವಿರುತ್ತದೆ. ಅಲ್ಲೂ ಈ ಪುಸ್ತಕ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿರುತ್ತದೆ.