ಕ್ರಾಂತಿ ಕವಿಯ ಖಾಸಗಿ ಲೋಕ

ಜನಪರ ಚಳುವಳಿಗಳ ಭಾಗವಾಗಿರುವ ರಂಗನಾಥ್ ನಾಡಿನ ಸಾಮಾಜಿಕ ರಾಜಕೀಯ ಸಂಗತಿಗಳ ಬಗ್ಗೆ ತೀವ್ರವಾದ ರಾಜಕೀಯ ಪ್ರಜ್ಞೆಯಿಂದಲೂ ಖಚಿತವಾಗಿಯೂ ತರ್ಕಬದ್ಧವಾಗಿಯೂ ಎಡಪಂಥೀಯ ದೃಷ್ಟಿಕೋನದಿಂದಲೂ ಚರ್ಚೆ ಮಾಡಬಲ್ಲವರು. ಆದರೆ ಇಲ್ಲಿ ಮಾತ್ರ ಅವರ ಈ ವ್ಯಕ್ತಿತ್ವಕ್ಕೆ ತೀರ ಭಿನ್ನವೆಂಬಂತೆ ವೈಯಕ್ತಿಕ ಎನ್ನಬಹುದಾದ ಲೋಕವೊಂದು ತರ್ಕಾತೀತವಾದ ಚಿತ್ರಗಳಲ್ಲಿ ಬರುತ್ತದೆ. ಈ ಚಿತ್ರಗಳಿಗಾಗಿ ಅವರು ಭೂಮಿ ಗಗನವನ್ನು ಜಾಲಾಡುವ ಬಗೆಯಲ್ಲಿ ಕವನ ಬರೆಯುತ್ತಾರೆ. ಇದನ್ನು ಇಲ್ಲಿನ ಆರ್ತತೆ, ತಲ್ಲಣ, ಪ್ರಶ್ನೆ, ವಿಸ್ಮಯ ಹಾಗೂ ಕನಸುಗಳಲ್ಲಿ ಕಾಣಬಹುದು.

ಇಲ್ಲಿನ ಅವ್ವ, ಗೆಳತಿಯರು ಕವಿತೆಯ ನಾಯಕನ ವೈಯಕ್ತಿಕ ಬಾಳಿನ ಹಾಸನ್ನು ದಾಟಿ ಲೋಕದ ವ್ಯಕ್ತಿಗಳಾಗಿ ಬದಲಾಗುವ ರೂಪಾಂತರ ಕ್ರಿಯೆಯಿದೆ….. ಒಟ್ಟಿನಲ್ಲಿ ಇಲ್ಲಿನ ಕವಿತೆಗಳಲ್ಲಿ ಬಹಳ ಸೂಕ್ಷ್ಮವಾದ ಮನಸ್ಸೊಂದು ಕೆಲಸ ಮಾಡಿದೆ.

ಪ್ರಿಯ,
ನೀನು ಆಗ ಗಳಿಸುತ್ತಿರುದ್ದುದು ಗೆದ್ದ ಮನಸ್ಸನ್ನಲ್ಲ
ಸೋತ ವಿಷಣ್ಣ ಹೃದಯವನ್ನು
ನನಗೆ ಅನ್ನಿಸುತ್ತಿತ್ತು
ವಿಜಯಿಗಳು ಯಾವಾಗಲೂ ಗಳಿಸುವುದು
ಸೋತ ದೇಹ-ಮನಸ್ಸುಗಳೆಂದು

ಶೀರ್ಷಿಕೆ : ಸೋರೆ ದೋಣಿಯ ಗೀತ ಲೇಖಕರು : ಕಂಟನಕುಂಟೆ ರಂಗನಾಥ್ ಪ್ರಕಾಶಕರು : ಅಕ್ಕ ಪ್ರಕಾಶನ ಪುಟಗಳು : ಬೆಲೆ: ರೂ.40/-

ಕೃಪೆ : ಕನ್ನಡ ಟೈಮ್ಸ್

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕೆಲವು ಪುಸ್ತಕಗಳ ಪಟ್ಟಿ

ನಮ್ಮ ಓದುಗರ ಕೇಳಿಕೆಯಂತೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕೆಲವು ಪುಸ್ತಕಗಳ ಪಟ್ಟಿಯನ್ನು ಇಲ್ಲಿ ಕೊಡುತ್ತಿದ್ದೇವೆ

ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು :ಕವನ ಸಂಕಲನ
ಬೃಹನ್ನಳೆ :ಕವನ ಸಂಕಲನ
ಯಮಳ ಪ್ರಶ್ನೆ :ನಾಟಕ
ಹುಲಿಯೂರಿನ ಸರಹದ್ದು :ಕಥಾ ಸಂಕಲನ
ಅಬಚೂರಿನ ಪೋಸ್ಟ್ ಆಫೀಸ್ :ಕಥಾ ಸಂಕಲನ
ಕಿರಗೂರಿನ ಗಯ್ಯಾಳಿಗಳು :ಕಥಾ ಸಂಕಲನ
ಗುಡುಗು ಹೇಳಿದ್ದೇನು :ಕಥಾ ಸಂಕಲನ
ಸ್ವರೂಪ :ಕಾದಂಬರಿ
ನಿಗೂಢ ಮನುಷ್ಯರು :ಕಾದಂಬರಿ
ಕರ್ವಾಲ :ಕಾದಂಬರಿ
ಜುಗಾರಿ ಕ್ರಾಸ್ :ಕಾದಂಬರಿ
ಚಿದಂಬರ ರಹಸ್ಯ :ಕಾದಂಬರಿ
ಅಲೆಮಾರಿಯ ಅಂಡಮಾನ್ ಮತ್ತು ನೈಲ್ ನದಿ :ಕಥಾ ಸಂಕಲನ
ಪರಿಸರದ ಕಥೆ :ಕಥಾ ಸಂಕಲನ
ಮಿಸಿಂಗ್ ಲಿಂಕ್ :ಪತ್ತೇದಾರಿ ಕಥೆ
ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು :ಕಥಾ ಸಂಕಲನ
ಕಾಡಿನ ಕಥೆಗಳು (1 ರಿಂದ 3) :ಅನುವಾದ
ಫ್ಲೈಯಿಂಗ್ ಸಾಸರ್ (1 ರಿಂದ 3) :ವೈಜ್ಞಾನಿಕ ಸಾಹಿತ್ಯ
ವಿಸ್ಮಯ (1 ರಿಂದ 3) :ವೈಜ್ಞಾನಿಕ ಸಾಹಿತ್ಯ
ನಡೆಯುವ ಕಡ್ಡಿ ಹಾರುವ ಎಲೆ :ವೈಜ್ಞಾನಿಕ ಸಾಹಿತ್ಯ
ಮಿಂಚುಳ್ಳಿ – ಕನ್ನಡ ನಾಡಿನ ಹಕ್ಕಿಗಳು ಭಾಗ-1 :ವೈಜ್ಞಾನಿಕ ಸಾಹಿತ್ಯ
ಹೆಜ್ಜೆ ಮೂಡದ ಹಾದಿ – ಕನ್ನಡ ನಾಡಿನ ಹಕ್ಕಿಗಳು ಭಾಗ-2:ವೈಜ್ಞಾನಿಕ ಸಾಹಿತ್ಯ
ಅಣ್ಣನ ನೆನಪು :ವನ ಚರಿತ್ರೆ
ಮಾಯಾಲೋಕ-1 :ಕಾದಂಬರಿ
ಹುಡುಕಾಟ :ವೈಚಾರಿಕ ಸಾಹಿತ್ಯ
ಜೀವನ ಸಂಗ್ರಾಮ :ವೈಚಾರಿಕ ಸಾಹಿತ್ಯ
ಪೆಸಿಫಿಕ್ ದ್ವೀಪಗಳು :ವೈಚಾರಿಕ ಸಾಹಿತ್ಯ
ಚಂದ್ರನ ಚೂರು :ವೈಚಾರಿಕ ಸಾಹಿತ್ಯ
ನೆರೆಹೊರೆಯರ ಗೆಳೆಯರು :ವೈಚಾರಿಕ ಸಾಹಿತ್ಯ
ಮಹಾಯುದ್ಧ (1 ರಿಂದ 3) :ವೈಚಾರಿಕ ಸಾಹಿತ್ಯ
ದೇಶವಿದೇಶ (1 ರಿಂದ 4) :ವೈಚಾರಿಕ ಸಾಹಿತ್ಯ
ವಿಸ್ಮಯ ವಿಶ್ವ (1 ರಿಂದ 2) :ವೈಚಾರಿಕ ಸಾಹಿತ್ಯ
ಮಹಾ ಪಲಾಯನ :ವೈಚಾರಿಕ ಸಾಹಿತ್ಯ
ಅಡ್ವೆಂಚರ್ :ವೈಚಾರಿಕ ಸಾಹಿತ್ಯ
ಸಹಜ ಕೃಷಿ – ಒಂದು ಪರಿಚಯ :ವೈಜ್ಞಾನಿಕ ಸಾಹಿತ್ಯ
ಪಾಪಿಲ್ಲಾನ್ (1 ರಿಂದ 2) :
ಹಕ್ಕಿ ಪುಕ್ಕ :ವೈಜ್ಞಾನಿಕ ಸಾಹಿತ್ಯ
ರಹಸ್ಯ ವಿಶ್ವ :ವೈಜ್ಞಾನಿಕ ಸಾಹಿತ್ಯ
ದಕ್ಷಿಣ ಭಾರತದ ಹಕ್ಕಿಗಳು :ವೈಜ್ಞಾನಿಕ ಸಾಹಿತ್ಯ

“ಅವಧಿ” ಗೆ ಧನ್ಯವಾದಗಳು

ಅವಧಿ ಬ್ಲಾಗ್ ನ ಪುಸ್ತಕ ಪ್ರೀತಿಸಲು ಬನ್ನಿ ಪೋಸ್ಟ್ ಅನ್ನು ಪ್ರಕಟಿಸಿದಕ್ಕೆಅವಧಿಗೆ ಧನ್ಯವಾದಗಳು. ಪೋಸ್ಟ್ಗೆ ಸ್ಪಂಧಿಸಿದ ಯಶೋದಾ ಅವರ ಕೇಳಿಕೆಯಂತೆ ಪೂರ್ಣಚಂದ್ರ ತೇಜಸ್ವಿಯವರ ಬರಹಗಳ ಪಟ್ಟಿಯನ್ನು ಶೀರ್ಘದಲ್ಲೇ ಪ್ರಕಟಿಸಲಾಗುವುದು.

ನೀವು ಪೋಸ್ಟ್ ಮೂಲಕ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳನ್ನು ತರಿಸಿಕೊಳ್ಳಬಹುದು. ವಿಳಾಸ ಹೀಗಿದೆ. ಪುಸ್ತಕ ಪ್ರಕಾಶನ, ಬುಕ್ ಪೋಸ್ಟ್ ಸರ್ವೀಸ್ಸ್, ಚಿಕ್ಕಮಗಳೂರು ಜಿಲ್ಲೆ, ಫೋನ್ ನಂ.08263-228353, 08263-240202.

ಇಲ್ಲವಾದರೆ ನಮ್ಮನ್ನು pusthakapreethi@gmail.com ಮೂಲಕ ನಿಮ್ಮ ವಿಳಾಸ ಮುಂತಾದ ವಿವರಗಳೊಂದಿಗೆ ಸಂಪರ್ಕಿಸಿ. ನಾವು ನಿಮಗೆ ಬೇಕಾದ ಪುಸ್ತಕಗಳನ್ನು ವಿತರಿಸುತ್ತೇವೆ.

ತೇಜಸ್ವಿಯ ಮಾಯಾಲೋಕ

“ನಾಲ್ಕು ದಶಕದ ಹಿಂದೆ ಅಬಚೂರಿನ ಪೋಸ್ಟಾಫೀಸು ಕಥಾಸಂಕಲನಕ್ಕೆ ಮೊದಲ ಮಾತುಗಳನ್ನು ಬರೆಯುತ್ತಾ ಬದಲಾಗುತ್ತಿರುವ ಸನ್ನಿವೇಶಗಳ ಸವಾಲುಗಳನ್ನು ಎದುರಿಸಲು ನಾವು ಹೊಸದಿಗಂತಗಳತ್ತ ಹೋಗಬೇಕಾಗಿರುವುದನ್ನು ಜ್ಞಾಪಿಸಿದ್ದೆ. ಈಗ ಇಪ್ಪತ್ತೊಂದನೇ ಶತಮಾನ ಪ್ರಾರಂಭವಾಗುತ್ತಿದ್ದಂತೆ ಅಂಥದೇ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ನಿಂತಿದ್ದೇವೆಂದು ಅನ್ನಿಸುತ್ತಿದೆ. ನಮ್ಮೆದುರು ಬದಲಾವಣೆಗಳ ಮಹಾಪೂರವೇ ಹರಿಯುತ್ತಿದೆ. ಹೊಸ ನುಡಿಗಟ್ಟುಗಳು, ಹೊಸ ಉಕ್ತಿಭಂಗಿ, ಹೊಸ ಅಭಿವ್ಯಕ್ತಿ ವಿಧಾನಗಳ ಬಗ್ಗೆ ನಾವೀಗ ಗಮನ ಹರಿಸಿ ಹೊಸ ದಿಗಂತಗಳತ್ತ ಅನ್ವೇಷಣೆ ಹೊರಡಬೇಕಾಗಿದೆ. ಈ ಕೃತಿಯಲ್ಲಿ ಹಾಸುಹೊಕ್ಕಾಗಿರುವ ಸ್ಕೆಚ್ ಮತ್ತು ರೇಖಾ ಚಿತ್ರಗಳು ಕೃತಿಯ ಸಾಂಧರ್ಭಿಕ ವಿವರಣೆಯಾಗಿ ಕೊಟ್ಟಿರುವ ಚಿತ್ರಗಳಲ್ಲ. ಕೆಲವೆಡೆಗಳಲ್ಲಿ ಹಾಗೆ ಕಂಡುಬಂದರೂ ಅದು ಕೇವಲ ಆಕಸ್ಮಿಕವಷ್ಟೇ ಹೊರತು ಉದ್ದೇಶಪೂರ್ವಕವಲ್ಲ. ಇದೊಂದು ಕೊಲಾಜ್ ಮಾದರಿಯ ಕಲಾಕೃತಿ. ಇಲ್ಲಿನ ಕಥಾ ಪ್ರತಿಮೆಗಳೂ ದೃಶ್ಯಪ್ರತಿಮೆಗಳೂ ಓದುತ್ತಾ ಹೋದಂತೆ ಒಂದರಮೇಲೊಂದು ಸಂಯೋಜನೆಗೊಳ್ಳುತ್ತಾ ಮಾಯಾಲೋಕವನ್ನು ಸೃಷ್ಟಿಸುತ್ತವೆ. ಇದೊಂದು ಬೆಟ್ಟು ತೋರಿಸಿ ನಿರ್ದೇಶಿಸಲಾರದಷ್ಟು ಸೂಕ್ಷ್ಮ ಮತ್ತು ಪರೋಕ್ಷ ಸಂವಹನ ಕ್ರಿಯೆಯಾದುದರಿಂದ ನಾನು ಇದಕ್ಕಿಂತ ಹೆಚ್ಚಿನ ವಿವರಣೆ ಕೊಡಲಾರೆ” ಎಂದಿದಾರೆ ಲೇಖಕರು ತಮ್ಮ ಮುನ್ನುಡಿಯಲ್ಲಿ.

ಶೀರ್ಷಿಕೆ : ಮಾಯಾಲೋಕ – 1 ಲೇಖಕರು : ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು : ಪುಸ್ತಕ ಪ್ರಕಾಶನ ಪುಟಗಳು : 249 ಬೆಲೆ: ರೂ.198

ಭಾರತ ದರ್ಶನ (ಭಾಗ-1)

ಪಂಡಿತ ಜವಾಹಾರಲಾಲಾ ನೆಹರೂ ಅವರ ಡಿಸ್ಕವರಿ ಆಫ್ ಇಂಡಿಯಾ ಉದ್ಗ್ರ0(ಎರಡು ಭಾಗಗಳಲ್ಲಿದೆ)
ಮೊದಲ ಭಾಗದ ಸರಳ ಅನುವಾದ ಇದು. ಪ್ರಪಂಚದ ಮಹಾನ್ ರಾಜಕಾರಣಿಗಳಲ್ಲಿ ಒಬ್ಬರು, ಸುಸಂಸ್ಕ್ರತ ಭಾವನಾಜೀವಿ,
ಧ್ಯೇಯ ನಿಷ್ಠೆಗಳನ್ನು ಮೈ ಗೂಡಿಸಿಕೊಂಡವರೂ ಆದ ಜವಾಹರರ ಫ್ರೌಢ ಇಂಗ್ಲೀಶ್ ಶೈಲಿ ಹಲವು ಓದುಗರಿಗೆ ಅಡ್ಡಿಯಾಗಿರಲಿಕ್ಕೂ ಸಾಕು.
ಎಸ್. ಕೃಷ್ಣಮೂರ್ತಿರಾವ್ ಅವರ ಅನುವಾದ ಇದನ್ನು ಪರಿಹರಿಸಿ, ಭಾರತದ ಇತಿಹಾಸ, ಸಾಹಿತ್ಯ ಕಲೆ ಮತ್ತು ಸಂಸ್ಕೃತಿಗಳ ಮೇಲೆ ಹೊಸ
ಬೆಳಕನ್ನು ಚೆಲ್ಲಿದ ನೆಹರೂ ವಿಚಾರಧಾರೆಯನ್ನು ಕನ್ನಡ ಓದುಗರಿಗೆ ಪರಿಚಯಿಸಿ ಕೊಟ್ಟಿದೆ. ತುಸು ತುಸುವೇ ಸವಿದು ಓದುವುದನ್ನು ಕಡ್ಡಾಯ
ಮಾಡಿಕೊಂಡರೆ ಸಾಕು, ಅಷ್ಟರಮಟ್ಟಿಗೆ ಓದುಗರ ಪ್ರಜ್ಞೆ ವಿಸ್ತರಿಸುತ್ತದೆ; ನೆಹರೂ ನಂತರ ತಮ್ಮ ವಿಚಾರಗಳನ್ನು ಪುನರಾವಲೋಕಿಸಿಕೊಂಡಿದ್ದರೂ.

ಮೂಲ:ಜವಾಹಾರಲಾಲಾ ನೆಹರೂ ಅನುವಾದ:ಎಸ್ ವಿ ಕೃಷ್ಣಮೂರ್ತಿ ರಾವ್ ಪ್ರಕಾಶನ:ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ ಪುಟ:400 ಬೆಲೆ:ರೂ.110/

ಕೃಪೆ:ವಿಜಯ ಕರ್ನಾಟಕ

ಪ್ಲೇಗಮ್ಮ, ಮಾರಿಯಮ್ಮ, ಎಡ್ಸ್ ದೇವತೆ ಇತ್ಯಾದಿ

ವಿಚಿತ್ರ ಶೀರ್ಷಿಕೆಯ ಈ ಪುಸ್ತಕ ತುಸು ವಿಲಕ್ಷಣವಾಗಿದೆ. ಸುಪರ್ ಸ್ಪೆಷಲೈಸೇಷನ್ ನ ಉಪದ್ವ್ಯಾಪವೇ ಎಂದೂ ಒಮ್ಮೆ ತೋರುತ್ತದೆ. ಏಕೆಂದರೆ ಎಲ್ಲ ಅಂದರೆ ಎಲ್ಲದರ ಮೇಲೆ ಅಧ್ಯಯನ ಮಾಡಹೊರಟ ಉತ್ಸಾಹದಲ್ಲಿ ಇಲ್ಲಿ ಹಳ್ಳಿಗಾಡಿನಲ್ಲಿ ರೋಗಗಳ ಕುರಿತಾಗಿ ಜನಪದರು ರೂಢಿಸಿಕೊಂಡಿರುವ ನಂಬುಗೆ, ಆಚರಣೆ, ಅದರಲ್ಲೇ ಹುಟ್ಟಿಬಂದ ಸಾಹಿತ್ಯ ಮುಂತಾದವನ್ನು ದಾಖಲಿಸಲಾಗಿದೆ. ಪ್ಲೇಗಮ್ಮ, ಮಾರಿಯಮ್ಮ, ಎಡ್ಸ್ ದೇವತೆ ಇತ್ಯಾದಿಗಳ ಕುರಿತು ಪ್ರಸ್ತಾಪ ಸಹಜವಾಗೇ ಇಲ್ಲಿ ಜಾಗ ಪಡೆದಿದೆ. ಆದರೆ ಕ್ಷಯರೋಗಿಗಳ ಸ್ಯಾನಿಟೋರಿಯಮ್ನಲ್ಲಿ ಚಿಕಿತ್ಸೆಗಾಗಿ ವರ್ಷಗಟ್ಟಲೆ ತಂಗುವ ಗ್ರಾಮೀಣರು ಬೇಸರ ಕಳೆಯಲು ತಮ್ಮ ತಮ್ಮಲ್ಲೇ ರಚಿಸಿಕೊಳ್ಳುವ ಛೇಡಿಸುವ ಪದ್ಯಗಳು, ಚಾಲ್ತಿಗೆ ತರುವ ಪದಪುಂಜಗಳನ್ನೂ ಇಲ್ಲಿ ವಿಧೇಯವಾಗಿ, `ಶಾಸ್ತ್ರೀಯವಾಗಿ ಬರೆಯಲಾಗಿದೆ. ಕಡೆಗೆ ಹತ್ತಿಕ್ಕಬೇಕಾದ ಲೈಂಗಿಕ ಪ್ರವೃತ್ತಿ ತಣಿಸಿಕೊಳ್ಳಲು ಶೌಚಾಲಯಗಳಲ್ಲಿ ರೋಗಿಗಳು ಕೆತ್ತುವ ಅಶ್ಲೀಲ ಸಾಹಿತ್ಯವನ್ನೂ ಈ ಪುಸ್ತಕದಲ್ಲಿ ವಿವರಿಸಿ ಕಾಪಿಡಲಾಗಿದೆ. ಇದೂ ಜಾನಪದ ಅಧ್ಯಯನವೇ? ಬಲ್ಲವರು ಪರಾಂಬರಿಸಬೇಕು

ಶೀರ್ಷಿಕೆ : ರೋಗ ಜಾನಪದ ಲೇಖಕರು : ಪ್ರೊ. ಡಿ. ಲಿಂಗಯ್ಯ, ಡಾ. ಚಕ್ಕೆರೆ ಶಿವಶಂಕರ್ ಪ್ರಕಾಶಕರು : ಕರ್ನಾಟಕ ಜಾನಪದ ಪರಿಷತ್ತು ಪುಟಗಳು : ಬೆಲೆ: ರೂ.

ಕೃಪೆ : ವಿಜಯ ಕರ್ನಾಟಕ

ನನ್ನ ಜನರು

ಶಾಂತನಾಯ್ಕ ಶಿರಗಾನಹಳ್ಲಿಯವರ ಈ ಕಾದಂಬರಿ ಲಂಬಾಣಿ ಜನಾಂಗದ ಕಥನ. ಗೋರ್ಮಾಟಿ ಎಂದರೆ ನನ್ನ ಜನರು ಎಂದರ್ಥವಂತೆ. ಇಲ್ಲಿಯತನಕ ಶೋಧಿಸಲ್ಪಡದೇ ಉಳಿದ ವಲಯವಾದ್ದರಿಂದ ಸಹಜವಾಗೇ ಕಾದಂಬರಿಗೆ ಒಂದು ತಾಜಾತನವಿದೆ. ಜತೆಗೆ ತಾಂಡಾಗಳ ಆಡುಭಾಷೆ, ನಿರೂಪಣಾ ಶೈಲಿ ಶಕ್ತಿಯುತವಾಗಿದೆ. ಸಾಂಸ್ಕೃತಿಕ ಸಂಕಥನವೆಂದು ಕರೆಸಿಕೊಳ್ಳುವ ಇಂತಹ ಕಾದಂಬರಿಗಳಿಗೆ ಶೋಭಿಸುವಂತೆ ಸಂಶೋಧನಾತ್ಮಕ ವಿವರ, ಒಳನೋಟಗಳ ವಿಸ್ತ್ರತ ಮುನ್ನುಡಿಯೊಂದು ಇರಬಹುದಿತ್ತು. ಆದರೆ ಮುನ್ನುಡಿಕಾರನ ಸೀಟಲ್ಲಿ ಕೂತಿರುವ ಡಾ.ಚಂದ್ರಕಿರಣ್, ಎದುರಿಗೆ ಇರದ `ಶತ್ರುವಿನ ಮೇಲೆ ಹರಿ ಹಾಯುವುದರಲ್ಲೇ ಕಾಲ ಕಳೆದುಬಿಟ್ಟು ನಿರಾಶೆ ಹುಟ್ಟಿಸುತ್ತಾರೆ. ಕೂಲ್ ಡೌನ್ ಮಿ.ಚಂದ್ರ

ಶೀರ್ಷಿಕೆ : ಗೋರ್ ಮಾಟಿ ಲೇಖಕರು : ಡಾ. ಶಾಂತನಾಯ್ಕ ಶಿರಗಾನ ಹಳ್ಳಿ ಪ್ರಕಾಶಕರು : ಜ್ಯೋತಿ ಪ್ರಕಾಶನ ಪುಟಗಳು :160 ಬೆಲೆ: ರೂ.80/-

ಕೃಪೆ : ವಿಜಯ ಕರ್ನಾಟಕ

ವಚನ ಸಂಸ್ಕೃತಿ

ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲು ಬೇಡ
ಇದೆ ನಮ್ಮ ಕೂಡಲ ಸಂಗಮನಾನೊಳಿಸುವ ಪರಿ

ವಚನ ಚಳವಳಿ ಮತ್ತು ಅದರಿಂದ ಮೂಡಿಬಂದ ವಚನ ಸಾಹಿತ್ಯ ಕನ್ನಡ ಭಾಷೆ, ಸಾಮಾಜಿಕ ಜೀವನದ ಮೇಲೆ ಬೀರಿದ ಪ್ರಭಾವವನ್ನು ಅರ್ಥೈಸಿಕೊಳ್ಳಲು ಸಹಾಯವಾಗುವ ವಿಮರ್ಶಾ ಸಂಕಲನ `ವಚನ ಸಂಸ್ಕೃತಿ‘.

ಇದರಲ್ಲಿ ಒಟ್ಟು 16 ಲೇಖನಗಳಿದ್ದು, ಪ್ರಮುಖ ಪತ್ರಿಕೆಗಳಲ್ಲಿ ಕೆಲವು ಪ್ರಕಟಗೊಂಡಿವೆ. ಮಾರುಕಟ್ಟೆ ಆಧಾರಿತ ಬಂಡವಾಳಶಾಹಿ ವ್ಯವಸ್ಥೆಯೇ ಎಲ್ಲೆಡೆ ವಿಜೃಂಭಿಸಿ ಶ್ರಮಜೀವಿಗಳ ಬದುಕು ಮತ್ತಷ್ಟು ದುರ್ಬರವಾಗುತ್ತಿರುವ ಈ 21 ನೇ ಶತಮಾನದ ಸಮಸ್ಯೆಗಳಿಗೂ ವಚನಕಾರರಲ್ಲಿ ಪರಿಹಾರ ಹುಡುಕುವ ಪ್ರಯತ್ನವನ್ನು ಇಲ್ಲಿ ಗುರುತಿಸಬಹುದು.

`12 ನೇ ಶತಮಾನದ ನಂತರ ಶರಣ ಧರ್ಮದ ತಾತ್ವಿಕ ನೆಲೆಗಳೇ ಮರೆತು ಹೋದವು. ಆಗ ಕಾಯಕವೇ ಪೂಜೆಯಾಗಿತ್ತು. ಆದರೆ 15ನೇ ಶತಮಾನದ ಹೊತ್ತಿಗೆ ಪೂಜೆಯೇ ಕಾಯಕವಾಯಿತು. ಮಠ ವ್ಯವಸ್ಥೆಯನ್ನು ವಿರೋಧಿಸಿದ್ದ ಬಸವಣ್ಣನ ಹೆಸರಲ್ಲೇ ಅನೇಕ ಮಠಗಳು ಹುಟ್ಟಿಕೊಂಡವು. ಇದೆಲ್ಲದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕುಎನ್ನುವ ಸಾಲುಗಳು ಲೇಖಕರ ಆಶಯಕ್ಕೆ ಹಿಡಿದ ಕನ್ನಡಿ ಎನ್ನಬಹುದು

ಲೇಖಕರು : ಪ್ರೊ. ಬಸವರಾಜ ಸರಬದ ಪ್ರಕಾಶಕರು : ಪಲ್ಲವಿ ಪ್ರಕಾಶನ ಪುಟಗಳು :286 ಬೆಲೆ: ರೂ.180/-

ಕೃಪೆ : ಪ್ರಜಾವಾಣಿ

ಸಪ್ನ ಕೊಳ್ಳುಗರ ಆದ್ಯತೆ

ಅನಕೃ ಶತಮಾನೋತ್ಸವ, `ಮುಖ್ಯಮಂತ್ರಿ’ ಗೆ ಅಭಿನಂದನೆ

`ಕಲಾಗಂಗೋತ್ರಿರಂಗತಂಡ ಜೂನ್ 25 ಮತ್ತು 26 ರಂದು ಎರಡು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸಮಯ ಸಂಜೆ 6 ಗಂಟೆಗೆ.

ಕೇಳುವ ಕಾದಂಬರಿ : ಜೂನ್ 25 ರಂದು ನಡೆಯುವ ಅನಕೃ ಶತಮಾನೋತ್ಸವ ಸಮಾರಂಭದಲ್ಲಿ ಅನಕೃ ಕಾದಂಬರಿ `ಸಂಧ್ಯಾರಾಗಕೇಳುವ ಕಾದಂಬರಿಯಾಗಿ, ಅಂದರೆ ಸಿ.ಡಿ. ರೂಪದಲ್ಲಿ ಬಿಡುಗಡೆಗೊಳ್ಳಲಿದೆ. ನಂತರ ಅನಕೃ ಅವರ ಚೊಚ್ಚಲ ನಾಟಕ `ಮದುವೆಯೋ ಮನೆಹಾಳೋನಾಟಕದ ಪ್ರದರ್ಶನವಿದೆ.

`ಮುಖ್ಯಮಂತ್ರಿಗೆ ಅಭಿನಂದನೆ: ಜೂನ್ 26 ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹೊಸ ಅಧ್ಯಕ್ಷ ಹಾಗೂ ಶಾಸಕ ಮುಖ್ಯಮಂತ್ರಿ ಚಂದ್ರು ಅವರಿಗೆ ಅಭಿನಂದನೆ. ಬಳಿಕ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಬದುಕು ಮತ್ತು ಕಾವ್ಯಗಳನ್ನಾಧರಿಸಿದ `ಮೈಸೂರು ಮಲ್ಲಿಗೆನಾಟಕ ಪ್ರದರ್ಶನಗೊಳ್ಳಲಿದೆ.