ಬೆಳ್ಳಿ ತೆರೆ ಬೆಳಗಿದವರು

ಚಿತ್ರರಂಗದ ಆಕರ ಗ್ರಂಥ

ಕನ್ನಡ ಚಿತ್ರರಂಗಕ್ಕಾಗಿ ದುಡಿದವರ ಕುರಿತ ಮಾಹಿತಿಗಳು ಈ ಪುಸ್ತಕದಲ್ಲಿದೆ. ತೆರೆಯ ಮೇಲೆ ಹಾಗೂ ತೆರೆಯ ಹಿಂದೆ ದುಡಿದ ಕಲಾವಿದರು, ತಂತ್ರಜ್ಞರ ಪರಿಚಯವನ್ನು ಸಂಕ್ಷಿಪ್ತವಾಗಿ ಈ ಕೃತಿ ನೀಡುತ್ತದೆ.

`ಯಾವುದೇ ಉತ್ಪ್ರೇಕ್ಷೆ ಇಲ್ಲದೆ, ಕೇವಲ ಅಂಕಿ-ಅಂಶಗಳ ಆಧಾರದ ಮೇಲೆ ವಿವರ ಕಟ್ಟುತ್ತಾ ಹೋಗುವ ಈ ಲೇಖನಗಳನ್ನು ಒಂದು ಒಳ್ಳೆಯ ಆಕರ ಸಾಮಾಗ್ರಿಯಾಗಿ ನೋಡಬಹುದು. ಲೇಖಕನ ವೈಯಕ್ತಿಕ ಅನಿಸಿಕೆಗಳನ್ನು ಇಲ್ಲಿ ಸೇರಿಸಿಲ್ಲವಾದ್ದರಿಂದ ವಿಷಯದ ಮೇಲ್ಮೈ ದಾಟಿ ಒಳನುಗ್ಗಿ ನೋಡುವವರಿಗೆ ಸ್ವಲ್ಪ ನಿರಾಶೆಯಾಗಬಹುದು. ಆದರೆ ಒಂದು ವಿಷಯ ಸೂಚಿ ಗ್ರಂಥ ಏನನ್ನು ಸಾಧಿಸಲು ಹೊರಟಿರುತ್ತದೆ ಅದು ಇಲ್ಲಿ ಪೂರ್ಣಗೊಂಡಿದೆ. ಎಂದು ಮುನ್ನುಡಿಯಲ್ಲಿ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ

ಲೇಖಕರು : ಅ. ನಾ. ಪ್ರಹ್ಲಾದ್ ರಾವ್

ಪ್ರಕಾಶಕರು : ಸಾಹಿತ್ಯ ಪ್ರಕಾಶನ

ಪುಟಗಳು : 250

ಬೆಲೆ: ರೂ.100.00

ಕೃಪೆ : ಸುಧಾ

ಅಹ್ಕ್ಯುವಿನ ಸತ್ಯ ಕಥೆ

ಕನ್ನಡ ಕತೆಗಾರರಿಗೆ ಪರಿಚಿತವಾದ ವಿಶ್ವಸಾಹಿತ್ಯ ಕೋಷ್ಟಕದಲ್ಲಿ (ಕಮೂ, ಕಾಫ್ಕ, ಸಾರ್ತ, ಟಾಲ್ಸ್ಟಾಯ್, ದೊಸ್ತೋವ್ಸ್ಕಿ ಎಂದು ಶುರುವಾಗುವ ) ಚೀನಾ ಸಾಹಿತಿ ಲೂ ಷನ್ ಅವರದೂ ಒಂದು (ಇತ್ತೀಚಿನ) ಹೆಸರು.

ದಶಕಗಳ ಹಿಂದೆ ಮಾಸ ಪತ್ರಿಕೆಯೊಂದರಲ್ಲಿ ಅವರ ನೀಳ್ಗತೆ `ಒಬ್ಬ ಹುಚ್ಚನ ದಿನಚರಿಪ್ರಕಟಗೊಂಡಾಗ ಕನ್ನಡ ಸಾಹಿತಿ/ಸಹೃದಯರಲ್ಲಿ ಒಂದು ಸಂಚಲನವೇ ಸೃಷ್ಟಿಯಾಗಿತ್ತು. ಅದರದೇ ಒಂದು ಕಿರು ಅಲೆ ಈಗ ಮತ್ತೆ ಎದ್ದಿದೆ. ಗೋಪಾಲಕೃಷ್ಣ ಪೈ ಇತ್ತೀಚಿಗಷ್ಟೇ ಕೆಲ ಚೀನಾ ದೇಶದ ಕಲೆಗಳನ್ನು ಅನುವಾದಿಸಿ ಪ್ರಕಟಿಸಿದ್ದರು. ಇದೀಗ ಜಗದೀಶ ಮಂಗಳೂರು ಮಠ, ಲೂ ಷನ್ ಅವರ ಶ್ರೇಷ್ಟ ಕೃತಿ ಎಂದು ಗುರುತಿಸಲ್ಪಟ್ಟಿರುವ ಕಿರು ಕಾದಂಬರಿ `ಅಹ್ಕ್ಯುವಿನ ಸತ್ಯ ಕಥೆಯನ್ನು ಕನ್ನಡಕ್ಕೆ ತಂದಿದ್ದಾರೆ.

 1911 ರ ಸುಮಾರಿಗೆ ಚೀನಾ ದೇಶವನ್ನು ಪ್ರವೇಶಿಸಿದ ಪ್ರಜಾಪ್ರಭುತ್ವ ಕ್ರಾಂತಿ, ಜನರನ್ನು ಹಾದಿ ತಪ್ಪಿಸಿ ಆಡಳಿತ ವರ್ಗವನ್ನು ಸಮರ್ಥಿಸಿದಾಗ ನಿರ್ಬಲರಾದರೂ ಜನ ಸಾಮಾನ್ಯರು ಅದನ್ನು ತಿರಸ್ಕರಿಸಿದ್ದೇ ಕಥಾ ಹಂದರ. ಚೀನಾದ ಷಡ್ಯಂತ್ರ, ವಿದ್ರೋಹಗಳು ಅದರ ಮಡಿಲಲ್ಲೇ ಇದೆ, ಇತಿಹಾಸ ಮರುಕಳಿಸುತ್ತಿದೆ ಎಂದೆನಿಸುವುದಿಲ್ಲವೇ!

ಲೇಖಕರು : ಜಗದೀಶ ಮಂಗಳೂರುಮಠ

ಪ್ರಕಾಶಕರು : ಸಾಹಿತ್ಯ ಪ್ರಕಾಶನ

ಪುಟಗಳು : 88

ಬೆಲೆ: ರೂ.50.00

ಕೃಪೆ : ವಿಜಯ ಕರ್ನಾಟಕ