ಮತಾಂಧತೆ ಮಾನವೀಯತೆ

`ಮತಾಂಧತೆ ಮಾನವೀಯತೆಕೃತಿಯಲ್ಲಿ ಸ್ವಾಮೀಜಿಯವರು ಕೇವಲ ಮತಾಂಧತೆಯ ವಿಷಯಕ್ಕೆ ಮಾತ್ರ ಸೀಮಿತವಾಗದೆ ಮಾನವ ಸಮಾಜದಲ್ಲಿ ಧರ್ಮದ ಉಗಮ, ಪಾತ್ರ, ಅದರ ಸಂಕುಚಿತತೆ, ಇಂದಿನ ಸನ್ನಿವೇಶದಲ್ಲಿ ಧರ್ಮದ ಪುನರ್ವ್ಯಾಖ್ಯಾನ, ಪುರೋಹಿತಶಾಹಿಯ ಧೂರ್ತತೆ, ಮೂಢನಂಬಿಕೆ, ಮತಾಂಧತೆಗಳಿಗೂ ಧರ್ಮಕ್ಕೂ ಇರುವ ಸಂಬಂಧ ಇವುಗಳನ್ನು ಸ್ಪಷ್ಟ ಮಾತುಗಳಲ್ಲಿ ಬಿಚ್ಚಿಟ್ಟಿದ್ದಾರೆ. ವಣರ್ಾಶ್ರಮ, ಜಾತಿವ್ಯವಸ್ಥೆ, ಮಹಿಳೆಯರ ಅಸಮಾನತೆಗಳ ವಿರುದ್ಧ ಸಿಡಿದೆದ್ದಿದ್ದಾರೆ. ಮಾನವೀಯತೆ ಮಾತ್ರ ಸಮಾಜದ ಪ್ರಣಾಳಿಕೆಯಾಗಬೇಕು ಎಂದು ಸಾರಿದ್ದಾರೆ. ತಮ್ಮ ಮಠದ ಹೆಸರನ್ನೇ ಮಾನವಧರ್ಮಪೀಠ ಎಂದು ಹೆಸರಿಸುವ ಮಾನವನಿಷ್ಠೆ ತೋರಿದವರಿಂದ ಮಾತ್ರ ಬರಬಹುದಾದ ವಿಚಾರಗಳಿವು. ಇವು ಕೇವಲ ಹಿಂದೂ ಮತಾಂಧತೆಯನ್ನು ಮಾತ್ರವಲ್ಲದೆ ಎಲ್ಲಾ ಧರ್ಮಗಳ ಕುರುಡುತನವನ್ನು ನಿಚ್ಚಳವಾಗಿ ಕಾಣಲು ಒಡ್ಡಿದ ವಿಚಾರದ ಬೆಳಕಾಗಿದೆ

ಅನುವಾದ : ವೀರಭದ್ರ ಚನ್ನಮಲ್ಲ ಸ್ವಾಮೀಜಿ ಪ್ರಕಾಶಕರು : ಮಾನವ ಧರ್ಮ ಪ್ರಕಾಶನ ಪುಟಗಳು :45 ಬೆಲೆ: ರೂ.25/-

ಸೂಫೀ ಕಥಾಲೋಕ

ಸೂಫಿ ಅನುಭಾವದ ಕಥೆಗಳ ಅದ್ಭುತ ಲೋಕ

ನಮ್ಮ ಫಿಲಂಗಳ ಜನಪ್ರಿಯ ಕವ್ವಾಲಿಗಳು, ಎಲ್ಲೆಲ್ಲೂ ಕೇಳಿರುವ ಝೂಲೇ ಝೂಲೇ ಲಾಲ್..ದಮಾ ದಮ್ ಮಸ್ತ್ ಕಲಂದರ್‘, ಜುನೂನ್ ರಾಕ್ ಬ್ಯಾಂಡ್, ಕರ್ನಾಟಕದಲ್ಲಿ ಮನೆಮಾತಾಗಿರುವ ಗುಲ್ಬರ್ಗದ ಬಂದೇ ನವಾಝರ ಉರುಸ್, ಶಿಶುನಾಳ ಶರೀಫ, ಬಾಬಾ ಬುಡನ್ ಗಿರಿ – ಇವುಗಳಲ್ಲಿ ಏನಾದರೂ ಸಾಮಾನ್ಯ ಅಂಶ ಇದೆ ಎಂದರೆ ನೀವು ನಕ್ಕು ಬಿಡಬಹುದು. ಇವೆಲ್ಲಾ ಬೇರೆ ಬೇರೆ ರೂಪಗಳಲ್ಲಿ ಇಂದಿಗೂ ಜೀವಂತವಾಗಿರುವ ಸೂಪಿಪಂಥದ ಪ್ರತೀಕಗಳು. ಕವ್ವಾಲಿಗಳು ಮೂಲತ: ಸೂಫಿ ದರ್ಶನಗಳ ಸಮೂಹ ಗಾಯನದ ರೂಪವಾಗಿದ್ದು ನಮ್ಮ ಫಿಲಂಗಳಲ್ಲಿ ರೂಪಾಂತರ ಹೊಂದಿದವು. ‘..ಮಸ್ತ್ ಕಲಂದರ್ಪ್ರಸಿಧ್ಧ ಸೂಫಿ ಹಾಡು. ಬಂದೇ ನವಾಝ್, ಮತ್ತು ಬಾಬಾ ಬುಡನ್ ಕರ್ನಾಟಕದ ಜನಪ್ರಿಯ ಸೂಫಿ ಸಂತರು. ಜುನೂನ್ ಸೂಫಿ ಮತ್ತು ರಾಕ್ ಸಂಗೀತದ ಪರಂಪರೆಗಳ ಸೃಜನಾತ್ಮಕ ಸಂಕರ ಮಾಡಿ ಜನಪ್ರಿಯವಾದ ಪಾಕಿಸ್ತಾನದ ಬ್ಯಾಂಡ್.

ಸೂಫಿಪಂಥ ಜಗತ್ತಿನಲ್ಲೇ ವಿಶಿಷ್ಟವಾದದ್ದು. ಇದು ಒಂದು ದಾರ್ಶನಿಕ ಪಂಥ. ಜನಪದ ಸಂಸ್ಕೃತಿ. ಜೀವನ ವಿಧಾನ. ಸಾಹಿತ್ಯ-ಸಂಗೀತ ಪರಂಪರೆ ಎಲ್ಲವೂ. ಇರಾಕ್ ನಿಂದ ಇಂಡೋನೇಶ್ಯಾದವರೆಗೆ ಹರಡಿ, ಸಾವಿರ ವರ್ಷಗಳಿಗಿಂತಲೂ ಹೆಚ್ಚು ಜೀವಂತವಾಗಿ ಇರುವಂತಹುದು. ಇಸ್ಲಾಮ್ ನ ಒಂದು ಕವಲಾಗಿ ಹುಟ್ಟಿದ್ದು ಎನ್ನಲಾಗಿದ್ದರೂ, ಏಶ್ಯಾದ ಹಲವು ಧಾರ್ಮಿಕದಾರ್ಶನಿಕ ಪಂಥ, ಸಂಸ್ಕೃತಿಗಳ ಜತೆ ಕೊಡು-ಕೊಳ್ಳು ಸಂಬಂಧದಿಂದ ಸಂಕರಗಳಿಂದ ಸಮೃಧ್ಧವಾದದ್ದು. ಭಾರತ ಮತ್ತು ಕರ್ನಾಟಕದಲ್ಲಿ ಸೂಫಿ ಹಾಡುಗಳು ಮತ್ತು ಸಂಗೀತ ಜನಸಾಮಾನ್ಯರ ಜೀವನದ ಬಾಗ. ಸೂಫಿ ಕಥೆಗಳು ಆ ಪಂಥದ ಅನುಭಾವ ಎರಕ ಹೊಯ್ದವು. ಕೆಲವು ಪ್ರಸಿಧ್ಧ ಸೂಫಿ ಸಂತರು ಹೇಳಿದವು. ಕೆಲವು ಜನಪದ ಕಥೆಗಳಂತೆ ಸಮೂಹ ಸೃಷ್ಟಿ. ಕಾಲ, ದೇಶ ಇದ್ದರೂ ಅದನ್ನೂ ಮೀರಿ ಸಾರ್ವಕಾಲಿಕತೆ, ಸಾರ್ವತ್ರಿಕತೆ ಪಡೆದವು.

ಇಂತಹ ಸೂಫಿ ಕಥೆಗಳ ಸಂಗ್ರಹವನ್ನು ಪ್ರೊ.ಬಿ.ಗಂಗಾಧರಮೂರ್ತಿಯವರು ಅನುವಾದಿಸಿ ತಂದಿದ್ದಾರೆ. ಹಿಂದೆ ಹಲವು ಅರಬಿ ಕಥೆಗಳ ಸಂಕಲನ ಬಂದಿದ್ದರೂ ಸೂಫಿ ಕಥೆಗಳ ಪ್ರಾತಿನಿಧಿಕ ಸಂಕಲನ ಬಹುಶಃ ಇದೇ ಮೊದಲು. ಇದರಲ್ಲಿ ನೂರು ದೊಡ್ಡ ಸಣ್ಣ (1-3 ಪುಟಗಳ ವರೆಗೆ) ಕಥೆಗಳು ಇವೆ. ಇವಲ್ಲಿ ಹೆಚ್ಚಿನವು ಇದ್ರಿಸ್ ಶಾ ಅವರ ಇಂಗ್ಲಿಷ್ ಪುಸ್ತಕದಿಂದ ಅನುವಾದ ಮಾಡಿದವು. ಇನ್ನೂಕೆಲವುಇಂಟರ್‌ನೆಟ್ ಸೇರಿದಂತೆ ಇತರ ಮೂಲಗಳಿಂದ ಆಯ್ದವು. ಈ ಕಥೆಗಳು ಕೊಡುವ ಅನುಭವ ಮತ್ತು ಗಂಗಾಧರಮೂರ್ತಿಯವರ ಅನುವಾದದ ಕುರಿತು, ಪುಸ್ತಕಕ್ಕೆ ಅರ್ಥಪೂರ್ಣ ಮುನ್ನುಡಿಯಲ್ಲಿ ಡಾ. ರಹಮತ್ ತರೀಕೆರೆ ಅವರ ಈ ಮಾತುಗಳು ಅತ್ಯಂತ ಸೂಕ್ತವಾಗಿವೆ.

ಇಲ್ಲಿನ ಕಥೆಗಳಲ್ಲಿರುವ ಜಾಣ್ಮೆ, ಹಾಸ್ಯ, ಬೆಡಗು, ನಿಗೂಢತೆ, ಚುರುಕುತನಗಳಿಗೆ ಮನೋರಂಜನೆಯ ಉದ್ದೇಶವಿಲ್ಲ. ದೊಡ್ಡ ದಾರ್ಶನಿಕ ಸತ್ಯಗಳನ್ನು ಧಾರಣೆ ಮಾಡುವ ಉದ್ದೇಶವಿದೆ. ಸೂಫಿ ಅನುಬಾವದ ಜಗತ್ತಿನಲ್ಲಿ ಸೂಫಿ ಕಥೆಗಳಿಗೆ ಅವುಗಳದ್ದೇ ಆದ ಒಂದು ಅನುಭಾವಿಕ ಅರ್ಥವಿದೆ. ಅವು ಒಂದರ್ಥದಲ್ಲಿ ಗುಪ್ತಜ್ಞಾನದ ರೂಪಕಗಳು – ನಮ್ಮ ಬೆಡಗಿನ ವಚನಗಳಂತೆ. ಇಲ್ಲಿನ ಜಲಾಶಯಕಥೆಯು ಅಲ್ಲಮನ ಬೆಡಗಿನ ವಚನದಂತಿದೆ. ..ಆದರೆ ಎಲ್ಲಾ ಕಥೆಗಳ ಮೂಲಾರ್ಥ ಯಾವುದು ಎಂದು ಖಚಿತವಾಗಿ ಹೇಳಲಾಗದು..ಹೀಗಾಗಿ ಇವನ್ನು ಮೂಲಾರ್ಥದ ಶೋಧಕ್ಕಾಗಿಯೋ, ಅನ್ಯ ಸಂಸ್ಕೃತಿಯೆಂಬ ಕುತೂಹಲದಲ್ಲೋ ಓದಬೇಕಿಲ್ಲ. ಈ ಯಾವ ಅನುಭಾವಿಕ ಭಾರ ಮತ್ತು ಸಾಂಸ್ಕೃತಿಕ ಪರಕೀಯತೆಯಿಲ್ಲದೆ ಕೂಡಾ ಕೇವಲ ಖುಷಿ ಕೊಡುವ ಸ್ತರವನ್ನೂ ಇವು ಹೊಂದಿವೆ…ಹೀಗೆ ಏಕಕಾಲಕ್ಕೆ ಬಹುಸ್ತರಗಳನ್ನು ಸಾಧಿಸುವುದು ಜ್ಞಾನ, ಭಾಷೆ, ಸಾಹಿತ್ಯಕ್ಕೆ ಸೂಫಿ ಅನುಭಾವವು ಕೊಟ್ಟಿರುವ ಕೊಡುಗೆ ದೊಡ್ಡದು…ಮೂರ್ತಿಯವರು ಎಲ್ಲೂ ತಡೆಯಿರದಂತೆ ಓದುವ ರೀತಿಯಲ್ಲಿ ಅವುಗಳ ಬಹುಸ್ತರೀಯತೆಯ ಸೂಕ್ಷ್ಮವು ಹಾಳಾಗದಂತೆ ಸಹಜವಾಗಿ ಅನುವಾದಿಸಿದ್ದಾರೆ. ಇದೊಂದು ಆಪ್ತವಾದ ಸೃಜನಶೀಲ ಅನುವಾದ..

ಈ ಪುಸ್ತಕದ ಪ್ರಕಟಣೆ ಅತ್ಯಂತ ಪ್ರಸ್ತುತ ಮತ್ತು ಸಕಾಲಿಕ. ನಮ್ಮ ಸಮಾಜದ ಎಲ್ಲಾ ವಿದ್ಯಮಾನಗಳನ್ನು ಹಿಂದೂ-ಮುಸ್ಲಿಮ್ ಎಂಬ ಹಳದಿ ಕಣ್ಣಿಂದ ನೋಡಿ-ತೋರಿಸಿ, ಅದರ ಬಹುತ್ವ ಮತ್ತು ಸೆಕ್ಯುಲರ್ ಮೂಲ ಸತ್ವವನ್ನು ನಾಶಮಾಡುವ ಪ್ರವೃತ್ತಿ ಬಲವಾಗುತ್ತಿದೆ. ಸೂಫಿ ಕಥೆಗಳ ಅಧ್ಭುತ ಲೋಕವನ್ನು ಪರಿಚಯಿಸುವ-ನೆನಪಿಸುವ ಮೂಲಕ, ಈ ಮೂಲ ಸತ್ವ ಉಳಿಸಿಕೊಳ್ಳುವ ಪ್ರಯತಕ್ಕೆ ಕೈಜೋಡಿಸಿದಂತಾಗಿದೆ.

ವಸಂತ

ಅನುವಾದ : ಪ್ರೊ. ಬಿ. ಗಂಗಾಧರಮೂರ್ತಿ ಪ್ರಕಾಶಕರು : ಪುಟಗಳು : ಬೆಲೆ: ರೂ.