ಪ್ಲೇಗಮ್ಮ, ಮಾರಿಯಮ್ಮ, ಎಡ್ಸ್ ದೇವತೆ ಇತ್ಯಾದಿ

ವಿಚಿತ್ರ ಶೀರ್ಷಿಕೆಯ ಈ ಪುಸ್ತಕ ತುಸು ವಿಲಕ್ಷಣವಾಗಿದೆ. ಸುಪರ್ ಸ್ಪೆಷಲೈಸೇಷನ್ ನ ಉಪದ್ವ್ಯಾಪವೇ ಎಂದೂ ಒಮ್ಮೆ ತೋರುತ್ತದೆ. ಏಕೆಂದರೆ ಎಲ್ಲ ಅಂದರೆ ಎಲ್ಲದರ ಮೇಲೆ ಅಧ್ಯಯನ ಮಾಡಹೊರಟ ಉತ್ಸಾಹದಲ್ಲಿ ಇಲ್ಲಿ ಹಳ್ಳಿಗಾಡಿನಲ್ಲಿ ರೋಗಗಳ ಕುರಿತಾಗಿ ಜನಪದರು ರೂಢಿಸಿಕೊಂಡಿರುವ ನಂಬುಗೆ, ಆಚರಣೆ, ಅದರಲ್ಲೇ ಹುಟ್ಟಿಬಂದ ಸಾಹಿತ್ಯ ಮುಂತಾದವನ್ನು ದಾಖಲಿಸಲಾಗಿದೆ. ಪ್ಲೇಗಮ್ಮ, ಮಾರಿಯಮ್ಮ, ಎಡ್ಸ್ ದೇವತೆ ಇತ್ಯಾದಿಗಳ ಕುರಿತು ಪ್ರಸ್ತಾಪ ಸಹಜವಾಗೇ ಇಲ್ಲಿ ಜಾಗ ಪಡೆದಿದೆ. ಆದರೆ ಕ್ಷಯರೋಗಿಗಳ ಸ್ಯಾನಿಟೋರಿಯಮ್ನಲ್ಲಿ ಚಿಕಿತ್ಸೆಗಾಗಿ ವರ್ಷಗಟ್ಟಲೆ ತಂಗುವ ಗ್ರಾಮೀಣರು ಬೇಸರ ಕಳೆಯಲು ತಮ್ಮ ತಮ್ಮಲ್ಲೇ ರಚಿಸಿಕೊಳ್ಳುವ ಛೇಡಿಸುವ ಪದ್ಯಗಳು, ಚಾಲ್ತಿಗೆ ತರುವ ಪದಪುಂಜಗಳನ್ನೂ ಇಲ್ಲಿ ವಿಧೇಯವಾಗಿ, `ಶಾಸ್ತ್ರೀಯವಾಗಿ ಬರೆಯಲಾಗಿದೆ. ಕಡೆಗೆ ಹತ್ತಿಕ್ಕಬೇಕಾದ ಲೈಂಗಿಕ ಪ್ರವೃತ್ತಿ ತಣಿಸಿಕೊಳ್ಳಲು ಶೌಚಾಲಯಗಳಲ್ಲಿ ರೋಗಿಗಳು ಕೆತ್ತುವ ಅಶ್ಲೀಲ ಸಾಹಿತ್ಯವನ್ನೂ ಈ ಪುಸ್ತಕದಲ್ಲಿ ವಿವರಿಸಿ ಕಾಪಿಡಲಾಗಿದೆ. ಇದೂ ಜಾನಪದ ಅಧ್ಯಯನವೇ? ಬಲ್ಲವರು ಪರಾಂಬರಿಸಬೇಕು

ಶೀರ್ಷಿಕೆ : ರೋಗ ಜಾನಪದ ಲೇಖಕರು : ಪ್ರೊ. ಡಿ. ಲಿಂಗಯ್ಯ, ಡಾ. ಚಕ್ಕೆರೆ ಶಿವಶಂಕರ್ ಪ್ರಕಾಶಕರು : ಕರ್ನಾಟಕ ಜಾನಪದ ಪರಿಷತ್ತು ಪುಟಗಳು : ಬೆಲೆ: ರೂ.

ಕೃಪೆ : ವಿಜಯ ಕರ್ನಾಟಕ

ನನ್ನ ಜನರು

ಶಾಂತನಾಯ್ಕ ಶಿರಗಾನಹಳ್ಲಿಯವರ ಈ ಕಾದಂಬರಿ ಲಂಬಾಣಿ ಜನಾಂಗದ ಕಥನ. ಗೋರ್ಮಾಟಿ ಎಂದರೆ ನನ್ನ ಜನರು ಎಂದರ್ಥವಂತೆ. ಇಲ್ಲಿಯತನಕ ಶೋಧಿಸಲ್ಪಡದೇ ಉಳಿದ ವಲಯವಾದ್ದರಿಂದ ಸಹಜವಾಗೇ ಕಾದಂಬರಿಗೆ ಒಂದು ತಾಜಾತನವಿದೆ. ಜತೆಗೆ ತಾಂಡಾಗಳ ಆಡುಭಾಷೆ, ನಿರೂಪಣಾ ಶೈಲಿ ಶಕ್ತಿಯುತವಾಗಿದೆ. ಸಾಂಸ್ಕೃತಿಕ ಸಂಕಥನವೆಂದು ಕರೆಸಿಕೊಳ್ಳುವ ಇಂತಹ ಕಾದಂಬರಿಗಳಿಗೆ ಶೋಭಿಸುವಂತೆ ಸಂಶೋಧನಾತ್ಮಕ ವಿವರ, ಒಳನೋಟಗಳ ವಿಸ್ತ್ರತ ಮುನ್ನುಡಿಯೊಂದು ಇರಬಹುದಿತ್ತು. ಆದರೆ ಮುನ್ನುಡಿಕಾರನ ಸೀಟಲ್ಲಿ ಕೂತಿರುವ ಡಾ.ಚಂದ್ರಕಿರಣ್, ಎದುರಿಗೆ ಇರದ `ಶತ್ರುವಿನ ಮೇಲೆ ಹರಿ ಹಾಯುವುದರಲ್ಲೇ ಕಾಲ ಕಳೆದುಬಿಟ್ಟು ನಿರಾಶೆ ಹುಟ್ಟಿಸುತ್ತಾರೆ. ಕೂಲ್ ಡೌನ್ ಮಿ.ಚಂದ್ರ

ಶೀರ್ಷಿಕೆ : ಗೋರ್ ಮಾಟಿ ಲೇಖಕರು : ಡಾ. ಶಾಂತನಾಯ್ಕ ಶಿರಗಾನ ಹಳ್ಳಿ ಪ್ರಕಾಶಕರು : ಜ್ಯೋತಿ ಪ್ರಕಾಶನ ಪುಟಗಳು :160 ಬೆಲೆ: ರೂ.80/-

ಕೃಪೆ : ವಿಜಯ ಕರ್ನಾಟಕ