ಮಾರ್ಕ್ವೇಜ್ ಬದುಕಿರುವುದೇ ಕತೆ ಹೇಳಲು

ಐದಾರು ವರ್ಷಗಳ ಕೆಳಗೆ ಲ್ಯಾಟಿನ್ ಅಮೇರಿಕಾದ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ ಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಆಗ ಮಾರ್ಕ್ವೆಜ ನ ಮನಸ್ಥತಿ ಹೇಗಿತ್ತೋ ಗೊತ್ತಿಲ್ಲ. ಆದರೆ ಸಾವನ್ನು ಮುಂದೂಡಲೋ ಅಥವಾ ಸಾವಿನ ಆತಂಕದಿಂದ ಪಾರಾಗಲೋ ಆತ ಆತ್ಮಚರಿತ್ರೆ ಬರೆಯಲಾರಂಭಿಸಿದ. ಎರಡು ವರ್ಷಗಳ ಕೆಳಗೆ ಆ ಆತ್ಮಚರಿತ್ರೆ “ಲಿವಿಂಗ್ ಟು ಟೆಲ್ ದಿ ಟೇಲ್” ಪ್ರಕಟವಾಯಿತು. ಬೃಹತ್ ಸಂಪುಟವಾದ ಈ ಆತ್ಮಚರಿತ್ರೆ ಲೇಖಕನ ಬದುಕಿನ ತಾರುಣ್ಯದ ಘಟ್ಟದಲ್ಲಿ ನಿಂತಿದೆ. ಇದಾದ ನಂತರ ಆತ `ಇನ್ನೂ ಎರಡು ಸಂಪುಟ ಬರೆಯುತ್ತೇನೆಎಂದಿದ್ದ.

ಇದು `ಅರೇಬಿಯನ್ ನೈಟ್ಸ್ನ್ನು ನೆನಪಿಸುವುದಿಲ್ಲವೇ. ಜೀವ ಉಳಿಸಿಕೊಳ್ಳಲು ಪ್ರತಿರಾತ್ರಿ ಕಥೆ ಹೇಳುವ ಶಹರ್ಜಾದ ಕೊನೆಗೂ ಗುರಿ ಸಾಧಿಸಿದ ಕತೆ. ಈ ಕತೆಗಳ ಮೋಹಕ ಲೋಕ ಹಾಗೂ ಉದ್ದೇಶವನ್ನು ಕುರಿತು ಯೋಚಿಸುತ್ತಿದ್ದರೆ, ಹಳ್ಳಿಯೂರುಗಳಲ್ಲಿ ವಿಘ್ನ ನಿವಾರಣೆಗೆ ಕತೆ ಓದಿಸುವ ಆಚರಣೆ ನೆನಪಾಗುತ್ತದೆ. ಸಾವಿರಾರು ವರ್ಷಗಳಿಂದಲೂ ಕತೆ ಎನ್ನುವುದು ಅಪಾಯಗಳನ್ನು ದಾಟಬಲ್ಲ, ಸಾವನ್ನು ಮುಂದೂಡಬಲ್ಲ ಸಾಧನವೆಂಬಂತೆ ಬಳಕೆಯಾಗುತ್ತಾ ಬಂದಿರುವ ರೀತಿ ಕಂಡು ಅಚ್ಚರಿಯಾಗುತ್ತದೆ.

ಎಂಬತ್ತೊಂದು ದಾಟಿರುವ ಮಾರ್ಕ್ವೆಜ ತನ್ನ ಹದಿನೇಳನೆಯ ವಯಸ್ಸಿನಿಂದ ಇಲ್ಲಿಯವರೆಗೆ, ಅಂದರೆ ಸುಮಾರು ಅರವತ್ತನಾಲ್ಕು ವರ್ಷಕಾಲ ದಿನನಿತ್ಯ ಹೊಸತನ್ನು ಬರೆಯಬಲ್ಲ ಲೇಖಕನಾಗಿ, ಅದರಲ್ಲೂ ಜೀವಂತವಾಗಿ ಬರೆಯುವ ಲೇಖಕನಾಗಿ ಉಳಿದಿರುವುದು ಅದ್ಭುತವಾಗಿದೆ. ತನ್ನ ಸಮಾಜದ ಎಲ್ಲ ಟೆನ್ಷನ್ಗಳನ್ನೂ ಕಣ್ಣು ಬಿಟ್ಟು ನೋಡುವ, ಅನುಭವಿಸುವ ಲೇಖಕ ಆರೇಳು ದಶಕಗಳ ಕಾಲ ಅತ್ಯಂತ ಮಹತ್ವದ್ದನ್ನೇ ಸೃಷ್ಟಿಸಬಲ್ಲವನಾಗಿ ಉಳಿಯುವುದು, ಹೆಚ್ಚು ಕಡಿಮೆ ಒಂದು ಶತಮಾನದ ಚರಿತ್ರೆಗೆ ಸಾಕ್ಷಿಯಾಗಿ ಅದನ್ನು ಆಳವಾಗಿ ಗ್ರಹಿಸಿ ಬರೆಯಬಲ್ಲವನಾಗಿರುವುದು, ಅದರ ಜೊತೆಗೆ ನಿರಂತರ ಸೃಜನಶೀಲನಾಗಿ ಉಳಿದಿರುವುದು ನಿಜಕ್ಕೂ `ಭುವನ ಭಾಗ್ಯಅಲ್ಲವೇ?

ಮಾರ್ಕ್ವೆಜ`ಲಿವಿಂಗ್ ಟು ಟೆಲ್ ದಿ ಟೇಲ್ಎಂಬ ಜೀವನದ ಗುರಿ ನಮ್ಮ ನಮ್ಮ ಜೀವನದ ಉದ್ದೇಶಗಳನ್ನು ನಾವು ಆಗ್ಗಾಗ್ಗೆಯಾದರೂ ಸ್ಪಷ್ಟಪಡಿಸಿಕೊಳ್ಳಬೇಕೆಂದು ಪಿಸು ನುಡಿಯುತ್ತದೆ.

ಶೀರ್ಷಿಕೆ : ಲಿವಿಂಗ್ ಟು ಟೆಲ್ ದಿ ಟೇಲ್ ಲೇಖಕರು :ಗೆಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಪ್ರಕಾಶಕರು : ಪುಟಗಳು ಬೆಲೆ: ರೂ.

ಕೃಪೆ : ಕನ್ನಡ ಟೈಮ್ಸ್

ಕೇಳುವ ಕಾದಂಬರಿ ಬಿಡುಗಡೆ ಸಮಾರಂಭ

ಅನಕೃ ಶತಮಾನೋತ್ಸವ ಸಂದರ್ಭದಲ್ಲಿ ಅನಕೃ ರವರ ಸಂಧ್ಯಾರಾಗ ಓದುವ ಕಾದಂಬರಿಯನ್ನು, ಕೇಳುವ ಕಾದಂಬರಿಯಾಗಿ ಪರಿವರ್ತಿಸಿ ಅನಕೃ ಪ್ರತಿಷ್ಟಾನದವರು ಕನ್ನಡದ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಕಾಣಿಕೆಯನ್ನು ಪ್ರಥಮವಾಗಿ ನೀಡಿದ್ದಾರೆ.

ಇದೇ ಜೂನ್ 25 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ಬಿ.ವಿ.ರಾಜಾರಾಂ ಅವರು ಸರಳವಾಗಿ ಸುಂದರವಾಗಿ ನಡೆಸಿಕೊಟ್ಟ ಬಿಡುಗಡೆ ಸಮಾರಂಭದಲ್ಲಿ 95 ವರ್ಷ ವಯಸ್ಸಿನ ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಮತ್ತು ಅನಕೃ ಪ್ರತಿಷ್ಠಾನದ ಅಧ್ಯಕ್ಷ ಹಾರ್ನಳ್ಳಿ ರಾಮಸ್ವಾಮಿಯವರು ಮುಖ್ಯ ಅತಿಥಿಗಳಾಗಿದ್ದರು. ಸಿಡಿ ಬಿಡುಗಡೆಯನ್ನು ಶ್ರೀ ವಿ. ಲಕ್ಷ್ಮಿನಾರಾಯಣ್, ವ್ಯವಸ್ಥಾಪಕ ನಿರ್ದೇಶಕರು, ನಿರ್ಮಾಣ್ ಶೆಲ್ಟರ್ಸ್, ಬೆಂಗಳೂರು ಇವರು ನಡೆಸಿಕೊಟ್ಟರು.

ಸುಂದರ ಸುಶ್ರಾವ್ಯ ಸರಸ್ವತಿ ಪ್ರಾರ್ಥನೆಯಿಂದ ಪ್ರಾರಂಭವಾದ ಕಾರ್ಯಕ್ರಮ ಆಡಂಬರ ಇಲ್ಲದ ಸರಳ ನಿರೂಪಣೆಯಿಂದಾಗಿ ಸಂತೋಷ ಕೊಟ್ಟಿತು. ಈ ಹೊಸ ಪ್ರಯತ್ನದಲ್ಲಿ ಭಾಗವಹಿಸಿದವರಿಗೆಲ್ಲಾ ಹಿರಿಯರಾದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಂದ ನೆನಪಿನ ಕಾಣಿಕೆಯನ್ನು ಕೊಡಲಾಯಿತು. ಕಲಾವಿದರ ಸಂಭ್ರಮ ಭಾಗವಹಿಸಿದ ನಮಗೆಲ್ಲರಿಗೂ ಖುಷಿಕೊಟ್ಟಿತು.

ಬಿಡುಗಡೆಯಾದ ಸಿಡಿ ಯ ತುಣುಕುಗಳನ್ನು ಕೇಳಿ ಈ ಸಿಡಿಯನ್ನು ಕೊಳ್ಳಬೇಕೆಂದು ಆಸೆಯಾಗಿ ಈ ಸಿಡಿಯನ್ನು ಕೊಂಡಿದ್ದಾಯಿತು. ಮನೆಗೆ ಹೋದೊಡನೆ ಕಂಪ್ಯೂಟರ್ ನಲ್ಲಿ ಹಾಕಿ ಕೇಳಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಸಾಕಷ್ಟು ಅನಕ್ಷರಸ್ಥರೇ ಇರುವ ನಮ್ಮ ಸಮಾಜದಲ್ಲಿ (ಅಲ್ಲದೆ ಸಾಕಷ್ಟು ಅಕ್ಷರಸ್ಥರಲ್ಲಿ ಕನ್ನಡ ಅನಕ್ಷರಸ್ಥರೇ ಹೆಚ್ಚಿರುವ ಬೆಂಗಳೂರಿನಲ್ಲಿ) ಇನ್ನು ಕನ್ನಡ ಕಾದಂಬರಿಯನ್ನು ಆಸ್ವಾದಿಸುವುದು ಬರಿಯ ಕನಸಾಗಿ ಉಳಿಯುವುದಿಲ್ಲ ಅನ್ನುವ ವಿಷಯವೇ ನನಗೆ ಖುಷಿ ಕೊಟ್ಟಿದ್ದು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಘಟಿಸಿದ ಇಂತಹ ಚರಿತ್ರಾರ್ಹ ತಿರುವನ್ನು ನಾವೆಲ್ಲರೂ ಸ್ವಾಗತಿಸಬೇಕು. ಅಂತಹ ಸಾಹಸಕ್ಕೆ ಕೈ ಹಾಕಿದ ಅನಕೃ ಪ್ರತಿಷ್ಠಾನ ವನ್ನು ಅಭಿನಂದಿಸುವುದು ಮಾತ್ರವಲ್ಲದೆ ಆ ಸಿಡಿ ಯನ್ನು ಕೊಂಡು, ಕೇಳಬೇಕಾಗಿದೆ.

ರೂ.150/- ಬೆಲೆ ಬಾಳುವ ಸಿಡಿಯನ್ನು ಕೊಳ್ಳುವ ಆಸಕ್ತರು ಎ.ಕೆ.ಗೌತಮ್ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂ.9448066205 ಹಾಗೇ ಅವರ ಇಮೈಲ್ ವಿಳಾಸ shobha.goutham@gmail.com.

ಇಲ್ಲವೇ ನಮ್ಮನ್ನು ಸಂಪರ್ಕಿಸಿ.