ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ

ಹೆಸರಾಂತ ಕಲಾ ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯಂ ಅವರ ಈ ಪುಸ್ತಕ ಹಲವು ಮೌಲಿಕ ಲೇಖನಗಳನ್ನು ಒಳಗೊಂಡಿದೆ. ಅವರ ಭಾಷೆ ಆಧುನಿಕವಾಗಿ ಅಚ್ಚುಕಟ್ಟಾಗಿದೆ. ಕಲಾ ವಿಮರ್ಶೆ ಕುರಿತು ಸಾಮಾನ್ಯ ಓದುಗರಿಗೆ ಇರುವ ಭಯ ಕಸಿವಿಸಿಗಳನ್ನೆಲ್ಲಾ ತೊಡೆದುಹಾಕುವಷ್ಟು ತಿಳಿಯಾಗಿ ಬರೆಯುತ್ತಾರೆ, ಸುಬ್ರಹ್ಮಣ್ಯಂ.

ಕಲೆ ಕುರಿತು ಕನ್ನಡ ಮೂಲ ಕೃತಿಗಳು ಹೊರಬರುವುದು ಅಪರೂಪ. ಈ ಪುಸ್ತಕ ಅದನ್ನು ತುಂಬಿಕೊಡಲೆತ್ನಿಸುವುದಷ್ಟೇ ಅಲ್ಲ, ಮಾಮೂಲಿಯಂತೆ ಶಿಲ್ಪಕಲೆಯ ಇತಿಹಾಸ ಇತ್ಯಾದಿ ಚರ್ವಿತ ಚರ್ವಣಗಳಲ್ಲಿ ಕಳೆದುಹೋಗದೆ ನೇರವಾಗಿ ಸಮಕಾಲೀನ ಪರಿಸರಕ್ಕೆ ಧಾವಿಸಿ ಓದುವಿಕೆಯನ್ನು ಚುರುಕುಗೊಳಿಸುತ್ತದೆ. ಉದಾಹರಣೆಗೆ ಇತ್ತೀಚೆಗೆ ಸಂಚಲನ ಸೃಷ್ಟಿಸಿರುವ ಇನ್ಸ್ಟಾಲೇಷನ್, ವಿಡಿಯೋ ಇನ್ಸ್ಟಾಲೆಷನ್ ಹಾಗೂ ಕಲಾವಿದರು ತಮ್ಮ ದೇಹವನ್ನೇ ದುಡಿಸಿಕೊಳ್ಳುವ ಪರ್ಫಾರ್ಮೆನ್ಸ್ ಕಲಾಪ್ರಕಾರಗಳ ಕುರಿತು ಇಲ್ಲಿ ಸಚಿತ್ರ ವಿವರಣೆಯಿದೆ.

ಕಲೆಯ ಪುಸ್ತಕಗಳಿಗೆ ಅತ್ಯಗತ್ಯವಾಗಿ ಬೇಕಾದ ಉತ್ಕೃಷ್ಟ ಮುದ್ರಣ ಪುಸ್ತಕವನ್ನು ಸಂಗ್ರಹಯೋಗ್ಯವನ್ನಾಗಿಸಿದೆ.

ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಕನ್ನಡ ನಾಡಿನ ಇಂದಿನ ಶಿಲ್ಪಿಗಳ ಕುರಿತು ಕೆ.ವಿ.ಎಸ್. ಮನೋಜ್ಞವಾಗಿ ಬರೆಯುತ್ತಾರೆ; ಪುಷ್ಪಮಾಲಾ ಕುರಿತ ಈ ಸ್ಕೆಚ್ ಅನ್ನೇ ನೋಡಿ: … ಹಳೆಯ ಕಥಾನಕದಂತಹ ರೂಪಕಗಳನ್ನು ತಮ್ಮದೇ ಆದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಮೇಲ್ನೋಟಕ್ಕೆ ತಣ್ಣಗಿನ ಪದರ ಹೊದೆಸಿದ, ಒಳಗೆ ಅಸಾಮಾನ್ಯ ಹೊಳಹುಗಳನ್ನು ಹುದುಗಿಸಿಕೊಂಡಿರುವ ಅಭಿವ್ಯಕ್ತಿ ಅವರದು. ವಿಡಂಬನೆಗೆ ಖ್ಯಾತರಾದ ಅವರು ಛಾಯಾಚಿತ್ರ ಮಾಧ್ಯಮವನ್ನೇ ನೆಪವಾಗಿ ಬಳಸಿಕೊಂಡು, ತಮ್ಮ ದೇಹ-ವ್ಯಕ್ತಿತ್ವ-ಸಂವೇದನೆಗಳಿಂದಲೇ ಹಲವು ಪಾತ್ರಗಳಲ್ಲಿ ತಾನೇ ತಾನಾಗಿ ವಿಜೃಂಭಿಸುತ್ತಾರೆ

ಶೀರ್ಷಿಕೆ : ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ ಲೇಖಕರು : ಕೆ. ವಿ. ಸುಬ್ರಹ್ಮಣ್ಯಂ ಪ್ರಕಾಶಕರು : ಕರ್ನಾಟಕ ಶಿಲ್ಪಕಲಾ ಅಕಾಡಮಿ ಪುಟಗಳು : 168 ಬೆಲೆ: ರೂ.100/-

ಕೃಪೆ : ವಿಜಯ ಕರ್ನಾಟಕ