ಸಮಕಾಲೀನ ಸಾಹಿತ್ಯ ಚರಿತ್ರೆ

ಹಿರಿಯ ಕವಿ, ವಿಮರ್ಶಕ ಸುಮತೀಂದ್ರ ನಾಡಿಗರು ಬರೆದಿರುವ ಈ ಸಮಕಾಲೀನ ಸಾಹಿತ್ಯ ಚರಿತ್ರೆ, ಇವತ್ತಿನ ಸಂದರ್ಭಕ್ಕೆ ತುಂಬಾ ಅಗತ್ಯವಾಗಿತ್ತು. ಸಾಹಿತ್ಯ ಚರಿತ್ರೆ ಅಂದರೆ ನವೋದಯ, ಪ್ರತಿಶೀಲ, ನವ್ಯ, ನವ್ಯೋತ್ತರ ಸಾಹಿತ್ಯ ಚಳವಳಿಗಳ ದಾಖಲೆ ಎಂತಾಗಿಬಿಟ್ಟು ಎಲ್ಲಿ ನೋಡಿದರೂ ಅವೇ, ಎಷ್ಟು ಓದಿದರೂ ಅವೇ ಅಂತಾಗಿಬಿಟ್ಟಿದ್ದಾಗ ಹೀಗೊಂದು ಕಾಂಟೆಂಪೊರೆರಿ ದಾಖಲೆ ಸೆಳೆಯುತ್ತದೆ.

ಇದರ ಸ್ವರೂಪವೂ ಭಿನ್ನವಾಗಿರಬೇಕೆಂದು ಬಯಸುತ್ತಾ ಕಳೆದ 50-60 ವರುಷಗಳಲ್ಲಿ ಯಾವ ಸಾಹಿತಿಗಳು ಯಾವ ಸಾಹಿತಿಗಳನ್ನು ಭೇಟಿಯಾದರು, ಅವರ ಸಂಬಂಧ ಹೇಗಿತ್ತು, ಅವರು ಸಾಹಿತ್ಯಕ್ಕೆ ಸಂಬಂಧಿಸಿದ ಎಂತಹ ಮಾತುಗಳನ್ನಾಡುತ್ತಿದ್ದರು, ಯಾವ ಪುಸ್ತಕಗಳನ್ನು ಓದುತ್ತಿದ್ದರು ಮುಂತಾದವುಗಳನ್ನಿಲ್ಲಿ ಆಯಾ ಲೇಖಕರ ಒಡನಾಡಿಯಾಗಿ, ಸಾಕ್ಷಿಪ್ರಜ್ಞೆಯಾಗಿ ಬರೆದಿರುವುದಾಗಿ ಲೇಖಕರು ಹೇಳಿಕೊಂಡಿದ್ದಾರೆ

ಶೀರ್ಷಿಕೆ : 5 ನೆಯ ಸಾಹಿತ್ಯ ಚರಿತ್ರೆ ಲೇಖಕರು : ಸುಮತೀಂದ್ರ ನಾಡಿಗ ಪ್ರಕಾಶಕರು : ಸಪ್ನ ಬುಕ್ ಹೌಸ್ ಪುಟಗಳು : 260 ಬೆಲೆ: ರೂ.120/-

ಕೃಪೆ : ವಿಜಯ ಕರ್ನಾಟಕ

ಸುಡು ಸತ್ಯಗಳ ಕೆಂಡದ ಮೇಲೆ ಮೌಲ್ಯ ಪರೀಕ್ಷೆ

ಜಾಗತೀಕರಣ, ಕೋಮುವಾದ ಹಾಗೂ ಮೂಲಭೂತವಾದಗಳು ನಾಡಿನ ಬುದ್ಧಿಜೀವಿಗಳ ತಲೆಕೆಡಿಸಿವೆ. ಒಬ್ಬೊಬ್ಬರು ಒಂದೊಂದು ಬಗೆಯ ವ್ಯಾಖ್ಯಾನದಲ್ಲಿ ನಿರತರಾಗಿದ್ದಾರೆ. ಎಲ್ಲರ ಉದ್ದೇಶವೂ ಒಂದೇ. ಮನುಷ್ಯ ಸಂಬಂಧಗಳನ್ನು ಹೊಸಕಿ ಹಾಕುವ ಈ ತ್ರಿಕೋನದಿಂದ ಹೊರಬರುವುದು ಹೇಗೆ ಎಂಬುದು.

ಕನ್ನಡದ ನವಬರಹಗಾರರಲ್ಲಿ ಮನುಷ್ಯ ಸಂಬಂಧದ ಅಧಃಪತನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡವರಲ್ಲಿ ಡಾ.ರಹಮತ್ ತರಿಕೆರೆ ಪ್ರಮುಖರು. `ಧರ್ಮ ಪರೀಕ್ಷೆಎಂಬ ಸಾಂಪ್ರದಾಯಿಕ ಹಣೆ ಪಟ್ಟಿ ಹೊತ್ತ ಅವರ ಲೇಖನ ಸಮುಚ್ಛಯದ ಭೂತಕನ್ನಡಿಯೊಳಕ್ಕೆ ಸಾವಯವ ಭಾರತದ ಸರ್ವ ಸ್ಥೂಲವನ್ನೂ ಹರಿಯಬಿಟ್ಟು ಸೂಕ್ಷ್ಮಗಳನ್ನು ಎಳೆಎಳೆಯಾಗಿ ಪರಿಶೋಧಿಸಬೇಕೆಂಬ ಹವಣಿಕೆಯಲ್ಲಿದ್ದಾರೆ.

ಇಪ್ಪತ್ತೊಂಬತ್ತು ಪರಿಶೀಲನಾತ್ಮಕ ಲೇಖನಗಳಿಂದ ಕೂಡಿದ `ಧರ್ಮ ಪರೀಕ್ಷೆಅನೇಕ ಧಾರ್ಮಿ, ಸಾಮಾಜಿಕ, ನೈತಿಕಾದಿ ಸಮಸ್ಯೆಗಳ ಕುರಿತು ಚರ್ಚೆ ಮಾಡುತ್ತದೆ. ಮೊದಲ ಮೂರು ಲೇಖನಗಳು ಸಾವಿನ ಸುತ್ತ ಸುತ್ತಿದರೆ ಮುಂದಿನವುಗಳು ಧರ್ಮದ ಗೊಂಡಾರಣ್ಯವನ್ನೇ ತೆರೆದಿಡುತ್ತವೆ. `ಯಾರಿಗಾಗಿ ಯಾರು ಸಾಯಬೇಕು?’ ಎಂಬ ಪ್ರಶ್ನೆ ಅವರನ್ನು ಬಹಳಷ್ಟು ಕಾಡಿದೆ.

ಮೆಚ್ಚತಕ್ಕ ಅಂಶವೆಂದರೆ ಮೂಲಭೂತವಾದಿಗಳ ಕುರಿತು ಮಾತನಾಡಬೇಕಿದ್ದರೆ ಅವರ ಮೂಲಕ್ಕೆ ಹೋಗಿಯೇ ಮಾತನಾಡುವುದು ಹಾಗೂ ವಿಷಯವನ್ನು ಎಲ್ಲಾ ಕೋನಗಳಿಂದಲೂ ಆವಾಹಿಸಿಕೊಳ್ಳುವುದು.

`ಧರ್ಮ ಪರೀಕ್ಷೆಯ ಮೂಲಕ ರಹಮತ್ ತರಿಕೆರೆಯವರು ಒಂದು ತಾತ್ವಿಕ ಸಮರಕ್ಕೆ ವೇದಿಕೆ ಅಣಿಗೊಳಿಸಿದ್ದಾರೆ. ಇಲ್ಲಿನ ಲೇಖನಗಳು ಬಿಡಿಬಿಡಿಯಾಗಿ ಪತ್ರಿಕೆಗಳಲ್ಲಿ ಬಂದವುಗಳೇ ಆಗಿದ್ದರೂ ಇದೀಗ ಇಡಿಯಾಗಿ ತಾನು ನಂಬಿದ ಸಿದ್ಧಾಂತವನ್ನು ಸಾರ್ವಜನಿಕರ ಮುಂದೆ ಇರಿಸುವ ಕೆಲಸವನ್ನು, ಆ ಮೂಲಕ ಅವರು ಚರ್ಚೆಯನ್ನು ಆಹ್ವಾನಿಸುವ ಪ್ರಯತ್ನವನ್ನು ಪಟ್ಟಿದ್ದಾರೆ. ಚರ್ಚೆಗಳಾದಾಗಲೇ ರಹಮತ್ ತರಿಕೆರೆಯವರ ಮನುಷ್ಯ ಸಂಬಂಧದ ಕಾಳಜಿ ನಿಜವಾದ ಅರ್ಥದಲ್ಲಿ ಬಿಂಬಿತವಾಗುವುದು

 

ಶೀರ್ಷಿಕೆ : ಧರ್ಮ ಪರೀಕ್ಷೆ ಲೇಖಕರು : ಡಾ. ರಹಮತ್ ತರಿಕೆರೆ ಪ್ರಕಾಶಕರು : ನವ ಕರ್ನಾಟಕ ಪ್ರಕಾಶನ ಪುಟಗಳು : 256 ಬೆಲೆ: ರೂ.140/-

ಕೃಪೆ : ಪ್ರಜಾವಾಣಿ