ಬುದ್ಧ ಚರಿತೆ

ಅಶ್ವಘೋಷ ಕವಿಯ ಈ ಸಂಸ್ಕೃತ ಮಹಾಕಾವ್ಯದ ಕನ್ನಡ ಗದ್ಯಾನುವಾದವನ್ನು ಕತೆಗಾರ ಆರ್ಯ ಮಾಡಿದ್ದಾರೆ. ನವ್ಯ ಶೈಲಿಯ ಕತಗಾರರಾಗಿ ತಮ್ಮ ಛಾಪು ಮೂಡಿಸಿರುವ ಆರ್ಯ ಆಚಾರ್ಯ (ಇದು ಅವರ ಪೂರ್ಣ ಹೆಸರು) ಕುರಿತ ಕೆಲ ವಿವರಗಳು ಕುತೂಹಲಕಾರಿ. ಪೇಜಾವರ ಮಠದ ಪೀಠಸ್ಥರಾಗಿದ್ದ ಅವರು ತಮ್ಮಲ್ಲಿನ ಕಲಾವಿದನ, ಸಾಹಿತಿಯ ಅಂತರಂಗದ ಅಳಲಿಗೆ ಓಗೊಟ್ಟು ಫೀಠತ್ಯಾಗ ಮಾಡಿ ಗೃಹಸ್ಥರಾದದು ಸುಮಾರಾಗಿ ಎಲ್ಲರಿಗೂ ತಿಳಿದಿದೆ. ಅವರು ಸಂಸ್ಕೃತ ಪಂಡಿತರು ಹಾಗೂ ಕಲಾವಿದರೂ ಆಗಿದ್ದಾರೆನ್ನುವುದು ಬಹುಶಃ ಇನ್ನೂ ಗೊತ್ತಾಗಬೇಕಾಗಿದೆ.

ಅನುವಾದಕರ ಮಾತಿನಲ್ಲಿ ಅಶ್ವಘೋಷ ಹಾಗೂ ಅವನ ಈ ಪ್ರಸಿದ್ಧ ಕೃತಿಯ ಬಗ್ಗೆ ಆರ್ಯ ಹೀಗೆ ಹೇಳುತ್ತಾರೆ: ಭಾರತ, ರಾಮಾಯಣದಂತಹ ಪುರಾಣ ಕಾವ್ಯ ಪ್ರಕಾರದ ನಂತರ ಸಂಸ್ಕೃತದಲ್ಲಿ ಉಗಮವಾದ `ಮಹಾಕಾವ್ಯಪ್ರಕಾರಕ್ಕೆ ಅಶ್ವಘೋಷನ ಬುದ್ಧ ಚರಿತಂ ಮೊದಲ ಮಾದರಿ. ಭೌದ್ಧ ಧರ್ಮದ ಪ್ರಚಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಶ್ವಘೋಷ ತನ್ನ ಸಾಹಿತ್ಯಕ ಸಾಮಥ್ರ್ಯಕ್ಕಾಗಿಯೂ ಗುರುತಿಸಲ್ಪಡುತ್ತಾನೆ. ಭಾಷಾ ಲಾಲಿತ್ಯ, ಶ್ರೀಮಂತ ಉಪಮೆ, ಮಾನವೀಯತೆ ತುಂಬಿಕೊಂಡಿರುವ ಆತನ ಈ ಕೃತಿ ಬುದ್ಧನ ಜನನದಿಂದ ಆರಂಭಿಸಿ ಪರಿನಿರ್ವಾಣದವರೆಗಿನ ಆತನ ಜೀವನ ಚರಿತ್ರೆಯನ್ನು ಕಾವ್ಯವಾಗಿಸಿದೆ. ಕಾವ್ಯದ ಅಂಗವಾಗಿ ಬರುವ ವಿಭಿನ್ನ ದರ್ಶನ, ಕರ್ಮಾಚರಣೆ ವಿವರಗಳು ಅದಾಗಲೇ ಸ್ಥಾಪಿತಗೊಂಡಿದ್ದ ಚಾರ್ವಾಕ, ಸಾಂಖ್ಯ, ಮೀಮಾಂಸಾ ಮತ್ತು ವೈದಿಕ ದರ್ಶನ ಶಾಸ್ತ್ರಗಳಿಗೆ ಒಂದು ವೈದೃಶ್ಯ ಒದಗಿಸುತ್ತವೆ…. ಶೈಲಿ, ಸೌಂದರ್ಯಕ್ಕಿಂತ ಅನುವಾದ, ಮೂಲ ಪಠ್ಯಕ್ಕೆ ಹೆಚ್ಚು ಹತ್ತಿರ ಇರುವಂತೆ ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ.

ಹತ್ತು ಅನುವಾದಕರು ಹತ್ತು ತರ ಅನುವಾದಿಸುವ ಪರಿಪಾಠ ಬೆಳೆದಿರುವ ಈ `ಕಲಿಗಾಲದಲ್ಲಿ ನಾವು ಆರ್ಯರನ್ನು ನಂಬಬಹುದು!

ಶೀರ್ಷಿಕೆ : ಬುದ್ಧ ಚರಿತೆ ಲೇಖಕರು : ಅಶ್ವಘೋಷ ಅನುವಾದ:ಆರ್ಯ ಆಚಾರ್ಯ ಪ್ರಕಾಶಕರು : ವಿಮೋಚನಾ ಪ್ರಕಾಶನ ಪುಟಗಳು : 124 ಬೆಲೆ: ರೂ.100/-

ಕೃಪೆ : ವಿಜಯ ಕರ್ನಾಟಕ

ಸುಂದರಿಯರು ಮತ್ತು ಸುಂದರರು

ಉರೂಬ್ ಅವರ ಈ ಅಕಾಡಮಿ ಪ್ರಶಸ್ತಿ ವಿಜೇತ ಕಾದಂಬರಿಯ ಶೀರ್ಷಿಕೆ `ಸುಂದರರು ಮತ್ತು ಸುಂದರಿಯರುಎಂದಾಗಿದ್ದರೂ ಮುಖಪುಟದಲ್ಲಿ ಅದು ಸುಂದರಿಯರು ಸುಂದರರು ಎಂದು ನಡುವೆ ಒಂದು ಅಲ್ಪ ವಿರಾಮನೂ ಇಲ್ಲದೆ ಬೇಕಾಬಿಟ್ಟಿ ಪ್ರಕಟವಾಗಿದೆ. ಅರೆರೆ… ಈ ಅನುವಾದದಲ್ಲಿ ಮೂಲ ಲೇಖಕರ ಕುರಿತು ಒಂದು ಪುಟದಷ್ಟು ಮಾಹಿತಿ ಇದೆ ಎಂದು ಓದುಗ ಸಖೇದಾಶ್ಚರ್ಯಗಳಿಂದ ಬಳಲುವ ವೇಳೆಗೆ ಪುಸ್ತಕದ ಕುರಿತು ವಿದ್ವಾಂಸರೊಬ್ಬರ 4-5 ಪುಟಗಳ ಬರಹವೂ ಕಾಣಿಸಿ ಅವ ಮೂರ್ಛ ಹೋಗುವುದೊಂದು ಬಾಕಿ! ಮೂರ್ಛ ತಿಳಿದಾದ ಮೇಲೆ ಸುಧಾರಿಸಿಕೊಂಡು ನೋಡಿದರೆ ಅಸಡ್ಡಾಳ ದಪ್ಪಕ್ಷರದಲ್ಲಿ ಪ್ರಕಟವಾದ ಪರಿವಿಡಿಯೂ ಇದೆ! ಆದರೂ ಅನುವಾದ ಅಷ್ಟಕ್ಷಷ್ಟೆ. ನೋಡಿ ನೀವೇ ನಿರ್ಧರಿಸಿ:

`ಹೆತ್ತಳು, ಗಂಡುಮಗು

ಮಾಸ್ತರ ಹೆಂಡತಿ ಚಾವಡಿಯತ್ತ ಇಣಿಕಿ ಹೇಳಿದರು. ಹಿಂದಕ್ಕೆ ಕೈ ಕಟ್ಟಿ ಶತಪಥ ಹಾಕುತ್ತಿದ್ದ ರಾಮನ್ ಮಾಸ್ತರು ತಕ್ಷಣ ನಿಂತರು. `ಏನು?’ ಅದಕ್ಕೆ ಪ್ರತಿಕ್ರಿಯೆ ಇರಲಿಲ್ಲ. ಹೆಂಡತಿ ಒಳಗೆ ಹೋಗಿಯಾಗಿದೆ. ಹೇಳಿದಷ್ಟೂ ಮಾಸ್ತರಿಗೆ ವಿಷಯ ಅರ್ಥವಾಗದು. ಹೆಚ್ಚು ತಿಳಿದುಕೊಳ್ಳಬೇಕೆಂಬ ಆತುರ. ಕುಂಜುಕುಟ್ಟಿಗೆ ಹೇಗಿದೆ? ತೊಂದರೆಯೇನೂ ಇಲ್ಲವಷ್ಟೆ? ಹೀಗೆ ಹಲವನ್ನು ಕೇಳಬೇಕೆಂದಿತ್ತು. ಅಷ್ಟರಲ್ಲಿ ಒಳಗೆ ಹೋಗಿಯಾಯ್ತು.

ಶೀರ್ಷಿಕೆ : ಸುಂದರಿಯರು ಸುಂದರರು ಲೇಖಕರು : ಉರೂಬ್ ಅನುವಾದ: ಮೋಹನ ಕುಂಬಾರ ಪ್ರಕಾಶಕರು : ಸಾಹಿತ್ಯ ಅಕಾಡಮಿ ಪುಟಗಳು : 490 ಬೆಲೆ: ರೂ.250/-

ಕೃಪೆ : ವಿಜಯ ಕರ್ನಾಟಕ