ಮತ್ತು ಬರಿಸದ, ಗಮ್ಮತ್ತು ತರಿಸದ, ಓದುಗರನ್ನು ಚಿಂತನೆಗೆ ಹಚ್ಚುವ ಕವಿತೆಗಳು

`ಭಾರತ ಗೀತ‘, `ಗುಲ್ ಮೊಹರ್ಮತ್ತು `ನನ್ನ ಕನಸಿನ ಭಾರತಕೃತಿಗಳ ಮೂಲಕ ಸಾಹಿತ್ಯ ಲೋಕಕ್ಕೆ ಈಗಾಗಲೇ ಪರಿಚಿತರಾದ ಅಹ್ಮದ್ ಅನ್ವರ್ ಅವರ 180 ಹನಿಗಳ ಗುಚ್ಛ ಈ ಕೃತಿ. ಧರ್ಮ ಎಂಬುದು ಬದುಕಿನ ದಾರಿ. ಆದರೆ ಇಂದು ಧರ್ಮವೆಂದರೆ ಜಾತಿಯ ಹಣೆಪಟ್ಟಿಯಾಗಿ ಮಾರ್ಪಟ್ಟಿರುವುದರಿಂದ ನೊಂದ ಅಹ್ಮದ್ ಹೇಳುತ್ತಾರೆ: “ಯಾವುದೋ ಮಸೀದಿ ಮಂದಿರದ ಗೋಡೆಯ ಕಲ್ಲಾಗುವೆ, ಜನರಲ್ಲಿ ಬಂಧುತ್ವದ ದಾರಿ ತೋರಿಸೆಂದು ಪ್ರಾರ್ಥಿಸುವೆ”. `ಭಾರತದಲ್ಲಿಎಂಬ ಹನಿಯಲ್ಲಿ `ಬಡಜನತೆಗಿಲ್ಲ ಒಪ್ಪೊತ್ತಿನ ಊಟ, ಆದರೆ ನುಂಗುತ್ತಾರೆ ಕೋಟಿ ಕೋಟಿಗಳನ್ನು ನಮ್ಮನ್ನಾಳುವ ದುಷ್ಟಕೂಟಎಂದು ಮರುಗುತ್ತಾರೆ.

ದುಬಾಯಿಯಲ್ಲಿ ಕೈಗೆಟುಕುತ್ತದೆ ಖರ್ಜೂರ, ಆದರೆ ಮರು ಘಳಿಗೆಯಲ್ಲಿ ತಮ್ಮೂರಿನ ಮಾವು, ಗೇರು, ಪೇರಳೆಗಳು ಕವಿಗೆ ನೆನಪಾಗುತ್ತದೆ. ಜೀವನದ ಕಷ್ಟ ಸುಖ, ವಿವಿಧ ಆಯಾಮಗಳನ್ನು ಬಿಂಬಿಸುವ ಹನಿಗಳನ್ನು ಇಲ್ಲಿ ದಾಖಲಿಸಿದ್ದಾರೆ. `ನೆರಳು‘, `ಕೋಟೆ ಕೊತ್ತಲು‘, `ಪ್ರಜಾಪ್ರಭುತ್ವಕೆಲವು ಉತ್ತಮ ಕವಿತೆಗಳ ಉದ್ದದ ಪಟ್ಟಿಯೇ ಇದೆ. ಬದುಕಿನ ಸತ್ಯಗಳನ್ನು ಬಿಂಬಿಸುವ ಚಿಂತನಶೀಲ ಹನಿಗವನಗಳನ್ನು ಕವಿ ನೀಡಿದ್ದಾರೆ.

ಕವಿಯೇ ಹೇಳುವಂತೆ ಅವರ ಕವಿತೆಗಳು “ಮತ್ತು ಬರಿಸುವುದಿಲ್ಲ, ಗಮ್ಮತ್ತು ತರಿಸುವುದಿಲ್ಲ”. ಓದುಗರನ್ನು ಚಿಂತನೆಗೆ ಹಚ್ಚುವ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತದೆ ಎಂದು ಡಾ. ಮಾಧವಿ ಭಂಡಾರಿ ಮುನುಡಿದಿದ್ದಾರೆ.

ಶೀರ್ಷಿಕೆ : ಬೇವು ಬೆಲ್ಲ ಲೇಖಕರು : ಅಹ್ಮದ್ ಅನ್ವರ್ ಪ್ರಕಾಶಕರು : ವಿಚಾರ ಪ್ರಕಾಶನ ಪುಟಗಳು : 116 ಬೆಲೆ: ರೂ.40/-

ಕೃಪೆ : ಸಂಯುಕ್ತ ಕರ್ನಾಟಕ

ತೇನೆ ಹಕ್ಕಿಯ ತಳಮಳ

ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿ, ಸಂಶೋಧನಾ ವಿದ್ಯಾರ್ಥಿ, ಅದ್ಯಾಪಕ ಹಾಗೂ ಅದ್ಯಾಪಕೇತರ ಸಿಬ್ಬಂದಿಯ ಕವಿತೆಗಳನ್ನೆಲ್ಲಾ ಸಂಕಲಿಸಿ ಪುಸ್ತಕ ತಂದಿರುವ ಈ ಪ್ರಯೋಗ, ಉತ್ಸಾಹದೊಂದಿಗೆ ಗುಣಮಟ್ಟವನ್ನೂ ಕಾಯ್ದುಕೊಂಡಿದೆ ಎನ್ನುವುದಕ್ಕಾಗಿ ಸ್ವಾಗತಾರ್ಹ, ಜಾಗತೀಕರಣ, ದಿಡೀರ್ ಶ್ರೀಮಂತಿಕೆ, ಮನುಷ್ಯ ಸಂಬಂಧಗಳನ್ನು ಕಡೆಗಣಿಸುವ ವ್ಯಾವಹಾರಿಕ ದೃಷ್ಟಿ ಸಾಮಾಜಿಕ ಕಾಳಜಿ, ಮಹಿಳೆ, ರೈತರ ಸಂಕಷ್ಟಗಳಿಗೆ ಸ್ಪಂದನ ಇತ್ಯಾದಿ ವಸ್ತು, ವಿಷಯಗಳನ್ನು ಹೊಂದಿರುವ ಸಂಕಲನ ಸಾಕಷ್ಟು ಸಮಕಾಲೀನವಾಗಿಯೂ ಇದೆ. ಅಂತೆಯೇ ಇದು ಕನ್ನಡ ಕಾವ್ಯ ದಲಿತ-ಬಂಡಾಯ ಶೈಲಿಗಳ ನಂತರ ಪಡೆದುಕೊಳ್ಳುತ್ತಿರುವ `ಅಂತರಂಗದ ಧ್ಯಾನದ ಅಭಿವ್ಯಕ್ತಿಎಂದು ಬೆನ್ನುಡಿಕಾರ ಶಿವರಾಮು ಕಾಡನಕುಪ್ಪೆ ಅಭಿಪ್ರಾಯಪಡುತ್ತಾರೆ. ಅರವಿಂದ ಮಾಲಗತ್ತಿ, ಆರ್ವಿಯಸ್ ಸುಂದರಂ, ಪ್ರೀತಿ ಶುಭಚಂದ್ರ, ಸಿ.ನಾಗಣ್ಣರಂತಹ ಹೆವಿ ವೆಯ್ಟ್ಗಳ ಜತೆಗೇ ಪ್ರಕಟವಾಗಿರುವ ಸುಧೀಂದ್ರಕುಮಾರ್, ಆರ್. ಅವರ ಜಿಲೇಬಿ ಬರೆಯುವ ಹುಡುಗಿ ಕುರಿತ ಈ ಕವಿತೆ ಹೇಗಿದೆ ಹೇಳಿ?

ಅವಳ ತಳ್ಳುಗಾಡಿಯ ಸುತ್ತ / ನೊಣದಂತೆ ಗಿಜಿಗುಡುತ್ತಾ/ ಆಗಿನ್ನೂ ಗಂಟಲೊಡೆದ ಹುಡುಗರು / ಅವರ ಕೈಯಲ್ಲಿ, ಕೈ ಬೆರಳುಗಳಲ್ಲಿ / ಸನ್ನೆ ಮಿಡುಕಾಟಗಳು / ಅವಳತ್ತ ಹಾರುತ್ತಿವೆ …. ಅಜ್ಜನ ಕತೆ ಕೇಳುವಷ್ಟೆ ಧ್ಯಾನದಲ್ಲಿ / ಬಿಸಿ ಜಿಲೇಬಿಗಳ ತಂತಿಯಲ್ಲೆತ್ತಿ / ಜಿಡ್ಡಾದ ತಟ್ಟೆಯೊಳಗೆ ಜೋಡಿಸುತ್ತಾಳೆ.

ಶೀರ್ಷಿಕೆ : ತೇನೆ ಹಕ್ಕಿಯ ತಳಮಳ ಸಂಪಾದಕರು : ಪ್ರೊ. ನೀಲಗಿರಿ ಎಂ. ತಳವಾರ್ ಪ್ರಕಾಶಕರು : ಜ್ಯೋತಿ ಪ್ರಕಾಶನ ಪುಟಗಳು : 160 ಬೆಲೆ: ರೂ.180/-

ಕೃಪೆ : ವಿಜಯ ಕರ್ನಾಟಕ