ಒಂದು ದಿನ ಸೌಡಿಯಾದಾಗ / ಗುಡಿಸಿ ಬಿಡಬೇಕು / ಮನೆಯ ಮೂಲೆ ಮೂಲೆಯನ್ನೆಲ್ಲ

ಒಂದು ದಿನ ಸೌಡಿಯಾದಾಗ / ಗುಡಿಸಿ ಬಿಡಬೇಕು / ಮನೆಯ ಮೂಲೆ ಮೂಲೆಯನ್ನೆಲ್ಲ” ಎಂದು ಬರೆಯುವ ಮಾಧವಿ ಭಂಡಾರಿ ಕೊಳೆಯ ತೊಳೆಯುವ ಅನಿವಾರ್ಯತೆ ಹಾಗೂ ತೊಳೆಯಲಿಕ್ಕೆ ಬೇಕಾದ ಕಾಲದ ಕೊರತೆ ಎರಡನ್ನೂ ಬಲ್ಲವರು. ಅವರ `ಕಡಲು ಕಳೆದಿದೆಸಂಕಲನದ ಕವಿತೆಗಳ ಮುಖ್ಯ ಧ್ಯಾನ ಕೂಡ ತೊಳೆಯುವ ಹಾಗೂ ದಕ್ಕಿಸಿಕೊಳ್ಳುವ ಪ್ರಕ್ರಿಯೆಯೇ ಆಗಿದೆ.

`ಉಕ್ಕಿ ಹರಿಯುವ ಕೆನ್ನೀರ ನೆಗ್ಗಿಸು

ತುಂಬಿ ಬಿಡಲಿ ಈ ನೆಲದ

ಹೊಂಡ ಉಪ್ಪುರಗಳನ್ನೆಲ್ಲ

ಹರಿಯಬಿಡು ಒಮ್ಮೆ ನನ್ನನು

ನನ್ನಷ್ಟಕ್ಕೆ ನಾನು ಹರಿಯಲು

ಎಂದು ಬಯಸುವ ಕವಯತ್ರಿ, ಸಂಕಲನದ ಮೂವತ್ತೆಂಟು ಕವಿತೆಗಳಲ್ಲಿ ತಮ್ಮ ಈವರೆಗಿನ ಅನುಭವದ ಹರಿವಿಗೆ ದಕ್ಕಿದ ಸಂಗತಿಗಳಿಗೆ ಕವಿತೆಯ ಸ್ಪರ್ಶ ನೀಡಿದ್ದಾರೆ. ಈ ಹರಿವಿನ ಹಾದಿ ಅರಿವಿನ ಹಾದಿಯೂ ಹೌದು. ಅರಿವು ತರುವ ಯಾತನೆಯ ಹಾದಿಯೂ ಹೌದು, ಅರಿವು ತರುವ ಯಾತನೆಯ ಹಾದಿಯೂ ಹೌದು.

`ಈಗ ಕಾಯುವುದಿಲ್ಲ ಕಾಮನ ಬಿಲ್ಲಿಗಾಗಿ

ಆಕಾಶದಲ್ಲಿ ಮೂಡುವುದಿಲ್ಲ ಕಾಮನಬಿಲ್ಲು

ಈಗ

ಕೈಗೆ ಸಿಗುವುದೆಲ್ಲ ಕಾಮನಬಿಲ್ಲೆ

ಎನ್ನುವ ಸಾಲುಗಳು ದಿಟ್ಟ ಮನಸ್ಸಿನ ಸಾಲುಗಳಂತೆ ಕಂಡರೂ, ಅವುಗಳಲ್ಲಿ ಅರಿವು ಹಾಗೂ ಯಾತನೆ ಎರಡೂ ಇದೆ.

`ಹಂಚಿಕೊಳ್ಳಲಾಗುವುದಿಲ್ಲ ಕೆಲವು ಭಾವನೆಗಳನ್ನುಎನ್ನುವ ಕವಯತ್ರಿ ಓದುಗರೊಂದಿಗೆ ಹಂಚಿಕೊಂಡಿರುವುದು ಹಸಿ ಬಿಸಿ ನೋವುಗಳನ್ನು. ಆನೋವಿಗೆ ಕಾರಣವಾದ ಗಾಯಗಳು ಬೆತ್ತಲೆ ಮೈಮೇಲಿವೆ; ಮನಸ್ಸಿನ ಮೇಲೂ ಇವೆ. ಆದರೆ ಎಲ್ಲ ಸಂಕಟಗಳ ನಡುವೆಯೂ – `ಭೂಮಿ ಬಿರುಕು ಬಿಟ್ಟರೂ / ನಮ್ಮ ಕಾಲಡಿಯಲ್ಲಿ / ಅಡಿಯಲ್ಲಿ ಪ್ರವಹಿಸುತ್ತಿದೆಯಲ್ಲ / ಬತ್ತಲಾರದ ಅಂತರ್ಜಲಎನ್ನುವ ಜೀವಪರ ಆಶಾಭಾವ ಕುತೂಹಲ ಹುಟ್ಟಿಸುತ್ತದೆ.

`ಮಾಧವಿ ತಮ್ಮ ಕವಿತೆಗಳಲ್ಲಿ ಹೊಸ ರೂಪಕ-ಹೊಸ ಕ್ರಿಯಾತ್ಮಕತೆಯನ್ನು ರೂಪಿಸಿದ್ದಾರೆಎಂದು ಕೆ. ಕೇಶವ ಶರ್ಮ ಬೆನ್ನುಡಿಯಲ್ಲಿ ಮೆಚ್ಚಿಕೊಂಡಿದ್ದಾರೆ.

ಶೀರ್ಷಿಕೆ : ಕಡಲು ಕಳೆದಿದೆ ಲೇಖಕರು : ಮಾಧವಿ ಭಂಡಾರಿ ಪ್ರಕಾಶಕರು : ಬಂಡಾಯ ಪ್ರಕಾಶನ ಪುಟಗಳು : 62 ಬೆಲೆ: ರೂ.40/-

ಕೃಪೆ : ಪ್ರಜಾವಾಣಿ

ಮುಂಡ ಜಾನಪದ ಗೀತಾ ಸಾಹಿತ್ಯ

ಮೂಲ ಲೇಖಕರಾದ ವಕೀಲ ಶರತ್ ಚಂದ್ರ ಅವರು ಮುಂಡ ಬುಡಕಟ್ಟಿನ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದಾರೆ. 1912 ರಲ್ಲಿ ಪುರಾಣ-ಇತಿಹಾಸಗಳ ಆಧಾರದೊಂದಿಗೆ ಹೋಲಿಸಿ, ಅವರು ಇಂಗ್ಲೀಷಿನಲ್ಲಿ ರಚಿಸಿದ ಜನಪದ ಗೀತ ಸಾಹಿತ್ಯ `ಮುಂಡ ಮತ್ತು ಅವರ ದೇಶ‘. ಭೂ ಮಾಲಿಕರ ಆಕ್ರಮಣಗಳಿಗೆ ಸಿಕ್ಕಿ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದ ಮುಂಡ ಜನರಿಗೆ ನ್ಯಾಯ ದೊರಕಿಸುವಲ್ಲಿ ಇದು ಸಹಕರಿಸಿತ್ತು.

ಈ ಜನಪದ ಸಾಹಿತ್ಯವನ್ನು ಪೊ. ಚಂದ್ರಪ್ಪ ಸೊಗಸಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮುಂಡ ಜನರ ಸಂಗೀತ ಮತ್ತು ಪ್ರೀತಿ, ಸೌಂದರ್ಯ ಪ್ರಜ್ಞೆ, ಆತ್ಮೀಯತೆ, ಬದುಕಿನ ಬಗೆಗಿನ ಉತ್ಕಟತೆಯನ್ನು ಗೀತೆಗಳ ಮೂಲಕ ಪರಿಚಯಿಸಿದ್ದಾರೆ.

ಬುಡಕಟ್ಟಿನ ಅಧ್ಯಯನ ಎನ್ನುವುದು ಕೇವಲ ಭೌದ್ಧಿಕ ಕುತೂಹಲವಾಗದೆ ತಮ್ಮ ಅನನ್ಯತೆಯ ಪ್ರತೀಕವೆಂದು ಭಾವಿಸಿದ ಗೆಳೆಯ ಚಂದ್ರಪ್ಪ ಅವರು ಮುಂಡರ ಮೌಖಿಕ ಅಭಿವ್ಯಕ್ತಿಯನ್ನು ಅನುಭವಿಸಿ ಅನುವಾದಿಸಿದಂತಿದೆ. ಗೀತೆಗಳಲ್ಲಿ ಕಾವ್ಯ ಸೌಂದರ್ಯವಿದೆ. ಸಾಹಿತ್ಯಿಕ ಮೌಲ್ಯವಿದೆ” ಎಂದು ಚಕ್ಕೆರೆ ಶಿವಶಂಕರ್ ಮುನ್ನುಡಿದಿದ್ದಾರೆ.

ಶೀರ್ಷಿಕೆ : ಮುಂಡ ಮತ್ತು ಮುಂಡಾಲಾ (ಜಾನಪದ ಸಾಹಿತ್ಯ) ಲೇಖಕರು : ಶರತ್ ಚಂದ್ರ ಅನುವಾದ: ಪ್ರೊ. ಎನ್. ಚಂದ್ರಪ್ಪ

ಪ್ರಕಾಶಕರು : ಮುಂಡ ಪ್ರಕಾಶನ ಪುಟಗಳು : ಬೆಲೆ:

ಕೃಪೆ : ಸಂಯುಕ್ತ ಕರ್ನಾಟಕ