ವಿಶ್ವದ 7500 ವರ್ಷಗಳ ಇತಿಹಾಸದಲ್ಲಿ ಮಾನವನ ತುಳಿದಿಟ್ಟ ಭಾವನೆಗಳ ಹಾಗೂ ಕಲ್ಪನೆಗಳ ಸುಂದರ ರೂಪ

`ವೋಲ್ಗಾ-ಗಂಗಾದಲ್ಲಿ ಮಾನವ ಜೀವನದ ಸಂಘರ್ಷಗಳ ಚಿತ್ರಣವಿದೆ. ವಿಶ್ವದ 7500 ವರ್ಷಗಳ ಇತಿಹಾಸದಲ್ಲಿ ಮಾನವನ ತುಳಿದಿಟ್ಟ ಭಾವನೆಗಳ ಹಾಗೂ ಕಲ್ಪನೆಗಳ ಸುಂದರ ರೂಪವಿದೆ. ಕತೆಗಳ ರೂಪದಲ್ಲಿ ರಷ್ಯದ ವೋಲ್ಗಾದಿಂದ, ಭಾರತದ ಗಂಗೆಯ ತನಕ ನೆಲೆಸಿರುವ ಜನಾಂಗಗಳ ಉತ್ಥಾನ-ಪತನ, ಸುಖ-ದುಃಖ, ವಿರಹ-ಮಿಲನಗಳ ಜೀವಂತ ಹಾಗೂ ಪ್ರಾಮಾಣಿಕ ಚಿತ್ರಣ ದಿವಂಗತ ರಾಹುಲ ಸಾಂಕೃತ್ಯಾಯನರ ನವೀನ ರೂಪವಾಗಿದ್ದು, ಭಾರತೀಯ ಸಾಹಿತ್ಯದಲ್ಲೇ ಹೊಸ ವಸ್ತುವಾಗಿದೆ.

`ವೋಲ್ಗಾ-ಗಂಗಾರಾಜನೈತಿಕ ಆರ್ಥಿಕ ಆಧಾರಗಳ ಮೇಲೆ ಚಿತ್ರಿತವಾಗಿದ್ದರೂ ಹೃದಯಸ್ಪರ್ಶಿ ಚಿತ್ರಣಗಳಿವೆ. ಇದೇ ಈ ಕೃತಿಯ ವಿಶೇಷತೆ. ಪ್ರಪಂಚದ ಯಾವ ಭಾಷೆಯಲ್ಲಿಯೂ ಈ ತನಕ ಇದಕ್ಕೆ ಸಮನಾದ ಇನ್ನೊಂದು ಕೃತಿ ಪ್ರಕಟವಾಗಿಲ್ಲ.

ಮಾನವ ಸಮಾಜ ಒಮ್ಮೆಯೇ ಇಂದಿನ ಪರಿಸ್ಥಿತಿಗೆ ತಲುಪಲಿಲ್ಲ. ಈ ಸ್ತಿತಿಗೆ ತಲುಪಬೇಕಾದರೆ ಅದು ಅನೇಕಾನೇಕ ಸಂಘರ್ಷಗಳನ್ನು ಎದುರಿಸಬೇಕಾಯಿತು. ಈ ಪ್ರಗತಿಯನ್ನು ಸುಲಭವಾಗಿ ತಿಳಿದುಕೊಳ್ಳುವ ಉದ್ದೇಶದಿಂದಲೇ ನಾನು ಈ ಕೃತಿಯನ್ನು ರಚಿಸಿದ್ದೇನೆ ಎನ್ನುತಾರೆ ಲೇಖಕ ರಾಹುಲ್ ಸಾಂಕೃತ್ಯಾಯನ.

ಈ ಕೃತಿಯ ಮೊದಲ ನಾಲ್ಕು ಕತೆಗಳ ಹೆಸರು ಅನುಕ್ರಮವಾಗಿ ನಿಶಾ, ದಿವಾ, ಅಮೃತಾಶ್ವ, ಪುರುಹೂತ ಎಂದಿವೆ. ಈ ನಾಲ್ಕು ಕತೆಗಳಲ್ಲಿ ಕಿ.ಪೂ. 6000 ದಿಂದ ಕಿ.ಪೂ. 2500 ರವರೆಗಿನ ಸಾಮಾಜಿಕ ಚಿತ್ರಣವಿದೆ. ಅವು ಪ್ರಾಗೈತಿಹಾಸಿಕ ಕಾಲಕ್ಕೆ ಸೇರಿದವು. ಹಾಗೆಯೇ ಆ ಕತೆಗಳೂ. ಆದುದರಿಂದ ಆ ಕತೆಗಳಲ್ಲಿ ಕಲ್ಪನಾ ಭಾಗವೇ ಅಧಿಕವೆನಿಸಿದರೂ ಇವು ಕೇವಲ ಕಲ್ಪನಾಜನ್ಯವೆಂದು ಹೇಳಲಾಗುವುದಿಲ್ಲ. ಇವುಗಳಲ್ಲಿ ಕಾಣುವ ಅನೇಕ ಪ್ರಾಮುಖ್ಯ ಅನಿಸಿಕೆಗಳು ರಾಹುಲ್ ಜೀ ಯವರ ಹಿಂದೀ-ಐರೋಪ್ಯ ಹಾಗೂ ಹಿಂದೀ-ಇರಾನೀ ಭಾಷಾ ಶಾಸ್ತ್ರಾಧ್ಯಯನದ ಪರಿಣಾಮವೇ ಆಗಿದೆ.

ಪುರುಧಾನ, ಅಂಗಿರಾ, ಸುದಾಸ, ಪ್ರವಾಹಣ – ಇವು ನಾಲ್ಕು ಮುಂದಿನ ಕಥೆಗಳು. ವೇದ, ಬ್ರಾಹ್ಮಣ, ಮಹಾಭಾರತ, ಪುರಾಣಗಳು ಹಾಗೂ `ಅಟ್ಠ ಕಥಾಎಂಬ ಹೆಸರಿನಿಂದ ಪ್ರಸಿದ್ಧವಾದ ಭೌದ್ಧ ಗ್ರಂಥಗಳ ಭಾಷ್ಯ – ಇವೆಲ್ಲ ಈ ನಾಲ್ಕು ಕತೆಗಳಿಗೆ ಪ್ರಮಾಣವಾಗಿವೆ. ಸುದಾಸ ಎಂಬ ಕತೆಗೆ ಸ್ವತಃ ಋಗ್ವೇದವೇ ಆಧಾರವಾಗಿದೆ. ಬಹು ಮಂದಿ ಪಾಠಕರನ್ನು -ಬೌದ್ಧ ಅಬೌದ್ಧ- ಎಲ್ಲರನ್ನೂ ಕೆರಳಿಸುವ ಪ್ರವಾಹಣ ಜೈವಲಿಯ ಕತೆಗೆ ಛಾಂದೋಗ್ಯ, ಬೃಹದಾರಣ್ಯಕೋಪನಿಷತ್ತುಗಳಲ್ಲದೇ ಮೇಲೆ ಹೇಳಿದ ಅಟ್ಠಕತೆಗಳೂ ಪ್ರಮಾಣಗಳಾಗಿವೆ. ಈ ಕತೆಗಳಲ್ಲಿ ಕಿ.ಪೂ.2000 ದಿಂದ ಕಿ.ಪೂ.700 ರವರೆಗಿನ ಸಾಮಾಜಿಕ ವಿಕಾಸವನ್ನು ಚಿತ್ರಿಸುವ ಪ್ರಯತ್ನ ಮಾಡಲಾಗಿದೆ.

ಮುಂದಿನ ಕಥೆ ಬಂಧುಲಮಲ್ಲನದು. (ಕಿ.ಪೂ.490). ಈ ಕತೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಬೌದ್ಧ ಗ್ರಂಥಗಳಿಂದ ತೆಗೆದುಕೊಳ್ಳಲಾಗಿದೆ. ಬೌದ್ಧ ಗ್ರಂಥಗಳಲ್ಲಿ ಈ ಕುರಿತು ಎಷ್ಟೊಂದು ವಿಶಾಲ ಸಾಮಾಗ್ರಿಗಳಿವೆ ಎಂದರೆ ಆ ಕಾಲದ ಚಿತ್ರಣವನ್ನು ಇನ್ನೂ ವಿಶಾಲವಾಗಿ ಕೊಡುವುದಕ್ಕಾಗಿ ರಾಹುಲ್ಜೀಯವರು `ಸಿಂಹ ಸೇನಾಪತಿಎಂಬ ಬೃಹತ್ ಕಾದಂಬರಿಯನ್ನೇ ಬರೆಯಬೇಕಾಯಿತು.

ನಾಗದತ್ತ-ಇದು ಹತ್ತನೆಯ ಕತೆ. ಕೌಟಿಲ್ಯನ ಅರ್ಥಶಾಸ್ತ್ರ, ಯವನ ಯಾತ್ರಿಕರ ಯಾತ್ರಾ ವೃತ್ತಾಂತ, ಶ್ರೀ ಜಯಸವಾಲರ `ಹಿಂದು ಪಾಲಿಟಿಗಳನ್ನು ಪಾಠಕರು ಓದಿದರೆ, ಎಲ್ಲ ಶಾಲಾ ಕಾಲೇಜುಗಳಲ್ಲಿ ಕಲಿಸಲಾಗುವ ವಿನ್ಸೆಂಟ್ ಸ್ಮಿತ್ ಅವರ ಇತಿಹಾಸವನ್ನು ನೋಡಿದರೆ, ಇವುಗಳಲ್ಲೆಲ್ಲ ರಾಹುಲ್ಜೀ ಚಿತ್ರಿಸಿದ ನಾಗದತ್ತನ ಚಿತ್ರಣದ ಐತಿಹಾಸಿಕ ತಥ್ಯ ಕಾಣಿಸುವುದರಲ್ಲಿ ಸಂಶಯವಿಲ್ಲ.

ಹನ್ನೊಂದನೆಯ ಕಥೆ `ಪ್ರಭಾಕಥಾರೂಪದಲ್ಲಿ ಒಳ್ಳೆಯ ಹೆಸರು ಗಳಿಸಿದೆ. ಆ ಕತೆಗೆ ಮಹಾಕವಿ ಅಶ್ವಘೋಷನ `ಬುದ್ದಚರಿತ‘, `ಸೌಂದರನಂದಕಾವ್ಯಗಳು ಹಾಗೂ ಸಂಸ್ಕೃತದ ಎಲ್ಲಾ ನಾಟಕ ಸಾಹಿತ್ಯ ಆಧಾರವಾಗಿವೆ. ಅಲ್ಲದೆ ವಿಂಟರ್ ನಿಜ್ ಬರೆದ `ಭಾರತೀಯ ಸಾಹಿತ್ಯದ ಇತಿಹಾಸವಿದೆ; ರೀಜ್ ಡೇವಿಡ್ಸ್ ಇವರ `ಭೌದ್ಧ ಭಾರತವಿದೆ. ಈ ಕತೆಯ ಕಾಲ ಕಿ.ಪೂ.50.

ಹನ್ನೆರಡನೆಯ ಕತೆ `ಸುಪರ್ಣ ಯೌಧೇಯಗುಪ್ತರ ಕಾಲದ ಕತೆ. ಇದರ ಕಥಾಸಾಮಾಗ್ರಿ ಎಂದೂ ಅಳಿಸಿ ಹೋಗದ ಗುಪ್ತಕಾಲೀನ ಅಭಿಲೇಖಗಳಲ್ಲಿಯೂ, ನಾವು ನಿತ್ಯವೂ ಪಠಿಸುತ್ತಿರುವ ರಘುವಂಶ, ಕುಮಾರಸಂಭವ, ಅಭಿಜ್ಞಾನ ಶಾಕುಂತಲಗಳಿಂದ ತೊಡಗಿ ಪಾಣಿನಿಯ ಕೊಡುಗೆಗಳಲ್ಲಿ, ಚೀನೀ ಯಾತ್ರಿಕ ಫಾಹಿಯಾನನ ಯಾತ್ರಾ ವೃತ್ತಾಂತದಲ್ಲಿ ದೊರಕುತ್ತದೆ.

ಬಾಣದಂತೆ ಮನಸ್ಸಿಗೆ ನಾಟುವ `ದುರ್ಮುಹದಿಮೂರನೆಯ ಕತೆ. ಏನು ಮಾಡಲಿ? ಅದಕ್ಕೆ ಆಧಾರಭೂತವಾಗಿ `ಹರ್ಷ ಚರಿತವಿದೆ, `ಕಾದಂಬರಿಇದೆ. ಹ್ಯೂವೆನ್ ತ್ಸಾಂಗ್, ಇತ್ಸಿಂಗರ ಯಾತ್ರಾ ವೃತ್ತಾಂತಗಳಿವೆ.

ಹದಿನಾಲ್ಕನೆಯ ಕತೆಯ ಕಾಲ ಕ್ರಿ.ಶ. 1200, ಹೆಸರು `ಚಕ್ರಪಾಣಿ‘. ಈ ಕತೆಯ ಸ್ರೋತವನ್ನು ನಾವು ನೈಷದ ಕಾವ್ಯದಲ್ಲಿ ಹುಡುಕಬೇಕಾಗುವುದು. `ಖಂಡನ ಖಂಡಖಾದ್ಯಕೃತಿಯಲ್ಲಿ ಅರಸಬೇಕಾಗುವುದು. ಅಲ್ಲದೆ ಆ ಕಾಲದ ಶಿಲಾಲೇಖ ಅಭಿಲೇಖಗಳಲ್ಲಿಯೂ.

`ಬಾಬಾ ನೂರುದ್ದೀನ್ಕತೆಯಿಂದ ತೊಡಗಿ `ಸುಮೇರನ ಕತೆಯ ತನಕದ ಕಾಲ ಕಿ.ಶ. 10 ನೆಯ ಶತಮಾನದಿಂದ ತೊಡಗಿ 20 ನೇ ಶತಮಾನದ ತನಕ. ಈ ಎಲ್ಲಾ ಕತೆಗಳ ಹಿಂದೆಯೂ ಹಿಂದಿನ ಕತೆಗಳಿಗಿರುವಂತೆ ಐತಿಹಾಸಿಕ ಪ್ರಾಮಾಣಿಕತೆ ಇದೆ ಎಂಬುದರಲ್ಲಿ ಸಂಶಯವಿಲ್ಲ.

ಎನ್ನುತ್ತಾರೆ ಈ ಕೃತಿಗೆ ಮುನ್ನುಡಿ ಬರೆದ ಭದಂತ ಆನಂದ ಕೌಸಲ್ಯಾಯನ ಅವರು.

ಶೀರ್ಷಿಕೆ : `ವೋಲ್ಗಾ-ಗಂಗಾಲೇಖಕರು : ರಾಹುಲ್ ಸಾಂಕೃತ್ಯಾಯನ ಅನುವಾದ: ಬಿ ಎಂ ಶರ್ಮಾ ಪ್ರಕಾಶಕರು : ನವ ಕರ್ನಾಟಕ ಪ್ರಕಾಶನ ಪುಟಗಳು : 322 ಬೆಲೆ: ರೂ.160/-

ಪುಸ್ತಕ ಬಿಡುಗಡೆ

ಜುಲೈ ೨೦ರಂದು ಸಂಜೆ ಬೆಂಗಳೂರು ಬಸವನಗುಡಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿವೆಬ್ ವಿಹಾರಹಾಗೂ ಅವಕಾಶ ಅಪಾರಹೊಸ ಪುಸ್ತಕಗಳು ಬಿಡುಗಡೆಯಾಗಲಿವೆ.

ಬಿಡುಗಡೆಯಾಗುತ್ತಿರುವ ಪುಸ್ತಕಗಳ ಪರಿಚಯ ಹೀಗಿದೆ:

೧. ವೆಬ್ ವಿಹಾರ – ಅಂತರಜಾಲ ಲೋಕಕ್ಕೊಂದು ಬೆಳಕಿಂಡಿ
ಇದು ಅಂತರಜಾಲ (ಇಂಟರ್ ನೆಟ್) ಹಾಗೂ ವಿಶ್ವವ್ಯಾಪಿ ಜಾಲದ (WWW) ಸಂಕ್ಷಿಪ್ತ ಪರಿಚಯ ನೀಡಿ ಅದರ ಅನೇಕ ಸೌಲಭ್ಯಗಳನ್ನು ಬಳಸಲು ಓದುಗರಿಗೆ ನೆರವಾಗುವ ಪುಸ್ತಕ. ಮಾಹಿತಿ ಎಂದರೇನು ಎಂಬಲ್ಲಿಂದ ಪ್ರಾರಂಭಿಸಿ ಗಣಕ ಜಾಲಗಳು, ಅಂತರಜಾಲದ ಹುಟ್ಟು, ವಿಶ್ವವ್ಯಾಪಿ ಜಾಲ ಬೆಳೆದ ಬಗೆ, ಇಮೇಲ್, ಬ್ಲಾಗಿಂಗ್, ಇ-ಶಾಪಿಂಗ್, ಆನ್ ಲೈನ್ ಬ್ಯಾಂಕಿಂಗ್,
ಬ್ಲಾಗಿಂಗ್, ವಿಶ್ವವ್ಯಾಪಿ ಜಾಲವನ್ನು ಕಾಡುತ್ತಿರುವ ಸಮಸ್ಯೆಗಳು (ವೈರಸ್, ಫಿಷಿಂಗ್, ಮಾಲ್‌ವೇರ್, ಸ್ಪಾಮ್ ಇತ್ಯಾದಿ ) ಮುಂತಾದ ಅನೇಕ ವಿಷಯಗಳನ್ನು ಇದು ವಿವರಿಸುತ್ತದೆ. ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಸ್ಥಿತಿಗತಿಗಳ ಬಗೆಗೂ ಬಹಳಷ್ಟು ಮಾಹಿತಿ ಇದೆ. ಶ್ರೀ ನಾಗೇಶ ಹೆಗಡೆಯವರು ಮುನ್ನುಡಿ ಬರೆದಿದ್ದಾರೆ.

೨. ಅವಕಾಶ ಅಪಾರ
ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ಲೇಖಕರು ಉದ್ಯೋಗ ವಿಜಯಕ್ಕೆ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ. ಅಗತ್ಯವಿದ್ದ ಕಡೆ ಇತ್ತೀಚಿನ ಮಾಹಿತಿ ಸೇರಿಸಲು ಲೇಖನಗಳನ್ನು ಪರಿಷ್ಕರಿಸಲಾಗಿದೆ. ಒಟ್ಟು ಮೂವತ್ತಾರು ಲೇಖನಗಳಿರುವ ಈ ಪುಸ್ತಕಕ್ಕೆ ಡಾ. ಯು. ಬಿ. ಪವನಜರ ಮುನ್ನುಡಿ ಇದೆ.

ಎರಡೂ ಕೃತಿಗಳ ಲೇಖಕ ಶ್ರೀನಿಧಿ ಟಿ ಜಿ ಯವರು ಹವ್ಯಾಸಿ ವಿಜ್ಞಾನ ಬರಹಗಾರ ಹಾಗೂ ವೃತ್ತಿಪರ ಸಾಫ್ಟ್‌ವೇರ್ ಇಂಜಿನಿಯರ್.