ತನ್ನ ಕಾಲದ ಸಮಕಾಲೀನ ಸಮಸ್ಯೆಗಳನ್ನು ಕ್ಯಾಮರಾ ಕಣ್ಣಿನ ಮೂಲಕ ಜಗತ್ತಿಗೆ ವಿಶ್ಲೇಷಿಸಿ ತೋರಿಸಿದ ಮೇರು ಪ್ರತಿಭೆ

ಕನ್ನಡದ ಪ್ರಸಿದ್ಧ ಸಾಹಿತಿಗಳಾದ ಕುಂ. ವೀರಭದ್ರಪ್ಪನವರು ರಚಿಸಿರುವ `ಚಾಪ್ಲಿನ್ಕೃತಿ ಜಗತ್ತಿನ ದೊಡ್ಡ ಕಲಾವಿದ ಚಾಪ್ಲಿನ್ ಜೀವನ ಕುರಿತದ್ದು. ಇದೊಂದು ಅಪರೂಪದ ಕೃತಿ.

ತಾನು ನಿರ್ಮಿಸಿದ ಚಲನಚಿತ್ರ ಕಲಾಕೃತಿಗಳ ಮುಖೇನ ಜಗತ್ತಿನ ಜೊತೆ ಮಾತನಾಡಿದ ಚಾಪ್ಲಿನ್ ಸಿನಿಮಾಕ್ಕೆ ಹೊಸ ಭಾಷ್ಯ ಬರೆದ ಮಹಾನ್ ಕಲಾವಿದ. ಅವನ ಬಾಲ್ಯಕಾಲದ ದಾರುಣಮಯ ಸಂಕಷ್ಟಗಳ ಅನುಭವ, ಸ್ವಪ್ರತಿಭೆಯ ನೆಲೆಯಲ್ಲಿ ಅವನು ಮಹಾನ್ ಕಲಾಕಾರನಾಗಿ ಅರಳಿದ ಬಗೆ ಎಲ್ಲವನ್ನೂ ಕುಂ. ವೀರಭದ್ರಪ್ಪನವರು ಆಪ್ತ ಭಾವದಲ್ಲಿ ಕಟ್ಟಿಕೊಟ್ಟಿದ್ದಾರೆ.

ಚಾಪ್ಲಿನ್ ಜೀವನ ಮಹಾಯಾನ ವ್ಯಕ್ತಿಯೊಬ್ಬನ ಬದುಕಿನ ಚಿತ್ರಣ ಮಾತ್ರವಾಗದೆ ಜಾಗತಿಕ ವ್ಯಾಪ್ತಿಯ ವಿದ್ಯಮಾನಗಳ ವಿಮರ್ಶೆಯೂ ಆಗಿರುವುದು ಆ ವ್ಯಕ್ತಿತ್ವದ ಔನತ್ಯವನ್ನು ಮನಗಾಣಿಸುತ್ತದೆ.

ತನ್ನ ಕಾಲದ ಸಮಕಾಲೀನ ಸಮಸ್ಯೆಗಳನ್ನು ಕ್ಯಾಮರಾ ಕಣ್ಣಿನ ಮೂಲಕ ಜಗತ್ತಿಗೆ ವಿಶ್ಲೇಷಿಸಿ ತೋರಿಸಿದ ಮೇರು ಪ್ರತಿಭೆ ಇದು. ನಗು ಮತ್ತು ಸಂಕಟಗಳನ್ನು ಒಟ್ಟೊಟ್ಟಿಗೆ ಮುಖಾಮುಖಿಯಾಗಿಸುತ್ತಲೇ ಜೀವನ ಪ್ರೀತಿಯನ್ನು ಶೋಧಿಸಿದ ಚಾಪ್ಲಿನ್ ಶೈಲಿ ಅನನ್ಯವಾದುದು ಎಂಬುದಾಗಿ ಬೆನ್ನುಡಿಯಲ್ಲಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಬರೆದಿದ್ದಾರೆ

ಶೀರ್ಷಿಕೆ : ಚಾಪ್ಲಿನ್ – ಜೀವನ ಮತ್ತು ಸಾಧನೆ ಲೇಖಕರು: ಕುಂ. ವೀರಭದ್ರಪ್ಪ ಪ್ರಕಾಶಕರು : ಕನ್ನಡ ಪುಸ್ತಕ ಪ್ರಾಧಿಕಾರ ಪುಟಗಳು : 262 ಬೆಲೆ: ರೂ.120/-

ಮನುಷ್ಯ ಬದುಕಿನ ಮಹತಿಯನ್ನು ಪ್ರತಿಪಾದಿಸುವ ದಾಸರ ಪದಗಳು

ಈಸಬೇಕು ಇದ್ದು ಜಯಿಸಬೇಕು ಎಂಬ ಈ ಕೀರ್ತನೆಗಳ ಸಂಕಲನ ವಿಭಿನ್ನ ಹಿನ್ನೆಲೆಯಿಂದ ಬಂದ, ಹರಿಪಾದಾರ್ಪಿತಪ ಮನಸ್ಸಿನ ಭಕ್ತ ಕವಿಗಳಾದ ದಾಸರು ರಚಿಸಿದ ಕೀರ್ತನೆಗಳಲ್ಲಿ ಸಮಾಜಮುಖಿಯಾದ ಕೀರ್ತನೆಗಳನ್ನು ಒಂದೆಡೆ ಸಂಕಲಿಸಿ ಉಚಿತ ಟಿಪ್ಪಣಿಗಳೊಡನೆ ಸಿದ್ಧಪಡಿಸಿದ ಕೃತಿ ಇದು.

ಹರಿದಾಸರೆಲ್ಲ ಒಂದೇ ವರ್ಗ, ವರ್ಣ, ಜಾತಿ ಮತ್ತು ಪ್ರದೇಶದಿಂದ ಬಂದವರಲ್ಲ. ಅವರ ನೆಲೆ, ಹಿನ್ನೆಲೆ, ಸಾಧನೆಗಳು, ಚಿಂತನೆಗಳು ಸಾಕಷ್ಟು ವಿಫುಲತೆಯನ್ನು, ವಿವಿಧತೆಯನ್ನು ಧಾರಣ ಮಾಡಿಕೊಂಡಿವೆ. ಈ ಎಲ್ಲ ಕೀರ್ತನೆಗಳ ಮೂಲಸ್ಥಾಯಿ ಹರಿಭಕ್ತಿಯೇ ಆಗಿದ್ದರೂ ಆ ಭಕ್ತಿಯನ್ನು ಅವರು ಪ್ರತಿಪಾದಿಸುವ ರೀತಿಗಳು ಅವರವರ ಅನುಭವ, ಅಭ್ಯಾಸ ಮತ್ತು ಅನುಭಾವದ ಹಿನ್ನೆಲೆಯಲ್ಲಿ ಅನನ್ಯತೆಯ ಸತ್ವವನ್ನು ಗರ್ಭಕರಿಸಿಕೊಂಡಿವೆ. ಈ ಮಾನವ ಜೀವನ ಭಗವಂತನ ಯೋಜನೆಯಂತೆ ಕಲ್ಪನೆಯಂತೆ, ಸೂತ್ರದಂತೆ ನಡೆಯುವ ಪರನಿಯಂತ್ರಿತ ವ್ಯವಸ್ಥೆ ಎಂಬ ಆಶಯ ಇವುಗಳಲ್ಲಿ ಸೂಚಿತವಾಗಿದ್ದರೂ, ಈ ದೇಹ ಮತ್ತು ಬದುಕುಗಳು ನೀರ ಮೇಲಣ ಗುಳ್ಳೆಗಳು, ಅವುಗಳಿಗೆ ಸರ್ವತಂತ್ರ ಸ್ವಾತಂತ್ರ್ಯ ಇಲ್ಲ ಮತ್ತು ಅವು ಕ್ಷಣಿಕ ಎಂಬ ನಿವೃತ್ತಿಪರ ಸಂವೇದನೆಗಳು ಇಲ್ಲಿ ಹೂರಣಗೊಂಡಿದ್ದರೂ, ಅವುಗಳ ಹಿನ್ನೆಲೆಯಲ್ಲಿ ವ್ಯಕ್ತಾವ್ಯಕ್ತವಾಗಿ ಮನುಷ್ಯ ಬದುಕಿನ ಮಹತಿಯನ್ನು ಅವು ಪ್ರತಿಪಾದಿಸುತ್ತವೆ.

ಜೀವನದ ಸುಖ ದುಃಖಗಳ ಜಂಜಾಟಗಳನ್ನು ಎದುರಿಸಿ ಸಾಹಸದಿಂದ ಅವುಗಳನ್ನು ದಾಟಬೇಕು. ಹಾಗೆ ಮಾಡುವ ಮೂಲಕ ಬದುಕನ್ನು ಜಯಿಸಿ ಭಗವಂತನ ಸಾನಿಧ್ಯವನ್ನು ಸೇರಬೇಕು ಎಂಬ ಧ್ವನಿಗಳೇ ಇಲ್ಲಿ ಬಹುಪಾಲು ಕಿರ್ತನೆಗಳಲ್ಲಿ ವ್ಯಕ್ತವಾಗುತ್ತವೆ. ಇಂಥದೊಂದು ವಿಶಿಷ್ಟ ಕೀರ್ತನ ಸಂಕಲನವನ್ನು ಸಂಪಾದಿಸಿಕೊಟ್ಟ ಪುರಂದರದಾಸ ಅಧ್ಯಯನ ಪೀಠದ ಸಂಚಾಲಕರಾದ ಪ್ರೊ. ಎ. ವಿ. ನಾವಡ ಅವರನ್ನು ವಿಶ್ವವಿದ್ಯಾಲಯದ ಪರವಾಗಿ ಅಭಿನಂದಿಸುತ್ತೇನೆ.

ಎಂಬುದಾಗಿ ಬೆನ್ನುಡಿಯಲ್ಲಿ ಡಾ. ಎಚ್.ಜೆ.ಲಕ್ಕಪ್ಪಗೌಡ ಬರೆದಿದ್ದಾರೆ

ಶೀರ್ಷಿಕೆ : ಈಸಬೇಕು ಇದ್ದು ಜಯಿಸಬೇಕು – ಸಮಾಜಮುಖಿ ಕೀರ್ತನೆಗಳು ಸಂಪಾದಕರು: : ಪ್ರೊ. ಎ. ವಿ. ನಾವಡ ಪ್ರಕಾಶಕರು : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಪುಟಗಳು : 108 ಬೆಲೆ: ರೂ.60/-