ಪ್ರತಿಭೆ ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ಅಮಿತಾಬ್

ಭಾರತೀಯ ಚಿತ್ರರಂಗದ ದೊಡ್ಡ ಹೆಸರುಗಳಲ್ಲಿ ಅಮಿತಾಭ್ ಬಚ್ಚನ್ ದೊಡ್ಡ ಹೆಸರು. ಪ್ರತಿಭೆ ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ಅಮಿತಾಬ್ ಒಂದರ್ಥದಲ್ಲಿ ಆಧುನಿಕ ಹಿಂದಿ ಚಿತ್ರರಂಗದ ಪ್ರತಿನಿಧಿಯಂತೆ ಕಾಣಿಸಿಕೊಂಡವರು. ಈ ವರ್ಣರಂಜಿತ ನಟನ ಬದುಕಿನ ವಿವರಗಳನ್ನು ಎನ್. ಸಿ. ಮಹೇಶ್ ಒಂದೆಡೆ ಕಲೆ ಹಾಕಿದ್ದಾರೆ. ವಿವಿಧ ಮೂಲಗಳ ಮೂಲಕ ಸ್ವಾರಸ್ಯಕರ ಮಾಹಿತಿ ಒಗ್ಗೂಡಿಸಿ ಕನ್ನಡಕ್ಕೆ ತಂದಿದ್ದಾರೆ.

ಒಟ್ಟು ಇಪ್ಪತ್ತಮೂರು ಅಧ್ಯಾಯಗಳಲ್ಲಿ ಬಚ್ಚನ್ನರ ಜೀವನಗಾಥೆಯನ್ನು ಕಟ್ಟಿಕೊಡಲು ಮಹೇಶ್ ಯತ್ನಿಸಿದ್ದಾರೆ. ಬಾಲ್ಯದ ದಿನಗಳಿಂದ ಹಿಡಿದು ಇವತ್ತಿನ ಅಮಿತಾಬ್ ವರೆಗಿನ ಚಿತ್ರಣ ಪುಸ್ತಕದಲ್ಲಿದೆ. ಅಮಿತಾಬ್ ಅನಿಸಿಕೆಗಳು, ಆತನ ಬಗ್ಗೆ ಇತರರ ಅನಿಸಿಕೆಗಳು, ಪತ್ನಿ ಹಾಗೂ ಪುತ್ರ ಕಂಡಂತೆ ಅಮಿತಾಬ್- ಹೀಗೆ ಅಪರೂಪದ ವ್ಯಕ್ತಿತ್ವವನ್ನು ಭಿನ್ನ ದೃಷ್ಟಿಕೋನಗಳ ಮೂಲಕ ಅರ್ಥ ಮಾಡಿಸುವ ಪ್ರಯತ್ನ ಮೆಚ್ಚುಗೆ ಗಳಿಸುತ್ತದೆ.

`ಅಮಿತಾಭ್ : ಒಂದು ಕಲಾಗಾಥೆಕೃತಿಗೆ ಜನಪ್ರಿಯ ಕಥನ ಶೈಲಿಯ ಸರಾಗ ದಕ್ಕಿದೆ. ಗೊಂದಲವಿಲ್ಲದ ನೇರ ಭಾಷೆಯಲ್ಲಿ ಹಾಗೂ ಲೇಖಕರು ತಮಗೆ ದಕ್ಕಿದ ನಟನನ್ನು ಓದುಗರಿಗೆ ಪರಿಚಯಿಸುವ ಪ್ರಮಾಣಿಕತೆ ಈ ಪುಸ್ತಕದಲ್ಲಿ ಕಾಣುತ್ತದೆ. ಆಕರ್ಷಕ ಮುಖಪುಟ ಗಮನ ಸೆಳೆಯುತ್ತದೆ.

ಒಳಪುಟಗಳಲ್ಲಿ ಕೆಲವು ಚಿತ್ರ ಇದ್ದರೂ, ಅಮಿತಾಬ್ ಅವರ ಸಿನಿಮಾ ಜೀವನ ಬಿಂಬಿಸುವ ಚಿತ್ರಮಾಲಿಕೆಯನ್ನು ಸಂಗ್ರಹಿಸಿ ನೀಡಬಹುದಿತ್ತು. ಅಮಿತಾಭ್ ರನ್ನೊಮ್ಮೆ ಭೇಟಿ ಮಾಡಿ, ವಿಶೇಷ ಸಂದರ್ಶನ ನಡೆಸಿದ್ದರೆ ಪುಸ್ತಕದ ಅರ್ಥ ಸಾಧ್ಯತೆ ಇನ್ನಷ್ಟು ಹೆಚ್ಚುತ್ತಿತ್ತು.

ಶೀರ್ಷಿಕೆ : ಅಮಿತಾಭ್ : ಒಂದು ಕಲಾಗಾಥೆ ಲೇಖಕರು : ಎನ್. ಸಿ. ಮಹೇಶ್ ಪ್ರಕಾಶಕರು : ರೂಪ ಪ್ರಕಾಶನ ಪುಟಗಳು : 120 ಬೆಲೆ: ರೂ.60/-

ಕೃಪೆ : ಪ್ರಜಾವಾಣಿ

ಚಿತ್ರದುರ್ಗದ ಕೋಟೆ ಪರಿಸರದ ದೇವಾಲಯಗಳು

ಈ ವಿಷಯದ ಬಗ್ಗೆ ಇದೇ ಮೊದಲ ಬಾರಿಗೆ ಇಂತಹದೊಂದು ಪುಸ್ತಕ ಹೊರಬಂದಿದೆ. ಎನ್. ಎಸ್. ಮಹಂತೇಶ ಇನ್ನೂ ಯುವಕರಾದರೂ ಆಳವಾದ ಅಧ್ಯಯನ ಹಾಗೂ ಅಗಾಧವಾದ ಕ್ಷೇತ್ರಕಾರ್ಯದ ಮೂಲಕ ಈಗಾಗಲೇ ಚಿತ್ರದುರ್ಗ ಇತಿಹಾಸದ ಬಗ್ಗೆ ಇರುವ ತಕ್ಕ ಮಟ್ಟಿನ ಸಂಶೋಧನಾ ಗ್ರಂಥಗಳ ಜತೆಗೆ ಮತ್ತೊಂದು ಹೊಸ ವಿಷಯವನ್ನು ಸೇರ್ಪಡೆ ಮಾಡಿದ್ದಾರೆ.

ಹುಲ್ಲೂರು ಶ್ರೀನಿವಾಸ ಜೋಯಿಸ, ಲಕ್ಷ್ಮಣ ತೆಲಗಾವಿ, ಬಿ. ರಾಜಶೇಖರಪ್ಪ, ಶ್ರೀ ಶೈಲಾರಾಧ್ಯ – ಮುಂತಾದ ನಾಡಿನ ಹೆಸರಾಂತ ಸಂಶೋಧಕರು ಚಿತ್ರದುರ್ಗದ ಇತಿಹಾಸದ ಬಗ್ಗೆ ಅಪಾರ ಸಂಶೋಧನೆ ಮಾಡಿದ್ದಾರೆ. ಅವರ ಕೆಲಸದ ಮುಂದುವರಿಕೆಯಾಗಿ ಪುಸ್ತಕ ಗಮನ ಸೆಳೆಯುತ್ತದೆ.

ಶೀರ್ಷಿಕೆ : ಚಿತ್ರದುರ್ಗದ ಕೋಟೆ ಪರಿಸರದ ದೇವಾಲಯಗಳು ಲೇಖಕರು : ಎನ್. ಎಸ್. ಮಹಂತೇಶ ಪ್ರಕಾಶಕರು : ರೇಣುಕ ಪ್ರಕಾಶನ ಪುಟಗಳು : 160 ಬೆಲೆ: ರೂ.100/-

ಕೃಪೆ : ಸುಧಾ