ಜನಪದ ದನಿ ಪ್ರಾದೇಶಿಕ ಬನಿ

ಕಲಿಗಣನಾಥ ಗುಡದೂರು ಅವರ ಎಂಟು ಕಥೆಗಳ ಸಂಕಲನ `ಮತಾಂತರ‘. ಮಾಜಿಕ, ರಾಜಕೀಯ, ಆರ್ಥಿಕವಾದ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಅವುಗಳಿಗೆ ಮುಖಾಮುಖಿಯಾಗುವ, ನೊಂದ ಮನಸ್ಸುಗಳಿಗೆ ಸಾಂತ್ವನ ಬಯಸುವ ಮಾನವಪರ ಕಾಳಜಿ ಸಂಕಲನದ ಕಥೆಗಳಲ್ಲಿ ಪ್ರಧಾನ ಆಶಯವಾಗಿ ಬಿಂಬಿತವಾಗಿದೆ.

ಆಧುನಿಕತೆಯ ಒತ್ತಡದಲ್ಲಿ ತಮ್ಮ ಅಸ್ತಿತ್ವಗಳನ್ನು ಉಳಿಸಿಕೊಳ್ಳುವ ತವಕದಲ್ಲಿ ಗ್ರಾಮೀಣ ಸಮುದಾಯಗಳು, ದುಡಿಯುವ ವರ್ಗಗಳು ಇವೆ. ಈ ಸಂದರ್ಭದಲ್ಲಿ ಶ್ರಮಿಕ ಸಂಸ್ಕೃತಿಗಳಿಗೆ ದನಿಯಾಗಬೇಕಾದ ಅಗತ್ಯವಿದೆ ಎಂಬುದನ್ನು ಇಲ್ಲಿನ ಕಥೆಗಳು ಸೂಚಿಸುತ್ತವೆ. ಸಾಮಾಜಿಕವಾಗಿ ನಿಕೃಷ್ಟವಾದ, ಅವಕೃಪೆಗೆ ಗುರಿಯಾದ ಸಂಗತಿಗಳು ಕಥೆಗಳ ಆವರಣವನ್ನು ಹೊಕ್ಕಿರುವುದು ಗಮನಾರ್ಹ ಸಂಗತಿ.

`ಈ ದಾಹ ದೊಡ್ಡದು‘, `ಕಾಗದದ ದೋಣಿಕಥೆಗಳ ಆವರಣ ಮೇಲ್ನೋಟದಲ್ಲಿ ಸಾಮಾನ್ಯವೆನಿಸಿದರೂ ಮನಕಲಕುವ ಸಂಗತಿಯನ್ನು ಹೊತ್ತಿವೆ. ಆಹಾರ ತಯಾರಿಸುವ ಕಾರ್ಖನೆ ಅಮಾಯಕ ಜನರ ಶೋಷಣಗೆ ಕಾರಣವಾಗುವ ಭಯಾನಕ ಸ್ಥಿತಿಯನ್ನು ಚಿತ್ರಿಸುವಾಗ ಮನುಷ್ಯನ ದಾಹ ಎಷ್ಟು ದೊಡ್ಡದು ಎಂಬ ಗಾಬರಿಯಲ್ಲೇ ಓದುಗರಿಗೆ ಅನ್ನದ ಸಮಸ್ಯೆಯ ಹೊಸ ಅನುಭವವೊಂದು ಕಾದಿರುತ್ತದೆ. `ಕಾಗದದ ದೋಣಿಕತೆಯಲ್ಲಿ ಪಾಯಿಖಾನೆ ಮಾಲೀಕ ರುದ್ರಪ್ಪ ಮತ್ತು ಅವನ ಸೇವಕ ಕರ್ಣ ಪಾತ್ರಧಾರಿಗಳು; ಶೌಚಾಲಯದಲ್ಲಿನ ಕೆಲಸಗಾರರ ಸ್ಥಿತಿಗತಿಗಳು, ಅಲ್ಲಿಗೆ ಬರುವವರ ತಳಮಳ – ಇವುಗಳೆಲ್ಲಾ ಕಥೆಯಲ್ಲಿ ಸೇರಿಕೊಂಡಿವೆ. ದಿನನಿತ್ಯ ನೋಡುವ ದೃಶ್ಯವಾದರೂ ಸಮಸ್ಯೆ ಗಂಭೀರವಾದುದು.

ಕೌಟುಂಬಿಕ ಸಮಸ್ಯೆಗಳಿಂದ ಹಿಡಿದು ಒಟ್ಟು ಪರಿಸರದ ಮೇಲಾಗುತ್ತಿರುವ ಆಕ್ರಮಣಶೀಲತೆಯಂತ ಗಮನ ಸೆಳೆಯುವ `ಉರಿವ ಕೆಂಡದ ಮೇಲೆಸ್ವಾತಂತ್ರ್ಯಾನಂತರದಲ್ಲಿ ಭಾರತದ ಗ್ರಾಮೀಣ ಸ್ಥಿತಿಗಳ ಆತ್ಮಾವಲೋಕನವೆಂಬಂತೆ ಚಿತ್ರಿತವಾಗಿದೆ. ಇವತ್ತಿನ ಭಾರತದ ಸಾಂಸ್ಕೃತಿಕ ನೆಲೆಯ ಸ್ವರೂಪವನ್ನು ಅನಾವರಣಗೊಳಿಸುವ ಕಥೆ `ಮತಾಂತರ‘. ಪರಂಪರೆ ಮತ್ತು ಆಧುನಿಕತೆಗಳ ಸಂಸರ್ಗದಿಂದ ಹರಡಿಕೊಳ್ಳುವ ಕಥೆ ವಾಸ್ತವ ಸನ್ನಿವೇಶವನ್ನು ಮನವರಿಕೆ ಮಾಡುತ್ತದೆ. ಮೂಲಭೂತವಾದಿಗಳ ವರ್ತನೆಯಲ್ಲಿ ಜಾತ್ಯಾತೀತ ಮನಸ್ಸುಗಳು, ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಹಾಗೂ ಅಸ್ಪೃಶ್ಯರು ದಕ್ಕಲಾರದನ್ನ ದಕ್ಕಿಸಿಕೊಳ್ಲಲು ಮಾಡುವ ಪ್ರಯತ್ನಗಳು, `ಮತಾಂತರಪ್ರಕ್ರಿಯೆಗಳು – ಹೀಗೆ ಒಟ್ಟು ಸಾಂಸ್ಕೃತಿಕ ಸಂಘರ್ಷವಾಗಿ ಮೈದಾಳುವ ಕಥೆ ಸಮಸ್ಯೆಯ ನಿರಂತತೆಯನ್ನ ಸೂಚಿಸುತ್ತದೆ.

ಕನಸು ನನಸಾಗುವ ಬಗೆಗಿನ ವೈಚಾರಿಕ ನೆಲೆಯೊಂದಿಗೆ ಸಾಗುವ `ಆಗಸ್ಟ್ 15′ ಕಥೆಯಲ್ಲಿ ಬೌಗೋಳಿಕ ಚಹರೆಗಳೊಮದಿಗೆ ಸಾಮಾಜಿಕ ಸಮಸ್ಯೆಗಳು ತೆಕ್ಕೆಗೊಂಡಿದ್ದು ಬದುಕಿನ ವೈರುಧ್ಯಗಳ ಚಿತ್ರಣವಿದೆ. ಬಸವನಗೌಡನ ಶೋಷಣೆ ಅತಿರೇಕದ್ದಾಗಿದ್ದರೆ, ಮಲ್ಲ ಕನಸನ್ನ ನನಸನ್ನಾಗಿಸಿಕೊಳ್ಳಬೇಕೆನ್ನುವವನು. ನಡೆನುಡಿಗಳ ವ್ಯತ್ಯಾಸ ಗುರುತಿಸುವ ಮಲ್ಲನ ನಿರಾಶೆ ಮತ್ತು ಕೋಪದಲ್ಲಿ ಬದ್ದತೆಯ ಪ್ರಶ್ನೆಗಳು ಪುಟಿದೇಳುತ್ತವೆ. ಭೂಮಿ ಮತ್ತು ತಾಯಿಯ ಅವಿನಾಭಾವ ಸಂಬಂಧವನ್ನು ಚಿತ್ರಿಸುವ `ಅವ್ವದಲ್ಲಿ ಭೂಮಿಯನ್ನು ಕಬಳಿಸುವ ಕಂಪನಿಗಳು ತಮ್ಮ ಹೊಲದಲ್ಲಿ ಗಂಗಮ್ಮನನ್ನ ಮಣ್ಣುಮಾಡಲು ಬಿಡಲಾರದ ಸ್ಥಿತಿಯನ್ನು ನಿರ್ಮಿಸತ್ತವೆ. ಅವ್ಯಾಹತವಾಗಿ ಭೂಸ್ವಾಧೀನದ ವಿರುದ್ಧ ಜನತೆ ತಿರುಗಿಬೀಳುವ ಸ್ಥಿತಿಯನ್ನು ಈ ಕಥೆ ಹೇಳುತ್ತದೆ.

`ಮತಾಂತರಸಂಕಲನದ ಕಥೆಗಳ ಸನ್ನಿವೇಶಗಳು, ಘಟನೆಗಳು ಜರುಗುವುದೆಲ್ಲ ಗುಲ್ಬರ್ಗಾ, ರಾಯಚೂರು ಪರಿಸರದಲ್ಲಿ. ನೋವು, ನಿರಾಶೆ, ಶೋಷಣೆಯಂತಹ ವಸ್ತುವೇ ಇಲ್ಲಿ ಪ್ರಧಾನ ಸ್ಥಾನ ಪಡೆದಿದ್ದು ಗ್ರಾಮೀಣ ಬದುಕಿನ ವಸ್ತುಸ್ಥಿತಿಯನ್ನು ಕಟ್ಟಿಕೊಡುವಲ್ಲಿ ಹಾಗೂ ಜನಪರವಾದ ಆಶಯವನ್ನು ಪ್ರಕಟಿಸುವಲ್ಲಿ ಕಥೆಗಾರರು ತಕ್ಕಮಟ್ಟಿಗೆ ಯಶಸು ಸಾಧಿಸಿದ್ದಾರೆ. ಪ್ರಾದೇಶಿಕ ಬನಿಯ ದೃಷ್ಟಿಯಿಂದಲೂ ಸಂಕಲನ ಗಮನ ಸೆಳೆಯುತ್ತದೆ.

ಶೀರ್ಷಿಕೆ : ಮತಾಂತರ ಲೇಖಕರು : ಕಲಿಗಣನಾಥ ಗುಡದೂರು ಪ್ರಕಾಶಕರು : ಸಂಸ್ಕೃತಿ ಪ್ರಕಾಶನ ಪುಟಗಳು : 96 ಬೆಲೆ: ರೂ.65/-

ಕೃಪೆ : ಪ್ರಜಾವಾಣಿ

ಕಾಪ್ಸೂಲ್ ತಂತ್ರದ ಮಕ್ಕಳ ಕಥೆಗಳು

ಗುಳಿಗೆಯ ರೂಪದಲ್ಲಿ ಪ್ರತಿ ವಿಷಯವನ್ನೂ ನೀಡುವುದು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಜನಪ್ರಿಯಗೊಳ್ಳುತ್ತಿರುವ ಕಥನ ತಂತ್ರ. ಓದಲಿಕ್ಕೆ ಪುರಸೊತ್ತಿಲ್ಲದ, ಕೇವಲ ಓದುವ ಸುಖಕ್ಕಾಗಿ ಮಾತ್ರ ಪುಸ್ತಕ ಕೈಗೆತ್ತಿಕೊಳ್ಳುವ ಸಹೃದಯರು ಕಡಿಮೆ ಆಗುತ್ತಿರುವುದೇ ಈ ಕ್ಯಾಪ್ಸೂಲ್ ತಂತ್ರದ ಜನಪ್ರಿಯತೆಗೆ ಕಾರಣ. ಇಂಥ ಸಂದರ್ಭದಲ್ಲಿ ಜೀನಹಳ್ಳಿ ಸಿದ್ದಲಿಂಗಪ್ಪನವರ ಕೃತಿ ಪ್ರಕಟವಾಗಿದೆ.

ಮನೋವಿಕಾಸಕ್ಕಾಗಿ, ಮನರಂಜನೆಗಾಗಿ ಅಥವಾ ಭಾಷೆ ಕಲಿಯುವ ಉದ್ದೇಶದಿಂದ ಮಕ್ಕಳು ಕಥೆ ಕೇಳುವ ಕಾಲ ಮುಗಿಯಿತು ಎಂದು ಲೇಖಕರು ಭಾವಿಸಿರುವುದರಿಂದಲೋ ಏನೋ, ಕಥೆಗಳಿಗೆ ಜಾಣ್ಮೆಯ ನಂಟು ಕಲ್ಪಿಸಿದ್ದಾರೆ. ಇಲ್ಲಿನ ಕಥೆಗಳನ್ನು ಓದುವ ಮಕ್ಕಳು ಕಥೆಯ ಖುಷಿಯೊಂದಿಗೆ – ಒಗಟು, ಗಾದೆಯನ್ನು ಅಥವಾ ಗಣಿತದ ಲೆಕ್ಕವನ್ನು ಕಲಿಯುತ್ತಾರೆ ಎನ್ನುವ ಆಶಯ ಅವರದ್ದು.

`ಮಕ್ಕಳ ಜಾಣ್ಮೆಯ ಕಥೆಗಳುಪುಸ್ತಕದಲ್ಲಿ ಒಟ್ಟು ಮೂವತ್ತಮೂರು ಕಥೆಗಳಿವೆ. ಮಕ್ಕಳ ಸಾಹಿತ್ಯ ರಚನೆಯಲ್ಲಿ ಪಳಗಿರುವ ಸಿದ್ಧಲಿಂಗಪ್ಪನವರು ಸಲೀಸಾಗಿ ಕಥೆ ಹೇಳಿದ್ದಾರೆ. ಕಥೆಗಳಿಗೆ ಪೂರಕವಾಗಿ ಬಳಸಿಕೊಂಡಿರುವ ಚಿತ್ರಗಳು ಪುಸ್ತಕದ ಸೊಗಸು ಹೆಚ್ಚಿಸಿವೆ.

ಕಥೆಗಳ ಮೂಲಕ ಕಲಿಕೆಯೂ ಸಾಧ್ಯವಿರುವುದರಿಂದ ಪೋಷಕರು ಕೂಡ ಈ ಕಥೆಯನ್ನು ಓದಿ ಎಂದು ತಮ್ಮ ಮಕ್ಕಳ ಬೆನ್ನು ತಟ್ಟಬಹುದು. ಮಕ್ಕಳು ತಾವು ಓದಿದ ಈ ಕಥೆಗಳನ್ನು ಗೆಳೆಯರೊಂದಿಗೆ ಹೇಳಿಕೊಂಡು ಪಾಠದ ಆಟ ಆಡಲೂ ಬಹುದು. ಆದರೆ ಕಥೆಯ ಸ್ವಾರಸ್ಯಕಿಂತ, ಕಥೆಯ ಮೂಲಕ ಉಂಟಾಗಬಹುದಾದ ಮನೋವಿಕಾಸಕ್ಕಿಂತಲೂ ಜಾಣ್ಮೆಯ ಅಂಶವೇ ಇಲಿನ ಕಥೆಗಳಲ್ಲಿ ಹೆಚ್ಚಾಗಿವೆ. ಈ ಜಾಣ್ಮೆಯ ಕಸರತ್ತು ಮಕ್ಕಳ ಲೋಕದ ರಮ್ಯತೆಯನ್ನು ಮರೆಸುವಂತಹದ್ದು. ಕಲಿಕೆ ಎನ್ನುವುದು ಪರೋಕ್ಷ ಸಾಧನೆ ಆಗಬೇಕೇ ಹೊರತು ಅದುವೇ ಮುಖ್ಯವಾಗಬಾರದು.

ಶೀರ್ಷಿಕೆ : ಮಕ್ಕಳ ಜಾಣ್ಮೆಯ ಕಥೆಗಳು ಲೇಖಕರು : ಜೀನಹಳ್ಳಿ ಸಿದ್ಡಲಿಂಗಪ್ಪ ಪ್ರಕಾಶಕರು : ಪ್ರೇಮ ಪ್ರಕಾಶನ ಪುಟಗಳು : 160 ಬೆಲೆ: ರೂ.80/-

ಕೃಪೆ : ಪ್ರಜಾವಾಣಿ