ಗರಿ ಬಿಚ್ಚಿವೆ `ಬೆಳ್ಳಕ್ಕಿ ಹಿಂಡು’ – ಕವಿ ಎಕ್ಕುಂಡಿಗೆ ನಮನ

ಭವಕೆ ಬರುವಾಗಲೇ ಭಗವಂತ ಇಟ್ಟಿರುವ

ಮಣಿದೀಪವೊಂದೊಂದು ಹೃದಯದೊಳಗೆ

ಕೊನೆಗೊಮ್ಮೆ ಕತ್ತಲು ಕವಿದಾಗ

ಇರಲೆಂದು

ಮುಕ್ತಿ ಲಿಪಿ ಓದಿಸಲು ನಿಮ್ಮ ಬಳಿಗೆ…

ದೂರವಿದ್ದವರನ್ನು ಹತ್ತಿರಕೆ ತರಬೇಕು

ಹರಿವ ಹೊಳೆಗೂ ಉಂಟು ಎರಡು

ತೋಳು, ನೆಲವಪ್ಪಿದ ಎರಡು ದಂಡೆಗಳು

ಬಾಂಧವ್ಯ ಬೆಸೆಯಬೇಕಲ್ಲವೆ?…

ಈ ಎರಡು ಬೇರೆ ಬೇರೆ ಪದ್ಯದ ಸಾಲುಗಳು ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ `ಬಕುಲದ ಹೂವುಗಳುಕವನ ಸಂಕಲನದಿಂದ ಉದ್ಧರಿಸಿದಂಥವು. ದೈವತ್ವ, ಮನುಷ್ಯ ಸಂಬಂಧ – ಎರಡರಲ್ಲೂ ಬಹಳವಾಗಿ ನಂಬಿಕೆಯಿದ್ದ ಎಕ್ಕುಂಡಿಯವರ ಮತ್ತೆರಡು ವಿಚಿತ್ರ ಆಸಕ್ತಿ ಎಂದರೆ ಮಧ್ವ ಸಿದ್ಧಾಂತ ಮತ್ತು ಮಾರ್ಕ್ಸ್ ವಾದ ಪತಿಪಾದನೆ. ಇಲ್ಲಿ ಮಧ್ವ ಸಿದ್ಧಾಂತ ಎನ್ನುವುದನ್ನು ಕೊಂಚ ವ್ಯಾಪಕವಾದ ಅರ್ಥದಲ್ಲಿ ನೋಡಿ: ಎಕ್ಕುಂಡಿಯವರಿಗೆ ಮಧ್ಯಕಾಲೀನ ಭಾಗವತ ಪರಂಪರೆಯಲ್ಲಿದ್ದ ವಿಶ್ವಾಸ ಮತ್ತು ಉದಾರ ನಿಲುವು ಇವು ಅಂತರ್ಗತವಾಗಿತ್ತು ಎಂದುಕೊಳ್ಳಬಹುದೇನೋ. ಅಂತೆಯೇ ಎಕ್ಕುಂಡಿ ಭಾಗವತ ಹಿನ್ನೆಲೆಯ ಅನೇಕ ಪೌರಾಣಿಕ ಸಂಗತಿಗಳನ್ನು ತೆಗೆದುಕೊಂಡು ಪದ್ಯ ರಚಿಸಿದ್ದಾರೆ. ಕಥನ ಕವನಗಳೂ ಇವೆ.

ಕನ್ನಡದಲ್ಲಿ ಪೌರಾಣಿಕ ವಿವರಗಳನ್ನು ಆಯ್ಕೆಮಾಡಿ ಕಾವ್ಯ ರಚಿಸಿದವರು ಪ್ರಮುಖವಾಗಿ ಇಬ್ಬರು. ಒಬ್ಬರು ಪುತಿನ, ಇನ್ನೊಬ್ಬರು ಸು.ರಂ.ಎಕ್ಕುಂಡಿ. ಇವರಿಬ್ಬರೂ ಕನ್ನಡದ ಬೇರೆ ಬೇರೆ ಪ್ರಕಾರಗಳಲ್ಲಿ ಕೈಯಾಡಿಸಿದ್ದರೂ ಪುರಾಣ ಪ್ರತಿಪಾದನೆ ಮತ್ತು ಆಧುನಿಕ ಆಶೋತ್ತರಗಳ ಕವಿಗಳಾಗಿಯೇ ಉಳಿದುಕೊಂಡವರು. ಪುತಿನ ನವೋದಯ ಕಾಲದ ಕವಿಯಾಗಿಯೇ ನಿಂತರೆ ಎಕ್ಕುಂಡಿ ಕೆ.ಎಸ್.ನರಸಿಂಹಸ್ವಾಮಿಯವರಂತೆ ಎಲ್ಲ ಕಾವ್ಯಪಂಥದ ಆಶಯಗಳನ್ನೂ ಒಳಗೊಂಡೇ ಸುಮಾರು ನಲವತ್ತು ವರ್ಷಗಳ ಕಾಲ ಕಾವ್ಯ ಕೃಷಿಯಲ್ಲಿ ಇದ್ದವರು. ಎಕ್ಕುಂಡಿಯವರ ಕಾವ್ಯನಿರ್ಮಿತಿಗೆ ಭಾಗವತ ಪರಂಪರೆಯ ಹಿನ್ನೆಲೆ ಇದ್ದರೂ ಅವರಲ್ಲಿ ಬಂಡಾಯದ ಅಂಶಗಳೂ ಇದ್ದವು. ಯಾಕೆಂದರೆ ಅವರ ಬದುಕು ರಮ್ಯವಾದ ಹಿನ್ನೆಲೆಯನ್ನೇನೂ ಹೊಂದಿರಲಿಲ್ಲ.

1923 ರಲ್ಲಿ ಹಾವೇರಿ ಜಿಲ್ಲೆಯ ರಾಣೆ ಬೆನ್ನೂರಿನಲ್ಲಿ ಜನಿಸಿದ ಎಕ್ಕುಂಡಿಯವರಿಗೆ ಐದನೆಯ ವಯಸ್ಸಿನಲ್ಲೇ ಪಿತೃವಿಯೋಗವಾಯಿತು. ಇದರಿಂದ ಅವರು ಸತ್ಯಬೋಧಸೇವಾ ಸಂಘ ನಡೆಸುತ್ತಿದ್ದ ವಾಚನಾಲಯದ ಪುಸ್ತಕಗಳನ್ನು ಮನೆಮನೆ ಹಂಚುವ ಕಾಯಕ ಮಾಡಬೇಕಾಯಿತು. ಇದು ಸತ್ಕಾರ್ಯವೇ ಆಗಿದ್ದುದರಿಂದ ಎಕ್ಕುಂಡಿಯವರಿಗೆ ಓದುವ ಅಭ್ಯಾಸ ಹತ್ತಿತು. ನಂತರ ಶಾಲಾ ಪ್ರವೇಶ, ಗುರುಗಳ ಒಲವು, ಆಮೇಲೆ ಬೇಂದ್ರೆ, ಶ್ರೀರಂಗ, ವಿ.ಕೃ.ಗೋಕಾಕ, ಶಂಬಾ ಜೋಷಿಯವರ ದರ್ಶನ ದೊರಕಿತು. ಎಕ್ಕುಂಡಿಯವರು ಪದವಿ ಮುಗಿಸಿದ ತರುವಾಯ ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಬಹು ದೀರ್ಘಕಾಲ ಶಿಕ್ಷಕರಾಗಿ ಕೆಲಸ ಮಾಡಿದರು. ಬಾಲ್ಯ ಕಾಲದಲ್ಲಿ ಕಷ್ಟದ ದಿನಗಳನ್ನು ತಳ್ಲಿದ ಎಕ್ಕುಂಡಿಯವರಿಗೆ ಅವರ ನೌಕರಿ ಪರಿಸರದಲ್ಲಿ ಕಣ್ಣಿಗೆ ಬಿದ್ದದ್ದು ಬುಡಕಟ್ಟು ಸಮೂಹದ ಹಾಲಕ್ಕಿ ಒಕ್ಕಲಿಗರು! ಜೊತೆಗೆ ಸಮುದ್ರದ ಅಲೆಗಳು, ಸಂಜೆಯ ಸೂರ್ಯಾಸ್ತ, ಹಾಯುವ ಬೆಳ್ಳಕ್ಕಿಗಳು, ಮೀನುಗಾರ ಬೆಸ್ತರು ಕಾಣಿಸಿಕೊಂಡರು. ಬದುಕಿನಲ್ಲಿ ಬಡತನ, ಸಂಕಷ್ಟವಿದ್ದರೂ ಅದರ ಸುತ್ತ ಸೌಂದರ್ಯವೂ ಇದೆ ಎಂಬ ಅರಿವು ಅವರದಾಯಿತು. ದುಡಿಮೆಯಿದ್ದರೆ, ಸರಳತೆಯ ದೃಢ ಮನಸ್ಸಿದ್ದರೆ ಜೀವನ ಸಾಗಿಸುವುದು ಪ್ರಯಾಸದ ಕೆಲಸವೆನಲ್ಲ ಎಂಬುದನ್ನೂ ಎಕ್ಕುಂಡಿ ತಿಳಿದರು. ಇಲ್ಲಿಯೇ ಗಮನಿಸಬೇಕಾದ ಇನ್ನೊಂದು ಸಂಗತಿ-ಎಕ್ಕುಂಡಿಯವರ ಕಾವ್ಯಕೃಷಿ ಆರಂಭವಾದುದು ದುಃಖ ಪ್ರಚೋದನೆಯಿಂದಲೇ! ಕರುಣೆ ತುಂಬಿದ ವಾಲ್ಮೀಕಿಗೆ ಕ್ರೌಂಚ ಪಕ್ಷಿಯ ಸಾವೇ ಶೋಕ ತಂದು ಕಾವ್ಯದ ಉಗಮಕ್ಕೆ ಕಾರಣವಾದಂತೆ, ಸುಭಾಷ್ ಚಂದ್ರ ಬೋಸರ ಅಕಾಲಿಕ ಅಸ್ತಮಾನ ಎಕ್ಕುಂಡಿಯವರ ಮೊದಲ ಶೋಕಗೀತೆಗೆ ಕಾರಣವಾಯಿತಂತೆ. ಜಗತ್ತಿನ ಬಗ್ಗೆ ಕರುಣೆ, ಪ್ರೀತಿ ಇಲ್ಲದವ ನಿಜವಾದ ಕವಿಯಾಗಲಾರ.

ಎಕ್ಕುಂಡಿಯವರು ಮಾನವ ಜಗತ್ತು ಮತ್ತು ಅಲ್ಲಿಯ ಜೀವ ಸಂಬಂಧ ಕುರಿತು ಅಪಾರ ಪ್ರೀತಿ, ಕರುಣೆ ಇದ್ದವರು. ಜೀವನ-ಸಾವಿನ ನೋವು ಬಲ್ಲವರಾಗಿದ್ದರು. ಅಧ್ಯಯನ, ಅಧ್ಯಾಪನ, ಕಾವ್ಯರಚನೆ ಇಷ್ಟರಲ್ಲೇ ಬಹುಕಾಲ ಕಳೆದ ಎಕ್ಕುಂಡಿಯವರಿಗೆ ಬೇರೊಂದು ಪ್ರಚಾರ ಜಗತ್ತಿನ ಅರಿವು ಇದ್ದಂತಿರಲಿಲ್ಲ. ಹಾಗಾಗಿ ಅವರು ಬಕುಲ ಪುಷ್ಪ ಮಾದರಿಯ `ಬೆಳ್ಳಕ್ಕಿಗಳು‘, `ಮತ್ಸ್ಯಗಂಧಿ‘, `ಗೋಧಿಯ ತೆನೆಗಳು‘, `ಹಾವಾಡಿಗರ ಹುಡುಗ‘, `ಆನಂದ ತೀರ್ಥರುಮುಂತಾಗಿ ಕವನ ಸಂಕಲನಗಳನ್ನು ಪ್ರಕಟಿಸಿದರು. ಈ ಬಗೆಯ ನಿರಂತರ ಕಾವ್ಯ ಕಾಯಕಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಬಹುಮಾನ ಸಂದಾಯವಾದವು. 1995ರ ಆಗಸ್ಟ್ನಲ್ಲಿ ತೀರಿಕೊಂಡ ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಸಮಗ್ರ ಕಾವ್ಯ ನಮ್ಮ ಕಣ್ಣಮುಂದಿದೆ. ಕಾವ್ಯರಸಿಕರು ಅವರ ನೆನಪನ್ನು ವಿಸ್ಮೃತಿಗೆ ತಳ್ಳದೆ ಮತ್ತೆ ಬಕುಲದ ಹೂಗಳನ್ನು ಆಘ್ರಾಣಿಸುವಂತಾಗಲಿ.

***ಡಾ.ಕೃಷ್ಣಮೂತರ್ಿ ಹನೂರ***

ಶೀರ್ಷಿಕೆ : ಬೆಳ್ಳಕ್ಕಿ ಹಿಂಡು ಲೇಖಕರು : ಸು. ರಂ. ಎಕ್ಕುಂಡಿ ಪ್ರಕಾಶಕರು : ಸಂಚಯ ಪ್ರಕಾಶನ ಪುಟಗಳು : 560 ಬೆಲೆ: ರೂ.350/-

ಕೃಪೆ : ಪ್ರಜಾವಾಣಿ

2 Responses

 1. text is in square blocks only. i should develop a new method to read that.

  bellakki hindu.

  once i read a piece of poem of suram ekkundi. it was about two farmers. they knew that poet kalidasa was visiting a place. the farmers reached there and met kalidasa. they requested kalidasa to make the megha (cloud) that carries the message of love (sandesha) also shower rain in their land which was dry and facing drought.

  i liked it very much. whenver i speak to youngsters who wanted to become poets, i quote this example. i salute poet suram ekkundi for this marvelous piece of poem. please let me know whether this poem also there in this collection.

  with regards
  dennis paul

 2. ಬೇಲೂರು ರಾಮಮೂರ್ತಿಯವರ ಸಮಗ್ರ ಹಾಸ್ಯ – 120 ಹಾಸ್ಯ ಲೇಖನಗಳನ್ನೊಳಗೊಂಡ ಸುಮಾರು 500 ಪುಟಗಳ ಪುಸ್ತಕ ಪ್ರಕಟಗೊಂಡು ತುಂಬಾ ದಿನಗಳಾಯಿತು. ಸಪ್ನ, ಅಂಕಿತ, ನವಕರನಾಟಕ ಮುಂತಾದ ಮಳಿಗೆಗಳಲ್ಲಿ ದೊರೆಯುತ್ತದೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: