ನೇತಾಜಿ ಸುಭಾಶ್ಚಂದ್ರ ಬೋಸ್

ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ನಿಗೂಢವಾಗಿ ಕಣ್ಮರೆಯಾಗಿ ದಶಕಗಳೇ ಕಳೆದುಹೋಗಿದ್ದರೂ ಅವರ ಬಗೆಗಿನ ಆಸಕ್ತಿ ಹೆಚ್ಚುತ್ತಿರುವುದಕ್ಕೆ ಸುಭಾಷರ ಕುರಿತು ಅನೇಕ ಪುಸ್ತಕಗಳು ಪ್ರಕಟವಾಗುತ್ತಿರುವುದೇ ಸಾಕ್ಷಿ. ಇಂಥ ಪುಸ್ತಕಗಳ ಸಾಲಿಗೆ ಹೊಸ ಸೇರ್ಪಡೆ ಚಂದ್ರಶೇಖರಯ್ಯನವರ `ನೇತಾಜಿ ಸುಭಾಶ್ಚಂದ್ರ ಬೋಸ್ ‘.

ಸ್ವಾತಂತ್ರ್ಯ ಗಳಿಕೆಗೆ ಹೋರಾಟದ ಮಾರ್ಗವೇ ಸೂಕ್ತವೆಂದು ಅದರಲ್ಲಿ ಕಾರ್ಯೋನ್ಮುಖರಾಗಿದ್ದ ನೇತಾಜಿ ಅವರದು ಭಾರತೀಯ ಯುವಜನರಲ್ಲಿ ಸ್ಫೂರ್ತಿ ಮೂಡಿಸುವಂಥ ಧೀರ ವ್ಯಕ್ತಿತ್ವ . ಸ್ವಾತಂತ್ರ್ಯ ಹೋರಾಟದ ಒಂದೂವರೆ ಶತಮಾನದ ಸಂದರ್ಭದಲ್ಲಿ ಎಲ್ಲ ಸ್ವಾತಂತ್ರ್ಯ ಯೋಧರ ಕುರಿತಾದ ಚಿಂತನೆ ಅಲ್ಲಲ್ಲಿ ನಡೆದಿದೆ. ನೇತಾಜಿ ಅವರ ನಿಗೂಢ ನಾಪತ್ತೆ ಕುರಿತಾಗಿ ಭಾರತ ಸರ್ಕಾರ ನೇಮಿಸಿದ ಹಲವು ತನಿಖಾ ಸಮಿತಿಗಳಿಂದ ನಿಶ್ಚಿತ ತೀರ್ಮಾನಗಳು ಬಂದಿಲ್ಲ. ನೇತಾಜಿ ಅವರ ಬಗೆಗಿನ ಗೌರವದಿಂದ ಚಂದ್ರಶೇಖರಯ್ಯ ಈ ಕೃತಿ ರಚಿಸಿದ್ದಾರೆ.

ಸರಳ ನಿರೂಪಣೆ ಕೃತಿಯಲ್ಲಿದೆ. ಘಟನೆಗಳನ್ನು ಕಣ್ಣಾರೆ ಕಂಡಂತೆ ಬಣ್ಣಿಸುವ ವಿವರಣಾತ್ಮಕ ನಿರೂಪಣೆಯಿದು. ನೇತಾಜಿ ಕಣ್ಮರೆಯ ಸುತ್ತ ವ್ಯಕ್ತವಾದ ಹಲವು ಅನುಮಾನಗಳ ವಿವರಗಳು ಕೃತಿಯಲ್ಲಿದ್ದರೆ ಚೆನ್ನಾಗಿತ್ತು.

ಶೀರ್ಷಿಕೆ : ನೇತಾಜಿ ಸುಭಾಶ್ಚಂದ್ರ ಬೋಸ್ ಲೇಖಕರು : ಬಿ. ಎಂ. ಚಂದ್ರಶೇಖರಯ್ಯ ಪ್ರಕಾಶಕರು : ಸಿವಿಜಿ ಪಬ್ಲಿಕೇಷನ್ಸ್ ಪುಟಗಳು :224 ಬೆಲೆ:ರೂ.125/-

ಕೃಪೆ : ಪ್ರಜಾವಾಣಿ

ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾ

`ಮರೆಯಲ್ಲಿರುವ ಮಹಾನುಭಾವರುಮಾಲಿಕೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ `ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾಪುಸ್ತಕ ಎರಡು ರೀತಿಯಿಂದ ಮುಖ್ಯವಾದದು. ಮೊದಲನೆಯದು, ಪ್ರಚಾರದ ಪ್ರಭಾವಳಿಯಿಂದ ದೂರವುಳಿದ ಸಾಧಕನೊಬ್ಬನನ್ನು ಪರಿಚಯಿಸುವುದು. ಎರಡನೆಯದು, ಮುಂತಕಾ ಅವರ ಪರಿಚಯದ ಮೂಲಕ ಅವರ ದಾರಿಯಲ್ಲಿ ನಡೆಯಲು ಕೆಲವರನ್ನಾದರೂ ಕೃತಿ ಪ್ರಭಾವಿಸಬಹುದು ಎನ್ನುವುದು.

ಮುಂತಕಾ ಓರ್ವ ವಿಲಕ್ಷಣ ಛಾಯಾಗ್ರಾಹಕ. ಬೀದರ್ ಈ ಛಾಯಾಗ್ರಾಹಕನನ್ನು ಲೇಖಕರು ಕ್ಯಾಮರಾ ಇಂಜಿನಿಯರ್ ಎನ್ನುತ್ತಾರೆ. ಏಕೆಂದರೆ ಫೋಟೋ ಕ್ಲಿಕ್ಕಿಸುವುದಕ್ಕೆ ಮಾತ್ರಾ ಮುಂತಕಾ ಅವರ ಪ್ರತಿಭೆ ಸೀಮಿತವಲ್ಲ. ಅವರ ಬಳಿ ಜಗತ್ತಿನ ವಿವಿಧ ದೇಶಗಳ ನೂರಾರು ಉತ್ತಮ ಕ್ಯಾಮರಾಗಳ ಸಂಗ್ರಹವಿದೆ. ಆ ಕ್ಯಾಮರಾಗಳನ್ನು ಬಿಚ್ಚಿ, ಒಂದರ ಬಿಡಿಭಾಗವನ್ನು ಮತ್ತೊಂದಕ್ಕೆ ಹೊಂದಿಸುವ ಮೂಲಕ ಕ್ಯಾಮರಾದ ಸಾಮಥ್ರ್ಯವನ್ನು ಹೆಚ್ಚಿಸುವಲ್ಲಿ ಮುಂತಕಾ ಸಿದ್ಧಹಸ್ತರು. ಅವರ ಮಾಂತ್ರಿಕ ಕೈಗಳಲ್ಲಿ ಕ್ಯಾಮರಾದ ಸಾಧ್ಯತೆಗಳು ಹೆಚ್ಚುತ್ತವೆ.

ಮುಂತಕಾ ಅವರ ಬಳಿ ಎಂಟು ಅಡಿ ಉದ್ದ ಹಾಗೂ ಒಂದು ಅಡಿ ಅಗಲದ ಫೋಟೋ ನೆಗೆಟಿವ್ ಇದೆ. ಇದು ಜಗತ್ತಿನ ಅತ್ಯಂತ ದೊಡ್ಡ ನೆಗೆಟಿವ್ ಎಂದು ಪ್ರತಿಪಾದಿಸಿರುವ ಲೇಖಕರು ತಮ್ಮ ಮಾತಿಗೆ ಸಮರ್ಥನೆಯನ್ನೂ ನೀಡಿದ್ದಾರೆ. ಛಾಯಾಗ್ರಹಣ ಕಲೆಯ ಸಾಧ್ಯತೆಗಳನ್ನು ಹೆಚ್ಚಿಸಿರುವ ಮುಂತಕಾ ಅವರ ವಿಶಿಷ್ಟ ಶೈಲಿಯನ್ನು ಸಮರ್ಥವಾಗಿ ಚಿತ್ರಿಸಿರುವಂತೆಯೇ, ಅವರ ವಿಕ್ಷಿಪ್ತ ವ್ಯಕ್ತಿತ್ವದ ಚಿತ್ರಣವೂ ಪುಸ್ತಕದಲ್ಲಿದೆ. ಬೀದರ್ ಗೆ ಬರುವ ಪ್ರಸಿದ್ಧರ ಫೋಟೋ ತೆಗೆಯುವ ಹವ್ಯಾಸ ಅವರದ್ದು.

ಮುಂತಕಾ ಕುರಿತ ಪುಸ್ತಕ ತೆರೆಮರೆಯಲ್ಲಿ ಉಳಿದ ಸಾಧಕನ ಪರಿಚಯವಷ್ಟೇ ಅಲ್ಲ. ಛಾಯಾಗ್ರಹಣದ ಸಾಧ್ಯತೆಗಳ ಅನಾವರಣದ ಬರಹವೂ ಹೌದು. ಬದುಕಿನ ನೆರಳು ಬೆಳಕುಗಳಂತೆಯೇ ಛಾಯಾಚಿತ್ರದ ನೆರಳು ಬೆಳಕನ್ನೂ ಗಂಭೀರವಾಗಿ ಪರಿಗಣಿಸಿರುವ ಮುಂತಕಾ ಅವರ ಕುರಿತ ಪುಸ್ತಕ ಕಥೆಯಂತೆಯೂ ಓದಿಸಿಕೊಳ್ಳುತ್ತದೆ.

ಶೀರ್ಷಿಕೆ : ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾ ಲೇಖಕರು : ದೇವು ಪತ್ತಾರ ಪ್ರಕಾಶಕರು : ಕನ್ನಡ ಪುಸ್ತಕ ಪ್ರಾಧಿಕಾರ ಪುಟಗಳು :101 ಬೆಲೆ: ರೂ.50/-

ಕೃಪೆ : ಪ್ರಜಾವಾಣಿ