ವೀರಪ್ಪ ಮೊಯಿಲಿಯವರ ಕಾದಂಬರಿ `ತೆಂಬೆರೆ‘ ತುಳುನಾಡಿನ ಭೂತಕಟ್ಟುವ ಪಂಬ ಜನಾಂಗದ ಬದುಕನ್ನು ಚಿತ್ರಿಸುತ್ತದೆ. ಈ ಜನಾಂಗದ ನಂಬಿಕೆಗಳು, ಸಂಪ್ರದಾಯ, ನ್ಯಾಯ, ಆಚರಣೆಗಳು ಇವೆಲ್ಲವನ್ನು ಒಂದು ಬೀಸಿನಲ್ಲಿ ಹಿಡಿದಿಡುವ ಪ್ರಯತ್ನವಾಗಿ ಈ ಕಾದಂಬರಿ ಇದೆ.
ಕಾದಂಬರಿಯು ತನ್ನ ವಿವರಗಳಲ್ಲಿ ದಟ್ಟವಾದ ಮಾನವಶಾಸ್ತ್ರೀಯವಾಗಿ ತುಳುನಾಡಿನ ಬದುಕನ್ನು ಹಿಡಿದಿಡುತ್ತದೆ. ಇದರೊಂದಿಗೆ ಲೇಖಕರು ಯಕ್ಷಗಾನ ಪ್ರಸಂಗ, ಸಿರಿ-ಕಲ್ಲುರ್ಟಿ ಬಗೆಯ ಪಾಡ್ದನಗಳನ್ನು, ಭೂತಾರಾಧನೆಯನ್ನು ಕೊಡುತ್ತಾ, ಅವುಗಳನ್ನು ಕಾದಂಬರಿಯ ವಾತಾವರಣದಲ್ಲಿ ಬೆರೆಸುತ್ತಾರೆ. ಇದೆಲ್ಲದರಿಂದಾಗಿ ಕಾದಂಬರಿಗೆ ಬೇರೆಯದೇ ಆದ ಅನನ್ಯ ಹೊಳಹುಗಳು ದೊರಕಿದಂತಾಗುತ್ತದೆ. ಇದರೊಂದಿಗೆ ದಕ್ಷಿಣ ಕನ್ನಡದ ಶೂದ್ರರು, ದಲಿತರ ಬದುಕು ದೈವಗಳು, ದೇವರು ಹಾಗೂ ನಂಬಿಕೆಗಳ ಹಿನ್ನೆಲೆಯಲ್ಲಿ ಚಿತ್ರಣಗೊಳ್ಳುವ ಪರಿ ಅನನ್ಯ.
ಬೆನ್ನುಡಿಯಲ್ಲಿ ಡಾ. ಬಿ.ಎ.ವಿವೇಕ ರೈ ಹೇಳಿದಂತೆ, `ಜನಾಂಗ ಮತ್ತು ಪ್ರದೇಶ, ಸತ್ಯ ಮತ್ತು ನ್ಯಾಯ, ಪರಂಪರೆ ಮತ್ತು ಆಧುನಿಕತೆಗಳು, ಪರಿಕಲ್ಪನೆಗಳು, ಆದರ್ಶ ಮತ್ತು ವಾಸ್ತವಗಳ ಮುಖಾಮುಖಿಯಲ್ಲಿ ಇಲ್ಲಿ ಮರು ವ್ಯಾಖ್ಯಾನಕ್ಕೆ ಒಳಗಾಗಿವೆ, ಹೊಸ ಅರ್ಥಗಳನ್ನು ಪಡೆದಿವೆ‘.
ಈಚೆಗೆ ಇದು ಹಿಂದಿಗೂ ಅನುವಾದವಾಗಿದೆ.
ಶೀರ್ಷಿಕೆ : ತೆಂಬೆರೆ ಲೇಖಕರು : ಎಂ. ವೀರಪ್ಪ ಮೊಯಿಲಿ ಪ್ರಕಾಶಕರು : ಮಹೇಶ್ವರಿ ಪ್ರಕಾಶನ ಪುಟಗಳು : 176 ಬೆಲೆ: ರೂ. 115/-
ಕೃಪೆ : ಪ್ರಜಾವಾಣಿ
Filed under: ಕಾದಂಬರಿ | Tagged: ಎಂ. ವೀರಪ್ಪ ಮೊಯಿಲಿ, ತೆಂಬೆರೆ, ಮಹೇಶ್ವರಿ ಪ್ರಕಾಶನ | Leave a comment »