
ಗುಲಾಮ ಪದ್ಧತಿಯ ವಿರುದ್ಧ ಸೆಣಸಿದ ಕಪ್ಪು ಮಹಿಳೆಯರ ಆತ್ಮಕಥೆಗಳ ಸಂಕಲನವೇ ‘ಕಪ್ಪು ಹಕ್ಕಿಯ ಬೆಳಕಿನ ಹಾಡು‘ ಪುಸ್ತಕ. ಇಲ್ಲಿನ ಆತ್ಮಕಥೆಗಳನ್ನು ಎಂ.ಆರ್. ಕಮಲ ಕನ್ನಡಕ್ಕೆ ಅನುವಾದಿಸಿದ್ದಾರೆ. ಗುಲಾಮಗಿರಿಯ ಇತಿಹಾಸ, ಅಂದಿನ ರಾಜಕೀಯ ಸನ್ನಿವೇಶ, ಗುಲಾಮರ ಆತ್ಮಕಥೆಗಳನ್ನು ಒಳಗೊಂಡಿರುವ ಪುಸ್ತಕವೊಂದು ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲಬಾರಿಯಾಗಿದೆ. ಇಲ್ಲಿ ಅನುವಾದಿಸಲಾದ ಎಲ್ಲ ಆತ್ಮಕಥೆಗಳು ಹೆಣ್ಣುಮಕ್ಕಳದು ಅನ್ನುವುದು ಈ ಪುಸ್ತಕದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ.
ಕಪ್ಪು ಜನಾಂಗ ಸೃಷ್ಟಿಸಿರುವ ಆತ್ಮಕಥೆಗಳು ಐತಿಹಾಸಿಕ ಮಹತ್ವ ಪಡೆದ ಸಾಹಿತ್ಯ-ಸಮಾಜಶಾಸ್ತ್ರೀಯ-ಸಾಂಸ್ಕೃತಿಕ ಸಂವಾದಿ ದಾಖಲೆಗಳಾಗಿವೆ. ಬಿಡುಗಡೆಗಾಗಿ ಅವರು ನಡೆಸಿದ ಹೋರಾಟ ಆ ಜನಾಂಗದ ಕೆಚ್ಚೆದೆಯನ್ನು ಹೇಳುತ್ತಲೇ, ಯುರೋಪಿಯನ್ನರ ನಯ ವಂಚಕತನದ ಕ್ರೌರ್ಯವನ್ನು ಅನಾವರಣಗೊಳಿಸುತ್ತದೆ.
ಹಾಗೆ ನೋಡಿದರೆ, ಮೌಖಿಕವಾದುದನ್ನು ಬಿಟ್ಟರೆ, ಲಿಖಿತ ಸಾಹಿತ್ಯ ಪರಂಪರೆಯಾಗಲಿ, ಶಿಕ್ಷಣವಾಗಲೀ ಇಲ್ಲದ ಕಪ್ಪು ಜನಾಂಗ ಇಂಗ್ಲಿಷ್ ಭಾಷೆಯನ್ನು ಕಲಿತು ತಂಡೋಪತಂಡವಾಗಿ, ಅದರಲ್ಲೂ ಮಹಿಳೆಯರು, ಆತ್ಮಕಥೆ, ಕಾವ್ಯ, ಪ್ರಬಂಧ, ಕಾದಂಬರಿ ಹೀಗೆ ವಿವಿಧ ಪ್ರಕಾರಗಳಲ್ಲಿ ತಮ್ಮ ಅಭಿವ್ಯಕ್ತಿಯನ್ನು ಸಾಧಿಸಲು ಆರಂಭಿಸಿದ್ದು ಒಂದು ಆಧುನಿಕ ಭಾಷಾ ವಿಸ್ಮಯವಾಗಿದೆ.
ಈ ಬರವಣಿಗೆಯ ಪ್ರಕ್ರಿಯೆಯು ಮನುಷ್ಯರು-ಮನುಷ್ಯರನ್ನು ಶೋಷಿಸುವ ವ್ಯವಸ್ಥೆಯ ಕುರಿತು, ಬಿಡುಗಡೆಯ ಕುರಿತು, ಮುಂದುವರಿದ ಜನಾಂಗಗಳು ಒಂದು ಜನಾಂಗಕ್ಕೆ ತಿರಸ್ಕರಿಸಿದ ಮಾನವ ಹಕ್ಕುಗಳ ಕುರಿತು ಸಾರ್ವಜನಿಕವಾಗಿ ಹೊಸ ಸಂವಾದ-ಚರ್ಚೆ ಆರಂಭವಾಗುವಂತೆ ಮಾಡಿತು. ಮಾತ್ರವಲ್ಲ, ಹೊಸ ಸಮಾಜದಲ್ಲಿ ಬದುಕಿನ ಬೇರೆ ಬೇರೆ ನೆಲೆಗಳಲ್ಲಿ ಆ ಜನಾಂಗ ತಲೆಯೆತ್ತಿ ನಿಲ್ಲಲು ಅಗತ್ಯವಾಗುವ ಆತ್ಮವಿಶ್ವಾಸವನ್ನು ತುಂಬಿತು.
ಆದರೆ, ಇದಕ್ಕಾಗಿ ಅವರು ಮುನ್ನೂರು ವರ್ಷಗಳ ಕಾಲ ನಿರಂತರವಾಗಿ ಕೊಂಚವೂ ವಿಶ್ರಾಂತಿಸದೆ ಬಡಿದಾಡಬೇಕಾಯಿತು. ಅಸ್ತಿತ್ವ ಮತ್ತು ಬದುಕಿಗಾಗಿ ಸಾರ್ವಜನಿಕವಾಗಿ ಹೋರಾಡುವಾಗಲೂ ಕಪ್ಪು ಜನಾಂಗ ತಮ್ಮ ತಾಳ್ಮೆ, ವಿವೇಕ, ಮಾನವೀಯ ಅನುಕಂಪ ಮತ್ತು ಸ್ಥೈರ್ಯಗಳನ್ನು ಕಳೆದುಕೊಳ್ಳದಿರುವುದು ಅದರ ಬಹು ದೊಡ್ಡ ಗುಣವಾಗಿದೆ. ಈ ಬಗೆಯ ಮಾನವೀಯ ಅಂಶಗಳ ಖಜಾನೆಯನ್ನೇ ತಮ್ಮ ನಿರೂಪಣೆಯಲ್ಲಿಟ್ಟುಕೊಂಡಿರುತ್ತಿದ್ದ ಆತ್ಮಕಥೆಗಳು ಪ್ರಕಟವಾದದ್ದೇ ಸಾವಿರ ಸಾವಿರಗಟ್ಟಲೆ ಪ್ರತಿಗಳು ಸಭೆ-ಸಮಾರಂಭ, ಪ್ರತಿಭಟನಾ ಮೆರವಣಿಗೆಗಳಲ್ಲಿ ಮಾರಾಟವಾಗುತ್ತಿದ್ದವು.
ಇಲ್ಲಿ ನಾಲ್ಕು ಆತ್ಮಕಥೆ ಮತ್ತು ಒಂದು ಆತ್ಮಚರಿತ್ರೆಯನ್ನು ಆಯ್ದು, ಸಂಗ್ರಹಿಸಿ ಅನುವಾದಿಸಲಾಗಿದೆ. ಹಾಗೆ ಆರಿಸುವಾಗ ಐತಿಹಾಸಿಕ ಮಹತ್ವದೊಂದಿಗೆ ವೈವಿಧ್ಯವನ್ನು ಮಾನದಂಡವಾಗಿ ಬಳಸಲಾಗಿದೆ. ಈ ಎಲ್ಲ ಮಹಿಳೆಯರು ಬಿಡುಗಡೆಗಾಗಿ ಹೋರಾಡಿ, ಸ್ವಾತಂತ್ರ್ಯ ಪಡೆದು ತಾವು ಬದುಕಿರುವಾಗಲೇ ತಮ್ಮ ಸಾಧನೆ-ಸೇವೆಗಳ ಮೂಲಕ ಜನಾನುರಾಗಿಗಳಾದವರು. ಮೊದಲ ಆತ್ಮಕಥೆಯ ನಾಯಕಿ ಎಲಿಜಬೆತ್, ಲಿಂಕನ್ ಕುಟುಂಬಕ್ಕೆ ತುಂಬ ಹತ್ತಿರವಾಗಿದ್ದವಳು. ಲಿಂಕನ್ ರ ಪತ್ನಿ ಮೇರಿಯ ಆತ್ಮಸಖಿಯಾಗಿದ್ದವಳು. ಆದರೆ, ಈ ಎಲ್ಲವನ್ನೂ ಅವಳು ಪಡೆದದ್ದು ತನ್ನ ಪ್ರತಿಭೆಯ ಮೂಲಕ ಎನ್ನುವುದು ಗಮನಾರ್ಹ ವಿಷಯವಾಗಿದೆ. ಇನ್ನುಳಿದ ನಾಲ್ವರು ಕೂಡ ಬೇರೆ ಬೇರೆ ಕಾರಣಗಳಿಗೆ ಮುಖ್ಯರಾದವರೇ.
ಗುಲಾಮಗಿರಿಯ ದುಃಖ ಸಾವಿನ ದುಃಖಕ್ಕಿಂತಲೂ ಮಿಗಿಲು.
ಗಂಡನ ಸಾವು, ಶವ ಸಂಸ್ಕಾರದ ವಿಷಯ ತಿಳಿದು ತೀವ್ರವಾಗಿ ದುಃಖಿಸುತ್ತಿದ್ದ ಮಗಳಿಗೆ ತಾಯಿಯ ಮಾತು:
`ನೋಡು, ನನ್ನ ಗಂಡನನ್ನು ದಕ್ಷಿಣಕ್ಕೆ ಮಾರಿದರು. ಅವನು ಬದುಕಿದ್ದಾನೋ ಸತ್ತಿದ್ದಾನೋ ಅದೂ ನನಗೆ ಗೊತ್ತಿಲ್ಲ. ಸಂತೋಷದಿಂದ ಇದ್ದಾನೋ, ಚಾವಟಿ ಏಟು ತಿಂದುಕೊಂಡು ಇದ್ದಾನೋ, ಹಸಿವಿನ ಸಂಕಟದಿಂದ ಸಾಯ್ತಾ ಇದ್ದಾನೋ ಯಾವುದೊಂದೂ ಗೊತ್ತಿಲ್ಲ. ಆದ್ರೆ ಮಗಳೆ, ನಿನ್ನ ಗಂಡ ಸತ್ತು ಸ್ವರ್ಗದಲ್ಲಿದ್ದಾನೆ!‘
ಕರಿಯರ ಜೀವನ್ಮುಖಿ ನಿಲುವಿಗೆ ಒಂದು ಉದಾಹರಣೆ.
`ಅಪ್ಪನನ್ನು ದಕ್ಷಿಣದವರಿಗೆ ಮಾರಿದಾಗಲೇ ಮಕ್ಕಳನ್ನು ಗುಲಾಮಗಿರಿಯ ಬಂಧನದಿಂದ ಬಿಡುಗಡೆಗೊಳಿಸುವ ನಿರ್ಧಾರವನ್ನು ಅವ್ವ ಮಾಡಿದ್ದಳು. ಸ್ವತಂತ್ರವಾಗಿ ಉಸಿರಾಡುವುದನ್ನು ಕಲಿಯಬೇಕೆಂದು ನಮ್ಮಿಬ್ಬರಿಗೂ ಬೋಧೆ ಮಾಡುತ್ತಿದ್ದಳು. ಅಕ್ಕ ನ್ಯಾನ್ಸಿಯ ಪಲಾಯನದ ಕತೆ ಯಜಮಾನನಿಂದ ಕೇಳಿದಾಗ ಅವ್ವ ಹೊರಗೆ ಕೋಪಗೊಂಡಂತೆ ನಟಿಸಿದರೂ ಮನಸ್ಸಿನಲ್ಲಿ ನೂರು ಬಾರಿಯಾದರೂ ದೇವರಿಗೆ ವಂದಿಸಿರಬೇಕು. ಮುಖವಾಡದ ಮರೆಯಲ್ಲಿ ಎಷ್ಟೆಲ್ಲ ನೋವು, ಸಂತಸ, ವಿಷಾದ, ಕಳವಳ ಈ ಗುಲಾಮರಿಗೆ! ಅವ್ವ ಮನೆಗೆ ಬಂದ ತಕ್ಷಣ ಚಪ್ಪಾಳೆ ತಟ್ಟಿ ಕುಣಿಯಲಾರಂಭಿಸಿದಳು. ಕತ್ತನ್ನು ಅತ್ತಿತ್ತ ಅಲುಗಾಡಿಸುತ್ತಾ ನರ್ತಿಸುತ್ತಿದ್ದ ಅವ್ವನ ಕಂಠದಿಂದ ಸುಮಧುರ ಹಾಡು ತೇಲಿ ಬರುತ್ತಿತ್ತು. ಪುಟ್ಟ ಹುಡುಗಿಯಾಗಿದ್ದ ನಾನು ಮೋಡಿಗೊಳಗಾದವಳಂತಿದ್ದೆ‘
ಹೀಗೆ ಕಪ್ಪು ಜನಾಂಗದ ನೋವುಗಳನ್ನು ಒಳಗೊಂಡ ಈ ಪುಸ್ತಕ ಗುಲಾಮ ಇತಿಹಾಸದ ಬಗ್ಗೆ ತಿಳುವಳಿಕೆ ಇಲ್ಲದವರಿಗಾಗಿ ಮಹತ್ವದ ಮಾಹಿತಿಯನ್ನೂ ಒಳಗೊಂಡಿದೆ.
– ವಿಶಾಲಮತಿ (ಪುಸ್ತಕದ ಮುನ್ನುಡಿ ಮತ್ತು ಬೆನ್ನುಡಿಯ ಸಹಾಯದಿಂದ)
ಶೀರ್ಷಿಕೆ : ಕಪ್ಪು ಹಕ್ಕಿಯ ಬೆಳಕಿನ ಹಾಡು ಅನುವಾದ ಎಂ ಆರ್ ಕಮಲ ಪ್ರಕಾಶಕರು : ಕಥನ ಪ್ರಕಾಶನ ಪುಟಗಳು : 192 ಬೆಲೆ: ರೂ.75/-
Filed under: ಆತ್ಮ - ಚರಿತ್ರೆ/ಕಥನ | Tagged: ಎಂ ಆರ್ ಕಮಲ, ಕಥನ ಪ್ರಕಾಶನ, ಕಪ್ಪು ಜನಾಂಗ, ಕಪ್ಪು ಹಕ್ಕಿಯ ಬೆಳಕಿನ , ಗುಲಾಮ ಪದ್ಧತಿ | Leave a comment »