ಪಾಠ ಕಲಿಯದಿದ್ದರೆ ಹೇಗೆ?

`ಸಂಕಲನದ ಹರಟೆಗಳು ನನಗಂತೂ ಖುಷಿ ಕೊಟ್ಟಿವೆಎಂಬ ಸಹೃದಯ ನುಡಿಯೊಂದಿಗೇ ಮುನ್ನುಡಿಕಾರ ಅ.ರಾ.ಮಿತ್ರ, `ಕೆಲವು ಕಥಾರೂಪಿ ಹರಟೆಗಳು, ಕೆಲವು ಮಿಶ್ರ ಬಂಧಗಳು, ತುಂಬ ಲಘುವಾದ, ಸರಳ ಬಂಧಗಳಿಂದ, ಅಷ್ಟೇನೂ ಅಗತ್ಯವಲ್ಲದ ವಿಸ್ತರಿತ ಕಥನಗಳಿಂದ ಇಲ್ಲಿನ ಪ್ರಬಂಧಗಳು ಇಡಿ ಕಂಡಿವೆಎಂದು ನಿಸ್ಸಂಕೋಚವಾಗಿ ಹೇಳಿದ್ದಾರೆ. ಇದು ಈಗ ಅಪರೂಪ.

ಮುನ್ನುಡಿಕಾರರಂತೆ ಲೇಖಕರೂ ಖಡಕ್ ಮಾತೇ; `ಈ ಪುಸ್ತಕದಲ್ಲಿನ ತಿರುಳನ್ನು ನಾನು ಲಘು ಪ್ರಬಂಧಗಳು ಎಂದು ಕರೆದಿದ್ದೇನೆ. ಓದುಗರಿಗೆ ಅವು ಹಾಗೆನ್ನಿಸದೆ ಕಥನ ಸಂಕಲನಗಳು, ಚರ್ಚೆಗಳ, ಹರಟೆಗಳು, ಚಿಂತನೆಗಳು – ಹೀಗೆ ಏನಾದರೂ ಅನ್ನಿಸಬಹುದು. ಅದಕ್ಕೆ ನಾನು ಹೊಣೆಗಾರನಲ್ಲ. (ಅರೆ!), ತಮ್ಮನ್ನು ತಾವು `ಸಾಹಿತಿಯಲ್ಲದ ಸಾಹಿತಿಎಂದು ಕರೆದುಕೊಳ್ಳಲೂ ಅವರ ಖಡಕ್ ತನ ಹಿಂಜರಿಯುವುದಿಲ್ಲ. (ಆದರೆ ಇಂತಹ ವರ್ಗಾವಣಗೊಳಗಾದ ಬರಹಗಾರರ `ಸಾಹಿತ್ಯದ ಮೌಲ್ಯಮಾಪನ ಹೇಗೆ ಮಾಡತಕ್ಕದ್ದು ಎನ್ನುವುದು ಒಂದು ತಾತ್ವಿಕ ಪ್ರಶ್ನೆ).

ಆದರೆ ಅಲ್ಲಲ್ಲಿ ಮಿಂಚುವ ಸಾಹಿತ್ಯಕತೆಗೇನು ಮೋಸವಿಲ್ಲ. ಉದಾಹರಣೆಗೆ, ಶೀರ್ಷಿಕೆಯ ಪ್ರಬಂಧ `ಸ್ವಲ್ಪ ಪೆನ್ ಕೊಡ್ತೀರಾ?’ ಹಾಗೆ ಪೆನ್ನು ಗಿಂಜುವ ಲಘು ಸಂಗತಿಗಳನ್ನೆಲ್ಲಾ ಪ್ರಸ್ತಾಪಿಸಿ, ಕಡೆಗೆ ಹೀಗೆ ಸಮಾಧಾನವಾಗಿ ಕೊನೆಯಾಗುತ್ತದೆ:`ಈಚೀಚೆಗೆ ನನಗೆ ಕೂಡ ಇಂಥವೇನೂ (ಪಾದರಕ್ಷೆ ಕಳೆದರೆ ಕಾಲಿಗೆ ಸರಿಹೋಗುವ ಇನ್ನೊಬ್ಬರದನ್ನು ಹಾಕಿಕೊಂಡು ಚಾಚೂ ಮಾಡದೆ ಹಿಂತಿರುಗುವುದು ಇತ್ಯಾದಿ) ಅಂತಹ ಘೋರಾಪರಾಧಗಳಾಗಿ ಕಾಣಿಸುವುದಿಲ್ಲ. ಶೀರಾಮಚಂದ್ರ, ಧರ್ಮರಾಯ – ಇಂತಹ ಸತ್ಯಸಂಧರು ಪಟ್ಟ ಕಷ್ಟದ ಕತೆಗಳನ್ನು ಕೇಳಿಯೂ ನೀತಿ ಪಾಠ ಕಲಿಯದಿದ್ದರೆ ಹೇಗೆ?’ ಹ್ಯಾಗೆ?

ಶೀರ್ಷಿಕೆ: ಸ್ವಲ್ಪ ಪೆನ್ ಕೊಡ್ತೀರಾ? ಲೇಖಕರು: ಕೆ. ಎನ್. ಭಗವಾನ್ ಪ್ರಕಾಶಕರು : ಸುಮುಖ ಪ್ರಕಾಶನ ಪುಟಗಳು : 132 ಬೆಲೆ:ರೂ. 75/-

ಕೃಪೆ : ವಿಜಯ ಕರ್ನಾಟಕ

Advertisements