ಅಪರಿಗ್ರಹ

ನಮ್ಮ ನಡುವಿನ ಅತ್ಯುತ್ತಮ ಕತೆಗಾರರಲ್ಲಿ ಒಬ್ಬರಾದ ಟಿ.ಜಿ.ರಾಘವ, ಅಷ್ಟೇ ಒಳ್ಳೆಯ ವಿಮರ್ಶಕ ಕೂಡಾ. ಅವರ ವಿಮರ್ಶೆಯಲ್ಲಿ, ಚಿಂತನೆಯಲ್ಲಿ ಥಟ್ಟನೆ ಗಮನ ಸೆಳೆಯುವುದು ಸ್ವಂತಿಕೆ. ಯಾವುದೇ ವಿಚಾರದ ಕುರಿತು, ಯಾವ ಪ್ರಭಾವಕ್ಕೂ ಒಳಗಾಗದೇ ಚಿಂತನೆ ಮಾಡುವುದು ಅವರ ಗುಣ ವಿಶೇಷ.

ಅವರ ಲೇಖನಗಳ ಸಂಗ್ರಹ `ಪರಿಗ್ರಹಇಲ್ಲಿನ ಒಂದೊಂದು ಪ್ರಬಂಧಗಳಲ್ಲೂ ಅವರ ದಿಟ್ಟ ನಿಲುವು ಕಾಣಬಹುದು. ಇಂಗ್ಲೀಷ್ ಮಾಧ್ಯಮದ ಕುರಿತು, ಸಂಸ್ಕೃತ ಯಾಕೆ ಕೂಡದು ಎನ್ನುವ ಬಗ್ಗೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಟಿ.ಜಿ. ರಾಘವ ಯಾವ ಮುಲಾಜೂ ಇಟ್ಟುಕೊಳ್ಳದೆ ಬರೆಯುತ್ತಾರೆ. ಅವರ ಪ್ರಕಾರ `ಯಾವುದರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದ, ದೃಢವಾದ ಮನಗಾಣ್ಕೆ ಇರುವ ಕೆಲವರಾದರೂ ಲೇಖಕರು, ವಿಮರ್ಶಕರು ಇದ್ದಾರೆ. ಈ ಶೇಕಡಾ ಏಳರ ಖಳರೇ ನಮ್ಮ ಭರವಸೆ ಮತ್ತು ಆಸ್ತಿ.

1990ರಲ್ಲೇ ಟಿ.ಜಿ. ರಾಘವ ಎಚ್ಚರಿಸಿದ್ದು ಹೀಗೆ: `ನಮ್ಮ ಲೇಖಕರಂತೂ ತಮ್ಮನ್ನು ಎಲ್ಲಿ ಪಿಂಜರಾಪೋಲು ಲೇಖಕರೆಂದು ಕರೆದುಬಿಡುತ್ತಾರೋ ಎಂಬ ಭಯದಲ್ಲಿ ತಮ್ಮ ಕೃತಿಗಳನ್ನು ತತ್ವಶಾಸ್ತ್ರಕ್ಕೆ, ವಿವಿಧ ಬಗೆಯ ರಾಜಕೀಯ, ಸಾಮಾಜಿಕ, ಆರ್ಥಿಕವಾದಗಳ ಪ್ರಚಾರಕ್ಕೆ ವಿವರಣಾತ್ಮಕವಾಗಿ ಬಳಸುತ್ತಿದ್ದಾರೆ.

ಅಡಿಗರ ಕುರಿತ ಲೇಖನದಲ್ಲಿ ರಾಘವ ಮತ್ತು ಅಡಿಗರ ಗುರುಶಿಷ್ಯ ಸಂಬಂಧ, ಸ್ನೇಹ, ಅಡಿಗರ ನಿಷ್ಟುರ ನಿಲುವು ಕಾಣಸಿಗುತ್ತದೆ. ಲೇಖನದ ಕೊನೆಯಲ್ಲೊಂದು ಕುತೂಹಲಕಾರಿ ಟಿಪ್ಪಣಿಯಿದೆ: `ಇಲ್ಲಿ ಬರುವ ಉಲ್ಲೇಖ ಒಂದನ್ನು ತೆಗೆದು, ಅನನ್ಯದ ತಮ್ಮ ಮುನ್ನುಡಿಯಲ್ಲಿ ಲಕ್ಷ್ಮೀನಾರಾಯಣ ಭಟ್ಟರು ಒಂದು ರಂಜಕ ಕತೆ ಕಟ್ಟಿದ್ದಾರೆ.ಆಸಕ್ತರು, ಅಡಿಗರ ಕುರಿತು ಲಕ್ಷ್ಮೀನಾರಾಯಣ ಭಟ್ಟರು ಸಂಪಾದಿಸಿರುವ `ಅನನ್ಯಸಂಕಲನ ಓದಬಹುದು.

ತೇಜಸ್ವಿಯವರ `ನಿಗೂಢ ಮನುಷ್ಯರುಕಾದಂಬರಿಯ ಬಗ್ಗೆ ರಾಘವ ಬರೆಯುತ್ತಾರೆ: `ಮೇಲೆ ಹೇಳಿದ ಮಿತಿಗಳಿಂದಾಗಿ ಉತ್ತಮ ಕಾದಂಬರಿ ಆಗಬಹುದಾಗಿದ್ದ ನಿಗೂಢ ಮನುಷ್ಯರು, ಅರ್ಥವಿಸ್ತಾರವಿಲ್ಲದೆ, ನಿರ್ದಿಷ್ಟ ದೃಷ್ಟಿಕೋನವಿಲ್ಲದ, ಬೀಭತ್ಸ ಅನುಭವವನ್ನು ಅರ್ಥೈಸುವ ಸಾಮರ್ಥ್ಯ ಕಳಕೊಂಡ ವರದಿಯಾಗುತ್ತದೆಹಾಗೇ, ಲಂಕೇಶರ ಮುಸ್ಸಂಜೆಯ ಕಥಾಪ್ರಸಂಗ `ಹಳ್ಳಿಯ ದುರಂತ ಚಿತ್ರ ಕೊಡುವುದಿಲ್ಲ, ಬರಿಯ ರಸವತ್ತಾದ ಘಟನೆಗಳ ಮನರಂಜಕ, ಆನಂದದಾಯಕ, ನಾಟಕೀಯ ವೃತ್ತಾಂತವಾಗಿ ಉಳಿಯುತ್ತದೆ.

ಒಂದು ಕಾಲಘಟ್ಟದ ಸಾಹಿತ್ಯವನ್ನು ಮತ್ತೆ ಓದಲು ಹೊರಡುವವರಿಗೆ ಇದು ಒಳ್ಳೆಯ ಕೈಪಿಡಿ.

ಶೀರ್ಷಿಕೆ: ಪರಿಗ್ರಹ ಲೇಖಕರು: ಟಿ.ಜಿ.ರಾಘವ ಪ್ರಕಾಶಕರು : ಆನಂದಕಂದ ಗ್ರಂಥಮಾಲೆ ಪುಟಗಳು : 160 ಬೆಲೆ:ರೂ. 75/-

ಕೃಪೆ : ಕನ್ನಡ ಪ್ರಭಾ

Advertisements

ಅಮೃತಾ ಪ್ರೀತಂ ಆತ್ಮಕಥೆ

ಶೀರ್ಷಿಕೆ: ರಸೀದಿ ತಿಕೀಟು ಲೇಖಕರು: ಅಮೃತಾ ಪ್ರೀತಂ ಅನು:ಹಸನ್ ನಯೀಂ ಸುರಕೋಡ

ಪ್ರಕಾಶಕರು : ಲೋಹಿಯಾ ಪ್ರಕಾಶನ ಪುಟಗಳು : 206 ಬೆಲೆ:ರೂ.100/-