ಹಾಡಲ್ಲ ನನ್ನ ಒಡಲುರಿ

ಜಾನಪದವೆಂಬುದು ಬಹುಮುಖಿಯಾದುದು. ಬಹು ಸಮುದಾಯಗಳನ್ನದು ಒಳಗೊಂಡಿರುವುದರಿಂದ ಅದರಲ್ಲಿ ಬಹುಮುಖಿ ನೆಲೆಗಳು, ಬಹುವಿಧದ ಜೀವನ ವಿಧಾನಗಳು, ವಿವಿಧ ಆಚರಣೆಗಳು ಇರಲು ಸಾಧ್ಯವಿದೆ. ಈ ಬಹುರೂಪಿತನ ಜಾನಪದದ ಸತ್ವವೂ ಹೌದು, ಸಾಧ್ಯತೆಯೂ ಹೌದು. ಜಾನಪದದ ವರ್ಗೀಕರಣವನ್ನು ಕುರಿತಂತೆ ಕೆಲವು ವಿದ್ವಾಂಸರು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಕೆಲವರು ಜನಸಮುದಾಯಗಳ ಹಿನ್ನೆಲೆಯಲ್ಲಿ ಇದರ ವರ್ಗೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದರೆ, ಇನ್ನು ಕೆಲವರು ಪ್ರಾದೇಶಿಕ ನೆಲೆಗಳನ್ನಿಟ್ಟುಕೊಂಡು, ಮತ್ತೆ ಕೆಲವರು ಕಾಲಘಟ್ಟದ ಗಡುವನ್ನಿಟ್ಟುಕೊಂಡು ವರ್ಗೀಕರಣ ಮಾಡಿದ್ದಾರೆ. ಬುಡಕಟ್ಟು ಜಾನಪದ, ಗ್ರಾಮೀಣ ಜಾನಪದ, ನಗರ ಜಾನಪದ ಹೀಗೆ ಇದರ ವರ್ಗೀಕರಣ ಮುಂದುವರೆಯುತ್ತಾ ಹೋಗುತ್ತದೆ.

ಜಾನಪದವು ಬಹುರೂಪಿಯಾಗಿರುವಂತೆ ಬಹುದೇಶಗಳಿಗೂ ಸಂಬಂಧಿಸಿದ್ದಾಗಿದೆ. ಕರ್ನಾಟಕ ಜಾನಪದ – ಭಾರತೀಯ ಜಾನಪದವಿರುವಂತೆ ಜಾಗತಿಕ ಜಾನಪದವೂ ಇದೆ. ಹೀಗಾಗಿ ಜಾನಪದವೆಂಬುದು ಕೇವಲ ಒಂದು ಜನಸಮುದಾಯಕ್ಕೆ, ಕೇವಲ ಒಂದು ಗ್ರಾಮಕ್ಕೆ ಮಾತ್ರ ಸಂಬಂಧಿಸಿರದೆ, ಜಗತ್ತಿನ ಎಲ್ಲ ಜನವರ್ಗಕ್ಕೂ ಸಂಬಂಧಿಸಿದುದಾಗಿದೆ. ಜಾನಪದವೆಂಬುದು ಒಂದು ಸಂಸ್ಕೃತಿಯಾಗಿ – ಜೀವನ ವಿಧಾನವಾಗಿ ಜಾಗತಿಕ ಸಂದರ್ಭದಲ್ಲಿ ಬಹುಮತ್ವದ ಪರಂಪರೆಯನ್ನೊಳಗೊಂಡಿದೆ.

`ಬಂಡಾಯವೆಂಬುದು ಒಂದು ಮನೋಧರ್ಮ. ಅದು ಅನೇಕ ಸಂದರ್ಭಗಳಲ್ಲಿ ಮೌಲ್ಯವಾಗಿಯೂ ಬೆಳೆದು ನಿಂತಿದೆ. ಅನ್ಯಾಯವಾದಾಗ ಬಂಡೇಳುವುದು ಅದರ ಸಹಜ ಸ್ವಭಾವ. ಅತ್ಯಾಚಾರವಾದಾಗ ಪ್ರತಿಭಟಿಸುವುದು, ಅಸಮಾನತೆಯನ್ನು ತಿರಸ್ಕರಿಸುವುದು ಬಂಡಾಯದ ಪ್ರಮುಖ ಲಕ್ಷಣವಾಗಿದೆ.

ಜಾನಪದವು ಜಗತ್ತಿನ ಜನಸಮುದಾಯಗಳ ಬಗೆಗೆ ಮಾತನಾಡಿದರೆ, ಬಂಡಾಯವು ಆ ಜನಸಮುದಾಯಗಳ ಮನೋಧರ್ಮದ ಬಗೆಗೆ ಮಾತನಾಡುತ್ತದೆ. ಹೀಗಾಗಿ ಜಾನಪದಕ್ಕೂ – ಬಂಡಾಯಕ್ಕೂ ಸಂಬಂಧವಿದೆ. ಜಾನಪದಕ್ಕೆ ಜಾಗತಿಕ ಮಟ್ಟದಲ್ಲಿ ಒಂದು ದೊಡ್ಡ ಪರಂಪರೆಯೇ ಇದ್ದರೆ, ಬಂಡಾಯಕ್ಕೆ ಅಲ್ಲಲ್ಲಿ ಕಾಣುವ ಸಂಕ್ಷಿಪ್ತ ಇತಿಹಾಸವಿದೆ. ಜಾಗತಿಕ ಜನಸಮುದಾಯದ ಎಲ್ಲರೂ ಬಂಡಾಯಗಾರರಾಗುವುದಿಲ್ಲ. ಆದರೆ ಆ ಸಮುದಾಯದ ಯಾವುದೋ ಒಂದು ಘಟ್ಟದಲ್ಲಿ, ಯಾವುದೋ ಒಂದು ಸಂದರ್ಭದಲ್ಲಿ ಬಂಡಾಯ ಕಾಣಿಸಿಕೊಳ್ಳುತ್ತದೆ. ಹೀಗೆ ಕಾಣಿಸಿಕೊಂಡ ಬಂಡಾಯದ ಗುಣ ಮೂರ್ತ ಸ್ವರೂಪ ಪಡೆದರೆ ಅದು ಚಳುವಳಿಯಾಗಿ ಹೊರಹೊಮ್ಮುತ್ತದೆ. ಅಮೂರ್ತರೂಪದಲ್ಲಿಯೇ ನಿಂತು ಬಿಟ್ಟರೆ ಅದು ಆ ಕ್ಷಣದ ಸಿಟ್ಟಾಗಿ ಕರಗಿ ಹೋಗುತ್ತದೆ. “ಬಡವನ ಸಿಟ್ಟು ದವಡೆಗೆ ಮೂಲ” ಎನ್ನುವ ಜನಪದ ಗಾದೆ ಇದನ್ನೇ ಧ್ವನಿಸುತ್ತದೆ.

ಯಥಾಸ್ಥಿತಿಯನ್ನು ಒಪ್ಪುವ, ಇದ್ದುದರಲ್ಲಿಯೇ ತೃಪ್ತಿಪಡುವ ಜಾನಪದಕ್ಕೆ ಬಂಡಾಯದ ಗುಣ ಸಾಧ್ಯವೇ? ಎಂಬುದು ಅನೇಕರ ಪ್ರಶ್ನೆ. ಸಂಪ್ರದಾಯದ ತಳಹದಿಯ ಮೇಲೆ ಬೆಳೆದ ಜಾನಪದದಲ್ಲಿ ಬಂಡಾಯ ಹೇಗೆ ಇರಲು ಸಾಧ್ಯ? ಎಂಬುದು ಕೆಲವರ ಗುಮಾನಿ. ಈ ಪ್ರಶ್ನೆ – ಗುಮಾನಿಗಳಲ್ಲಿ ಸತ್ಯವಿಲ್ಲವೆಂದಲ್ಲ. ಆದರೆ ಜಾನಪದವನ್ನು ಆಳವಾಗಿ ಅಧ್ಯಯನ ಮಾಡಿದಾಗ, ಜನಸಮುದಾಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇಂತಹ ಗುಮಾನಿಗಳಿಗೆ ಸ್ಪಷ್ಟ ಉತ್ತರಗಳು ಸಿಗುತ್ತಾ ಹೋಗುತ್ತವೆ. ಅಂತಹ ಒಂದು ಪ್ರಯತ್ನವನ್ನಿಲ್ಲಿ ಮಾಡಲಾಗಿದೆ ಎಂದು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಲೇಖಕರು ಹೇಳಿದ್ದಾರೆ.

ಬಂಡಾಯ ಜನಪದದಲ್ಲಿ ಸಾಮಾಜಿಕ ಬಂಡಾಯ, ಮಹಿಳಾ ಬಂಡಾಯ, ಸಾಂಸ್ಕೃತಿಕ ಬಂಡಾಯ, ರಾಜಕೀಯ ಬಂಡಾಯವನ್ನು ಬೇರೆ ಬೇರೆಯಾಗಿ ಗುರುತಿಸಿ ತಮ್ಮ ಮಾತನ್ನು ಉದಾಹರಣೆಗಳಿಂದ ಸಾಬೀತು ಪಡಿಸುವ ಈ ಪುಟ್ಟ ಪುಸ್ತಕ ಜಾನಪದ ಲೋಕಕ್ಕೆ ನಮ್ಮನ್ನ ಕೊಂಡೊಯ್ದು ಬಂಡಾಯ ಜನಪದ ನಮ್ಮದಾಗಿಸುತ್ತದೆ.

ಉದಾಹರಣೆಗೆ “ಮಹಾಸತಿ ತಾಡಿ ನಾಗಮ್ಮ” ಎಂಬ ಕಥನ ಕವನದಲ್ಲಿ ಕಥಾನಾಯಕಿ ತಾಡಿ ನಾಗಮ್ಮ ಚಿತೆ ಏರಲು ಒಪ್ಪದೆ, ಪತಿಯ ಪ್ರಾಣವನ್ನೇ ಮರಳಿ ಪಡೆಯುವ ಸಾಹಸ ಮಾಡುತ್ತಾಳೆ.

ಅಂಬಾರದುದಾಕ ಉರಿಯೆದ್ದೇಳುತಾವೆ

ನಾನೆಂಗೋಗಾಲಿ ಸಿವಸಿವನೆ ಏ ಸಿವನೆ!

ರಾಯಾರ ಪ್ರಾಣವ ತಿರುವಯ್ಯಾ”

ಪತಿರಾಯನ ಪ್ರಾಣವನ್ನೇ ವಾಪಸ್ ಕೇಳಿದ ಈ ದಿಟ್ಟ ಮಹಿಳೆ ಯಮರಾಯನಿಗೇ ಶಾಪ ಕೊಡುತ್ತಾಳೆ.

ಜನಪದರು ಕರ್ಮ ಸಿದ್ದಾಂತವನ್ನು ನಂಬುವುದರಿಂದ ಎಲ್ಲವನ್ನೂ ದೇವರ ಮೇಲೆ ಹಾಕಿ ಕುಳಿತು ಬಿಡುವುದರಿಂದ ಅವರ ಬದುಕಿನ ಸಾಧ್ಯತೆಗಳು, ಮನುಷ್ಯ ಪ್ರಯತ್ನದ ಅದಮ್ಯ ಹುಡುಕಾಟಗಳು ಮಸುಕಾಗಿ ಕರಗಿ ಹೋಗುತ್ತದೆ. ಆಂಧ್ರದ ಕ್ರಾಂತಿಕಾರಿ ಕವಿ ಗದ್ದರ್ ಜನಪದದ ಲಯ-ವಿನ್ಯಾಸಗಳನ್ನು ವರ್ತಮಾನದ ಹೋರಾಟಗಳಿಗೆ ಅರ್ಥಪೂರ್ಣವಾಗಿ ದುಡಿಸಿಕೊಂಡಂತೆ ಪ್ರಯತ್ನಗಳು ನಡೆದಾಗ ಮಾತ್ರ ಜನಪದ ಉಳಿದುಕೊಳ್ಳಬಹುದೇ ಹೊರತು; ಅದನ್ನು ಸಾಂಪ್ರದಾಯಿಕವಾಗಿ ವೈಭವೀಕರಿಸುವುದರಿಂದಲ್ಲವೆಂಬುದನ್ನು ತಿಳಿದುಕೊಂಡಾಗ ಜಾನಪದಕ್ಕೂ ಹೊಸ ಜೀವ ಬರಲು ಸಾಧ್ಯವಿದೆ ಎಂದು ತಮ್ಮ ಮಾತನ್ನು ಮುಗಿಸುವ ಲೇಖಕ ಓದುಗರ ಮೇಲೆ ಜವಾಬ್ದಾರಿಯನ್ನು ಹೊರಿಸುತ್ತಾರೆ.

ಬಹಳ ಬೆಲೆಬಾಳುವ ಮಾಹಿತಿಗಳನ್ನು ಒದಗಿಸಿಕೊಡುವ ಈ ಪುಸ್ತಕದ ಬೆಲೆ ಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರು ಮುದ್ದಾಗಿ ಪ್ರಕಟಿಸಿದ್ದಾರೆ.

ವಿಶಾಲಮತಿ

ಶೀರ್ಷಿಕೆ: ಬಂಡಾಯ ಜಾನಪದ ಲೇಖಕರು: ಡಾ. ಬಸವರಾಜ ಸರಬದ ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಪುಟಗಳು : 4+32 ಬೆಲೆ:ರೂ. 10/-

Advertisements

ದೊಡ್ಡವರ ಸಣ್ಣಕತೆ

ಐನ್ಸ್ಟೈನ್ ಜೇಬಿನಲ್ಲಿ ಮೂರು ಕನ್ನಡಕಗಳಿದ್ದವು, ಕಾರಣ ಕೇಳಿದ್ದಕ್ಕೆ ಅವರೆಂದರು : ಒಂದು ದೂರದ ವಸ್ತುವನ್ನು ನೋಡಲು, ಇನ್ನೊಂದು ಹತಿರದ ವಸ್ತುವನ್ನು ನೋಡಲು, ಮೂರನೆಯದು ಈ ಎರಡೂ ಕನ್ನಡಕಗಳನ್ನು ಹುಡುಕಲು.

ಕೈಲಾಸಂ ಒಮ್ಮೆ ಸಂಜೆ ವೇಳೆ ಒಬ್ಬ ತರುಣ ಶಿಷ್ಯನೊಂದಿಗೆ ಬೈಸಿಕಲ್ ಮೇಲೆ ಹೋಗುತ್ತಿದ್ದರು. ಮುಂದೆ ಹೋಗುತ್ತಿದ್ದ ಜಟಕಾದಲ್ಲಿ ಲಕ್ಷಣವಾದ ಹೆಂಗಸೊಬ್ಬಳು ಸ್ಪುರದ್ರೂಪಿ ಮಗಳೊಂದಿಗೆ ಕೂತಿದ್ದಳು. ಯುವಕ ಶಿಷ್ಯ ಜಟಕಾದ ಕಡೆಗೇ ನೋಡುತ್ತಿದ್ದ.

ಕೈಲಾಸಂ ಆಗ `ಅವರ ಪರಿಚಯ ಮಾಡಿಸಿಕೊಡಲೇ ಮಗುಎಂದರು.

ಶಿಷ್ಯ `ನಿಮಗೆ ಅವರು ಗೊತ್ತೇ ಸಾರ್?’ ಎಂದು ಕೇಳಿದನು.

ಕೈಲಾಸಂ `ಗೊತ್ತು ಕಣೋ, ಚೆನ್ನಾಗಿ ಗೊತ್ತು, ದೊಡ್ಡೋಳು ನನ್ನ ಹೆಂಡತಿ, ಚಿಕ್ಕವಳು ನನ್ನ ಮಗಳುಎಂದರು.

ಶಿಷ್ಯ ತಲೆ ತಗ್ಗಿಸಿದವ ಮೇಲೆತ್ತಲೇ ಇಲ್ಲ.

ಮೂರು ತಿಂಗಳಾದ ಮೇಲೆ ಕೈಲಾಸಂ ಹೆಂಡತಿ, ಮಗಳನ್ನು ಕಂಡ ಮೇಲೆ ಆ ಶಿಷ್ಯನಿಗೆ ತಿಳಿದದ್ದು: ಜಟಕಾದಲ್ಲಿದ್ದವರು ಅವರ ಹೆಂಡತಿ ಮಗಳು ಅಲ್ಲವೆಂದು.

ಇಂಥ ಅನೇಕ ಕತೆಗಳನ್ನು ಟಿ.ವಿ.ವೆಂಕಟರಮಣಯ್ಯ ಸಂಗ್ರಹಿಸಿ ಕೊಟ್ಟಿದ್ದಾರೆ. ಹಿರಿಯರ ಪ್ರತಿಭೆ, ಚುರುಕುತನ, ತುಂಟತನದ ಬಗ್ಗೆ ತಿಳಿದುಕೊಳ್ಳಲು ಈ ಪುಸ್ತಕ ಸಹಕಾರಿ.

ಶೀರ್ಷಿಕೆ:ಹಿರಿಯರ ಕಿರುಗತೆಗಳು ಲೇಖಕರು:ಟಿ. ವಿ. ವೆಂಕಟರಮಣಯ್ಯ ಪ್ರಕಾಶಕರು:ಸಮಾಜ ಪುಸ್ತಕಾಲಯ,ಧಾರವಾಡ ಪುಟಗಳು : 154 ಬೆಲೆ:ರೂ. 60/-

ಕೃಪೆ : ಕನ್ನಡ ಪ್ರಭಾ