Posted on ನವೆಂಬರ್ 30, 2008 by pusthakapreeethi

ಪತ್ರಿಕೆಯೊಂದಕ್ಕೆ ಬರೆದ ಅಂಕಣದ 33 ಲೇಖನಗಳ ಸಂಕಲನ ಇದು. ವಿದ್ಯಾರ್ಥಿ ಅಂಕಣದ ಇಲ್ಲಿನ ಬರಹಗಳು ಸಹಜವಾಗಿ ಶಿಕ್ಷಣ ತಜ್ಞರ, ಸಾಹಿತಿಗಳ, ಅನುಭಾವಿಗಳ ಕುರಿತಾಗಿವೆ. ಪಾಶ್ಚಾತ್ಯ ಚಿಂತಕರ ಜತೆಗೆ ಭಾರತೀಯರು, ಜತೆಗೆ ಕನ್ನಡದ ಮನಸ್ಸುಗಳು ಶಿಕ್ಷಣದ ಬಗ್ಗೆ ಹೇಗೆ ಯೋಚಿಸಿವೆ ಎಂಬುದರ ದಾಖಲೆಯೂ ಇದಾಗಿದೆ.
ಪಿಯಾಜೆ, ಝಾಕಿರ್ ಹುಸೇನ್, ಅಲ್ಲಮ, ಜಿಡ್ಡು, ಬ್ರೂನರ್, ಬೀಚಿ, ಅರವಿಂದ – ಹೀಗೆ ಇವರ ಆಯ್ಕೆ ಕನ್ನಡದಿಂದ ವಿಶ್ವದ ನಾನಾ ಭಾಷೆಗಳ ಚಿಂತಕರವರೆಗೆ ಹರಿದಾಡುತ್ತದೆ. ಅಂಕಣವಾದ್ದರಿಂದ ವಿಸ್ತೃತ ಚಚರ್ೆ, ಬರಹಗಳಿಗೆ ಬದಲಾಗಿ ಪದಗಳ ಮಿತಿಗೆ ಒಳಗಾಗಬೇಕಾಗಿದೆ. ಹಾಗಾಗಿ ಹಲವೆಡೆ ಸಾಂದ್ರವಾಗಿ ಮತ್ತೆ ಕೆಲವೆಡೆ ಅಪೂರ್ಣವಾದಂತೆನಿಸುತ್ತವೆ. ಕೆಲವು ಬರಹಗಳಲ್ಲಿ ತಜ್ಞರು ಶಿಕ್ಷಣದ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು `ಕೋಟ್‘ ಮಾಡಿ ಒಂದೆರಡು ವಾಕ್ಯಗಳಲ್ಲೇ ತಮ್ಮ ಚಿಂತನೆಗೆ ಒಗ್ಗಿಸಿಕೊಡುವ ಕ್ರಮ ವಿಶಿಷ್ಟವಾಗಿದೆ. ಹಾಗಾಗಿ ಶಿಕ್ಷಣದ ಕುರಿತು ಸಾಕಷ್ಟು ಒಳನೋಟಗಳನ್ನು ಇಲ್ಲಿನ ಬರಹಗಳು ನೀಡುತ್ತವೆ. ಹರಪನಹಳ್ಳಿಯಲ್ಲಿ ಕಾಲೇಜು ಸ್ಥಾಪನೆಗೆ ಹಾಸ್ಯ ಸಾಹಿತಿ ಬೀಚಿ ಹಾಕಿದ ಷರತ್ತು ನಂತರ ಆದ ಬೆಳವಣಿಗೆ ಕುರಿತ ವಿಶ್ಲೇಷಣೆಯಲ್ಲಿ ತಪ್ಪು ಮಾಹಿತಿ ನುಸುಳಿದೆ. ಮೊದಲು ಬೀಚಿಯವರನ್ನು ಸಭೆಗೆ ಕರೆದವರು ಬೇರೆ. ನಂತರದಲ್ಲಿ ಅಲ್ಲಿ ಕಾಲೇಜುಗಳನ್ನು ಸ್ಥಾಪಿಸಿದವರು ಬೇರೆ. ಅವರು ಧನದಾಹಿಗಳಾದರೇ ಹೊರತು, ಉಳಿದಂತೆ ಬೀಚಿಯವರ ಜಾತ್ಯಾತೀತ ಶಿಕ್ಷಣದ ಕನಸನ್ನು ನನಸು ಮಾಡಿದ್ದಾರೆ.
ಶೀರ್ಷಿಕೆ: ಕುರುಹು ತೋರಿದ ಗುರು ಲೇಖಕರು: ಪ್ರೊ. ಎಚ್.ಎಸ್. ಉಮೇಶ ಪ್ರಕಾಶಕರು: ವಿಸ್ಮಯ ಪ್ರಕಾಶನ ಪುಟಗಳು : 152 ಬೆಲೆ: ರೂ. 125/-
ಕೃಪೆ : ಸುಧಾ
Filed under: ವೈಚಾರಿಕ ಸಾಹಿತ್ಯ | Tagged: ಕುರುಹು ತೋರಿದ ಗುರು, ಪ್ರೊ. ಎಚ್.ಎಸ್. ಉಮೇಶ, ವಿಸ್ಮಯ ಪ್ರಕಾಶನ, ಸುಧಾ | Leave a comment »
Posted on ನವೆಂಬರ್ 29, 2008 by pusthakapreeethi

ಗಾಳಿಪಟ ವಿನ್ಯಾಸಕಾರನಾಗಿ, ಚಾರಣಿಗನಾಗಿ ಸದಾ ನೆಲದಿಂದ ಮೇಲ ಮೇಲಕ್ಕೆ ಹಾರುವ ಸಾಹಸಿ ಮನಸ್ಸಿನ ದಿನೇಶ್ ಹೊಳ್ಳರ ಇಲ್ಲಿ ಕಥೆಗಳು ನೆಲದ ಮೇಲಿನ ಪ್ರೀತಿಯಿಂದ ಹೊರಹೊಮ್ಮಿವೆ. ಕಥೆ, ಮಿನಿಗಥೆ, ಹನಿಗಥೆ ಸೇರಿದಂತೆ 8 ಕಥೆಗಳ ಈ ಸಂಕಲನ ತನ್ನ ವೈವಿಧ್ಯತೆಯಿಂದಾಗಿ ಗಮನ ಸೆಳೆಯುತ್ತದೆ. ಎಲ್ಲ ಕಥೆಗಳು ಈಗಾಗಲೇ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಸಂಕಲನದ ಮೊದಲ ಕಥೆ `ಹುಲಿಬಲಿ‘ಗೆ ಸಿದ್ದೇಶ್ ಎಂಬ ಬಾಲಕ ಪ್ರೇರಣೆ. ಅವನ ಅಗಾಧ ಪರಿಸರ ಜ್ಞಾನ, ಪ್ಯಾಟಿ ಧಣಿಗಳು ಬಂದು ವನ್ಯಜೀವಿಗಳನ್ನು ಬೇಟೆಯಾಡುವುದರ ಬಗ್ಗೆ ಅವನಿಗಿರುವ ಕೋಪಕ್ಕೆ ಚಾರಣಿಗ ಕಥೆಗಾರರ ಕಲ್ಪನೆಯೂ ಸೇರಿ ಸೊಗಸಾದ ಕಥೆಯಾಗಿಸಿದೆ. ಹೌದು … `ಬೆಟ್ಟಕ್ಕೆ ಮೆಟ್ಟಿಲಾದ ಅಂತ್ಯವಿರದ ಏಣಿಯಲ್ಲಿ ಹೆಜ್ಜೆಗಳು ವಿರಮಿಸುವುದಿಲ್ಲ…‘ ಕಥೆಗಾರರಿಗೆ ಅಂತಹುದೇ ಮಹಾತ್ವಾಕಾಂಕ್ಷೆ, ಅದಮ್ಯ ಉತ್ಸಾಹ ಇರುವುದರಿಂದ ಲವಲವಿಕೆ ಕಥೆಗಳ ಸ್ಥಾಯಿಗುಣವಾಗಿದೆ. ಆದರೆ ಕಟು ವಾಸ್ತವದ ವಿಪರ್ಯಾಸ, ವ್ಯಂಗ್ಯಗಳನ್ನೂ ಒಟ್ಟಿಗೆ ಧ್ವನಿಸುವುದರಿಂದ ಇವು ಈ ನೆಲದ ಕಥೆಗಳಾಗಿವೆ. ಕಥೆಗೆ ಪೂರಕವಾದ ರೇಖಾ ಚಿತ್ರಗಳನ್ನು ಕಥೆಗಾರರೇ ರಚಿಸಿದ್ದಾರೆ.
ಶೀರ್ಷಿಕೆ:ಬೆಟ್ಟದ ಹೆಜ್ಜೆಗಳು ಲೇಖಕರು: ದಿನೇಶ್ ಹೊಳ್ಳ ಪ್ರಕಾಶಕರು: ಗಾಯತ್ರಿ ಪ್ರಕಾಶನ ಪುಟಗಳು : 62 ಬೆಲೆ: ರೂ. 60/-
ಕೃಪೆ : ಸುಧಾ
Filed under: ಕಥಾ ಸಂಕಲನ | Tagged: ಗಾಯತ್ರಿ ಪ್ರಕಾಶನ, ದಿನೇಶ್ ಹೊಳ್ಳ, ಬೆಟ್ಟದ ಹೆಜ್ಜೆಗಳು, ಸುಧಾ | Leave a comment »
Posted on ನವೆಂಬರ್ 28, 2008 by pusthakapreeethi

ಅವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಲಾಲನೆ ಪಾಲನೆಯ ಜವಾಬ್ದಾರಿಯನ್ನು ಆ ಮನೆಯಲ್ಲಿರುವ ಇತರ ಸದಸ್ಯರು, ಅಜ್ಜ-ಅಜ್ಜಿಯರು ವಹಿಸುತ್ತಿದ್ದರು. ಆದರೆ ವಿದ್ಯಾವಂತ ವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಪೋಷಣೆಯೇ ದೊಡ್ಡ ಸಮಸ್ಯೆಯಾಗಿದೆ. ಇದೊಂದು ಅನಿವಾರ್ಯ ಸ್ಥಿತಿ. ಹಾಗಾದರೆ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಿ, ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವುದು ಹೇಗೆ? ಈ ಕುರಿತು ಶಿಕ್ಷಣ, ಮನಶ್ಯಾಸ್ತ್ರ, ವೈದ್ಯಕೀಯ ಕ್ಷೇತ್ರಗಳ ತಜ್ಞರು ಅಲ್ಲಲ್ಲಿ ಲೇಖನಗಳನ್ನು ಬರೆದೇ ಇದ್ದಾರೆ. ಮಕ್ಕಳ ಪೋಷಣೆಗೆ ಪೂರಕವಾದ ಇಂತಹ ಹಲವು ಉಪಯುಕ್ತ ಲೇಖನಗಳನ್ನು ಹನುಮಂತಪ್ಪ ಒಂದೆಡೆ ಇಲ್ಲಿ ಕಲೆಹಾಕಿದ್ದಾರೆ. ಕೆಲವನ್ನು ಹೊಸದಾಗಿ ಬರೆಯಿಸಿದ್ದಾರೆ. ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಬಂದ ಲೇಖನಗಳನ್ನು ಎತ್ತಿಕೊಂಡಿದ್ದಾರೆ. ಈ ಹಂತದಲ್ಲಿ ತುಂಬ ಶ್ರಮವಹಿಸಿ ಅವನ್ನೆಲ್ಲ ಕ್ರಮಬದ್ಧವಾದ ಒಂದು ಮಾಲೆಯನ್ನಾಗಿ ಹೆಣೆದು ಕೊಟ್ಟಿದ್ದಾರೆ.
ತಂದೆ-ತಾಯಿ, ಪೋಷಕರು, ಶಿಕ್ಷಕರು ಓದಬೇಕಾದ ಪುಸ್ತಕ ಇದಾಗಿದೆ. ವಿವಿಧ ಲೇಖಕರು ಬರೆದವಾದ್ದರಿಂದ ಅಲ್ಲಲ್ಲಿ ಪುನರಾವರ್ತನೆ ಅನಿವಾರ್ಯವಾಗಿದೆ.
ಶೀರ್ಷಿಕೆ:ನಮ್ಮ ಮಕ್ಕಳು ಮತ್ತು ನಾವು ಲೇಖಕರು: ಬಳ್ಳೇಕೆರೆ ಹನುಮಂತಪ್ಪ ಪ್ರಕಾಶಕರು: ಐಬಿಎಚ್ ಪ್ರಕಾಶನ ಪುಟಗಳು : 389 ಬೆಲೆ: ರೂ. 225/-
ಕೃಪೆ : ಸುಧಾ
Filed under: ವೈಚಾರಿಕ ಸಾಹಿತ್ಯ | Tagged: ಐ.ಬಿ.ಎಚ್. ಪ್ರಕಾಶನ, ನಮ್ಮ ಮಕ್ಕಳು ಮತ್ತು ನಾ, ಬಳ್ಳೇಕೆರೆ ಹನುಮಂತಪ್ಪ, ಸುಧಾ | Leave a comment »
Posted on ನವೆಂಬರ್ 27, 2008 by pusthakapreeethi

ಈ ಪುಟ್ಟ ಮೂರು ಕವಿತಾ ಸಂಕಲನಗಳನ್ನು ಅಂದವಾಗಿ ಮುದ್ರಿಸಲಾಗಿದೆ. `ನೀರಜ‘ ಶಿಶು ಪದ್ಯಗಳ ವಸ್ತು ನಿತ್ಯದ ಸಹಜ ಸಂಗತಿಗಳು. ಮಗುವಿಗೆ ಕಥೆಯನ್ನು ಸರಳವಾಗಿ ಹೇಳುವಂತೆ ಇಲ್ಲಿ ಅವನ್ನು ಪುಟ್ಟ ಕವಿತೆ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ನೀರಜ ನೀನು ಬಾಯ್ದೆರೆದೆ/ಅಲ್ಲಿ ಬ್ರಹ್ಮಾಂಡವಿರಲಿಲ್ಲ / ಮಣ್ಣಿತ್ತು, ಕಲ್ಲಿತ್ತು, ನೀರಿತ್ತು, ಕಾಳಿತ್ತು/ – ಇಂತಹ ಚಿಕ್ಕ ಚಿಕ್ಕ ರೂಪಕಗಳು ರೇಖಾ ಚಿತ್ರಗಳೊಂದಿಗೆ ಮಕ್ಕಳ ಗಮನವನ್ನು ಥಟ್ಟನೆ ಸೆಳೆಯುವಂತಿವೆ. ಕವಿತೆಗಳನ್ನು ಮತ್ತಷ್ಟು ಧ್ವನಿ ಪೂರ್ಣವಾಗಿಸಿರುವುದು ಇಲ್ಲಿನ ಶಿವ ಹೂಗಾರರ ರೇಖಾ ಚಿತ್ರಗಳು. ವಾತಾವರಣದ ತುಂಬ ಮಧುರತೆ ತುಂಬಿದೆ / ಬಹುಶಃ ನೀನೆಲ್ಲೋ ಮಾತನಾಡುತ್ತಿರಬಹುದು / – ಸಹಜ ಸೌಂದರ್ಯದ ಇಂತಹ ಹೈಕುಗಳಿಂದ `ಮಂದಹಾಸ‘ ಬೀರುತ್ತದೆ. ಹೈಕುಗಳ ಬಗ್ಗೆ ನಮ್ಮಲ್ಲಿ ಆಕರ್ಷಣೆ ಹುಟ್ಟಿಸುವಷ್ಟು ಸರಳವಾದ ರೂಪಕಗಳು ಇವು. `ಕನ್ನಡಿ‘ ಸಂಕಲನದಲ್ಲೂ ಇಂತಹದೇ ಚುಟುಕುಗಳಿದ್ದರೂ ಒಂದು ಸಾಲು ಅಥವಾ ಒಂದು ಶಬ್ದದ ಮೂಲಕ ಅನುಪಮವಾದ ಅರ್ಥ ಸ್ಫೋಟಿಸುವ ಹೈಕುಗಳ ವಿಶಿಷ್ಟತೆಯನ್ನು ಮನಗಾಣಿಸಲೆಂದೇ ಚುಟುಕು ಮತ್ತು ಹೈಕುಗಳು ಎಂದು ಪ್ರತ್ಯೇಕವಾಗಿ ಹೆಸರಿಸಲಾಗಿದೆ. `ಚೀನಾ ಮತ್ತು ಜಪಾನ್ ಮೂಲದ ಹೈಕುಗಳೂ ಇಡೀ ವಿಶ್ವಸಾಹಿತ್ಯದಲ್ಲೇ ಸಂಚಲನ ತಂದವು. ಆದರೆ ವಚನ ಪರಂಪರೆ ಇರುವ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಹೈಕುಗಳು ತೀರಾ ಹೊಸದಾಗಿರಲಿಲ್ಲ‘ ಎಂದು ಶಾರದಾ ಮುಳ್ಳೂರ ಅವರಿಗೆ ಹೈಕುಗಳನ್ನು ರಚಿಸಲು ಪ್ರೇರಣೆ ನೀಡಿದ ಕವಿ ಸರಜೂ ಕಾಟ್ಕರ್ ಇಲ್ಲಿನ ತಮ್ಮ ಮುನ್ನುಡಿಯಲ್ಲಿ ಅಭಿಪ್ರಾಯಪಡುತ್ತಾರೆ.
ಶೀರ್ಷಿಕೆ: ನೀರಜ (ಮಗು ಪದ್ಯಗಳು) , ಮಂದಹಾಸ (ಹೈಕುಗಳು), ಕನ್ನಡಿ (ಚುಟುಕಗಳು ಮತ್ತು ಹೈಕುಗಳು) ಲೇಖಕರು: ಶಾರದಾ ಮುಳ್ಳೂರ ಪ್ರಕಾಶಕರು: ವಿನಯ ಪ್ರಕಾಶನ ಪುಟಗಳು : ಬೆಲೆ:
ಕೃಪೆ : ಸುಧಾ
Filed under: ಮಕ್ಕಳ ಸಾಹಿತ್ಯ | Tagged: ಕನ್ನಡಿ (ಚುಟುಕಗಳು ಮತ್, ನೀರಜ (ಮಗು ಪದ್ಯಗಳು), ಮಂದಹಾಸ (ಹೈಕುಗಳು), ವಿನಯ ಪ್ರಕಾಶನ, ಶಾರದಾ ಮುಳ್ಳೂರ, ಸುಧಾ | 1 Comment »
Posted on ನವೆಂಬರ್ 26, 2008 by pusthakapreeethi

ತಮ್ಮ ಕಥೆಗಾರನ ಸೃಜನಶೀಲತೆಯನ್ನು ಮೂರು ದಶಕಗಳ ಕಾಲ `ಪ್ರಜಾವಾಣಿ‘ಗೆ ಧಾರೆ ಎರೆದ ಲಕ್ಷಣ ಕೊಡಸೆ ಅವರು ಪತ್ರಿಕಾ ವೃತ್ತಿಯ ಕೊನೆಯ ದಿನಗಳಲ್ಲಿ ಪ್ರಥಮ ಕಾದಂಬರಿಯನ್ನು ಹೊರತಂದಿದ್ದಾರೆ. ಮೂಲತಃ ಒಳ್ಳೆಯ ಕಥೆಗಾರರಾದ ಕೊಡಸೆ ಹಿಂದಿನಿಂದಲೂ ಕಥೆ ಬರೆಯುತ್ತಿದ್ದರು. ಆದರೆ ಅವರ ಪ್ರಥಮ ಕಥಾ ಸಂಕಲನ ಹೊರಬಂದದ್ದೂ ಇತ್ತೀಚೆಗೆ. ಬಸ್ಸಿನಲ್ಲಿ ಪಯಣಿಸುವ ಕರೇನಾಯ್ಕನ ನೆನಪುಗಳ ಮೂಲಕ ಒಂದು ಕಾಲಘಟ್ಟದ ಸಮುದಾಯದ ಬದುಕನ್ನು ಅದರೆಲ್ಲಾ ಸೂಕ್ಷ್ಮಗಳೊಂದಿಗೆ `ಪಯಣ‘ ಕಾದಂಬರಿಯಲ್ಲಿ ಸ್ವಾರಸ್ಯಕರವಾಗಿ ಕಟ್ಟಿಕೊಡುತ್ತಾರೆ. ಪತ್ರಕರ್ತನ ಸರಳ ಭಾಷೆ, ಕಾದಂಬರಿಕಾರ ಬಳಸುವ ಜನ ಸಮುದಾಯದ ಆಡು ಭಾಷೆಯ ನುಡಿಗಟ್ಟು ಇಲ್ಲಿ ಹದವಾಗಿ ಮೇಳೈಸಿದೆ. ಆದ್ದರಿಂದಲೇ ಆಕರ್ಷಕವಾದ, ಸರಳ ಭಾಷೆಯಲ್ಲಿ ಮಲೆನಾಡಿನ ಬದುಕಿನ ಒಳಹೊಕ್ಕು ನೋಡಲು ಸಾಧ್ಯವಾಗಿದೆ. ಕಾಲ ಪ್ರವಾಹದಲ್ಲಿ ಅವಿಭಕ್ತ ಕುಟುಂಬ ಒಡೆದುಹೋಗುವುದು, ಆಧುನಿಕ ಶಿಕ್ಷಣದಿಂದ ಸಾಮುದಾಯಿಕ ಮೌಲ್ಯಗಳು ಬದಲಾಗುವುದನ್ನು ಕಾದಂಬರಿ ಯಶಸ್ವಿಯಾಗಿ ದರ್ಶಿಸುತ್ತದೆ ಎಂದು ಹಿರಿಯ ವಿಮರ್ಶಕ ಸಿ.ಎನ್. ರಾಮಚಂದ್ರನ್ ಪ್ರತಿಕ್ರಿಯಿಸಿದ್ದಾರೆ.
ಓದುಗರ ಪ್ರಮಾಣ ಕಡಿಮೆಯಾಗಿರಬಹುದು. ಆದರೆ ಅಂದವಾದ ಪುಸ್ತಕಗಳು ಇಂದು ಅಚ್ಚಾಗುತ್ತವೆ. ಮುಖಪುಟವೂ ಅಷ್ಟೇ ಸೊಗಸಾಗಿರುತ್ತವೆ. ಆದರೆ ಪಯಣ ಮುಖಪುಟದ ಬಸ್ ಪಯಣದ ಚಿತ್ರಕ್ಕೆ ಕಲಾಕಾರನ ಸ್ಪರ್ಶ ಇಲ್ಲವಾಗಿದೆ.
ಶೀರ್ಷಿಕೆ: ಪಯಣ ಲೇಖಕರು: ಲಕ್ಷ್ಮಣ ಕೊಡಸೆ ಪ್ರಕಾಶಕರು: ಸುಮುಖ ಪ್ರಕಾಶನ ಪುಟಗಳು :97 ಬೆಲೆ:ರೂ.42/-
ಕೃಪೆ : ಸುಧಾ
Filed under: ಕಥಾ ಸಂಕಲನ | Tagged: ಪಯಣ, ಲಕ್ಷ್ಮಣ ಕೊಡಸೆ, ಸುಧಾ, ಸುಮುಖ ಪ್ರಕಾಶನ | Leave a comment »
Posted on ನವೆಂಬರ್ 25, 2008 by pusthakapreeethi

ಪೋಲೀಸರಾಗಿರುವ ಗಂಗಾಧರಯ್ಯ ಜಾಲಿಬೆಂಚಿ ರಚಿಸಿರುವ 13 ಕಥೆಗಳ ಸಂಕಲನ ಇದು. ಕೆಲವು ಮಿನಿಕಥೆಗಳಾದರೆ ಮತ್ತೆ ಕೆಲವು ನೀಳ್ಗತೆಗಳು. ಪೋಲೀಸ್ ಇಲಾಖೆಯಲ್ಲಿರುವ ಕಥೆಗಾರರಿಗೆ ವಸ್ತುವಿಗೆ ಕೊರತೆಯಿಲ್ಲ. ಅದೇ ದಾವಂತದಲ್ಲಿ ಕಥೆಗಳನ್ನೂ ರಚಿಸಿದ್ದಾರೆ. ಮೋಸ, ವಂಚನೆಯನ್ನು ಪ್ರೀತಿ, ಸ್ನೇಹದಿಂದ ಗೆಲ್ಲುವ ಇಲ್ಲಿನ ಕಥೆಗಳ ಆಶಯ ಮಾನವೀಯವಾದುದು. ಆದರ್ಶವಾದಿ ನೆಲೆಯಲ್ಲಿ ಇಲ್ಲಿ ಕಥೆಗಳು ಆಕೃತಿ ಪಡೆದಿವೆ. ನಿರಾಳವಾದ ಕಥನ ಕ್ರಮ ಓದಿಸಿಕೊಂಡು ಹೋಗುತ್ತವೆ.
ಕಥೆಗಳ ಜೀವಾಳವೇ ಅನುಭವ. ಅದಿಲ್ಲಿ ಹೇರಳವಾಗಿದೆ, ವೈವಿಧ್ಯಮಯವೂ ಆಗಿದೆ. ಆದರೆ ಕಥೆ ಕಟ್ಟುವ ಕ್ರಮದಲ್ಲಿ ಮತ್ತಷ್ಟು ಕಲಾತ್ಮಕ ಕೌಶಲ್ಯ ದಕ್ಕಿಸಿಕೊಂಡರೆ ಒಳನೋಟಗಳ ಸೂಕ್ಷ್ಮ ಕಥೆಯ ಅರ್ಥ ವಿಸ್ತರಿಸಬಲ್ಲದು. ಪರಿಕರಗಳನ್ನು ಬಳಸಿಕೊಳ್ಳುವ ಕಲೆ ಮತ್ತಷ್ಟು ಸಿದ್ಧಿಸಲಿ ಎಂದು ಮುನ್ನುಡಿ ಬರೆದಿರುವ ಅಬ್ಬಾಸ ಮೇಲಿನಮನಿ ಹಾಗೂ ಬೆನ್ನುಡಿ ಬರೆದಿರುವ ವೆಂಕಟಗಿರಿ ದಳವಾಯಿಯವರ ಮಾತುಗಳು ಸಮಂಜಸವಾಗಿವೆ. ಅಂತಹ ಸಂಯಮದಿಂದ ಕಥೆ ಕಟ್ಟಿದರೆ ಮತ್ತಷ್ಟು ಒಳ್ಳೆಯ ಕೃತಿಗಳನ್ನು ಕೊಡಲು ಸಾಧ್ಯ. ಬೇರೆ ಬೇರೆ ಕ್ಷೇತ್ರಗಳ ಜನ ಹೀಗೆ ಕಥಾಲೋಕ ಪ್ರವೇಶಿಸುವುದರಿಂದ ಕನ್ನಡ ಕಥಾಲೋಕ ಶ್ರೀಮಂತವೂ, ವೈವಿಧ್ಯಮಯವೂ ಆಗುವುದರಲ್ಲಿ ಸಂದೇಹವಿಲ್ಲ.
ಶೀರ್ಷಿಕೆ: ಕವಲುದಾರಿ ಲೇಖಕರು: ಗಂಗಾಧರಯ್ಯ ಜಾಲಿಬೆಂಚಿ ಪ್ರಕಾಶಕರು: ವಿವೇಕಶ್ರೀ ಪ್ರಕಾಶನ ಪುಟಗಳು :142 ಬೆಲೆ:ರೂ.100/-
ಕೃಪೆ : ಸುಧಾ
Filed under: ಕಥಾ ಸಂಕಲನ | Tagged: ಕವಲುದಾರಿ, ಗಂಗಾಧರಯ್ಯ ಜಾಲಿಬೆಂಚಿ, ವಿವೇಕಶ್ರೀ ಪ್ರಕಾಶನ, ಸುಧಾ | Leave a comment »
Posted on ನವೆಂಬರ್ 24, 2008 by pusthakapreeethi

ಕೋಟ್ಯಂತರ ಬೆಲೆ ಬಾಳುವ ಕಬ್ಬಿಣದ ಅದಿರು, ದಟ್ಟವಾದ ಕಾಡು, ಫಲವತ್ತಾದ ಜಮೀನನ್ನು ಹೊಂದಿದ ಸೊಂಡೂರು ಪ್ರದೇಶದ ಭೂಹೋರಾಟ ವಿಶಿಷ್ಟವಾದುದು. ಯಾಕೆಂದರೆ ಇದು ಒಬ್ಬ ಭೂಮಾಲಿಕನ ವಿರುದ್ಧ ಮಾತ್ರವಲ್ಲ. ಮಾಜಿ ದೊರೆ ಹಾಗೂ ಹಾಲಿ ಅಧಿಕಾರದಲ್ಲಿದ್ದ ಮಂತ್ರಿಯ ವಿರುದ್ಧ ಸಂಘಟನೆಗೊಂಡ ಚಳವಳಿ ಆಗಿತ್ತು. ಸ್ವತಂತ್ರ ಪ್ರಾಂತ್ಯವಾಗಿದ್ದ ಸೊಂಡೂರು ಬ್ರಿಟೀಷರು ಭಾರತ ಬಿಟ್ಟುಕೊಟ್ಟ ಬಳಿಕ ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದ ಪ್ರಾಂತ್ಯವೂ ಹೌದು. ಸೊಂಡೂರು ರಾಜಮನೆತನ ಕಾಂಗ್ರೇಸ್ ಚಳವಳಿಯನ್ನು ನಿಷೇಧಿಸಿತ್ತು. ಮುಂದೆ ಇದೇ ವಂಶದವರು ಅರಸು ಮಂತ್ರಿ ಮಂಡಲದಲ್ಲಿ ದೀರ್ಘಕಾಲ ಅರ್ಥ ಸಚಿವರೂ ಆಗಿದ್ದರು!
ಕರ್ನಾಟಕದ ಸಮಾಜವಾದಿ ಚಳವಳಿಗಳ ಅಧ್ಯಯನಕ್ಕೆ ಕನ್ನಡ ವಿವಿಯಲ್ಲಿ ಸ್ಥಾಪಿಸಲಾಗಿರುವ ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಸಂಚಾಲಕ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಅರುಣ್ ಅವರು ಅನೇಕ ಹಳ್ಳಿಗಳನ್ನು ತಿರುಗಾಡಿ, ಹೋರಾಟದಲ್ಲಿ ಪಾಲುಗೊಂಡ ಜನರನ್ನು, ಹಲವು ನಾಯಕರನ್ನು ಭೇಟಿ ಮಾಡಿ ಪೋಲೀಸ್ ಇಲಾಖೆ ದಾಖಲೆಗಳು, ವಿಧಾನಸಭೆಯ ಕಲಾಪಗಳನ್ನು ಪರಿಶೀಲಿಸಿ ಈ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. ಪ್ರಸಾರಾಂಗ ಪ್ರಕಟಿಸಿದ ಹಲವು ದಪ್ಪ ಗಾತ್ರದ ಪುಸ್ತಕಗಳು ಇತ್ತೀಚೆಗೆ ವಿವಾದಕ್ಕೆ ಒಳಗಾಗಿದ್ದವು. ಇಂತಹ ಆರೋಪಗಳಿಗೆ ಈ ಪುಸ್ತಕ ಸ್ವಲ್ಪ ಮಟ್ಟಿಗೆ ಹೊರತಾಗಿದೆ. ಕೆ.ಕೆ.ಮಕಾಳಿಯವರ ಮುಖಪುಟ ವಿನ್ಯಾಸ, ಸರಳ-ಅರ್ಥಪೂರ್ಣವಾಗಿದೆ. ಭಾರಿ ಪ್ರಮಾಣದ ಗಣಿಗಾರಿಕೆಯಿಂದ ಬಳ್ಳಾರಿ ಜಿಲ್ಲೆಯ ಕೃಷಿಯೇ ಇಂದು ನಾಶವಾಗಿ ಹೋಗಿದೆ. ಪ್ರಸ್ತುತತೆಗಿಂತ ಹೆಚ್ಚಾಗಿ ಹಿಂದೆ ಹೀಗಿತ್ತು ಎಂಬ ಇತಿಹಾಸದ ಅಧ್ಯಯನಕ್ಕೆ ಪುಸ್ತಕ ಸಹಕಾರಿಯಾಗಬಲ್ಲದು.
ಶೀರ್ಷಿಕೆ: ಸೊಂಡೂರು ಭೂ ಹೋರಾಟ ಲೇಖಕರು: ಅರುಣ್ ಜೋಳದ ಕೂಡ್ಲಿಗಿ ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಪುಟಗಳು :174 ಬೆಲೆ:ರೂ.80/-
ಕೃಪೆ : ಸುಧಾ
Filed under: ದಾಖಲೆ ಸಾಹಿತ್ಯ | Tagged: ಅರುಣ್ ಜೋಳದ ಕೂಡ್ಲಿಗಿ, ಕನ್ನಡ ವಿಶ್ವವಿದ್ಯಾಲಯ, ಪ್ರಸಾರಾಂಗ, ಸುಧಾ, ಸೊಂಡೂರು ಭೂ ಹೋರಾಟ, ಹಂಪಿ | Leave a comment »
Posted on ನವೆಂಬರ್ 23, 2008 by pusthakapreeethi

ವಿಶಿಷ್ಟ ಬಗೆಯ 66 ಚಿಕ್ಕ ಪದ್ಯಗಳ ಸಂಕಲನ ಇದು. ಆದರೆ ಇವು ಹನಿಗವಿತೆಗಳಲ್ಲ. ಗಜಲ್ ನಂತಹ ಪದ್ಯಗಳು ಎಂದು ಕವಿಯೇ ಹೇಳಿಕೊಂಡಿದ್ದಾರೆ. ಹನಿಗವಿತೆಗಳಿಂದ ಆರಂಭವಾಗಿ ಗಜಲ್ ನತ್ತ ಬೆಳೆಯುವ ಪದ್ಯಗಳು ಎಂಬ ಕವಿಯ ನಿವೇದನೆಯನ್ನು ಬೆನ್ನುಡಿ ಬರೆದಿರುವ ಮೀರಾ ಸಾಬಿಹಳ್ಳಿ ಶಿವಣ್ಣ ಸಮರ್ಥಿಸಿದ್ದಾರೆ. ಆದ್ದರಿಂದಲೇ ಇವು ಕನ್ನಡ ಕಾವ್ಯ ಪ್ರಪಂಚಕ್ಕೆ ಅಪರೂಪ ಎನಿಸುವ ಹನಿಗವಿತೆ-ಗಜಲ್ ಗಳ ಹದವರಿತ ಮಿಶ್ರಣ.
ನನ್ನ ಕವಿತೆಯ ಸಾಲುಗಳ ಮೇಲೆ ಕೆಂಡ ಸುರಿಸಿದ ಸೂರ್ಯ/ಆಕೆಯ ಕೆನ್ನೆ ಸವರಿ ಗುಲ್ ಮೊಹರ್ ಅರಳಿಸಿದ/ ಆಕೆಯ ದಾವಣಿ ಮೇಲೆ ಹರಡಿಕೊಂಡ ಕವಿತೆ/ ಹೂ ಬಿಡಿಸಲು ಹೋದ ಹುಡುಗಿ ಬೆರಗಾದಳು ಕಣ್ಣರಳಿಸಿ ಗಿಡದಲ್ಲೇ / – ಹೀಗೆ ಇಲ್ಲಿನ ಕವಿತೆಗಳು ಬೆರಗುಗಣ್ಣಿನಿಂದಲೇ ಪ್ರೀತಿ-ಪ್ರೇಮದ ನಿರಂತರತೆ ಬೆನ್ನು ಹತ್ತಿ ಕುತೂಹಲ ಹುಟ್ಟಿಸುತ್ತದೆ. ಕವಿತೆಗಳಿಗೆ ಶೀರ್ಷಿಕೆಗಳಿಲ್ಲ. ಜಿ.ಕೆ.ಶಿವಣ್ಣ ಅವರ ರೇಖಾಚಿತ್ರಗಳೇ ಆ ಕೆಲಸವನ್ನು ಅರ್ಥವತ್ತಾಗಿ ನಿಭಾಯಿಸಿವೆ.
ಶೀರ್ಷಿಕೆ: ಅವಳ ಸಾವಿರದ ಚಿತ್ರ ಲೇಖಕರು: ಟಿ. ಎಸ್. ರಾಜೇಂದ್ರ ಪ್ರಸಾದ್ ಪ್ರಕಾಶಕರು: ಮೇಘ ಪಬ್ಲಿಕೇಷನ್ಸ್ ಪುಟಗಳು :88 ಬೆಲೆ:ರೂ.50/-
ಕೃಪೆ : ಸುಧಾ
Filed under: ಕಾವ್ಯ-ಕವನ | Tagged: ಅವಳ ಸಾವಿರದ ಚಿತ್ರ, ಟಿ. ಎಸ್. ರಾಜೇಂದ್ರ ಪ್ರ, ಮೇಘ ಪಬ್ಲಿಕೇಷನ್ಸ್, ಸುಧಾ | Leave a comment »
Posted on ನವೆಂಬರ್ 22, 2008 by pusthakapreeethi

ಅತ್ಯುತ್ತಮ ಮಾನವೀಯ ಮೌಲ್ಯ ವರದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ 1973 ರಿಂದ ಪ್ರತಿ ವರ್ಷ ಕೊಡುತ್ತ ಬಂದಿರುವ ಪಟೇಲ್ ಭೈರಹನುಮಯ್ಯ ಪ್ರಶಸ್ತಿ ಪುರಸ್ಕೃತರ 39 ಲೇಖನಗಳ ಸಂಕಲನ ಇದು. ಇದರಲ್ಲಿ 5 ಇಂಗ್ಲೀಷ್ ಬರಹಗಳೂ ಇವೆ. ಬರದಿಂದ ಬೆಂದು ಬಂದವರ ಬವಣೆ, ಬೆಂಗಳೂರಿನಲ್ಲಿ 10,000 ವೇಶ್ಯೆಯರು (ಈಗ ಈ ಸಂಖ್ಯೆ ಲಕ್ಷ ಮೀರಿರಬೇಕು) ಭೂಮಿ ನಡುಗಿಸುವ ನರಕ, ಮಧ್ಯಮವರ್ಗದ ಮಹಿಳೆ, ಮಲ ಹೊರುವ ಪದ್ದತಿ ಇನ್ನೂ ಜೀವಂತ – ಮುಂತಾದ ಲೇಖನಗಳು ಕರುಳು ಹಿಂಡುವಂತಿದೆ. ತೀರಾ ನಿಕೃಷ್ಟಕ್ಕೊಳಗಾದ ಸ್ಥಿತಿಯನ್ನು ಮಾನವೀಯ ನೆಲೆಯಲ್ಲಿ ನೋಡುವ ಕಾರಣಕ್ಕೆ ಇಂತಹ ಲೇಖನಗಳ ಸಂಕಲನ ಪಠ್ಯವಾಗಬೇಕು ಎಂದೂ ಕೆಲವರು ಸಲಹೆ ಮಾಡಿದ್ದಾರೆ.
ಪ್ರಕಟಿತ ತಮ್ಮ ಲೇಖನವನ್ನು ಕಾಯ್ದಿರಿಸಿಕೊಳ್ಳುವ ಪ್ರವೃತ್ತಿ ಪತ್ರಕರ್ತರಲ್ಲಿ ಕಡಿಮೆ. ಅಂತಹದರಲ್ಲಿ ಶಾಂತಕುಮಾರಿ ಅವರು ತುಂಬಾ ಶ್ರಮವಹಿಸಿ ಇಲ್ಲಿನ ಲೇಖನಗಳನ್ನು ಸಂಗ್ರಹಿಸಿದ್ದಾರೆ. ಜತೆಗೆ ಲೇಖನ ಬರೆದ ಪತ್ರಕರ್ತರ ಕಿರು ಪರಿಚಯವನ್ನೂ ನೀಡಿದ್ದಾರೆ. ಅವರ ಶ್ರಮ ಶ್ಲಾಘನೀಯ. ಬಿ.ಡಿ.ಜಗದೀಶ್ ಅವರ ಚಿತ್ರದೊಂದಿಗೆ ಮುಖಪುಟ ಆಕರ್ಷಕವಾಗಿದೆ. ಬೈರಹನುಮಯ್ಯ ಅವರ ಪುತ್ರ ಬಿ.ಜಿ.ತಿಮ್ಮಪ್ಪಯ್ಯ, ಅವರ ಮಗ ಮಹದೇವ ಪ್ರಸಾದ್ ಹೆಚ್ಚಿನ ನೆರವು ನೀಡಿದ್ದು ಪುಸ್ತಕ ಹೊರಬರಲು ಕಾರಣವಾಗಿದೆ. ಅಷ್ಟಲ್ಲ ಶ್ರಮ ತೆಗೆದುಕೊಂಡ ಶಾಂತಕುಮಾರಿ ಅವರು ಕರಡು ತಿದ್ದುವಲ್ಲಿ ಎಚ್ಚರ ವಹಿಸಿಲ್ಲ. ಮುಖಪುಟದ ಶೀರ್ಷಿಕೆಯ ಜತೆಗೆ ವಿವರಣೆಯ ಮೂರು ದೀರ್ಘ ವಾಕ್ಯ, ಬೆನ್ನುಡಿಯಲ್ಲಿ ಒಂದು ಪುಟ್ಟ ಭಾಷಣ – ಇಂತಹವೆಲ್ಲ ತುಸು ಆಭಾಸಕಾರಿಯಾಗಿವೆ.
ಶೀರ್ಷಿಕೆ: ಮಾನವೀಯ ಮುತ್ತುಗಳು ಲೇಖಕರು: ಶಾಂತಕುಮಾರಿ ಪ್ರಕಾಶಕರು: ಲೀಗಲ್ ಟೈಮ್ ಪಬ್ಲಿಕೇಶನ್ ಪುಟಗಳು :271 ಬೆಲೆ:ರೂ.250/-
ಕೃಪೆ : ಸುಧಾ
Filed under: ವೈಚಾರಿಕ ಸಾಹಿತ್ಯ | Tagged: ಮಾನವೀಯ ಮುತ್ತುಗಳು, ಲೀಗಲ್ ಟೈಮ್ ಪಬ್ಲಿಕೇಶ, ಶಾಂತಕುಮಾರಿ, ಸುಧಾ | Leave a comment »
Posted on ನವೆಂಬರ್ 21, 2008 by pusthakapreeethi

`ದೇವರೆಂಬ ಸುಳ್ಳು‘ ಎಂದೇ ತಮ್ಮ ಗ್ರಂಥಕ್ಕೆ ಶೀರ್ಷಿಕೆ ಕೊಟ್ಟಿರುವ ಸೋಮಯಾಜಿ ಅವರಿಗೆ ಸ್ವತಃ ದೇವರ ಮೇಲೆ ನಂಬಿಕೆ ಇದೆಯಂತೆ! ಆದರೆ ಅವರ ದೇವರು ಬೇರೆಲ್ಲರಿಗಿಂತ ಭಿನ್ನ. ಅದು ಅವರೇ ಸೃಷ್ಟಿಸಿಕೊಂಡ ದೇವರು. ಒಂದು ಆದರ್ಶ ಹಾಗೂ ಗುರಿ ಇಟ್ಟುಕೊಂಡು ಅದನ್ನು ಸಾಧಿಸಲು ಬಾಳಪರ್ಯಂತ ಹೆಣಗಬೇಕು. ದೇಹವನ್ನೇ ದೇಗುಲವಾಗಿಸಿಕೊಂಡು ಪ್ರೀತಿ, ಸಹನೆ, ಸೌಹಾರ್ದದಿಂದ ನಮ್ಮ ಗುರಿ ಸಾಧನೆಗೆ ಶ್ರಮಿಸಿದರೆ ಆಗ ನಾವೇ ದೇವರಾಗುತ್ತೇವೆ. `ಅಹಂ ಬ್ರಹ್ಮಾಸ್ಮಿ‘, `ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ…‘ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ದೇವರ ಹೆಸರಿನಲ್ಲಿ ಮೌಢ್ಯವನ್ನು ಕಳೆಯುವ ಯತ್ನವನ್ನು ಈ ಪುಸ್ತಕದ 10 ಲೇಖನಗಳಲ್ಲಿ ಮಾಡಿದ್ದಾರೆ.
`ನನ್ನ ದೇವರು ನಿಷ್ಕಳಂಕ, ದಯಾಮೂರ್ತಿ‘ ಎಂದು ಪರಿಭಾವಿಸಿಕೊಂಡ ಆಸ್ತಿಕರು ಸಂಕಟ ಬಂದಾಗ ದೇವರನ್ನು ಜರಿಯಲು ಹಿಂಜರಿಯುವುದಿಲ್ಲ. ಅಂತಹ ಸಂದರ್ಭದಲ್ಲೂ ದೇವರ ಕಾರ್ಯವಿಧಾನವನ್ನು ಪ್ರಶ್ನಿಸಲು ಹುಲು ಮಾನವರಾದ ನಾವೆಷ್ಟರವರು ಎಂದು ಸಮಾಧಾನ ಮಾಡಿಕೊಳ್ಳುತ್ತಾರೆ. ಹೀಗೆ ಮನುಷ್ಯನೇ ಸೃಷ್ಟಿಸಿದ ದೇವರ ಪ್ರಸಂಗದ ರೋಮಾಂಚನಕಾರಿ ಕಥನವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಹೆಸರಾಂತ ಕತೆಗಾರರೂ ಆಗಿರುವ ಸೋಮಯಾಜಿ ಅವರು ಪ್ರಶ್ನೆ, ಸಂಭಾಷಣಾ ರೂಪದಲ್ಲಿ ದೇವರು ಎಂಬ ಅಮೂರ್ತ ವಿಚಾರದ ಮೇಲೆ ವಿಚಾರಪೂರ್ಣ ವಿಶ್ಲೇಷಣೆಯನ್ನು ಈ ಪುಸ್ತಕದಲ್ಲಿ ನಡೆಸಿದ್ದಾರೆ.
ಶೀರ್ಷಿಕೆ: ದೇವರೆಂಬ ಸುಳ್ಳು ಧರ್ಮವೆಂಬ ದ್ವೇಷ ಲೇಖಕರು: ಶಾಂತಾರಾಮ ಸೋಮಯಾಜಿ ಪ್ರಕಾಶಕರು: ನವ ಕರ್ನಾಟಕ ಪ್ರಕಾಶನ ಪುಟಗಳು :120 ಬೆಲೆ:ರೂ.65/-
ಕೃಪೆ : ಸುಧಾ
Filed under: ವೈಚಾರಿಕ ಸಾಹಿತ್ಯ | Tagged: ದೇವರೆಂಬ ಸುಳ್ಳು ಧರ್ಮ, ನವ ಕರ್ನಾಟಕ ಪ್ರಕಾಶನ, ಶಾಂತಾರಾಮ ಸೋಮಯಾಜಿ, ಸುಧಾ | Leave a comment »