2008 ವರ್ಷದ ಓದು

2008-varshada-odu122008-varshada-odu2

ಸಂಧ್ಯಾಮಾಮಿ ಸ್ಟೋರಿ

sandhyamaami-helida-pranigala-kathegalu1

ಕ್ಲಾಸಿಕ್ ಕತೆಗಳು, ಪ್ರಾಣಿಗಳ ಕತೆಗಳು, ಬುದ್ಧಿವಂತರ ಕತೆಗಳು, ಜಾಣರ ಕತೆಗಳು, ಗಮ್ಮತ್ತಿನ ಕತೆಗಳು ಹೀಗೆ `ಕಲ್ಲುಸಕ್ಕರೆಸರಣಿಯಲ್ಲಿ ಐದು ಪುಸ್ತಕಗಳಲ್ಲಿ ಸಂಧ್ಯಾಮಾಮಿ ಮಕ್ಕಳಿಗೆ ಕತೆಯನ್ನು ಹೇಳಿದ್ದಾರೆ. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಮಕ್ಕಳ ಕತೆಗಳಿಗೆ ಅಷ್ಟೇ ಪ್ರಾಮುಖ್ಯತೆ ಕೊಟ್ಟು ಪ್ರಕಟಿಸುವ ಕೆಲಸ ಮಾಡಿದೆ. ಮಕ್ಕಳಿಗೆ ಮುದ ಕೊಡುವ ಚಿತ್ರಗಳಿವೆ. ಒಳಗಿನ ಚಿತ್ರಗಳು ಕಪ್ಪು ಬಿಳುಪು ಎಂಬುದನ್ನು ಬಿಟ್ಟರೆ ಪುಸ್ತಕ ಕಲರ್ ಫುಲ್ಲಾಗಿದೆ. ಕತೆಗಳಲ್ಲಿ ಯಾವುದೇ ವಿಚಾರವಾದ ಇರದ ಕಾರಣ ಮಕ್ಕಳಿಗೆ ಪ್ರಿಯವಾಗುತ್ತದೆ.

`ಸುಖವನ್ನು, ಸಂತೋಷವನ್ನು ಹಂಚಿಕೊಂಡರೆ ನೂರ್ಮಡಿಯಾಗುತ್ತದೆ ಎಂದರು ಬಲ್ಲವರು. ನನ್ನ ಕಥೆಗಳಿಗೂ ಈ ಯೋಗ ಬಂತು. `ತರಂಗದ ಮಕ್ಕಳ ಪುಟದಲ್ಲಿ ಸೇರಿಕೊಂಡು ಕೇಳಿದ, ಓದಿದ ಕಥೆಗಳು ಹೊಸ ಆಯಾಮ ಕಂಡವು. ಲಕ್ಷಾಂತರ ಪುಟ್ಟರು, ಚಿಣ್ಣರು ಓದಿಸಿ, ಕೇಳಿ, ಓದಿ ಖುಷಿಪಟ್ಟರುಎಂದಿದ್ದಾರೆ ಸಂಧ್ಯಾಮಾಮಿ.

ಓದದ ಚಿಣ್ಣರು, ಪುಟ್ಟರು ಈ ಪುಸ್ತಕ ಮಿಸ್ ಮಾಡೋ ಹಾಗಿಲ್ಲ. ಇದು ಮಕ್ಕಳಿಗೆ ಕತೆಗಳ ಹಬ್ಬ, ಪೋಷಕರು ಮತ್ತು ಶಾಲಾ ಟೀಚರ್ ಗಳಿಗೂ ಕೂಡಾ ಎಂದು ಎಲ್ಲರೂ ಅಭಿಪ್ರಾಯ ಪಡಬಹುದು.

ಶೀರ್ಷಿಕೆ: ಕಲ್ಲುಸಕ್ಕರೆ – 2 ಸಂಧ್ಯಾಮಾಮಿ ಹೇಳಿದ ಪ್ರಾಣಿಗಳ ಕತೆಗಳು ಲೇಖಕರು: ಸಂಧ್ಯಾಮಾಮಿ ಪ್ರಕಾಶಕರು: ಸಾಹಿತ್ಯ ಪ್ರಕಾಶನ ಪ್ರತೀ ಪುಸ್ತಕದ ಪುಟಗಳು : ಕನಿಷ್ಠ 78 ಪ್ರತೀ ಪುಸ್ತಕದ ಬೆಲೆ:ರೂ. 30/-

ಕೃಪೆ : ಪ್ರಜಾವಾಣಿ

ಹಳ್ಳಿ, ಪೇಟೆಯ ನಡುವಣ ಸೇತುವೆ

gubbi-hallada-saakshiyalli

ಎಲ್.ಸಿ.ಸುಮಿತ್ರಾ ಮಲೆಯ ತಡಿಯಲ್ಲಿ ನೆಲೆಸಿ ಮಲೆನಾಡಿನ ನಾಡನ್ನೂ ಅಲ್ಲಿನ ಕಾಡನ್ನೂ ಅರಿತವರಾಗಿ ಅವುಗಳ ನಡುವೆ ಒಂದು ಬಗೆಯ ಸಮನ್ವಯ ಸಾಧಿಸುವುದನ್ನು ಕೇಂದ್ರಬಿಂದುವಾಗಿಸಿ ಕತೆ ಬರೆದವರು. `ಗುಬ್ಬಿ ಹಳ್ಳದ ಸಾಕ್ಷಿಯಲ್ಲಿಅವರ ಒಂದು ಕತೆಯಾಗಿದ್ದರೂ ಇಡೀ ಸಂಕಲನದ ಜವಾಬ್ದಾರಿ ಹೊತ್ತುನಿಂತ ಶೀರ್ಷಿಕೆಯದು. `ಎಂತಹ ಕಡು ಬೇಸಿಗೆಯಲ್ಲಾದರೂ ಹಕ್ಕಿಗಳು ಕುಡಿಯುವಷ್ಟಾದರೂ ನೀರಿರುತ್ತದೆ ಎಂದು ಗುಬ್ಬಿಹಳ್ಳಿಯ ಹಳ್ಳಕ್ಕೆ ಬರುತ್ತವೆ. ಅಗತ್ಯ ಮುಗಿದಾಗ ನಗರಕ್ಕೆ ಮುಖಮಾಡುತ್ತವೆ! ಅಂತೆಯೇ ಇಲ್ಲಿನ ಕತೆಗಳ ಪಾತ್ರಗಳೂ.

`ಗುಡಿಯೊಳಗೆಕತೆಯ ರಾಮ, ನಿಮ್ನ ಜಾತಿಯವ. ಹೇಗೋ ವಿದ್ಯಾಭ್ಯಾಸ ಪಡೆದು ನಗರ ಸೇರಿದ. ಬ್ರಾಹ್ಮಣ ಕನ್ಯೆಯನ್ನು ವಿವಾಹವಾದಾಗ ಹಳ್ಳಿಯಲ್ಲಿದ್ದ ಅಮ್ಮ ಕೂಡಾ ದೂರವಾದರು. ತಮ್ಮ ಹಳ್ಳಿಯ ದೇವರ ಗುಡಿಗೆ `ರಾಮಣ್ಣನವರಾಗಿಮರಳಿ ಬಂದರೂ ಅಲ್ಲಿ ಮರುವಾಸ್ತವ್ಯ ಹೂಡುವುದಿಲ್ಲ.

`ಗುಬ್ಬಿಹಳ್ಳಿ ಸಾಕ್ಷಿಯಲ್ಲಿನ ನಿಸರ್ಗ ಪಟೇಲ್ ಅಂಥವನಲ್ಲ. ಆತ ಹಳ್ಳಿಯಿಂದ ಪೇಟೆಗೆ ಹೋಗಿ ವಿದ್ಯಾಭ್ಯಾಸ ಮುಗಿಸಿದ, ಮರಳಿ ಹಳ್ಳಿಗೆ ಬಂದ. `ಕಲ್ಲಿನ ಕೋಳಿಯ ಸುನೀಲ ಪೇಟೆಗೆ ಹೋಗಿ ಉದ್ಯೋಗ ಹಿಡಿದರೂ ತನ್ನ ಮುರಿದ ಕೈಗೆ ನಾಟಿ ಮದ್ದು ಮಾಡಲು ರಜ ತೆಗೆದು ಹಳ್ಳಿಗೇ ಬಂದ. `ಯು ಕಟ್ಕತೆಯಲ್ಲಿ ಕೋಮಲಾಳ ಗಂಡ ತಾನು ಹಳ್ಳಿಯ ತೋಟಗದ್ದೆಗಳನ್ನು ಮಾರಿ ಸೇರಿದ್ದು ಪಟ್ಟಣಕ್ಕೆ. `ಒಂದು ಮುಚ್ಚಳ ಹಾಕಿದ ಪೆಟ್ಟಿಗೆಯಲ್ಲಿನ ಆ ಪೆಟ್ಟಿಗೆ ಇಲಿ ತಿಂದು ತೂತು ಬಿದ್ದಿದ್ದರೂ ಅದು ಹೋಗಿ ಸೇರಿದ್ದು ಪಟ್ಟಣಕ್ಕೆ.

ಸುಮಿತ್ರಾ ಅವರದು ಹಳ್ಳಿ ಪಟ್ಟಣಗಳ ನಡುವೆ ಸೇತುವೆ ಕಟ್ಟುವ ಕೆಲಸ. ಅವರ ಜಾಣ್ಮೆ ಎಲ್ಲಿದೆಯೆಂದರೆ ಹಳ್ಳಿ, ಪಟ್ಟಣಗಳಲ್ಲಿ – ಇಂದಿನ ಪರಿಸರವಾದಿಗಳ ಹಾಗೆ – ಹಳ್ಳಿಯೇ ಸರ್ವಶ್ರೇಷ್ಠ ಎಂದು ಹೇಳ ಹೊರಡದೇ ಇರುವುದರಲ್ಲಿ. `ಅಲೆಗಳ ನಡುವೆಯಂತಹ ಕತೆಯಲ್ಲಿ ಐವರು ಗೆಳತಿಯರು ಕೈಗೊಂಡ ಯಾತ್ರೆಯಲ್ಲಿ ಕೇರಳದ ಪ್ರಕೃತಿಯ ಮನೋಜ್ಞ ವರ್ಣನೆಯಿದೆ. ಆದರೂ ಅವರೇನೂ ಹಳ್ಳಿಯಲ್ಲಿ ನೆಲೆ ನಿಲ್ಲ ಬಂದವರಲ್ಲ. `ಗುಬ್ಬಿಹಳ್ಳಿ ಸಾಕ್ಷಯಲ್ಲಿನ ನಿಸರ್ಗ ಪಟೇಲ್ ಎಸ್ಟೇಟ್ ಮಾಲಕ, ಸಿರಿವಂತ. ತಾನು ಹಳ್ಳಿಯ ಬಡವರಿಗೆ ಸಹಾಯ ಸಹಾಯ ಮಾಡುವುದಾಗಿ ಹೇಳಿಕೊಳ್ಳುತ್ತಾನೆ. ಕಾರಿನಲ್ಲಿ ಹೋಗುವಾಗ ಎದುರು ಬಡವರನ್ನು ಕಂಡರೆ ಈತ ಇರಿಸುಮುರಿಸುಗೊಳ್ಳುತ್ತಾನಂತೆ. ಅದೇ ಹೊತ್ತಿಗೆ ತನ್ನ ಮಗಳಿಗೆ ಪೇಟೆಯಲ್ಲಿ ವಿದ್ಯಾಭ್ಯಾಸದ ಏರ್ಪಾಟು ಮಾಡುತ್ತಾನೆ. ಈತ ಎಷ್ಟರಮಟ್ಟಿಗೆ ಹಳ್ಳಿಯವರಿಗೆ ನಿಷ್ಠ-ಎಂಬುದನ್ನು ಕಂಡುಕೊಳ್ಳಲೋ ಎಂಬಂತೆ ಅವನಿ ಪ್ರವೇಶಿಸುತ್ತಾಳೆ. ಅಂದರೆ ನಿಸರ್ಗ ಪಟೇಲ್ ನ ಹಳ್ಳಿ ಪ್ರೀತಿ ಪ್ರಶ್ನಾತೀತವಲ್ಲ ಎಂದ ಹಾಗಾಯಿತು.

ಇನ್ನು ಹಳ್ಳಿಗಳಾದರೋ ಹಿಂದಿನಂತೆ ಈಗಿಲ್ಲ. ಊರ ಕೋಳಿಯ ಮೊಟ್ಟೆ ಕೂಡ ಸಿಗದ ಹಳ್ಳಿಗಳು. ನಗರದ ಮಂದಿ ತಿಂದು ಸುಖಿಸುವುದಕ್ಕಿರುವ ಐಸ್ ಕ್ರೀಮ್ಗೆ ಪರಿಮಳ ಕೊಡಲು ಊರಕೋಳಿಗಳನ್ನು ಖಾಲಿಮಾಡಲಾಯಿತು. ಅಂದರೆ ಕೋಳಿಗಳಿದ್ದ ಪಕ್ಷದಲ್ಲಿ ಅವು ವೆನಿಲ್ಲಾ, ಕೋಳಿಗಳಿಗಿಂತ ಶ್ರೇಷ್ಠವಾಗಿ ಬಿಟ್ಟದ್ದು – ಈ ಹಳ್ಳಿಗರಿಗೆ.

ಉಪಮೆ ಹಾಗೂ ರೂಪಕಗಳ ಜೊತೆ ಸರಸವಾಡುವುದನ್ನು ಸುಮಿತ್ರಾ ಅವರು ಬಹಳ ಇಷ್ಟಪಡುತ್ತಾರೆ. `ಅಂದಂದೇ ಹುಟ್ಟಿತ್ತುಎಂಬ ಕತೆಯಲ್ಲಿನ ಒಂದು ದಿನದ ಬಾಳಿನ ಅಣಬೆಯೊಂದಿಗೆ ನೂರು ವರ್ಷ ಆಯುಸ್ಸುಳ್ಳ ಮನುಷ್ಯನ ಬದುಕನ್ನು ಸಮಾನವಾಗಿ ಕಾಣುವ ಪ್ರಯತ್ನವಾಗಲೀ `ಸುಳಿಯೊಳಗಿನ ಬೆಂಕಿಯಲ್ಲಿ ಸುಂದರತ್ತೆಯ ತಲೆಗೆ ತೆಂಗಿನ ತಲೆ ಗಂಟುಬಿದ್ದು `ತಲೆಯಿರುವವರಿಗೆ ಮಾತ್ರ ಬದುಕುವ ಹಕ್ಕೇ?’ ಎಂಬ ಘೋಷಣೆ ಹೊಮ್ಮುವುದಾಗಲೀ ಉಪಮೆ ರೂಪಕಗಳ ಖಯಾಲಿಯ ಪರಿಣಾಮ.

ಸುಮಿತ್ರಾ ಅವರ ಬರಹದಲ್ಲಿ ತಮ್ಮದೇ ಆದ ಮುದ್ರೆಯಿದೆ. ಸಾಮಾನ್ಯವಾಗಿ ಕತೆ ಬರೆಯುವಾಗ ಬಳಸುವ ಭಾಷೆಗಿಂತ ತುಸು ಹೆಚ್ಚು ಗದ್ಯಗಂಧಿಯಾಗಿ, ಕತೆಯ ಸಾಮಾನ್ಯ ಲಕ್ಷಣವಾದ ಆದಿ ಮಧ್ಯ ಅಂತ್ಯಗಳನ್ನು ಬದಿಗಿಟ್ಟು ಹೇಗೋ ಹೊರಟು ನಿಂತುಬಿಡುವ ಎಬ್ ಸ್ಟ್ರಾಕ್ಟ್ (ಅಸಂಗತ) ಗಳಾಗಿ ಇಲ್ಲಿನ ಕೆಲವು ಕತೆಗಳು ಕಾಣಿಸಿಕೊಳ್ಳುತ್ತವೆ. ಫ್ಲಾಶ್ ಬ್ಯಾಕ್ ತಂತ್ರ ಕೂಡ ಅವರಿಗೆ ಅಷ್ಟೇ ಪ್ರಿಯ : `ಒಂದು ಮುಚ್ಚಳ ಹಾಕಿದ ಪೆಟ್ಟಿಗೆ‘, `ಗಣ ಬಂದು ಹೋದಾಗಇತ್ಯಾದಿ ಕತೆಗಳಲ್ಲಿ ಅವು ಮಾಮೂಲಿ ಎಂಬಂತೆ ಕಾಣಿಸಿಕೊಳ್ಳುತ್ತವೆ. ಆದರೆ `ಅಲೆಗಳ ನಡುವೆಎಂಬ ವಿಚಿತ್ರ ವಿನ್ಯಾಸದ ಐದು ಪಾತ್ರಗಳು ತಮ್ಮ ಕಣ್ಣೆದುರಿಗಿದ್ದವರ ಹಾಗೂ ಇರದವರ ಕುರಿತು ಮಾತನಾಡುತ್ತಲೇ ಆಯಾ ಪಾತ್ರಗಳನ್ನು ಕಟ್ಟಿಕೊಡುವ ಪರಿ ಮನೋಜ್ಞವಾಗಿದೆ. ಒಂದೊಂದು ಪಾತ್ರದ ಹಿಂದೆಯೂ ಒಂದೊಂದು ಕತೆಯಿರುವಾಗ ಎಲ್ಲವನ್ನೂ ಒಂದು ಕತೆಯಲ್ಲಿ ಹಿಡಿದಿಡುವುದು ಒಂದು ಕಾದಂಬರಿಗೆ ಗ್ರಾಸವಾಗುವ ವಸ್ತು. ಇಲ್ಲಿ ಫ್ಲಾಶ್ ಬ್ಯಾಕ್ ತಂತ್ರ ಸುಮಿತ್ರಾ ಅವರೊಂದಿಗೆ ಅಪೂರ್ವವೆಂಬಂತೆ ಸಹಕರಿಸಿದೆ. ಟಿ.ಪಿ. ಅಶೋಕ ಅವರ ಮುನ್ನುಡಿ ಸಂಕಲನದ ಮಹತ್ವವನ್ನು ಹೆಚ್ಚಿಸಿದೆ

ಡಾ. ನಾ. ದಾಮೋದರ ಶೆಟ್ಟಿ

ಶೀರ್ಷಿಕೆ: ಗುಬ್ಬಿಹಳ್ಳದ ಸಾಕ್ಷಿಯಲ್ಲಿ ಲೇಖಕರು: ಎಲ್.ಸಿ.ಸುಮಿತ್ರಾ ಪ್ರಕಾಶಕರು: ಅಂಕಿತ ಪುಸ್ತಕ ಪುಟಗಳು:96 ಬೆಲೆ:ರೂ.70/-

ಕೃಪೆ : ಪ್ರಜಾವಾಣಿ

ರೂಪ, ರಸ, ಗಂಧ, ಸ್ಪರ್ಶ, ನಾದಗಳ ಮೂಲಕ ಗ್ರಹಿಸಿದ್ದು ಸಾಹಿತ್ಯವಾಗುತ್ತದೆ

panchaballiya-kathegalu

ಮನುಷ್ಯ ಸುತ್ತಲಿನ ಜಗತ್ತನ್ನು, ಬದುಕನ್ನು ಗ್ರಹಿಸುವುದೇ ಪಂಚೇಂದ್ರಿಗಳ ಮೂಲಕ. ರೂಪ, ರಸ, ಗಂಧ, ಸ್ಪರ್ಶ, ನಾದಗಳ ಮೂಲಕ ಗ್ರಹಿಸಿದ್ದು ಸಾಹಿತ್ಯವಾಗುತ್ತದೆ ಎಂಬ ಮೂಲಭೂತ ಗ್ರಹಿಕೆಯನ್ನಿಟ್ಟುಕೊಂಡು ಈ `ಪಂಚಬಳ್ಳಿಯ ಕಥೆಗಳುಪುಸ್ತಕದಲ್ಲಿ ಐದು ಕಥೆಗಳನ್ನು ಸವಿತಾ ಶ್ರೀನಿವಾಸ್ ಕೊಟ್ಟಿದ್ದಾರೆ.

ಲೇಖಕಿಯೇ ಹೇಳುವಂತೆ ಇಲ್ಲಿನ ಕಥೆಗಳು `ಅಸಾಮಾಜಿಕವೇ‘. ಅವರು ಇಲ್ಲಿ ಫ್ಯಾಂಟಸಿ, ವಿಜ್ಞಾನ, ಮನಶಾಸ್ತ್ರ, ಪೌರಾಣಿಕ ವಿಷಯಗಳನ್ನು ಬಳಸಿದ್ದಾರೆ. ಹಾಗೆ ನೋಡಿದರೆ ಇಲ್ಲಿನ ಕಥೆಗಳು ಬಳಸುವ ಭಾಷೆ ನಾವು ಕೇಳುವ ನಿತ್ಯದ ಕನ್ನಡದಂತಿಲ್ಲ.

ಒಂದು ಉದಾಹರಣೆಯನ್ನು ನೋಡಬಹುದು.

`ಏನು ಪ್ರಿಯವರ, ಸರಿಯಾದ ಸಮಯಕ್ಕೆ ನನ್ನನ್ನು ಸಂಪರ್ಕಿಸಿದಿರಿ

`ಯಾಕೆ … ಏನಾದರೂ ಬೆಳವಣಿಗೆ ಕಂಡು ಬಂತೇ?’

`ಹೂಂ… ಪ್ರಕೃತಿಯಲ್ಲಿ ಕೆಲವೊಂದು ವೈಚಿತ್ರ್ಯಗಳು ಜರುಗಿದವು. ಅದರ ಮುಂದಿನ ಹಂತವನ್ನು ಪ್ರಯೋಗಾಲಯದಲ್ಲಿ ಕಾಣಬೇಕಿದೆ.

(ಮಿನುಗಲೇ ಮಿಂಚುಳ್ಳಿ/13)

ಮಹಾಭಾರತದ ವಸ್ತುವನ್ನು ಆಧರಿಸಿದ `ಸುಗಂಧವಲ್ಲರಿಯ ಜಾಡು ಹಿಡಿದು. . .‘, ವೇಶ್ಯೆಯೊಬ್ಬಳ ಅಂತರಂಗವನ್ನು ಬಿಚ್ಚಿಡುವ `ಕೆಂಪು ನಗರಿಯ ಕಪ್ಪು ಜನರುತಮ್ಮ ಸೀಮಿತ ವಸ್ತುವಿನ ನಡುವೆಯೇ ಓದಲು ಅರ್ಹವಾದ ಕಥೆಗಳು.

ಶೀರ್ಷಿಕೆ: ಪಂಚಬಳ್ಳಿಯ ಕಥೆಗಳು ಲೇಖಕರು: ಸವಿತಾ ಶ್ರೀನಿವಾಸ ಪ್ರಕಾಶಕರು: ದಿವ್ಯಚಂದ್ರ ಪ್ರಕಾಶನ ಪುಟಗಳು:160 ಬೆಲೆ:ರೂ.50/-

ಕೃಪೆ : ಪ್ರಜಾವಾಣಿ

ಕಾರ್ನಾಡರ ಕುರಿತ ಎತ್ತರದ ಚರ್ಚೆ

girish-karnaad

ಸ್ವಾತಂತ್ರ್ಯೋತ್ತರ ಭಾರತದ ಮುಖ್ಯ ನಾಟಕಕಾರರಲ್ಲಿ ಗಿರೀಶ್ ಕಾರ್ನಾಡರು ಪ್ರಮುಖರು. ಅವರ ತುಘಲಕ್ ಮತ್ತು ನಾಗಮಂಡಲ ನಾಟಕಗಳು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿವೆ. ಇಷ್ಟಿದ್ದರೂ ಕನ್ನಡ ವಿಮರ್ಶೆ ಎಲ್ಲೋ ಒಂದು ಕಡೆ ಅವರನ್ನು ನಿರ್ಲಕ್ಷಿಸಿಕೊಂಡು ಬಂದಿದೆ ಎಂಬ ಭಾವ ನನ್ನಂಥವರಲ್ಲಿ ನಿಧಾನವಾಗಿ ಮೂಡುತ್ತಿವೆ. ಇದೀಗ 70 ದಾಟಿರುವ (ಜನನ: ಮೇ 19, 1938) ಅವರ ಎಲ್ಲಾ ಕೃತಿಗಳನ್ನು ಸಮಗ್ರವಾಗಿ ವಿಶ್ಲೇಷಿಸುವ, ಪರಿಚಯಿಸುವ (ಕನಿಷ್ಠ ಅಭಿನಂದನಾ ಗ್ರಂಥ ರೂಪದಲ್ಲಾದರೂ) ಒಂದಾದರೂ ಮಹತ್ವದ ಗ್ರಂಥವೊಂದನ್ನು ನಮಗೆ ಇದುವರೆಗೆ ಹೊರತರಲಾಗಲಿಲ್ಲ. ಸಾಮಾನ್ಯ ಬರಹಗಾರರ ಬಗೆಗೆ ಬೃಹತ್ ಗ್ರಂಥಗಳು ಪ್ರಕಟವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇಂಥ ಗೈರು ಹಾಜರಿಯು ನಮ್ಮ ಸಾಹಿತ್ಯದ ವಾತಾವರಣ ಅಷ್ಟೇನೂ ಆರೋಗ್ಯಕರವಾಗಿಲ್ಲ ಎಂಬುದನ್ನು ಸೂಚಿಸುತ್ತದೆ.

ಇಂಥ ನಿರಾಶಾದಾಯಕ ವಿಮರ್ಶನ ಸಂದರ್ಭದಲ್ಲಿ ಡಾ.ಸಿ.ಎನ್.ರಾಮಚಂದ್ರನ್ ಅವರು ಕಾರ್ನಾಡರ ಬಗೆಗೆ ಪ್ರಸ್ತುತ ಪುಸ್ತಕವನ್ನು ಪ್ರಕಟಿಸಿ, ಕೊರತೆಯೊಂದನ್ನು ನೀಗಿಸಲು ಪ್ರಯತ್ನಿಸಿದ್ದಾರೆ.

ಈ ಕೃತಿಯ ಏಳು ಅಧ್ಯಾಯಗಳಲ್ಲಿ ಪ್ರಮುಖವಾಗಿ ಮೂರು ವಿಷಯಗಳ ಕುರಿತು ವಿವರಗಳಿವೆ. ಮೊದಲನೆಯ ಮುಖ್ಯ ವಿಷಯವೆಂದರೆ, ಆರಂಭದಲ್ಲಿ ನೀಡಲಾದ ಕಾರ್ನಾಡರ ಜೀವನ ವಿವರಗಳು. ಎರಡನೆಯದು ಇತಿಹಾಸ ಚರಿತ್ರೆಗಳ ಬಗೆಗಣ ನಮ್ಮ ಅಪಕಲ್ಪನೆಗಳ ಕುರಿತಾದ ಚರ್ಚೆ ಮತ್ತು ಕೊನೆಯದಾಗಿ ಕಾರ್ನಾಡರು ಬರೆದ ತುಘಲಕ್, ತಲೆದಂಡ ಹಾಗೂ ಟಿಪ್ಪು ಸುಲ್ತಾನ್ ಕಂಡ ಕನಸು ಈ ಮೂರು ಚಾರಿತ್ರಿಕ ನಾಟಕಗಳ ವಿಶ್ಲೇಷಣೆ.

ಮೊದಲನೆಯ ವಿಷಯಕ್ಕೆ ಸಂಬಂಧಿಸಿದಂತೆ, ಲೇಖಕರು ಕಾರ್ನಾಡರ ಬಗೆಗೆ ನಮಗೆ ಗೊತ್ತಿಲ್ಲದ ಅನೇಕ ವಿವರಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಇದಕ್ಕಾಗಿ ಅವರು ಕಾರ್ನಾಡರನ್ನು ನೇರವಾಗಿ ಸಂದರ್ಶಿಸಿದ್ದಾರೆ. ಅವರ ಬಗೆಗೆ ಕನ್ನಡದಲ್ಲಿ – ಇಂಗ್ಲೀಷಿನಲ್ಲಿ ಪ್ರಕಟವಾದ ಲೇಖನ ಹಾಗೂ ಗ್ರಂಥಗಳನ್ನು ಪರಾಮರ್ಶಿಸಿದ್ದಾರೆ. ಕಾರ್ನಾಡರನ್ನು ಹತ್ತಿರದಿಂದ ಬಲ್ಲ ಗೆಳೆಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. 20ನೇ ಶತಮಾನದ ಉತ್ತರಾರ್ಧದ ಭಾರತೀಯ ಸಾಂಸ್ಕೃತಿಕ ಲೋಕದ ಒಳಸುಳಿವುಗಳನ್ನು ಕಾರ್ನಾಡರ ಮೂಲಕ ಅರ್ಥ ಮಾಡಿಕೊಳ್ಳ ಬಯಸುವವರಿಗೆ ಇಲ್ಲಿನ ವಿಷಯಗಳು ಬಹುವಾಗಿ ಸಹಕರಿಸಬಲ್ಲುವು.

ಎರಡನೇ ವಿಷಯಕ್ಕೆ ಸಂಬಂಧಿಸಿದಂತೆ ರಾಮಚಂದ್ರನ್ ಅವರು ತಮ್ಮ ವ್ಯಾಪಕ ಓದಿನ ಬಲದಿಂದ ಕಾರ್ನಾಡರ ಚಾರಿತ್ರಿಕ ನಾಟಕಗಳ ಸ್ಥಾನ ನಿರ್ದೇಶನ ಮಾಡಲು ಅನುಕೂಲಕರವಾಗುವಂಥ ಬೃಹತ್ ಚೌಕಟ್ಟೊಂದನ್ನು ನಿರ್ಮಿಸಿಕೊಡುತ್ತಾರೆ. `ಕಾರ್ನಾಡರು ಎಂಥ ನಾಟಕಕಾರರು? ಅವರ ನಾಟಕಗಳ ಮೂಲ ಪ್ರೇರಣೆಗಳೇನು‘ (ಪು:20) ಎಂಬಂಥ ಪ್ರಶ್ನೆಗಳನ್ನು ಕೇಳಿಕೊಂಡ ಲೇಖಕರು, ಕಾರ್ನಾಡರನ್ನು ಪ್ರಭಾವಿಸಿರಬಹುದಾದ ಪರಂಪರೆ, ಪುರಾಣಗಳು, ಜಾನಪದ, ನವ್ಯ ಸಾಹಿತ್ಯ, ವರ್ಣಾಶ್ರಮ ಧರ್ಮ ಮತ್ತಿತರ ವಿಷಯಗಳನ್ನು ಕೂಲಂಕಷವಾಗಿ ಚರ್ಚಿಸುತ್ತಾರೆ, ಚರಿತ್ರೆ-ಇತಿಹಾಸಗಳ ಬಗೆಗಣ ನಮ್ಮ ತಿಳುವಳಿಕೆಯನ್ನು ಪರಿಷ್ಕರಿಸಿಕೊಳ್ಳಲು ಒತ್ತಾಯಿಸುತ್ತಾರೆ. `ಚರಿತ್ರೆಯೆಂಬ ಜ್ಞಾನ ಮಾರ್ಗಗತವನ್ನು ಕುರಿತ ಕಥನವಾದರೂ ಅದರ ಲಕ್ಷ್ಯ ವರ್ತಮಾನವೇ (ಪು:53) ಎಂಬಂಥ ಆರೋಗ್ಯಕರವಾದ ತೀರ್ಮಾನದ ಹಿನ್ನೆಲೆಯಲ್ಲಿ ಅವರು ಕಾರ್ನಾಡರ ಚಾರಿತ್ರಿಕ ನಾಟಕಗಳ ವಿಮರ್ಶೆ-ವ್ಯಾಖ್ಯಾನಗಳನ್ನು ಮುಂದುವರೆಸುತ್ತಾರೆ.

ಕೃತಿಯ ಮುಖ್ಯ ಶರೀರವಾದ ನಾಲ್ಕು, ಐದು ಮತ್ತು ಆರನೇ ಅಧ್ಯಾಯಗಳಲ್ಲಿ ಕಾರ್ನಾಡರ ಚಾರಿತ್ರಿಕ ನಾಟಕಗಳ ಗಂಭೀರ ವಿಶ್ಲೇಷಣೆಯ ಸಂದರ್ಭದಲ್ಲಿ ಸಿ.ಎನ್.ಆರ್. ಅವರು ಕಾರ್ನಾಡರ ಚಾರಿತ್ರಿಕ ನಾಟಕಗಳಿಗೆ ಸಂವಾದಿಯಾಗಿ ಭಾರತೀಯ ಭಾಷೆಗಳಲ್ಲಿ ಹಾಗೂ ಪಾಶ್ಚಾತ್ಯ ಭಾಷೆಗಳಲ್ಲಿ ಬಂದಿರುವ ಅನೇಕ ಕೃತಿಗಳನ್ನು ಪರಿಶೀಲಿಸಿ, ಕಾರ್ನಾಡರ ನಾಟಕಗಳು ಅವುಗಳಿಗಿಂತ ಹೇಗೆ ಭಿನ್ನವಾಗಿವೆ ಎಂದು ಸ್ಪಷ್ಟಪಡಿಸುತ್ತಾರೆ. ಹೀಗಾಗಿ ಚರ್ಚೆಯ ಸಂದರ್ಭದಲ್ಲಿ ತಾನೇ ತಾನಾಗಿ ಕಮೂ, ನೆಹರೂ, ಸಫೊಕ್ಲಿಸ್, ಗೋಪಾಲ ಕೃಷ್ಣ ಅಡಿಗ, ವೃಂದಾವನಲಾಲ್ ವರ್ಮ, ಚೋ ರಾಮಸ್ವಾಮಿ, ಸಂಪ, ಬರನಿ, ವಿಜಯ ತೆಂಡೂಲ್ಕರ್, ಬಿ.ವಿ. ಕಾರಂತ, ಆನ್ವಿ, ಎಚ್.ಎಸ್.ಶಿವಪ್ರಕಾಶ್, ರಾಮಾನುಜನ್, ವಿಶ್ವಾಸ್ ಪಾಟೀಲ್, ಮತ್ತಿತರರೆಲ್ಲಾ ಹಾಯ್ದು ಹೋಗುತ್ತಾರೆ. ಎಷ್ಟೋ ಬಾರಿ ಈ ವಿಶಾಲ ಚೌಕಟ್ಟಿನ ಭಾರದಿಂದ ಕಾರ್ನಾಡರ ಬಗೆಗಣ ಓದು ಕುಸಿದು ಹೋಗುತ್ತಿರುವಂತೆ ಭಾಸವಾಗುತ್ತದೆ. ಕಾರ್ನಾಡರ ನಾಟಕಗಳು ಗೌಣವಾಗಿ ಇತರರೇ ವಿಜೃಂಭಿಸುವಂತೆ ತೋರುತ್ತದೆ. ಇಷ್ಟಿದ್ದರೂ ಕನ್ನಡದ ನಿರ್ದಿಷ್ಟ ನಾಟಕವೊಂದು ಜಗತ್ತಿನ ಇತರೆಡೆಯ ನಾಟಕಗಳಿಗಿಂತ ಹೇಗೆ ಅನನ್ಯವಾಗಿದೆ ಎಂಬುದನ್ನು ಮರೆಯುವಂತಿಲ್ಲ.

ರಾಮಚಂದ್ರನ್ ಅವರು ಕಾರ್ನಾಡರ ಕುರಿತಾದ ಚರ್ಚೆಗಳನ್ನು ಬೇರೆ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತೀಯ ರಂಗಭೂಮಿಯ ಉತ್ಥಾನಕ್ಕೆ ಗಿರೀಶರ ಕೊಡುಗೆಯನ್ನು ಅವರು ಸಾಧಾರವಾಗಿ ಸ್ಥಾಪಿಸಿದ್ದಾರೆ.

ಡಾ. ಪುರುಷೋತ್ತಮ ಬಿಳಿಮಲೆ

ಶೀರ್ಷಿಕೆ: ಗಿರೀಶ್ ಕಾರ್ನಾಡ್ ಮತ್ತು ಅವರ ಮೂರು ಚಾರಿತ್ರಿಕ ನಾಟಕಗಳು (ಸುವರ್ಣ ಸಿರಿ ಮಾಲೆ) ಲೇಖಕರು: ಡಾ. ಸಿ.ಎನ್.ರಾಮಚಂದ್ರನ್ ಪ್ರಕಾಶಕರು: ಸಪ್ನ ಬುಕ್ ಹೌಸ್ ಪುಟಗಳು:124 ಬೆಲೆ:ರೂ.60/-

ಕೃಪೆ : ಪ್ರಜಾವಾಣಿ

ನಿಮ್ಮ ಕೈಯಲ್ಲಿ

aarogya-aaraike

ಡಾ. ವಸುಂಧರಾ ಭೂಪತಿ ಈ ಹೆಸರು ಯಾರು ಕೇಳಿಲ್ಲ?

ವೈದ್ಯಕೀಯ ಲೇಖನಗಳನ್ನು ಓದುವವರು ಖಂಡಿತಾ ಓದಿರುತ್ತಾರೆ. `ಜಗತ್ತಿನ ಅತ್ಯಂತ ದೊಡ್ಡ ಡಾಕ್ಟರ್ ಗಳೆಂದರೆ ಡಾ.ಪಥ್ಯ, ಡಾ. ಶಾಂತಿ, ಡಾ.ಆನಂದಎಂದು ಜೊನಾಥನ್ ಸ್ವಿಫ್ಟ್ ಹೇಳಿದ್ದಾನೆಂದು `ನನ್ನ ಮಾತುಬರೆಯುತ್ತಾರೆ ಭೂಪತಿ.

ಕೆಲವು ಸಾಮಾನ್ಯ ಕಾಯಿಲೆಗಳಿಗೆ ಕಾರಣಗಳು, ಆಹಾರ ಕ್ರಮ, ವೃದ್ಧಾಪ್ಯದ ಸಮಸ್ಯೆಗಳು ಮತ್ತು ಅವುಗಳಿಗೆ ಅನುಸರಿಸಬೇಕಾದ ಕ್ರಮಗಳು ಮುಂತಾದವುಗಳ ಕುರಿತು `ಆರೋಗ್ಯ ಆರೈಕೆ – ನಿಮ್ಮ ಕೈಯಲ್ಲಿಪುಸ್ತಕವನ್ನು ಆಯುರ್ವೇದ ಡಾಕ್ಟರ್ ಬರೆದಿದ್ದಾರೆ. `ನಮ್ಮ ಆಹಾರ ಕ್ರಮ ಸರಿಯಾಗಿದ್ದು ಮನದಲ್ಲಿ ನೆಮ್ಮದಿಯಿದ್ದರೆ ಅನಾರೋಗ್ಯ ನಮ್ಮ ಬಳಿ ಸುಳಿಯಲಾರದುಎಂದು ನಂಬುವವರು, ನಂಬದಿರುವವರು ಈ ಆರೋಗ್ಯಕರ ಪುಸ್ತಕಕ್ಕೆ ಕೈ ಇಡಬಹುದು.

ಶೀರ್ಷಿಕೆ:ಆರೋಗ್ಯ ಆರೈಕೆ-ನಿಮ್ಮ ಕೈಯಲ್ಲಿ ಲೇಖಕರು: ಡಾ. ವಸುಂಧರಾ ಭೂಪತಿ ಪ್ರಕಾಶಕರು:ಕರ್ನಟಕ ವಿಜ್ಞಾನ ಪರಿಷತ್ತು ಪುಟಗಳು:110 ಬೆಲೆ:ರೂ.40/-

ಕೃಪೆ : ಕನ್ನಡ ಪ್ರಭ

ಅಬ್ಬಾಸರ ಜನ್ನತ್

jannat-mohalla

ಅಬ್ಬಾಸರ ಈ ಕಾದಂಬರಿಯಲ್ಲಿ ಹೆಜ್ಜೆಹೆಜ್ಜೆಗೆ ಹಿಂಸೆಯ ಬೀಜಗಳಿವೆ. ಒಂದಿಷ್ಟು ಅವಕಾಶ ಸಿಕ್ಕರೂ ಸಾಕು, ಈ ಬೀಜಗಳು ಮೊಳಕೆಯೊಡೆದು ಎಲ್ಲೆಲ್ಲೂ ಹಿಂಸೆಯ ರುದ್ರನರ್ತನ ಈ ಕಾದಂಬರಿಯ ತುಂಬ ರಂಗುರಂಗಾಗಿ ಕಾಣಿಸಿಬಿಡಬಹುದು. ಆದರೆ ಕಾದಂಬರಿ ಉದ್ದಕ್ಕೂ ಹಿಂಸೆಯನ್ನು ಗೆಲ್ಲಲು ನೋಡುತ್ತದೆ. ಅಬ್ಬಾಸ್ ಅವರ ನಂಬಿಕೆ ಅಹಿಂಸೆಯಲ್ಲಿ, ಪ್ರೀತಿಯಲ್ಲಿ, ಮಾನವತೆಯಲ್ಲಿ, ವ್ಯಕ್ತಿ ಘನತೆಯಲ್ಲಿ, ಮೊಹಲ್ಲಾದ, ಊರಿನ, ದೇಶದ ಹಿತದಲ್ಲಿಎಂಬ ಭಾಷಣರೂಪಿ ಮುನ್ನುಡಿ ಬರೆದಿರುವುದು ಜಿ.ಪಿ.ಬಸವರಾಜು.

ಅಬ್ಬಾಸ ಉತ್ತಮ ಕತೆಗಳನ್ನು ಓದಿದವರು ಈ `ಜನ್ನತ್ ಮೊಹಲ್ಲಾಪ್ರವೇಶಿಸಲೇಬೇಕು. ಕತೆ ಹೇಳುವ ಶೈಲಿ, ಪಾತ್ರವನ್ನು ಕೆತ್ತುವ, ಅದೆಲ್ಲವುದಕ್ಕಿಂತ ಹೆಚ್ಚಾಗಿ ಅತ್ಯಂತ ಸಹಜವಾಗಿ ನಿರೂಪಣೆ ಮಾಡುವ ಅಬ್ಬಾಸರನ್ನು ಓದುವುದೆ ಒಂದು ಖುಷಿ. ಇಲ್ಲಿ ಉರ್ದು ಭಾಷೆ ವಿಶಿಷ್ಟವಾಗಿ ಬಳಕೆಯಾಗಿದೆ. ಅದು ಕಾದಂಬರಿಗೆ ಪ್ಲಸ್ ಪಾಯಿಂಟ್ ಆಗಿ ಸಂತಸ ತರುತ್ತದೆ.

ಕನ್ನಡದ ಅಪರೂಪದ ಕಾದಂಬರಿಗಳ ಸಾಲಿಗೆ ಅಬ್ಬಾಸರ ಪ್ರಥಮ ಕಾದಂಬರಿಯೂ ಸೇರುತ್ತದೆ. ಕಲಾತ್ಮಕ ಚಿತ್ರಕ್ಕೂ ಅತ್ಯಂತ ಸೂಕ್ತ ವಸ್ತು ಎಂದು ನಿರ್ದೇಶಕರು ಅಭಿಪ್ರಾಯಪಟ್ಟಾರು. `ತಮಸ್‘ `ಗರಂ ಹವಾಹಿಂದಿಯಲ್ಲಿ ಮಾಡಿದ್ದನ್ನು ಕನ್ನಡದಲ್ಲಿ ನೋಡಬಯಸುವವರು ಪುಸ್ತಕ ಓದಬಹುದು

ಶೀರ್ಷಿಕೆ: ಜನ್ನತ್ ಮೊಹಲ್ಲಾ ಲೇಖಕರು: ಅಬ್ಬಾಸ್ ಮೇಲಿನಮನಿ ಪ್ರಕಾಶಕರು: ಲಕ್ಷ್ಯ ಪ್ರಕಾಶನ ಪುಟಗಳು: 216 ಬೆಲೆ:ರೂ. 100/-

ಕೃಪೆ : ಕನ್ನಡ ಪ್ರಭ

ಜ್ಞಾಪಕ ಚಿತ್ರ ಶಾಲೆ

nambikeya-neralu

ಅರ್ಧ ಶತಮಾನಕ್ಕೂ ಹಿಂದಿನ ಕಾಲದ ಉತ್ತರ ಕನ್ನಡದ ಹವ್ಯಕ ಪರಿಸರಕ್ಕೆ ಸಂಬಂಧಿಸಿದ ಕಾದಂಬರಿ `ನಂಬಿಕೆಯ ನೆರಳು‘. ಅಂದಿನ ಜೀವನ ಪದ್ಧತಿ, ಸಂಪ್ರದಾಯದಲ್ಲಿ ಇಂದು ಅನೇಕ ಬದಲಾವಣೆಗಳನ್ನು ಕಾಣಬಹುದಾದರೂ, ಆ ಜನರ ಜೀವನ ಜೀವನಮೌಲ್ಯ, ಶ್ರದ್ಧೆ ಮತ್ತು ನಂಬಿಕೆಗಳು ಇಂದಿಗೂ ಮುಂದುವರೆದಿವೆ. ಡಿ.ವಿ.ಹೆಗಡೆಯವರ ಈ ಕಾದಂಬರಿ ಓದಿದ ನಂತರ ಮನಸ್ಸಿನಲ್ಲಿ ಉಳಿಯುವುದಲ್ಲದೇ ಅನೇಕ ಬಿಂಬಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ.

ಕಾದಂಬರಿಯ ಮುಖ್ಯ ಪಾತ್ರ ರಾಮಣ್ಣನ ಮೂಲಕ ಡಿ.ವಿ.ಹೆಗಡೆಯವರು ಇಡೀ ಉತ್ತರ ಕನ್ನಡದ ಪರಿಸರವನ್ನು ಅತ್ಯಂತ ಸರಳವಾಗಿ ಕಟ್ಟಿಕೊಡುತ್ತಾರೆ. ಅದು ವಿಸ್ತೃತವಾದಂತೆ ಅತ್ಯಂತ ಪ್ರಸ್ತುತವೂ ಆಗುವುದು ಅವರ ಲೇಖನಿಯ ಪ್ರಭಾವದಿಂದ.

ಈ ಪುಸ್ತಕವನ್ನು ಓದಿದಾಗ ಒಂದು ಉತ್ತಮ ಚಲನಚಿತ್ರ ನೋಡಿದಂತೆನಿಸಲು ಕಾರಣ ಹೆಗಡೆಯವರ ಚಿತ್ರಕ ಶಕ್ತಿ. ಯಕ್ಷಗಾನದ ಮ್ಯಾಜಿಕ್, ಔಷಧ ಲೋಕದ ಝಲಕ್ ಇಲ್ಲಿದೆ. ಅದೆಲ್ಲವುದನ್ನೂ ಮೀರಿ ಅರ್ಧ ಶತಮಾನವೇ ಇಲ್ಲಿ ಹರಿದಿದೆ ಎನ್ನಬಹುದು. ಡಿ.ವಿ.ಹೆಗಡೆ ಇಂಥ ಸರಳ ಸುಂದರ ಚಿತ್ರಕ ಶಕ್ತಿಯ ಕಾದಂಬರಿ ಕೊಟ್ಟಿರುವುದಕ್ಕೆ ಕನ್ನಡಿಗರು ಋಣಿಯಾಗಿರಬಹುದು.

ಶೀರ್ಷಿಕೆ: ನಂಬಿಗೆಯ ನೆರಳು ಲೇಖಕರು: ಡಿ.ವಿ.ಹೆಗಡೆ ಪ್ರಕಾಶಕರು: ಅಕ್ಷಯ ಪ್ರಕಾಶನ ಪುಟಗಳು: 218 ಬೆಲೆ:ರೂ. 100/-

ಕೃಪೆ : ಕನ್ನಡ ಪ್ರಭ

ವಿಜ್ಞಾನದ ಕಾಲದಲ್ಲಿ ತಲೆಗೆ `ಮದ್ದು ಹಾಕುವ ಕೆಲಸ’ ಈ ಚರ್ಚಾಸ್ಪದ ಪುಸ್ತಕ ಮಾಡುತ್ತದೆ!

janapada-vaydya

ವಿಜ್ಞಾನವೆಂಬ ಯಜಮಾನನಿಗೆ ಅರ್ಥಾತ್ ಆಧುನಿಕತೆಯ ಜನತೆಯ ಜ್ಞಾನ ಸೊರಗಿ, ಸೋತುಹೋಯಿತು. ಇಲ್ಲಿಂದಲೇ ಬಡವರ ಸೋಲು ಆರಂಭವಾಯಿತು. ಎಲ್ಲ ಸ್ಥಳೀಯ ಜ್ಞಾನಿಗಳು ಮತ್ತು ಕುಶಲಕರ್ಮಿಗಳು ಕೈಚೆಲ್ಲಿದರು. ಅನೇಕ ಶತಮಾನಗಳ ಜ್ಞಾನ ಅವನತಿಯ ಹಾದಿ ಹಿಡಿಯಿತು. ಇದೇ ಜಾನಪದ; ಜನರ ಜ್ಞಾನವಿಜ್ಞಾನ ಎಂದು ಬೆನ್ನುಡಿಯಲ್ಲಿ ಹೇಳಿದ್ದಾರೆ ಡಾ. ಟಿ.ಗೋವಿಂದರಾಜು ಪುಸ್ತಕ `ಜನಪದ ವೈದ್ಯ‘.

ವಿಜ್ಞಾನದ ಸಾಮಾಜಿಕರಣದ ಕುರಿತು ಮಾತನಾಡುವ ಪುಸ್ತಕವಿದು. ಶತಮಾನಗಳ ನಿರಂತರ ಜ್ಞಾನವನ್ನು ಪ್ರಸ್ತುತ ಸಂದರ್ಭಕ್ಕೆ ತಂದುಕೊಳ್ಳುವ ಪ್ರಯತ್ನವಾಗಿ ಗೋವಿಂದರಾಜುರವರು ಈ ಪುಸ್ತಕವನ್ನು ಸಂಪಾದಿಸಿದ್ದಾರೆ. ಕರ್ನಾಟಕ ಜಾನಪದ ವೈದ್ಯ – ಆದದ್ದು, ಆಗಬೇಕಾದದ್ದು, ಜನಪದ ವೈದ್ಯೋಪಚಾರ, ಮಂತ್ರಮಾಟ, ಕೈಮದ್ದು, ಹೃದ್ರೋಗ ಮತ್ತು ಜಾನಪದ, ಮಲೆನಾಡು ಮತ್ತು ಕೋಟದಲ್ಲಿರುವ ಜನಪದ ವೈದ್ಯರು – ಹೀಗೆ ಅನೇಕರು ಬರೆದ ಲೇಖನಗಳ ಸಂಗ್ರಹರೂಪಿ ಪುಸ್ತಕ ಓದಿಸಿಕೊಂಡು ಹೊಗುತ್ತದೆ.

ನಾಟಿವೈದ್ಯರ ಕುರಿತು `ನಾಟಿಮಹಾಬಲ ಸೀತಾಳಭಾವಿಯವರ ಲೇಖನವೂ ಇದೆ. ಡಾ. ಶಿವರಾಮ ಕಾರಂತರ ಅನುವಾದವಿದೆ. `ಕೈ ಮದ್ದು ಹಾಕುವುದು ಎಷ್ಟು ನಿಜ?’ ಎಂಬ ಸಿ.ಆರ್.ಚಂದ್ರಶೇಖರ್ ರ ಚರ್ಚಾಸ್ಪದ ಲೇಖನವಿದೆ. ಈ ಆಧುನಿಕ ವಿಜ್ಞಾನದ ಕಾಲದಲ್ಲಿ ತಲೆಗೆ `ಮದ್ದು ಹಾಕುವ ಕೆಲಸಈ ಚರ್ಚಾಸ್ಪದ ಪುಸ್ತಕ ಮಾಡುತ್ತದೆ. ಡಾ. ಗೋವಿಂದರಾಜುರ ಸಂಪಾದನೆಯ ಕೈವಾಡದಲ್ಲಿ ಅರಳಿರುವ `ಜನಪದಓದುವ ಸಾಹಸ ಖಂಡಿತಾ ಸ್ವಾಗತಾರ್ಹ.

ಶೀರ್ಷಿಕೆ: ಜನಪದ ವೈದ್ಯ ಲೇಖಕರು: ಡಾ. ಗೋವಿಂದರಾಜು ಪ್ರಕಾಶಕರು: ಕನ್ನಡ ಭವನ ಪುಟಗಳು: 255 ಬೆಲೆ: ರೂ.100/-

ಕೃಪೆ : ಕನ್ನಡ ಪ್ರಭ

ವಸಂತಕುಮಾರ ಸಂಭವ

rangasthala

ನನ್ನ ಪ್ರೀತಿಯ ಕವಿತೆ

ಬೆರೆಸಿ ಆತ್ಮೀಯತೆ

ಹೇಳಿದಳು ಒಂದು ಮುಂಜಾನೆ

ಸಪ್ತಸಾಗರದಾಚೆ ಇದೆ ನನ್ನ ವೀಣೆ

ಹೋಗಿ ತರಲೇನು ಹೊತ್ತು ಮೇನೆ?

ವಸಂತಕುಮಾರ ಪೆರ್ಲರ `ರಂಗಸ್ಥಳಕವನ ಸಂಕಲನದ `ನನ್ನ ಪ್ರೀತಿಯ ಕವಿತೆಯ ಸಾಲುಗಳಿವು. ಇಲ್ಲಿರುವ ಮುಂಜಾನೆ, ಮೇನೆ, ವೀಣೆಗಳೆಲ್ಲ ಕವಿತೆಯನ್ನು ಸಿಂಗರಿಸಿವೆ.

ಭಾವಗೀತೆ, ಗಂಭೀರ ಕವಿತೆ, ಪುರಾಣದ ರೂಪಕ – ಇವೆಲ್ಲ ಈ ಕವಿತೆಗಳಲ್ಲಿವೆ. ಒಂದಷ್ಟು ಹನಿಗವಿತೆಗಳು ಕೊನೆಗಿವೆ. ವೇಣುನಾದದಿ ತೇಲಿಸು, ಸೊದೆಯನೀಂಟಲು ತೋಯಿಸು ಮುಂತಾದ ಅಪರೂಪದ ಸಾಲುಗಳಿವೆ. ಗೋವಿಂದ ಪೈ ಸೈನ್ಯವಿರದ ಗಡಿ ರಾಜ್ಯಗಳ ಗೆದ್ದ ಸೇನಾನಿಯಾಗಿ, ರಥಬೀದಿಯುದ್ದ ತೇರೆಳೆದ ದಳವಾಯಿಯಾಗಿ ಕವಿತೆಯೊಂದರಲ್ಲಿ ಮೆರೆಯುತ್ತಾರೆ.

ಕ್ರಿಕೆಟ್, ಮುಂಬೈಯ ರಾತ್ರಿ, ಮಂಜು ಮುಸುಕಿದ ದೆಹಲಿ – ಹೀಗೆ ಕವಿತೆಗೆ ವಸ್ತು ಅನಾಮತ್ತು. ಪ್ರಿಯೆಯ ಕಣ್ಣು ಕೊತಕೊತ ಕುದಿವ ಕೊಳವಾಗಿ ಕಾಣುವ ಕೌತುಕವಿದೆ.

ಸತತ ಕಾವ್ಯಾಭ್ಯಾಸದಿಂದ ಕಾವ್ಯ ಪರಿಕರಗಳನ್ನೆಲ್ಲ ಕೈವಶ ಮಾಡಿಕೊಂಡು ನಿರ್ಮಿತಿಯ ಅಗ್ನಿ ಮುಹೂರ್ತದಲ್ಲಿ ಅದನ್ನು ಸಮರ್ಥವಾಗಿ ಅನುಸಂಧಾನ ಮಾಡುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ ಪೆರ್ಲ ಎಂದು ಎಚ್.ಎಸ್.ವಿ. ಮೆಚ್ಚಿಕೊಂಡಿದ್ದಾರೆ. ಇದನ್ನು ಪ್ರಕಟಿಸಿದ್ದು 74 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ. ಈ ಪುಸ್ತಕಗಳ ಹಂಚಿಕೆ ಮತ್ತು ಮಾರಾಟಕ್ಕೆ ಸ್ವಾಗತ ಸಮಿತಿ ಯಾವ ವ್ಯವಸ್ಥೆ ಮಾಡಿಕೊಂಡಿದೆ ಎಂಬುದು ನಿಗೂಢ. ಯಾಕೆಂದರೆ ಬೆಂಗಳೂರಿನ ಪುಸ್ತಕದಂಗಡಿಗಳಲ್ಲೂ ಇವು ಅಲಭ್ಯ.

ಈ ಪುಸ್ತಕಗಳ ವಿಕ್ರಯ ಲಾಭದೃಷ್ಟಿರಹಿತ. ಜನಹಿತವೇ ಗುರಿ. ಹಾಗಾಗಿ ಕನಿಷ್ಟ ಬೆಲೆ ಇರಿಸಲಾಗಿದೆ ಎಂಬುದು ಪ್ರಕಾಶಕರ ಮಾತು. ಆದರೆ, ಬೆಲೆ ಮಾತ್ರ ಇತರ ಪುಸ್ತಕಗಳಿಗಿಂತ ದುಬಾರಿಯೇ ಆಗಿದೆ.

ಶೀರ್ಷಿಕೆ: ರಂಗಸ್ಥಳ ಲೇಖಕರು: ವಸಂತ ಕುಮಾರ ಪೆರ್ಲ ಪ್ರಕಾಶಕರು: ಸ್ವಾಗತ ಸಮಿತಿ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉಡುಪಿ ಪುಟಗಳು: 114 ಬೆಲೆ:ರೂ. 45/-

ಕೃಪೆ : ಕನ್ನಡ ಪ್ರಭ