ವಿಮರ್ಶೆ : ನಮ್ಮಲ್ಲಿ ಸಸಿ ನೆಟ್ಟ ಕೂಡಲೇ ಒಣಗಿ ಹೋಗುತ್ತಿರುವ ದುರಂತ

adhunika-kannada-vimarshe-1

ವಿಫುಲವಾಗಿ ಒಂದೇ ಸಮನಾಗಿ ವಿಮರ್ಶಾ ಬರವಣಿಗೆಯನ್ನು ಮಾಡಿಕೊಂಡು ಬಂದಿರುವ ಹಿರಿಯ ವಿಮರ್ಶಕ ಜಿ.ಎಸ್.ಆಮೂರ, ತಮ್ಮ ಈ ಸಂಕಲನಕ್ಕೆ `ಪ್ರಕಾರ,ಪ್ರೇರಣೆ, ಪ್ರಯೋಗಎಂಬ ಅಡಿಸಾಲನ್ನು ಕೊಟ್ಟಿದ್ದಾರೆ.

`ಪ್ರಕಾರಗಳುವಿಭಾಗದಡಿ ಸಣ್ಣ ಕತೆ ಒಂದು ವ್ಯಾಖ್ಯೆ ತರದ ಎವರ್ ಗ್ರೀನ್ ವಿಷಯಗಳಿವೆ. ಕಾವ್ಯದಲ್ಲಿ ಆಕೃತಿ ಹಾಗೂ ಆಶಯ, ಕಾದಂಬರಿಯ ಸ್ವರೂಪ, ನಾಟಕ ಕುರಿತ ಲೇಖನಗಳಲ್ಲಿ ಅರಿಸ್ಟಾಟಲ್ ಉಲ್ಲೇಖವಿರುವಂತೆ ಭಾರತೀಯ ಕಾವ್ಯ ಮೀಮಾಂಸೆಯ ಉಲ್ಲೇಖವೂ ಇದೆ.

`ಪ್ರೇರಣೆಗಳುವಿಭಾಗದಲ್ಲಿ ಎಮರ್ಸನ್ ನಲ್ಲಿ ರೂಪದ ಕಲ್ಪನೆ, ಟಿ.ಎಸ್.ಎಲಿಯೆಟ್ ಕಾವ್ಯ ಮೀಮಾಂಸೆ ಜತೆ ತುಸು ಲೇಟೆಸ್ಟ್ ಎನ್ನಬಹುದಾದ ಎಡ್ವರ್ಡ್ ಸೈದ್ ಕುರಿತಾಗಿಯೂ ಬರಹಗಳಿವೆ.

`ಪ್ರಯೋಗಗಳುವಿಭಾಗದಲ್ಲಿ ಆಧುನಿಕ ಕನ್ನಡ ವಿಮರ್ಶೆಯ ಒಲವುಗಳನ್ನು ಡಿ.ಆರ್.ನಾಗರಾಜ್ ವರೆಗೆ ಟ್ರೇಸ್ ಮಾಡಲಾಗಿದೆ. ಆಮೇಲೆ ಶೂನ್ಯ.

ಅದಕ್ಕೆ ಕಾರಣಗಳೇನೆಂಬುದನ್ನು ಲೇಖಕರು ಸಮಾರೋಪದಲ್ಲಿ ಗುರುತಿಸುತ್ತಾರೆ: ಇಂದು ನಮಗೆ ಬೇಕಾದುದು ವಿಮರ್ಶೆಯಲ್ಲ, ಒಳ್ಳೆಯ ಕತೆ, ಕಾದಂಬರಿ, ಕಾವ್ಯ, ನಾಟಕಗಳು ಎನ್ನುವ ವಾದ.

ಸೃಜನಶೀಲ ಸಾಹಿತಿಗಳಲ್ಲಿ ವಿಮರ್ಶಕನ ಕುರಿತು ಉಂಟಾಗಿರುವ ಪ್ರೀತಿ-ದ್ವೇಷಗಳ ಸಂಬಂಧ, ಒಂದು ಘಟ್ಟದಲ್ಲಿ ಅದಕ್ಕೆ ಅಂಟಿಕೊಂಡ ಎಲಿಟಿಸ್ಟ್ ಪ್ರವೃತ್ತಿ…ಪರಿಣಾಮ, ಯುರೋಪ್, ಅಮೇರಿಕಾಗಳಲ್ಲಿ ಹುಲುಸಾಗಿ ಬೆಳೆಯುತ್ತಿರುವ ವಿಮರ್ಶೆ ನಮ್ಮಲ್ಲಿ ಸಸಿ ನೆಟ್ಟ ಕೂಡಲೇ ಒಣಗಿ ಹೋಗುತ್ತಿರುವ ದುರಂತ. ಇಂತಹದೊಂದು ಪ್ರನೌನ್ಸ್ ಮೆಂಟ್ ಆಮೂರರಂಥ ಹಿರಿಯ ವಿಮರ್ಶಾ ವ್ಯವಸಾಯಿಯಿಂದಲೇ ಬಂದಿರುವುದು ಸನ್ನಿವೇಶದ ಗಂಭೀರತೆಯನ್ನು ಮನದಟ್ಟುಮಾಡುತ್ತದೆ.

ಶೀರ್ಷಿಕೆ: ಆಧುನಿಕ ಕನ್ನಡ ವಿಮರ್ಶೆ ಲೇಖಕರು: ಜಿ.ಎಸ್.ಅಮೂರ ಪ್ರಕಾಶಕರು: ಸಪ್ನ ಬುಕ್ ಹೌಸ್ ಪುಟಗಳು:271 ಬೆಲೆ: ರೂ.130/-

ಕೃಪೆ : ವಿಜಯ ಕರ್ನಾಟಕ

ಅಗಾಧ ಚೈತನ್ಯದ ಒಳನೋಟಗಳು

dehali-nota-1

ರ್ನಾಟಕದ ಒಳಗಡೆಗೆ ನಿಂತು ಉತ್ತರದ ದೆಹಲಿಯತ್ತ ಕಣ್ಣಾಡಿಸಿದರೆ ಸಿಗುವ ಚಿತ್ರ ಒಂದು ಬಗೆಯದಾದರೆ, ದೆಹಲಿಯಲ್ಲಿ ಕುಳಿತು ಕರ್ನಾಟಕವನ್ನು ವೀಕ್ಷಿಸಿದೆ ಸಿಗುವ ಚಿತ್ರ ಇನ್ನೊಂದು ಬಗೆಯದು. ದೆಹಲಿಯಲ್ಲಿ ಪತ್ರಕರ್ತರಾಗಿರುವ ದಿನೇಶ್ ಅವರು `ಸಹೃದಯಿ ಸಾಮಾನ್ಯ ಜನತೆಯ ಕಣ್ಣುಗಳ ಮೂಲಕರ್ನಾಟಕವನ್ನು ನೋಡುತ್ತಾ, ರ್ನಾಟಕವನ್ನು ಅದರ ನೆರೆಯ ರಾಜ್ಯಗಳೊಂದಿಗೂ ಹೋಲಿಸಿ ನೋಡುತ್ತಾ ಬರೆದ 51 ಲೇಖನಗಳು ಈ ಕೃತಿಯಲ್ಲಿವೆ. ಇಲ್ಲಿನ ಲೇಖನಗಳನ್ನು ಸಾಹಿತಿಗಳ ಲಹರಿಯಲ್ಲಿ ಭಾವುಕತೆಯಿಂದ ಬರೆಯಲಾಗಿಲ್ಲ. ಬದಲಾಗಿ ಶ್ರಮವಹಿಸಿ ಮಾಹಿತಿಗಳನ್ನು ಸಂಗ್ರಹಿಸಿ, ಆ ಮಾಹಿತಿಗಳನ್ನು ಕರ್ನಾಟಕದ ಅಭಿವೃದ್ಧಿಯ ಕೇಂದ್ರದಲ್ಲಿರಿಸಿ, ರ್ನಾಟಕದ ಅಭಿವೃದ್ಧಿಯ ಪರಿಕಲ್ಪನೆಯನ್ನು ಭಾರತದ ಒಕ್ಕೂಟ ವ್ಯವಸ್ಥೆಯ ಭಾಗವಾಗಿ ಪರಿಗಣಿಸಿ ಬರೆಯಲಾಗಿದೆ. ನನಗೆ ತಿಳಿದಂತೆ ಕನ್ನಡದಲ್ಲಿ ಇಂಥ ಪ್ರಯತ್ನ ಇದುವರೆಗೆ ನಡೆದಿಲ್ಲ. ಪತ್ರಕರ್ತನೊಬ್ಬನ ಪ್ರಾಮಾಣಿಕತೆ, ನಿಖರತೆ, ವಿಶ್ಲೇಷಣಾ ಸಾಮಥ್ರ್ಯಗಳಿಗೆ ಈ ಪುಸ್ತಕ ಅತ್ಯುತ್ತಮ ಉದಾಹರಣೆಯಾಗಿದೆ.

`ದೆಹಲಿ ನೋಟದಲ್ಲಿ ಎರಡು ಭಾಗಗಳಿವೆ. ಮೊದಲನೇ ಭಾಗದ 23 ಲೇಖನಗಳಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿ, ನೆಲ, ಜಲ ಮತ್ತಿತರ ಕರ್ನಾಟಕ ಕೇಂದ್ರಿತ ವಿಷಯಗಳ ಬಗೆಗೆ ಚರ್ಚೆಗಳಿದ್ದರೆ ಎರಡನೇ ಭಾಗದ 28 ಲೇಖನಗಳಲ್ಲಿ ಅಖಿಲ ಭಾರತ ಮಟ್ಟದ ವ್ಯಾಪ್ತಿ ಇರುವ ಸಂಸದೀಯ ವ್ಯವಸ್ಥೆ, ಶಾಸಕಾಂಗ, ನ್ಯಾಯಾಂಗ, ಚುನಾವಣೆ, ಭ್ರಷ್ಟಾಚಾರ, ಮೀಸಲಾತಿ ಮತ್ತಿತರ ಸಾಮಾನ್ಯ ವಿಷಯಗಳ ಬಗೆಗೆ ವಿಶ್ಲೇಷಣೆಗಳಿವೆ. ಈ ಎರಡೂ ಭಾಗಗಳಲ್ಲಿ ಕಂಡು ಬರುವ ಸಮಾನ ಅಂಶವೆಂದರೆ, ಪತ್ರಕರ್ತನೊಬ್ಬನಿಗೆ ಇರಬೇಕಾದ ದಿಟ್ಟತನ ಮತ್ತು ನಿರ್ದಾಕ್ಷಿಣ್ಯತೆ. ಜೊತೆಗೆ ಸಾಮಾನ್ಯ ಕನ್ನಡಿಗ ಅಥವಾ ಭಾರತೀಯನೊಬ್ಬನ ನೆಲೆಯಲ್ಲಿ ನಿಂತು ರಾಜ್ಯವನ್ನೋ, ದೇಶವನ್ನೋ ಅರ್ಥವಿಸುವ ವಿಶಿಷ್ಟ ವಿಧಾನ.

ಅಮಿನ್ ಮಟ್ಟು ಅವರ ಈ ಅಂಕಣ ಬರಹಗಳ ಹಿಂದಿನ ಸೈದ್ಧಾಂತಿಕ ತಿಳುವಳಿಕೆಗಳನ್ನು ಅರ್ಥ ಮಾಡಿಕೊಳ್ಳಲು ಅವರು ಕರ್ನಾಟಕದ ನದಿಗಳ ಬಗ್ಗೆ ಆಗಾಗ ಬರೆದ ಲೇಖನಗಳನ್ನು ಒಟ್ಟಾಗಿ ಓದಬೇಕು. `ಕೃಷ್ಣೆಯ ಶತ್ರುಗಳುಲೇಖನದಲ್ಲಿ ಅವರು ಬರೆಯುವುದು ಹೀಗೆ : `ರಾಜ್ಯದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಮೂವರು ಶತ್ರುಗಳು. ಇಬ್ಬರು ಹೊರಗಿನವರು – ಒಬ್ಬರು ಮೇಲ್ದಂಡೆಯಲ್ಲಿ ಕೂತಿರುವ ಮಹಾರಾಷ್ಟ್ರದವರು, ಮತ್ತು ಇನ್ನೊಬ್ಬರು ಕೆಳದಂಡೆಯಲ್ಲಿರುವ ಆಂಧ್ರಪ್ರದೇಶದವರು, ಮೂರನೆಯವರು ಒಳಗಿನವರು, ಅವರು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರು. (ಪು:60) ಹೀಗೆ ಕರ್ನಾಟಕದ ಸುತ್ತಲಿನ ರಾಜ್ಯಗಳು ನೀಡುವ ತೊಂದರೆಗಳು ಹೇಗೋ ಹಾಗೆ ಕರ್ನಾಟಕದಲ್ಲಿ ಅಧಿಕಾರ ಹಿಡಿದವರ ಅಪಕ್ವ ಗ್ರಹಿಕೆಗಳು, ಆತುರದ ತೀರ್ಮಾನಗಳು ಹಾಗೂ ಮುನ್ನೊಟವಿಲ್ಲದ ತೀರ್ಮಾನಗಳಿಂದಾಗಿ ಆಗುತ್ತಿರುವ ಅನಾಹುತಗಳನ್ನು ದಿನೇಶ್ ಅವರು ಪಕ್ಷಾತೀತವಾಗಿ ಯಾವುದೇ ಪೂರ್ವಾಗ್ರಹಗಳಿಲ್ಲದೆ ಮಂಡಿಸುತ್ತಾರೆ. ಈ ವೈಚಾರಿಕ ಪರಿಪ್ರೇಕ್ಷದಲ್ಲಿ ಅವರ ಎಲ್ಲಾ ಲೇಖನಗಳು ಪ್ರತೀತಗೊಳ್ಳುವುದರಿಂದಾಗಿ ಅವರು ವಿನಾ ಕಾರಣ ಕರ್ನಾಟಕವನ್ನು ಹೊಗಳುವುದೂ ಇಲ್ಲ. ಭಾಷಾಂಧರಂತೆ ಅನ್ಯ ರಾಜ್ಯಗಳನ್ನು ಟೀಕಿಸುವುದೂ ಇಲ್ಲ. ಭಾರತದ ಒಕ್ಕೂಟ ವ್ಯವಸ್ಥೆಯ ಆಂತರಿಕ ಸಂಬಂಧಗಳು ಹದಗೆಡುತ್ತಿರುವ ಇಂದಿನ ಸಂದರ್ಭದಲ್ಲಿ ದಿನೇಶ್ ಅವರ ಲೇಖನಗಳು ಓದುವುದು ಒಂದು ಚೇತೋಹಾರಿ ಅನುಭವವಾಗಿದೆ.

ರ್ನಾಟಕ ರಾಜ್ಯದ ಬಗೆಗೆ ಅನೇಕ ತೀರ್ಮಾನಗಳನ್ನು ದೆಹಲಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ಅನುದಾನ ಪಡೆದು ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುತ್ತಿರುವ ಅನೇಕ ಸಂಘ-ಸಂಸ್ಥೆಗಳೂ ದೆಹಲಿಯಲ್ಲಿ. ಆದರೆ ಕರ್ನಾಟಕದ ಸಮಾನ್ಯ ಜನಕ್ಕೆ ಇವುಗಳ ಬಗ್ಗೆ ಅಷ್ಟೇನೂ ತಿಳುವಳಿಕೆ ಇರುವುದಿಲ್ಲ. ಎಷ್ಟೋ ಬಾರಿ ರಾಜ್ಯ ಸರ್ಕಾರಗಳಿಗೂ ಇವುಗಳ ಬಗ್ಗೆ ಗೊತ್ತಿರುವುದಿಲ್ಲ. ದಕ್ಷಿಣ ಭಾರತದ ಜನರ ಹಾಗೂ ರಾಜ್ಯ ಸರ್ಕಾರಗಳ ಈ ದಿವ್ಯ ನಿರ್ಲಕ್ಷ್ಯದ ಲಾಭ ಪಡೆಯುತ್ತಿರುವವರೆಂದರೆ ಉತ್ತರ ಭಾರತದ ಅದರಲ್ಲೂ ಹಿಂದೀ ರಾಜ್ಯಗಳು. `ಬೆಂಗಳೂರಿನಿಂದ ದೆಹಲಿಗೆಹೋಗುವ ಜನ ಪ್ರತಿನಿಧಿಗಳು ಹೊರಡುವ ಮುನ್ನ ಒಂದು `ಪತ್ರಿಕಾ ಹೇಳಿಕೆನೀಡುತ್ತಾರೆ. ದೆಹಲಿಯಿಂದ ಹಿಂದಿರುಗಿದ ಅನಂತರ ಇನ್ನೊಂದು ಹೇಳಿಕೆ ನೀಡುತ್ತಾರೆ. ಈ ಎರಡೂ ಹೇಳಿಕೆಗಳ ನಡುವೆ ದೆಹಲಿಯಲ್ಲಿ ನಿಜವಾಗಿ ಏನಾಗಿತ್ತು ಎಂಬುದರ ಸೂಕ್ಷ್ಮ ವಿವರಗಳು ಜನರಿಗೆ ಯಾವತ್ತೂ ತಿಳಿಯುವುದಿಲ್ಲ. ಇಂಥದ್ದನ್ನು ಬಹಳ ಹತ್ತಿರದಿಂದ ನೋಡಿದ ದಿನೇಶ್ ಹೀಗೆ ಬರೆಯುತ್ತಾರೆ. – `ಅವರಿಗೆ ದೆಹಲಿ ಎನ್ನುವುದು ಅಂಡಮಾನ್ ಇದ್ದಂತೆ. ಇಲ್ಲಿನ ಹಿಂದಿ ಭಾಷೆಯಂತೆ, ಚಳಿ-ಬಿಸಿಲು ಕಂಡರೂ ಅವರಿಗೆ ಭಯ. ದೆಹಲಿಗೆ ಬಂದು ಎರಡು ದಿನ ಕಳೆಯುವಷ್ಟರಲ್ಲಿಯೇ ಅವರಿಗೆ ರಾಗಿ ಮುದ್ದೆ, ಜೋಳದ ರೊಟ್ಟಿ ಬಗ್ಗೆ ವಿರಹ ವೇದನೆ ಪ್ರಾರಂಭವಾಗಿ ಬಿಡುತ್ತೆ. ಮೂರನೆ ದಿನ ಅವರು ಕರ್ನಾಟಕ ಎಕ್ಸ್ ಪ್ರೆಸ್ ಹತ್ತಿ ಬಿಡುತ್ತಾರೆ‘. (ಪು:13). ಬೇರೆ ರಾಜ್ಯಗಳ ಪತ್ರಕರ್ತರು, ಅಧಿಕಾರಿಗಳು, ಜನ ಪ್ರತಿನಿಧಿಗಳು, ಸಾಹಿತಿಗಳೆಲ್ಲ ಅವರವರ ರಾಜ್ಯದ ಪರವಾಗಿ ದೆಹಲಿಯಲ್ಲಿ ವಕಾಲತ್ತು ನಡೆಸುತ್ತಿರುವಾಗ, ರ್ನಾಟಕದವರು ಏನು ಮಾಡುತ್ತಿದ್ದಾರೆ ಎಂಬ ಮಾರ್ಮಿಕ ಪ್ರಶ್ನೆಯನ್ನು ದಿನೇಶ್ ಮತ್ತೆ ಮತ್ತೆ ಕೇಳುತ್ತಾರೆ. ಈ ಪ್ರಶ್ನೆಯನ್ನು ಕೇಳುವುದರ ಮೂಲಕ ಕರ್ನಾಟಕ ಯಾಕೆ ದುರ್ಬಲ ರಾಜ್ಯವಾಗಿ ಕಾಣುತ್ತಿದೆ ಎಂಬುದಕ್ಕೆ ಉತ್ತರ ಕಂಡುಕೊಳ್ಳಲು ಅವರು ಓದುಗರನ್ನು ಪ್ರಚೋದಿಸುತ್ತಾರೆ.

ಕೃತಿಯ ಎರಡನೇ ಭಾಗದಲ್ಲಿ ರಾಷ್ಟ್ರೀಯ ಸಮಸ್ಯೆಗಳ ಬಗೆಗೆ ಚರ್ಚೆಗಳಿವೆ. ನಮ್ಮ ಸಂಸದೀಯ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿರುವ ಬಗೆಯನ್ನು ಹತ್ತಿರದಿಂದ ನೋಡುತ್ತಿರುವ ಮಟ್ಟು ಅವರು ಅದ ಶಕ್ತಿ ಮತ್ತು ದೌರ್ಬಲ್ಯಗಳ ಕುರಿತು ಹೃದಯಂಗಮವಾಗಿ ಬರೆಯುತ್ತಾರೆ. ಅದರಲ್ಲೂ ಮುಖ್ಯವಾಗಿ ನಮ್ಮ ನ್ಯಾಯಾಂಗ ಮತ್ತು ಶಾಸಕಾಂಗಗಳ ನಡುವಿನ ತಿಕ್ಕಾಟಗಳ ಬಗ್ಗೆ ಇಲ್ಲಿ ಅಮೂಲ್ಯ ಒಳನೋಟಗಳುಳ್ಳ ಲೇಖನಗಳಿವೆ. ಈ ಸಂದರ್ಭದಲ್ಲಿ ಅವರು ಬರೆದ ಮಹತ್ವದ ಮಾತೊಂದು ಇಂತಿದೆ. `ಭಾರತದ ಸಂಸತ್ತು ಬ್ರಿಟಿಷ್ ಪಾಲರ್ಿಮೆಂಟ್ ನಷ್ಟು ಸರ್ವಶಕ್ತ ಅಲ್ಲ. ಅಲ್ಲಿ ಸಂಸತ್ತು ರೂಪಿಸಿದ ಕಾನೂನನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಅದೇ ರೀತಿ ಭಾರತದ ನ್ಯಾಯಾಂಗ ಅಮೆರಿಕಾದಷ್ಟು ಸರ್ವೋಚ್ಛ ಕೂಡ ಅಲ್ಲ. ಅಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗದ ವಿಷಯಗಳು ಯಾವುವೂ ಇಲ್ಲ. ಈ ರೀತಿಯ ಸಮತೋಲನವನ್ನು ಕಾಯ್ದುಕೊಂಡು ಸಂವಿಧಾನವನ್ನು ರೂಪಿಸಿದ ಕಾರಣದಿಂದಾಗಿಯೇ ಅದು ಭದ್ರವಾಗಿ ಇಲ್ಲಿ ಉಳಿದಿದೆ‘ (ಪು:144).

ಇಂಥ ಅನೇಕ ಮುಖ್ಯ ವಿಷಯಗಳ ಜೊತೆಗೆ ಈ ಕೃತಿಯಲ್ಲಿ ನಾವೆಲ್ಲ ತುಂಬಾ ದೊಡ್ಡವರೆಂದು ಭಾವಿಸಿಕೊಂಡವರ ಸಣ್ಣತನಗಳ ಬಗ್ಗೆ ವಿವರಗಳಿವೆ. ಸಾಹಿತಿಗಳ ನಡುವಣ ಹೊಟ್ಟೆಕಿಚ್ಚು-ವೈಮನಸ್ಯಗಳು ರಾಜ್ಯಕ್ಕೆ ಹಾನಿ ಮಾಡುತ್ತಿರುವುದರ ಬಗ್ಗೆ ಮಾಹಿತಿಗಳಿವೆ. ಕರ್ನಾಟಕದ ಪ್ರತಿಭೆ-ಸತ್ವಗಳಿಗೆ ರಾಜಧಾನಿಯಲ್ಲಿ ಮನ್ನಣೆ ದೊರಕದ್ದರ ಬಗ್ಗೆ ವಿಷಾದಗಳಿವೆ. ಬೇರೆ ರಾಜ್ಯಗಳಿಗೆ ಹೋಲಿಸಿ ನೋಡಿದಾಗ ಕರ್ನಾಟಕದ ಶಕ್ತಿ ಮತ್ತು ದೌರ್ಬಲ್ಯಗಳೇನೆಂಬುದನ್ನು ಬೆರಳೆತ್ತಿ ತೋರಿಸುವ ದಿಟ್ಟತನವಿದೆ.

ಅಂಕಣ ಬರಹಗಳಲ್ಲೆಲ್ಲಾ ತುಂಬಾ ವಿಶಿಷ್ಟವಾಗಿರುವ ಈ ಕೃತಿಯಲ್ಲಿ ಕನ್ನಡ ಭಾಷೆಯೂ ಹೊಸತುಗೊಂಡು ಹೊಸ ಶಕ್ತಿಯೊಂದಿಗೆ ಪ್ರತ್ಯಕ್ಷವಾಗಿದೆ. ಕರ್ನಾಟಕ ರಾಜ್ಯ ಮತ್ತು ಭಾರತ ದೇಶದ ಕುರಿತಾದ ನಮ್ಮ ಸಮಕಾಲೀನ ತಿಳುವಳಿಕೆಗಳನ್ನು ಅಗಾಧವಾಗಿ ವಿಸ್ತರಿಸುವ ಚೈತನ್ಯವುಳ್ಳ ಕೃತಿಯಿದು.

ಪುರುಷೋತ್ತಮ ಬಿಳಿಮನೆ

ಶೀರ್ಷಿಕೆ: ದೆಹಲಿ ನೋಟ ಲೇಖಕರು: ದಿನೇಶ್ ಅಮಿನ್ ಮಟ್ಟು ಪ್ರಕಾಶಕರು: ಕನ್ನಡ ಪುಸ್ತಕ ಪ್ರಾಧಿಕಾರ ಪುಟಗಳು:277 ಬೆಲೆ: ರೂ.100/-

ಕೃಪೆ : ಪ್ರಜಾವಾಣಿ