ರಾಜಕೀಯದ ಬೆಳಕಿಗೆ ಬರಲಿಚ್ಛಿಸುವವರು ಓದಬಹುದಾದ ಪುಸ್ತಕ

bachchalliya-belku

ಕುಗ್ರಾಮದಲ್ಲಿ ಎಮ್ಮೆ ಮೇಯಿಸುತ್ತಿದ್ದ ಬಾಲಕನೊಬ್ಬ ಸಂಪುಟ ಸಚಿವನಾಗುವ ಮಟ್ಟಕ್ಕೆ ಬೆಳೆದ ರಾಮೇಗೌಡರ ವಿಕಾಸ ಕಥನವೇ `ಬಚ್ಚಳ್ಳಿಯ ಬೆಳಕು‘.

ವರ್ತಮಾನದಲ್ಲಿ ಭೂತ ಉಳಿಸಿರುವ ಅಸ್ಪಷ್ಟ ಹೆಜ್ಜೆ ಗುರುತುಗಳ ಜಾಡು ಹಿಡಿವ ಕಾರ್ಯವನ್ನು ಮಾಡಿದ್ದಾರೆ. ಎಂ.ಜಿ.ಚಂದ್ರಶೇಖರಯ್ಯ. ರಾಮೇಗೌಡರನ್ನು ನಿಕಟವಾಗಿ ಬಲ್ಲ ಹತ್ತಾರು ಮಂದಿ ತಮ್ಮ ನೆನಪನ್ನು ಕೆದಕಿರುವುದು ಇಲ್ಲಿ ಪುಸ್ತಕವಾಗಿದೆ. ದಶಕಗಳ ಹಿಂದೆ ಸಂದುಹೋದ ವ್ಯಕ್ತಿಯೊಬ್ಬನ ನಡವಳಿಕೆ, ಗುಣಸಂಪನ್ನತೆ, ಮಾಡಿರುವ ಕೆಲಸಗಳನ್ನು ಇಲ್ಲಿ ಸ್ಮರಿಸಲಾಗಿದೆ.

ಸಾರ್ವಜನಿಕರ ನೆನಪು ಅಲ್ಪಾಯು. `ಆ ಕ್ಷಣವೇ ಮುಖ್ಯ ಎಂಬ ನಂಬಿಕೆ ಪ್ರಬಲವಾಗಿರುವ ಕಾಲಘಟ್ಟವಿದು ಎಂದು ಮುನ್ನುಡಿಯಲ್ಲಿ ಬರೆಯುತ್ತಾರೆ ಟೈಮ್ಸ್ ಆಫ್ ಇಂಡಿಯಾದ ಕೆ.ವೆಂಕಟೇಶ್.

`ರಾಮೇಗೌಡರ ಜೀವನಕಥನವನ್ನು ಹೇಳುತ್ತಲೇ ಒಂದು ರಾಜಕೀಯ, ಒಂದು ಸಾಮಾಜಿಕ ಚಿತ್ರವನ್ನು ನಮ್ಮ ಮುಂದಿಡುತ್ತಾರೆ. ಇದರ ಜೊತೆಯಲ್ಲೇ ಸಮಾಜ ಅಭಿವೃದ್ಧಿಯ ಕಾರ್ಯಗಳು, ಪ್ರಾಮಾಣಿಕತೆ, ರಾಜಕೀಯ ಸಂಬಂಧಗಳು, ಕೌಟುಂಬಿಕ ಕಲಹಗಳು ಹೀಗೆ ನೂರಾರು ಚಿತ್ರಗಳು ನಮ್ಮ ಮುಂದೆ ಬರುತ್ತದೆ. ತಮ್ಮ ಅಪಾರ ಆಸ್ತಿ ಮತ್ತು ಹಣವನ್ನು ರಾಜಕೀಯಕ್ಕೆ ಬಂದು ಕಳೆದುಕೊಂಡ ದುರಂತ ಚಿತ್ರವೂ ಇಲ್ಲಿದೆಎಂದು ಲೇಖಕರನ್ನು ಅಭಿನಂದಿಸಿರುವವರು ಹ.ಕ.ರಾಜೇಗೌಡ.

ರಾಜಕೀಯದ ಬೆಳಕಿಗೆ ಬರಲಿಚ್ಛಿಸುವವರು ಓದಬಹುದಾದ ಪುಸ್ತಕ. ನಮ್ಮ ಇಂದಿನ ರಾಜಕೀಯದ ಸ್ಥಿತ್ಯಂತರಕ್ಕೆ ಹಿಡಿದ ಕನ್ನಡಿಯೂ ಹೌದು.

ಶೀರ್ಷಿಕೆ: ಬಚ್ಚಳ್ಳಿಯ ಬೆಳಕು ಲೇಖಕರು: ಎಂ.ಜಿ. ಚಂದ್ರಶೇಖರಯ್ಯ ಪ್ರಕಾಶಕರು: ಗೋಧೂಳಿ ಪ್ರಕಾಶನ ಪುಟಗಳು:264 ಬೆಲೆ: ರೂ.150/-

ಕೃಪೆ : ಕನ್ನಡ ಪ್ರಭ