ಹಳ್ಳಿ, ಪೇಟೆಯ ನಡುವಣ ಸೇತುವೆ

gubbi-hallada-saakshiyalli

ಎಲ್.ಸಿ.ಸುಮಿತ್ರಾ ಮಲೆಯ ತಡಿಯಲ್ಲಿ ನೆಲೆಸಿ ಮಲೆನಾಡಿನ ನಾಡನ್ನೂ ಅಲ್ಲಿನ ಕಾಡನ್ನೂ ಅರಿತವರಾಗಿ ಅವುಗಳ ನಡುವೆ ಒಂದು ಬಗೆಯ ಸಮನ್ವಯ ಸಾಧಿಸುವುದನ್ನು ಕೇಂದ್ರಬಿಂದುವಾಗಿಸಿ ಕತೆ ಬರೆದವರು. `ಗುಬ್ಬಿ ಹಳ್ಳದ ಸಾಕ್ಷಿಯಲ್ಲಿಅವರ ಒಂದು ಕತೆಯಾಗಿದ್ದರೂ ಇಡೀ ಸಂಕಲನದ ಜವಾಬ್ದಾರಿ ಹೊತ್ತುನಿಂತ ಶೀರ್ಷಿಕೆಯದು. `ಎಂತಹ ಕಡು ಬೇಸಿಗೆಯಲ್ಲಾದರೂ ಹಕ್ಕಿಗಳು ಕುಡಿಯುವಷ್ಟಾದರೂ ನೀರಿರುತ್ತದೆ ಎಂದು ಗುಬ್ಬಿಹಳ್ಳಿಯ ಹಳ್ಳಕ್ಕೆ ಬರುತ್ತವೆ. ಅಗತ್ಯ ಮುಗಿದಾಗ ನಗರಕ್ಕೆ ಮುಖಮಾಡುತ್ತವೆ! ಅಂತೆಯೇ ಇಲ್ಲಿನ ಕತೆಗಳ ಪಾತ್ರಗಳೂ.

`ಗುಡಿಯೊಳಗೆಕತೆಯ ರಾಮ, ನಿಮ್ನ ಜಾತಿಯವ. ಹೇಗೋ ವಿದ್ಯಾಭ್ಯಾಸ ಪಡೆದು ನಗರ ಸೇರಿದ. ಬ್ರಾಹ್ಮಣ ಕನ್ಯೆಯನ್ನು ವಿವಾಹವಾದಾಗ ಹಳ್ಳಿಯಲ್ಲಿದ್ದ ಅಮ್ಮ ಕೂಡಾ ದೂರವಾದರು. ತಮ್ಮ ಹಳ್ಳಿಯ ದೇವರ ಗುಡಿಗೆ `ರಾಮಣ್ಣನವರಾಗಿಮರಳಿ ಬಂದರೂ ಅಲ್ಲಿ ಮರುವಾಸ್ತವ್ಯ ಹೂಡುವುದಿಲ್ಲ.

`ಗುಬ್ಬಿಹಳ್ಳಿ ಸಾಕ್ಷಿಯಲ್ಲಿನ ನಿಸರ್ಗ ಪಟೇಲ್ ಅಂಥವನಲ್ಲ. ಆತ ಹಳ್ಳಿಯಿಂದ ಪೇಟೆಗೆ ಹೋಗಿ ವಿದ್ಯಾಭ್ಯಾಸ ಮುಗಿಸಿದ, ಮರಳಿ ಹಳ್ಳಿಗೆ ಬಂದ. `ಕಲ್ಲಿನ ಕೋಳಿಯ ಸುನೀಲ ಪೇಟೆಗೆ ಹೋಗಿ ಉದ್ಯೋಗ ಹಿಡಿದರೂ ತನ್ನ ಮುರಿದ ಕೈಗೆ ನಾಟಿ ಮದ್ದು ಮಾಡಲು ರಜ ತೆಗೆದು ಹಳ್ಳಿಗೇ ಬಂದ. `ಯು ಕಟ್ಕತೆಯಲ್ಲಿ ಕೋಮಲಾಳ ಗಂಡ ತಾನು ಹಳ್ಳಿಯ ತೋಟಗದ್ದೆಗಳನ್ನು ಮಾರಿ ಸೇರಿದ್ದು ಪಟ್ಟಣಕ್ಕೆ. `ಒಂದು ಮುಚ್ಚಳ ಹಾಕಿದ ಪೆಟ್ಟಿಗೆಯಲ್ಲಿನ ಆ ಪೆಟ್ಟಿಗೆ ಇಲಿ ತಿಂದು ತೂತು ಬಿದ್ದಿದ್ದರೂ ಅದು ಹೋಗಿ ಸೇರಿದ್ದು ಪಟ್ಟಣಕ್ಕೆ.

ಸುಮಿತ್ರಾ ಅವರದು ಹಳ್ಳಿ ಪಟ್ಟಣಗಳ ನಡುವೆ ಸೇತುವೆ ಕಟ್ಟುವ ಕೆಲಸ. ಅವರ ಜಾಣ್ಮೆ ಎಲ್ಲಿದೆಯೆಂದರೆ ಹಳ್ಳಿ, ಪಟ್ಟಣಗಳಲ್ಲಿ – ಇಂದಿನ ಪರಿಸರವಾದಿಗಳ ಹಾಗೆ – ಹಳ್ಳಿಯೇ ಸರ್ವಶ್ರೇಷ್ಠ ಎಂದು ಹೇಳ ಹೊರಡದೇ ಇರುವುದರಲ್ಲಿ. `ಅಲೆಗಳ ನಡುವೆಯಂತಹ ಕತೆಯಲ್ಲಿ ಐವರು ಗೆಳತಿಯರು ಕೈಗೊಂಡ ಯಾತ್ರೆಯಲ್ಲಿ ಕೇರಳದ ಪ್ರಕೃತಿಯ ಮನೋಜ್ಞ ವರ್ಣನೆಯಿದೆ. ಆದರೂ ಅವರೇನೂ ಹಳ್ಳಿಯಲ್ಲಿ ನೆಲೆ ನಿಲ್ಲ ಬಂದವರಲ್ಲ. `ಗುಬ್ಬಿಹಳ್ಳಿ ಸಾಕ್ಷಯಲ್ಲಿನ ನಿಸರ್ಗ ಪಟೇಲ್ ಎಸ್ಟೇಟ್ ಮಾಲಕ, ಸಿರಿವಂತ. ತಾನು ಹಳ್ಳಿಯ ಬಡವರಿಗೆ ಸಹಾಯ ಸಹಾಯ ಮಾಡುವುದಾಗಿ ಹೇಳಿಕೊಳ್ಳುತ್ತಾನೆ. ಕಾರಿನಲ್ಲಿ ಹೋಗುವಾಗ ಎದುರು ಬಡವರನ್ನು ಕಂಡರೆ ಈತ ಇರಿಸುಮುರಿಸುಗೊಳ್ಳುತ್ತಾನಂತೆ. ಅದೇ ಹೊತ್ತಿಗೆ ತನ್ನ ಮಗಳಿಗೆ ಪೇಟೆಯಲ್ಲಿ ವಿದ್ಯಾಭ್ಯಾಸದ ಏರ್ಪಾಟು ಮಾಡುತ್ತಾನೆ. ಈತ ಎಷ್ಟರಮಟ್ಟಿಗೆ ಹಳ್ಳಿಯವರಿಗೆ ನಿಷ್ಠ-ಎಂಬುದನ್ನು ಕಂಡುಕೊಳ್ಳಲೋ ಎಂಬಂತೆ ಅವನಿ ಪ್ರವೇಶಿಸುತ್ತಾಳೆ. ಅಂದರೆ ನಿಸರ್ಗ ಪಟೇಲ್ ನ ಹಳ್ಳಿ ಪ್ರೀತಿ ಪ್ರಶ್ನಾತೀತವಲ್ಲ ಎಂದ ಹಾಗಾಯಿತು.

ಇನ್ನು ಹಳ್ಳಿಗಳಾದರೋ ಹಿಂದಿನಂತೆ ಈಗಿಲ್ಲ. ಊರ ಕೋಳಿಯ ಮೊಟ್ಟೆ ಕೂಡ ಸಿಗದ ಹಳ್ಳಿಗಳು. ನಗರದ ಮಂದಿ ತಿಂದು ಸುಖಿಸುವುದಕ್ಕಿರುವ ಐಸ್ ಕ್ರೀಮ್ಗೆ ಪರಿಮಳ ಕೊಡಲು ಊರಕೋಳಿಗಳನ್ನು ಖಾಲಿಮಾಡಲಾಯಿತು. ಅಂದರೆ ಕೋಳಿಗಳಿದ್ದ ಪಕ್ಷದಲ್ಲಿ ಅವು ವೆನಿಲ್ಲಾ, ಕೋಳಿಗಳಿಗಿಂತ ಶ್ರೇಷ್ಠವಾಗಿ ಬಿಟ್ಟದ್ದು – ಈ ಹಳ್ಳಿಗರಿಗೆ.

ಉಪಮೆ ಹಾಗೂ ರೂಪಕಗಳ ಜೊತೆ ಸರಸವಾಡುವುದನ್ನು ಸುಮಿತ್ರಾ ಅವರು ಬಹಳ ಇಷ್ಟಪಡುತ್ತಾರೆ. `ಅಂದಂದೇ ಹುಟ್ಟಿತ್ತುಎಂಬ ಕತೆಯಲ್ಲಿನ ಒಂದು ದಿನದ ಬಾಳಿನ ಅಣಬೆಯೊಂದಿಗೆ ನೂರು ವರ್ಷ ಆಯುಸ್ಸುಳ್ಳ ಮನುಷ್ಯನ ಬದುಕನ್ನು ಸಮಾನವಾಗಿ ಕಾಣುವ ಪ್ರಯತ್ನವಾಗಲೀ `ಸುಳಿಯೊಳಗಿನ ಬೆಂಕಿಯಲ್ಲಿ ಸುಂದರತ್ತೆಯ ತಲೆಗೆ ತೆಂಗಿನ ತಲೆ ಗಂಟುಬಿದ್ದು `ತಲೆಯಿರುವವರಿಗೆ ಮಾತ್ರ ಬದುಕುವ ಹಕ್ಕೇ?’ ಎಂಬ ಘೋಷಣೆ ಹೊಮ್ಮುವುದಾಗಲೀ ಉಪಮೆ ರೂಪಕಗಳ ಖಯಾಲಿಯ ಪರಿಣಾಮ.

ಸುಮಿತ್ರಾ ಅವರ ಬರಹದಲ್ಲಿ ತಮ್ಮದೇ ಆದ ಮುದ್ರೆಯಿದೆ. ಸಾಮಾನ್ಯವಾಗಿ ಕತೆ ಬರೆಯುವಾಗ ಬಳಸುವ ಭಾಷೆಗಿಂತ ತುಸು ಹೆಚ್ಚು ಗದ್ಯಗಂಧಿಯಾಗಿ, ಕತೆಯ ಸಾಮಾನ್ಯ ಲಕ್ಷಣವಾದ ಆದಿ ಮಧ್ಯ ಅಂತ್ಯಗಳನ್ನು ಬದಿಗಿಟ್ಟು ಹೇಗೋ ಹೊರಟು ನಿಂತುಬಿಡುವ ಎಬ್ ಸ್ಟ್ರಾಕ್ಟ್ (ಅಸಂಗತ) ಗಳಾಗಿ ಇಲ್ಲಿನ ಕೆಲವು ಕತೆಗಳು ಕಾಣಿಸಿಕೊಳ್ಳುತ್ತವೆ. ಫ್ಲಾಶ್ ಬ್ಯಾಕ್ ತಂತ್ರ ಕೂಡ ಅವರಿಗೆ ಅಷ್ಟೇ ಪ್ರಿಯ : `ಒಂದು ಮುಚ್ಚಳ ಹಾಕಿದ ಪೆಟ್ಟಿಗೆ‘, `ಗಣ ಬಂದು ಹೋದಾಗಇತ್ಯಾದಿ ಕತೆಗಳಲ್ಲಿ ಅವು ಮಾಮೂಲಿ ಎಂಬಂತೆ ಕಾಣಿಸಿಕೊಳ್ಳುತ್ತವೆ. ಆದರೆ `ಅಲೆಗಳ ನಡುವೆಎಂಬ ವಿಚಿತ್ರ ವಿನ್ಯಾಸದ ಐದು ಪಾತ್ರಗಳು ತಮ್ಮ ಕಣ್ಣೆದುರಿಗಿದ್ದವರ ಹಾಗೂ ಇರದವರ ಕುರಿತು ಮಾತನಾಡುತ್ತಲೇ ಆಯಾ ಪಾತ್ರಗಳನ್ನು ಕಟ್ಟಿಕೊಡುವ ಪರಿ ಮನೋಜ್ಞವಾಗಿದೆ. ಒಂದೊಂದು ಪಾತ್ರದ ಹಿಂದೆಯೂ ಒಂದೊಂದು ಕತೆಯಿರುವಾಗ ಎಲ್ಲವನ್ನೂ ಒಂದು ಕತೆಯಲ್ಲಿ ಹಿಡಿದಿಡುವುದು ಒಂದು ಕಾದಂಬರಿಗೆ ಗ್ರಾಸವಾಗುವ ವಸ್ತು. ಇಲ್ಲಿ ಫ್ಲಾಶ್ ಬ್ಯಾಕ್ ತಂತ್ರ ಸುಮಿತ್ರಾ ಅವರೊಂದಿಗೆ ಅಪೂರ್ವವೆಂಬಂತೆ ಸಹಕರಿಸಿದೆ. ಟಿ.ಪಿ. ಅಶೋಕ ಅವರ ಮುನ್ನುಡಿ ಸಂಕಲನದ ಮಹತ್ವವನ್ನು ಹೆಚ್ಚಿಸಿದೆ

ಡಾ. ನಾ. ದಾಮೋದರ ಶೆಟ್ಟಿ

ಶೀರ್ಷಿಕೆ: ಗುಬ್ಬಿಹಳ್ಳದ ಸಾಕ್ಷಿಯಲ್ಲಿ ಲೇಖಕರು: ಎಲ್.ಸಿ.ಸುಮಿತ್ರಾ ಪ್ರಕಾಶಕರು: ಅಂಕಿತ ಪುಸ್ತಕ ಪುಟಗಳು:96 ಬೆಲೆ:ರೂ.70/-

ಕೃಪೆ : ಪ್ರಜಾವಾಣಿ