ಇವನು ತಂದ ಮೀನಿಗೆ ನಾ ಮಸಾಲೆ ಮಾಡುವುದು ಎನ್ನುವಂತೆ ಸಲೀಸಾಗಿ

oora-olagana-bayalu

ಡಾ| ವಿನಯಾ ಅವರು ಈಗಾಗಲೇ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ `ಊರ ಒಳಗಣ ಬಯಲುಎಂಬ ಅವರ ಈ ಮೊದಲ ಕಥಾ ಸಂಕಲನದಲ್ಲಿ ಹನ್ನೊಂದು ಕತೆಗಳಿವೆ. ಈ ಕತೆಗಳೆಲ್ಲವೂ ಸ್ವಾರಸ್ಯಕರವಾಗಿ ಓದಿಸಿಕೊಳ್ಳುವಂತಿದೆ. ಇಲ್ಲಿನ ಹೆಚ್ಚಿನ ಕತೆಗಳು ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಾಗೂ ಪಟ್ಟಣಗಳ ಜೀವನದ ಗತಕಾಲದ ನೆನಪುಗಳನ್ನು ಆಧರಿಸಿ ನಿರೂಪಿತವಾಗಿರುವ ಈ ಕತೆಗಳಲ್ಲಿ ಪಾತ್ರಗಳ ವ್ಯಕ್ತಿತ್ವ, ಅವುಗಳ ಬದುಕಿನ ಸನ್ನಿವೇಶಗಳನ್ನು ಹಾಗೂ ಅನುಭವಗಳನ್ನು ದಟ್ಟವಾಗಿ ವಿವರಗಳ ಮೂಲಕ ಓದುಗರ ಕಣ್ಣ ಮುಂದೆ ಚಿತ್ರಗಳನ್ನಾಗಿ ಮೂಡಿಸಲಾಗಿದೆ. ಈ ವಿವರಗಳು ಸ್ವಲ್ಪ ಹೆಚ್ಚಾಗಿಯೇ ಇರುವುದರಿಂದ ಓದುಗರು ಈ ಕತೆಗಳನ್ನು ಸಾವಕಾಶವಾಗಿ ಓದಿದರೆ ಮಾತ್ರ ಅವುಗಳಲ್ಲಿರುವ ಸ್ವಾರಸ್ಯವನ್ನು ಪೂರ್ತಿಯಾಗಿ ಸವಿಯಬಹುದಾಗಿದೆ.

`ಸ್ವಯ‘, `ಕ್ಷಮೆಯಿರಲಿ ಕಂದಾ‘, `ಎಲ್ಲಾ ಆರಾಮಾ?’ ದಂತಹ ಕತೆಗಳನ್ನು ಇಲ್ಲಿನ ಸಾಮಾನ್ಯ ಕತೆಗಳೆಂದು ಗುರುತಿಸಬಹುದು. `ಸ್ವಯದಲ್ಲಿ ದೇವರಾಯ ನಾಯ್ಕನ ವಿವಾಹೇತರ ಸಂಬಂಧದಿಂದಾಗಿ ಅವನಿಂದ ದೂರ ಸರಿದಿದ್ದ ಅವನ ಹೆಂಡತಿ, ಅವನು ಅಫಘಾತದಲ್ಲಿ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದಾಗ ಹತ್ತಿರವಾಗುವುದನ್ನು ಕಾಣುತ್ತೇವೆ. `ಕ್ಷಮೆಯಿರಲಿ ಕಂದಾದಲ್ಲಿ ತಮ್ಮ ಮತೀಯ ಹಿನ್ನೆಲೆಗಳನ್ನು ಮರೆತು ಆಪ್ತ ಸ್ನೇಹಿತರಾಗಿದ್ದ ಇಬ್ಬರು ವಿದ್ಯಾರ್ಥಿಗಳು ಊರಿನ ಮತೀಯ ಸಂಘಟನೆಯ ಕಾರ್ಯಕರ್ತರ ಉಪಟಳದಿಂದಾಗಿ ದೂರವಾಗುವುದನ್ನು ಆ ಕಾಲೇಜಿನ ಅಧ್ಯಾಪಕಿಯ ಅನುಭವಗಳ ಮೂಲಕ ನಿರೂಪಿಸಲಾಗಿದೆ. `ಎಲ್ಲಾ ಆರಾಮಾ?’ ದಲ್ಲಿ ಸುಜಾತ ಎಂಬ ಕಾಲೇಜು ಅಧ್ಯಾಪಕಿ, ತನ್ನ ಶಾಲಾ ಶಿಕ್ಷಕಿ `ಸಾವಿತ್ರಿ ಮೇಡಂರನ್ನು ಆಕಸ್ಮತ್ತಾಗಿ ಭೇಟಿಯಾದಾಗ, ತನ್ನ ಶಾಲಾ ದಿನಗಳಲ್ಲಿ ವಿದ್ಯಾರ್ಥಿನಿಯರಿಗೆ ಡ್ಯಾನ್ಸ್ ಕಲಿಸುವ ಮೂಲಕ ಸ್ಫೂರ್ತಿಯ ಕೇಂದ್ರವಾಗಿದ್ದ ಅವರ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುವುದನ್ನು ಚಿತ್ರಿಸಲಾಗಿದೆ.

ಸಂಕಲನದ ಮೊದಲ ಕತೆಯಾದ `ಒಂದು ಖಾಸಗಿ ಪತ್ರಇಲ್ಲಿನ ಅತ್ಯತ್ತಮ ಕತೆಯಾಗಿದ್ದು ಕನ್ನಡದ ಉತ್ತಮ ಕತೆಗಳ ಸಾಲಿಗೆ ಸೇರುವಂತಹದ್ದಾಗಿದೆ. ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಎದುರಿಸಬೇಕಾಗಿರುವ ಮಾನಸಿಕ ಹಾಗೂ ದೈಹಿಕ ಹಿಂಸೆಗಳನ್ನು ಈ ಕತೆಯಲ್ಲಿ ಪರಿಣಾಮಕಾರಿಯಾಗಿ ಅನಾವರಣಗೊಳಿಸಲಾಗಿದೆ. ಈ ಕತೆ, ಪಪ್ಪಿ ಎಂಬ ಮೂವತ್ತು ವರ್ಷದ ಮಹಿಳೆ, ಈಗ ಹನ್ನೆರಡು ವರ್ಷದ ಮಗಳ ತಂದೆಯಾಗಿರುವ ಮಹೇಶ ಎಂಬ ತನ್ನ ಊರಿನ ವ್ಯಕ್ತಿಗೆ ಬರೆದ ಖಾಸಗಿ ಪತ್ರದ ರೂಪದಲ್ಲಿದೆ. ಇದರಲ್ಲಿ ಪಪ್ಪಿ ತಾನು ಹೈಸ್ಕೂಲು ಹಾಗೂ ಕಾಲೇಜುಗಳಲ್ಲಿ ಓದುತ್ತಿದ್ದಾಗ ಅವಳನ್ನು ತನ್ನ ಪ್ರೇಮಿ ಎಂದು ಪುಕಾರು ಹಬ್ಬಿಸುವ ಮೂಲಕ ಮತ್ತು ತನ್ನ ಇತರ ನಡೆ ನುಡಿಗಳಿಂದ ತನ್ನನ್ನು ವಿನಾಕಾರಣ ಸತತವಾಗಿ ಕಾಡಿದ್ದನ್ನು ನೆನಪಿಸುತ್ತಾಳೆ. ಅವನ ಈ ನಡವಳಿಕೆಗಳಿಂದಾಗಿ ತನಗೆ ತನ್ನ ಹಿರಿಯರಿಂದಾದ ಅಪಮಾನ ಹಾಗೂ ಹಿಂಸೆಗಳನ್ನು ಜೊತೆಗೆ ತನ್ನ ಊರಿನ ಇತರ ಕೆಲವು ಮಹಿಳೆಯರೂ ಪುರುಷರಿಂದ ಹಿಂಸೆಗೊಳಗಾದ ಘಟನೆಗಳ ಬಗ್ಗೆಯೂ ಹೇಳಿ ಅವನಿಗೆ ಅವನ ವ್ಯಕ್ತಿತ್ವದ ನೀಚತನವನ್ನು ಕಾಣಿಸುತ್ತಾಳೆ. `ಸತತ ಎಂಟ್ಹತ್ತು ವರ್ಷ ನಿನ್ನ ಕತೆಗಳಿಗೆ ನನ್ನ ಹೀರೋಯಿನ್ ಮಾಡಿಬಿಟ್ಟೆ. ನಾನು ಹಾಗಿಲ್ಲ ಎಂದು ಹೇಳುವ ಅವಕಾಶವೂ ಇರದ ಹಾಗೆ ನೀನೋ ದೈಹಿಕವಾಗಿ ಹಲ್ಲೆ ಮಾಡಲಿಲ್ಲ. ಕಣ್ಣೆತ್ತಿ ಮುಖ ನೋಡಲೂ ಇಲ್ಲ. ಮನಸ್ಸನ್ನು ಮಾತ್ರ ಕಚಪಚ ತುಳಿದು ಬಿಟ್ಟೆ. ಕಾಲೇಜಿನಲ್ಲಿ ನಡೆದ ಯಾವ ಕಾರ್ಯಕ್ರಮಕ್ಕೂ ನಿಲ್ಲದ ಹಾಗೆ, ಹರಟೆ ಹೊಡೆಯದ ಹಾಗೆ, ಯಾವ ಯಾವುದೋ ಸಂಶಯದ ಕಣ್ಣಿಗೆ ಸದಾ ವಸ್ತುವಾಗಿರೋ ಹಾಗೆ ಮಾಡಿಟ್ಟೆ. ಏನಿತ್ತಯ್ಯ ನಿನ್ನ ಮನಸ್ಸಿನಲ್ಲಿ? ನಾನು ಕೊಳೆಯುವುದು ಬೇಕಿತ್ತಾ? ನಿನ್ನ ಮಗಳನ್ನೊಮ್ಮೆ ಒಂದೇ ಒಂದು ಸಲ ನನ್ನ ಜಾಗದಲ್ಲಿಟ್ಟು ನೋಡುಎಂದು ಕೇಳುತ್ತಾಳೆ.

`ನೋಯದವರೆತ್ತ ಬಲ್ಲರೋ…ಕತೆಯಲ್ಲಿ ತನ್ನ ಮನೆಯವರಿಗಾಗಿ ಜೀವನಪೂರ್ತಿ ದುಡಿದು ಅವರಿಂದಲೇ ಅನ್ಯಾಯಕ್ಕೊಳಗಾದಾಗ ಆತ್ಮಹತ್ಯೆಗೆ ಶರಣಾಗುವ ಅಂಜನಕ್ಕನ ಕತೆಯಿದೆ. ಅಂಜನಕ್ಕನ ಕತೆಯನ್ನು ನಿರೂಪಿಸುವವಳು ಅವಳ ನೆರೆಮನೆಯವಳಾದ ವಸುಧಾ. ಅವಳ ಬಾಲ್ಯಕಾಲದಲ್ಲಿ ಅಂಜನಕ್ಕ ಅವಳಿಗೆ ಸ್ಫೂರ್ತಿಯ ಕೇಂದ್ರವಾಗಿದ್ದವಳು. ಅಂಜನಕ್ಕನ ಕತೆಯನ್ನು ವಸುಧಾಳ ದೃಷ್ಟಿಕೋನದಿಂದ ನಿರೂಪಿಸಿರುವುದರಿಂದ ಅವಳ ಜೀವನದ ದುರಂತ ಓದುಗರಿಗೆ ಹೆಚ್ಚು ಪರಿಣಾಮಕಾರಿಯಾಗಿ ಮುಟ್ಟುವಂತಾಗಿದೆ.

ಮೇಲಿನ ಎರಡು ಕತೆಗಳನ್ನು ಓದಿದವರಿಗೆ ಲೇಖಕಿಯವರು ಸ್ತ್ರೀವಾದಿ ಧೋರಣೆಗೆ ಬದ್ಧರಾದವರೆಂದು ಅನಿಸಬಹುದು. ಆದರೆ ಸಂಕಲನದ ಇನ್ನೆರಡು ಪರಿಣಾಮಕಾರಿ ಕತೆಗಳಾದ `ಊರ ಒಳಗಣ ಬಯಲುಮತ್ತು `ದಣಿವು ಕಾಡುವ ಹೊತ್ತುಗಳು ಅವರು ಬದುಕಿಗೆ ಬದ್ಧರಾದ ಕತೆಗಾರರು ಎಂದು ತೋರಿಸುತ್ತವೆ. `ಊರ ಒಳಗಣ ಬಯಲುಕತೆಯಲ್ಲಿ ಅನ್ಯಮತದ ಯುವತಿಯನ್ನು ಮದುವೆಯಾಗಿದ್ದರಿಂದ ತನ್ನ ಕುಟುಂಬದವರಿಂದ ದೂರವಾಗಬೇಕಾಗಿ ಬಂದ ಸುಧಾಕರ ಎಂಬ ಯುವಕ ತನ್ನ ಮೊದಲ ಮಗು ಹುಟ್ಟಿದಾಗ ತನ್ನ ಊರಿನ ದೇವಿಗೆ ಪೂಜೆ ಸಲ್ಲಿಸಲು ಬರುತ್ತಾನೆ. ಪೂಜಾರಿಯಾದ ತನ್ನ ಸ್ನೇಹಿತ ನಾಗೇಶ ಗುನಗ ಹಾಗೂ ಹೊನ್ನಪ್ಪ ಗೌಡ ಎಂಬ ಹಿರಿಯ ತನ್ನೊಡನೆ ಅಂತಕರಣದಿಂದ ನಡೆದುಕೊಂಡ ರೀತಿಯಿಂದ `ಊರನ್ನೋದು ಬರೀ ಮನಿಯಲ್ಲಎಂಬುದನ್ನು ಕಂಡುಕೊಳ್ಳುವುದನ್ನು ನೋಡುತ್ತೇವೆ. ಈ ಕ್ರಿಶ್ಚಿಯನ್ನಳನ್ನು ಮದುವೆಯಾಗಿರುವ ಸುಧಾಕರ ಹಿಂದೊಮ್ಮೆ ಊರಿನ ಉಡಾಳರ ಜೊತೆ ಸೇರಿ ಕೋಮು ಗಲಭೆಯಲ್ಲಿ ಪಾಲ್ಗೊಂಡು ಬೇರೆ ಮತದ ಯುವತಿಯನ್ನು ಹಿಡಿದೆಳೆಯಲು ಪ್ರಯತ್ನಿಸಿ ಹಿಂದೆಗೆದು ಬಂದವನೆಂಬುದು ಅವನ ಇಲ್ಲಿನ ಸ್ವಗತದಲ್ಲಿ ತಿಳಿಯುತ್ತದೆ. ಹೀಗಾಗಿ ಇದು ಒಬ್ಬ ವ್ಯಕ್ತಿಯ ವ್ಯಕ್ತಿತ್ವದಲ್ಲಾದ ಬದಲಾವಣೆಯನ್ನು ದಾಖಲಿಸುವ ಕತೆಯಾಗಿಯೂ ನಮ್ಮನ್ನು ಮುಟ್ಟುತ್ತದೆ.

`ದಣಿವು ಕಾಡುವ ಹೊತ್ತುಎಂಬ ಕತೆಯಲ್ಲಿ ಒಂದು ಶಾಲೆಯ ಹೆಡ್ಮಾಸ್ತರನಾದ ಪಾವಸ್ಕರನನ್ನು, ಅವನ ನಡವಳಿಕೆಗಳಿಂದಾಗಿ, ಹಣ ಮತ್ತು ಅಧಿಕಾರಗಳಿಗೆ ಅಂಟಿಕೊಂಡಿರುವ ಮನುಷ್ಯನೆಂದು ಅವನ ಸುತ್ತಲಿನವರು ನಿರ್ಧರಿಸಿರುತ್ತಾರೆ. ಆದರೆ ಅವನ ಹೆಂಡತಿ ಅಕಾಲ ಮರಣಕ್ಕೆ ತುತ್ತಾದಾಗ ಇದೇ ಪಾವಸ್ಕರ್ ಮಾನಸಿಕವಾಗಿ ಜರ್ಜರಿತನಾಗುವುದನ್ನು ಕಾಣುತ್ತೇವೆ.

ಇಲ್ಲಿನ ಭಾಷೆಯೂ ಬಹಳ ಆಕರ್ಷಕವಾಗಿದೆ. `ಸ್ವಯಕತೆಯಲ್ಲಿ ಬರುವ ಈ ಮಾತುಗಳನ್ನು ನೋಡಬಹುದು: `ಒಣಗಿದ ಕೆರೆಯಲ್ಲುಳಿದ ತಗ್ಗು ನೀರಿನಂತೆ ಹೊಲಸುಗಟ್ಟಿದ ಸಂಬಂಧ ವಾಕರಿಕೆ ಅನಿಸುತ್ತಿತ್ತು‘, `ಇವನು ತಂದ ಮೀನಿಗೆ ನಾ ಮಸಾಲೆ ಮಾಡುವುದು ಎನ್ನುವಂತೆ ಸಲೀಸಾಗಿ ಬದುಕಿದೆವು‘, `ಆ ರೆಪ್ಪೆಗಳು ಇಬ್ಬನಿಗೆ ಸೋತ ಹೂವಿನ ಹಾಗೆ ಬಾಗಿರುತ್ತಿತ್ತು‘, `ನೋಯದವರೆತ್ತ ಬಲ್ಲರೋ…ದಲ್ಲಿ `ಮಗಳು ಅಂದರೆ ದಾಬಿನದ ಹಾಂಗೆ, ಬೇಕಾದಾಗ ಹಾಕ್ಕೊಂಡು ಬ್ಯಾಡಾದಾಗ ತೆಗೆದಿಡಬಹುದು ಅನ್ನೋ ಅಮ್ಮನ ಧೋರಣೆ ಮೂವತ್ತು ವರ್ಷಗಳಲ್ಲಿ ಮೊದಲ ಸರ್ತಿ ಉಪರಟೆ ಹೊಡದಿದ್ದರೆ…‘, `ಹದಿನೈದು ವರ್ಷಗಟ್ಟಲೆ ನೀನು ನನ್ನೋಳೆ ಎಂದು ನಂಬಿಸಿದವನ ಮದ್ವೆ ದಿಬ್ಬಣ ತನ್ನ ಮನಿಯಂಗಳ ಹಾದು ಹೋಗುವಾಗ ಬಚ್ಚಲಿಗೆ ಹೋಗಿ ಹಂಡೆ ನೀರನ್ನೆಲ್ಲ ದಪದಪಾ ಸುರಿದುಕೊಂಡು ಹೊಸ ಹುಟ್ಟು ಹುಟ್ಟಿ ಬಂದವಳಂತೆ ಇದ್ದುಬಿಟ್ಟ ಅಂಜನಕ್ಕ‘.

ಈ ಕಥಾಸಂಕಲನ ಒಬ್ಬ ಪ್ರತಿಭಾವಂತ ಹೊಸಕತೆಗಾರರನ್ನು ಪರಿಚಯಿಸುತ್ತದೆ ಎಂದು ಹೇಳಬಹುದು.

ಗಿರೀಶ್ ವಿ. ವಾಘ್

ಶೀರ್ಷಿಕೆ: ಊರ ಒಳಗಣ ಬಯಲು ಲೇಖಕರು: ಡಾ| ವಿನಯಾ ಪ್ರಕಾಶಕರು: ಛಂದ ಪುಸ್ತಕ ಪುಟಗಳು:82 ಬೆಲೆ:ರೂ.40/-

ಕೃಪೆ : ಕನ್ನಡ ಪ್ರಭ

ಹೇ ರಾಮ್!!!

mommagalige-gandhi-hithavachana

ವಿಶ್ವ ದಿಗಂತದಲ್ಲಿ ಗಾಂಧೀಜಿಯದು ಎದ್ದು ಕಾಣಿಸುವಂತಹ ವ್ಯಕ್ತಿತ್ವ. ಈ ವ್ಯಕ್ತಿತ್ವ ಬರೀ ಪಾಂಡಿತ್ಯದಿಂದ ಬಂದುದಲ್ಲ; ಸತ್ಯ ಮತ್ತು ಅಹಿಂಸೆಯ ಅನುಷ್ಟಾನದಿಂದ ಬಂದದ್ದು.

ಅವರದು ವಿಶ್ವಮಾನ ದೃಷ್ಟಿ. ಇಡೀ ಮನುಕುಲ ಒಂದು ಪರಿವಾರ. ಅದರ ವಿಕಾಸ, ಅದರ ಉಳಿವಿಗಾಗಿ ಅವರು ಪ್ರಯತ್ನಸಿದರು. ಯಾವುದೇ ಜಾತಿ, ಯಾವುದೇ ಪಂಥ, ಯಾವುದೇ ಪೀಠಕ್ಕೆ ಅವರು ತಮ್ಮನ್ನು ಕಟ್ಟಿ ಹಾಕಿಕೊಳ್ಳಲಿಲ್ಲ.

ಅವರದು ತೆರೆದ ಹೃದಯ, ತೆರೆದ ಮನಸ್ಸು. ಯಾವುದೇ ಸಮಾಜ, ರಾಷ್ಟ್ರ ವಿಕಾಸ ಹೊಂದಬೇಕಾದರೆ ಮಾನವೀಯ ಗುಣ ಅತಿ ಮುಖ್ಯ. ಈ ಗುಣದ ಮೆಟ್ಟಿಲು ಏರಿಯೇ ಆತ ವಿಶ್ವಮಾನವನಾಗಬೇಕು.

ಸತ್ಯ-ಅಹಿಂಸೆಯ ಹೊರತಾಗಿ ಮಾನವ ಮಾನವೀಯನೆನಿಸಿಕೊಳ್ಳಲಾರ. ಈ ಮೌಲ್ಯಗಳು ಆತನ ಜೀವನದ ಉಸಿರಾಗಬೇಕು. ಅದನ್ನೆ ನಂಬಿ ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಮನುಕುಲವನ್ನು ಎತ್ತಿ ಹಿಡಿಯಲು ತಮ್ಮನ್ನು ಸಮರ್ಪಿಸಿಕೊಂಡರು.

ಅವರ ಮೌಲ್ಯಾಧಾರಿತ ಜೀವನವನ್ನು ಗುರುತಿಸಲು ನಾವು ಕಷ್ಟಪಡಬೇಕಾಗಿಲ್ಲ. ಅವರ ಜೀವನದ ಕೊನೆಯ ದಿನಗಳು ನಮ್ಮ ಮುಂದೆ ಕನ್ನಡಿ ಹಿಡಿದಂತಿದೆ. ಭಾರತ ಇಬ್ಭಾಗವಾಗುವ ಸಂದರ್ಭ, ಅದರ ದೃಶ್ಯ, ಅತ್ಯಂತ ಭಯಾನಕ. ಮಹಾಭಾರತದಲ್ಲಿ ಬರುವ ಸ್ಮಶಾನ ಪರ್ವದಂತಹದೇ ದೃಶ್ಯ!

ನೌಖಾಲಿ, ಬಿಹಾರ, ಪಂಜಾಬ, ಸಿಂಧ್; ಇಲ್ಲೆಲ್ಲಾ ನಡೆದದು ನರ ಸಂಹಾರದ ಭೀಕರ-ರೌದ್ರವ ತಾಂಡವ ನೃತ್ಯ. ಇಂತಹ ಬೆಂಕಿ ಜ್ವಾಲೆಯಲ್ಲಿ ಗಾಂಧೀಜಿ ಸತ್ಯ-ಅಹಿಂಸೆಯ ಮೌಲ್ಯಗಳನ್ನಾಧರಿಸಿ ಸಂಚರಿಸಿದರು. ಅವರ ಒಂದೊಂದು ಹೆಜ್ಜೆ ಈ ಮೌಲ್ಯಗಳನ್ನು ಪ್ರತಿಧ್ವನಿಸುತ್ತಿತ್ತು.

ಹಿಂಸೆಯ ಬಿರುಗಾಳಿಯ ಪ್ರಚಂಡ ಶಕ್ತಿಯನ್ನೆದುರಿಸಲು ಗಾಂಧೀಜಿ ತಮ್ಮ ಮೊಮ್ಮಗಳು ಮನುಗಾಂಧಿಯನ್ನು ಜೊತೆ ಮಾಡಿಕೊಂಡು ಪ್ರವಾಸ ಮಾಡಿದರು. ಆಗ ಅವರು ಆಕೆಗೆ ಕಲಿಸಿದ ಪಾಠ ಮಾನವೀಯ ವಿಕಾಸದ ಮೂಲ ಶಿಕ್ಷಣಕ್ಕೆ ನಾಂದಿ ಎಂದೇ ಹೇಳಬೇಕಾದೀತು. ಈ ಮಾತು ಕೇವಲ ಮನುಗಾಂಧಿಗೆ ಮಾತ್ರ ಅನ್ವಯವಾಗುವಂಥದ್ದಲ್ಲ. ವಿಶ್ವದಂಗಳದಲ್ಲಿ ಬದುಕಿ ಬಾಳುತ್ತಿರುವ ಎಲ್ಲರಿಗೂ ದಾರಿ ದೀಪ; ಅದರಲ್ಲೂ ಭಾರತೀಯರಿಗೆ ಭಾರತೀಯತೆಯ ತಿರುಳನ್ನೇ ಎತ್ತಿ ತೋರಿಸಿದ್ದಾರೆ ಅವರು ಈ ಸಂಚಾರದಲ್ಲಿ.

ಚಿಕ್ಕ-ಚಿಕ್ಕ ದೋಷಗಳು ವ್ಯಕ್ತಿಯ ವಿಕಾಸಕ್ಕೆ ಹೇಗೆ ಅಡ್ಡಿಯಾಗಬಲ್ಲವು, ಇಂತಹ ನಡತೆಯಿಂದ ಸಮಾಜ, ರಾಷ್ಟ್ರ ಹೇಗೆ ಕುಸಿದು ನೆಲ ಕಚ್ಚಬಹುದು ಎನ್ನುವುದನ್ನು ಅವರು ಮೊಮ್ಮಗಳಿಗೆ ತಿಳಿಯಾದ ಭಾಷೆಯಲ್ಲಿ ಹಿತವಚನ ನೀಡಿದ್ದಾರೆ. ಈ ಹಿತವಚನಗಳ ಸಂಗ್ರಹವೇ `ಮೊಮ್ಮಗಳಿಗೆ ಗಾಂಧೀಜಿಯ ಹಿತವಚನಗ್ರಂಥ.

ಮನುಗಾಂಧಿ ಬರೆದ ಹಲವಾರು ಗ್ರಂಥಗಳಿಂದ ಆರಿಸಿ ಸಂಗ್ರಹಿಸಿದ ವಚನಸಾರ ಇದು. ಈ ಗ್ರಂಥ ಕನ್ನಡದ ಓದುಗರಿಗೆ ದಿಕ್ಸೂಚಿಯಾಗಿ, ದಾರಿ ದೀಪವಾಗಿ, ಕೈ ಹಿಡಿದು ನಡೆಸುವಂತಾದರೆ ಈ ಗ್ರಂಥ ಸಾರ್ಥಕ.

ಪಿ. ವೆಂಕೋಬರಾವ್ (ಮುನ್ನುಡಿಯಿಂದ)

ಶೀರ್ಷಿಕೆ: ಮೊಮ್ಮಗಳಿಗೆ ಗಾಂಧೀಜಿಯ ಹಿತವಚನ ಲೇಖಕರು: ಪಿ.ವೆಂಕೋಬರಾವ್ ಪ್ರಕಾಶಕರು: ಬಿಲ್ವಶ್ರೀ ಪ್ರಕಾಶನ ಪುಟಗಳು:230 ಬೆಲೆ:ರೂ.30/-

ವಸ್ತುನಿಷ್ಟ ವ್ಯಕ್ತಿ ಚಿತ್ರಣ.

p-lankeshಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯವನ್ನು ತಮ್ಮ ವೈವಿಧ್ಯಮಯ ಬರವಣಿಗೆಗಳಿಂದ ಶ್ರೀಮಂತಗೊಳಿಸಿದವರಲ್ಲಿ ಪಿ.ಲಂಕೇಶ್ ಅವರೂ ಒಬ್ಬರು. ಭಾರತದ ಸಾಹಿತ್ಯ ಅಕಾಡೆಮಿಯು `ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆಯಲ್ಲಿ ಲಂಕೇಶ್ ಅವರ ಸಮಗ್ರ ವ್ಯಕ್ತಿತ್ವ ಹಾಗೂ ಬರವಣಿಗೆಯನ್ನು ಕುರಿತು ಪ್ರಕಟಿಸಿದ ಪರಿಚಯ ರೂಪದ ಪುಸ್ತಕ ಇದು. ಲಂಕೇಶ್ ಅವರು ಅಧ್ಯಾಪಕರಾಗಿ, ಕವಿಯಾಗಿ, ನಾಟಕಕಾರರಾಗಿ, ವಿಮರ್ಶಕರಾಗಿ, ಪತ್ರಕರ್ತರಾಗಿ ಕ್ರಿಯಾಶೀಲರಾಗಿದ್ದ ಸುದೀರ್ಘ ಅವಧಿಯಲ್ಲಿ ಅವರ ಒಡನಾಡಿಯಾಗಿದ್ದ ಕೆ.ಮರುಳಸಿದ್ದಪ್ಪ ಅವರು ಈ ಕೃತಿಯನ್ನು ಬರೆದಿದ್ದಾರೆ. ಅತಿ ಪರಿಚಯದಿಂದ ವಸ್ತುನಿಷ್ಠತೆಗೆ ಭಂಗ ಬರಬಹುದೆಂಬ ಆಕ್ಷೇಪಕ್ಕೆ ಆಸ್ಪದವೇ ಇಲ್ಲದಂತೆ ಅವರು ಲಂಕೇಶ್ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ಗುಣಗಳನ್ನು ಮಾತ್ರವಲ್ಲದೆ ದೋಷಗಳನ್ನೂ ನಿರ್ದಾಕ್ಷಿಣ್ಯವಾಗಿ ನಮೂದಿಸಿದ್ದಾರೆ. ಆದ್ದರಿಂದಲೇ ಇದು ಲಂಕೇಶ್ ಅವರ ವ್ಯಕ್ತಿತ್ವವನ್ನು ಸರಿಯಾಗಿ ಬಿಚ್ಚಿಡುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಲಂಕೇಶ್ ಅವರ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸೂಕ್ತವಾದ ಪೂರಕ ಹಿನ್ನೆಲೆಯನ್ನು ನೀಡುತ್ತದೆ.

ಪಾಳ್ಯದ ಲಂಕೇಶ್ (1935-2000), ತಮ್ಮ ಸಾಹಿತ್ಯ ಬರಹಗಳಿಂದ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರವನ್ನು ಸಮೃದ್ಧಗೊಳಿಸಿದ ಹಲವು ಪ್ರತಿಭಾವಂತರನ್ನು ನೀಡಿದ ಶಿವಮೊಗ್ಗ ಜಿಲ್ಲೆಯವರು. ಇಂಗ್ಲೀಷ್ ಉಪನ್ಯಾಸಕರಾಗಿ ವೃತ್ತಿಯನ್ನು ಆರಂಭಿಸಿದ್ದರೂ ಕವನ, ಕತೆ, ನಾಟಕ, ಕಾದಂಬರಿ, ವಿಮರ್ಶೆ, ಸಂಪಾದಿತ ಕೃತಿಗಳ ಮೂಲಕ ಸಾಹಿತ್ಯ ವಲಯಕ್ಕೆ ಪರಿಚಿತರಾದರು. ಬರವಣಿಗೆಗೆ ಮಾತ್ರ ಸೀಮಿತವಾಗದೆ ಚಲನಚಿತ್ರ ನಿರ್ದೇಶನಕ್ಕೂ ಕೈ ಹಾಕಿ ಯಶಸ್ವಿಯಾದರು. ಉಪನ್ಯಾಸ ವೃತ್ತಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸ್ವತಂತ್ರವಾಗಿ ತಮ್ಮದೇ ಹೆಸರಿನ ವಾರಪತ್ರಿಕೆಯನ್ನು ಹೊರತಂದು ಅದರಲ್ಲೂ ತಮ್ಮ ಛಾಪನ್ನು ಮೂಡಿಸಿದರು. ಮಹತ್ವದ ಸೃಜನಶೀಲ ಬರಹಗಾರ ಎಂಬಷ್ಟಕ್ಕೆ ಲಂಕೇಶರ ವ್ಯಕ್ತಿತ್ವದ ಚಿತ್ರಣ ಪೂರ್ಣಗೊಳ್ಳುವುದಿಲ್ಲ; ಅವರು ತಮ್ಮ ಪತ್ರಿಕೆಯ ಮೂಲಕ ಒಂದು ಜೀವಂತ ಸಂಸ್ಕೃತಿ ನಿರ್ಮಾಣಕ್ಕಾಗಿ ದುಡಿದವರು. ಕಳೆದ ಶತಮಾನದ ಎಂಬತ್ತರ ದಶಕದಿಂದ ಕನ್ನಡ ನಾಡಿನ ವೈಚಾರಿಕತೆ, ಸಾಮಾಜಿಕ ಬದ್ಧತೆ ಮತ್ತು ಪ್ರಗತಿಪರ ರಾಜಕೀಯ ಚಿಂತನೆಯ ಹಿಂದೆ ಲಂಕೇಶರ ಕೊಡುಗೆ ನಿರ್ವಿವಾದ – ಎಂಬುದನ್ನು ಅವರ ಬರವಣಿಗೆಗಳನ್ನೇ ಆಧರಿಸಿ ಇಲ್ಲಿ ಪ್ರತಿಪಾದಿಸಲಾಗಿದೆ. ಹತ್ತು ಅಧ್ಯಾಯಗಳಿಗೆ ವಿಸ್ತರಿಸಿದ ಈ ಕೃತಿಯಲ್ಲಿ ಲಂಕೇಶರ ವರ್ಣಮಯ ವ್ಯಕ್ತಿತ್ವ ಹಾಗೂ ಬಹುಮುಖ ಪ್ರತಿಭೆಯ ಸಮಗ್ರ ಚಿತ್ರಣವನ್ನು ಮರುಳಸಿದ್ದಪ್ಪನವರು ಸಮರ್ಪಕವಾಗಿ ಕಟ್ಟಿಕೊಟ್ಟಿದ್ದಾರೆ.

ಶೀರ್ಷಿಕೆ: ಪಿ.ಲಂಕೇಶ್ ಲೇಖಕರು: ಕೆ. ಮರುಳಸಿದ್ದಪ್ಪ ಪ್ರಕಾಶಕರು: ಸಾಹಿತ್ಯ ಅಕಾಡಮಿ, ನವದೆಹಲಿ ಪುಟಗಳು:178 ಬೆಲೆ:ರೂ.40/-

ಕೃಪೆ : ಪ್ರಜಾವಾಣಿ

ಶಿಕ್ಷಣದ ಮೂಲಕ ಬದಲಾವಣೆ

leriyonka

ಹೊಸ ಪೀಳಿಗೆಯಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳ ಶಿಕ್ಷಕ ವೃತ್ತಿಗೆ ಹೊರತಾದ ವಿಭಿನ್ನ ಕ್ಷೇತ್ರಗಳಲ್ಲಿದ್ದು ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡಿರುವ ಯುವಕರ ಬರವಣಿಗೆಗಳನ್ನು ಐದು ವರ್ಷಗಳಿಂದ ಪ್ರಕಟಿಸುತ್ತಿರುವ ಛಂದ ಪುಸ್ತಕ ಹೊರತಂದ ಕೃತಿ ಇದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಹುದ್ದೆಯಲ್ಲಿದ್ದು ಸದ್ಯ ಪೂರ್ವ ಆಫ್ರಿಕಾದ ತಾಂಜಾನಿಯದಲ್ಲಿ ವಾಸವಿರುವ ಪ್ರಶಾಂತ್ ಬೀರೂರು ಚಿಕ್ಕಣ್ಣ ದೇವರು (ಪ್ರಶಾಂತ್ ಬೀಚಿ) ಅವರು ಈ ಕೃತಿಯನ್ನು ಅನುವಾದಿಸಿದ್ದಾರೆ. ಮೂಲ ಲೇಖಕ ಹೆನ್ರಿ ಆರ್. ಓಲೆ ಕುಲೆಟ್ ಕೀನ್ಯಾ ದೇಶದ ಜನಪ್ರಿಯ ಕಾದಂಬರಿಕಾರ. ಆಫ್ರಿಕಾದ ಬುಡಕಟ್ಟುಗಳಲ್ಲಿ ಒಂದಾದ ಮಾಸಯಿ ಬುಡಕಟ್ಟಿನ ಬಾಲಕನೊಬ್ಬ ಶಾಲಾ ಶಿಕ್ಷಣ ಪಡೆಯಲು ನಗರಕ್ಕೆ ಹೋಗುವ ಮತ್ತು ನಗರದಲ್ಲಿ ಕೆಲವು ವರ್ಷ ಪಡೆಯುವ ಅನುಭವಗಳನ್ನು ಈ ಕಾದಂಬರಿ ಒಳಗೊಂಡಿದೆ.

ಶಿಕ್ಷಣವೆಂಬ ಪ್ರಪಂಚಕ್ಕೆ ಪ್ರವೇಶವೇ ಇಲ್ಲದ ತಳವರ್ಗದ ನೂರಾರು ಸಮುದಾಯಗಳು ಇತ್ತೀಚಿನವರೆಗೂ ಭಾರತದಲ್ಲಿ ಇದ್ದ ಹಿನ್ನೆಲೆಯಲ್ಲಿ ಆಫ್ರಿಕದ ಬುಡಕಟ್ಟಿನ ಈ ಕಥಾನಕ ಕನ್ನಡ ಓದುಗರಿಗೆ ಪ್ರಸ್ತುತವೆನಿಸುತ್ತದೆ. ಹೆನ್ರಿ ಕುಲೆಟ್ ಅವರ ಮೊದಲ ಕಾದಂಬರಿ `ಈಸ್ ಇಟ್ ಪಾಸಿಬಲ್ದ (1971) ಅನುವಾದವಿದು. ಇದು ಯೂರೋಪಿನ ಆಧುನಿಕತೆಯ ಎದುರು ಆಫ್ರಿಕಾದ ಸ್ಥಳೀಯ ಸಮುದಾಯಗಳು ಶಿಕ್ಷಣದ ಮೂಲಕ ಮುಖಾಮುಖಿ ಆದಾಗ ಉಂಟಾಗುವ ಸಮಸ್ತ ತಲ್ಲಣದ ಚಿತ್ರಣವೆಂದು ಬೆನ್ನುಡಿಯಲ್ಲಿ ವಿಮರ್ಶಕ ರಹಮತ್ ತರೀಕೆರೆ ಬಣ್ಣಿಸಿದ್ದಾರೆ. ಶಿಕ್ಷಣದ ಮೂಲಕ ಹೊಸ ಪ್ರಪಂಚವೊಂದನ್ನು ಕಂಡುಕೊಳ್ಳುವ ಬೆರಗು ಕ್ರಮೇಣ ಜಾಗೃತಿಯನ್ನು ಮೂಡಿಸಿ ಸ್ವತಂತ್ರ ಅಸ್ತಿತ್ವಕ್ಕಾಗಿ ತಹತಹಿಸುವ ಸ್ಥಿತಿಯನ್ನು ಮುಟ್ಟಿಸುವುದರ ಪರಿವರ್ತನೆಯ ಚಿತ್ರಣವೂ ಇಲ್ಲಿದೆ.

ದನ ಕರುಗಳ ಪೋಷಣೆಯ ಮೂಲಕವೇ ಬದುಕನ್ನು ರೂಪಿಸಿಕೊಂಡು ತಮ್ಮಷ್ಟಕ್ಕೆ ಸಂತೃಪ್ತಿಯಿಂದಿದ್ದ ಬುಡಕಟ್ಟು ಸಮುದಾಯಕ್ಕೆ ಆಧುನಿಕ ಶಿಕ್ಷಣ ಕೊಡುವ ಮೂಲಕ ಆಧುನಿಕತೆಯನ್ನು ಪರಿಚಯಿಸುವ ಪ್ರಯತ್ನ ಅವರಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನೂ, ತಮ್ಮ ಮೇಲೆ ಹೇರಲಾಗಿರುವ ಹೊರಗಿನವರ ಆಳ್ವಿಕೆಯನ್ನು ಪ್ರತಿಭಟಿಸುವ ಧೈರ್ಯವನ್ನೂ ನೀಡುವುದು ಭಾರತದ ಮಟ್ಟಿಗೂ ನಿಜವಾದ ಸಂಗತಿ. ಲೇರಿಯೋಂಕನೆಂಬ ಮಾಸುಯಿ ಬುಡಕಟ್ಟಿನ ಹುಡುಗನ ಆತ್ಮಕತೆಯಂತೆ ಸಾಗುವ ಈ ಬದುಕಿನ ಪಯಣ ಕೀನ್ಯಾ, ನೈರೋಬಿಯಂಥ ನಗರಗಳವರೆಗೆ, ಬಹುಕಾಲದಿಂದ ಪರಕೀಯರ ಆಡಳಿತದಲ್ಲಿದ್ದವರು ತಮ್ಮನ್ನು ತಾವೇ ನೋಡಿಕೊಳ್ಳುವ ಸಾಮರ್ಥ್ಯ ಪಡೆದಿರುವುದಾಗಿ ಹೇಳಿಕೊಳ್ಳುವವರೆಗೆ ಮುಂದುವರೆದಿದೆ. ಕಾಡಿನ ಹುಡುಗನ ಓದಿನ ಹಾದಿಯ ಮೂಲಕ ಒಂದು ಪ್ರಾದೇಶಿಕ ಸಮುದಾಯ ಪರಕೀಯರ ಆಡಳಿತ ಎದುರು ಸ್ವಾತಂತ್ರ್ಯಕ್ಕಾಗಿ ಎಚ್ಚೆತ್ತುಕೊಳ್ಳುವ ಪರಿಯನ್ನೂ ಇಲ್ಲಿ ಗಮನಿಸಬಹುದಾಗಿದೆ.

ರಸ್ತೆ ಸೌಲಭ್ಯ, ವಾಹನ ಸಂಚಾರಗಳ ಅರಿವು ಇರುವವರಿಗೆ ಇಡೀ ದಿನ ಮತ್ತು ರಾತ್ರಿಯೆಲ್ಲ ನಡೆಯುತ್ತಲೇ ಹಿಂದೆಂದೂ ನೋಡದ ಊರನ್ನು ಪತ್ತೆ ಮಾಡುವ ಲೇರಿಯೋಂಕನ ಸಾಹಸ ನಮ್ಮ ಜಾನಪದ ಕಥೆಗಳ ಸಾಹಸಿ ರಾಜಕುಮಾರರ ಕಥೆಗಳನ್ನು ನೆನಪಿಸಬಲ್ಲದು. ಒಂದು ಕೈಯಲ್ಲಿ ಭರ್ಜಿಯನ್ನೂ ಇನ್ನೊಂದು ಕೈಯಲ್ಲಿ ಪುಸ್ತಕವನ್ನೂ ಹಿಡಿದುಕೊಂಡು ಸಮತೋಲನ ಕಾಯ್ದುಕೊಳ್ಳುವುದು ಸಾಧ್ಯ ಎಂಬುದು ಲೇರಿಯೋಂಕ ಮತ್ತು ಲಿವಿಂಗ್ಸ್ಟೋನ್ ಪಾತ್ರಗಳ ಮೂಲಕ ಪ್ರತಿಪಾದಿಸಲಾಗಿದ್ದರೂ ಈ ಕಥಾನಕ ಅದಕ್ಕಿಂತಲೂ ಮುಂದೆ ಸಾಗಿ ತಳ ಸಮುದಾಯ ಶಿಕ್ಷಣದ ಮೂಲಕ ಬದಲಾವಣೆಗೆ ಸ್ಪಂದಿಸಲು ಸಿದ್ಧವಾಗುವ ಪರಿಯನ್ನು ಬಿಚ್ಚಿಡುತ್ತದೆ.

ವಿಷದ ಹಾವಿನಿಂದ ಕಚ್ಚಿಸಿಕೊಂಡು ಗಿಡಮೂಲಿಕೆ ಮದ್ದಿನಿಂದ ಗುಣವಾಗುವ, ಹೆಬ್ಬಾವಿನ ಹೊಟ್ಟೆ ಸೇರುವ ಸ್ಥಿತಿಯಲ್ಲಿದ್ದ ವ್ಯಕ್ತಿ ಬಚಾವಾಗಿ ಆಸ್ಪತ್ರೆ ಸೇರಿಕೊಳ್ಳುವಂತಹ ರೋಚಕ ಸನ್ನಿವೇಶಗಳೂ ಇಲ್ಲಿವೆ. ಮಾಸುಯಿ ಬುಡಕಟ್ಟು ಮಾತ್ರವಲ್ಲದೆ ಆಫ್ರಿಕದ ಮೂಲನಿವಾಸಿಗಳ ಆಚರಣೆ, ನಂಬಿಕೆ, ನಡವಳಿಕೆ, ಸಂಪ್ರದಾಯ, ಕುಟುಂಬ ವ್ಯವಸ್ಥೆ, ಜೀವನ ವಿಧಾನದ ಬಗೆಗೂ ಇಲ್ಲಿ ವಿವರಗಳಿವೆ. ಆಫ್ರಿಕಾದ ಕಾಡುಗಳಲ್ಲಿ ನಡೆದಿರುವ ಈ ಕಥಾನಕ ಅನೇಕ ವಿವರಗಳಲ್ಲಿ ಮಲೆನಾಡಿನ ಚಿತ್ರಗಳನ್ನೂ ಕಟ್ಟಿಕೊಡುತ್ತದೆ.

ಲಕ್ಷ್ಮಣ ಕೊಡಸೆ

ಶೀರ್ಷಿಕೆ: ಲೇರಿಯೋಂಕ ಲೇಖಕರು: ಮೂಲ: ಕೀನ್ಯಾ ಕಾದಂಬರಿಕಾರ ಹೆನ್ರಿ ಆರ್. ಓಲೆ ಕುಲೆಟ್ ಕನ್ನಡಕ್ಕೆ: ಪ್ರಶಾಂತ್ ಬೀಚಿ ಪ್ರಕಾಶಕರು: ಛಂದ ಪುಸ್ತಕ ಪುಟಗಳು:250 ಬೆಲೆ:ರೂ.100/-

ಕೃಪೆ : ಪ್ರಜಾವಾಣಿ

ಸ್ವಾತಂತ್ರ್ಯ ಹೋರಾಟಕ್ಕೆ ಇಳಿದ ಹಲವು ವಾಹಿನಿಗಳ ಸಮ್ಮಿಳಿತ ಪ್ರವಾಹ.

swathanthrya-gangeya-saaviraaru-toregalu

ಒಂದೊಂದು ಯುಗವೂ, ಒಂದೊಂದು ರಾಜಕೀಯ ಶಕ್ತಿಯೂ ತನ್ನ ಇತಿಹಾಸವನ್ನು ಮತ್ತು ತನಗೆ ಸಂಬಂಧ ಪಟ್ಟವರ ಇತಿಹಾಸವನ್ನು ತನ್ನ ರಾಜಕೀಯ ಆಶೋತ್ತರಗಳು, ಉದ್ದೇಶಗಳ ದೃಷ್ಟಿಯಿಂದ ಮರುಪರಿಶೀಲನೆ ಮಾಡುತ್ತದೆ. ಇಂತಹ ಮರುಪರಿಶೀಲನೆ ಮಾನವ ಪ್ರವೃತ್ತಿಗಳಲ್ಲಿ ಒಂದು. ಹಿಂದೆ ಬ್ರಿಟೀಷರು ಭಾರತದ ಇತಿಹಾಸದ ಅಧ್ಯಯನ ಮಾಡಿದುದು ಈ ದೃಷ್ಟಿಯಿಂದಲೇ. ಭಾರತವನ್ನೆಲ್ಲ ತಮ್ಮ ಸಾರ್ವಭೌಮತ್ವಕ್ಕೆ ಒಳಪಡಿಸಿಕೊಳ್ಳುವ ಉದ್ದೇಶದಿಂದ, ಆ ಉದ್ದೇಶಕ್ಕೆ ಅನುಕೂಲವಾಗುವಂತೆ ಅವರು ನಮ್ಮ ಇತಿಹಾಸವನ್ನು ವ್ಯಾಖ್ಯಾನಿಸಿದರು. ಅದರಿಂದ ಅವರು ಕಂಡುದು ಹಿಂದು, ಮುಸಲ್ಮಾನ ಯುಗಗಳು. ಬ್ರಿಟೀಷರಿಗಿಂತ ಮುಂಚೆ ಭಾರತಕ್ಕೆ ದಾಳಿ ಇಟ್ಟ ಆಕ್ರಮಣಕಾರರು ಇಲ್ಲೇ ನೆಲೆಸಿ ಈ ದೇಶದ ಸಮಗ್ರ ಭಾಗವೇ ಆಗಿಹೋದರು. ಅವರ ಮತ, ಆಚಾರ ವಿಚಾರಗಳೂ ಭಾರತದ ಪ್ರವಾಹದಲ್ಲೆ ಸಮ್ಮಿಳಿತವಾಗಿ ಅವರ ಕೊಡುಗೆ ಈ ದೇಶದ ಸಂಪತ್ತಿನಲ್ಲಿ ಸೇರಿಹೋಯಿತು. ಬ್ರಿಟೀಷರಂತೆ ನಮ್ಮ ಸಂಪನ್ಮೂಲವನ್ನು ದೋಚಿ ತಮ್ಮ ದೇಶಕ್ಕೆ ಒಯ್ಯದ ಈ ಆಕ್ರಮಣಕಾರರ ವಿರುದ್ಧ ನಡೆದ ಹೊರಾಟಗಳಿಗೆ ಮತೀಯ ಬಣ್ಣ ಹಚ್ಚಿ, ಆಂತರಿಕ ನೆಮ್ಮದಿಯನ್ನು ಕಲಕಿ ಹಿಂದೂ-ಮುಸಲ್ಮಾನರು ಪರಸ್ಪರ ಸಂದೇಹಿಸುವಂತೆ ಮಾಡುವ ಬ್ರಿಟೀಷರ ಜಾಣ ರಾಜನೀತಿ ಹಿಂದಿನ ಇತಿಹಾಸದ ಬರವಣಿಗೆಯಲ್ಲಿ ಪ್ರತಿಫಲನವಾಗಿದೆ. ಮತೀಯ ಭೂತಗಾಜಿನ ಮೂಲಕ ಇಲ್ಲವೇ ಜಾತೀಯ ಮಸೂರದ ಮೂಲಕ ನೋಡುವ ಜಾಡನ್ನೇ ಇಂದಿನ ಹಲವು ಇತಿಹಾಸಕಾರರು ಮುಂದುವರೆಸುತ್ತಿರುವುದು ದೇಶದ ಸೆಕ್ಯುಲರಿಸಂ ಮತ್ತು ಸಮಗ್ರತೆಗೆ ಪೂರಕವಲ್ಲ. ಬದಲಾಗಿ ಬ್ರಿಟೀಷರ ಸ್ವಾರ್ಥಪರತೆಯ ಬಲೆಯಲ್ಲಿ ಸಿಲುಕದ ನಮ್ಮ ಇತಿಹಾಸದ ಓದು ನಮಗೀಗ ಬೇಕಾಗಿದೆ. ಈ ನಿಟ್ಟಿನಲ್ಲಿ ಎನ್.ಪಿ. ಶಂಕರನಾರಾಯಣರಾವ್ ಅವರ `ಸ್ವಾತಂತ್ರ್ಯ ಗಂಗೆಯ ಸಾವಿರಾರು ತೊರೆಗಳು – ರಾಷ್ಟ್ರೀಯ ಚಳುವಳಿಯ ಸಮಗ್ರ ಪರಿಚಯ’ ಪುಸ್ತಕ ಅಮೋಘವಾಗಿದೆ.

ಈ ಪುಸ್ತಕವನ್ನು ಕುರಿತಂತೆ ವ್ಯಾಸರಾಯ ಬಲ್ಲಾಳ, ಎಸ್.ವಿ.ದೇಶಿಕಾಚಾರ್, ಡಾ.ಜಿ.ರಾಮಕೃಷ್ಣ, ಎಚ್.ಎಸ್.ದೊರೆಸ್ವಾಮಿ, ಎಲ್. ಶ್ರೀಕಂಠಯ್ಯ ಮುಂತಾದ ಗಣ್ಯರ ಅಭಿಪ್ರಾಯಗಳು ಹೀಗಿವೆ.

ಭಾರತೀಯವೆನಿಸುವ ರಾಷ್ಟ್ರೀಯ ಅಸ್ಮಿತೆಗೆ ಗಂಗೆ ಒಂದು ಸಂಕೇತ. . . . ಭಾರತದ ಸ್ವಾತಂತ್ರ್ಯಗಂಗೆಯ ವೈಶಾಲ್ಯ, ಜಲಾಧಿಕ್ಯ, ಸ್ವಚ್ಛತೆಗೆ ಕೂಡುನದಿಗಳ ಕೊಡುಗೆ ಇವುಗಳ ಸಮೀಕ್ಷಣೆ ಇವೇ ಈ ಗ್ರಂಥದ ವಸ್ತು. ಪೂರ್ವರಂಗವಾಗಿ ಸ್ವಾತಂತ್ರ್ಯವನ್ನು ಹೇಗೆ ಕಳೆದುಕೊಂಡೆವು ಎಂಬುದೂ ವಿಮರ್ಶೆಗೆ ಒಳಗಾಗಿದೆ. . . . ವಸಾಹತುಶಾಹಿ ಆಕ್ರಮಣದ ಪರಿಣಾಮವಾಗಿ ಭಾರತದ ಆರ್ಥಿಕ ಬೆನ್ನುಲುಬು ಹೇಗೆ ಜರ್ಝರಿತಗೊಂಡಿತೆಂದು ತಿಳಿಯದೆ ಇಲ್ಲಿಯ ಸ್ವಾತಂತ್ರ್ಯ ಹೋರಾಟವನ್ನು ವ್ಯಾಖ್ಯಾನಿಸುವುದು ಅಸಮರ್ಪಕವಾದ ವಿಧಾನ . . . . ಹುಟ್ಟಿಕೊಂಡ ಚಳುವಳಿಗಳ ವಿಶ್ಲೇಷಣೆಯನ್ನು ಪದರ ಪದರವಾಗಿ ಲೇಖಕರು ಬಿಡಿಸಿದ್ದಾರೆ. . . ನಮ್ಮ ದೇಶದ ಮಹಾರೋಗವಾದ ಜಾತೀಯತೆ, ಎಂತೆಂತಹ ಸಮಸ್ಯೆಗಳನ್ನು ಹುಟ್ಟಿಹಾಕಿದವು . . . . . . ಸ್ವಾತಂತ್ರ್ಯ ಪಡೆಯಬೇಕೆಂಬ ಉತ್ಕಟ ಆಸೆ, ಛಲಗಳು ಮಾತ್ರ ಚೂರು ಚೂರು ಭಾರತದಲ್ಲೂ ಪ್ರಜ್ವಲಿಸಿದವು ತೊರೆಗಳು ಸೇರಿ ಮಹಾನದಿಯಾಯಿತು. . . . . . ಈ ತರಹ ವಿಮರ್ಶೆ ಮತ್ತು ವ್ಯಾಖ್ಯಾನಗಳಿಂದ ಈ ಪುಸ್ತಕ ಬರೀ ಚರಿತ್ರೆಯಾಗದೆ, ಅದರ ಹಿಂದಿರುವ ಅಂಶಗಳನ್ನೂ ಅಳವಡಿಸಿಕೊಂಡಿರುವುದು ಸ್ವಾಗತಾರ್ಹ. . . . . ಎಲ್ಲೂ ಪೂರ್ವಾಗ್ರಹವಿಲ್ಲ, ಉದ್ವೇಗದ ಸೋಂಕಿಲ್ಲ, ಹಾಗಿದ್ದರೂ ತಣ್ಣಗೆ ತಟಸ್ಥವೆನಿಸದೆ ಬೆಚ್ಚಗೆ ಬಿಂಬಿಸುತ್ತದೆ. ಈ ಪುಸ್ತಕ ಇಂಥ ಬರವಣಿಗೆಗೆ ಒಂದು ಒಳ್ಳೆಯ ಮಾದರಿ. . . . . ಓದುತ್ತ ಹೋದಂತೆ ನನಗೆ ಮೆಚ್ಚಿಗೆಯಾದದ್ದು ಲೇಖಕರ ಸಮಗ್ರ ಭಾರತೀಯ ದೃಷ್ಟಿ . . . ಈ ಕೃತಿ ಕಳೆದ ಐನೂರು ವರ್ಷಗಳ ಭಾರತದ ಇತಿಹಾಸದ ಅಧ್ಯಯನದ ಆಕರ ಗ್ರಂಥವಾಗಿ ಉಳಿಯುತ್ತದೆ.

ಶೀರ್ಷಿಕೆ: ಸ್ವಾತಂತ್ರ್ಯ ಗಂಗೆಯ ಸಾವಿರಾರು ತೊರೆಗಳು – ರಾಷ್ಟ್ರೀಯ ಚಳುವಳಿಯ ಸಮಗ್ರ ಪರಿಚಯ          ಲೇಖಕರು: ಎನ್.ಪಿ. ಶಂಕರನಾರಾಯಣರಾವ್       ಪ್ರಕಾಶಕರು: ನವಕರ್ನಾಟಕ ಪ್ರಕಾಶನ            ಪುಟಗಳು: 36+564            ಬೆಲೆ:ರೂ. 80/-

ಭವಿಷ್ಯದಲ್ಲಿ ಹೆಣ್ಣಿಗೆ `ದ್ರೌಪದಿ’ಯ ಕಷ್ಟ ಬರದಿರಲಿ!!!

odala-thuditakke-kedu

`ವರದಕ್ಷಿಣೆ ಎಂಬುದು ಹುಟ್ಟದಿರುವ ಹೆಣ್ಣುಮಗುವಿಗೂ ಕಡುವೈರಿ‘. ಅತಿ ಹೆಚ್ಚು ಹೆಣ್ಣು ಭ್ರೂಣಹತ್ಯೆ ನಡೆಯುವ ಜಿಲ್ಲೆಗಳಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿರುವ ಮಂಡ್ಯ ಜಿಲ್ಲೆ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಕಂಡುಕೊಂಡ ಅಂಶವಿದು ಎಂದು ಪುಸ್ತಕದ ಮುನ್ನುಡಿಯಲ್ಲಿ ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆಯ ಡೋನಾ ಫರ್ನಾಂಡೀಸ್ ಹೇಳುತ್ತಾರೆ.

ಮಂಡ್ಯ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆಗಳಿಗೆ ಕಾರಣಗಳೇನು ಎಂಬುದನ್ನು ಕ್ಷೇತ್ರಕಾರ್ಯ ಆಧರಿಸಿದ ಅಧ್ಯಯನದಲ್ಲಿ ಕಂಡುಕೊಂಡ ಅಂಶಗಳನ್ನು ಈ ಕೃತಿ ವಿವರವಾಗಿ ದಾಖಲಿಸಿದೆ. `ಮಂಡ್ಯದ ಏಳು ತಾಲ್ಲೂಕುಗಳ ನೂರಾರು ಹಳ್ಳಿಗಳಲ್ಲಿ ಎಲ್ಲ ವಯೋಮಾನದ ಜನರೂ ಹೆಣ್ಣು ಭ್ರೂಣ ಹತ್ಯೆಗೆ ಕೊಡುವ ದೊಡ್ಡ ಕಾರಣವೆಂದರೆ ವರದಕ್ಷಿಣೆ. ತಮ್ಮ ಹೆಣ್ಣುಮಗಳ ಮದುವೆಗಾಗಿ ಸಾಲ ಮಾಡಿ ನರಳುವ, ಅದಕ್ಕಾಗಿ ಇದ್ದ ಹೊಲ ಗದ್ದೆ ಕಳೆದುಕೊಂಡು ನರಳುವ ಜನರು ಮಂಡ್ಯದ ಗ್ರಾಮೀಣ ಭಾಗದಲ್ಲಿ ಸರ್ವೇ ಸಾಮಾನ್ಯ‘ (ಪುಟ 90) ಎಂದು ಇಲ್ಲಿ ವಿಶ್ಲೇಷಿಸಲಾಗಿದೆ.

ಆಧುನಿಕ ಅಭಿವೃದ್ಧಿಯ ನೀತಿಗಳು ಆಳದಲ್ಲಿ ಜನಮಾನಸವನ್ನು ಕಂಗೆಡಿಸುವಂತಹದಾಗಿರುತ್ತದೆ. ಕೃಷ್ಣರಾಜಸಾಗರದ ನೀರಾವರಿಗೆ ಬೃಹತ್ ವಿಸ್ತರಣೆ ಸಿಕ್ಕಂತೆಲ್ಲಾ ಸಾಮಾಜಿಕ ಬದುಕಿನಲ್ಲಿ ತಮಗಿದ್ದ ಪಾತ್ರ ಮತ್ತು ಮನ್ನಣೆ ಎರಡನ್ನೂ ಮಂಡ್ಯದ ಮಹಿಳಾ ಸಂಕುಲ ಕಳೆದುಕೊಳ್ಳುತ್ತಾ ಬಂದಿದೆ ಎಂಬುದನ್ನು ಈ ಕೃತಿ ಗುರುತಿಸುತ್ತದೆ. ಇದೇ ರೀತಿ ಸರಿಸುಮಾರು ಸಂಪೂರ್ಣವಾಗಿ ನೀರಾವರಿಗೆ ಒಳಗಾಗಿರುವ ಸಕ್ಕರೆಯ ಕಣಜ ಬೆಳಗಾವಿ ಜಿಲ್ಲೆ ಅತಿ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಜಿಲ್ಲೆಯಾಗಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಆಸಕ್ತಿಯ ಸಂಗತಿ ಎಂದರೆ, 0-6 ವಯೋಮಾನದ ಗಂಡು-ಹೆಣ್ಣು ಮಕ್ಕಳ ಅನುಪಾತ ಹೆಚ್ಚಿರುವ ಜಿಲ್ಲೆಗಳಲ್ಲಿ ಕೊಡಗು ಮೊದಲ ಸ್ಥಾನ ಪಡೆದರೆ ಕೋಲಾರ ಎರಡನೆಯ ಸ್ಥಾನ ಪಡೆದಿದೆ. `ವೈದಿಕ ಧರ್ಮಕ್ಕೆ ಹೊರತಾದ ಕೊಡವ ಸಂಸ್ಕೃತಿಯನ್ನು ಹೊಂದಿರುವ ಕೊಡಗು ಹಾಗೂ ವೈದಿಕ ಧರ್ಮಕ್ಕೆ ಪಾರಂಪರಿಕವಾಗಿ ಸೆಡ್ಡು ಹೊಡೆದಿರುವ ಪರಿಶಿಷ್ಟ ಜಾತಿಗಳು ಹೆಚ್ಚಾಗಿರುವ ಕೋಲಾರದಲ್ಲಿ ಹೆಂಗಸರ ಸಂಖ್ಯೆ ಹೆಚ್ಚಾಗಿ ಇರುವುದು ಸಾಮಾಜಿಕವಾಗಿ ಅತಿ ಮಹತ್ವದ ವಿಚಾರವಾಗಿದೆ‘ (ಪುಟ 33). ಇದೇ ರೀತಿ ಹುಣಸೂರು ತಾಲ್ಲೂಕಿನಲ್ಲಿ 1000 ಗಂಡು ಮಕ್ಕಳಿಗೆ 1009 ಹೆಣ್ಣು ಮಕ್ಕಳಿರುವ ಸಕಾರಾತ್ಮಕ ಪ್ರವೃತ್ತಿಗೆ, ಈ ಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಆದಿವಾಸಿ ಜನಸಮುದಾಯದ ಕೊಡುಗೆ ಕಾರಣ ಎಂಬಂತಹ ಹೆಚ್ಚಿನ ಸಾಮಾಜಿಕ ಅಧ್ಯಯನಗಳಿಗೆ ಪ್ರೇರಕವಾಗಬಹುದಾದ ಅಂಶಗಳನ್ನೂ, ಈ ಕೃತಿಯಲ್ಲಿ ಚರ್ಚಿಸಲಾಗಿದೆ.

ಇಲ್ಲಿ ದಾಖಲಾಗಿರುವ ಮಂಡ್ಯ ಜಿಲ್ಲೆಯ ಏಳೂ ತಾಲ್ಲೂಕುಗಳಲ್ಲಿ ನಡೆದಿರುವ ಹೆಣ್ಣು ಭ್ರೂಣಹತ್ಯೆಗಳ ವೈವಿಧ್ಯಮಯ ಪ್ರಕರಣಗಳು ಮತ್ತು ಪುತ್ರವ್ಯಾಮೋಹದ ನೈಜ ಕಥೆಗಳು ಬೆಚ್ಚಿ ಬೀಳಿಸುವಂತಿವೆ. ಹೆಣ್ಣು ಭ್ರೂಣಹತ್ಯೆ ಪಿಡುಗಾಗಿ ಬೆಳೆಯುತ್ತಿರುವುದಕ್ಕೆ ತಂತ್ರಜ್ಞಾನದ ಕೊಡುಗೆಗಳು, ನರ್ಸಿಂಗ್ ಹೋಮ್ ಗಳ ಪಾತ್ರ, ಕಾನೂನಿನ ಮಿತಿ ಹಾಗೂ ಈ ಪಿಡುಗಿನ ವಿರುದ್ಧ ನಡೆಯುತ್ತಿರುವ ಹೋರಾಟಗಳ ಚಿತ್ರಣವನ್ನೂ ಈ ಕೃತಿ ಕಟ್ಟಿ ಕೊಟ್ಟಿದೆ.

ಕಳೆದ ಎರಡೂವರೆ ದಶಕಗಳಲ್ಲಿ ಆಧುನಿಕ ಭಾರತದ ಪಿಡುಗಾಗಿ ಹೆಣ್ಣು ಭ್ರೂಣ ಹತ್ಯೆ ಬೆಳೆದ ಬಗೆಯ ಅವಲೋಕನ ಇಲ್ಲಿದೆ. ಜಾಗತಿಕ ನೋಟದಿಂದ ಹಿಡಿದು ಭಾರತದಲ್ಲಿ ಇದು ಆವರಿಸಿದ ರೀತಿಯ ಹಿನ್ನೋಟವೂ ಇದೆ. `ಇಂದಿಗೂ ಈ ಪಿಡುಗಿನ ವಿರುದ್ಧ ಇರುವ ಪಿಸಿ ಹಾಗೂ ಪಿಎನ್ಡಿಟಿ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ದೇಶದ ಉದ್ದಕ್ಕೆ ಹೆಣ್ಣು ಭ್ರೂಣಹತ್ಯೆಯ ಪ್ರಕರಣಗಳನ್ನು ಕಾನೂನಿನ ಅಡಿಯಲ್ಲಿ ದಾಖಲಿಸಿಕೊಂಡು ಸರಿಯಾದ ಕ್ರಮದಲ್ಲಿ ವಿಚಾರಣೆ ನಡೆಸಿದ ಒಬ್ಬ ಜಿಲ್ಲಾ ಆರೋಗ್ಯ ಅಧಿಕಾರಿಯೂ ನಮಗೆ ನೋಡಲು ಸಿಗುವುದಿಲ್ಲ. ಈ ಕಾಯ್ದೆಯ ಅಡಿಯಲ್ಲೆ ಹೆಣ್ಣು ಭ್ರೂಣ ಹತ್ಯೆಗಳು ಅಬಾಧಿತವಾಗಿ ನಡೆಯುತ್ತಲೇ ಇವೆ. (ಪುಟ 101) ಎಂದು ಹೇಳುವ ಈ ಪುಸ್ತಕ ಹೆಣ್ಣು ಮಗುವಿನ ಉಳಿವಿನ ಬಗ್ಗೆ ಚಿಂತನೆಗೆ ಪ್ರೇರೇಪಿಸುತ್ತದೆ.

ಶೀರ್ಷಿಕೆ: ಒಡಲ ತುಡಿತಕ್ಕೆ ಕೇಡು  ಲೇಖಕರು: ಮಂಜುನಾಥ ಅದ್ದೆ  ಪ್ರಕಾಶಕರು: ಸ್ತ್ರೀಲೇಖ ಪ್ರಕಟಣೆ  ಪುಟಗಳು:126 ಬೆಲೆ:ರೂ.150/-
ಕೃಪೆ : ಪ್ರಜಾವಾಣಿ


`ಪದ್ಮ ಪಾಣಿ’, `ಕಪಿಲಿಪಿಸಾರ’ ಲೋಕಾರ್ಪಣೆ

scan0020

ಅಂಕಿತ ಪುಸ್ತಕ:  ಕೆ.ಎನ್.ಗಣೇಶಯ್ಯ ಅವರ `ಕಪಿಲಿಪಿಸಾರ’ ಕಾದಂಬರಿ  ಹಾಗೂ `ಪದ್ಮಪಾಣಿ’ ಕಥಾಸಂಕಲನ ಲೋಕಾರ್ಪಣೆ ಸಮಾರಂಭ.

ಅತಿಥಿಗಳು: ನಾಗೇಶ ಹೆಗಡೆ, ನೇಮಿಚಂದ್ರ, ರಮೇಶ್ ಅರವಿಂದ್

ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ. 6, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ,

ದಿನಾಂಕ:25-01-2009      ಸಮಯ : ಬೆಳಿಗ್ಗೆ 10:30

ಆಹ್ವಾನ ಪತ್ರಿಕೆ – ಚಿಂತನ ಪುಸ್ತಕ

film-inv-knd-copyfilm-inv-eng-copy

ಸಂಪರ್ಕಿಸಿ chinthanapusthaka.wordpress.com

ಪುಸ್ತಕ ಬಿಡುಗಡೆಯ – ಚಿತ್ರ-ಕತೆ ಜಗತ್ತಿನ ಸಿನಿಮಾಗಳ ಅವಲೋಕನ

chitrakate-coverpage-a3-tif-copyವಿವರಗಳಿಗಾಗಿ ನೋಡಿ http://chinthanapusthaka.wordpress.com/

ಬೆಸ್ಟ್ ಸೆಲ್ಲರ್ ಕಿತ್ತಳೆ!

coffee-naadina-kittale1

`ಅದೃಷ್ಟಕ್ಕೆ ಎಂಬಂತೆ ನಮಗೆ ದಕ್ಕಿದ ಈ `ಕಾಫಿ ನಾಡಿನ ಕಿತ್ತಳೆಯಲ್ಲಿ ಮಲೆನಾಡಿನ ಬದುಕಿನ ನವರಸಗಳೆಲ್ಲ ಮೇಳವಿಸಿವೆ. ಕವಿ ವಿ.ಜಿ.ಭಟ್ಟರ ಕಲ್ಪನೆಯ ಹತ್ತನೆಯ ರಸ (ಶುಷ್ಕರಸ) ಇಲ್ಲಿ ಲವಲೇಶವೂ ಕಾಣುತ್ತಿಲ್ಲ. ಕೆಲವೆಡೆ ಸಾಕ್ಷ್ಯಚಿತ್ರದಂತೆ, ಕೆಲವೆಡೆ ಕಾಲ್ಪನಿಕ ಕತೆಯಂತೆ, ಇನ್ನು ಕೆಲವೆಡೆ ಹಾಸ್ಯದ ಲಹರಿಯಂತೆ ಈ ಕೃತಿ ಪ್ರತಿ ಪುಟದಲ್ಲೂ ರೂಪ ಲಕ್ಷಣಗಳನ್ನು ಬದಲಾಯಿಸಿಕೊಳ್ಳುತ್ತಾ, ಮಲೆನಾಡಿನ ಮಳೆಗಾಲದ ಹಳ್ಲಗಳಂತೆ ಒಮ್ಮೆ ಧಾವಿಸುತ್ತಾ, ಒಮ್ಮೆ ನಿಧಾನಕ್ಕೆ ಜುಳುಜುಳಿಸುತ್ತ, ಮರುಕ್ಷಣವೇ ಧುಮ್ಮಿಕ್ಕುತ್ತ, ಮತ್ತೆ ಕೆಲವೊಮ್ಮೆ ಅನಿರೀಕ್ಷಿತವಾಗಿ ಹ್ರಸ್ವವಾಗುತ್ತ ಸಾಗುತ್ತದೆ. ಆರ್.ಕೆ.ನಾರಾಯಣರ `ಮಾಲ್ಗುಡಿ ಡೇಯ್ಸ್ಮತ್ತು ಕುವೆಂಪು ವಿರಚಿತ `ಕಾನೂನು ಹೆಗ್ಗಡತೆಯ ಛಾಯೆಯನ್ನು ಅಲ್ಲಿಲ್ಲಿ ತೋರಿಸುತ್ತ ಹರಿಯುತ್ತದೆ.

`ಈಚಿನ ಅನಕ್ಷರ ಮಾಧ್ಯಮಗಳು‘ (ಟಿವಿ, ಫೋನ್, ಎಫ್.ಎಮ್, ವೀಡಿಯೋ ಚಾಟಿಂಗ್) ಓದುವ ಅಷ್ಟಿಷ್ಟು ಅವಕಾಶಗಳನ್ನೂ ಕಸಿದುಕೊಳ್ಳುತ್ತಿವೆ. ಅಕ್ಷರಗಳು ನೀಡುವ ಚಿತ್ರಣಗಳಿಗೆ ಈ ಯಾವ ಮಾಧ್ಯಮಗಳೂ ಸರಿಸಾಟಿಯಾಗಲಾರವು. ಅದಕ್ಕೆ ಸುಂದರ ಸಾಕ್ಷ್ಯಗಳು ಈ ಕೃತಿ ಪುಟಪುಟಗಳಲ್ಲಿವೆಎಂದು ನುಡಿದಿದ್ದಾರೆ ನಾಗೇಶ ಹೆಗಡೆ.

ನಾಗೇಶ ಹೆಗಡೆಯವರ ಪ್ರೋತ್ಸಾಹದಿಂದ ಬೆಳಕಿಗೆ ಬಂದವರು ಗಿರಿಮನೆ ಶ್ಯಾಮರಾವ್, ಈ ಕಾದಂಬರಿ ಧಾರಾವಾಹಿಯಾಗಿ ಪ್ರಕಟವಾದಾಗ ವಾರಪತ್ರಿಕೆಯೊಂದರ ಟಿ.ಆರ್.ಪಿ. ಹೆಚ್ಚಿತ್ತು. ಸ್ವತಃ ಕೃಷಿ ಮಾಡುತ್ತ ಬದುಕಿನ ಬವಣೆಗಳನ್ನು, ಕುತೂಹಲಗಳನ್ನು ಜೊತೆಗೆ ಸಾಮರಸ್ಯಗಳನ್ನು ಗಿರಿಮನೆ ಶ್ಯಾಮರಾವ್ ಈ ಕೃತಿಯ ಮೂಲಕ ನೀಡಿದ್ದಾರೆ. ಇದು ನಿಮ್ಮ ಮನೆಯ ಲೈಬ್ರರಿಯಲ್ಲಿ ಇರಲೇಬೇಕಾದ ಪುಸ್ತಕ. ಕೊಂಡುಕೊಳ್ಳಿ.

ಶೀರ್ಷಿಕೆ: ಕಾಫಿ ನಾಡಿನ ಕಿತ್ತಳೆ ಲೇಖಕರು: ಗಿರಿಮನೆ ಶ್ಯಾಮರಾವ್ ಪ್ರಕಾಶಕರು: ನವಕರ್ನಾಟಕ ಪ್ರಕಾಶನ ಪುಟಗಳು:200 ಬೆಲೆ:ರೂ.110/-

ಕೃಪೆ : ಕನ್ನಡ ಪ್ರಭ