ಹಲವು ನೆನಪುಗಳನ್ನು ಮೀಟುವಂತಹ . . .

srijanasheela-vycharikathe1

ಸಾಹಿತ್ಯದ ಕುರಿತ ಬರಹಗಳು, ವ್ಯಕ್ತಿಚಿತ್ರಗಳು, ಭಾಷಣಗಳು, ಅನುಭವ ಬರಹಗಳು, ಪುಸ್ತಕ ಪ್ರತಿಕ್ರಿಯೆ, ಸಾಮಾಜಿಕ-ಸಾಂಸ್ಕೃತಿಕ ಚಿಂತನೆಗಳು, ಸಂದರ್ಶನಗಳು – ಹೀಗೆ ವಿವಿಧ ಸ್ವರೂಪದ ನಲವತ್ತು ಬರಹಗಳ ಸಂಕಲನ `ಸೃಜನಶೀಲ ವೈಚಾರಿಕತೆ‘. ಇವುಗಳನ್ನೆಲ್ಲ ವಿಮರ್ಶಾ ಲೇಖನಗಳು ಎಂದು ಪುಸ್ತಕದ ಮುಖಪುಟದಲ್ಲಿ ಕರೆಯಲಾಗಿದೆ.

ಸಂಕಲನದ ಬಹುತೇಕ ಲೇಖನಗಳು ಲೇಖಕರ ಒಡನಾಟಕ್ಕೆ ದೊರಕಿದ ಸಾರಸ್ವತ ಲೋಕದ ಗಣ್ಯರ ಕುರಿತ ನುಡಿಚಿತ್ರಗಳಿಗೆ ಮೀಸಲಾಗಿವೆ. ವೈಕಂ ಮಹಮದ್ ಬಷೀರ್, ಗೋರೂರು, ಕರೀಂಖಾನ್, ಬೆಸಗರಹಳ್ಳಿ ರಾಮಣ್ಣ, ವಿಜಯಾದಬ್ಬೆ, ಕೆಂಗಲ್, ಕುವೆಂಪು, ಪೂರ್ಣಚಂದ್ರ ತೇಜಸ್ವಿಯಿಂದ ಹಿಡಿದು ಕಿರಿಯ ಗೆಳೆಯರ ಕುರಿತು ಕಾಳೇಗೌಡರು ಬರೆದಿದ್ದಾರೆ. ಈ ಬರಹಗಳಿಗೆ ಆಪ್ತತೆಯ ಗುಣವಿದೆ. ಬೆಸಗರಹಳ್ಳಿ ಅವರ ಕುರಿತ ಬರಹವಂತೂ ಹಲವು ನೆನಪುಗಳನ್ನು ಮೀಟುವಂತಹದ್ದು.

`ಸೃಜನಶೀಲ ವೈಚಾರಿಕತೆ‘, `ಸಾಹಿತ್ಯದಿಂದ ಏನು ಪ್ರಯೋಜನ?’, `ಸಾಹಿತ್ಯದ ಜವಾಬ್ದಾರಿ‘, ಲೇಖನಗಳು ಬರಹದ ಸೃಜನಶೀಲ ಸಾಧ್ಯತೆಗಳ ವಿಶ್ಲೇಷಣೆ ಆಗಿರುವಂತೆಯೇ ಬರಹಗಾರನ ಆತ್ಮವಿಶ್ಲೇಷಣೆಯ ಸಾಧ್ಯತೆಗಳೂ ಆಗಿರುವುದು ವಿಶೇಷ. `ಜೀವನ ಪ್ರೀತಿ‘, ಹಂಚುಣ್ಣುವ ಉದಾರಗುಣಬರಹಗಳಿಗೆ ಪ್ರಬಂಧದ ಚೌಕಟ್ಟಿದೆ.

ಕಾಳೇಗೌಡರ ವಿಚಾರ-ಅನುಭವಗಳ ಹಿನ್ನೆಲೆಯಲ್ಲಿ ಹಲವು ಬರಹಗಳು ಇಷ್ಟವಾದರೂ, ಪುಸ್ತಕದಲ್ಲಿ ಪ್ರಕಾಶಕರ ತುರ್ತು ಎದ್ದು ಕಾಣುತ್ತದೆ. ಲೇಖಕರ ಮಾತಿಗೆ ಕೂಡ ಆಸ್ಪದವಿಲ್ಲದೆ ಹೋಗಿರುವುದರಿಂದ ಪುಸ್ತಕದ ಪ್ರವೇಶ ಒಂದು ರೀತಿ ಕಲಸುಮೇಲೋಗರ ಎನ್ನಿಸುತ್ತದೆ. ಬರಗೂರು ರಾಮಚಂದ್ರಪ್ಪ ಹಾಗೂ ಬಿ. ಚಂದ್ರೇಗೌಡರು ಯಾವುದೋ ಸಂದರ್ಭದಲ್ಲಿ ಮಾಡಿದ ಕಾಳೇಗೌಡರ ಸಂದರ್ಶವನ್ನು ಈ ಪುಸ್ತಕದಲ್ಲಿ ಬಳಸಿಕೊಂಡಿರುವ ಔಚಿತ್ಯ ಅರ್ಥವಾಗುವುದಿಲ್ಲ. ಲೇಖನಗಳ ಕೊನೆಯಲ್ಲಿ ಬರವಣಿಯ ದಿನಾಂಕವನ್ನು ನಮೂದಿಸಲಾಗಿದೆ. ಆದರೆ, ಸ್ಥಳ-ಸಂದರ್ಭದ ಉಲ್ಲೇಖವಿಲ್ಲ.

ಲೇಖನಗಳಿದೆ ಪೂರಕವಾಗಿ ಬಳಸಿಕೊಂಡಿರುವ ರೇಖಾಚಿತ್ರಗಳು ಆಕರ್ಷಕವಾಗಿವೆ. ಅಂತೆಯೇ, ಪ್ರತಿ ಲೇಖನದ ಆರಂಭದಲ್ಲಿ ಲೇಖಕರ ರೇಖಾಚಿತ್ರ ಬಳಸಿಕೊಳ್ಳಲಾಗಿದೆ. ಇದು ಕೂಡ ಸೃಜನಶೀಲ ಪ್ರಯೋಗವಾ?

ಶೀರ್ಷಿಕೆ: ಸೃಜನಶೀಲ ವೈಚಾರಿಕತೆ ಲೇಖಕರು: ಪ್ರೊ. ಕಾಳೇಗೌಡ ನಾಗವಾರ ಪ್ರಕಾಶಕರು: ಸಪ್ನ ಬುಕ್ ಹೌಸ್ ಪುಟಗಳು:256 ಬೆಲೆ:ರೂ.125/-

ಕೃಪೆ : ಪ್ರಜಾವಾಣಿ