ಸಾವಿನ ಮನೆಯ ಜಗುಲಿಯಲ್ಲಿ ಕೂತ ಹುಡುಗ ನಚಿಕೇತ

agnidivya1

`ಕಂಠೋಪನಿಷತ್ತಿನ ಮಂತ್ರಗಳಿಗೆ ನನ್ನನ್ನು ನಾನು ಒಪ್ಪಿಸಿಕೊಂಡ ಬಗೆಎಂಬುದಾಗಿ ಕವಯತ್ರಿ ಈ ಸಂಕಲನದ ಕವಿತೆಗಳ ಹುಟ್ಟನ್ನು ವಿವರಿಸಿದ್ದಾರೆ. ಇವುಗಳಲ್ಲಿ ಯಾವುದೇ ಅನುಕ್ರಮವನ್ನು ಪಾಲಿಸದೆ ತಮಗೆ ಬೇಕಾದ 18 ಶ್ಲೋಕಗಳನ್ನು ಆರಿಸಿಕೊಂಡಿರುವುದಾಗಿಯೂ ಅವರು ಹೇಳುತ್ತಾರೆ. ಮೂಲ ಮಂತ್ರಗಳಿಲ್ಲದೆಯೂ ತಮ್ಮ ರಚನೆಗಳನ್ನು ಸ್ವತಂತ್ರ ಪದ್ಯಗಳಾಗಿ ಓದಬಹುದಾದ ಸಾಧ್ಯತೆ ಇದೆ ಎಂದು ಅವರು ಭಾವಿಸಿಕೊಂಡಿದ್ದಾರೆ. ಹಾಗಾಗಿ, ಕ್ಷೇಮವಾಗಿ, ಕಂಠೋಪನಿಷತ್ತಿನ ತಂಟೆಗೆ ಹೋಗದೆ, ಮೊದಲು ಈ ಕವಿತೆಗಳಿಗೇ ಮುಖಾಮುಖಿಯಾಗೋಣ.

ಸುಕುಮಾರ ಭಾವ-ಭಾಷೆಗಳನ್ನು ನೀರ ಮೇಲಿನ ರಂಗವಲ್ಲಿಯಂತೆ ಸೆರೆ ಹಿಡಿದ ಕಾರಣಕ್ಕಾಗಿ ತಮ್ಮ ಮೊದಲ ಸಂಕಲನದಲ್ಲೆ ಗಮನ ಸೆಳೆದ ಸಂಧ್ಯಾದೇವಿಯವರ ಈ ಎರಡನೆಯ ಪುಸ್ತಕದಲ್ಲೂ ಅದರ ಮುಂದುವರಿಕೆಯಿದೆ. ಅದು ಬೇಡ ಅನಿಸಿದರೆ ರೂಢಿಗತ ಭಾಷಾಕವಚದಲ್ಲಿಯೇ ದೀಪದ ಕುಡಿಯಂತಹುದೇನನ್ನೋ ಅಡಗಿಸಿಕೊಡುವಂಥವೂ ಇವೆ.

ಉದಾಹರಣೆಗೆ, ನಚಿಕೇತ ಪದ್ಯ:

ಹಾಲು ಕುಡಿದು ಗೋಲಿ ಆಡಿಕೊಂಡಿರಬೇಕಾದ ಹುಡುಗ ಅಮೃತ ಬೇಕೆಂದು ಹಟ ಹಿಡಿದ.

ಹಾಲಿನ ಬಟ್ಟಲಲ್ಲಿ

ಸಾವಿನ ಪ್ರಶ್ನೆ ಬಿತ್ತು!

ಹುಡುಗನ ಪಾಲಿಗೆ

ಹಾಲಿನಲ್ಲಿ ಸಾವಿತ್ತೇ?

ಅಲ್ಲ..ಲ್ಲ ಹುಡುಗನ ಪಾಲಿನ ಹಾಲು

ಸಾವು ಕುಡಿಯಿತು

ಸಾವಿನಲ್ಲಿ ಸಾವಿದೆ

ಸಾವಿನ ಪ್ರಶ್ನೆಯಲ್ಲಿ ಏನಿದೆ?

ಗೋಲಿ ಆಟದಂತೆ ಹುಡುಗನಿಗೆ

ಸಾವ ತಿಳಿಯುವ ಕುತೂಹಲ!

ಹುಟ್ಟಿನ ಪ್ರಶ್ನೆಯ ಹಿಡಿದು ಕೈಯಲ್ಲಿ

ಸಾವಿನ ಮನೆಯ ಜಗುಲಿಯಲ್ಲಿ

ಕಾದು ಕೂತ ಮೊದಲ ಹುಡುಗ

ಹೆಸರು ನಚಿಕೇತ.

ಮುಂತಾಗಿ ಮುಂದುವರಿಯುವ ಮನನೀಯ ಸಾಲುಗಳಿವೆ.

ಶೀರ್ಷಿಕೆ: ಅಗ್ನಿದಿವ್ಯ ಲೇಖಕರು: ಸಂಧ್ಯಾದೇವಿ ಪ್ರಕಾಶಕರು: ಅಭಿನವ ಪುಟಗಳು: ಬೆಲೆ:ರೂ. /-

ಕೃಪೆ : ವಿಜಯ ಕರ್ನಾಟಕ