ಸ್ವಾತಂತ್ರ್ಯ ಹೋರಾಟಕ್ಕೆ ಇಳಿದ ಹಲವು ವಾಹಿನಿಗಳ ಸಮ್ಮಿಳಿತ ಪ್ರವಾಹ.

swathanthrya-gangeya-saaviraaru-toregalu

ಒಂದೊಂದು ಯುಗವೂ, ಒಂದೊಂದು ರಾಜಕೀಯ ಶಕ್ತಿಯೂ ತನ್ನ ಇತಿಹಾಸವನ್ನು ಮತ್ತು ತನಗೆ ಸಂಬಂಧ ಪಟ್ಟವರ ಇತಿಹಾಸವನ್ನು ತನ್ನ ರಾಜಕೀಯ ಆಶೋತ್ತರಗಳು, ಉದ್ದೇಶಗಳ ದೃಷ್ಟಿಯಿಂದ ಮರುಪರಿಶೀಲನೆ ಮಾಡುತ್ತದೆ. ಇಂತಹ ಮರುಪರಿಶೀಲನೆ ಮಾನವ ಪ್ರವೃತ್ತಿಗಳಲ್ಲಿ ಒಂದು. ಹಿಂದೆ ಬ್ರಿಟೀಷರು ಭಾರತದ ಇತಿಹಾಸದ ಅಧ್ಯಯನ ಮಾಡಿದುದು ಈ ದೃಷ್ಟಿಯಿಂದಲೇ. ಭಾರತವನ್ನೆಲ್ಲ ತಮ್ಮ ಸಾರ್ವಭೌಮತ್ವಕ್ಕೆ ಒಳಪಡಿಸಿಕೊಳ್ಳುವ ಉದ್ದೇಶದಿಂದ, ಆ ಉದ್ದೇಶಕ್ಕೆ ಅನುಕೂಲವಾಗುವಂತೆ ಅವರು ನಮ್ಮ ಇತಿಹಾಸವನ್ನು ವ್ಯಾಖ್ಯಾನಿಸಿದರು. ಅದರಿಂದ ಅವರು ಕಂಡುದು ಹಿಂದು, ಮುಸಲ್ಮಾನ ಯುಗಗಳು. ಬ್ರಿಟೀಷರಿಗಿಂತ ಮುಂಚೆ ಭಾರತಕ್ಕೆ ದಾಳಿ ಇಟ್ಟ ಆಕ್ರಮಣಕಾರರು ಇಲ್ಲೇ ನೆಲೆಸಿ ಈ ದೇಶದ ಸಮಗ್ರ ಭಾಗವೇ ಆಗಿಹೋದರು. ಅವರ ಮತ, ಆಚಾರ ವಿಚಾರಗಳೂ ಭಾರತದ ಪ್ರವಾಹದಲ್ಲೆ ಸಮ್ಮಿಳಿತವಾಗಿ ಅವರ ಕೊಡುಗೆ ಈ ದೇಶದ ಸಂಪತ್ತಿನಲ್ಲಿ ಸೇರಿಹೋಯಿತು. ಬ್ರಿಟೀಷರಂತೆ ನಮ್ಮ ಸಂಪನ್ಮೂಲವನ್ನು ದೋಚಿ ತಮ್ಮ ದೇಶಕ್ಕೆ ಒಯ್ಯದ ಈ ಆಕ್ರಮಣಕಾರರ ವಿರುದ್ಧ ನಡೆದ ಹೊರಾಟಗಳಿಗೆ ಮತೀಯ ಬಣ್ಣ ಹಚ್ಚಿ, ಆಂತರಿಕ ನೆಮ್ಮದಿಯನ್ನು ಕಲಕಿ ಹಿಂದೂ-ಮುಸಲ್ಮಾನರು ಪರಸ್ಪರ ಸಂದೇಹಿಸುವಂತೆ ಮಾಡುವ ಬ್ರಿಟೀಷರ ಜಾಣ ರಾಜನೀತಿ ಹಿಂದಿನ ಇತಿಹಾಸದ ಬರವಣಿಗೆಯಲ್ಲಿ ಪ್ರತಿಫಲನವಾಗಿದೆ. ಮತೀಯ ಭೂತಗಾಜಿನ ಮೂಲಕ ಇಲ್ಲವೇ ಜಾತೀಯ ಮಸೂರದ ಮೂಲಕ ನೋಡುವ ಜಾಡನ್ನೇ ಇಂದಿನ ಹಲವು ಇತಿಹಾಸಕಾರರು ಮುಂದುವರೆಸುತ್ತಿರುವುದು ದೇಶದ ಸೆಕ್ಯುಲರಿಸಂ ಮತ್ತು ಸಮಗ್ರತೆಗೆ ಪೂರಕವಲ್ಲ. ಬದಲಾಗಿ ಬ್ರಿಟೀಷರ ಸ್ವಾರ್ಥಪರತೆಯ ಬಲೆಯಲ್ಲಿ ಸಿಲುಕದ ನಮ್ಮ ಇತಿಹಾಸದ ಓದು ನಮಗೀಗ ಬೇಕಾಗಿದೆ. ಈ ನಿಟ್ಟಿನಲ್ಲಿ ಎನ್.ಪಿ. ಶಂಕರನಾರಾಯಣರಾವ್ ಅವರ `ಸ್ವಾತಂತ್ರ್ಯ ಗಂಗೆಯ ಸಾವಿರಾರು ತೊರೆಗಳು – ರಾಷ್ಟ್ರೀಯ ಚಳುವಳಿಯ ಸಮಗ್ರ ಪರಿಚಯ’ ಪುಸ್ತಕ ಅಮೋಘವಾಗಿದೆ.

ಈ ಪುಸ್ತಕವನ್ನು ಕುರಿತಂತೆ ವ್ಯಾಸರಾಯ ಬಲ್ಲಾಳ, ಎಸ್.ವಿ.ದೇಶಿಕಾಚಾರ್, ಡಾ.ಜಿ.ರಾಮಕೃಷ್ಣ, ಎಚ್.ಎಸ್.ದೊರೆಸ್ವಾಮಿ, ಎಲ್. ಶ್ರೀಕಂಠಯ್ಯ ಮುಂತಾದ ಗಣ್ಯರ ಅಭಿಪ್ರಾಯಗಳು ಹೀಗಿವೆ.

ಭಾರತೀಯವೆನಿಸುವ ರಾಷ್ಟ್ರೀಯ ಅಸ್ಮಿತೆಗೆ ಗಂಗೆ ಒಂದು ಸಂಕೇತ. . . . ಭಾರತದ ಸ್ವಾತಂತ್ರ್ಯಗಂಗೆಯ ವೈಶಾಲ್ಯ, ಜಲಾಧಿಕ್ಯ, ಸ್ವಚ್ಛತೆಗೆ ಕೂಡುನದಿಗಳ ಕೊಡುಗೆ ಇವುಗಳ ಸಮೀಕ್ಷಣೆ ಇವೇ ಈ ಗ್ರಂಥದ ವಸ್ತು. ಪೂರ್ವರಂಗವಾಗಿ ಸ್ವಾತಂತ್ರ್ಯವನ್ನು ಹೇಗೆ ಕಳೆದುಕೊಂಡೆವು ಎಂಬುದೂ ವಿಮರ್ಶೆಗೆ ಒಳಗಾಗಿದೆ. . . . ವಸಾಹತುಶಾಹಿ ಆಕ್ರಮಣದ ಪರಿಣಾಮವಾಗಿ ಭಾರತದ ಆರ್ಥಿಕ ಬೆನ್ನುಲುಬು ಹೇಗೆ ಜರ್ಝರಿತಗೊಂಡಿತೆಂದು ತಿಳಿಯದೆ ಇಲ್ಲಿಯ ಸ್ವಾತಂತ್ರ್ಯ ಹೋರಾಟವನ್ನು ವ್ಯಾಖ್ಯಾನಿಸುವುದು ಅಸಮರ್ಪಕವಾದ ವಿಧಾನ . . . . ಹುಟ್ಟಿಕೊಂಡ ಚಳುವಳಿಗಳ ವಿಶ್ಲೇಷಣೆಯನ್ನು ಪದರ ಪದರವಾಗಿ ಲೇಖಕರು ಬಿಡಿಸಿದ್ದಾರೆ. . . ನಮ್ಮ ದೇಶದ ಮಹಾರೋಗವಾದ ಜಾತೀಯತೆ, ಎಂತೆಂತಹ ಸಮಸ್ಯೆಗಳನ್ನು ಹುಟ್ಟಿಹಾಕಿದವು . . . . . . ಸ್ವಾತಂತ್ರ್ಯ ಪಡೆಯಬೇಕೆಂಬ ಉತ್ಕಟ ಆಸೆ, ಛಲಗಳು ಮಾತ್ರ ಚೂರು ಚೂರು ಭಾರತದಲ್ಲೂ ಪ್ರಜ್ವಲಿಸಿದವು ತೊರೆಗಳು ಸೇರಿ ಮಹಾನದಿಯಾಯಿತು. . . . . . ಈ ತರಹ ವಿಮರ್ಶೆ ಮತ್ತು ವ್ಯಾಖ್ಯಾನಗಳಿಂದ ಈ ಪುಸ್ತಕ ಬರೀ ಚರಿತ್ರೆಯಾಗದೆ, ಅದರ ಹಿಂದಿರುವ ಅಂಶಗಳನ್ನೂ ಅಳವಡಿಸಿಕೊಂಡಿರುವುದು ಸ್ವಾಗತಾರ್ಹ. . . . . ಎಲ್ಲೂ ಪೂರ್ವಾಗ್ರಹವಿಲ್ಲ, ಉದ್ವೇಗದ ಸೋಂಕಿಲ್ಲ, ಹಾಗಿದ್ದರೂ ತಣ್ಣಗೆ ತಟಸ್ಥವೆನಿಸದೆ ಬೆಚ್ಚಗೆ ಬಿಂಬಿಸುತ್ತದೆ. ಈ ಪುಸ್ತಕ ಇಂಥ ಬರವಣಿಗೆಗೆ ಒಂದು ಒಳ್ಳೆಯ ಮಾದರಿ. . . . . ಓದುತ್ತ ಹೋದಂತೆ ನನಗೆ ಮೆಚ್ಚಿಗೆಯಾದದ್ದು ಲೇಖಕರ ಸಮಗ್ರ ಭಾರತೀಯ ದೃಷ್ಟಿ . . . ಈ ಕೃತಿ ಕಳೆದ ಐನೂರು ವರ್ಷಗಳ ಭಾರತದ ಇತಿಹಾಸದ ಅಧ್ಯಯನದ ಆಕರ ಗ್ರಂಥವಾಗಿ ಉಳಿಯುತ್ತದೆ.

ಶೀರ್ಷಿಕೆ: ಸ್ವಾತಂತ್ರ್ಯ ಗಂಗೆಯ ಸಾವಿರಾರು ತೊರೆಗಳು – ರಾಷ್ಟ್ರೀಯ ಚಳುವಳಿಯ ಸಮಗ್ರ ಪರಿಚಯ          ಲೇಖಕರು: ಎನ್.ಪಿ. ಶಂಕರನಾರಾಯಣರಾವ್       ಪ್ರಕಾಶಕರು: ನವಕರ್ನಾಟಕ ಪ್ರಕಾಶನ            ಪುಟಗಳು: 36+564            ಬೆಲೆ:ರೂ. 80/-