ಹಾಡೇನಪ್ಪ ನಾ ಹಾಡೇನ ಹಾಲಿನಂಥ ನನ ದೇವರನ

scan0046-2

ಜಾನಪದ ವಿದ್ವಾಂಸರಾದ ಶಿವಾನಂದ ಗುಬ್ಬಣ್ಣನವರು ಸಂಗ್ರಹಿಸಿದ ಡೊಳ್ಳಿನ ಪದಗಳ ಸಂಗ್ರಹವಿದು. ಉತ್ತರ ಕನರ್ಾಟಕದ ಜನಪದ ಪ್ರಕಾರಗಳಲ್ಲಿ ಡೊಳ್ಳಿನ ಹಾಡಿನ ಹಿನ್ನೆಲೆ, ಸಂದರ್ಭ ಇದೆಲ್ಲದರ ಸಹಿತ ಇಲ್ಲಿ ಕೊಡಲಾಗಿದೆ.

ಮೂಲತಃ ಡೊಳ್ಳಿನ ಹಾಡುಗಳು ಹಾಲುಮತ ಸಂಪ್ರದಾಯಕ್ಕೆ ಸೇರಿದವು. ಬಳಿಕ ಅವು ಶೈವ, ವೈದಿಕ ಸಂಪ್ರದಾಯಗಳನ್ನೂ ಹಾದು ಬಂದಿವೆ. ಇಲ್ಲಿ ಸಂಗ್ರಹಕಾರರು ಕುರುಬರ ಮೂಲ ಅವರ ಪೂರ್ತಿಯಾದ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಕೊಟ್ಟಿದ್ದಾರೆ. ಹೀಗಾಗಿ ಅವು ಹೆಚ್ಚು ಅರ್ಥಪೂರ್ಣ ಎನ್ನಿಸುತ್ತವೆ.

ಇಲ್ಲಿರುವ `ಜಾರತನಎಂಬ ಡೊಳ್ಳಿನ ಪದವು ಒಂದು ಹಾದರದ ಕಥೆಯನ್ನು ನಿರೂಪಿಸುತ್ತದೆ. `ಕುಂದೂರ ಲಕ್ಷ್ಮಣನ ಹೆಂಡತಿಯ ಹಾದರದ ಕಥೆಯನ್ನು ನಿರೂಪಿಸುತ್ತದೆ. `ಕುಂದೂರ ಲಕ್ಷ್ಮಣನ ಹೆಂಡತಿಯ ಹಾದರದ ಕಥೆಯಿದು. ಗಂಡ ದಂಡಿಗೆ ಹೋದಾಗ ಊರ ಸಾಹುಕಾರನೊಂದಿಗಿನ ಸಲ್ಲಾಪವೇ ಹೆಂಡತಿಗೆ ಮುಳುವಾಗುತ್ತದೆ. ಹೆಂಡತಿಯ ನಡತೆಯ ಬಗ್ಗೆ ಗೊತ್ತಾಗಿ ಅವಳನ್ನು, ಸಾಹುಕಾರನನ್ನು ಕೊಲ್ಲುವುದನ್ನು ಈ ಡೊಳ್ಳಿನ ಪದ ನಿರೂಪಿಸುತ್ತದೆ. ತಪ್ಪು ಮಾಡಿದ ಹೆಂಡತಿಯನ್ನು ಕೊಲ್ಲುವ ಜಾನಪದ ಆಶಯ ಈ ಡೊಳ್ಳಿನ ಪದದಲ್ಲೂ ಇದೆ. ಇಂಥ ಕೆಲವು ಡೊಳ್ಳಿನ ಪದಗಳ ಸಂಗ್ರಹವನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು.

ಶೀರ್ಷಿಕೆ: ಹಾಡೇನಪ್ಪ ನಾ ಹಾಡೇನ ಹಾಲಿನಂಥ ನನ ದೇವರನ ಲೇಖಕರು: ಡಾ.ಶಿವಾನಂದ ಗುಬ್ಬಣ್ಣವರ ಪ್ರಕಾಶಕರು: ಶಿವಾನಂದ ಗುಬ್ಬಣವರ ಪುಟಗಳು:578 ಬೆಲೆ:ರೂ.300/-

ಕೃಪೆ : ಪ್ರಜಾವಾಣಿ

ಒಂಟಿ ಒಬ್ಬಂಟಿ

scan0047-1ಗಂಡು ವೇಷಧಾರಿಗಳೆಲ್ಲ ಗಂಡಸರಲ್ಲ, ಸೀರೆ ಉಟ್ಟವರೆಲ್ಲ ಹೆಂಗಸರಲ್ಲ, ನಪುಂಸಕರಲ್ಲಿ ಹತ್ತು ಹಲವು ವಿಧದ ನಪುಂಸಕರಿದ್ದಾರೆ ಎನ್ನುವ ಲೇಖಕರು ಮನುಷ್ಯರು ಎಂಬ ಮಾನವ ಕುಲದ ಬದುಕನ್ನು `ಒಬ್ಬ ಒಬ್ಬಂಟಿಕಾದಂಬರಿಯನ್ನಾಗಿಸಿದ್ದಾರೆ. ನಪುಂಸಕರು, ಜೋಗಿ ಜೋಗತಿಯರ ಬದುಕಿನ ಸುತ್ತಸಾಗುವ `ಒಂಟಿ ಒಬ್ಬಂಟಿ‘, ಕಾದಂಬರಿ ಎಂದರೆ ಕಾದಂಬರಿಯೇ ಅಲ್ಲ. ಸಂಶೋಧನಾಗ್ರಂಥ ಎಂದರೂ ಸರಿಯೇ. ಆದರೆ ಅದನ್ನು ಲೇಖಕರು ಅಲ್ಲಗಳೆಯುತ್ತಾರೆ. ಜನಪದ ಕಥೆ ಆಧಾರವಾಗಿದ್ದರೂ ಕಥಾವಸ್ತು ಮಾತ್ರ ಸಮಕಾಲೀನ. ಬೈಲಹೊಂಗಲ, ಸವದತ್ತಿಗಳಲ್ಲಿನ ಜೋಗ, ಜೋಗತಿಯರ ನಂಬಿಕೆ, ಆಚರಣೆಗಳ ಪ್ರತೀಕ ಈ ಕಾದಂಬರಿ ಎಂದೇ ಅನಿಸುತ್ತದೆ. ಈಗಾಗಲೇ ಅಳಿಯ ಸಂತಾನವನ್ನು `ಅಳಿದುಳಿದವರುಮೂಲಕ ಪರಿಚಯಿಸಿದ ಬೋಳ ಚಿತ್ತರಂಜನ್ ದಾಸ್ ಶೆಟ್ಟಿ ಅವರು ಬರೆದಿರುವ 179 ಪುಟಗಳ ಈ ಕಾದಂಬರಿಯನ್ನು ಮಂಗಳೂರಿನ ನಾಗಶಕ್ತಿ ಪ್ರಕಾಶನ ಪ್ರಕಟಿಸಿದೆ. ಬೆಲೆ ತೀರ ಹೆಚ್ಚಲ್ಲ. 100 ರೂಪಾಯಿ. ಅದಿರಲಿ, ಜೋಗಿಗಳು ಶಾಪದಂತಹ ಕಠಿಣ ವ್ರತ ಹಿಡಿಯಲು ಸಮಾಜದ ಕೊಡುಗೆ ಎಷ್ಟಿರಬಹುದು? ಇರಬಹುದು!

ಶೀರ್ಷಿಕೆ: ಒಂಟಿ ಒಬ್ಬಂಟಿ ಲೇಖಕರು: ಬೋಳ ಚಿತ್ತರಂಜನ್ ದಾಸ್ ಶೆಟ್ಟಿ ಪ್ರಕಾಶಕರು: ನಾಗಶಕ್ತಿ ಪ್ರಕಾಶನ ಮಂಗಳೂರು ಪುಟಗಳು: 179 ಬೆಲೆ:ರೂ.100/-

ಕೃಪೆ : ಉದಯವಾಣಿ

ಸದ್ಭಾವ

scan0056-1

ಕವಿ ಚೆನ್ನವೀರ ಕಣವಿಯವರ ಮುನ್ನುಡಿ, ಬೆನ್ನುಡಿಗಳನ್ನು ಹಾಗೂ ಕೆಲವು ಹಿರಿಯರು, ಕಿರಿಯರ ಕುರಿತಾದ ಸಾಂದರ್ಭಿಕವಾಗಿ ಬರೆದ ಲೇಖನಗಳನ್ನು ಒಳಗೊಂಡ ಸಂಗ್ರಹ ಇದು. ಈ ಮೊದಲು ಅವರ ಮುನ್ನುಡಿಗಳದೇ ಒಂದು ಸಂಗ್ರಹ `ಶುಭ ನುಡಿಯೆ ಹಕ್ಕಿಪ್ರಕಟವಾಗಿತ್ತು.

ಸ.ಸ.ಮಾಳವಾಡ, ಬೆಟಗೇರಿ ಕೃಷ್ಣಶರ್ಮ, ಬಸವರಾಜ ಸಾದರ ಮುಂತಾದ ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅಷ್ಟೇನೂ ಪ್ರಸಿದ್ಧರಲ್ಲದ ಲೇಖಕರಿಗೂ ಬೆನ್ನುತಟ್ಟಿ ಅವರು ಮುನ್ನುಡಿಗಳನ್ನು ಬರೆದಿರುವುದನ್ನು ನೋಡಬಹುದು.

ಇಲ್ಲಿ ಕುತೂಹಲಕಾರಿಯಾಗಿರುವುದು ಶೆ.ಗೋ.ಕುಲಕರ್ಣಿಯವರ `ನಾ ಕಂಡ ಗೆಳೆಯರ ಗುಂಪುಪುಸ್ತಕಕ್ಕೆ ಬರೆದ ಬೆನ್ನುಡಿ. ಈ ಪುಸ್ತಕ ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ. ಮೂರೂ ಸಂಪುಟಗಳಿಗೆ ಅವರು ಪ್ರತ್ಯೇಕ ಬೆನ್ನುಡಿಗಳನ್ನು ಬರೆದಿದ್ದಾರೆ. ತರುಣ ಬರಹಗಾರರಿಗೆ ಹಾರೈಕೆ, ಅಭಿನಂದನೆಗಳನ್ನು ಕಣವಿಯವರು ಮಾಡಿದ್ದಾರೆ. ಕೆಲವು ಹಿರಿಯ ಲೇಖಕರ ಕೃತಿಗಳಿಗೆ ಬರೆದ ಬೆನ್ನುಡಿ, ಮುನ್ನುಡಿಗಳನ್ನು ಹೊರತುಪಡಿಸಿದರೆ ಒಂದು ಕಾಲಘಟ್ಟದ ಸಾಹಿತ್ಯ ಸಂದರ್ಭವನ್ನು ಅರಿಯಲು ಈ ಪುಸ್ತಕ ಸಹಕಾರಿಯಾಗುವಂತಿದೆ.

`ವ್ಯಕ್ತಿ ಶಕ್ತಿ : ನನಗೆ ಕಂಡಷ್ಟು : ಭಾಗದಲ್ಲಿ ಜಿ. ನಾರಾಯಣ, ಚದುರಂಗ, ಗೊರೂರು ಮುಂತಾದವರ ವ್ಯಕ್ತಿತ್ವವನ್ನು ರೇಖಿಸಿದ್ದಾರೆ. ಸಂಕೀರ್ಣ ಭಾಗದಲ್ಲಿ ಮಧುರ ಚೆನ್ನರ ಕಾವ್ಯದ ಬಗ್ಗೆ, `ಜಾನಪದ ದೀಪಾರಾಧನೆ ಸಮಾರಂಭಮುಂತಾದ ವಿಶೇಷ ಸಂಗತಿಗಳ ಬಗ್ಗೆ ಬರೆದಿದ್ದಾರೆ. ಇಲ್ಲಿ ಅವರ ಒಂದು ಅನುವಾದವೂ ಇದೆ. ಚೀನಾದ ತತ್ವಜ್ಞಾನಿ ಲಿನ್ ಯು ಟಾಂಗ್ ನ `ದಿ ಇಂಪಾರ್ಟನ್ಸ್ ಆಫ್ ಲಿವಿಂಗ್ಎಂಬ ಪುಸ್ತಕದ ಕೆಲವು ಅಧ್ಯಾಯಗಳನ್ನು ಅನುವಾದ ಮಾಡಿದ್ದಾರೆ. ಈ ಅನುವಾದ ಸುಂದರವಾಗಿದೆ. ಇಲ್ಲಿ ಕಣವಿಯವರು ಬರೆದಿರುವ ಬಹುಪಾಲು ಲೇಖಕರು ಉತ್ತರ ಕರ್ನಾಟಕದವರು ಎನ್ನುವುದು ಕುತೂಹಲಕಾರ.

ಕಣವಿಯವರ ಶೈಲಿ ತಿಳಿನೀರಿನಂತೆ ಪಾರದರ್ಶಕವಾಗಿರುವಂಥದ್ದು. ಅದು ಅವರ ಎಂದಿನ `ಸದ್ಭಾವದಿಂದ ಇನ್ನಷ್ಟು ಕಳೆಗಟ್ಟಿದೆ.

ಶೀರ್ಷಿಕೆ: ಸದ್ಭಾವ ಲೇಖಕರು: ಚೆನ್ನವೀರ ಕಣವಿ ಪ್ರಕಾಶಕರು: ಸಂವಹನ ಪುಟಗಳು: 216 ಬೆಲೆ:ರೂ.150/-

ಕೃಪೆ : ಪ್ರಜಾವಾಣಿ

ಮಡುಗಟ್ಟಿದ ಮಾನವ ಪ್ರೀತಿ

elli-hodalu-eeke1

ಪ್ರಗತಿಯತ್ತ ದಾಪುಗಾಲು ಹಾಕುತ್ತಿರುವ ಸಾಮಾಜಿಕ ವ್ಯವಸ್ಥೆಗೆ ಪೂರಕವಾಗಿ ವ್ಯಾವಹಾರಿಕ ಸಂಬಂಧಗಳು ಬಲಗೊಳ್ಳುತ್ತಾ ಭಾವನಾತ್ಮಕ ಸಂಬಂಧಗಳ ಕೊಂಡಿ ಕಳಚಿಕೊಳ್ಳುತ್ತಿರುವುದನ್ನು ತಡೆಯುವುದು ಅನಿವಾರ್ಯವೆಂಬ ಎಚ್ಚರಿಕೆಯನ್ನು ಗುಂಡಣ್ಣ ಕಲಬುರ್ಗಿ `ಎಲ್ಲಿ ಹೋದಳು ಈಕೆಕವನ ಸಂಕಲನದಲ್ಲಿ ನೀಡಿದ್ದಾರೆ. ಬೆಳಗು ಜಗದ ಕತ್ತಲನ್ನು ಕರಗಿಸದಿರುವ ಪರಿಣಾಮದಿಂದ ಹಿರಿಯರು ಹೆಜ್ಜೆ ಇಟ್ಟ ಹೆದ್ದಾರಿ ಇಂದು ತಿರುವು ಪಡೆದು ಹಿಂಸಾಮಾರ್ಗಗಳಾಗಿ ಕವಲೊಡೆದು ಬದಲಾಗಿರುವುದಕ್ಕೆ ಕವಿಮನ ತಲ್ಲಣಿಸಿದೆ.

ಧರ್ಮದ ಹುಟ್ಟಿನ ಉದ್ದೇಶ ಭಾವನೆಗಳನ್ನು ಬೆಸೆದು ಆತ್ಮ ಪರಮಾತ್ಮರ ನಡುವಿನ ಅಂತರವನ್ನು ಕಡಿಮೆ ಮಾಡುವುದಕ್ಕಾಗಿ, ಆದರೆ ಪ್ರಸ್ತುತ ಪರಿಸರದಲ್ಲಿ ಧರ್ಮವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ಭಾವನೆಗಳನ್ನು ಭಿನ್ನಗೊಳಿಸುತ್ತಿರುವ ಅವ್ಯವಸ್ಥೆಯನ್ನು ವಿಡಂಬಿಸುವ ಆಶಯ ಹೊಂದಿರುವ ಕವನಗಳು ಈ ಸಂಕಲನದ ಪೂರ್ವಾರ್ಧದಲ್ಲಿ ಪ್ರಮುಖವಾಗಿವೆ. ಹನ್ನೆರಡನೇ ಶತಮಾನದಲ್ಲಿ ಮಾನವೀಯ ಮೌಲ್ಯಗಳನ್ನು ಜೀವಾಳವನ್ನಾಗಿಸಿಕೊಂಡು ಸಾಮಾಜಿಕ ಕ್ರಾಂತಿ ಮಾಡಿದ ಬಸವ ತತ್ವಗಳು ಸ್ವಾರ್ಥಿಗಳಿಂದ ಬದಲಾಗಿ ಸಾಮಾಜಿಕ ಭ್ರಾಂತಿಗಾಗಿ ಬಳಕೆಯಾಗುತ್ತಿರುವುದನ್ನು ಕವಿ ಕಂಡರಿಸುವುದು ಹೀಗೆ:

`ನಿನ್ನ ಸುತ್ತ ನೀರು ನಿಲ್ಲಿಸಿದ್ದು

ನಿರ್ಮಲತೆಗೆ ಧಕ್ಕೆ ಮಾಡಿದ್ದು –

ಸ್ಥಾವರಗಳ ಹಾವಳಿ ಕಂಡು

ಕರ್ಮಪಿಂಡದ ವಾಸನೆ ನೋಡಿ

ಬೇಸರ ಬಂತು ಬಸವಾ ಬೇಸರ ಬಂತು!

ದೀಪವಾಗಿ ಬೆಳಗಿದ ಬಸವಣ್ಣನ ವಿಚಾರಗಳನ್ನು ದ್ವೀಪವನ್ನಾಗಿಸುತ್ತಿರುವವರನ್ನು ಎಚ್ಚರಿಸುವ `ಬೇಸರವಿದೆ ಬಸವಾಕವನದ ಪ್ರತಿಯೊಂದು ಸಾಲು ಧರ್ಮ ರಕ್ಷಣೆಗಾಗಿ ಬಟ್ಟೆ ಬದಲಾಯಿಸಿಕೊಂಡು ಭಕ್ತಾದಿಗಳ ಗುಂಪು ಕಟ್ಟುತ್ತಿರುವ ಮನಕ್ಕೆ ಕನ್ನಡಿ ಹಿಡಿಯುತ್ತಾ ಮುಂದುವರಿಯುತ್ತವೆ.

ವಚನಕಾರರ ವಾಣಿ ಇಂದು `ಭಯವೇ ಧರ್ಮದ ಮೂಲಎಂದು ಬದಲಾಗಿ ಹಿಂಸಾತ್ಮಕ ಮಾರ್ಗದ ಮೂಲಕ ಧರ್ಮದ ರಕ್ಷಣೆ ನಡೆಯುತ್ತಿರುವುದನ್ನು ಮತ್ತು ಎಲ್ಲೆಡೆಯೂ ಗೋಮುಖ ವ್ಯಾಘ್ರರೇ ಹೆಚ್ಚಾಗುತ್ತಾ ಕ್ರೌರ್ಯ ಜಗತ್ತನ್ನು ಆಳುತ್ತಿರುವುದನ್ನು ಕವಿ ಖಂಡಿಸುತ್ತಾ ಅದರ ದರ್ಶನವನ್ನು ಹೀಗೆ ಮಾಡಿಸುತ್ತಾರೆ.

`ಎದೆಹಾಲ ಕುಡಿಸಿದ ಹಡೆದವ್ವನ ಕೊಲ್ಲುತಾರ / ಹಡೆದ ಕುಡಿಯ ಕೊಲ್ಲುತಾಳ, ಕಳ್ಳ ಹರಿದು ಚೆಲ್ಲುತಾಳ

ಮಾನವನ ಮನಸ್ಸಿನಲ್ಲಿ ಮೃದುತ್ವದ ಕಲ್ಪನೆಯೇ ಮೂಡದಂತೆ ಮಾಡುತ್ತಿರುವ ಮಲಿನ ಮನಸ್ಸುಗಳನ್ನು ತಿಳಿಗೊಳಿಸುವುದಕ್ಕೆ ಸಹಾಯಕವಾಗುವಂತೆ ಕವಿ ಕೇಳಿಕೊಳ್ಳುವುದು ಶಿವನನ್ನು. ಸಾಮಾಜಿಕ ಸ್ಥಿರತೆಯನ್ನು ಸಡಿಲಗೊಳಿಸುತ್ತಿರುವ ಮನಸ್ಸುಗಳನ್ನು ಪರಿವರ್ತಿಸಿ ಅವುಗಳ ನಡುವೆ ಬಾಂಧವ್ಯದ ಬೆಸುಗೆ ಹಾಕುವ ಆಶಯದ ಹಲವು ಕವನಗಳಲ್ಲಿ ಜೀವನ ಪ್ರೀತಿ ಪರವಾದ ಕಳಕಳಿಯ ವಿನಂತಿ ಪ್ರತಿಧ್ವನಿಸಿದೆ. ಪ್ರೀತಿ ಕಳೆದುಕೊಂಡು ನೀತಿಬಾಹಿರ ಕೈಗಳ ಹಿಡಿತಕ್ಕೆ ಸಿಕ್ಕಿ ನೋವುಂಡವರ ಬಗ್ಗೆ ಕವಿ ಹೃದಯ ಮಿಡಿದಿದೆ.

ವಿಶ್ವ ಮಾನವ ಪ್ರಜ್ಞೆ ಮೂಡಿಸುವ ಕನಸು ಕಂಡ ಕುವೆಂಪು, ಹುಟ್ಟಿ ಬೆಳೆದ ಪರಿಸರ ಕಂಡು ಭಾವಪರವಶರಾದ ಗುಂಡಣ್ಣನವರು ಕುಪ್ಪಳ್ಳಿ ಪರಿಸರದ ಪ್ರಶಂಸೆಯೊಂದಿಗೆ ಕವಿ ನಮನ ಅರ್ಪಿಸುವ ಮತ್ತು ಕಲಾಂ ಅವರ ವ್ಯಕ್ತಿತ್ವಕ್ಕೆ ಮರುಳಾಗಿ ಅವರನ್ನು ವಸ್ತುವನ್ನಾಗಿಸಿಕೊಂಡ ಕವನಗಳು ಗಮನ ಸೆಳೆಯುತ್ತವೆ.

ಬದಲಾಗುತ್ತಿರುವ ಬದುಕಿನ ಕಕ್ಷೆಯ ಸುತ್ತ ತಿರುಗುವ ಕವಿ ಭಾವ, ಮನದಲ್ಲಿ ಮನೆ ಮಾಡಿಕೊಂಡು ಜಗತ್ತನ್ನು ಆಳುತ್ತಿರುವ ಕ್ರೂರತೆಯ ನಾಶಕ್ಕಾಗಿ ಕರೆ ನೀಡುತ್ತದೆ. ದೈನಂದಿಕ ತಲ್ಲಣಗಳಿಂದ ಆಗುತ್ತಿರುವ ಅನಾಹುತಗಳಲ್ಲಿ ಹತಾಶರಾದವರ ಬಗ್ಗೆ ಅನುಕಂಪವಿದೆ. ಮಾನವ ಪ್ರೀತಿಯನ್ನು ಮರೆತ, ಪ್ರಗತಿಪರ ಧೋರಣೆಗಳೊಂದಿಗೆ ಎಂದೂ ರಾಜಿ ಮಾಡಿಕೊಳ್ಳದ ಕವಿ, ಬದುಕನ್ನು ಬೆಸೆಯುವ ಮನಸ್ಸುಗಳನ್ನು ರೂಪಿಸುವಲ್ಲಿ ಕಾವ್ಯ ನೆರವಾಗಬೇಕೆಂದು ಬಯಸಿದ್ದಾರೆ. ಜೀವ ವಿರೋಧಿ ವ್ಯವಸ್ಥೆಯ ವಿರುದ್ಧದ ಬಂಡಾಯ ಧ್ವನಿಗಿಂತ ಹೆಚ್ಚಾಗಿ ನೈತಿಕತೆಯೆಡೆಗೆ ಮನ ಪರಿವರ್ತಿಸುವ ಭಾವನಾತ್ಮಕ ಸೂಚನೆಗಳು ಕವನಗಳಲ್ಲಿವೆ.

ಸೈಯದ್ ಝಮೀರುಲ್ಲಾ ಷರೀಫ್

ಶೀರ್ಷಿಕೆ: ಎಲ್ಲಿ ಹೋದಳು ಈಕೆ ಲೇಖಕರು: ಗುಂಡಣ್ಣ ಕಲಬುರ್ಗಿ ಪ್ರಕಾಶಕರು: ಸೌಜನ್ಯ ಪ್ರಕಾಶನ ಪುಟಗಳು: 110 ಬೆಲೆ:ರೂ.100/-

ಕೃಪೆ : ಪ್ರಜಾವಾಣಿ

ಹೆಲ್ತ್ ಕೇರ್

scan0038

ಆರೋಗ್ಯ ಸಂಬಂಧಿ ಲೇಖನಗಳು ಯಾವತ್ತೂ ಸಕಾಲಿಕವಾದದ್ದರಿಂದ ಅವು ಸಾರ್ವಕಾಲಿಕವೂ! ಹಾಗಂತ ಅನಾರೋಗ್ಯದ ಬಗ್ಗೆ ಆರೋಗ್ಯಕರ ಲೇಖನಗಳನ್ನು ಬರೆಯುವುದು ಸುಲಭವೇನಲ್ಲ. ಸರಳತೆ ಮತ್ತು ಸ್ಪಷ್ಟತೆ ಅಲ್ಲಿ ಬಹಳ ಮುಖ್ಯ. ಇಂತಹ ಪುಸ್ತಕಗಳಿಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ. ಕಾಯಿಲೆಗಳ ಬಗೆಗಿನ ಸಂಶಯ, ಪ್ರಶ್ನೆಗಳನ್ನು ನಿವಾರಿಸಿ ಸಮಾಧಾನ ನೀಡುವಲ್ಲಿ ಇವುಗಳ ಪಾಲು ದೊಡ್ಡದು. ಆರು ಭಾಗಗಳಲ್ಲಿ ಹರಡಿಕೊಂಡಿರುವ ಈ ಪುಸ್ತಕದಲ್ಲಿ ಕಣ್ಣಿನ ನಾನಾ ತೊಂದರೆಗಳ ಬಗ್ಗೆಯೇ ಇಪ್ಪತ್ತು ಲೇಖನಗಳಿವೆ. ಪತ್ರಿಕೆಯಲ್ಲಿ ಆಗಾಗ ಪ್ರಕಟವಾಗಿರುವ ಈ ಲೇಖನಗಳು, ಪುಸ್ತಕದಲ್ಲಿ ಒಟ್ಟಾಗಿ ಒಂದು ತರಹದ ಸಮಗ್ರತೆ ಪ್ರಾಪ್ತವಾಗಿದೆ. ಕೆಲವು ಲೇಖನಗಳಿಗೆ ಚಿತ್ರ ಸಹಾಯವೂ ಇರುವುದು ಓದಿಗೆ ಉಪಯೋಗಕಾರಿ. ನಾನಾ ಕಾಯಿಲೆಗಳ ಬಗೆಗಿನ ಪ್ರಾಥಮಿಕ ಮಾಹಿತಿ ಇಲ್ಲಿ ಸಿಗುತ್ತದೆ. ಪ್ರತಿ ಲೇಖನದಲ್ಲೂ ಉಪಶೀರ್ಷಿಕೆಗಳನ್ನು ನೀಡುತ್ತಾ, ಬಹಳ ಸ್ಪಷ್ಟವಾಗಿ, ಬಿಡಿಬಿಡಿಯಾಗಿ ವಿವರಗಳಿರುವುದು ಈ ಪುಸ್ತಕದ ವೈಶಿಷ್ಟ್ಯ.

ಶೀರ್ಷಿಕೆ: ಹೆಲ್ತ್ ಕೇರ್ ಲೇಖಕರು: ಪ್ರಕಾಶ್ ಹೆಬ್ಬಾರ ಪ್ರಕಾಶಕರು: ವಿಕ್ರಂ ಪ್ರಕಾಶನ ಪುಟಗಳು: 180 ಬೆಲೆ:ರೂ.95/-

ಕೃಪೆ : ವಿಜಯ ಕರ್ನಾಟಕ

ಕಣ್ಣ ಕಣಿವೆ

scan0037

ರೇಣುಕಾ ನಿಡಗುಂದಿ ದೆಹಲಿಯಂತಹ ಮಹಾನಗರದಲ್ಲಿ ಕುಳಿತು ಕನ್ನಡ ಕವಿತೆ ಬರೆಯುತ್ತಿರುವವರು. ಆದ್ದರಿಂದ, ಸಹಜವಾಗಿ, ಅವರಿಗೆ ಹೀಗೆನಿಸುತ್ತದೆ; ` … ನಮ್ಮದೆನ್ನುವ ಎಲ್ಲದರಿಂದಲೂ ದೂರವಿರುವ ಹೊರನಾಡಿನಲ್ಲಿ ನಮ್ಮ ನೋವು, ನಲಿವುಗಳನ್ನು ಸಂತೈಸಿಕೊಳ್ಳುತ್ತ, ಹೊರಗಿನ ಆರ್ಭಟ, ರೀತಿ ನೀತಿಗಳಿಗೆ ಒಗ್ಗಿಕೊಳ್ಳುತ್ತ ನಮ್ಮ ಸಾಹಿತ್ಯಾಸಕ್ತಿ ಅಮೂರ್ತವಾದ ಅದೇನನ್ನೋ ಕಂಡುಕೊಳ್ಳುವ ನಿರಾಳ ಮನಸ್ಸಿನ ಚಿಂತನೆಯ ಒಂದು ಅಪೂರ್ವ ಹಂತದಲ್ಲಿ ಕಾವ್ಯ ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ’. ಹೀಗೆ ಹುಟ್ಟಿ ಸೂಕ್ಷ್ಮಾಭಿವ್ಯಕ್ತಿಯ ಈ ತುಣುಕು ಗಮನಿಸಿ : ತೋರುತ್ತದೆ ಒಮ್ಮೊಮ್ಮೆ / ವ್ಯಥೆಯೂ ಸಣ್ಣಗೆ / ಕೊರಕಲಿನಲ್ಲಿ ಹರಿಯುವ / ನಿರ್ಜಲದಂತೆ / ಹೀಗೆ ಕೊರೆಯುತ್ತಲೇ / ಕರುಳಲ್ಲಿ ಮುಳ್ಳಾಡಿಸಿದಂತೆ / ಅಳತೆ ಮೀರಿ ಆಳವಾಗಿ / ಸಿಗಿದು ಸೀಳಿ ಒಗೆದಂತೆ / ಉಣಿಸಲಾರದ ತುತ್ತು ಕೈಜಾರಿ ಹೋದಂತೆ / ಹನಿಸಲಾರದ ನೀರು – ವ್ಯರ್ಥ ನೆಲ ಸೇರಿದಂತೆ… (ಚಿಂತೆ ಮತ್ತು ಚಿತೆ)

ಶೀರ್ಷಿಕೆ: ಕಣ್ಣ ಕಣಿವೆ ಲೇಖಕರು: ರೇಣುಕಾ ನಿಡಗುಂದಿ ಪ್ರಕಾಶಕರು: ಪ್ರಗತಿ ಗ್ರಾಫಿಕ್ಸ್ ಪುಟಗಳು: 80 ಬೆಲೆ:ರೂ.50/-

ಕೃಪೆ :ವಿಜಯ ಕರ್ನಾಟಕ

ಕನ್ನಡಿಗರ ಕೈಗೆ `ಜನರ ಚರಿತ್ರೆ’

poorvethihaasa-cp

‘People’s History of India’ ಯೋಜನೆ ಪ್ರೊ. ಇರ್ಫಾನ್ ಹಬಿಬ್ ರ ನೇತೃತ್ವದಲ್ಲಿ ಆರಂಭವಾಗಿ ಈಗಾಗಲೇ ಅದರ ಅಡಿಯಲ್ಲಿ ಆರು ಸಂಪುಟಗಳು ಪ್ರಕಟಗೊಂಡಿವೆ. ಈ ಮಾಲಿಕೆಯ ಮೊದಲ ಕೃತಿ, ಹಬೀಬರೇ ರಚಿಸಿರುವ Pre History ಕನ್ನಡಕ್ಕೆ ಅನುವಾದಗೊಂಡಿದೆ. ಪ್ರದೀಪ್ ಬೆಳಗಲ್ ಅನುವಾದಿತ ಕೃತಿ ಪೂರ್ವೇತಿಹಾಸ ವನ್ನು ಚಿಂತನ ಪುಸ್ತಕಪ್ರಕಾಶಕರು ಕನ್ನಡದ ಓದುಗರ ಕೈಗಿತ್ತಿದ್ದಾರೆ.

ಪೀಪಲ್ಸ್ ಹಿಸ್ಟರಿ ಸಂಪುಟಗಳು ಹೆಸರೇ ಸೂಚಿಸುವಂತೆ ಜನರಚರಿತ್ರೆಯನ್ನು ಹೇಳುವ ಉದ್ದೇಶವನ್ನು ಹೊಂದಿರುತ್ತವೆ. ಹಲವು ದೇಶಗಳಲ್ಲಿ ಆಯಾ ದೇಶದ ಜನರ ಚರಿತ್ರೆಯನ್ನು ಕಟ್ಟಿಕೊಡುವ ಪ್ರಯತ್ನಗಳನ್ನು ಚರಿತ್ರೆಕಾರರು ಮಾಡುತ್ತಾ ಬಂದಿದ್ದಾರೆ. ಭಾರತದ ಈ ಸಂಪುಟಗಳ ಜವಾಬ್ದಾರಿ ಹೊತ್ತಿರುವ ಹಬೀಬರಿಗೆ ಕೆಲವು ಖಚಿತವಾದ ಗುರಿಗಳಿವೆ. ಕೋಮುವಾದಿ ಇತಿಹಾಸವನ್ನು ತೊಡೆದು ವೈಜ್ಞಾನಿಕ ಇತಿಹಾಸವನ್ನು ರಚಿಸುವುದು ತಮ್ಮ ಉದ್ದೇಶವೆಂಬುದನ್ನು ತಮ್ಮ ಪ್ರಸ್ತಾವನೆಯಲ್ಲೇ ಅವರು ಹೇಳಿಕೊಳ್ಳುತ್ತಾರೆ.

ಯಾವುದೇ ಒಂದು ಕಾಲಮಾನದ ಚರಿತ್ರೆ ಸ್ವತಂತ್ರವಾಗಿ ಘಟಿಸುವುದಿಲ್ಲ. ಮನುಕುಲದ ಚರಿತ್ರೆಯಲ್ಲಿ ನಿರಂತರತೆ ಇರುತ್ತದೆ. ಈ ನಿರಂತರತೆಯನ್ನು ಗ್ರಹಿಸಿದಾಗ ಇಂದು ಚರಿತ್ರೆ ರಾಜಕೀಯ ಉದ್ದೇಶಕ್ಕೆ ಬಳಕೆಯಾಗುವ ಅಥವಾ ರಾಜಕೀಯ ಉದ್ದೇಶದಿಂದ ರಚಿತವಾಗುವ ಅಪಾಯವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಸಮಕಾಲೀನ ಭಾರತದ ಸಮಸ್ಯೆಗಳಿಗೆ ಚರಿತ್ರೆಯ ತಪ್ಪು ಗ್ರಹಿಕೆಗಳೂ ಕಾರಣವಾಗಿವೆ. ಈ ಗ್ರಹಿಕೆಗಳನ್ನು ಕೇವಲ ವಿದ್ವತ್ ಪ್ರಪಂಚ ತನಗೆ ತಾನೇ ನಿವಾರಿಸಿಕೊಂಡರೆ ಸಾಲದು. ಅದನ್ನು ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿಯೂ ಬೇಕಾಗಿದೆ. ಆರ್ಯರು, ದ್ರಾವಿಡರು ಎಂಬ ಜನಾಂಗ ಕಲ್ಪನೆಗಳು, ಆರ್ಯರು ಭಾರತ ಮೂಲದವರೇ ಅಥವಾ ಹೊರಗಿನಿಂದ ಬಂದವರೇ ಎಂಬ ಮುಂದುವರಿದ ಚಾರಿತ್ರಿಕ ಊಹೆಗಳು, ಭಾಷಾ ಮೂಲ, ಜನಾಂಗ ಮೂಲವನ್ನು ಹೇಳಿಕೊಳ್ಳುತ್ತಾ ಪ್ರತಿಷ್ಠೆಯ ಅಥವಾ ಕೀಳರಿಮೆಯ ಭಾವನೆಯನ್ನು ಅನುಭವಿಸುವುದು ಇವೆಲ್ಲ ವಿದ್ವತ್ ಪ್ರಪಂಚದಾಚೆಗೂ ಜನರ ಒಳಗೆ ಆಳವಾಗಿ ಬಿಟ್ಟ ಬೇರುಗಳಾಗಿವೆ. ಶತಮಾನಗಳ ಚರಿತ್ರೆಯನ್ನು ಗಮನಿಸಿದಾಗ ಮಾನವನ ಬೆಳವಣಿಗೆ, ಹಿಂಜರಿಕೆ, ವಲಸೆ ಇವೆಲ್ಲವೂ ಒಂದಕ್ಕೊಂದು ಹೆಣೆದುಕೊಂಡ ಘಟನೆಗಳಾಗಿರುತ್ತವೆ. ಇಂತಹ ಒಂದು ಅದ್ಭುತವಾದ ಪ್ರವೇಶಿಕೆ ಪೂರ್ವೇತಿಹಾಸ ಕೃತಿಯ ಮೂಲಕ ದೊರೆಯುತ್ತದೆ.

ಭಾರತದ ಚರಿತ್ರೆಯನ್ನು ತಿಳಿಸುವುದೇ ಹಬೀಬರ ಉದ್ದೇಶವಾಗಿದ್ದರೂ ಅದನ್ನು ಭಾರತದ ಭೂಭಾಗ ತನ್ನ ಸ್ವರೂಪವನ್ನು ಪಡೆದುಕೊಳ್ಳುವಲ್ಲಿಂದ ಆರಂಭಿಸುತ್ತಾರೆ. ಅಂದರೆ 4600 ದಶಲಕ್ಷ ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತಾರೆ.

ಭೂಮಿಯ ಪದರಗಳ ಚಲನೆ ಭೌಗೋಳಿಕ ಸ್ವರೂಪವನ್ನು ತಂದುಕೊಡುತ್ತಾ ಜೊತೆ ಜೊತೆಯಲ್ಲಿ ಪ್ರಾಣಿ ಮತ್ತು ಸಸ್ಯ ಸಂಕುಲಗಳನ್ನು ವಿವಿಧ ಖಂಡಗಳಲ್ಲಿ ಹಂಚಿ ಹೋಗುವಂತೆ ಮಾಡುತ್ತಾ ಬಂದಿದೆ. ಭೌಗೋಳಿಕ ಮೇಲ್ಮೈಯಲ್ಲಿ ಹಿಮಾಲಯ, ತಪ್ಪಲಿನ ಗಂಗಾ, ಸಿಂಧೂ ನದಿಗಳ ರಚನೆಯನ್ನು ವಿವರಿಸುತ್ತಾರೆ. ಇಂತಹ ಭೌಗೋಳಿಕ ಮೇಲ್ಮೈ ಲಕ್ಷಣ ವಾತಾವರಣವನ್ನು ನಿರ್ಮಿಸಿತು. ಹೀಗೆ ಭೂರಚನೆ ಮನುಕುಲದ ವಿಕಾಸಕ್ಕೆ ಕಾರಣವಾಗುತ್ತದೆ.

ಆಫ್ರಿಕಾದಲ್ಲಿ ವಿಕಾಸಗೊಂಡ ಆದಿಮಾನವ ಉಳಿದ ಭಾಗಗಳಿಗೆ ವಿಸ್ತರಿಸುತ್ತಾ ಕಲ್ಲಿನ ಉಪಕರಣಗಳನ್ನು ಬಳಕೆ ಮಾಡುತ್ತಾ ದೈಹಿಕವಾಗಿ ಆಧುನಿಕ ಮಾನವನ ಸ್ವರೂಪವನ್ನು ಪಡೆದುಕೊಳ್ಳುತ್ತಾನೆ. ಮಧ್ಯಶಿಲಾಯುಗ ಸಂಸ್ಕೃತಿಯಲ್ಲಿ ಮಾನವ ಕಲ್ಲಿನ ಅಯುಧಗಳನ್ನು ಸಾಕಷ್ಟು ಸೂಕ್ಷ್ಮವಾಗಿ ಬಳಸಲಾರಂಭಿಸಿದನು. ಈ ಕುರುಹುಗಳು ನಮ್ಮ ಸುತ್ತಲ ಪರಿಸರದಲ್ಲಿ ಕಾಣಬರುತ್ತದೆಂಬುದು ಪುಳಕಗೊಳಿಸುತ್ತದೆ. ಹೀಗೆ ಪ್ರಾಣಿಗಳನ್ನು ಸಾಕುತ್ತಾ ಬೇಟೆಯಾಡುತ್ತ ಬದುಕಿದ್ದ ಮಾಣವರು ಭೀಂಬೆಟ್ಕದಂತಹ ಪ್ರದೇಶದ ಬಂಡೆಗಳ ಮೇಲೆ ಬಿಡಿಸಿರುವ ಚಿತ್ರಗಳು ಅವನ ದಾಖಲೀಕರಣಗಳಾಗಿವೆ.

ಈ ಕೃತಿಯ ಮುಖ್ಯಭಾಗ ನವಶಿಲಾಯುಗ ಕ್ರಾಂತಿ. ಕೃಷಿಗೆ ಸಂಬಂಧಿಸಿದಂತೆ ಪ್ರಮುಖ ಬೆಳೆವಣಿಗೆ ಈ ಸಂದರ್ಭದಲ್ಲಿ ಆದುದನ್ನು ಗೊರ್ಡಾನ್ ಚೈಲ್ಡ್ರು ಗುರುತಿಸಿರುವುದನ್ನು ಹಬೀಬರು ಅನುಮೋದಿಸುತ್ತಾರೆ. ಕೃಷಿಯ ಬೆಳವಣಿಗೆ ಉತ್ಪಾದನೆ- ಅದರ ಹೆಚ್ಚಳ, ಶೇಖರಣೆ, ಅದರ ಮೇಲಿನ ಒಡೆತನ ಹೀಗೆ ಸಾಮಾಜಿಕ ವರ್ಗಗಳ ಬೆಳವಣಿಗೆಗೂ ಕಾರಣವಾಯಿತು. ಕಾಲಮಾನ ಕ್ರಿ.ಪೂ.7000ದಿಂದ 3800ರ ನಡುವೆ ಮೆಹರ್ಘಡದಲ್ಲಿ ಅಂದರೆ ಪಾಕಿಸ್ತಾನದ ಪ್ರದೇಶದಲ್ಲಿ ಗುರುತಿಸುತ್ತಾರೆ.

ನವಶಿಲಾಯುಗದ ತಂತ್ರಗಳು ಆಫಘಾನಿಸ್ತಾನದಾದ್ಯಂತ ಹರಡಿ ಅವುಗಳ ಸಿಂಧೂ ಬಯಲಿನ ಪ್ರದೇಶಕ್ಕೆ ರಂಗ ಸಿದ್ಧವಾಗಿತ್ತು ಎಂದು ಹೇಳುವ ವಾದ ಸಿಂಧೂ ನಾಗರಿಕತೆಯ ಹುಟ್ಟಿಗೆ ಪೂರ್ವ ವೇದಿಕೆಯನ್ನು ಹಾಕುತ್ತದೆ. ಮೆಹರ್ಘಡದ ಮೂರು ಹಂತದ ಬೆಳವಣಿಗೆ ಅಂದರೆ ನವಶಿಲಾಯುಗ, ತಾಮ್ರಶಿಲಾಯುಗ ಹಾಗೂ ಕಂಚಿನಯುಗದ ಬೆಳವಣಿಗೆ ರೋಚಕವೆನಿಸುತ್ತದೆ. ಸಂಶೋಧಕರು ಇಲ್ಲಿ ದೊರಕಿರುವ ವಸ್ತುಗಳ ಆಧಾರದ ಮೇಲೆ ಜನರ ವಯೋಮಿತಿ ಇತ್ಯಾದಿಗಳನ್ನು ಪರಿಶೀಲಿಸುವ ರೀತಿ ಚರಿತ್ರೆಯ ವಸ್ತು ವಿಷಯಕ್ಕೆ ಜನರನ್ನು ಸೆಳೆದು ಹಿಡಿಯುವಲ್ಲಿ ಸಮರ್ಥವಾಗಿ ಕಾಣಬರುತ್ತದೆ.

ಈ ಕೃತಿಯ ಟಿಪ್ಪಣಿಗಳೂ ಅಷ್ವೇ ಮುಖ್ಯವಾದವು, ಪೂರ್ವೇತಿಹಾಸ, ಅದರಲ್ಲೂ ಕಾಲಗಣನೆಯ ಪದ್ಧತಿಯ ವಿವರಣೆ ಹಾಗೂ ಸರಸ್ವತಿ ನದಿಯ ವಿಚಾರಗಳು ಗಮನ ಸೆಳೆಯುತ್ತವೆ. ಸರಸ್ವತಿ ನದಿಯವಾದ ಕೇವಲ ಶೈಕ್ಷಣಿಕ ಕುತೂಹಲವಾಗದೆ ಹಿಂದೂವಾದದ ತಳಹದಿಯಿಂದ ಮೂಡಿಬಂದ ವಾದವಾಗಿರುವುದರಿಂದ ಶೀಘ್ರ ತೀರ್ಮಾನಕ್ಕೆ ಎಳೆದೊಯ್ದ ಈ ವಿಚಾರಕ್ಕೆ ಇಡೀ ಕೃತಿಯೇ ಉತ್ತರವಾಗಿ ನಿಂತಂತೆ ಕಂಡು ಬರುತ್ತದೆ.

ಪ್ರೋ. ಇರ್ಫಾನ್ ಹಬೀಬರು ಮಹಾನ್ ಇತಿಹಾಸಕಾರರಲ್ಲಿ ಒಬ್ಬರು. ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು. ‘Agrarian System of Moghul India’ ದ ಮೂಲಕ ಹೆಸರುವಾಸಿಯಾದವರು. ಆರ್ಥಿಕ ಇತಿಹಾಸದಲ್ಲಿ ವಿಶೇಷ ಒಲವನ್ನು ಹೊಂದಿದ್ದವರು. ಮಾರ್ಕ್ಸ್ ವಾದಿ ಚಿಂತಕರಾದ ಇವರು ನಿರಂತರವಾಗಿ ಕೋಮುವಾದ-ವಿರೋದಿ ಚಳವಳಿಯಲ್ಲಿ ತೊಡಗಿಕೊಂಡವರು. ‘People’s History of India’ ಯೋಜನೆಗೆ ಮಧ್ಯಪ್ರದೇಶ ಸರ್ಕಾರ ಸಹಾಯವನ್ನು ನೀಡಿದ್ದು ಅದನ್ನು ಪಠ್ಯವಾಗಿ ಸ್ವೀಕರಿಸುವ ಉದ್ದೇಶವನ್ನು ಹೊಂದಿದೆ.

ಪ್ರದೀಪ್ ಬೆಳಗಲ್ ಅವರು ಕ್ಲಿಷ್ಟವಾದ, ಸಾಕಷ್ಟು ತಾಂತ್ರಿಕ ಉಕ್ತಿಗಳುಳ್ಳ ಈ ಕೃತಿಯನ್ನು ಸಾಕಷ್ಟು ಸರಾಗವಾಗಿಯೇ ಅನುವಾದ ಮಾಡಿದ್ದಾರೆ. ಒಟ್ಟಿನಲ್ಲಿ ಉತ್ತಮ ಕೃತಿಯನ್ನು ಕನ್ನಡಕ್ಕೆ ತಂದುಕೊಟ್ಟ ಶ್ರಮದ ಹಿಂದಿನ ಎಲ್ಲರನ್ನು ಅಭಿನಂದಿಸುತ್ತೇನೆ.

ಡಾ. ವಸು ಎಂ. ವಿ.

ಶೀರ್ಷಿಕೆ: ಪೂರ್ವೇತಿಹಾಸ ಲೇಖಕರು: ಇರ್ಫಾನ್ ಹಬಿಬ್ ಪ್ರಕಾಶಕರು: ಚಿಂತನ ಪುಸ್ತಕ ಪುಟಗಳು : 112 ಬೆಲೆ: ರೂ.80/-

ಕೃಪೆ : ಉದಯವಾಣಿ

ಚೆಲುವಿನ ಚಿತ್ತಾಲ

scan0031-1

ಮುಂಬಯಿ ಮತ್ತು ಹನೇಹಳ್ಳಿಗಳ ನಡುವೆ ಸುಳಿವ ಆತ್ಮಗಳನ್ನು ಪಾತ್ರ ಮಾಡುವ ಕತೆಗಾರ ಯಶವಂತ ಚಿತ್ತಾಲ. ಕತೆಗಾರರಾಗಿ ಹೆಸರಾದರೂ ಅವರು ಕತೆಗಳ ಬಗ್ಗೆ ಅತ್ಯುತ್ತಮವಾಗಿ ಮಾತಾಡಬಲ್ಲರು, ಬರೆಯಬಲ್ಲವರು. ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಸಮಾರಂಭವೊಂದಕ್ಕೆ ಬಂದಿದ್ದಾಗ ಅವರು ಮಾಡಿದ ಭಾಷಣವನ್ನು ಸಾಹಿತ್ಯಾಸಕ್ತರು ಮರೆತಿಲ್ಲ.

ಆ ಭಾಷಣದ ಪೂರ್ಣಪಾಠವೂ ಸೇರಿದಂತೆ ಚಿತ್ತಾಲರು ಬರೆದ ಅನೇಕ ಲೇಖನಗಳನ್ನು ಸಂಕಲಿಸಿ, `ಅಂತಃಕರಣವನ್ನು ಇದೀಗ ಹೊರತರಲಾಗಿದೆ. ಇದರಲ್ಲಿ ಚಿತ್ತಾಲರು ಅನೇಕ ಕಡೆ ಮಾಡಿದ ಭಾಷಣಗಳಿವೆ. `ಓದುವ ಕೋಣೆಯಲ್ಲಿವಿಭಾಗದಲ್ಲಿ ಅವರನ್ನು ಪ್ರಭಾವಿಸಿದ ಲೇಖಕರ, ಗೆಳೆಯರ, ನೆಂಟರ ಬಗೆಗೆ ನುಡಿ ಬರಹಗಳಿವೆ. ಅವರ ಕತೆಗಳ ಪ್ರಪಂಚವಾದ ಹನೇಹಳ್ಳಿ ಕಥೇತರ ಬರಹಕ್ಕೂ ಹಬ್ಬಿಕೊಂಡಿರುತ್ತದೆ ಎನ್ನುವುದಕ್ಕೆ ಈ ಸಂಕಲನ ಸಾಕ್ಷಿ. ವಾಸ್ತವ ಮತ್ತು ಕಥಾ ಪರಿಸರವೆರಡೂ ಆಗಿರುವ ಹನೇಹಳ್ಳಿ ಇಲ್ಲೂ ನಿಮ್ಮನ್ನು ಕಾಡುತ್ತದೆ.

ಶೀರ್ಷಿಕೆ: ಅಂತಃಕರಣ ಲೇಖಕರು: ಯಶವಂತ ಚಿತ್ತಾಲ ಪ್ರಕಾಶಕರು: ಕ್ರಿಸ್ಟ್ ಯೂನಿವರ್ಸಿಟಿ, ಕನ್ನಡ ಸಂಘ ಪುಟಗಳು: 156 ಬೆಲೆ:ರೂ.110/-

ಕೃಪೆ : ಕನ್ನಡ ಪ್ರಭ

ಹಳ್ಳಿ ಥೇಟರ್ ಎಟ್ ಬೆಳ್ಳೇಕೆರೆ

scan0033-1

ರಂಗಭೂಮಿ ಬೆಂಗಳೂರಿನಿಂದ ಆಚೆ ಹೋಗಿಲ್ಲ ಎಂಬ ಭಾವನೆ ಮೂಡುವಂತೆ ಸದ್ಯದ ಸ್ಥಿತಿ ಇದೆ. ಪ್ರಕಟವಾಗುವ ಪತ್ರಿಕಾ ವಿಮಶರ್ೆಗಳಲ್ಲಿ ಬೆಂಗಳೂರಿನ ನಾಟಕಗಳೇ ತುಂಬಿರುತ್ತವೆ. ದೃಶ್ಯ ಮಾಧ್ಯಮಗಳ ಪಾಲಿಗೆ ಥಿಯೇಟರ್ ಅಕ್ಷರಶಃ `ಮೃತ ರಂಗಭೂಮಿ‘. ಬೆಂಗಳೂರಿನ ಹೊರಗೂ ರಂಗಭೂಮಿ ಇದೆ ಎಂದು ಹೇಳಲು ಆದಾರಕ್ಕೆ ನೀನಾಸಂ, ರಂಗಾಯಣಗಳನ್ನಷ್ಟೇ ಹೆಸರಿಸುತ್ತೇವೆ. ಆದರೆ ತಿಪಟೂರು, ಸಾಣೆಹಳ್ಳಿ, ಶಿವಮೊಗ್ಗ, ಉಡುಪಿಗಳಲ್ಲಿ ರಂಗಭೂಮಿಯನ್ನು ಹಲವರು ಹಚ್ಚಿಕೊಂಡು, ಬೆಳೆಸುತ್ತಿದ್ದಾರೆ. ಗ್ರಾಮೀಣ ರಂಗಭೂಮಿ ಇನ್ನೂ ಹೆಚ್ಚು ಹುಲುಸಾಗಿದೆ.

ಈ ನಿಟ್ಟಿನಲ್ಲಿ `ಬೆಳ್ಳೇಕೆರೆ ಹಳ್ಳಿ ಥೇಟರ್ಎಂಬ ಕೃತಿ ಇಲ್ಲಿ ಉಲ್ಲೇಖಾರ್ಹ. ಲೇಖಕ ಪ್ರಸಾದ್ ರಕ್ಷಿದಿ ಇದನ್ನು `ಒಂದು ಗ್ರಾಮೀಣ ರಂಗಭೂಮಿಯ ಆತ್ಮಕಥನಎಂದು ಕರೆದಿದ್ದಾರೆ. ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಬೆಳ್ಳೇಕೆರೆಯ ರಂಗಭೂಮಿ ಬೆಳೆದುಬಂದ ಕತೆಯನ್ನು ಇಲ್ಲಿ ಲೇಖಕರು ವಿವರಿಸಿದ್ದಾರಾದರೂ ಅದರ ಜೊತೆಗೇ ಊರು, ಊರ ಮಂದಿ, ಊರ ಸಂಸ್ಕೃತಿ ಮೂರ್ತಗೊಂಡಿದ್ದನ್ನು ದಾಖಲಿಸಿದ್ದಾರೆ. ಆ ಮಟ್ಟಿಗೆ ಇದೊಂದು ಸಂಸ್ಕೃತಿ ಕಥನವೂ, ಗ್ರಾಮೀಣ ಸಾಂಸ್ಕೃತಿಕ ಇತಿಹಾಸದ ದಾಖಲೆಯೂ ಆಗಿ ಕಾಣುತ್ತದೆ.

ಶೀರ್ಷಿಕೆ: ಬೆಳ್ಳೇಕೆರೆ ಹಳ್ಳಿ ಥೇಟರ್ ಲೇಖಕರು:ಪ್ರಸಾದ್ ರಕ್ಷಿದಿ ಪ್ರಕಾಶಕರು: ಅಭಿನವ ಪ್ರಕಾಶನ ಪುಟಗಳು: 205 ಬೆಲೆ:ರೂ.100/-

ಕೃಪೆ : ಕನ್ನಡ ಪ್ರಭ

ಕೆ.ಪಿ.ಕವಿತೆ

scan0036-1

ಗೆಲ್ಲಲ್ಲಿ ಕೂತ ಮಿಂಚುಳ್ಳಿ

ಪ್ರಾರ್ಥನೆ ಮಾಡುತ್ತಿರುತ್ತದೆ,

ಅದರ ಪ್ರಾರ್ಥನೆ ನನಗೆ ಗೊತ್ತು

ಕೆರೆ ಬತ್ತಬಾರದು,

ಮನುಷ್ಯರು ಮೀನು ತಿನ್ನಬಾರದು.

ಶ್ರೀ

ಬಾವಲಿ ಹಗಲಿಡೀ ತಲೆ ಕೆಳಗಾಗಿ ನೇತಿರುತ್ತದೆ.

ನಾವೂ ಅದರಂತೇ, ಗೆಲ್ಲಲ್ಲಿ ತಲೆಕೆಳಗಾಗಿ ನೇತರೆ

ಹುಲ್ಲು, ಗಿಡ, ನಾಯಿ ಎಲ್ಲ ಬೇರೆ ತರ ಕಾಣಿಸೀತು.

ಇನ್ನೂ ಎತ್ತರದಲ್ಲಿ ನೇತರೆ, ಮನುಷ್ಯರೂ

ಬೇರೆ ತರ ಕಂಡಾರು

ಹೀಗೆ ಶೀರ್ಷಿಕೆ ಇಲ್ಲದೇ ಬರೆಯಲಾದ ಕೆ.ಪಿ.ಸುರೇಶ್ ಕವಿತೆಗಳದು ಒಂದು ವಿಭಿನ್ನ ಪ್ರಯತ್ನ. ಇಲ್ಲಿ ಮನುಷ್ಯರನ್ನು ಅರ್ಥ ಮಾಡಿಕೊಳ್ಳಲು ಕವಿ ಪಶು, ಪಕ್ಷಿ, ಕ್ರಿಮಿ, ಕೀಟಗಳ ಮಾರ್ಗ ಬಳಸಿದ್ದಾರೆ. ಕಪಿ, ಗುಬ್ಬಚ್ಚಿ, ನವಿಲು, ಕೆಂಬೂತ, ಕೊಕ್ಕರೆಗಳನ್ನು, ನಾಯಿ, ಬೆಕ್ಕುಗಳನ್ನು ನಮಗೆ ವಿಭಿನ್ನವಾಗಿ ಹೊಳೆಯಿಸುತ್ತಾರೆ ಕವಿ. ಗುಬ್ಬಚ್ಚಿಗಳ ಮೇಲೆ ಬರೆದ ಕವಿತೆ ಜಾಗತೀಕರಣದ ಮೇಲಿನ ಅದ್ಭುತ ವ್ಯಾಖ್ಯಾನದಂತೆ ಕಾಣುತ್ತದೆ.

ಆದರೆ ಇಲ್ಲಿನ ಕೆಲವು ಕವಿತೆಗಳಲ್ಲಿ ಕವಿತೆ ಕಾಣೆಯಾಗಿದೆ, ಕೆಲವು ಕವಿತೆ ಪ್ರಾಣಿಗಳ ಮೇಲಿನ ಡಾಕ್ಯೂಮೆಂಟರಿಯಾಗಷ್ಟೇ ಉಳಿದಿದೆ.

ಶೀರ್ಷಿಕೆ: ಕೆ.ಪಿ.ಸುರೇಶ ಪದ್ಯಗಳು ಲೇಖಕರು: ಕೆ.ಪಿ.ಸುರೇಶ ಪ್ರಕಾಶಕರು: ಒನ್ ವೀಲರ್ ಪ್ರಕಾಶನ, ಮಣಿಪಾಲ ಪುಟಗಳು: 68 ಬೆಲೆ:ರೂ.65/-

ಕೃಪೆ : ಕನ್ನಡ ಪ್ರಭ