ಸ್ಟಾಲ್ ನಂ.462 ಪುಸ್ತಕ ಪ್ರೀತಿಗೆ ಭೇಟಿಕೊಡಿ

saahitya-sammelana-11

ಪುಸ್ತಕ ಪ್ರೀತಿ ಈಗ ಪುಸ್ತಕ ವಿತರಣೆ ಕೆಲಸವನ್ನೂ ಭರದಿಂದ ಮಾಡುತ್ತಿದೆ, ಈ ಬಾರಿ ಚಿತ್ರದುರ್ಗದಲ್ಲಿ ನಡೆಯುತ್ತಿರುವ 75ನೇ ಕನ್ನಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತನ್ನದೇ ಸ್ಟಾಲ್ ಇಟ್ಟುಕೊಳ್ಳುವ ಮೂಲಕ.

ಇತ್ತೀಚೆಗೆ 6 ವೈವಿಧ್ಯಮಯ ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ಚಿಂತನ ಪುಸ್ತಕದ ಎಲ್ಲಾ ಪುಸ್ತಕಗಳನ್ನು ಹಾಗೇ ಬೇರೆ ಬೇರೆ ಪ್ರಕಾಶನದ ಆಯ್ದ ಪುಸ್ತಕಗಳನ್ನು ಆರಿಸಲು ಸ್ಟಾಲ್ ನಂ.462 ಗೆ ಭೇಟಿಕೊಡಿ.

`ಹದ’ ಕವಿಯೊಳಗಿನ ಹದ – ಕೃಷ್ಣರ ಕಾವ ಮಾನವತೆಯ ಹದ

img029

ಕವಿ ಮಿತ್ರ ಕೃಷ್ಣ ನಾಯಕ ಹಿಚಕಡರವರು ತಮ್ಮ ಮೂರನೆಯ ಕವನ ಸಂಕಲನವನ್ನು ಓದುಗರ ಮುಂದಿಡಲು ಸಿದ್ಧರಾಗಿರುವುದು ಸಂತೋಷದ ಸಂಗತಿಯಾಗಿದೆ. ಕಳೆದ ಕಾಲು ಶತಮಾನದಲಿ ಗಂಭೀರ ಕಾವ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೃಷ್ಣ, ನಾಡಿನ ಕವಿ ಗೋಷ್ಠಿಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ ಗಮನ ಸೆಳೆದ ಪ್ರಮುಖ ಕವಿಯಾಗಿದ್ದಾರೆ. ಇವರ ಕಾವ್ಯ, ವಿದ್ವಾಂಸರ, ವಿಮರ್ಶಕರ, ಸಹೃದಯ ಓದುಗರ ಗಮನವನ್ನು ಸೆಳೆದಿವೆ. ಈ ಬರಹ ಕೃಷ್ಣರ ಕಾಲು ಶತಮಾನಗಳ ಕಾವ್ಯದ ಒಟ್ಟು ಅಭ್ಯಾಸಕ್ಕೆ ಮಾಡಿದ ಒಂದು ಪ್ರಯತ್ನವಾಗಿದೆ.

ಇಂಥ ಪ್ರಯತ್ನಕ್ಕೆ ಮೊದಲು ನೆನಪಿಡಬೇಕಾದದ್ದು ಕಾವ್ಯ ಪ್ರಕಾರವೂ ಕೂಡ ಬದುಕಿನಂತೆಯೇ ಜಟಿಲತೆ-ವೈರುಧ್ಯಗಳ ಆಗರವಾಗಿರುವುದು, ರೋಮಾಂಚಕ ಕನಸುಗಾರಿಕೆಯಿಂದ ಯಾಂತ್ರಿಕ ವಾಸ್ತವತೆಂವರೆಗೂ ವಿಭಿನ್ನ ಮುಖಿಯಾಗಿರವುದು ಸಹಜವೇ ಆಗಿದೆ. ಅಲ್ಲದೇ ಕಾವ್ಯದ ಗುರಿ ಉದ್ದೇಶಗಳು ಪ್ರತಿಯೊಬ್ಬ ಕವಿಯ ವ್ಯಕಿಮೂಲ ಮೌಲ್ಯಗಳಾಗಿವೆ. ಕೃಷ್ಣರು ತಮ್ಮ ಕಾವ್ಯದ ಮೂಲ ಕಾಳಜಿ, ಬದ್ಧತೆ, ಮತ್ತು ಚೌಕಟ್ಟುಗಳನ್ನು ಪ್ರಾರಂಭದಿಂದಲೂ ಓದುಗರ ಮುಂದೆ ಸ್ಪಷ್ಟವಾಗಿಯೇ ತೆರೆದು ಇಟ್ಟಿದ್ದಾರೆ. ನನ್ನ ಕವನ- ಅನ್ನವಿಲ್ಲದ ಹಸುಳೆಗೆ ಬಡಿಸೀತೆ? ಆರಿಸೀತೆ ಉರಿವ ಬೆಂಕಿ? ಕಟ್ಟೀತೆ ಸೇತುವೆ? ಚಣ್ಣವಿಲ್ಲದ ಮಗುವಿಗೆ ತೊಡಸೀತೆ? ಹೃದಯಗಳ ಬೆಸುಗೆ ತಂದೀತೆ?” ಹೀಗೆ ಪ್ರಶ್ನೆಗಳನ್ನೆತ್ತುತ್ತ – `ಭೂಗೋಳ ಪ್ರಶ್ನೆಸಂಗ್ರಹದಲ್ಲಿ-`ನನ್ನ ಕವನದ ಮೂಲಕ ತಮ್ಮ ಕಾವ್ಯದ ಮೆನಿಫೆಸ್ಟೋ ಕೃಷ್ಣ ಬಿಚ್ಚಿಟ್ಟಿದ್ದಾರೆ. ಇವರ ಕಾವ್ಯ ಧೋರಣೆ ಬಂಡಾಯ ಮನೋಧರ್ಮಕ್ಕನುಗುಣವಾಗಿದೆ. ಹಾಗಾದರೆ ಕಾವ್ಯವೆಂದರೆ ಇಷ್ಟು ಮಾತ್ರವೇ? ಜೀವನದ ಸೊಬಗು ಸೌಂದರ್ಯಗಳಿಗೆ ಯಾವ ಸ್ಥಾನ? ಈ ಪ್ರಶ್ನೆಗಳು ಸಹಜವಾಗಿ ಏಳುವವು. ಉತ್ತರ ಅವರ ಮೊದಲ ಸಂಕಲನದ `ಕೋಗಿಲೆ ಅಳುತ್ತಿದೆಕವನದಲ್ಲಿದೆ. “ಝರಿ ಜಲಪಾತಗಳಿಲ್ಲದ ನದಿಗಳ ಜುಳುಜುಳುವಿಲ್ಲದ, ಕಾಂಕ್ರೀಟು ಕಾಡಿಗೆ ವರುಷ ವರುಷ ಬರುವ ವಸಂತನನ್ನು ನೋಡಿ ಕೋಗಿಲೆ ಅಳುತ್ತಿದೆ, ಅನ್ನವಿಲ್ಲದ ಕೂಗು, ಒಂದೆಳೆ ಚಿನ್ನ ಮಾತ್ರವಿದ್ದವಳ ಕೂಗು, ಇತ್ಯಾದಿ ಹತ್ತು ಹಲವು ನೋವುಗಳಿಗೆ `ಕೋಗಿಲೆ ಅಳುತ್ತಿದೆಅಂದರೆ ಬದುಕು ಸೊಬಗು ಸೌಂದರ್ಯಗಳನ್ನು ಕಳೆದುಕೊಂಡಿರುವ ಕುರಿತು ವಿಷಾದವೇ ಇಂದಿನಸಂದರ್ಭದಲ್ಲಿ ಹೊಮ್ಮಬಹುದಾದ ಕಾವ್ಯಾರ್ಥವೆಂದು `ಕೋಗಿಲೆ ಅಳುತ್ತಿದೆಕವನ ಹೇಳುತ್ತದೆ. “ಕೃಷ್ಣ ನಾಯಕರ ಕವಿತೆಗಳ `ಮೂಲ-ಸ್ಥಾಯಿ-ಸ್ವರವಿಷಾದವೆಂದೇ” ದಿವಂಗತ ಅವಧಾನಿಯವರು `ಕೋಗಿಲೆ ಅಳುತ್ತಿದೆಸಂಗ್ರಹದ ಮುನ್ನುಡಿಯಲ್ಲಿ ಗುರುತಿಸಿದ್ದಾರೆ. ಮನುಕುಲ ತಿಳಿದೂ ತಿಳಿದೂ ವಿನಾಶದ ದಾರಿಯನ್ನು ಮತ್ತೆ ಮತ್ತೆ ಹಿಡಿಯುವ ಮೂರ್ಖತನವನ್ನು ಕಂಡು ಬುದ್ಧ ನಕ್ಕಿರಬೇಕು ಎಂದು ಹೇಳುವ ಕವನದಲ್ಲಿಯೂ ವಿಷಾದದ ಸ್ಥಾಯಿಯೇ ಮುಂದುವರಿದಿದೆ. `ಪ್ರಾರ್ಥನೆ ಯಲ್ಲಿ ಮಾತ್ರ ವಿಷಾದವನ್ನು ಮೀರಿನಿಂತ ಬಲವಾದ ಆಶಯವೊಂದು ಕಾವ್ಯವನ್ನು ಮುನ್ನಡೆಸಿದೆ.

ಕೃಷ್ಣರ ಕಾವ್ಯದ ಸ್ಥಾಯಿ, ಆಶಯಗಳು ಹಾಗೂ ಎಲ್ಲಾ ಕಾಳಜಿಗಳು ಮುಂದುವರಿದಿರುವ ದಾರಿಯನ್ನು ಈ ಸಂಕಲನದ ಕವನಗಳಲ್ಲಿ ಗುರುತಿಸಬಹುದು.

`ಒಡಲೊಳಗೆ ಚೇಳು / ಕಟ್ಟಿರುವೆಗಳ ಸಾಲು / ಕುಕ್ಕುವ ವಿಷ ಕಕ್ಕುವ ಹಾವು /– – — — — — /- – – – – — – – / ಖಂಡಾಂತರ ಪುಟಿವ / ಸಿಡಿತಲೆ ಕ್ಷಿಪಣಿಗಳಿಗೆ / ಬಂದೂಕಿನ ಬಾಯಿಗೆ / ಅಗ್ನಿ ಚೆಲ್ಲುವ / ಮನಸ್ಸಿಗೆ /ಶಕ್ತಿ ತುಂಬಿದೆ / ಬುಶ್‘(ಈ ಸಂಕಲನದ `ಬುಶ್ಕವನದಿಂದ)

ಸಮಕಾಲಿನ ವಿಶ್ವ ವಿದ್ಯಮಾನಗಳು ತಲುಪಿರುವ ವಿಷಮ ಪರಿಸ್ಥಿತಿ, ಅಪಾಯದ ಅಂಚಿನಲ್ಲರುವ ಮನುಕುಲದ ಭವಿಷ್ಯ ಇವು ಕೃಷ್ಣರ ಕಾವ್ಯದ ಪ್ರಮುಖ ಕಾಳಜಿಗಳಾಗಿ ಈ ಕವನದಲ್ಲಿ ಒಡಮೂಡಿವೆ. ಇದೇ ಜಾಡಿನಲ್ಲಿ ಸಾಗಿರುವ ಇನ್ನೊಂದು ಕವನ ಹಾವು ಹುತ್ತ ಮತ್ತು ಬೆತ್ತ ಈ ಸಾಲುಗಳಲ್ಲಿ ಕಾಣಬಹುದಾಗಿದೆ.

`ಪುಂಗಿ ಊದದೆ ಬೆತ್ತ ಹಿಡಿದು / ಬಡಿದರು / ಕಂಡ ಕಂಡ ಹುತ್ತ / ಹುಡಿಯಾಯ್ತು ಗೂಡುಗೂಡು / ನಿರಂತರ / ಗೂಡು ಕಟ್ಟಿದವರ ಗೋಳು / ತಡಕಾಡಿದರೂ ಸಿಗಲಿಲ್ಲ ಹಾವು / ಬಡಿಯುತ್ತಲೇ ಇದ್ದಾರೆ ಬೆತ್ತ ಹಿಡಿದವರು‘/

ಒಂದು ಕಡೆಗೆ `ಮತೀಯ ಹಿಂಸೆ‘, `ಗಡಿಯಲ್ಲಿ ಗುಂಡಿನ ಗುಡುಗು, `ಮಾನ-ಅಭಿಮಾನ‘, `ರಾಷ್ಟ್ರ-ರಾಷ್ಟ್ರೀಯತೆ‘, `ಯುದ್ಧದ ಕಲೆ‘, ಇವೆಲ್ಲವುಗಳ ಪ್ರತಿಪಾದಕರಾದ `ಮರಣ ವ್ಯಾಪಾರಿಗಳು‘; `ಭಾಷಾಭಿಮಾನದ ಬಂಧನದೊಳಗೆ, ನೆಲದಾವರಣದ ಬೇಲಿಯೊಳಗೆ ಇರುವವರು; ಇವರು `ಹಡಗಿನೊಳಗಿರುವವರುಇನ್ನೊಂದು ಕಡೆಗೆ `ಬೆರೆಸುತ್ತ ಮೀನಿಗೆ ಉಪ್ಪು, ಹಾಕುತ್ತ ಹರಿದ ಬಲೆಗೆ ತೇಪೆ, ಇರುವ `ದೋಣಿಯೊಳಗಿನವರು‘. ಅವರು ದೊಡ್ಡ ಹಡಗಿನವರು ಇವರು ಸಣ್ಣ ದೋಣಿಯವರು. (ಕವನ: `ದೋಣಿ ಮತ್ತು ಹಡಗು‘) ಮನು ಕುಲವನ್ನು ಸೀಳಿ ಹಾಕಿರುವ ವರ್ಗ ವಿಭಜನೆಯ ಈ ದ್ವಂದ್ವವೇ ಕೃಷ್ಣರ ಕಾವ್ಯದ ಮುಖ್ಯ ವಸ್ತುವಾಗಿದೆ. ಹಡಗಿನವರ ಅಸ್ತಿತ್ವದ ರೂಪಕ ಪ್ರಖರ ಆಕ್ರಮಕ ಸೂರ್ಯನಾದರೆ ದೋಣಿಯವರ ಶೈಲಿಯ ರೂಪಕ ಸೌಮ್ಯ ಆಪ್ತನಾದ ಚಂದ್ರ. (ಕವನ: `ಚಂದ್ರ ಸೂರ್ಯನಂತಲ್ಲ‘) ಧರ್ಮ-ಬಂಡವಾಳ-ಸಾಮ್ರಾಜ್ಯವಾದಗಳ ಸರಪಳಿ ಆಧುನಿಕ ತಂತ್ರಜ್ಞಾನವನ್ನು ವಶಪಡಿಸಿಕೊಂಡು ತಳೆದು ನಿಂತಿರುವ ವಿಶ್ವರೂಪದ ಭೀಕರ ದರ್ಶನ ಇಲ್ಲಿದೆ.

ಕೃಷ್ಣರ ಕಾವ್ಯ ತನ್ನ ಸಾರ್ಥಕತೆಯನ್ನು ಪಡೆಯುವದು, ಮನುಕುಲ ಭೇದಮೂಲದ ಸ್ವಾರ್ಥಮೂಲದ ಎಲ್ಲ ಕ್ರೌರ್ಯ, ಹಿಂಸೆಗಳ ಸುಳಿಯಿಂದ ಹೊರಬಂದು ಉದಾತ್ತ ಗುಣ ಮೌಲ್ಯಗಳತ್ತ ಇಡಬೇಕಾದ ಹೆಜ್ಜೆಗಳನ್ನು ತೋರುವದರಲ್ಲಿ. ಪೀತಿಯನ್ನು ಹಾರಿ ಬಿಟ್ಟಾಗ, ಪ್ರೀತಿಯನ್ನು ತೂರಿ ಬಿಟ್ಟಾಗ, ಪ್ರೀತಿಯನ್ನು ಹರಿಯಬಿಟ್ಟಾಗ ಮನುಕುಲ ಸಾಧಿಸಬಹುದಾದ ಹದ ಎಂತಹದ್ದು!

ಚಿಗುರೊಡೆಯಲಿ ಸಹೋದರತೆ / ಹೊತ್ತು ತರಲಿ ಸ್ನೇಹ / ತೆರೆದಿರಲಿ ಹೃದಯ / ಇಂತು ವಿಶ್ವ ಶಾಂತಿಗೆ ಹದ”

ಈ ಹದವೇ ಕೃಷ್ಣರ ಕಾವ್ಯದ ಒಟ್ಟು ಆಶಯವೂ ಹೌದು. ಕೃಷ್ಣರ ಕಾವ್ಯದ ದರ್ಶನವೂ ಹೌದು. ಈ ಕವನ ಇವರ ಕಾವ್ಯ ಶೈಲಿಯ `ಹದವೂಹೌದು. ಇಂತಹದೇ ಇನ್ನೊಂದು ಕವನವೆಂದರೆ `ಆಲಯ ನಿಲಯ

ಬಯಲು ಆಲಯವಾದಾಗ / ಇಲ್ಲ ಆಲಯವೇ ಬಯಲಾದರೆ /- – – – – – – – – – – / ಆಗುತ್ತಿದ್ದರು ಎಲ್ಲರೂ / ನೆಲ ನೆರಳಿಗೆ ಹಕ್ಕುದಾರರು”

ಕುವೆಂಪು ಬರೆದ `ಆಗು ನೀ ಅನಿಕೇತನ, ಓ ನನ್ನ ಚೇತನಸಾಲುಗಳು ಇಲ್ಲಿ ನೆನಪಾಗದೇ ಇರುವದಿಲ್ಲ. ಕುವೆಂಪು ರವರು ಅಧ್ಯಾತ್ಮ ಪ್ರಜ್ಞೆಯಲ್ಲಿ ಮೂಡಿಸಿದ ವಿಶ್ವ ಮಾನವ ಚಿತ್ರವನ್ನು ಕೃಷ್ಣರು ಚಾರಿತ್ರಿಕ ಪ್ರಜ್ಞೆಯಲ್ಲಿ ಅಸಾಧಾರಣವಾಗಿ ಮೂಡಿಸಿದ್ದಾರೆ. ವಿಶ್ವವು ರಾಷ್ಟ್ರ-ರಾಷ್ಟ್ರಗಳಾಗಿ ಖಾಸಗಿ ಆಸ್ತಿಗಳಾಗಿ ತುಂಡತುಂಡಾಗಿರದ, ಕಾನೂನು-ನಿಯಮಗಳು ಪ್ರಭುತ್ವದ ಅಧಿಕಾರಗಳಾಗಿ ಹೆಪ್ಪುಗಟ್ಟದಿರುವ, ಲೆನಿನ್ ಕಲ್ಪನೆಯ ಸ್ವತಂತ್ರ ಶ್ರಮಿಕರ ವಿಶ್ವವ್ಯಾಪಿ ರಾಜ್ಯದ ಆಶಯ ಈ ಕವನದಲ್ಲಿ ಮಾರ್ದನಿಗೊಂಡಿದೆ. `ಭೂಗೋಳ ಪ್ರಶ್ನೆಯಲ್ಲಿ `ಪ್ರಾರ್ಥನೆ‘, `ಹೊಸ ಹಾದಿಮುಂತಾದ ಅನೇಕ ಕವನಗಳಲ್ಲೂ ಕವಿಯ ಇಂಥ ಯುಟೋಪಿಯನ್ ಆಶಯವೇ ಸ್ಥಾಯಿ ಸಂವೇದನೆಯಾಗಿರುವುದನ್ನು ಇಲ್ಲಿ ನೆನೆಯಬೇಕು. ಇಂಥದೊಂದು ಪರಿವರ್ತನೆಯ ಸಂದರ್ಭ ನಿರ್ಮಾಣಕ್ಕೆ ತನ್ನನ್ನು ಅಂತರಂಗದಲ್ಲಿ ಸಿದ್ಧಗೊಳಿಸಿಕೊಳ್ಳುವ ಪ್ರತಿದಿನದ ಸಣ್ಣ ಸಣ್ಣ ದೈನಂದಿನ ಕ್ರಿಯೆಗಳ ದಾಖಲೆಯೇ `ದಿನಚರಿಕವನ `ಬಾದರಾಯಣ ಕೆಫೆಯಬದಲಾಗಿ ನವಯುಗದಲ್ಲಿ ತಿಂದು ಎಚ್ಚರಿಕೆಯ ಕೂಗು ನಿರೀಕ್ಷಿಸುತ್ತ ನಿದ್ದೆ ಹೋಗುವ ವರೆಗಿನ ಎಲ್ಲ ಸಾಲುಗಳಲ್ಲಿ ಅರ್ಥದೊಳಗೊಂದು ಒಳರ್ಥವಿದೆ. ಇಂಥ ಇನ್ನೊಂದು ಕವನವೆಂದರೆ `ದುಡಿಯುವ ಕೈಗಳ ತಡೆವವರಾರು?’ ಅಂತರ್ರಾಷ್ಟ್ರೀಯ ಘಟನಾವಳಿಗಳಲ್ಲಿ ಸಾಮ್ಯವಾದಕ್ಕಾದ ಹಿನ್ನಡೆಗಳ ಹಿನ್ನಲೆಯಲ್ಲಿಯೂ

`ಚೀನಾ, ಕ್ಯ್ಯೂಬಾದಲ್ಲಿ ನಾವು / ಉರಿಯುತ್ತಲೇ ಇರುವವರು / – – – – – – – – – – / – – – – – – – – – – / ಮಳೆ ಸುರಿಯುವವರೆಗೂ / ಕಾಯುವವರು ನಾವು

ಹೀಗೆ ಕವಿ ಆಶಾವಾದಿಯಾಗುತ್ತಾರೆ.

ಆದರೆ ವಸ್ತುಸ್ಥಿತಿ ಆಶವಾದಿಯಾಗುವ ಹಾಗಿಲ್ಲವೆಂಬ ಪ್ರಜ್ಞೆ ಕವಿಗಿದೆ. `ಪ್ರಶ್ನಿಸುತ್ತಿದ್ದಾನೆ ಪರೀಕ್ಷಿತಕವನದಲ್ಲಿ ಕವಿಯ ಅನುಮಾನಗಳು ದಟ್ಟವಾಗಿವೆ. `ತಪಸ್ವಿ ಶೂದ್ರರನು ಸಾಯಿಸುವ, ಭ್ರೂಣಾವಸ್ಥೆಯಲ್ಲಿಯೇ ಯುದ್ಧದ ಕಲೆಗಾರಿಕೆ ಕಲಿಸುವಪುರಾಣ ಪರಂಪರೆಯನ್ನೇ ಹೊಂದಿರುವ ಈ ದೇಶದ ಮುಂಬರುವ ಪೀಳಿಗಗೆಗಳ ಭವಿಷ್ಯವೇನಿರಲು ಸಾಧ್ಯವೆಂದೇ ಪ್ರಶ್ನಿಸುತಿದ್ದ್ದಾನೆ ಪರೀಕ್ಷಿತ. `ರಾಜಧಾನಿಒಮ್ಮೆ ಸ್ತ್ರೀಲಿಂಗದಂತೆ ಸೆಳೆದು ಮತ್ತೊಮ್ಮೆ ಪುಲ್ಲಿಂಗದಂತೆ ಕಂಡರೂ ನಿಜವಾಗಿ ಅದೊಂದು ನಪುಸಂಕರ ನಗರವೆಂದು ಹೇಳುವಾಗಲೂ ಕವಿ ವಸ್ತುಸ್ಥಿತಿಯ ಜಟಿಲತೆಯನ್ನು ಅರ್ಥಮಾಡಿಸುತ್ತಿದ್ದಾರೆ. ಇಂಥ ರಾಜ್ಯದಲ್ಲಿ ಬದುಕಲು ಕಲಿಯಬೇಕಾದ ಕಲೆಯೆಂದರೆ ಆತ್ಮಘಾತುಕತೆ `ಕಂಡೂ ಕಾಣದಂತೆ , ಅರಿತು ಅರಿಯದಂತೆತನ್ನೊಳಗಿನ ಮಾನವತೆಯನ್ನು ಮರೆತು ಸಾಯಿಸುವದು, ಆದರೆ ಮಾನವೀತೆಯ ಸಾವಿಗಾಗಿ ಉಕ್ಕ್ಕಿಬರುವ ಕಣ್ಣೀರ ಕಡಲಿನ ಅಬ್ಬರ ಒಳಗಡೆಗಿದ್ದು ಮಾನವೀಯತೆ ಸಾಯದಂತೆ ಉಳಿಸುತ್ತವೆ” (ಈ ಸಂಕಲನದ `ಸಾವಿಗಾಗಿಕವನದಿಂದ.) ಹೀಗೆ ಈ ಸಂಕಲನದ ಕವನಗಳ ಒಟ್ಟು ಭಾವದಲ್ಲಿ ಒಂದು ಕಡೆಗೆ ಮನುಕುಲದ ಭೂತ-ವರ್ತಮಾನ-ಭವಿಷ್ಯಗಳ ಕುರಿತು ವಿಷಾದ_ಸಂಕಟ ಅನುಮಾನಗಳಿದ್ದರೆ ಇನ್ನೊಂದು ಕಡೆಗೆ ಇದೆಲ್ಲವನ್ನೂ ಮೀರಿದ ಆಶಾಭಾವವೂ ಇದೆ.

ಒಂದೊಂದು ಕಣ ಸೇರಿ / ಗುಪ್ಪೆಯಾಗಿ ತೆಪ್ಪಗಾಗಿ / – – – – – — – – / ತಡೆದಿಡುವ ಭದ್ರ ಕೋಟೆಯಾಗಿ / – – – – – – – – – – – / ಆಸರೆಯಾಗಿ ದಂಡೆ / ದಂಡೋಪಾದಿಯಲಿ ಕಾವಲಾಗಿ / ಮುಕ್ಕಾಲು ಪೂರ್ಣವಾಗಿ / ಖಂಡಖಂಡಗಳಲ್ಲ / ಅಖಂಡವಾಗಿ ( ಈಸಂಕಲನದ `ದಂಡೆಕವನದಿಂದ)

ಈ ಸಾಲುಗಳು ಕೃಷ್ಣರ ಕಾವ್ಯಕ್ಕೆ ಬದುಕಿಗಿರುವ ತಾಳುವ ಬಾಳುವ, ಉಳಿಯುವ, ರಕ್ಷಿಸಿ ಕಾಪಾಡುವ, ಸಹಜ ಗುಣಗಳ ಮೇಲಿರುವ ಅಚಲ ನಂಬಿಕೆಯನ್ನು ತೆರೆದಿಡುತ್ತವೆ ಸೀಮೆಯಿಲ್ಲದ ಪ್ರೀತಿಯಾಲಯದೊಳಗೆ, ಸಹೃದಯಗಳೊಳಗೆ ಮೌನದಅಸ್ತಿಯಿದೆ. ಸಾಮ್ರಾಜ್ಯವಾದಿ, ಆತಂಕವಾದಿ ಮೂಲಭೂತವಾದಿಗಳ ನಡುವೆಯೂ ಸಮಾನತಾವಾದಿಗಳನ್ನು ಕಾಣುವದು ಸಾಧ್ಯವಿದೆ. ಎವರೆಸ್ಟ ಶಿಖರವು ವಾಯುವಿಹಾರಿಗೆ ಹುತ್ತದಂತೆ ಕಾಣುವುದು ಎಷ್ಟು ಸತ್ಯವೋ ನೆಲಗಪ್ಪೆಗೆ ಒಂದೊಂದು ಹುತ್ತವು ಎವರೆಸ್ಟ ಶಿಖರವೇ ಆಗಿರುವದು ಅಷ್ಟೇ ಸತ್ಯವೆಂದು ಗ್ರಹಿಸಬಲ್ಲ ದಾರ್ಶನಿಕ ಒಳನೋಟ ಇಲ್ಲಿ ಕಾವ್ಯಕ್ಕಿದೆ.

ಕವಿಯ ಆಶಾವಾದಕ್ಕೆ ಬದುಕಿನ ಸಹಜ ಶಕ್ತಿಯ ಮೇಲಿರುವ ನಂಬಿಕೆ ಒಂದು ಕಾರಣವಾದರೆ ಮಾನವನ ಅದ್ಭುತ ಮೇಧಾಶಕ್ತಿಯ ಮೇಲಿರುವ ನಂಬಿಕೆ ಇನ್ನೊಂದು ಕಾರಣವಾಗಿದೆ. ಈ ನಿಟ್ಟಿನಲ್ಲಿ `ಪರಕಾಯ ಪ್ರವೇಶಈ ಸಂಕಲನದ ಒಂದು ಅತಿವಿಶಿಷ್ಟವಾದ ಕವನವಾಗಿದೆ. ಯಂತ್ರಕ್ಕೆ ಹೋಲಿಸಿದರೆ ಯಂತ್ರ ಚಾಲಕನಾದ ಮಾನವನ ಶರೀರ ದುರ್ಬಲ. ಆದರೆ ಯಂತ್ರಕ್ಕೆ ಕಣ್ಣಿಲ್ಲ. ಬುದ್ಧಿ ವಿವೇಚನೆಗಳಿಲ್ಲ. ಇಚ್ಛೆ ಗುರಿಗಳಿಲ್ಲ, ನಿರ್ಣಯಗಳಿಲ್ಲ. ಸ್ಟೇರಿಂಗ ಹಿಡಿದು ಸವಾರಿ ಮಾಡುವ ಮಾನವ ಕಾರಿನ ಕಣ್ಣಾಗುತ್ತಾನೆ, ಮಿದುಳಾಗುತ್ತಾನೆ. ಹೃದಯವಾಗುತ್ತಾನೆ. ತನ್ನಲ್ಲಿಲ್ಲದ ಗಟ್ಟಿತನ, ನಿರ್ದಿಷ್ಟತೆ, ವೇಗಗಳನ್ನು ಯಂತ್ರದಿಂದ ಪಡೆದು ಆತ ಬಲದಲ್ಲಿ ಯಂತ್ರ ಸಮಾನನಾಗುತ್ತಾನೆ. ಹಾಗೆಯೇ ಚಾಲಕನಿಂದ ಯಂತ್ರಕ್ಕೂ ಕೂಡ ತನ್ನ ನಿರ್ಮಾಣದ ಸಫಲತೆಯನ್ನು ಹಾಗೂ ಪರಮಾಧಿಕ ಸಾಮರ್ಥ್ಯದ ಗಡಿಯನ್ನು ತಲುಪಲು ಸಾಧ್ಯವಾಗುತ್ತದೆ. ಯಂತ್ರದಲ್ಲಿ ಮಾನವ ಇಳಿಯುತ್ತಾನೆ. ಮಾನವನಲ್ಲಿ ಯಂತ್ರ ಇಳಿಯುತ್ತದೆ.ಇಲ್ಲಿಂದ ಕಾವ್ಯದ ಅರ್ಥದ ಹರಿವು ತನ್ನ ಮೇರೆಗಳನ್ನು ಅದ್ಭುತವಾಗಿ ವಿಸ್ತರಿಸಿಕೊಳ್ಳುತ್ತ ಹೋಗುತ್ತದೆ.

ಒಬ್ಬರೊಳಗೊಬ್ಬರು ಇಳಿದರೆ / ದಣಿವರಿಯದೆ ದಾಟಬಹುದು / ತೇಲುವ ಹಡಗಾಗಿ / ಹಾರುವ ಹಕ್ಕಿಯಾಗಿ / ಕಾಣುವ ಚುಕ್ಕೆಗೂ ಮಿಗಿಲಾಗಿ”

ಮಾನವ ತನ್ನ ಮನುಷ್ಯ ಸಾಮರ್ಥ್ಯದ ಮಿತಿಯನ್ನು ದಾಟಿ ಅದ್ಭುತ ರಮ್ಯ ಪ್ರಪಂಚದಲ್ಲಿ ಜೀವಿಸಲು ಸಾಧ್ಯವೆಂಬ ಅದಮ್ಯ ಆಶಾವಾದ ಈ ಕವನದ ಶಕ್ತಿಯಾಗಿದೆ. `ಮೊಮ್ಮಗನ ಸಮಜಾಯಿಷಿಕವನ ಕೂಡ ಇದೇ ಜಾಡಿನಲ್ಲಿದೆ. ಮಾನವನ ಮೇಧಾಶಕ್ತಿ ಆವಿಷ್ಕರಿಸುವ ಜಟಿಲ ತಾಂತ್ರಿಕತೆ ಬಾಲಕೃಷ್ಣನ ತೆರೆದ ಬಾಯಂತೆ ವಿಸ್ಮಯ ಪ್ರಪಂಚ ಗಳನ್ನು ಸೃಷ್ಟಿಸುತ್ತ, ಅಲ್ಲಾದೀನನ ಅದ್ಭುತ ದೀಪದಂತೆ, ಮನುಕುಲಕ್ಕೆ ಬಯಸಿದನ್ನೆಲ್ಲ ನೀಡಬಲ್ಲ ಅಕ್ಷಯ ಪಾತ್ರೆಯಾಗಲು ಸಾಧ್ಯವಿದೆ. ಆದರೆ ಮಾನವ ಸಂಕುಚಿತತನ ಹಾಗೂ ಸ್ವಾರ್ಥವನ್ನು ತ್ಯಜಿಸಿ, ವಿಶ್ವಮಾನವನಾದರೆ ಮಾತ್ರ. ಇದೇ ಕೃಷ್ಣರ ಕಾವ್ಯದ ಒಟ್ಟು ಸಂದೇಶವಾಗಿದೆ. ಕೃಷ್ಣರ ಚಾರಿತ್ರಿಕ ಪ್ರಜ್ಞ್ಞೆಯಿಂದ ಮೂಡಿದ ಮತ್ತೊಂದು ಉತ್ತಮ ಕವನ `ಓಶಿಯನ ಸೆರಾಯಾ

ಬಿದ್ದುಕೊಂಡಿದೆ ಓಶಿಯನ್ ಸೆರಾಯಾ / ಕಸದ ತೊಟ್ಟಿಯೊಳಗಿನ ಖಾಲಿ ಡಬ್ಬದಂತೆ

ಕಾರವರ ಬಂದರಿನ ಹತ್ತಿರ ಮುರಿದು ಬಿದ್ದ ಈ ವ್ಯಾಪಾರಿ ನೌಕೆಯ ದುರಂತ ಪಯಣ ಒಂದು ಪ್ರತಿಮೆಯಾಗಿ ಸಮಕಾಲೀನ ನಾಗರಿಕತೆಯ ಪಯಣದ ಸಾಹಸ-ದುರಂತಗಳನ್ನು ಒಟ್ಟೊಟ್ಟಗೇ ಹಿಡಿದಿಟ್ಟಿದೆ ಉಳಿದೆಲ್ಲ ಪೂರ್ವ ನಾಗರಿಕತೆಗಳಂತೆ ನಮ್ಮ ಯಂತ್ರನಾಗರಿಕತೆ ಕೂಡ ಕೊನೆಗೊಮ್ಮೆ ಕಾಲಸಮುದ್ರವೆಂಬ ಕಸದ ತೊಟ್ಟಯಲ್ಲಿ ಖಾಲಿ ಡಬ್ಬವಾಗಿ ಬೀಳುವ ಸಂಜ್ಞೆ ಈ ಕವನದಲ್ಲಿದೆ.

ಕಾವ್ಯ ಭಾಷೆ ಸಂಯಮ, ಸಭ್ಯತೆ, ಶಿಸ್ತುಗಳನ್ನು ಮೈಗೂಡಿಸಿಗೊಂಡಿದೆ. ಅಂತರ್ರಾಷ್ಟ್ರೀಯ ವಿದ್ಯಮಾನಗಳ ಜಟಿಲತೆ, ಕಂಪ್ಯೂಟರಿನ ತಾಂತ್ರಿಕತೆಯೊಂದಿಗೆ ನೊಗ, ನೇಗಿಲು, ಮೀನು, ದೋಣಿಗಳ ಪ್ರಾದೇಶಿಕತೆಯನ್ನು ಉಳಿಸಿಕೊಂಡಿದೆ. `ಐಸ್ಕ್ರೀಮ್ ಕುಂಡದಂತಿರುವ ಚಂದ್ರ‘ `ಸಾಹುಕಾರನ ಪುಂಡ ಹುಡುಗನಂಥ ಸೂರ್ಯಹೀಗೆ ಜೀವನಕ್ಕೆ ಹಾಗೂ ಅನುಭವಕ್ಕೆ ಹತ್ತಿರವಿರುವ ಅನೇಕ ಪ್ರತಿಮೆಗಳು ಕವನಗಳಲ್ಲಿ ಎದ್ದು ಕಾಣುತ್ತವೆ. ವಿರುದ್ಧ ಪ್ರತಿಮೆಗಳ ಮುಖಾಮುಖಿ ಮೂಲಕ ವಿರುದ್ಧ ಮೌಲ್ಯಗಳ ಮುಖಾಮುಖಿಗಳನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ.

ಒಟ್ಟಿನಲ್ಲಿ ಮನುಕುಲದ ವಿಷಾದವನ್ನು ಸ್ವಂತ ವಿಷಾದವಾಗಿಸಿಕೊಂಡು ಬಂಡಾಯವನ್ನು ಹೊಟ್ಟೆಯೊಳಗಿಟ್ಟುಕೊಂಡು ಹುಟ್ಟಿದಂಥ ಕಾವ್ಯವು ಬೆಳೆಯುತ್ತ, ವಿಷಾದ ನಿರಾಸೆಗಳ ಕೋಶಾವಸ್ಥೆಯಿಂದ ಹೊರಬಂದು ಉತ್ಕ್ರಾಂತಿಗೊಂಡು, ಸರ್ವಕಾಲೀನ ಮಾನವೀಯ ಮೌಲ್ಯಗಳ ಹದದತ್ತ ಆತ್ಮವಿಶ್ವಾಸದಿಂದ ಹಾರುತ್ತಿದೆ. ಕನ್ನಡ ಕಾವ್ಯಲೋಕದಲ್ಲಿ ಅಪರೂಪವಾದ ಜಾಗತಿಕ ಪ್ರಜ್ಞೆಯಲ್ಲಿ ಮೂಡಿಬಂದ ಈ ಕವನ ಸಂಕಲನವನ್ನು ಓದುಗರಿಗೆ ಪರಿಚಯಿಸಲು ದೊರೆತ ಅವಕಾಶವನ್ನು ನನ್ನ ಸೌಭಾಗ್ಯವೆಂದೇ ಭಾವಿಸಿದ್ದೇನೆ

ವ್ಯಾಸ ದೇಶಪಾಂಡೆ

ಶೀರ್ಷಿಕೆ: ಹದ ಲೇಖಕರು: ಕೃಷ್ಣ ನಾಯಕ ಹಿಚ್ಕಡ ಪ್ರಕಾಶಕರು: ಪುಟಗಳು: ಬೆಲೆ:ರೂ. /-