ಪ್ರಕೃತಿ ಜೀವನ

scan0034-1

ಪ್ರಕೃತಿ ಜೀವನ ತಜ್ಞರಾಗಿ ಪ್ರಾಕೃತಿಕ ಚಿಕಿತ್ಸಾ ಕೇಂದ್ರದ ನಿರ್ದೇಶಕರಾಗಿ ಸುದೀರ್ಘ ಅನುಭವ ಮತ್ತು ಪರಿಶ್ರಮಗಳ ಫಲವಾಗಿ ಮೂಡಿದ ಕೃತಿ ಪ್ರಕೃತಿ ಜೀವನ.

ಇವತ್ತು ನಾನಾ ಕಾರಣಗಳಿಂದಾಗಿ ಮಾನವಕುಲವೇ ಪ್ರಕೃತಿಗೆ ಬೆನ್ನು ಹಾಕಿ ಹೊರಟಿದೆ. ಪ್ರಕೃತಿಯಿಂದ ದೂರವಾದಂತೆ ಅನೇಕ ಕಾಯಿಲೆಗಳ ಸಮೀಪ ಹೋಗಿದ್ದೇವೆ. ಈ ಎಲ್ಲಾ ಸಮಸ್ಯೆಗಳಿಗೆ ಮತ್ತೆ ಪ್ರಕೃತಿಯೇ ಅನೇಕ ಪರಿಹಾರಗಳನ್ನು ಒದಗಿಸಬಲ್ಲುದು.

ಈ ಪುಸ್ತಕದಲ್ಲಿ ಲೇಖಕರು ಚಿಕ್ಕಪುಟ್ಟವೆನ್ನಬಹುದಾದ ಉದಾಹರಣೆಗಳ ಮೂಲಕ ಮನಸಿನಾಳಕ್ಕೆ ಇಳಿಯುವಂತೆ ವಿವರಿಸುತ್ತಾರೆ. ನೋವಿನ ಮೂಲ, ಕಾಯಿಲೆಯ ಕಾರಣಗಳನ್ನು ಹುಡುಕುತ್ತಾ ನಂತರ ಪರಿಹಾರಗಳ ಕಡೆಗೆ ಲಕ್ಷ್ಯ ಕೊಡಬೇಕು ಎನ್ನುತ್ತಾ ಮುಳ್ಳು ಚುಚ್ಚಿ ನೋವು ಉಂಟಾದರೆ ನೋವಿಗೆ ಕಾರಣವಾದ ಮುಳ್ಳು ದೇಹದಲ್ಲಿ ಉಳಿದುಕೊಂಡಿದ್ದರೆ ಅದನ್ನು ಮೊದಲು ತೆಗೆಯುವ ಪ್ರಯತ್ನಮಾಡಬೇಕು. ಹಾಗೆ ಮಾಡದೇ ಮದ್ದು ನೀಡುವುದು ಪ್ರಯೋಜನಕ್ಕೇ ಬಾರದು ಎನ್ನುತ್ತಾರೆ. ನಾವು ತಿನ್ನುವ ಆಹಾರ ತಿನ್ನುವ ಕ್ರಮ, ಜೀರ್ಣಕ್ರಿಯೆ ಇವೆಲ್ಲ ಸರಿಯಾಗಬೇಕಾದರೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ, ಪರಿಸರದ ಸವಲತ್ತುಗಳನ್ನು ಸರಿಯಾಗಿ ಬಳಸುತ್ತಾ ಹೇಗೆ ನೆಮ್ಮದಿಯ ಜೀವನ ನಡೆಸಬಹುದು ಎಂಬುದನ್ನು ಈ ಕೃತಿ ಬಹಳ ಸೊಗಸಾಗಿ ತಿಳಿಸುತ್ತದೆ. ಜೀವ ಶಕ್ತಿಯ ಬಳಕೆ, ನೀರು, ಗಾಳಿ, ಸೂರ್ಯ ಹೇಗೆ ನಮ್ಮ ಜೀವನಕ್ಕೆ ಪ್ರಯೋಜನಕಾರಿ ಎಂಬ ವಿಚಾರಗಳ ಬಗ್ಗೆ ತುಂಬ ನವಿರಾಗಿ ತಿಳಿಸುತ್ತಾರೆ. ಚಿಕ್ಕ ಮಕ್ಕಳು ಕೂಡಾ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

ಶೂನ್ಯ ಎಂಬ ಅಧ್ಯಾಯದಲ್ಲಿ ಉಪವಾಸದ ಬಗ್ಗೆ ಬರೆಯುತ್ತಾ ವ್ಯಾಕ್ಯೂಂ ಕ್ಲೀನರ್ ಹೇಗೆ ಶೂನ್ಯದಿಂದಲೇ ಕಸದ ಕಣವೊಂದನ್ನೂ ಬಿಡದೆ ಶುದ್ಧಗೊಳಿಸುತ್ತದೆಯೋ ಹಾಗೆ ಶೂನ್ಯ ದೇಹವನ್ನು ಎಲ್ಲ ಕೊಳೆಗಳಿಂದ ಮುಕ್ತಗೊಳಿಸುತ್ತದೆ. ಅಂದರೆ ಶೂನ್ಯ ಅಷ್ಟು ಶಕ್ತಿಶಾಲಿ ಎಂಬ ಅರಿವನ್ನು ಕೊಡುತ್ತಾರೆ. ಇಂತಹ ಅನೇಕ ವಿಚಾರಗಳು ಈ ಪುಸ್ತಕದಲ್ಲಿವೆ. ಆರೋಗ್ಯ ಪರಿಸರದ ಬಗ್ಗೆ ಕಾಳಜಿ ಇರುವ ಈ ಪುಸ್ತಕ ನಮ್ಮ ಸಂಗ್ರಹದಲ್ಲಿದ್ದರೆ ಬಹಳ ಪ್ರಯೋಜನಕಾರಿ.

ಶೀರ್ಷಿಕೆ: ಪ್ರಕೃತಿ ಜೀವನ ಲೇಖಕರು: ಡಾ.ಹೊ.ಶ್ರೀನಿವಾಸಯ್ಯ ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿ. ವಿ.,ಹಂಪಿ ಪುಟಗಳು: 84 ಬೆಲೆ:ರೂ. 60/-

ಕೃಪೆ : ಉದಯವಾಣಿ