ಕತೆಗಾರ, ಅನುವಾದಕ ಎ.ಎನ್.ಪ್ರಸನ್ನ ನಾಟಕ, ಕಿರುತೆರೆ, ಸಿನಿಮಾರಂಗದಲ್ಲೂ ತಮ್ಮ ಆಸಕ್ತಿ ಹರಿಯಬಿಟ್ಟವರು. ಅವರ `ಚಿತ್ರ-ಕತೆ’ ಪುಸ್ತಕ ಜಾಗತಿಕ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳಲ್ಲಿ ಒಂದು.
ಸಿನೆಮಾ ಒಂದು ಭಾಷೆ ಎಂದು ಹೇಳುತ್ತಲೇ ಅದೊಂದು ಕಲಾಪ್ರಕಾರ ಎನ್ನುವ ಲೇಖಕರು ಪುಸ್ತಕದಲ್ಲಿ ಅದನ್ನು ವಿವರಿಸಿದ್ದಾರೆ. ಸಿನೆಮಾ ಭಾಷೆಯ ರೀತಿ ಕೆಲಸ ಮಾಡುತ್ತದೆ. ಅದು ಹಾಗೆ ಕೆಲಸ ಮಾಡುವುದರಿಂದ ಕತೆಯನ್ನು ಪ್ರಸ್ತುತಪಡಿಸುವುದಿಲ್ಲ. ಕತೆಯನ್ನು ಹೇಳುತ್ತದೆ. ಅದರಿಂದಲೇ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದು ಸುಲಭ ಎಂಬುದು ಅವರ ಅಭಿಪ್ರಾಯ. ಅಲ್ಲದೆ ಸಿನಿಮಾವನ್ನು ನೋಡುವುದಕ್ಕಿಂತ ನೋಡದ ಭಾಗದಿಂದಲೇ ಹೆಚ್ಚು ತಿಳಿಯಲು ಸಾಧ್ಯ. ಚಲನಚಿತ್ರಗಳಲ್ಲಿ ಈ ಗುಣ ತುಂಬಾ ಮುಖ್ಯ. ಅದರಿಂದಲೇ ಒಳ್ಳೆಯ ಮತ್ತು ಕೆಟ್ಟ ಸಿನಿಮಾ ಎಂದು ವರ್ಗೀಕರಣ ಮಾಡಲಾಗುತ್ತದೆ.
1895ರಲ್ಲಿ ಫ್ರಾನ್ಸ್ ನಲ್ಲಿ ಹುಟ್ಟಿದ ಸಿನಿಮಾ ಅನಂತರ ಬೆಳೆದು ಬಂದ ಬಗೆ, ನಿರೂಪಣೆಯಲ್ಲಿ ಆದ ಬದಲಾವಣೆ, ತಾಂತ್ರಿಕ ಅಂಶಗಳ ಅಳವಡಿಕೆ ಕುರಿತು ಅವರು ಜಗತ್ತಿನ ಪ್ರಮುಖ ಚಲನಚಿತ್ರಗಳ ಬಗ್ಗೆ ಬರೆಯುತ್ತಾ ವಿವರಿಸುತ್ತಾರೆ. ಮೊದಲ ಪತ್ತೇದಾರಿ ಸಿನಿಮಾ, ಮೊದಲ ಹಾಸ್ಯ ಸಿನಮಾ ಸೇರಿದಂತೆ ಪ್ರಾತಿನಿಧಿಕ ಚಿತ್ರಗಳು ಬೆಳೆದು ಬಂದ ಬಗ್ಗೆ ಅವರ ಲೇಖನಗಳು ಮಾಹಿತಿ ನೀಡುತ್ತವೆ. ಜಾಗತಿಕ ಸಿನಿಮಾಗಳಲ್ಲಿ ಶ್ರೇಷ್ಟ ಎನ್ನಿಸಿರುವ ಸಿಟಿಜೆನ್ ಕೇನ್, ಬೈಸಿಕಲ್ ಥೀಫ್, ರಾಶೋಮಾನ್, ಬಿಟ್ಟರ್ ಶುಗರ್, ಟಾಕ್ ಟು ಹರ್, ಬ್ಲೋ ಅಪ್ ಸೇರಿದಂತೆ ಹಲವು ಚಿತ್ರಗಳ ಮಾಹಿತಿಯನ್ನು ಸರಳವಾಗಿ ವಿವರಿಸುತ್ತಾರೆ. ಪುಸ್ತಕವನ್ನು ಮೆಚ್ಚಿ ಚಿತ್ರ ನಿದರ್ೇಶಕ ಗಿರೀಶ್ ಕಾಸರವಳ್ಳಿ ಬೆನ್ನುಪುಟದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಆಸಕ್ತಿ ಇರುವವರಿಗೂ ಇದು ಮಾಹಿತಿಯುಕ್ತ ಪುಸ್ತಕವಾಗಬಲ್ಲದು. ಚಿತ್ರ-ಕತೆ (ಜಗತ್ತಿನ ಸಿನಿಮಾಗಳ ಅವಲೋಕನ)
ಶೀರ್ಷಿಕೆ : ಚಿತ್ರ-ಕತೆ ಲೇಖಕರು : ಎ.ಎನ್.ಪ್ರಸನ್ನ ಪ್ರಕಾಶಕರು : ಚಿಂತನ ಪುಸ್ತಕ ಪುಟಗಳು :260 ಬೆಲೆ: ರೂ.140/-
ಕೃಪೆ : ಪ್ರಜಾವಾಣಿ
Filed under: ವಿಮರ್ಶೆ | Tagged: ಎ.ಎನ್.ಪ್ರಸನ್ನ, ಚಿಂತನ ಪುಸ್ತಕ, ಚಿತ್ರ-ಕತೆ, ಪ್ರಜಾವಾಣಿ | Leave a comment »