ಕೃಷಿ ಕಾರ್ಯ ಮೂಲತಃ ಸ್ತ್ರೀಯರ ಆವಿಷ್ಕಾರ

scan0007-1

`ಮಾತೆಯರು ಮಾನ್ಯರಾಗಿದ್ದಾಗಡಾ. ದೇವಿಪ್ರಸಾದ್ ಚಟ್ಟೋಪಧ್ಯಾಯರ ಪುಟ್ಟ ಅಂತೆಯೇ ವಿಚಾರ ಪ್ರಚೋದಕ ಪುಸ್ತಕ.

ಕೃಷಿಕಾರ್ಯದ ತಿಳುವಳಿಕೆಯಿಂದಲೇ ಎಲ್ಲ ನಾಗರೀಕತೆಗಳು ಉಗಮಗೊಂಡವು. ಈಜಿಪ್ಟ್, ಮೆಸಪಟೋಮಿಯ ಮತ್ತು ಮೊಹೆಂಜೋದಾರೋ – ಈ ಅಪರೂಪದ ಹಾಗೂ ವಿಸ್ಮಯಕರ ನಾಗರೀಕತೆಗಳೆಲ್ಲಾ ನದಿ ದಂಡೆಗಳ ಮೇಲೆಯೇ ಬೆಳೆದವಲ್ಲವೇ? ಕೃಷಿಕಾರ್ಯದ ತಿಳುವಳಿಕೆ ಖಗೋಳ ವಿಜ್ಞಾನದ, ತರುವಾಯ ಇತರ ವಿಜ್ಞಾನಗಳ ಆವಿಷ್ಕಾರಕ್ಕೆ ಕಾರಣವಾಯಿತು.

ಕೃಷಿ ಕೆಲಸದ ಆವಿಷ್ಕಾರವೇ ನಾಗರೀಕತೆಗಳ ಬುನಾದಿ ಎಂಬುದು ಸರಿಯಷ್ಟೆ. ಆದರೆ ಈ ಆವಿಷ್ಕಾರದ ಮೂಲ ಕಾರಣಕರ್ತರು ಯಾರು? ಪುರುಷರೋ? ಸ್ತ್ರೀಯರೋ? ಉತ್ತರ ಕೇಳಿದರೆ ಈಗಿನವರಾದ ನಮಗೆ ಆಶ್ಚರ್ಯವಾಗಬಹುದು. ಏಕೆಂದರೆ ಕೃಷಿ ಕಾರ್ಯ ಮೂಲತಃ ಪುರುಷ ಆವಿಷ್ಕಾರವೇನೂ ಆಗಿರಲಿಲ್ಲ. ಅದು ಸ್ತ್ರೀಯರ ಆವಿಷ್ಕಾರ!

ಇಂಥ ಹಲವು ವಿಷಯಗಳನ್ನು ತಿಳಿಸಿಕೊಡುವ ಈ ಪುಸ್ತಕವನ್ನು ಕಲ್ಕತ್ತೆಯ ನ್ಯಾಷನಲ್ ಲೈಬ್ರರಿಯ ಶ್ರೀ ಜಿ.ಕುಮಾರಪ್ಪ ಅವರು ಬಂಗಾಳಿ ಭಾಷೆಯಿಂದ ಅನುವಾದಿಸಿದ್ದಾರೆ.

`ನಾವೀಗ ಮಾತೃಪ್ರಧಾನ ಸಮಾಜವನ್ನು ಮನಸ್ಸಿನಲ್ಲಿರಿಸಿಕೊಂಡು ಭಾರತೀಯ ಸಂಸ್ಕೃತಿಯನ್ನು ತಿಳಿಯುವ ಪ್ರಯತ್ನವನ್ನು ಮಾಡೋಣ

ವೈದಿಕ ಕಾಲದ ಜನರ ವಿಚಾರವನ್ನು ಮೊದಲು ಆಲೋಚಿಸೋಣ. ಯಾವುದು ಅವರ ಜೀವನಾಧಾರದ ಮೂಲ ಉದ್ದೇಶವಾಗಿದ್ದಿತು? ಪಶುಪಾಲನೆ. ಅವರು ಕೃಷಿ ಕಾರ್ಯ ತಿಳಿದಿದ್ದರೇ? ತಿಳಿದಿದ್ದರೆ, ಎಷ್ಟರ ಮಟ್ಟಿಗೆ? ಇದರ ಬಗ್ಗೆ ವಿಭಿನ್ನವಾದ ಚಚರ್ೆಗಳಿವೆ. ಆದರೆ ಅವರ ಜೀವನೋಪಾಯಕ್ಕೆ ಆದಿ ಕಾಲದಲ್ಲಿ ವ್ಯವಸಾಯವು ಮೂಲ ಉದ್ಯೋಗವಾಗಿರಲಿಲ್ಲ. ಬದಲಾಗಿ ಪಶುಪಾಲನೆ ಎನ್ನುವ ವಿಚಾರದಲ್ಲಿ ಯಾವುದೇ ಸಂದೇಹಗಳಿಲ್ಲ.

ಇದು ಸರಿ ಇದ್ದಲ್ಲಿ, ಅವರ ಸಮಾಜದ ಲಕ್ಷಣಗಳು ಹೇಗಿದ್ದವು? ಆ ಸಮಾಜ ಪಿತೃ ಪ್ರಧಾನ ಸಮಾಜವಾಗಿದ್ದಿತು. ಆ ಸಮಾಜದ ಮನುಷ್ಯನು ಕಲ್ಪಿಸಿದ ದೇವಾನುದೇವತೆಗಳಲ್ಲಿ ದೇವನು ದೊಡ್ಡವನೋ? ಅಥವಾ ದೇವಿಯೋ? ನಿಶ್ಚಯವಾಗಿಯೂ ಪುರುಷ ದೇವತೆಗಳು ಅಗ್ರಸ್ಥಾನದಲ್ಲಿದ್ದಾರೆ. …. …. ….

ಆದರೆ ಭಾರತೀಯ ಸಂಸ್ಕೃತಿ ಎಂದು ಹೇಳುವಲ್ಲಿ ವಾಸ್ತವವಾಗಿ ವೈದಿಕ ಕಾಲದ ಕಾಣಿಕೆ ಎಷ್ಟು? ಬಹಳ ಕಡಿಮೆ. ನಮ್ಮ ಬಂಗಾಳದ ಅಥವಾ ಯಾವುದೇ ಬೇರೆ ಭಾಗದ ವಿಚಾರವನ್ನೇ ನೋಡುವಾ. ದುರ್ಗಾ, ಕಾಳಿ, ಜಗದ್ಧಾತ್ರಿ, ಅನ್ನಪೂರ್ಣಾ, ಲಕ್ಷ್ಮಿ – ಇನ್ನಷ್ಟು. ಇವರೆಲ್ಲಾ ದೇವಿಯರು, ದೇವರುಗಳಲ್ಲ. ಅಲ್ಲದೆ, ವೇದಕಾಲದ ದೇವಗಣದೊಂದಿಗೆ ಇವರ ಸಂಪರ್ಕ ಹೆಚ್ಚೇನೂ ಇಲ್ಲ. ವಾಸ್ತವವಾಗಿ, ವೇದಕಾಲದ ಈ ಪುರುಷ ದೇವತೆಗಳು ದೇಶದ ಜನರ ಮನಸ್ಸಿನಲ್ಲಿ ಸ್ಥಾನವನ್ನೇನೂ ಗಳಿಸಿಕೊಂಡಿಲ್ಲ. ಇಂದ್ರ, ಮಿತ್ರ, ವರುಣ, ಪೂಷನ್, ಮಾತರಿಶ್ವನ್, ಅಗ್ನಿ ಮುಂತಾದವರೆಲ್ಲರನ್ನೂ ಕುರಿತು ತಲೆ ಕೆಡಿಸಿಕೊಳ್ಳುತ್ತಿರುವವರು ಕೇವಲ ಪಂಡಿತರು ಮಾತ್ರ.

ಖಾಸಿಯರನ್ನು ಕುರಿತು ಆಲೋಚಿಸುವಾಗ ನಾವು ಒಂದು ವಿಚಾರವನ್ನು ಕಂಡುಕೊಂಡಿದ್ದೇವೆ: ದೇವ-ದೇವತೆಗಳ ವಿಚಾರ ಎಷ್ಟು ಮುಖ್ಯ ಎನ್ನುವುದೇ ಆ ವಿಚಾರ. ಆ ದೇವರುಗಳಲ್ಲಿ ಪುರುಷ ದೇವತೆಗಳ ಮಹಾತ್ಮೆಯನ್ನು ಸ್ತ್ರೀ ದೇವತೆಗಳ ಮಹಾತ್ಮೆ ಮುಚ್ಚಿ ಹಾಕಿದ್ದಲ್ಲಿ, ಮಾತೃಪ್ರಧಾನ ಸಮಾಜದ ಸ್ಮೃತಿ ಇದರ ಹಿನ್ನೆಲೆಯಲ್ಲಿ ಅಡಗಿದೆ, ಎಂದು ನಾವು ಸಂದೇಹ ಪಡಬೇಕಾಗಿದೆ.

… … ….

ಭಾರತೀಯ ನಾಗರೀಕತೆಯ ಮೂಲದಲ್ಲಿ ಮಾತೃ ಪ್ರಧಾನ ಸಮಾಜದ ಇತಿಹಾಸವಿರುವ ಕಾರಣವು ಅಸ್ಪಷ್ಟವೇನೂ ಅಲ್ಲ. …

ಹೀಗೆ ಕಾರಣ ಸಹಿತವಾಗಿ ಮಾನವ ನಾಗರೀಕತೆಗೆ ಮಹಿಳೆಯ ಪಾತ್ರ ಬಹು ದೊಡ್ಡದು ಎಂದು ಈ ಪುಸ್ತಕದಲ್ಲಿ ಪ್ರತಿಪಾದಿತವಾಗಿದೆ. ಅಲ್ಲದೆ ಸ್ತ್ರೀ ಪ್ರಧಾನ ಸಮಾಜ ಹೇಗೆ ಪುರುಷ ಪ್ರಧಾನವಾಗಿ ಮಾರ್ಪಡುತ್ತದೆ ಹಾಗೇ ಪುರುಷ ಪ್ರಧಾನವಾಗಿದ್ದ ಸಮಾಜ ಹೇಗೆ ಸ್ತ್ರೀ ಪ್ರಧಾನವಾಗಿ ಮಾರ್ಪಡುತ್ತದೆ ಎನ್ನುವುದು ಈ ಪುಸ್ತಕದಿಂದ ನಾವು ತಿಳಿಯಬಹದುದು. ಆ ತಿಳುವಳಿಕೆಯ ಆಧಾರದಲ್ಲಿ ಪುರುಷ ಪ್ರಧಾನ ಅಥವಾ ಸ್ತ್ರೀ ಪ್ರಧಾನ ಸಂಸ್ಕೃತಿಯನ್ನು ಹಿಂದೆ ಬಿಟ್ಟು ಲಿಂಗ ಭೇದವಿಲ್ಲದ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ಈ ಪುಸ್ತಕ ಓದಿದಾಗ ನನಗೆ ಅನಿಸಿದ ಭಾವನೆ.

– ವಿಶಾಲಮತಿ

ಶೀರ್ಷಿಕೆ: ಮಾತೆಯರು ಮಾನ್ಯರಾಗಿದ್ದಾಗ ಲೇಖಕರು: ಡಾ.ದೇವಿಪ್ರಸಾದ್ ಚಟ್ಟೋಪಧ್ಯಾಯ ಪ್ರಕಾಶಕರು: ನವಕರ್ನಾಟಕ ಪ್ರಕಾಶನ ಪುಟಗಳು:55 ಬೆಲೆ:ರೂ.20/-

ಮತ್ತೆ ಉಮರ್

scan0001

ಉಮರ್ ಖಯ್ಯಾಮನ ರೂಬಾಯತುಗಳನ್ನು ಡಿವಿಜಿ ಕನ್ನಡಕ್ಕೆ ತಂದಿದ್ದರು. ಕೆಲವು ವರುಷಗಳ ಹಿಂದೆ ಶಾ. ಬಾಲೂರಾವ್ ಕೂಡ ಅವನ್ನು ಅನುವಾದಿಸಿದ್ದರು. ಇದೀಗ ಅವು ಜಗದೀಶ್ ಕೊಪ್ಪ ಅನುವಾದದಲ್ಲಿ ಮತ್ತೆ ಕನ್ನಡಕ್ಕೆ ಕಾಲಿಟಿವೆ.

ಖಯ್ಯಾಮ್ ಕವಿತೆಗಳ ಇಂಗ್ಲೀಷ್ ಅನುವಾದಗಳ ಪೈಕಿ ಅತ್ಯುತ್ತಮ ಎಂದು ಕರೆಸಿಕೊಳ್ಳುವುದು ಪಿಟ್ ಜೆರಾಲ್ಡ್ ಅವರ ಭಾಷಾಂತರ. ಡಿ.ವಿ.ಜಿ ಮತ್ತು ಬಾಲೂರಾವ್ ಕೂಡ ಅದನ್ನೇ ಇಟ್ಟುಕೊಂಡು ಕವಿತೆಗಳನ್ನು ಅನುವಾದ ಮಾಡಿದ್ದರು. ಜಗದೀಶ್ ಕೂಡ ಅದನ್ನೇ ಮುಂದಿಟ್ಟುಕೊಂಡಿದ್ದಾರೆ.

There was the Door to which I found no Key;

There was the Veil through which I might not see:

Some little talk awhile of ME and THEE

There was-and then no more of THEE and ME.

ಖಯ್ಯಾಮನ ಈ ಜನಪ್ರಿಯ ರೂಬಾಯತನ್ನು ಡಿವಿಜಿ ಹೀಗೆ ಅನುವಾದಿಸಿದ್ದರು:

ಹಿಂದೊಂದು ಬಾಗಿಲ್; ಆ ಬೀಗಕ್ಕೆ ಕೈ ಕೈಯಿಲ್ಲ.

ಮುಂದೊಂದು ತೆರೆ; ಅದನ್ನೆತ್ತಿ ನೋಡಲಳವಲ್ಲ.

ಈ ಎಡೆಯೊಳೊಂದೆರಡು ದಿನ ನಾನು ನೀನೆಂದು

ಹರಟುವೆವು; ಬಳಿಕಿಲ್ಲ, ನಾನು ನೀನುಗಳು

ಆ ಕಾಲಕ್ಕೊಪ್ಪುವ ಭಾಷೆಗೆ ತಕ್ಕಂತೆ ಡಿವಿಜಿ ಅನುವಾದಿಸಿದ್ದರೆ, ಆಮೇಲೆ ಅದನ್ನು ಶಾ. ಬಾಲೂರಾವ್ ಲಯವನ್ನು ಬಿಟ್ಟು ಅರ್ಥವನ್ನಷ್ಟೇ ಉಳಿಸಿಕೊಂಡು ಕನ್ನಡಕ್ಕೆ ತಂದರು. ಇದೀಗ ಕೊಪ್ಪ ಅವರ ಅನುವಾದ ಹೀಗಿದೆ:

ಸಖಿ, ಅಲ್ಲೊಂದು ಮರವಿರಲಿ

ಆ ಮರದಡಿಯಲ್ಲಿ

ಒಂದಿನಿತು ರೊಟ್ಟಿ

ಬಟ್ಟಲು ತುಂಬ ಮದ್ಯ

ಜೊತೆಗೆ ನೀನು

ನಿನ್ನ ಹಾಡುಗಳ ಅನುರಣಗಳಿರಲಿ

ಇವಿಷ್ಟು ಸಾಕು

ಸ್ವರ್ಗವಾದರೂ ಏಕೆ ಬೇಕು?

ಅನುರಣವೋ ಅನುರಣನವೋ ಎಂಬ ಜಿಜ್ಞಾಸೆ ಹಾಗೇ ಉಳಿದುಕೊಳ್ಳುತ್ತದೆ.

ಶೀರ್ಷಿಕೆ: ಉಮರ್ ಖಯ್ಯಾಮನ ಪದ್ಯಗಳು ಲೇಖಕರು: ಎನ್.ಜಗದೀಶ್ ಕೊಪ್ಪ ಪ್ರಕಾಶಕರು: ಲಡಾಯಿ ಪ್ರಕಾಶನ ಪುಟಗಳು:80 ಬೆಲೆ:ರೂ.50/-

ಕೃಪೆ : ಕನ್ನಡ ಪ್ರಭ

ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ

scan0040-1

ಮನಸೂರೆ

ಮನಸೂರೆ ಹೋಯಿತೋ

ಹೋ ಇದ್ದಕ್ಕಿದ್ದಂತೆ

ಈ ಗೀತೆ ಹಾಡಿದುದು

ಹೊಸ ಸಪ್ನ ಬಿದ್ದಂತೆ

ಅಂತೆ, ಇಂತೆ, ಎನ್ನುತ್ತಾ

ಮನಮೀರಿ ನಾನಿಂತೆ.

ಕಳಚಿ ಬಿದ್ದಿತು ಗೆಳೆಯ

ಜಗದ ಸಂತೆಯ ಚಿಂತೆ

ಮಲ್ಲಿಕಾರ್ಜುನ ಮನ್ಸೂರರ ಗಾಯನ ಕೇಳಿ ಬೇಂದ್ರೆ ಬರೆದ ಸಾಲುಗಳಿವು. ಈ ಗಾನಜೀವನದ ಮಹೋತ್ಸವದ ಗಳಿಗೆಗಳನ್ನು ಕುರಿತು ಮನ್ಸೂರರು 1983ರಲ್ಲೇ ಬರೆದಿದ್ದರು. ಆ ಅನುಭವದ ಸವಿಬುತ್ತಿಗಂಟಿಗೆ `ನನ್ನ ರಸಯಾತ್ರೆಎಂದು ಹೆಸರಿಟ್ಟಿದ್ದರು. ಅದೀಗ 25 ವರುಷಗಳ ನಂತರ ಮರುಮುದ್ರಣ ಕಾಣುತ್ತಿದೆ.

ಮನ್ಸೂರರನ್ನು ಈ ಕೃತಿ ಬರೆಯುವಂತೆ ಒತ್ತಾಯಿಸಿದವರು ಅನಕೃ. ಆಮೇಲೆ ಪುಲ ದೇಶಪಾಂಡೆ, ರಮೇಶ ನಾಡಕರ್ಣಿ ಮತ್ತು ಬಿಎ ಸನದಿಯವರು ಬೆನ್ನು ಬಿಡದೇ ಕಾಡಿದಾಗ ಹೊರಬಂದದ್ದು `ನನ್ನ ರಸಯಾತ್ರೆಎಂದು ಮನ್ಸೂರರು ಬರೆದುಕೊಂಡಿದ್ದಾರೆ.

ಮನ್ಸೂರರು ವಚನಗಳನ್ನು ಹಾಡುವಂತೆ ಪ್ರೇರೇಪಿಸಿದ್ದು ಅನಕೃ. ಆ ಪುಟ್ಟ ಪ್ರಸಂಗ ಹೀಗೆ:

ಕೃಷ್ಣರಾಯರು ನನ್ನ ಹಾಡನ್ನು ಕೇಳಿ ತುಂಬಾ ಸಂತೋಷಪಟ್ಟರು. ನಮ್ಮ ಸ್ನೇಹ ಬೆಳೆಯಿತು. ಅವರೊಮ್ಮೆ `ನೀವೇಕೆ ವಚನವನ್ನು ಹಾಡುವುದಿಲ್ಲ?’ ಎಂದು ಕೇಳಿದರು ಮತ್ತು ತಾವೇ ಅತ್ತಿಕೊಳ್ಳಗುಡ್ಡದ ಮೇಲೆ `ವಚನದಲ್ಲಿ ನಾಮಾಮೃತ ತುಂಬಿಹಾಡಿ ತೋರಿಸಿದರು.

ಹೀಗೆ ನೆನಪಿಸಿಕೊಳ್ಳುತ್ತಾ ಮನ್ಸೂರರು ಬರೆಯುತ್ತಾರೆ, `ನನಗೆ ಇದುವರೆಗೆ ಸಿಕ್ಕ ಶ್ರೇಯದಲ್ಲಿ ನನ್ನ ಸಾಧನೆಯಷ್ಟೇ ಗೆಳೆಯರ ಸ್ನೇಹ ಸೌಹಾರ್ದಗಳ ಪಾಲೂ ಉಂಟು.

ಹಿರಿಯ ಗಾಯಕನ ಜೀವನಕತೆಯನ್ನು ಓದುತ್ತಾ ನಮ್ಮ ಜೀವನಪ್ರೀತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ `ನನ್ನ ರಸಯಾತ್ರೆಉದಾಹರಣೆ.

ಶೀರ್ಷಿಕೆ: ನನ್ನ ರಸಯಾತ್ರೆ ಲೇಖಕರು: ಮಲ್ಲಿಕಾರ್ಜುನ ಮನ್ಸೂರ್ ಪ್ರಕಾಶಕರು: ಅಭಿನವ ಪುಟಗಳು:120 ಬೆಲೆ:ರೂ.60/-

ಕೃಪೆ : ಕನ್ನಡ ಪ್ರಭ