“ಈಗ ನೀನು ಈ ಶಾಲೆಯ ವಿದ್ಯಾರ್ಥಿನಿ” ಎಂದು ಮುಖ್ಯೋಪಧ್ಯಾಯರು ಹೇಳಿದ ಮೇಲೆ ತೊತ್ತೊ-ಚಾನ್ ನಾಳೆ ಬೆಳಗಾಗುವುದನ್ನೇ ಕಾಯ್ದಳು. ಈ ಮೊದಲು ಆಕೆ ಎಂದೂ ಹಾಗೆ ಕಾಯ್ದಿರಲಿಲ್ಲ.
ಪುಟ್ಟ ತೊತ್ತೊ-ಚಾನ್ ತೊಮೊಯೆ ಗಾಕುಯೆನ್ ಶಾಲೆಯ ವಾತಾವರಣ ತಾನು ಹಾಗೂ ತನ್ನ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಇಷ್ಟವಾಗಬೇಕು ಹಾಗೂ ಸಮವಸ್ತ್ರ ಮತ್ತು ಪಠ್ಯಕ್ರಮಕ್ಕಿಂತ ಮಕ್ಕಳಿಗೆ ಬೇಕಾದ ಸ್ವಾದಿಷ್ಟ ಊಟದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮುಖ್ಯೋಪದ್ಯಾಯರು ಇರಬೇಕು ಎಂದು ಆಶಿಸಿದ್ದಳು. ಅಲ್ಲಿ ಎಲ್ಲ ಮಕ್ಕಳು ಸಂಗೀತ ಕಲಿಯುತ್ತಿದ್ದರು, ಆಟವಾಡುತ್ತಿದ್ದರು, ಬೇಸಿಗೆಯಲ್ಲಿ ಹೊರಗೆ ಕ್ಯಾಂಪು ಹಾಕುತ್ತಿದ್ದರು, ಬಿಸಿನೀರಿನ ಬುಗ್ಗೆಯಲ್ಲಿ ನಡೆದಾಡುತ್ತಿದ್ದರು, ನಾಟಕ ಆಡುತ್ತಿದ್ದರು ಹಾಗೂ ಬಯಲಿನಲ್ಲಿ ಅಡುಗೆ ಮಾಡುವ ಆನಂದ ಅನುಭವಿಸುತ್ತಿದ್ದರು. ಆ ಮಕ್ಕಳಲ್ಲಿ ಕೆಲವರು ಹಾಡುಗಾರರಿದ್ದರು, ಆಟಗಾರರಿದ್ದರು ಹಾಗೂ ಒಬ್ಬ ಭಾವೀ ಡಾಕ್ಟರ‍್ ಕೂಡಾ ಇದ್ದ.
ಇದೆಲ್ಲವೂ ಸ್ನೇಹಶೀಲ ಹಾಗೂ ಕಲ್ಪನಾಶೀಲ ಮುಖ್ಯೋಪಧ್ಯಾಯ ಶ್ರೀ ಕೊಬಾಯಾಶಿ ಅವರಿಂದ ಸಾಧ್ಯವಾಯಿತು. ಅವರು ತೊತ್ತೊ-ಚಾನ್ ಗೆ ಯಾವಾಗಲೂ ಹೇಳುತ್ತಿದ್ದರು. “ನೀನು ಖಂಡಿತಾ ಒಳ್ಳೆಯ ಹುಡುಗಿ!”. ನಿಸ್ಸಂದೇಹವಾಗಿ ಅವರು ಇದೇ ಪ್ರೋತ್ಸಾಹಕ ಮಾತನ್ನು ಇತರ ಮಕ್ಕಳಿಗೂ ಹೇಳುತ್ತಿದ್ದಿರಬೇಕು. ಮಕ್ಕಳನ್ನು ಉಲ್ಲಾಸದಿಂದಿಡುವ ಕಡೆಗೆ ಅವರು ಹೆಚ್ಚಿನ ಗಮನ ಹರಿಸುತ್ತಿದ್ದರು. ಅವಳ ಶಾಲೆ ಮಕ್ಕಳಿಗೆ ಮನೆಯಿಂದ ದೂರವಿರುವ ಮತ್ತೊಂದು ಮನೆಯಂತಿತ್ತು. ಆಗಿನ ಪುಟ್ಟ ಹುಡುಗಿ ತೊತ್ತೊ-ಚಾನ್ ಈಗ ದೊಡ್ಡವಳಾಗಿ ತೆತ್ಸುಕೋ ಕುರೋಯಾನಾಗಿ ಎಂಬ ಹೆಸರಿನಲ್ಲಿ ಜಪಾನಿನಾದ್ಯಂತ ಪ್ರಸಿದ್ಧಿ ಪಡೆದ ಯಶಸ್ವೀ ಟೆಲಿವಿಷನ್ ಕಲಾವಿದೆ. ಜಪಾನಿನಿಂದ ಯುನಿಸೆಫ್ ನ ಸದ್ಭಾವನಾ ರಾಯಬಾರಿಯಾಗಿ ನೇಮಕಗೊಂಡಿರುವ ಅವರಿಂದ ಮಕ್ಕಳು, ಹಾಗೆಯೇ ಮಕ್ಕಳ ಜೊತೆಯೇ ಒಂದಲ್ಲ ಒಂದು ರೀತಿಯ ಸಂಬಂಧವನ್ನು ಹೊಂದಿರುವ ಶಿಕ್ಷಕರು, ತಂದೆ-ತಾಯಿಯರು, ಅಜ್ಜ-ಅಜ್ಜಿಯರು ತಿಳಿದುಕೊಳ್ಳುವುದು ಬಹಳಷ್ಟಿದೆ. ಜಪಾನಿನ ಈ ಜನಪ್ರಿಯ ಪುಸ್ತಕ ತನ್ನ ಪ್ರಭಾವಶಾಲಿ ಸಂದೇಶ ಸಾರುತ್ತಿದೆ:
ಅರಳಲಿ ಹೂಗಳು ನೂರಾರು
ನಡೆಯಲಿ ವಿಚಾರ ಸಂಘರ್ಷಗಳು ಸಾವಿರಾರು.
– ಪುಸ್ತಕದ ಬೆನ್ನುಡಿಯಿಂದ
ಮಕ್ಕಳ ಕುರಿತು ಮಕ್ಕಳೇ ಪ್ರಧಾನ ಪಾತ್ರದಲ್ಲಿರುವ ಒಂದು ಕಾದಂಬರಿ ತೊತ್ತೊ-ಚಾನ್ . ‘ತೊತ್ತೊ-ಚಾನ್’ ಅತ್ಯಂತ ಹೆಚ್ಚು ಬಾಷೆಗಳಿಗೆ ಅನುವಾದಗೊಂಡ ಅತ್ಯಂತ ಹೆಚ್ಚು ಮಾರಾಟ ಕಂಡ ಕೃತಿ. ಈ ಬೇಸಿಗೆ ರಜೆಯಲ್ಲಿ ನಿಮ್ಮ ಮಕ್ಕಳಿಗೆ ಓದಿಸಿ ನೀವೂ ಓದಿ ಎಂಬ ಆಶಯ ‘ಕನ್ನಡ ಪ್ರಭ’ ದ್ದು.
ಶೀರ್ಷಿಕೆ: ತೊತ್ತೊ-ಚಾನ್ ಲೇಖಕರು:ತೆತ್ಸುಕೊ ಕುರೋಯಾನಾಗಿ ಅನುವಾದ:ವಿ.ಗಾಯತ್ರಿ ಪ್ರಕಾಶಕರು:ನ್ಯಾಷನಲ್ ಬುಕ್ ಟ್ರಸ್ಟ್ ಪುಟಗಳು:೧೫೩ ಬೆಲೆ:ರೂ೪೦/-
Filed under: ಕಾದಂಬರಿ | Tagged: ಕನ್ನಡ ಪ್ರಭ, ತೆತ್ಸುಕೊ ಕುರೋಯಾನಾಗಿ, ತೊತ್ತೊ-ಚಾನ್, ನ್ಯಾಷನಲ್ ಬುಕ್ ಟ್ರಸ್ಟ್, ವಿ.ಗಾಯತ್ರಿ | 4 Comments »