Posted on ಮೇ 27, 2009 by pusthakapreeethi

ಇಂದಿರಾ ಸಂತ್ ಮರಾಠಿಯ ಪ್ರಸಿದ್ಧ ಕವಿ. ಭಾವಗೀತೆಯ ಕವಿಯಾಗಿ ಅವರು ಪರಿಚಿತರು. ಅವರ ಮೊದಲ ಕವಿತಾ ಸಂಗ್ರಹ `ಗೊಂಬೆಗಳು’ ಎಂಬುದು. ಬಳಿಕ ಪ್ರಕಟವಾದ `ಗರ್ಭರೇಶಿಮೆ’ ಕವಿತೆಗಳನ್ನು ಸಾಹತ್ಯ ಅಕಾಡೆಮಿ ಮರು ಮುದ್ರಿಸಿದೆ.
ಬದುಕಿನ ದಾರುಣತೆಯನ್ನು ಬಿಂಬಿಸುವ ಕವಿತೆಗಳನ್ನು ಬರೆವ ಇಂದಿರಾ ಸಂತ್ ಬಾಲ್ಯದ ನೆನಪುಗಳು ಹಾಗೂ ದೈನಿಕ ಬದುಕಿನಿಂದ ಕವಿತೆಗಳನ್ನು ಕಟ್ಟಿದವರು. ಹಾಗೂ ನಾವು ನಿತ್ಯ ನೋಡುತ್ತಿರುವ ಸಂಗತಿಗಳಿಂದಲೇ ಕವಿತೆಗಳ ವಸ್ತುಗಳನ್ನು ಅವರು ಆಯ್ದುಕೊಂಡಿರುವುದನ್ನು ಕಾಣಬಹುದು.
… ನಾನು ಮಧ್ಯಬಿಂದುವಿನಂತೆ ತಟಸ್ಥ,
ಮನಮಗ್ನ
ನವಿಲುಗರಿಯ ಮೇಲಿನ ಕಣ್ಣಿನಂತೆ.
(ಮನಮಗ್ನ/ಪು.65)
ಇಂದಿರಾ ಅವರ ದನಿ ಮೆಲು ದನಿಯದು. ಇಂಥ ಚಿತ್ರಗಳು ಸಂಕಲನದ ಅನೇಕ ಕಡೆಗಳಲ್ಲಿ ಇವೆ. ಈ ಆಕರ್ಷಕ ಚಿತ್ರಗಳಿಂದ, ದೈನಿಕದ ಮಾತಿನಿಂದ ಇಲ್ಲಿನ ಕವಿತೆಗಳು ಗಮನ ಸೆಳೆಯುತ್ತವೆ.
ಹಿರಿಯ ವಿದ್ವಾಂಸರಾಗಿದ್ದ ಲ.ರಾ.ಪಂಡಿತ ಈ ಕವಿತೆಗಳನ್ನು ಅನುವಾದಿಸಿದ್ದಾರೆ. ಅವರು ಮರಾಠಿ ಭಾಷೆಯ ಸೊಗಡನ್ನು ಈ ಅನುವಾದದಲ್ಲೂ ತಂದಿದ್ದಾರೆ.
ಶೀರ್ಷಿಕೆ: ಗರ್ಭರೇಶಿಮೆ ಲೇಖಕರು:ಇಂದಿರಾ ಸಂತ್ ಅನು:ಲ.ರಾ.ಪಂಡಿತ್ ಪ್ರಕಾಶಕರು:ಸಾಹಿತ್ಯ ಅಕಾಡೆಮಿ ಪುಟ:140 ಬೆಲೆ:ರೂ.100/-
ಕೃಪೆ: ಪ್ರಜಾವಾಣಿ
Filed under: ಕಾವ್ಯ-ಕವನ | Tagged: ಇಂದಿರಾ ಸಂತ್, ಗರ್ಭರೇಶಿಮೆ, ಲ.ರಾ.ಪಂಡಿತ್, ಸಾಹಿತ್ಯ ಅಕಾಡೆಮಿ | Leave a comment »
Posted on ಮೇ 26, 2009 by pusthakapreeethi

ತಮಿಳಿನ ಮುಖ್ಯ ಲೇಖಕರ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಪಾ.ಶ. ಶ್ರೀನಿವಾಸ. ಈ ಸಂಕಲನದಲ್ಲಿ ಕಲ್ಕಿ, ಅಖಿಲನ, ಜಯಕಾಂತನ್, ಇಂದುಮತಿ ಮೊದಲಾದ ಕತೆಗಾರರ ಎಂಟು ಕತೆಗಳು ಇವೆ.
ಕಲ್ಕಿಯವರ ‘ಒಡೆದ ಕೋಟೆ’, ಅಖಿಲನ್ ಅವರ ‘ಅಗ್ನಿ ಪರ್ವತ’, ಜಯಕಾಂತನ್ ಅವರ ‘ಉಪವಾಸ ವ್ರತ’, ಇಂದುಮತಿ ಅವರ ‘ಮೆರವಣಿಗೆ”, ಮಾಲನ ಅವರ ‘ಜಾಗ’, ಇಲ್ಲಿನ ಮುಖ್ಯ ಕಥೆಗಳಾಗಿವೆ. ಇವೆಲ್ಲವನ್ನೂ ಶ್ರೀನಿವಾಸ ಮೂಲದ ಅಂದಗೆಡದಂತೆ ಅನುವಾದಿಸಿದ್ದಾರೆ. ಭಾರತೀಯ ಭಾಷೆಗಳ ಕತೆಗಳ ಬಗ್ಗೆ ಕುತೂಹಲ ಇರುವವರಿಗೆ ಇದೊಂದು ಒಳ್ಳೆಯ ಓದಾಗುತ್ತದೆ.
ಇದರೊಂದಿಗೆ ತಮಿಳು ಕತೆಗಳ ಬಗ್ಗೆ ಚಿಕ್ಕದಾದ ಪ್ರವೇಶವನ್ನು ಅನುವಾದಕರು ಕೊಟ್ಟಿದ್ದಾರೆ. ಇದು, ಕಥೆಗಳ ಮೊದಲಿಗೆ ಬರುವ ಲೇಖಕರ ಪರಿಚಯ ಕಥೆಗಳನ್ನು ಒಟ್ಟಾರೆ ಅರಿಯಲು ಸಹಾಯಕವಾಗಿವೆ. ಇಲ್ಲಿ ಅನುವಾದಗೊಂಡಿರುವ ಕಥೆಗಾರರೆಲ್ಲ ಹಿರಿಯ ತಲೆಮಾರಿಗೆ ಸೇರಿದವರು. ಯುವ ಕಥೆಗಾರರ ಕತೆಗಳು ಇಲ್ಲದಿರುವುದು ಈ ಸಂಕಲನದ ಕೊರತೆ ಎಂದೇ ಹೇಳಬಹುದು.
ಶೀರ್ಷಿಕೆ : ಪ್ರಸಾದ (ತಮಿಳು ಸಣ್ಣ ಕತೆಗಳ ಸಂಕಲನ) ಅನು:ಪಾ.ಶ.ಶ್ರೀನಿವಾಸ ಪ್ರಕಾಶಕರು:ಪ್ರಿಯದರ್ಶಿನಿ ಪ್ರಕಾಶನ ಪುಟ:೧೪೮ ಬೆಲೆ: ರೂ.100/-
ಕೃಪೆ: ಪ್ರಜಾವಾಣಿ
Filed under: ಕಥಾ ಸಂಕಲನ | Tagged: ಪಾ.ಶ.ಶ್ರೀನಿವಾಸ, ಪ್ರಜಾವಾಣಿ, ಪ್ರಸಾದ, ಪ್ರಿಯದರ್ಶಿನಿ ಪ್ರಕಾಶನ | Leave a comment »
Posted on ಮೇ 25, 2009 by pusthakapreeethi

ಕೊರಗೆಂದರೆ
ನಾವು ಎಲ್ಲರಂತೆ ಪ್ರೇಮಿಸಲಿಲ್ಲ
ನಿರೀಕ್ಷೆಗಳೆಲ್ಲ ಹುಸಿಯಾದ ಮೇಲೆ
‘ಹುಸಿ‘ ಎಂಬ ಪದಕ್ಕೆ ಅನ್ವರ್ಥವಾಗಿ
ನಿರೀಕ್ಷೆ ಎಂದು ಬರೆದಿಟ್ಟುಕೊಂಡಿದ್ದೇನೆ
ಹೌದು,
ನಮ್ಮಿಬ್ಬರ ಭೇಟಿಗೆ ಬೆಳದಿಂಗಳು ಚೆಲ್ಲುತ್ತಿದ್ದ
ಚಂದಿರ ಈಗಲೂ ನಿಮ್ಮೂರಲ್ಲಿ ನೆಲಸಿದ್ದಾನ?
(ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ-ಪು-೩೬)
ಎಂದು ಸಂಕಲನದ ಮುಖ್ಯ ಕವಿತೆಯಲ್ಲಿ ಚಿತ್ರವತ್ತಾಗಿ ಬರೆಯುವ ಕವಿ ಸಿದ್ದು ದೇವರಮನಿಯವರದು ಒಂದು ರೀತಿಯ ವಿಷಾದಗೀತೆಗಳು. ಇದು ಕವಿಯ ಮೊದಲ ಸಂಕಲನ.
ಇವರ ಕವಿತೆಗಳಲ್ಲಿ ಪ್ರೀತಿಯ ಕನವರಿಕೆಗಳಿವೆ, ಷರೀಫಜ್ಜನಿಗೊಂದು ಪತ್ರವಿದೆ, ಪ್ರಕೃತಿಯ ಕುರಿತಾದ ವ್ಯಾಮೋಹವಿದೆ. ರೋಮ್ಯಾಂಟಿಕ್ ಆಗಿ ಬರೆಯುವ ಕವಿಯ ಸರಳ ಮನಸ್ಸಿನ ಸರಳ ರಚನೆಗಳಿವು. ಸವೆದು ಸವಕಲಾಗಿರುವ ಕವಿಸಮಯಗಳೂ ಇತ್ತೀಚಿನ ಕವಿತೆಗಳಂತೆ ಈ ಕವಿತೆಗಳಲ್ಲೂ ಕಾಣಿಸಿಕೊಂಡಿವೆ.
ಆದರೂ ದೇವರಮನಿ ‘ಅಜ್ಜಿಯಾಗುವುದೆಂದರೆ…’, ‘ಹೀನ ಬದುಕಿನ ನೋವನುಂಡವಳು’, ‘ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ’,’ಅರ್ಥವಾಗದ ಚಿತ್ರ ಹಾಳು ಗೋಡೆಯ ಪಾಲು’ ಕವಿತೆಗಳಲ್ಲಿ ಓದುಗರಿಗೆ ಪ್ರಿಯರಾಗುತ್ತಾರೆ. ಕವಿತೆಗಳಿಗಿರುವ ದೊಡ್ಡ ತಲೆಬರಹಗಳು ಕವಿತೆಯ ಬಗ್ಗೆ ಹೆಚ್ಚಿನ ಕುತೂಹಲ ಹುಟ್ಟಿಸುವುದಿಲ್ಲ.
ಶೀರ್ಷಿಕೆ: ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ ಲೇಖಕರು:ಸಿದ್ದು ದೇವರಮನಿ ಪ್ರಕಾಶಕರು: ಅಭಿನವ ಪ್ರಕಾಶನ ಪುಟ:80, ಬೆಲೆ:ರೂ.50/-
ಕೃಪೆ : ಪ್ರಜಾವಾಣಿ
Filed under: ಕಾವ್ಯ-ಕವನ | Tagged: ಅಭಿನವ ಪ್ರಕಾಶನ, ಪ್ರಜಾವಾಣಿ, ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ, ಸಿದ್ದು ದೇವರಮನಿ | Leave a comment »
Posted on ಮೇ 24, 2009 by pusthakapreeethi

ಇಟೆಲಿಯ ಪತ್ರಕರ್ತ, ಬರಹಗಾರ ಇಟಾಲೋ ಕಾಲ್ವಿನೋನ ‘ಬ್ಯಾರನ್ ಇನ್ ದಿ ಟ್ರೀಸ್’ ಕಾದಂಬರಿಯನ್ನು ಕೆ.ಪಿ.ಸುರೇಶ ಕನ್ನಡಕ್ಕೆ ತಂದಿದ್ದಾರೆ. ಹನ್ನೆರಡು ವರುಷದ ಹುಡುಗನೊಬ್ಬನ ಸಾಕ್ಷೀ ಪ್ರಜ್ಞೆಯಲ್ಲಿ ನಿರೂಪಿತವಾಗಿರುವ ಕತೆ ಇದು.
‘ಕಾಡು ಮತ್ತು ನಾಡುಗಳ ಮಧ್ಯೆ ಚಲಿಸುತ್ತಾ ಎರಡರಿಂದಲೂ ಬೆಳೆಯುತ್ತಿರುವ ಕನ್ನಡ ಕವಿ’ ಕೆ.ಪಿ.ಸುರೇಶ್ ಅನುವಾದವನ್ನು ಎಚ್.ಎಸ್. ರಾಘವೇಂದ್ರರಾವ್ ಅತಿಯಾಗಿ ಮೆಚ್ಚಿಕೊಂಡಿದ್ದಾರೆ. ‘ಕನ್ನಡ ಕಾದಂಬರಿಗಳ ಈಚಿನ ಚಪಲಗಳನ್ನು ಮೀರಿ, ಬರವಣಿಗೆಯ ಹೊಸ ಸಾಧ್ಯತೆಗಳನ್ನು ಶೋಧಿಸುವ ಈ ಅನುವಾದ ನನಗೆ ಖುಷಿ ಕೊಟ್ಟದೆ‘ ಎಂದಿದ್ದಾರೆ. ಈಚಿನ ಚಪಲಗಳ ಬಗ್ಗೆ ಅವರೊಂದಷ್ಟು ವಿವರವಾಗಿ ಹೇಳಬಹುದಿತ್ತೇನೋ?
ಕಾಲ್ವಿನೋನ ತ್ರಿವಳಿ ಕಾದಂಬರಿಗಳಲ್ಲಿ ಅತ್ಯಂತ ಜನಪ್ರಿಯವಾದ ‘ಬ್ಯಾರನ್ ಇನ್ ದಿ ಟ್ರೀಸ್‘ಕಾದಂಬರಿ ಈಗ ಕನ್ನಡದಲ್ಲಿ ಲಭ್ಯ.
ಶೀರ್ಷಿಕೆ: ಕೊಸಿಮೊ ಅನುವಾದ:ಕೆ.ಪಿ.ಸುರೇಶ್ ಪ್ರಕಾಶಕರು: ಅಭಿನವ ಪುಟ:216, ಬೆಲೆ:ರೂ.100/-
ಕೃಪೆ : ಕನ್ನಡ ಪ್ರಭ
Filed under: ಕಾದಂಬರಿ | Tagged: ಅಭಿನವ, ಕನ್ನಡ ಪ್ರಭ, ಕೆ.ಪಿ.ಸುರೇಶ್, ಕೊಸಿಮೊ | Leave a comment »
Posted on ಮೇ 23, 2009 by pusthakapreeethi

ಕರುಣಾಳು ಬಾ ಬೆಳಕೆ
ಮಸುಕಿದೀ ಪಬ್ಬಿನಲಿ
ಕೈ ಹಿಡಿದು ಕುಡಿಸೆನ್ನನು
ವೈ.ಎನ್.ಕೆ. ಬರೆದ ಈ ಅಣಕವಾಡು ಸಾರ್ವಕಾಲಿಕ. ಕನ್ನಡದ ಹಿರಿಯ ಕವಿಗಳೂ ಅಣಕವಾಡು ಬರೆದಿದ್ದಾರೆ. ಹಿರಿಯ ಕವಿಗಳ ಕವಿತೆಗಳೂ ಸೊಗಸಾದ ಅಣಕವಾಡುಗಳಾಗಿ ರಂಜಿಸಿವೆ. ಬ್ರಹ್ಮಮುರಾರಿ ಸದಾಶಿವ ಲಿಂಗಂ ಎಂಬ ಲಿಂಗಾಷ್ಟಕದ ಸಾಲುಗಳನ್ನೂ ಬುದ್ದಿವಂತರು ಅಣಕು ಮಾಡಿದ್ದಾರೆ:
ಮೋಹಿನಿ ಮೋಹಕ ಮಾದಕ ಲಂಚಮ್
ಮಡದಿಯ ಕೋಪ ನಿವಾರಕ ಲಂಚಮ್
ಮಂತ್ರಿಯ ಮನವನು ಗೆಲ್ಲುವ ಲಂಚಮ್
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್
ಇಂಥ ಸೊಗಸಾದ ಅಣಕವಾಡುಗಳನ್ನು ಬರೆಯುತ್ತಾ ಬಂದಿರುವವರು ಎನ್.ರಾಮನಾಥ್. ‘ಹಗಲು ಹರಿಯಿತು ಇರುಳು ಕರಗಿತು, ಏಳು ಪಯಣಿಗ ಎಚ್ಚರಾ‘ ಎಂಬ ಚಕ್ರತೀರ್ಥದ ಹಾಡು ಅವರ ಅಣಕವಾಡುವಿನಲ್ಲಿ ‘ಕೊರೆತ ಮುಗಿಯಿತು ಸಭೆಯು ಕರಗಿತು ಏಳು ಸಭಿಕನೆ ಎಚ್ಚರಾ‘ ಎಂದಾಗುತ್ತದೆ. ಇದಕ್ಕೆ ಇನ್ನೆರಡು ಅಣಕವಾಡುಗಳನ್ನೂ ಅವರೇ ಕೊಟ್ಟಿದ್ದಾರೆ: ‘ಕದವು ತೆರೆಯಿತು ಇರುಳು ಸರಿಯಿತು ಏಳು ಕುಡುಕನೇ ಎಚ್ಚರ, ಮುಗಿಲು ಹರಿಯಿತು ಮಳೆಯು ಸುರಿಯಿತು ಸಾಗು ಪಯಣಿಗ ಎಚ್ಚರ‘.
ಶೀರ್ಷಿಕೆ: ಮಾಸದ ಅಣಕು ಗೀತೆಗಳು ಲೇಖಕರು:ಎನ್.ರಾಮನಾಥ್ ಪ್ರಕಾಶಕರು: ಪ್ರಶಾಂತ ಪ್ರಕಾಶನ ಪುಟ:118, ಬೆಲೆ:ರೂ.55/-
ಕೃಪೆ : ಕನ್ನಡ ಪ್ರಭ
Filed under: ಹಾಸ್ಯ ಸಾಹಿತ್ಯ | Tagged: ಎನ್.ರಾಮನಾಥ್, ಕನ್ನಡ ಪ್ರಭ, ಪ್ರಶಾಂತ ಪ್ರಕಾಶನ, ಮಾಸದ ಅಣಕು ಗೀತೆಗಳು | Leave a comment »
Posted on ಮೇ 22, 2009 by pusthakapreeethi

ಕೆಳದಿಯ ಅರಸರ ಕಾಲದಲ್ಲಿ ನಿರ್ಮಾಣವಾದ ಮಹಾಮತ್ತಿನ ಮಠಗಳಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕವಲೆದುರ್ಗದ ಮಥವೂ ಒಂದು. ಇದು ವೀರಶೈವ ಪರಂಪರೆಗೆ ಸೇರಿದ ಮಠ. ಇಂಥ ಅನೇಕ ಮಥಗಳು ನಿರ್ಮಾನವಾಗಿದ್ದರೂ ಅವುಗಳಲ್ಲಿ ಕೆಲವು ಈಗ ಇಲ್ಲವಾಗಿವೆ. ಈಗ ಬೆಂಗಳೂರು, ತುಮಕೂರು, ಕರಾವಳಿ, ಕೊಡಗಿನಲ್ಲಿರುವ ಮಹತ್ತಿನ ಮಠಗಳ ಬಗ್ಗೆ ನಡೆಸಿದ ಅಧ್ಯಯನ ಈ ಪುಸ್ತಕದಲ್ಲಿದೆ. ಇದನ್ನು ಕವಲೆದುರ್ಗದ ಮಠವೇ ಪ್ರಕಟಿಸಿದೆ.
ಕರ್ನಾಟಕದ ವೀರಶೈವ ಮಠಗಳಲ್ಲಿ ಎರಡು ಪರಂಪರೆಗಳು ಇವೆ. ಒಂದು ರಾಜಾಶ್ರಯ ಪಡೆದು, ನೂರಾರು ಶಾಖೆಗಳನ್ನು ಹೊಂದಿರುವ ಮಹಾಮತ್ತಿನ ಮಠಗಳು. ಇದರಲ್ಲಿ ಕವಲೆದುರ್ಗದ ಮಠವೂ ಒಂದು. ಇನ್ನೊಂದು ರಾಜಾಶ್ರಯ ಒಲ್ಲದ ಸ್ವತಂತ್ರವಾಗಿ ಬೆಳೆದ ವಿರಕ್ತಮಠ ಪರಂಪರೆ. ಮಹಾಮತ್ತಿನ ಪರಂಪರೆ ಬೆಳೆದದ್ದು ಕೆಳದಿ ಅರಸರ ಕಾಲದಲ್ಲಿ.
ಈ ಪುಸ್ತಕದಲ್ಲಿ ಕರ್ನಾಟಕದ ಮಹಾಮತ್ತಿನ ಮಠಗಳು, ಕವಲೇ ದುರ್ಗದ ಮಠದ ಚರಿತ್ರೆ, ಸಮಕಾಲೀನ ವೀರಶೈವ ಮಠಗಳು, ಅವುಗಳ ದಾನದತ್ತಿಗಳು – ಹೀಗೆ ಅವುಗಳಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಇಲ್ಲಿ ವಿವರವಾಗಿ ಕೊಡಲಾಗಿದೆ.
ಮಹಾಮತ್ತಿನ ಮಠಗಳ ಕುರಿತು ಒಂದು ಅಧ್ಯಯನಾತ್ಮಕ ಪುಸ್ತಕವೊಂದು ಈ ಮೂಲಕ ದೊರೆತಂತಾಗಿದೆ. ಇದು ಆಸಕ್ತರ ಕುತೂಹಲವನ್ನು ತಣಿಸುವುದರಲ್ಲಿ ಸಂದೇಹವಿಲ್ಲ.
ಶೀರ್ಷಿಕೆ: ಮಹಾಮತ್ತಿನ ಮಠಗಳು – ಒಂದು ಅಧ್ಯಯನ ಲೇಖಕರು:ಜಯದೇಪ್ಪ ಜೈನಕೇರಿ, ಡಾ.ಜಗದೀಶ ಪ್ರಕಾಶಕರು: ಮರುಳಸಿದ್ದೇಶ್ವರ ವೀರಶೈವ ಅಧ್ಯಯನ ಕೇಂದ್ರ ಪುಟ:285, ಬೆಲೆ:ರೂ.160/-
ಕೃಪೆ : ಪ್ರಜಾವಾಣಿ
Filed under: ಸಂಶೋಧನಾ ಸಾಹಿತ್ಯ | Tagged: ಜಯದೇಪ್ಪ ಜೈನಕೇರಿ, ಡಾ.ಜಗದೀಶ, ಪ್ರಜಾವಾಣಿ, ಮರುಳಸಿದ್ದೇಶ್ವರ ವೀರಶೈವ ಅಧ್ಯಯನ ಕೇಂದ್ರ, ಮಹಾಮತ್ತಿನ ಮಠಗಳು - ಒಂದು ಅಧ್ಯಯನ | Leave a comment »
Posted on ಮೇ 21, 2009 by pusthakapreeethi

ಉತ್ತರ ಕನ್ನಡದ ಕಾಳಿ ನದಿಯ ದಂಡೆಯಿಂದ ಶರಾವತಿ, ತುಂಗಾ ನದಿಗಳವರೆಗೆ ತಮ್ಮ ವಾಸದ ವ್ಯಾಪ್ತಿಯನ್ನು ಹೊಂದಿರುವ ಮರಾಟಿ ಕುಣಬಿಗಳು ಒಂದು ವಿಶಿಷ್ಟ ಬುಡಕಟ್ಟಾಗಿದೆ. ಮಲೆನಾಡಿನಲ್ಲಿ ಹರಡಿಕೊಂಡಿರುವ ಈ ಬುಡಕಟ್ಟಿನ ಬಗ್ಗೆ ಸೂಕ್ಷ್ಮವಾಗಿ, ವಸ್ತುನಿಷ್ಟವಾಗಿ ಅಧ್ಯಯನ ಮಾಡಿದ್ದಾರೆ ಜೆ.ಕೆ.ರಮೇಶ್.
ಮರಾಟಿ ಕುಣಬಿಗಳು ಗಿರಿಜನರು. ಅವರು ಪ್ರಕೃತಿಯನ್ನು ಅವಲಂಬಿಸಿ ಬದುಕುತ್ತಿರುವವರು. ಅವರು ಮಾಡುತ್ತಿರುವ ವ್ಯವಸಾಯ ಕುಮರಿ ಬೇಸಾಯ. ಇದರೊಂದಿಗೆ ಅವರು ಇಲ್ಲಿ ವಲಸೆ ಬಂದು ಕರ್ನಾಟಕದಲ್ಲಿ ನೆಲೆಯಾದವರು.
ಇಂಥ ಕಾಡಿನ ಜೀವಿಗಳ ಸಂಪ್ರದಾಯ, ಸಾಮಾಜಿಕ ಕಟ್ಟಳೆಗಳು, ಅದರ ಸ್ವರೂಪ, ಕಲೆ, ಹಾಡು ಹಿನ್ನೆಲೆ ಇವನ್ನೆಲ್ಲ ದಾಖಲಿಸಿದ್ದಾರೆ ಜಿ.ಕೆ.ರಮೇಶ್. ಇದರೊಂದಿಗೆ ಅವರು ಇಲ್ಲಿ ವಲಸೆ ಬರಲು ಇದ್ದ ಐತಿಹಾಸಿಕ ಕಾರಣಗಳನ್ನು ದಾಖಲಿಸಿದ್ದಾರೆ.
ಮನೆ ಮಾತು ಮರಾಠಿಯಾದರೂ ಅವರು ಹೆಚ್ಚಾಗಿ ಬಳಸುವುದು ಕನ್ನಡವನ್ನು. ಇಂಥ ಗಿರಿಜನ ವಾಸಿಗಳ ಬಗ್ಗೆ ದಟ್ಟ ಚಿತ್ರವನ್ನು ಲೇಖಕರು ನೀಡಿದ್ದಾರೆ. ಪುಸ್ತಕದ ಕೊನೆಯಲ್ಲಿ ಅವರ ಜಾನಪದ ಹಾಡುಗಳನ್ನು ಕೂಡ ನೀಡಲಾಗಿದೆ.
ಅವುಗಳು ಬಹಳಷ್ಟು ಮರಾಠಿಯಲ್ಲಿದ್ದರೆ, ಕೆಲವು ಮಾತ್ರ ಕನ್ನಡದಲ್ಲಿವೆ. ಮರಾಠಿ ಹಾಡುಗಳ ಅನುವಾದವನ್ನು ಕೊಟ್ಟಿದ್ದರೆ ಈ ಪುಸ್ತಕದ ಉಪಯುಕ್ತತೆ ಇನ್ನಷ್ಟು ಹೆಚ್ಚಾಗುತ್ತಿತ್ತು. ಇಲ್ಲಿನ ಒಂದು ಕೋಲಾಟದ ಹಾಡು ಅರ್ಥಪೂರ್ಣವಾಗಿದೆ.
ದಾಸ ಬಣ್ಣದ ಹೂವ ತಂದೆ ನಾನು
ದಾಸ ಬಣ್ಣದ ಹೂವ ತಂದೆ
ಹೂವ ಮುಡಿವಾ ಜನರಲ್ಲೋ ನಾವು
ಹೂವ ಮುಡಿವ ಜನರಲ್ಲಾ
ಶೀರ್ಷಿಕೆ: ಮರಾಟಿ ಕುಣುಬಿಗಳು ಲೇಖಕರು:ಜೆ.ಕೆ.ರಮೇಶ್ ಪ್ರಕಾಶಕರು: ಚಕೋರ ಪ್ರಕಾಶನ ಪುಟ:84, ಬೆಲೆ:ರೂ.65/-
ಕೃಪೆ : ಪ್ರಜಾವಾಣಿ
Filed under: ಸಂಶೋಧನಾ ಸಾಹಿತ್ಯ | Tagged: ಚಕೋರ ಪ್ರಕಾಶನ, ಜೆ.ಕೆ.ರಮೇಶ್, ಪ್ರಜಾವಾಣಿ, ಮರಾಟಿ ಕುಣುಬಿಗಳು | Leave a comment »
Posted on ಮೇ 20, 2009 by pusthakapreeethi

1981 ರಲ್ಲಿ ಪ್ರಕಟವಾದ ‘ಗಂಡುಗಲಿ ಮದಕರಿನಾಯಕ‘ ಕಾದಂಬರಿಯನ್ನು ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ನಿಮಿತ್ತ, ಮರುಮುದ್ರಣ ಮಾಡಿದ್ದಾರೆ. ಇದು ನಾಲ್ಕನೆಯ ಮುದ್ರಣ. ಸಾಹಿತ್ಯ ಸಮ್ಮೇಳನದಲ್ಲಿ ಈ ಕಾದಂಬರಿಯ 748 ಪ್ರತಿಗಳು ಮಾರಾಟವಾಗಿವೆ ಎನ್ನುತ್ತಾರೆ ಪ್ರಕಾಶಕರು.
ದಲಿತ, ಬಂಡಾಯ, ಸಸ್ಪೆನ್ಸ್, ಪಾಲಿಟಿಕ್ಸ್, ಡೀಪ್ ಲವ್, ಐತಿಹಾಸಿಕ, ಕೌಟುಂಬಿಕ, ಸಂಗೀತ, ನೃತ್ಯ- ಯಾವ ಪ್ರಕಾರವನ್ನೇ ಆರಿಸಿಕೊಂಡರೂ ಅಧ್ಯಯನ ಮಾಡಿ ವಸ್ತುನಿಷ್ಟವಾಗಿಯೂ ಬರೆವ ವೇಣು ಯಾವುದೇ ಲೇಬಲ್ ಅಂಟಿಸಿಕೊಳ್ಳದ ಸೃಜನಶೀಲ ಬರಹಗಾರರು. ಐತಿಹಾಸಿಕ ಕಾದಂಬರಿಗಳ ಅವನತಿಯ ಕಾಲದಲ್ಲಿ ಓಯಸ್ಸಿಸ್ ನಂತೆ ದುರ್ಗದ ಇತಿಹಾಸ ಕುರಿತಂತೆ ಕೃತಿ ರಚನೆಗಿಳಿದು ‘ಜನಪ್ರಿಯತೆ ಮತ್ತು ಮೌಲ್ವಿಕತೆ ಬೇರೆ ಬೇರೆ ಎಂಬ ಅಭಿಪ್ರಾಯವನ್ನು ಹುಸಿಯಾಗಿಸಿ ಬೆಳೆದ ಲೇಖಕ‘ ಎಂಬ ಮೆಚ್ಚುಗೆಯ ಸಾಲುಗಳು ಈ ಲೇಖಕನ ಬಗ್ಗೆ ಮುನ್ನುಡಿಯಲ್ಲಿವೆ.
ಈ ಕಾದಂಬರಿಯನ್ನು ಓದಬೇಕೆಂಬ ಆಸೆ ಹುಟ್ಟಿಸುವುದಕ್ಕೆ ಇಷ್ಟು ವಿವರಗಳು ಸಾಕಲ್ಲವೇ?
ಶೀರ್ಷಿಕೆ: ಗಂಡುಗಲಿ ಮದಕರಿನಾಯಕ ಲೇಖಕರು:ಬಿ.ಎಲ್.ವೇಣು ಪ್ರಕಾಶಕರು: ಗೀತಾಂಜಲಿ, ಶಿವಮೊಗ್ಗ ಪುಟ:236, ಬೆಲೆ:ರೂ.195/-
ಕೃಪೆ : ಕನ್ನಡ ಪ್ರಭ
Filed under: ಐತಿಹಾಸಿಕ, ಕಾದಂಬರಿ | Tagged: ಕನ್ನಡ ಪ್ರಭ, ಗಂಡುಗಲಿ ಮದಕರಿನಾಯಕ, ಗೀತಾಂಜಲಿ ಶಿವಮೊಗ್ಗ, ಬಿ.ಎಲ್.ವೇಣು | 1 Comment »
Posted on ಮೇ 19, 2009 by pusthakapreeethi

ಹಿರಿಯ ಲೇಖಕಿ ಎಚ್.ಎಸ್.ಪಾರ್ವತಿಯವರು ಬರೆದ ೧೯ ಲೇಖನಗಳ ಸಂಗ್ರಹವಿದು. ಲೇಖಕಿ ಬೇರೆ ಬೇರೆ ಪುಸ್ತಕಗಳ ಮೇಲೆ ಬರೆದ ಲೇಖನಗಳನ್ನು ಒಂದೆಡೆ ತಂದಿದ್ದಾರೆ. ಇವುಗಳಲ್ಲಿ ಬಹಳಷ್ಟು ಸಂಭಾವನಾ ಗ್ರಂಥಗಳಿಗೆ ಬರೆದವು ಎಂಬುದು ವಿಶೇಷ.
ನಾ.ಡಿಸೋಜಾ ಅವರ ‘ಕುಂಜಾಲು ಕಣಿವೆಯ ಕೆಂಪು ಹೂ’, ‘ಪಟ್ಟ ಮಹಾದೇವಿ ಶಾಂತಲಾ ಬಗ್ಗೆ ಪ್ರಕಟವಾಗಿರುವ ಕಾದಂಬರಿಗಳು’,‘ಅನಕೃ ಅವರ ಕಥಾ ಸಾಹಿತ್ಯ’, ‘ನವೋದಯ ಕಥೆಗಳು’ ಇಂಥ ಲೇಖನಗಳಲ್ಲೆಲ್ಲ ಲೇಖಕಿಯ ತಲಸ್ಪರ್ಶಿಯಾದ ಅಧ್ಯಯನ ಇರುವುದು ಕಾಣುತ್ತದೆ. ನಾ.ಡಿಸೋಜಾ ಅವರ ಕಾದಂಬರಿಯ ಬಗ್ಗೆ ಬರೆದುದನ್ನು ಬಿಟ್ಟರೆ ಲೇಖಕಿ ಆಧುನಿಕ ಲೇಖಕರ ಸಾಹಿತ್ಯದ ಬಗ್ಗೆ ಬರೆದಿಲ್ಲದಿರುವುದು ಕುತೂಹಲ ಹುಟ್ಟಿಸುತ್ತದೆ. ಇವುಗಳ ಜೊತೆಗೆ ಜಿ.ಎಸ್.ಶಿವರುದ್ರಪ್ಪನವರ ಬಗ್ಗೆ ಬರೆದ ಆತ್ಮೀಯ ಚಿತ್ರಣವೊಂದು ಇಲ್ಲಿದೆ.
ಇವೆಲ್ಲ ಲೇಖನಗಳು ಅಕಾಡೆಮಿಕ್ ಅಧ್ಯಯನದ ಫಲವಾಗಿದೆ. ಸಾಹಿತ್ಯದ ಕೆಲವು ವಿವರಗಳಿಗಾಗಿ, ಮಾಹಿತಿಗಳಿಗಾಗಿ ಈ ಪುಸ್ತಕವನ್ನು ನೋಡಬಹುದು. ಇವುಗಳಲ್ಲಿ ‘ಸ್ವಾತಂತ್ರ‍್ಯ ಪೂರ್ವದ ಕನ್ನಡ ಲೇಖಕಿಯರು’, ‘ಪ್ರಾಚೀನ ಕರ್ನಾಟಕದಲ್ಲಿ ಉದ್ಯೋಗಸ್ಥ ಮಹಿಳೆ’,‘ಕರ್ನಾಟಕದರಸು ಮನೆತನಗಳು ಮತ್ತು ಕಲೆ’ ಇಂಥಹ ಲೇಖನಗಳಾಗಿವೆ.
ಶೀರ್ಷಿಕೆ: ಸಾಹಿತ್ಯ ಲಹರಿ ಲೇಖಕರು: ಎಚ್.ಎಸ್.ಪಾರ್ವತಿ ಪ್ರಕಾಶಕರು:ಕಿರಣ್ ಬುಕ್ ಡಿಸ್‌ಟ್ರಿಬ್ಯುಟರ್ಸ್ ಪುಟ:204 ಬೆಲೆ:ರೂ.100
Filed under: ಪ್ರಬಂಧ ಸಂಕಲನ | Tagged: ಎಚ್.ಎಸ್.ಪಾರ್ವತಿ, ಕಿರಣ್ ಬುಕ್ ಡಿಸ್‌ಟ್ರಿಬ್ಯುಟರ್ಸ್, ಸಾಹಿತ್ಯ ಲಹರಿ | Leave a comment »