Posted on ಜೂನ್ 15, 2009 by pusthakapreeethi

2006ರ ಸಪ್ಟೆಂಬರ‍್ 29ರಂದು ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ಸುರೇಖಾ ಭೋತ್ಮಾಂಗೆ ಮತ್ತವರ ಮಗಳು ಪ್ರಿಯಾಂಕ ಭೋತ್ಮಾಂಗೆಯವರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಿ ಸತತವಾಗಿ ಅತ್ಯಾಚಾರ ನಡೆಸಿ ಕೊಲ್ಲಲಾಯಿತು. ಸುರೇಖಾರ ಮಕ್ಕಳಾದ ರೋಷನ್ ಮತ್ತು ಸುಧೀರ‍್ ರನ್ನು ಕೊಚ್ಚಿ ಕೊಲ್ಲಲಾಯಿತು. ಈ ಭೀಕರ ಹತ್ಯಾಕಾಂಡದಲ್ಲಿ ಇಡೀ ಹಳ್ಳಿಯೇ ತೊಡಗಿಕೊಂಡಿತ್ತು. ಭೋತ್ಮಾಂಗೆಗಳು ದಲಿತರಾಗಿದ್ದರು. ಭೋತ್ಮಾಂಗೆಗಳನ್ನು ಈಗ ಮರೆತುಬಿಡಲಾಗಿದೆ. ಏಕೆಂದರೆ, ಹೇಗಿದ್ದರೂ ಈ ದೇಶದಲ್ಲಿ ದಿನಕ್ಕೆರಡು ದಲಿತರ ಕೊಲೆಯಾಗುತ್ತಲೇ ಇದೆ.
ಡಾ. ಆನಂದ್ ತೇಲ್ ತುಂಬ್ಡೆಯವರು ಸ್ವಾತಂತ್ರೋತ್ತರ ಭಾರತದ ಅತ್ಯಂತ ಹೀನಾಯ ಜಾತಿ ದೌರ್ಜನ್ಯವೊಂದನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ ಮತ್ತು ಹೇಗೆ ನಮ್ಮ ಸುತ್ತ ಮುತ್ತ ಸದಾ ಖೈರ್ಲಾಂಜಿಗಳು ಇದ್ದೇ ಇವೆಯೆಂದು ತಿಳಿಸಿಕೊಟ್ಟಿದ್ದಾರೆ.
ಆನಂದ್ ತೇಲ್ ತುಂಬ್ಡೆಯವರ ವಿಶ್ಲೇಷಣೆ ನಮ್ಮ ಸಮಾಜದ ಹೃದಯಕ್ಕೆ ಗ್ಯಾಂಗ್ರೀನ್ ಹಿಡಿದಿರುವುದನ್ನು ಎತ್ತಿತೋರಿಸುತ್ತದೆ. ಆನಂದರ ಪುಸ್ತಕ ಈ ಹತ್ಯೆಯು ಯಾವ ಸಾಮಾಜಿಕ ಸಂದರ್ಭದೊಳಗೆ ಸಂಭವಿಸಿತೆಂಬ ವಿಶ್ಲೇಷಣೆಯನ್ನು ಒದಗಿಸುವುದಲ್ಲದೆ, ಯಾವ ರೀತಿಯಲ್ಲಿ ಸಾಮಾಜಿಕ, ರಾಜಕೀಯ ಮತ್ತು ಪ್ರಭುತ್ವ ಯಂತ್ರಾಂಗಗಳು, ಪೋಲೀಸರು, ಸಮೂಹ ಮಾದ್ಯಮಗಳು ಮತ್ತು ನ್ಯಾಯಾಂಗಗಳು ಎಲ್ಲವೂ ಒಂದಾಗಿ ಇಂಥ ದೌರ್ಜನ್ಯಗಳು ಸಂಭವಿಸುವಂಥಾ ವಾತಾವರಣವನ್ನೂ ಸೃಷ್ಟಿಸಿದವು ಎಂಬುದನ್ನೂ ಮತ್ತು ಅನಂತರ ಹೇಗೆ ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿದವು ಎಂಬುದನ್ನೂ ವಿವರಿಸುತ್ತದೆ. ಇದು ಅಳಿದುಳಿದ ಊಳಿಗಮಾನ್ಯ ವ್ಯವಸ್ಥೆಯ ಕೊನೆಯ ದಿನಗಳ ಬಗೆಗಿನ ಪುಸ್ತಕವಲ್ಲ. ಬದಲಿಗೆ ನಮ್ಮ ದೇಶದಲ್ಲಿ ಆಧುನಿಕತೆಗೆ ಏನರ್ಥ ಎಂಬುದರ ಬಗೆಗಿನ ಪುಸ್ತಕ ಎನ್ನುತ್ತಾರೆ ಅರುಂಧತಿ ರಾಯ್
ಪುಸ್ತಕದ ಬೆನ್ನುಡಿಯಿಂದ
ತೇಲ್ತುಂಬ್ಡೆಯವರ ಅಧ್ಯಯನ ಸಮಗ್ರವಾದದ್ದು; ಅವರು ದುರಂತವನ್ನು ರೋಚಕಗೊಳಿಸುವುದಿಲ್ಲ. ಆಧುನಿಕತೆ ಮತ್ತು ಜಾಗತೀಕರಣವು ಅಬಲರಲ್ಲಿ ಯಾವುದಾದರೂ ನಿರೀಕ್ಷೆಯನ್ನು ತುಂಬಿದೆಯೇ ಎಂದು ಈ ಪುಸ್ತಕ ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ.
ಎನ್ನುತ್ತದೆ ದಿ ಟೆಲಿಗ್ರಾಫ್ ಪತ್ರಿಕೆ
ಶೀರ್ಷಿಕೆ: ಖೆರ್ಲಾಂಜಿ ಲೇಖಕರು:ಆನಂದ್ ತೇಲ್ ತುಂಬ್ಡೆ. ಅನುವಾದ ಸಂಪಾದನೆ:ಶಿವಸುಂದರ‍್ ಪ್ರಕಾಶನ:ಲಂಕೇಶ್ ಪ್ರಕಾಶನ ಪುಟ:277 ಬೆಲೆ:ರೂ.200/-
Filed under: ವೈಚಾರಿಕ ಸಾಹಿತ್ಯ | Tagged: ಅರುಂಧತಿ ರಾಯ್, ಆನಂದ್ ತೇಲ್ ತುಂಬ್ಡೆ, ಖೆರ್ಲಾಂಜಿ, ದಿ ಟೆಲಿಗ್ರಾಫ್, ಲಂಕೇಶ್ ಪ್ರಕಾಶನ, ಶಿವಸುಂದರ‍್ | 1 Comment »
Posted on ಜೂನ್ 8, 2009 by pusthakapreeethi

ಐವರಿಗೆ ಸಾಹಿತ್ಯ ಅಕಾಡೆಮಿ ಗರಿ
ಹಿರಿಯ ಸಾಹಿತಿ ಪ್ರೊ.ಅ.ರಾ.ಮಿತ್ರ ರೊಂದಿಗೆ ಹಸನಬಿ ಬೀಳಗಿ, ವಿಷ್ಣು ನಾಯ್ಕ, ಪ್ರೊ.ಮಲ್ಲಿಕಾರ್ಜುನ ಹಿರೇಮಠ ಮತ್ತು ಲಕ್ಷ್ಮಣ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
2007ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಕಾವ್ಯ ಕಾದಂಬರಿ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಿಂದ 18 ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಬಹುಮಾನಿತ ಕೃತಿಗಳು :
ಕಾವ್ಯ – ಒಡೆಯಲಾರದ ಪ್ರತಿಮೆ – ಬಸವರಾಜ ವಕ್ಕುಂದ
ಕಾದಂಬರಿ – ಯಾದ್ ವಶೀಮ್ – ನೇಮಿಚಂದ್ರ
ಸಣ್ಣಕತೆ – ನನ್ನ ಇನ್ನಷ್ಟು ಕತೆಗಳು – ಮಹಮ್ಮದ್ ಕುಳಾಯಿ
ನಾಟಕ – ದಾಳ – ಪ್ರೊ.ಎಸ್.ಜಿ.ಸಿದ್ಧರಾಮಯ್ಯ
ಲಲಿತ ಪ್ರಬಂಧ – ದೇವರುಗಳ ಟೈಮೇ ಸರಿಯಿಲ್ಲ – ಎಚ್.ಎಲ್.ಕೇಶವಮೂರ್ತಿ
ಪ್ರವಾಸ ಸಾಹಿತ್ಯ – ದುಬೈ ಎಂಬ ಮಾಯಾನಗರಿ – ಸಂಗಮೇಶ ಕೋಟಿ
ಜೀವನ ಚರಿತ್ರೆ – ಬಣ್ಣದ ಬದುಕಿನ ಚಿನ್ನದ ದಿನಗಳು – `ಪ್ರಜಾವಾಣಿ’ಯ ಗಣೇಶ ಅಮೀನಗಡ
ಸಾಹಿತ್ಯ ವಿಮರ್ಶೆ – ಉಲ್ಲೇಖ – ಕೆ.ವಿ.ತಿರುಮಲೇಶ್
ಗ್ರಂಥ ಸಂಪಾದನೆ – ನಂದಪ್ಪದೇವರ ಪ್ರಭುಚರಿತ್ರೆ – ಪ್ರೊ.ಎಸ್.ಉಮಾಪತಿ
ಮಕ್ಕಳ ಸಾಹಿತ್ಯ – ರೋಬೋಟ್ ಮತ್ತು ಚಿನ್ಹೆಗಳು – ನಾ.ಸು.ಭರತನ ಹಳ್ಳಿ
ವಿಜ್ಞಾನ ಸಾಹಿತ್ಯ – ಆಚಿನ ಲೋಕಕ್ಕೆ ಕಾಲಕೋಶ – ನಾಗೇಶ ಹೆಗಡೆ
ಮಾನವಿಕ – ಮಹಿಳಾ ಚಳವಳಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ – ಹಾಲತಿ ಸೋಮಶೇಖರ‍್
ಸಂಶೋದನೆ – ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ – ಎಸ್.ಶೆಟ್ಟರ‍್
ಅನುವಾದ (ಸೃಜನಶೀಲ) – ನೆಲವೆದ್ದು ಬಡಿಯಿತು – ಚಂದ್ರಕಾಂತ ಪೊಕಳೆ
ಅನುವಾದ (ಸೃಜನೇತರ) – ಅಧಿಕಾರ ಮೀಮಾಂಸೆ – ಪಿ.ವಿ.ನಾರಾಯಣ
ಸಂಕೀರ್ಣ – ವಕೀಲರೊಬ್ಬರ ವಗೈರೆಗಳು – ಸಿ.ಎಚ್.ಹನುಮಂತರಾಯ
ಲೇಖಕರ ಮೊದಲ ಕೃತಿ – ತತ್ರಾಣಿ – ಬಸವರಾಜ ಹೂಗಾರ
ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ – ಆರಿಜಿನ್ ಆಫ್ ಕ್ರಿಶ್ಚಿಯನ್ ಇನ್ ಅಂಡ್ ಅರೌಂಡ್ ಶ್ರೀರಂಗಪಟ್ಟಣ – ಫಾದರ‍್ ಡಾ.ಐ.ಅಂತಪ್ಪ
ಆಸಕ್ತರು ಅಕಾಡೆಮಿಯ ವೆಬ್ ಸೈಟ್ (www.karnatakasahithyaacademy.org) ನಲ್ಲಿ ಲೇಖಕರ ವಿಳಾಸ, ಪ್ರಶಸ್ತಿ ಮತ್ತು ಇನ್ನಿತರ ಮಾಹಿತಿಗಳನ್ನು ಪಡೆಯಬಹುದು
ಕೃಪೆ – ಪ್ರಜಾವಾಣಿ
Filed under: Uncategorized | Tagged: ಕರ್ನಾಟಕ ಸಾಹಿತ್ಯ ಅಕಾ, ಪ್ರಜಾವಾಣಿ, ಯಾದ್ ವಶೀಮ್ | 2 Comments »
Posted on ಜೂನ್ 3, 2009 by pusthakapreeethi

‘ಎಳೆಯ ಬೆರಳುಗಳೊಳಗೆ ಯಾವುದೋ ವೀಣೆ ನುಡಿದಿದೆ ಸುಮಧುರ
ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ’
(ನನ್ನ ಮಗು/ಪು.37)
ಎಂದು ಲಯಬದ್ಧವಾಗಿ ಬರೆಯುವ ಛಾಯಾ ಭಗವತಿಯವರ ಮೊದಲ ಸಂಕಲನವಿದು. ತುಂಬಾ ಪುಟ್ಟ ಕವನ ಸಂಗ್ರಹವಾದ ಇದರಲ್ಲಿ 19 ಕವಿತೆಗಳಿವೆ. ರಮ್ಯವಾದ, ಬಾಲ್ಯವನ್ನು ನೆನಪಿಸುವ ಚಿತ್ರಗಳು ಇದರಲ್ಲಿವೆ. ಹೆಣ್ಣಿನ ಬದುಕಿನ ಹಂತಗಳಾದ ಬಾಲ್ಯ, ಹರೆಯ, ಮದುವೆ, ತಾಯ್ತನ ಇಲ್ಲಿ ಕವಿತೆಗಳಾಗಿವೆ.
ಕೆಲವೆಡೆ ಪ್ರಾಸಬದ್ಧವಾಗಿ, ಲಯಬದ್ಧವಾಗಿ ಬರೆಯುವ ಕವಿ ಒಂದು ಸುಂದರ ಚಿತ್ರವನ್ನು ಕಣ್ಣಮುಂದೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. ತಮ್ಮ ಸೀಮಿತ ಅನುಭವದ ಕುರಿತು ಬರೆಯುವಾಗಲೂ ಅದರ ಮಿತಿಯಲ್ಲೇ ಒಂದು ಗ್ರಹಿಕೆಯನ್ನು ಅವರು ಕೊಡುತ್ತಾರೆ.
ಈ ಸಂಕಲನ ಮುಖ್ಯ ಕವಿತೆಯಾದ `ಪುಟಾಣಿ ಕೆಂಪು ಶೂ’ ನಲ್ಲಿ ಕೂಡ ಒಂದು ಮಧ್ಯಮವರ್ಗದ ಮಾನವೀಯ ಚಿತ್ರವಿದೆ. ಇಂಥವನ್ನು ಚಿತ್ರಿಸುವಾಗಲೆಲ್ಲ ಇಲ್ಲಿನ ಕೆಲವು ಕವಿತೆಗಳು ಯಶಸ್ವಿಯಾಗಿವೆ. `ಬಾಲ್ಯ ಮತ್ತು ಒಂದೆರಡು ಚಿತ್ರಗಳು’, `ಅವಳು’, `ಈಗೇಕೆ ಹೀಗೆ’, `ವಿಪರ್ಯಾಸ’ ಇಂತಹ ಸಫಲ ಚಿತ್ರಗಳಲ್ಲಿ ಕೆಲವು.
ಶೀರ್ಷಿಕೆ:ಪುಟಾಣಿ ಕೆಂಪು ಶೂ ಲೇಖಕರು:ಛಾಯಾ ಭಗವತಿ ಪ್ರಕಾಶಕರು:ಲೋಹಿಯಾ ಪ್ರಕಾಶನ ಪುಟ:56 ಬೆಲೆ:30/-
ಕೃಪೆ:ಪ್ರಜಾವಾಣಿ
Filed under: ಕಾವ್ಯ-ಕವನ | Tagged: ಛಾಯಾ ಭಗವತಿ, ಪುಟಾಣಿ ಕೆಂಪು ಶೂ, ಪ್ರಜಾವಾಣಿ, ಲೋಹಿಯಾ ಪ್ರಕಾಶನ | Leave a comment »