ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ

scan0005

‘ಎಳೆಯ ಬೆರಳುಗಳೊಳಗೆ ಯಾವುದೋ ವೀಣೆ ನುಡಿದಿದೆ ಸುಮಧುರ
ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ’
(ನನ್ನ ಮಗು/ಪು.37)
ಎಂದು ಲಯಬದ್ಧವಾಗಿ ಬರೆಯುವ ಛಾಯಾ ಭಗವತಿಯವರ ಮೊದಲ ಸಂಕಲನವಿದು. ತುಂಬಾ ಪುಟ್ಟ ಕವನ ಸಂಗ್ರಹವಾದ ಇದರಲ್ಲಿ 19 ಕವಿತೆಗಳಿವೆ. ರಮ್ಯವಾದ, ಬಾಲ್ಯವನ್ನು ನೆನಪಿಸುವ ಚಿತ್ರಗಳು ಇದರಲ್ಲಿವೆ. ಹೆಣ್ಣಿನ ಬದುಕಿನ ಹಂತಗಳಾದ ಬಾಲ್ಯ, ಹರೆಯ, ಮದುವೆ, ತಾಯ್ತನ ಇಲ್ಲಿ ಕವಿತೆಗಳಾಗಿವೆ.
ಕೆಲವೆಡೆ ಪ್ರಾಸಬದ್ಧವಾಗಿ, ಲಯಬದ್ಧವಾಗಿ ಬರೆಯುವ ಕವಿ ಒಂದು ಸುಂದರ ಚಿತ್ರವನ್ನು ಕಣ್ಣಮುಂದೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. ತಮ್ಮ ಸೀಮಿತ ಅನುಭವದ ಕುರಿತು ಬರೆಯುವಾಗಲೂ ಅದರ ಮಿತಿಯಲ್ಲೇ ಒಂದು ಗ್ರಹಿಕೆಯನ್ನು ಅವರು ಕೊಡುತ್ತಾರೆ.
ಈ ಸಂಕಲನ ಮುಖ್ಯ ಕವಿತೆಯಾದ `ಪುಟಾಣಿ ಕೆಂಪು ಶೂ’ ನಲ್ಲಿ ಕೂಡ ಒಂದು ಮಧ್ಯಮವರ್ಗದ ಮಾನವೀಯ ಚಿತ್ರವಿದೆ. ಇಂಥವನ್ನು ಚಿತ್ರಿಸುವಾಗಲೆಲ್ಲ ಇಲ್ಲಿನ ಕೆಲವು ಕವಿತೆಗಳು ಯಶಸ್ವಿಯಾಗಿವೆ. `ಬಾಲ್ಯ ಮತ್ತು ಒಂದೆರಡು ಚಿತ್ರಗಳು’, `ಅವಳು’, `ಈಗೇಕೆ ಹೀಗೆ’, `ವಿಪರ್ಯಾಸ’  ಇಂತಹ ಸಫಲ ಚಿತ್ರಗಳಲ್ಲಿ ಕೆಲವು.

ಶೀರ್ಷಿಕೆ:ಪುಟಾಣಿ ಕೆಂಪು ಶೂ ಲೇಖಕರು:ಛಾಯಾ ಭಗವತಿ ಪ್ರಕಾಶಕರು:ಲೋಹಿಯಾ ಪ್ರಕಾಶನ ಪುಟ:56 ಬೆಲೆ:30/-

ಕೃಪೆ:ಪ್ರಜಾವಾಣಿ