
ಸಣ್ಣಕತೆ ಹೊಸಗನ್ನಡ ಸಾಹಿತ್ಯದಲ್ಲಿ ಒಂದು ಪ್ರಕಾರವಾಗಿ ರೂಪುಗೊಂಡಿದ್ದರೂ ಕತೆಯನ್ನು ಹೇಳುವ ಪರಂಪರೆ ಹೊಸದೇನೂ ಅಲ್ಲ. ಇಂಗ್ಲೀಷ್ ಸಾಹಿತ್ಯದ ಪರಿಚಯದಿಂದ ಸಣ್ಣಕತೆಯ ಮಾದರಿ ಹುಟ್ಟಿಕೊಂಡಿದೆ ಎಂದು ವಿಮರ್ಶಕರು ಪರಿಭಾವಿಸಿಕೊಂಡು ಬಂದಿದ್ದಾರೆ. ಅಂಥ ಗ್ರಹಿಕೆಯಿಂದ ಇಪ್ಪತ್ತನೆಯ ಶತಮಾನದ ಆರಂಭದಿಂದ ಇದುವರೆಗೆ ಬಂದಿರುವ ಕಥಾ ಸಾಮಾಗ್ರಿಯನ್ನು ನೋಡಲಾಗುತ್ತಿದೆ. ಗಿರಡ್ಡಿ ಗೋವಿಂದರಾಜ ಅವರ ವಿಮರ್ಶಾ ಲೇಖನಗಳ ಸಂಗ್ರಹ `ಕಲ್ಪಿತ ವಾಸ್ತವ: ಕನ್ನಡ ಸಣ್ಣಕತೆ’ ಇದೇ ಜಾಡಿನಲ್ಲಿ ಸಾಗಿರುವ ಚಿಂತನೆ. ಗಿರಡ್ಡಿ ಗೋವಿಂದರಾಜ `ಇಂದಿನ ಸಣ್ಣ ಕತೆ ನಮ್ಮ ಪ್ರಾಚೀನ ಕಥಾಪರಂಪರೆಯ ಸಹಜ ಬೆಳವಣಿಗೆಯ ಫಲವಲ್ಲ; ಪಶ್ಚಿಮದ ಆಧುನಿಕ ಸಣ್ಣ ಕತೆಯ ಸಂಪರ್ಕದಲ್ಲಿ ನಾವು ಬಂದಿರದಿದ್ದರೆ ಈಗಿನ ರೂಪದ ಸಣ್ಣಕತೆ ನಮ್ಮಲ್ಲಿ ಹುಟ್ಟುತ್ತಿರಲಿಲ್ಲ’ ಎಂದು ಸ್ಪಷ್ಟವಾಗಿಯೇ ಹೇಳಿ ತಮ್ಮ ಚಿಂತನೆಯ ದಿಕ್ಕನ್ನು ಖಚಿತಪಡಿಸಿದ್ದಾರೆ. ಇಲ್ಲಿನ ಎಲ್ಲ ೧೪ ಲೇಖನಗಳಲ್ಲಿಯೂ ಕನ್ನಡ ಸಣ್ಣಕತೆ ಬೆಳವಣಿಗೆ ಕುರಿತಾಗಿ ಅವರ ವಿವರ ವಿಶ್ಲೇಷಣೆ, ತೀರ್ಮಾನಗಳಿವೆ.
೪೫ ವರ್ಷಗಳ ಕಾಲಾವಧಿಯಲ್ಲಿ ಬರೆದಿರುವ ಇಲ್ಲಿನ ಲೇಖನಗಳಲ್ಲಿ ಕನ್ನಡ ಸಣ್ಣ ಕತೆಯ ಬೆಳವಣಿಗೆಯ ವಿವಿಧ ಹಂತಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂಬ ವಿವರಣೆಯೂ ಇದೆ. ಲೇಖನಗಳಲ್ಲಿ ವ್ಯತ್ಯಾಸಗಳೂ ಅಭಿಪ್ರಾಯಭೇದಗಳೂ, ಮೊದಲಿನ ನಿಲುವಿಗೆ ತಿದ್ದುಪಡಿಗಳೂ ಆಗಿರುವುದನ್ನು ದಾಖಲಿಸಲಾಗಿದೆ. ಮಾಸ್ತಿಯವರನ್ನು ಕನ್ನಡದ ಸಣ್ಣ ಕತೆಯ ಯುಗಪ್ರವರ್ತಕರೆಂದು ಗುರುತಿಸಿರುವ ಗಿರಡ್ಡಿಯವರು ತಮಗೆ ಮುಖ್ಯವೆನಿಸಿದೆ ಆನಂದ, ಬಾಗಲೋಡಿ ದೇವರಾಯ, ಶಾಂತಾದೇವಿ ಕಣವಿ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ, ಸುರೇಂದ್ರನಾಥ ಅವರ ಕತೆಗಳ ಕುರಿತಾಗಿ ವಿಸ್ತೃತವಾಗಿ ವಿಶ್ಲೇಷಣೆ ನಡೆಸಿದ್ದಾರೆ. ವ್ಯಾಪಕ ಅಧ್ಯಯನದ ಹಿನ್ನೆಲೆ ಇರುವ ಗಿರಡ್ಡಿ ಕನ್ನಡ ಸಣ್ಣಕತೆ ಬೆಳೆದು ಬಂದ ಬಗೆಯನ್ನು ವಿವರವಾಗಿ ದಾಖಲಿಸಿದ್ದಾರೆ.
`ಮರೆಯಬಾರದ ಹಳೆಯ ಕತೆಗಳು’ ಮಾಲಿಕೆಯಲ್ಲಿ ಅವರು ಪಂಜೆ, ಕೇರೂರರು, ಎಮ್.ಎನ್. ಕಾಮತ್, ಎಸ್.ಜಿ.ಶಾಸ್ತ್ರಿ , ಕೊರಡ್ಕಲ್, ಎ.ಆರ‍್.ಕೃಷ್ಣಶಾಸ್ತ್ರಿ, ಕುಲಕರ್ಣಿ ಶ್ರೀನಿವಾಸ, ಕಡಂಗೋಡ್ಲು, ಕೃಷ್ಣಕುಮಾರ ಕಲ್ಲೂರ, ಪ.ರಮಾನಂದ, ವಿ.ಜಿ.ಶ್ಯಾನಬಾಗ, ಶ್ರೀಸ್ವಾಮಿ, ಹ.ಪಿ.ಜೋಷಿ, ಸೇಡಿಯಾಪು ಕೃಷ್ಣಭಟ್ಟ, ನವರತ್ನ ರಾಮರಾಯ, ಟೇಂಗ್ಸೆ ಗೋವಿಂದರಾಯ, ಕ್ಷೀರಸಾಗರ, ಬೇಂದ್ರೆ, ಹೊಯಿಸಳ, ಮೇವುಂಡಿ ಮಲ್ಲಾರಿ, ಟಿ.ಎಸ್.ಸಂಜೀವರಾಯ, ಭಾರತೀಪ್ರಿಯ ಮೊದಲಾಗಿ 28 ಕತೆಗಾರರ ವ್ಯಕ್ತಿತ್ವ-ಕೃತಿ ಪರಿಚಯಗಳನ್ನು ಮಾಡಿಕೊಟ್ಟಿದ್ದಾರೆ.
ಇಲ್ಲಿನ ಮೂರು ಲೇಖನಗಳು ಕನ್ನಡ ಸಣ್ಣಕತೆ ನಿರ್ದಿಷ್ಟ ಕಾಲಘಟ್ಟದಲ್ಲಿ ಸಾಗಿಬಂದ ಮಜಲುಗಳನ್ನು ಪರಿಚಯಿಸುತ್ತವೆ. ಇದು ಕಳೆದ ಶತಮಾನದ 90 ರ ದಶಕದವರೆಗಿನ ಕಾಲಘಟ್ಟಕ್ಕೆ ನಿಂತುಹೋಗಿರುವುದನ್ನು ಗಮನಿಸಬಹುದಾಗಿದೆ. ಸಾಹಿತ್ಯ ಚರಿತ್ರಕಾರರು ನವೋದಯ, ನವ್ಯ ಎಂದು ಸ್ಥೂಲವಾಗಿ ಹೇಳುವ ಕಾಲಾವಧಿಯ ಲೇಖಕರು ಮಾತ್ರವೇ ಇಲ್ಲಿ ಪರಿಶೀಲನೆಗೆ ಒಳಗಾಗಿದ್ದಾರೆ. ಹೊಸ ಪೀಳಿಗೆಯ ನೂರಾರು ಬರಹಗಾರರು ಪ್ರವೇಶ ಪಡೆಯುತ್ತಿರುವ ನವ್ಯೋತ್ತರ ಕಾಲದ ಯಾವೊಬ್ಬ ಲೇಖಕರ ಕಥಾಸಾಹಿತ್ಯ ಕೃಷಿಯ ಬಗ್ಗೆಯೂ ಇಲ್ಲಿ ವಿಸ್ತ್ರತ ಚರ್ಚೆ ನಡೆದಿಲ್ಲ. ಅದಕ್ಕೆ ಸಂಬಂಧಿಸಿ `ಇತ್ತೀಚೆಗೆ ಬರೆಯುತ್ತಿರುವ ಅನೇಕ ಮಹತ್ವದ ಕತೆಗಾರ್ತಿಯರ ಬಗ್ಗೆ, ಕಿರಿಯ ಕತೆಗಾರರ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿಲ್ಲ.’ ಎಂಬ ಅರಿವು ತಮಗಿದೆ ಎಂದು ಲೇಖಕರು ಹೇಳಿಕೊಂಡಿದ್ದಾರೆ.
ತಮ್ಮ ಈ ಸಂಕಲನದಿಂದ ಹೊಸದಾಗಿ ಕತೆಗಳನ್ನು ಬರೆಯುವವರಿಗೆ ಒಂದಿಷ್ಟು ಮಾರ್ಗದರ್ಶನ ಸಿಗಬಹುದೆಂಬ ನಿರೀಕ್ಷೆಯನ್ನು ಗೋವಿಂದರಾಜರು ಪ್ರಕಟಿಸಿದ್ದಾರೆ. ಜೊತೆಗೆ ಇಲ್ಲಿನ ಎಲ್ಲಾ ಲೇಖನಗಳೂ `ತಮ್ಮ ಸಮಗ್ರ ವಿಮರ್ಶೆ’ ಸಂಕಲನ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯ ಹೊರತಂದ ಹೊನ್ನಾರು ಮಾಲಿಕೆಯ `ಪ್ರಮಾಣು’ ಗ್ರಂಥದಲ್ಲಿ ಇರುವುದನ್ನು ತಿಳಿಸಿದ್ದಾರೆ.
ಶೀರ್ಷಿಕೆ: ಕಲ್ಪಿತ ವಾಸ್ತವ: ಕನ್ನಡ ಸಣ್ಣ ಕತೆ ಲೇಖಕರು:ಗಿರಡ್ಡಿ ಗೋವಿಂದರಾಜ ಪ್ರಕಾಶಕರು:ಸಾಹಿತ್ಯ ಪ್ರಕಾಶನ ಪುಟ:352 ಬೆಲೆ:ರೂ.250/-(ಕ್ಯಾಲಿಕೋ) ರೂ.200/-(ಸಾದಾ ಪ್ರತಿ)
ಕೃಪೆ: ಪ್ರಜಾವಾಣಿ
Filed under: ವೈಜ್ಞಾನಿಕ ಸಾಹಿತ್ಯ | Tagged: ಕಲ್ಪಿತ ವಾಸ್ತವ: ಕನ್ನಡ ಸಣ್ಣ ಕತೆ, ಗಿರಡ್ಡಿ ಗೋವಿಂದರಾಜ, ಪ್ರಜಾವಾಣಿ, ಸಾಹಿತ್ಯ ಪ್ರಕಾಶನ | Leave a comment »