ಕವಿ, ಜಾನಪದ ಸಂಶೋಧಕ ವಿ.ಗ. ನಾಯಕ ಆಗಾಗ ಬರೆದ ತಮ್ಮ ಅಂಕಣ ಬರಹಗಳನ್ನು `ಕರಿಕೆಯ ಕುಡಿ‘ ಯಲ್ಲಿ ಕೊಟ್ಟಿದ್ದಾರೆ. 37 ಕುಡಿಗಳು ಇಲ್ಲಿವೆ. ಉತ್ಸಾಹಿಗಳೂ, ಸೂಕ್ಷ್ಮಮತಿಗಳೂ ಜೊತೆಗೆ ವಿನಯವಂತರೂ ಆದ ಲೇಖಕರು `ಇಲ್ಲಿನ ಬರಹ ಹೆಮ್ಮರವೂ ಅಲ್ಲ, ಮರ, ಗಿಡ, ಹೂ, ಬಳ್ಳಿಗಳ ಸಾಲಿಗೆ ಸೇರುವಂಥದ್ದೂ ಅಲ್ಲ. ಒಂದೊಂದೂ ಕರಿಕೆಯ ಕುಡಿ‘ ಎಂದಿದ್ದಾರೆ. ಕರಿಕೆಯ ಕುಡಿ ದೇವರ ಪೂಜೆಗೆಂದು ಬಳಸುವ ಹುಲ್ಲಿನ ಜಾತಿ. ಅಂದರೆ, ಪುಟ್ಟದಾದರೂ ಅದರ ಮಹತ್ವ ಅದಕ್ಕಿದ್ದೇ ಇದೆ.
ಲೇಖಕರು ಸಾಹಿತ್ಯ, ಸಂಸ್ಕೃತಿ, ವ್ಯಕ್ತಿ, ಜಾತಿ ಹೀಗೆ ಅನೇಕ ವಸ್ತುಗಳನ್ನು ತಮ್ಮ ಅಂಕಣದ ವ್ಯಾಪ್ತಿಗೆ ತಂದಿದ್ದಾರೆ. ಕೆಲವನ್ನು ಬಿಟ್ಟರೆ ಉತ್ತರ ಹಾಗೂ ದಕ್ಷಿಣ ಕನ್ನಡದ ವ್ಯಕ್ತಿ ಹಾಗೂ ಸಂಗತಿಗಳೇ ಅವರ ಬರಹದಲ್ಲಿ ಮುಖ್ಯ ವಸ್ತುಗಳಾಗಿವೆ.
ತುಂಡು, ತುಂಡು ವಾಕ್ಯಗಳು, ಅಸ್ಖಲಿತವಾದ ಭಾವನಾತ್ಮಕ ಭಾಷೆ ವಿ.ಗ.ನಾಯಕರ ಬರಹಗಳ ಶೈಲಿಯಾಗಿದೆ. ಅವರು ಆಯ್ದುಕೊಳ್ಳುವ ವಸ್ತುಗಳು ಕೂಡಾ ಬೇರೆ ರೀತಿಯವೇ. ಮುನ್ನೆಲೆಯಲ್ಲಿ ಪ್ರಧಾನವಾಗಿ ಹೆಚ್ಚು ಕಾಣಿಸಿಕೊಳ್ಳದ ವ್ಯಕ್ತಿಗಳೇ ಅವರ ಬರಹಗಳ ವಸ್ತು. ಬಂಡಾಯ ಲೇಖಕ ಆರ‍್.ವಿ.ಭಂಡಾರಿ, ಕವಿ ರಾಧಾಕೃಷ್ಣ ಉಳಿಯತ್ತಡ್ಕ, ಲೇಖಕ ಗಣಪತಿ ದಿವಾಣ, ಎನ್.ಆರ‍್.ನಾಯಕ . . . ಹೀಗೆ ಅನೇಕರ ಸಾಧನೆ ನಾಯಕರ ಬರವಣಿಗೆಗೆ ಕಾರಣವಾಗುತ್ತದೆ. ಈ ಎಲ್ಲ ಕಾರಣಗಳಿಗಾಗಿಯೇ ಈ ಪುಸ್ತಕವೂ ಓದುಗರ ಮೆಚ್ಚುಗೆಗೂ ಕಾರಣವಾಗುವಂತಿದೆ.
ಶೀರ್ಷಿಕೆ:ಕರಿಕೆಯ ಕುಡಿ (ಅಂಕಣ ಬರಹಗಳು) ಲೇಖಕರು:ವಿ.ಗ. ನಾಯಕ ಪ್ರಕಾಶಕರು: ಸ್ಮೃತಿ ಪ್ರಕಾಶನ ಪುಟಗಳು: 136 ಬೆಲೆ:ರೂ.75/-
ಕೃಪೆ : ಪ್ರಜಾವಾಣಿ
Filed under: ವೈಚಾರಿಕ ಸಾಹಿತ್ಯ | Tagged: ಕರಿಕೆಯ ಕುಡಿ, ವಿ.ಗ. ನಾಯಕ, ಸ್ಮೃತಿ ಪ್ರಕಾಶನ | Leave a comment »