
ತಮ್ಮ ಹದಿನಾಲ್ಕನೆಯ ವಯಸ್ಸಿಗೇ ಬ್ರಿಟೀಷರ ವಿರುದ್ಧ ಪ್ರತಿಭಟಿಸುವ ಮನೋಭಾವವನ್ನು ಗಟ್ಟಿಗೊಳಿಸಿಕೊಂಡು ಮುಂದಡಿ ಇಟ್ಟ ಮೇಜರ‍್ ಜೈಪಾಲ್ ಸಿಂಗ್ ರವರ ನೆನಪುಗಳನ್ನು ಮಂಡಿಸುವ ಪುಸ್ತಕ `ವಿಮೋಚನೆಯ ಸಮರದಲ್ಲಿ’. ಜೈಪಾಲ್ ಸಿಂಗ್ ರವರು ಉತ್ತರ ಪ್ರದೇಶದವರು. ಅಲ್ಲಿಯ ಮುಜಾಪುರ‍್ ನಗರ ಜಿಲ್ಲೆಯ ಒಂದು ಹಳ್ಳಿಯ ಬಡ ಜಾಟ್ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಜೈಪಾಲ್ ಸಿಂಗ್, ಜಾಟ್ ಜನಾಂಗದ ಹುಮ್ಮಸ್ಸು, ಎದೆಗಾರಿಕೆ, ಆಕ್ರೋಶ, ಮೈಕಟ್ಟನ್ನು ಹಾಗೇ ಸ್ವಾಭಿಮಾನವನ್ನು ಪ್ರತಿಬಿಂಬಿಸುವಂತಿದ್ದರು. ಅವರು ಬೆಳೆಯುತ್ತಾ ಬಂದಂತೆ ಆಗಿನ ದಿನಗಳಲ್ಲಿ ಬ್ರಿಟೀಷರನ್ನು ಬಗ್ಗು ಬಡಿಯಲು ತಮ್ಮದೇ ತಂತ್ರ ಉಪಯೋಗಿಸಿದರು.
ಅಂದರೆ ಬೇರೆಯವರಂತೆ ಹೊರಗಿನಿಂದ ಬ್ರಿಟೀಷರ ವಿರುದ್ಧ ಬಡಿದಾಡದೆ ಅವರ ಸೈನ್ಯವನ್ನೇ ಸೇರಿದರು. ಆದರೆ ಇದು ಅಪಾಯಕಾರಿಯಾಗಿತ್ತು. ಕೊಂಚ ಏರುಪೇರಾದರೂ ಜೈಪಾಲ್ ಗೆ ಮರಣದಂಡನೆಯೇ ಶಿಕ್ಷೆಯಾಗುತ್ತಿತ್ತು. ಆದರೂ ಹಿಂಜರಿಯದೆ ತಮ್ಮ ತಂತ್ರ ಸಫಲಗೊಳಿಸಲು ಶ್ರಮಿಸಿದರು. ಹೀಗೆ ಅವರು ಈ ದಾರಿಯಲ್ಲಿ ಸಾಗುವ ವೇಳೆ ಆದ ಅನುಭವಗಳನ್ನು ಜೈಪಾಲರು ಈ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.
ಈ ವಿಚಾರಗಳು ಈ ಹಿಂದೆಯೇ `ಐಕ್ಯರಂಗ’ ಎಂಬ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿರುವಂತಹದ್ದು. ಅದು ಹಾಗೇ ಉಳಿದು ಹೋಗದಿರಲೆಂದು ವಿಶ್ವ ಕುಂದಾಪುರರವರು ಎಲ್ಲಾ ಲೇಖನಗಳನ್ನು ಒಂದೆಡೆ ಸೇರಿಸಿ ಈ ಅಮೂಲ್ಯ ಪುಸ್ತಕವನ್ನು ಕನ್ನಡಿಗರಿಗೆ ನೀಡಿದ್ದಾರೆ. ಇಲ್ಲಿ ಎಳೆಎಳೆಯಾಗಿ ಜೈಪಾಲರ ಹೋರಾಟದ ಜೀವನ ಓದುಗರೆದುರಿಗೆ ತೆರೆದುಕೊಳ್ಳುತ್ತದೆ. ಪ್ರಧಾನಿ ಜವಾಹರಲಾಲ್ ನೆಹರೂರವರಿಗೆ ಜೈಪಾಲರು ಬರೆದ ಪತ್ರವೂ ಇದೆ. ಇಲ್ಲಿ ಅವರು ಬ್ರಿಟೀಷರ ವಿರುದ್ಧ ಹೋರಾಡಲು ಮುಂದಾದ ಗಳಿಗೆ, ಕಾರಣ, ರೀತಿಗಳ ಬಗೆಗೆ ಹೇಳಿಕೊಂಡಿದ್ದಾರೆ. ಹಾಗೆಯೇ ಆಗಿನ ಇತರರ ಹೋರಾಟಗಳ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇಲ್ಲಿ ಕೇವಲ ಜೈಪಾಲರ ನೆನಪುಗಳಷ್ಟೇ ಇರದೆ, ಅವರೊಂದಿಗೆ ಒಡನಾಡಿದ ಎಲ್. ಬಿ. ಗಂಗಾಧರ ರಾವ್ ರವರ ಅಭಿಪ್ರಾಯ ಲೇಖನವೂ ಇರುವುದು ಉಪಯುಕ್ತವೆನಿಸಿದೆ.
ಮೊದಲ ಅಧ್ಯಾಯ `ನನ್ನ ದೇಶಕ್ಕಾಗಿ ಕರ್ತವ್ಯ ಚ್ಯುತೆ ಎಸಗಿದೆ’ ಯಲ್ಲಿ ಜೈಪಾಲರು ತಮ್ಮ ಭೂಗತ ಜೀವನವನ್ನು ಕೊನೆಗೊಳಿಸಿ ಹೊರಬಂದಾಗ ಜನರು ಅವರಿಗೆ ಸ್ಪಂದಿಸಿದ ರೀತಿಯನ್ನು ಓದುತ್ತಿದ್ದರೆ ಇಂದಿನ ನೀರಸಗೊಂಡಿರುವ ಸಾಮಾಜಿಕ ಪ್ರಜ್ಞೆಯ ಬಗೆಗೆ ಯೋಚಿಸುವಂತಾಗುತ್ತದೆ. ಇಡೀ ಪುಸ್ತಕದಲ್ಲಿ ಬರುವ ಬ್ರಿಟಿಷ್ ಸೈನ್ಯದೊಳಗಿನ ದೇಶಪ್ರೇಮಿ ವಿಭಾಗಗಳನ್ನು ಸಂಘಟಿಸುವಲ್ಲಿ ಅವರು ವಹಿಸಿದ ಅಮೋಘ ಪಾತ್ರದ ಬಗ್ಗೆ ಭಾರತದ ಎಡಪಂಥೀಯ ವಲಯಗಳ ಆಚೆಗೆ ಅಷ್ಟಾಗಿ ತಿಳಿದಿಲ್ಲ” ಎಂಬ ಮಾತು ನಮ್ಮ ದೇಶದ ಸಾಮಾಜಿಕ ಜೀವನ ಎದುರಿಸುತ್ತಿರುವ ವಿಪರ್ಯಾಸದ ಸ್ಥಿತಿಯನ್ನು ಎದುರಿಗೆ ತರುತ್ತದೆ. ಇವತ್ತಿನ ಯುವಜನತೆಗೆ ರಿಯಾಲಿಟಿ ಶೋಗಳ ಸೆಲೆಬ್ರಿಟಿಗಳೇ ಮಾದರಿಯಾಗುತ್ತಿದ್ದಾರೆಯೇ ಹೊರತು ದೇಶದ ಸ್ವಾಭಿಮಾನವನ್ನು ಕಾಪಾಡಲು ಹೋರಾಡಿದವರು ಆದರ್ಶವಾಗುವುದು ಆಗುತ್ತಿಲ್ಲ. ಅಂದರೆ ಅವರಿಗೆ ಈ ಮಹಾನ್ ಹೋರಾಟಗಾರರು ತಲುಪುತ್ತಿಲ್ಲ. ಇಂತಹ ಪುಸ್ತಕಗಳು ಇದೇ ಮಾದರಿಯಲ್ಲಿ ಓದುಗರಿಗೆ ದೊರಕಿದರೆ ಆ ಒಂದು ಕೊರಗು-ಕೊರತೆ ಕೊಂಚಮಟ್ಟಿಗಾದರೂ ಕಡಿಮೆಯಾಗಿ ಮುಂದಿನ ದಿನಗಳಲ್ಲಿ ಜೈಪಾಲ್ ಸಿಂಗ್ ಥರದವರು ದೇಶದ ಮಕ್ಕಳಿಗೆ ಆಪ್ತರಾಗಬಲ್ಲರು. ಈ ನಿಟ್ಟಿನಲ್ಲಿ ವಿಮೋಚನೆಯ ಹಾದಿಯಲ್ಲಿ ಒಂದು ಒಳ್ಳೆಯ ಪ್ರಯತ್ನ.
ಈ ಪುಸ್ತಕ ಜೈಪಾಲ್ ರ ವೈಯಕ್ತಿಕ ಅನುಭವ, ಅಭಿಪ್ರಾಯಗಳನ್ನು ಹೇಳುವಂತೆಯೇ ಅಂದಿನ ದೇಶದ ಸ್ಥಿತಿಗತಿಗಳನ್ನು ಓದುಗರ ಮನಸ್ಸಿಗೆ ನಾಟಿಸುತ್ತವೆ. ಇಲ್ಲಿಯವರೆಗೂ ದೇಶದ ವಿಭಜನೆಯನ್ನು ಒಂದು ಕೋನದಲ್ಲಿ ನೋಡಿದ್ದವರಿಗೆ ಈ ಪುಸ್ತಕ ಅದರ ಬೇರೊಂದು ಮುಖವನ್ನು ತೋರುತ್ತದೆ. ಬ್ರಿಟಿಷರ ಷಡ್ಯಂತ್ರದೆದುರು ಸಿಡಿದೇಳದ ಕಾಂಗ್ರೆಸ್ ಹೇಗೆ ಗೋಸುಂಬೆತನದಿಂದ ವರ್ತಿಸಿತು ಎಂಬುದರ ಪರಿಚಯ ಇಲ್ಲಾಗುತ್ತದೆ. ಇಂತಹ ಹಲವು ವಿಚಾರಗಳನ್ನು ಜೈಪಾಲರು ಪುಸ್ತಕದುದ್ದಕ್ಕೂ ಹೇಳುತ್ತಲೇ ಆವತ್ತಿನ ದಿನಗಳ ಕುರಿತಾಗಿ ಜನ ತಿಳಿದಿರುವುದನ್ನು ಚಿಂತನೆಗೆ ಹಚ್ಚುವಂತೆ ಮಾಡುತ್ತಾರೆ. ದೇಶವನ್ನು ಕಾಡುತ್ತಿರುವ ಮೂಲಭೂತವಾದ ಮತ್ತು ಪ್ರತ್ಯೇಕತಾವಾದಗಳು ಬ್ರಿಟಿಷರ ಕುತಂತ್ರದ ಫಲ ಎಂಬುದನ್ನು ಜೈಪಾಲರು ಸ್ಪಷ್ಟವಾಗಿ ಹೇಳುವುದು, ಆ ಸಮಸ್ಯೆಗಳ ಕುರಿತಾಗಿ ಎಚ್ಚೆತ್ತುಕೊಂಡು ಒಂದು ಉತ್ತರ ಕಂಡುಕೊಳ್ಳಲು ಪ್ರೇರಣೆಯಂತಿದೆ.
ಜೈಪಾಲ್ ರವರು ಬ್ರಿಟಿಷರ ವಿರುದ್ಧದ ತಮ್ಮ ಹೋರಾಟದಲ್ಲಿ ಕಂಡ ಪೋರ್ಟ ವಿಲಿಯಂ ಜೈಲುವಾಸದ ಅನುಭವವನ್ನು ಓದಿದ ಕೂಡಲೇ ಕಮ್ಯುನಿಸ್ಟ್ ಪಕ್ಷದ ವಿಚಾರಗಳನ್ನು ಮೆಚ್ಚಿ ಅವರ ಮುಂದಾಳುತನದಲ್ಲಿಯೇ ತೆಲಂಗಾಣ ರೈತರ ಸಶಸ್ತ್ರ ಹೋರಾಟದಲ್ಲಿ ಭಾಗಿಯಾಗಿದ್ದು, ಅಲ್ಲಿ ಅವರು ಆ ಹೋರಾಟಕ್ಕೊಂದು ಕೆಚ್ಚು ತುಂಬಿದ್ದು ತೆಲಂಗಾಣ ಹೋರಾಟಕ್ಕೆ ನೀಡಿದ ಕಾಣಿಕೆ ಏನೆಂಬುದು ಈ ಪುಸ್ತಕ ಕಾಣಿಸುತ್ತದೆ. ಆಪರೇಷನ್ ಅಸೈಲಮ್ ನ ಲೇಖನ ಬ್ರಿಟಿಷರ ಕುತಂತ್ರಗಳನ್ನು ಅನಾವರಣಗೊಳಿಸುತ್ತದೆ. ಬ್ರಿಟಿಷ್ ಸೈನ್ಯದ ಅಧಿಕಾರಿ ಹುದ್ದೆಯಿಂದ ಸಿ.ಪಿ.ಐ.(ಎಂ) ನ ಕೇಂದ್ರ ನಾಯಕತ್ವದವರೆಗಿನ ಜೈಪಾಲ್ ಸಿಂಗ್ ರ ಜೀವನ ಯಾತ್ರೆಯನ್ನು ಹೇಳುತ್ತ ಈ ಕೃತಿ ಭಾರತವನ್ನು ಮತ್ತೊಂದು ದೃಷ್ಟಿಯಲ್ಲಿ ತಿಳಿಯಲಾದರೂ ಓದಲೇಬೇಕಾದಂತಹುದು. – ಎಸ್. ಎನ್.
ಶೀರ್ಷಿಕೆ: ವಿಮೋಚನೆಯ ಸಮರದಲ್ಲಿ – ಮೇಜರ‍್ ಜೈಪಾಲ್ ಸಿಂಗ್ ನೆನಪುಗಳು ಅನುವಾದಕರು: ವಿಶ್ವ ಕುಂದಾಪುರ ಪ್ರಕಾಶನ: ಕ್ರಿಯಾ ಪ್ರಕಾಶನ ಪುಟ: ೧೯೪ ಬೆಲೆ:ರೂ.೮೦/-
ಕೃಪೆ : ಲಂಕೇಶ್ ಪತ್ರಿಕೆ
Filed under: ಆತ್ಮ - ಚರಿತ್ರೆ/ಕಥನ | Tagged: ಕ್ರಿಯಾ ಪ್ರಕಾಶನ, ಮೇಜರ‍್ ಜೈಪಾಲ್ ಸಿಂಗ್ ನೆನಪುಗಳು, ಲಂಕೇಶ್ ಪತ್ರಿಕೆ, ವಿಮೋಚನೆಯ ಸಮರದಲ್ಲಿ, ವಿಶ್ವ ಕುಂದಾಪುರ | Leave a comment »