ನೀಲಾ ಅವರು ವಾರಪತ್ರಿಕೆಯೊಂದಕ್ಕಾಗಿ ಬರೆದ ಅಂಕಣ ಬರಹಗಳ ಸಂಕಲನವಿದು. ಇದು ನೀಲಾರ ಮೂರನೇ ಕೃತಿ. ಕಾಮ್ರೇಡ್ ನೀಲಾ ಸಂಘಟನಾಕಾರ್ತಿಯಾಗಿ, ಹೋರಾಟಗಾರ್ತಿಯಾಗಿ ಜನರ ಮಧ್ಯೆ ಓಡಾಡಿದ ಹೆಜ್ಜೆ ಗುರುತುಗಳು ಈ ಕೃತಿಯಲ್ಲಿ ನಿಚ್ಚಳವಾಗಿ ಗೋಚರಿಸುತ್ತವೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದವರ ಬದುಕು ಬವಣೆ, ವಿಶೇಷವಾಗಿ ಬದುಕಿನಲ್ಲಿ ನೊಂದು, ಬೆಂದ ಮಹಿಳೆಯರ ಬದುಕು ನೀಲಾರ ಹೆಚ್ಚಿನ ಅಂಕಣದ ವಸ್ತು. ಹಳ್ಳಿಗಳಲ್ಲಿ ಇಂದಿಗೂ ಇರುವ ಯಾಜಮಾನ್ಯ ಪದ್ಧತಿ, ಪುರುಷ ಪ್ರಧಾನ ವ್ಯವಸ್ಥೆ, ಎಲ್ಲೆಡೆ ಕಂಡುಬರುವ ಲಿಂಗ ತಾರತಮ್ಯ, ಕೋಮುವಾದಿ–ಮೂಲಭೂತವಾದಿತ್ವ ಮೇಲುಗೈಯಾಗುತ್ತಿರುವುದು, ಬಡತನವನ್ನು ಮೆಟ್ಟಿ ನಿಲ್ಲುವ ಸ್ವಾಭಿಮಾನಿ ಮಹಿಳೆಯರು ಇತ್ಯಾದಿ ಹತ್ತು ಹಲವು ವಿಚಾರಗಳನ್ನು ಲೇಖಕಿ ಅವಲೋಕಿಸುತ್ತಾ, ವಿಶ್ಲೇಷಿಸುತ್ತಾರೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳ ಹಕ್ಕುಗಳಿಗಾಗಿ ಹತ್ತು ಹಲವೆಡೆ ಓಡಾಡಿ, ಅವರೊಂದಿಗೆ ಸೇರಿ ಆಡಳಿತಶಾಹಿ ವ್ಯವಸ್ಥೆಯ ವಿರುದ್ಧ ನಡೆಸುವ ಹೋರಾಟ, ಕೊನೆಗೂ ಕೆಲಸಗಾರರಿಗೆ ನ್ಯಾಯ ದಕ್ಕುವ ಚಿತ್ರಣ ಅನೇಕ ಬರಹಗಳಲ್ಲಿದೆ.
ಕಲ್ಬುರ್ಗಿ ಬೀದಿಬದಿಯಲ್ಲಿ ಸುಲಿಗಾಯಿ ಮಾರುವ ಮಹಿಳೆಯರು ತಮ್ಮನ್ನು ತಡವಲು ಬಂದ ಗಂಡಸರಿಗೆ ಎಲ್ಲರೂ ಒಟ್ಟಾಗಿ ಚಳ್ಳೆಹಣ್ಣು ತಿನ್ನಿಸುವುದು, ಡಾರ್ಜಿಲಿಂಗ್ ನ ಕೊರೆಯುವ ಚಳಿಯಲ್ಲಿ ಮಾಸದ ನಗುವಿನೊಂದಿಗೆ ಎದುರುಗೊಳ್ಳುವ ಕೂಲಿ ಹೆಂಗಸರು, ಬಲಾತ್ಕಾರದಿಂದ ದೇವದಾಸಿಯಾದ ಮಲ್ಲಮ್ಮ ಹೋರಾಟಕ್ಕೆ ಸಜ್ಜಾಗುವುದು, ಏನೇನೋ ಕಷ್ಟಗಳನ್ನೆದುರಿಸಿದ ನಂತರವೂ ಮತ್ತದೇ ಛಲದಿಂದ ಬದುಕು ಕಟ್ಟಿಕೊಡುವ ದ್ರೌಪದಿ ಇವರೆಲ್ಲ ಓದುಗರನ್ನು ಕಾಡುತ್ತ, ತಮ್ಮ ಸ್ವಾಭಿಮಾನ, ಗಟ್ಟಿ ನೆಲೆ ಕಂಡುಕೊಳ್ಳುವ ಕೆಚ್ಚಿನಿಂದ ಅಚ್ಚರಿ ಮೂಡಿಸುತ್ತಾರೆ.
ಆಡಳಿತಶಾಹಿ ವ್ಯವಸ್ಥೆಯ ಭ್ರಷ್ಟಾಚಾರ ಮತ್ತು ಅದಕ್ಷತೆ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಇಂತಹ ವಿಷಯಗಳನ್ನು ಲೇಖಕಿ ತಮ್ಮ ಹೋರಾಟದ ಸ್ವಂತ ಅನುಭವದಿಂದ ಅನಾವರಣಗೊಳಿಸುತ್ತಾ ಹೋಗಿದ್ದಾರೆ. ಪ್ರಾಯಶಃ ಅವರ ರಾಜಕೀಯ ಸೈದ್ಧಾಂತಿಕ ಹಿನ್ನೆಲೆಯಿಂದ ಇರಬಹುದು, ಕೆಲವು ಅಂಕಣಗಳ ಕೆಲವು ಪ್ಯಾರಾಗಳು ಸಿ.ಪಿ.ಎಂ. ಪಕ್ಷದ ಪ್ರಚಾರದಂತೆಯೋ, ಪ್ರಣಾಳಿಕೆಯಂತೆಯೋ ಭಾಸವಾಗಲೂಬಹುದು. ಇನ್ನು ಕೆಲವೆಡೆ ಲೇಖಕಿ ಎಲ್ಲವನ್ನೂ ಕೋಮುವಾದ ಎಂಬ ಕೆಂಪು ಗಾಜಿನಿಂದ ನೋಡುವುದೇಕೆ, ಎಲ್ಲದರ ಹಿಂದೆ ಕೋಮುವಾದವನ್ನು ಹುಡುಕಲು ಯತ್ನಿಸುವುದೇಕೆ ಎಂದು ಅನಿಸದೇ ಇರದು. ಹೈದರಾಬಾದ್ ಕರ್ನಾಟಕದ ಆಡುಭಾಷೆಯ ಸಂಭಾಷಣೆಗಳು, ತಮಗನ್ನಿಸಿದ್ದನ್ನು ಓದುಗರಿಗೆ ಸರಳವಾಗಿ ದಾಟಿಸುವ ಲೇಖಕಿಯ ಶೈಲಿ ಕೃತಿಯನ್ನು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ. ಜನಪ್ರಿಯ ಅಂಕಣ ಬರಹಗಳ ಜಾಡಿನಿಂದ ದೂರವೇ ನಿಲ್ಲುವ ಈ ಬರಹಗಳು ಓದುಗರನ್ನು ಗಾಢ ಯೋಚನೆಗೆ ಹಚ್ಚುತ್ತವೆ. ಯಾಕೆ ಹೀಗೆ, ಪರಿಹಾರವೇನು ಎಂದು ಕೇಳಿಕೊಳ್ಳುವಂತೆ ಕಾಡುತ್ತವೆ.ಸುಮಂಗಲಾ
–
ಕೃಪೆ:ಸಂಡೇ ಟೈಮ್ಸ್ ಆಫ್ ಇಂಡಿಯಾ
Filed under: ವೈಚಾರಿಕ ಸಾಹಿತ್ಯ | Tagged: ಕೆ ನೀಲಾ, ಚಿಂತನ ಪ್ರಕಾಶನ, ನೆಲದ ಪಿಸುಮಾತು, ಸಂಡೇ ಟೈಮ್ಸ್ ಆಫ್ ಇಂಡಿಯಾ | 3 Comments »