ಕರ್ನಾಟಕ ಚರಿತ್ರೆ ಮತ್ತು ಸಂಸ್ಕೃತಿ – ಸಂಶೋಧನಾ ಲೇಖನ ಸಂಕಲನ

ಕರ್ನಾಟಕ ಚರಿತ್ರೆ ಮತ್ತು ಸಂಸ್ಕೃತಿ – ಸಂಶೋಧನಾ ಲೇಖನಗಳನ್ನೊಳಗೊಂಡ ಈ ಕೃತಿಯನ್ನು ವಸು ಎಂ.ವಿ.ಯವರು ಸಂಪಾದಿಸಿದ್ದಾರೆ. ಅಶ್ವತ್ಥನಾರಾಯಣ, ಉಷಾದೇವಿ ಎಂ.ವಿ., ಶಶಿಧರ‍್ ಎಂ. ಸಂಪಾದಕ ಬಳಗದಲ್ಲಿದ್ದಾರೆ.

ಈ ಕೃತಿಯ 30 ಲೇಖನಗಳಲ್ಲಿ ಒಂದೊಂದು ಲೇಖನವೂ ಕರ್ನಾಟಕದಲ್ಲಿ ಇತಿಹಾಸ ಸಂಶೋಧನೆಯ ಒಂದೊಂದು ಸವಾಲನ್ನು ಪ್ರತಿನಿಧಿಸುತ್ತದೆ. ವಿಷಯ, ಆಕರ, ಒಳತೋಟಿಯಲ್ಲಿ ಹರಿಯುವ ಧೋರಣೆ, ಸಂಶೋಧಕರ ಹಿನ್ನೆಲೆ ಎಲ್ಲಕ್ಕೂ ಒಂದು ಅರ್ಥ ಕಾಣಿಸುತ್ತದೆ. ಲೇಖನಗಳ ಸಾಮ್ಯತೆಯ ಆಧಾರದ ಮೇಲೆ ಉಪಶೀರ್ಷಿಕೆಯೊಂದಿಗೆ ವಿಭಾಗಿಸಲಾಗಿದ್ದು `ಸಾಹಿತ್ಯದೊಳಗಣ ಚರಿತ್ರೆಭಾಗದ ಎಲ್ಲ ಲೇಖನಗಳು ಒಂದಲ್ಲ ಒಂದು ರೀತಿಯಲ್ಲಿ ಸಾಹಿತ್ಯದಲ್ಲಿ ಪ್ರವೇಶ ಪಡೆದುಕೊಳ್ಳುತ್ತಿವೆ. `ಪ್ರಾಕ್ತನ ಶೋಧನದಡಿಯಲ್ಲಿ ಸಂಶೋಧನಾ ಸಿದ್ಧತೆ ಎದ್ದು ಕಾಣುತ್ತದೆ. `ಚರಿತ್ರೆ ಕಟ್ಟಿದ ಮೈಸೂರುವಿಭಾಗದಲ್ಲಿ ಹೆಚ್ಚಿನ ಲೇಖನಗಳು ಸೇರಿದ್ದು `ಹೆಣ್ಣು ಕಂಡ ನೆಲೆಗಳುಭಾಗದಲ್ಲಿ ಕಾಣುವ ಮೂರು ಲೇಖನಗಳು ಹೆಣ್ಣಿಗೆ ಚರಿತ್ರೆ ಕಟ್ಟುವಾಗ ದಕ್ಕಬಹುದಾದ ಮೂರು ಭಿನ್ನ ಹಾದಿಗಳಾಗಿವೆ. `ಹೊಸ ಪ್ರಶ್ನೆಗಳು ವಿಭಾಗದ ಲೇಖನಗಳು ಐಡೆಂಟಿಟಿಯ ವಿಚಾರಗಳನ್ನು ಪ್ರಮುಖವಾಗಿ ನೋಡುತ್ತಿವೆ. ಆಂಗ್ಲದಲ್ಲಿ ಕಟ್ಟಿದ ಚರಿತ್ರೆ-ಕರ್ನಾಟಕದ ವಿಚಾರವನ್ನು ಇಂಗ್ಲಿಷ್ ನಲ್ಲಿ ಹೇಳುವ ಪ್ರಯತ್ನವಾಗಿದ್ದು, ಹಲವಾರು ವಿದ್ವಾಂಸರು, ಸಂಶೋಧಕರು ಈ ಕೃತಿಗಾಗಿ ಕೆಲಸ ಮಾಡಿದ್ದು ಇದೊಂದು ಉತ್ತಮ ಗ್ರಂಥವಾಗಿದೆ.

ಶೀರ್ಷಿಕೆ: ಕನ್ನಡದೊಳ್ ಭಾವಿಸಿದ ಜನಪದಂ ಸಂಪಾದಕರು:ಡಾ. ವಸು ಎಂ.ವಿ. ಪ್ರಕಟಣೆ:ಚಿಂತನ ಪುಸ್ತಕ ಪುಟ:440 ಬೆಲೆ:ರೂ.375/-

ಕೃಪೆ:ಸಂಯುಕ್ತ ಕರ್ನಾಟಕ

 

ಹಿಂದುತ್ವ ಮತ್ತು ದಲಿತರು

ಈ ಗ್ರಂಥದಲ್ಲಿ ಸೇರ್ಪಡೆಯಾಗಿರುವ ಲೇಖನಗಳು ಹಿಂದುತ್ವ ಶಕ್ತಿಗಳು ದಲಿತರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿರುವ ಪ್ರಕ್ರಿಯೆಯ ಬಗ್ಗೆ ತಾತ್ವಿಕವೂ ಅನುಭವಜನ್ಯವೂ ಆದ ವಿಶ್ಲೇಷಣೆಗಳ ಮೂಲಕ ಸಾಕಷ್ಟು ಬೆಳಕು ಚೆಲ್ಲುತ್ತವೆ. ಕ್ರಿಯಾಶೀಲ ಚಳವಳಿಗಾರರು ಮತ್ತು ವಿದ್ವಾಂಸರುಗಳು ಬರೆದಿರುವ ಲೇಖನಗಳು ಈ ಗ್ರಂಥದಲ್ಲಿ ಸೇರ್ಪಡೆಯಾಗಿವೆ. ಈ ಲೇಖನಗಳಲ್ಲಿ ದಲಿತರ ಸಾಮಾಜಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಮತ್ತು ರಾಜಕೀಯ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಚರ್ಚಿಸಲಾಗಿದೆ. ಜೊತೆಗೆ ಅವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅಗತ್ಯವಾದ ಮುನ್ನೋಟದ ಬಗ್ಗೆ ಬೆಳಕು ಹರಿಸುವ ಲೇಖನಗಳೂ ಇಲ್ಲಿವೆ. ಇತ್ತೀಚಿನ ವಿದ್ಯಮಾನಗಳು ಸೃಷ್ಟಿಸಿರುವ ಸಮಸ್ಯೆಗಳ ಕುರಿತ ಗಂಭೀರ ಸ್ವರೂಪದ ಸಂವಾದಕ್ಕೆ ಇಲ್ಲಿನ ಲೇಖನಗಳು ದಾರಿಮಾಡಿಕೊಡುತ್ತವೆ.

ಶೀರ್ಷಿಕೆ: ಹಿಂದುತ್ವ ಮತ್ತು ದಲಿತರು ಮೂಲ ಸಂಪಾದಕರು:ಆನಂದ್ ತೇಲ್ ತುಂಬ್ಡೆ ಅನು ಸಂಯೋಜನೆ: ಪ್ರೊ.ಗಂಗಾಧರ ಮೂರ್ತಿ ಪ್ರಕಾಶಕರು: ಚಿಂತನ ಪುಸ್ತಕ ಪುಟಗಳು:216 ಬೆಲೆ:ರೂ.120/-

ಕೃಪೆ: ಸಂಯುಕ್ತ ಕರ್ನಾಟಕ

ಬಿತ್ತಿದಂತೆ ಅತ್ತು

ವರ್ಷಗಳಿಂದ ಇಂಗ್ಲೀಷಿನಲ್ಲಿ ಬರೆದ ವರದಿ, ಲೇಖನಗಳ ಕನ್ನಡಾನುವಾದ `ಬಿತ್ತಿದ್ದೀರಿ … ಅದಕ್ಕೆ ಅಳುತ್ತೀರಿ’. ಸಾಯಿನಾಥ್ ಅವರ ತೀವ್ರ ಕಾಳಜಿ, ಕ್ಷೇತ್ರ ಸಮೀಕ್ಷೆಯ ಗಟ್ಟಿ ನೆಲೆ, ಮನಮುಟ್ಟುವ ವಿಶಿಷ್ಟ ಶೈಲಿ, ಹರಿತವಾದ ವಿಶ್ಲೇಷಣೆ ಈ ಬರವಣಿಗೆಗಳಲ್ಲಿ ಕಾಣುತ್ತದೆ.

ಸಾಯಿನಾಥ್ ಅವರ ಇಂಗ್ಲೀಷ್ ಲೇಖನಗಳು ಮೊದಲ ನೋಟಕ್ಕೆ ಸರಳ ಎನ್ನಿಸಿದರೂ ವಾಸ್ತವದ ಸಂಕೀರ್ಣತೆಯ ಚಿತ್ರಣ, ಕಥನ ಶೈಲಿ, ವ್ಯಂಗ್ಯದ ಮೊನಚು, ವಿಶಿಷ್ಟ ನುಡಿಗಟ್ಟಿನ ಶಕ್ತಿಯನ್ನು ಕನ್ನಡದಲ್ಲಿ ಹಿಡಿದಿಡುವ ಕಷ್ಟದ ಕೆಲಸವನ್ನು ಲೇಖಕ ಟಿ. ಎಲ್. ಕೃಷ್ಣೇಗೌಡ ಯಶಸ್ವಿಯಾಗಿ ಮಾಡಿದ್ದಾರೆ.

ಶೀರ್ಷಿಕೆ: ಬಿತ್ತಿದ್ದೀರಿ … ಅದಕ್ಕೆ ಅಳುತ್ತೀರಿ  ಲೇಖಕರು: ಪಿ. ಸಾಯಿನಾಥ್ ಅನುವಾದ: ಟಿ. ಎಲ್. ಕೃಷ್ಣೇಗೌಡ ಪ್ರಕಾಶಕರು: ಚಿಂತನ ಪುಸ್ತಕ ಪುಟಗಳು: 180 ಬೆಲೆ:ರೂ. 100/-

ಕೃಪೆ: ಕನ್ನಡ ಪ್ರಭ

ಸುವರ್ಣ ಕರ್ನಾಟಕ ವಿಜ್ಞಾನ ಬಾಗಿನ

ಜೀವದ ಹುಟ್ಟಿನ ನಿಜಸ್ಥಿತಿಯನ್ನು ವಿವರಿಸಿ, ನಿಮಗೆ ತಾಜಾ ಮಾಹಿತಿಯನ್ನೊದಗಿಸುತ್ತದೆ ಈ ಕಿರು ಪುಸ್ತಕ. ಸರಳವಾದ ಭಾಷೆ, ಕುತೂಹಲ ಕೆರಳಿಸುವ ಘಟನೆಗಳು ಹಾಗೂ ಸನ್ನಿವೇಶಗಳು, ನಿಮ್ಮ ಚಿಂತನೆಯನ್ನು ಕೆದಕುವಂತಹ ಮಂಡನೆ, ರೋಮಾಂಚಕಾರೀ ವೈಜ್ಞಾನಿಕ ಪತ್ತೇದಾರಿಯ ಸ್ವಾರಸ್ಯಮಯ ನಿರೂಪಣೆ, ವಿಜ್ಞಾನಿಗಳು ಅನುಭವಿಸಿದ ಕಷ್ಟ ನಷ್ಟಗಳು, ಅವರು ಪಟ್ಟ ಅವಮಾನ, ಅವರು ಎದುರಿಸಿದ ಘೋರ ಘರ್ಷಣೆಗಳು, ಕಾಲಾನುಕಾಲಕ್ಕೆ ಹೇಗೆ ಹೊಸ ಹೊಸ ವಿಜ್ಞಾನಿಗಳು ಅವತರಿಸಿ, ಕೆಚ್ಚಿನಿಂದ, ಕಿಚ್ಚಿನಿಂದ, ಈ ಚಕ್ರವ್ಯೂಹವನ್ನು ಭೇದಿಸಿ, ಮುನ್ನುಗ್ಗಿ, ಮೂಡನಂಬಿಕೆಗಳನ್ನು ಸಾರಾಸಗಟಾಗಿ ತರಿದು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿದರು ಎಂಬುದೇ ಈ ಪತ್ತೇದಾರಿ ಕಾದಂಬರಿಯ ಸಾರಾಂಶ.

ಹದಿನೈದು ಹರೆಯದ ಕಿಶೋರರಿಂದ ವಯೋವೃದ್ಧರವರೆಗೆ, ಎಲ್ಲರೂ ಓದಿ, ಖುಷಿ ಪಡಬಹುದಾದ, ಸಾಮಾನ್ಯ ಜ್ಞಾನ ಹೆಚ್ಚಿಸುವ, ಅಜ್ಞಾನವನ್ನು ಅಳಿಸುವ ವೈಜ್ಞಾನಿಕ ಕಾದಂಬರಿ ಇದು. ಓದಿದಷ್ಟೂ, ಮುಂದೇನಾಯಿತು ಎಂದು ತಿಳಿಯುವ ಕಾತರ, ಇನ್ನೂ ಓದಬೇಕೆಂಬ ಆತುರ, ಇವೇ ಈ ಪುಸ್ತಕದ ಕೆಲವು ವೈಶಿಷ್ಟ್ಯಗಳು.

-ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಜೀವ ಹೇಗೆ ಹುಟ್ಟಿದರೇನಂತೆ? ಲೇಖಕರು:ಪ್ರೊ. ಎಂ.ಜೆ.ಸುಂದರ‍್ ರಾಮ್ ಪ್ರಕಾಶಕರು:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪುಟ:108 ಬೆಲೆ:ರೂ.೪೦/-

ಪಕಟವಾಗಿ ೧೫೦ ವರ್ಷಗಳಾಗಿದ್ದರೂ ಇನ್ನೂ ವಾದ ವಿವಾದವನ್ನು ಸೃಷ್ಟಿಸುತ್ತಿರುವ ಪುಸ್ತಕದ ಕರ್ತೃ

ಜಗತ್ತಿನಾದ್ಯಂತ ಶ್ರೇಷ್ಟ ವಿಜ್ಞಾನಿ ಮತ್ತು ವಿಕಾಸವಾದದ ತಜ್ಞ ಚಾರ್ಲ್ಸ್ ಡಾರ್ವಿನ್ ನ ದ್ವಿ ಶತಮಾನೋತ್ಸವವನ್ನು 2009ರಲ್ಲಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಡಾರ್ವಿನ್ ನ ವಿಚಾರವಾಗಿ ವಿಜ್ಞಾನ ಲೇಖಕರುಗಳು ಬರೆದು ಈಗಾಗಲೇ ಪ್ರಕಟವಾಗಿರುವ ಲೇಖನಗಳನ್ನು ಆಯ್ದು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ `ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು. ಡಾರ್ವಿನ್ ನ ಕೃತಿ `ದಿ ಒರಿಜಿನ್ ಆಫ್ ಸ್ಪೀಸೀಸ್ ಪ್ರಕಟವಾಗಿ 150 ವರ್ಷಗಳಾಗಿದ್ದರೂ ಅದರ ಪರ ವಾದ ವಿವಾದಗಳು ನಡೆಯುತ್ತಿದ್ದು, ವಿಕಾಸವಾದಕ್ಕೆ ಗಟ್ಟಿ ಮೆರುಗನ್ನು ಆಧುನಿಕ ಜೀವರಾಸಾಯನಿಕ ವಿಜ್ಞಾನದಲ್ಲಿ ಕಾಣಲಾಗುತ್ತಿದೆ. ಡಾರ್ವಿನ್ ನ ಅನೇಕ ಸಂಶೋಧನೆಗಳು, ವಿಜ್ಞಾನದ ಬೆಳವಣಿಗೆಯಲ್ಲಿ ಅವಿಸ್ಮರಣೀಯವಾದವುಗಳು. ಡಾರ್ವಿನ್, ಜಗತ್ತು ಕಂಡ ಒಬ್ಬ ಅಪ್ರತಿಮ ಚಿಂತಕ ಮತ್ತು ಶ್ರೇಷ್ಠ ವಿಜ್ಞಾನಿ ಎಂಬುದರ ಬಗ್ಗೆ ಸಂಶಯವಿಲ್ಲ. ಈ ಮಹಾನ್ ವಿಜ್ಞಾನಿಯ ಬದುಕು, ಈ ಸ್ಪರ್ಧಾ ಶತಮಾನದ ಯುವಜನತೆಗೆ ಅನೇಕ ಆದರ್ಶಗಳ ಪಾಠಗಳಾಗುವುದರಲ್ಲಿ ಸಂದೇಹವಿಲ್ಲ ಹಾಗೇ ಈ ಪುಸ್ತಕವು ವಿಜ್ಞಾನಾಸಕ್ತ ಯುವಜನರು ಮತ್ತು ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಲಿ.

-ಸಂಪಾದಕರ ನುಡಿಯಿಂದ

ಶೀರ್ಷಿಕೆ: ಡಾರ್ವಿನ್ ಚದುರಿದ ಚಿತ್ರಗಳು ಸಂಪಾದಕರು: ಸಿ ಯತಿರಾಜು ಪ್ರಕಟಣೆ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪುಟ:112 ಬೆಲೆ: ರೂ.50/-