ಸುವರ್ಣ ಕರ್ನಾಟಕ ವಿಜ್ಞಾನ ಬಾಗಿನ

ಜೀವದ ಹುಟ್ಟಿನ ನಿಜಸ್ಥಿತಿಯನ್ನು ವಿವರಿಸಿ, ನಿಮಗೆ ತಾಜಾ ಮಾಹಿತಿಯನ್ನೊದಗಿಸುತ್ತದೆ ಈ ಕಿರು ಪುಸ್ತಕ. ಸರಳವಾದ ಭಾಷೆ, ಕುತೂಹಲ ಕೆರಳಿಸುವ ಘಟನೆಗಳು ಹಾಗೂ ಸನ್ನಿವೇಶಗಳು, ನಿಮ್ಮ ಚಿಂತನೆಯನ್ನು ಕೆದಕುವಂತಹ ಮಂಡನೆ, ರೋಮಾಂಚಕಾರೀ ವೈಜ್ಞಾನಿಕ ಪತ್ತೇದಾರಿಯ ಸ್ವಾರಸ್ಯಮಯ ನಿರೂಪಣೆ, ವಿಜ್ಞಾನಿಗಳು ಅನುಭವಿಸಿದ ಕಷ್ಟ ನಷ್ಟಗಳು, ಅವರು ಪಟ್ಟ ಅವಮಾನ, ಅವರು ಎದುರಿಸಿದ ಘೋರ ಘರ್ಷಣೆಗಳು, ಕಾಲಾನುಕಾಲಕ್ಕೆ ಹೇಗೆ ಹೊಸ ಹೊಸ ವಿಜ್ಞಾನಿಗಳು ಅವತರಿಸಿ, ಕೆಚ್ಚಿನಿಂದ, ಕಿಚ್ಚಿನಿಂದ, ಈ ಚಕ್ರವ್ಯೂಹವನ್ನು ಭೇದಿಸಿ, ಮುನ್ನುಗ್ಗಿ, ಮೂಡನಂಬಿಕೆಗಳನ್ನು ಸಾರಾಸಗಟಾಗಿ ತರಿದು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿದರು ಎಂಬುದೇ ಈ ಪತ್ತೇದಾರಿ ಕಾದಂಬರಿಯ ಸಾರಾಂಶ.

ಹದಿನೈದು ಹರೆಯದ ಕಿಶೋರರಿಂದ ವಯೋವೃದ್ಧರವರೆಗೆ, ಎಲ್ಲರೂ ಓದಿ, ಖುಷಿ ಪಡಬಹುದಾದ, ಸಾಮಾನ್ಯ ಜ್ಞಾನ ಹೆಚ್ಚಿಸುವ, ಅಜ್ಞಾನವನ್ನು ಅಳಿಸುವ ವೈಜ್ಞಾನಿಕ ಕಾದಂಬರಿ ಇದು. ಓದಿದಷ್ಟೂ, ಮುಂದೇನಾಯಿತು ಎಂದು ತಿಳಿಯುವ ಕಾತರ, ಇನ್ನೂ ಓದಬೇಕೆಂಬ ಆತುರ, ಇವೇ ಈ ಪುಸ್ತಕದ ಕೆಲವು ವೈಶಿಷ್ಟ್ಯಗಳು.

-ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಜೀವ ಹೇಗೆ ಹುಟ್ಟಿದರೇನಂತೆ? ಲೇಖಕರು:ಪ್ರೊ. ಎಂ.ಜೆ.ಸುಂದರ‍್ ರಾಮ್ ಪ್ರಕಾಶಕರು:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪುಟ:108 ಬೆಲೆ:ರೂ.೪೦/-

Advertisements

ಪಕಟವಾಗಿ ೧೫೦ ವರ್ಷಗಳಾಗಿದ್ದರೂ ಇನ್ನೂ ವಾದ ವಿವಾದವನ್ನು ಸೃಷ್ಟಿಸುತ್ತಿರುವ ಪುಸ್ತಕದ ಕರ್ತೃ

ಜಗತ್ತಿನಾದ್ಯಂತ ಶ್ರೇಷ್ಟ ವಿಜ್ಞಾನಿ ಮತ್ತು ವಿಕಾಸವಾದದ ತಜ್ಞ ಚಾರ್ಲ್ಸ್ ಡಾರ್ವಿನ್ ನ ದ್ವಿ ಶತಮಾನೋತ್ಸವವನ್ನು 2009ರಲ್ಲಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಡಾರ್ವಿನ್ ನ ವಿಚಾರವಾಗಿ ವಿಜ್ಞಾನ ಲೇಖಕರುಗಳು ಬರೆದು ಈಗಾಗಲೇ ಪ್ರಕಟವಾಗಿರುವ ಲೇಖನಗಳನ್ನು ಆಯ್ದು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ `ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು. ಡಾರ್ವಿನ್ ನ ಕೃತಿ `ದಿ ಒರಿಜಿನ್ ಆಫ್ ಸ್ಪೀಸೀಸ್ ಪ್ರಕಟವಾಗಿ 150 ವರ್ಷಗಳಾಗಿದ್ದರೂ ಅದರ ಪರ ವಾದ ವಿವಾದಗಳು ನಡೆಯುತ್ತಿದ್ದು, ವಿಕಾಸವಾದಕ್ಕೆ ಗಟ್ಟಿ ಮೆರುಗನ್ನು ಆಧುನಿಕ ಜೀವರಾಸಾಯನಿಕ ವಿಜ್ಞಾನದಲ್ಲಿ ಕಾಣಲಾಗುತ್ತಿದೆ. ಡಾರ್ವಿನ್ ನ ಅನೇಕ ಸಂಶೋಧನೆಗಳು, ವಿಜ್ಞಾನದ ಬೆಳವಣಿಗೆಯಲ್ಲಿ ಅವಿಸ್ಮರಣೀಯವಾದವುಗಳು. ಡಾರ್ವಿನ್, ಜಗತ್ತು ಕಂಡ ಒಬ್ಬ ಅಪ್ರತಿಮ ಚಿಂತಕ ಮತ್ತು ಶ್ರೇಷ್ಠ ವಿಜ್ಞಾನಿ ಎಂಬುದರ ಬಗ್ಗೆ ಸಂಶಯವಿಲ್ಲ. ಈ ಮಹಾನ್ ವಿಜ್ಞಾನಿಯ ಬದುಕು, ಈ ಸ್ಪರ್ಧಾ ಶತಮಾನದ ಯುವಜನತೆಗೆ ಅನೇಕ ಆದರ್ಶಗಳ ಪಾಠಗಳಾಗುವುದರಲ್ಲಿ ಸಂದೇಹವಿಲ್ಲ ಹಾಗೇ ಈ ಪುಸ್ತಕವು ವಿಜ್ಞಾನಾಸಕ್ತ ಯುವಜನರು ಮತ್ತು ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಲಿ.

-ಸಂಪಾದಕರ ನುಡಿಯಿಂದ

ಶೀರ್ಷಿಕೆ: ಡಾರ್ವಿನ್ ಚದುರಿದ ಚಿತ್ರಗಳು ಸಂಪಾದಕರು: ಸಿ ಯತಿರಾಜು ಪ್ರಕಟಣೆ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪುಟ:112 ಬೆಲೆ: ರೂ.50/-